ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನ ರಾಜ್ಯದ ಮಹಿಮೆಯ ಮುನ್ನೋಟ

ಕ್ರಿಸ್ತನ ರಾಜ್ಯದ ಮಹಿಮೆಯ ಮುನ್ನೋಟ

ಅಧ್ಯಾಯ 60

ಕ್ರಿಸ್ತನ ರಾಜ್ಯದ ಮಹಿಮೆಯ ಮುನ್ನೋಟ

ಯೇಸುವು ಫಿಲಿಪ್ಪನ ಕೈಸರೈಯದ ಕೆಲವು ಪ್ರಾಂತ್ಯಗಳಿಗೆ ಬಂದು, ತನ್ನ ಅಪೊಸ್ತಲರ ಸಹಿತ ಜನಸಮೂಹಗಳಿಗೆ ಕಲಿಸುತ್ತಿದ್ದನು. ಅವನು ಒಂದು ಬೆರಗುಗೊಳಿಸುವ ಒಂದು ಪ್ರಕಟನೆಯನ್ನು ಮಾಡಿದನು: “ನಿಮಗೆ ನಿಜವಾಗಿ ಹೇಳುತ್ತೇನೆ, ಇಲ್ಲಿ ನಿಂತವರೊಳಗೆ ಕೆಲವರು, ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವದನ್ನು ನೋಡುವ ತನಕ ಮರಣಹೊಂದುವದಿಲ್ಲ.”

‘ಯೇಸುವು ಹೀಗೆ ಹೇಳಿರುವದರ ಅರ್ಥವೇನು?’ ಶಿಷ್ಯರು ಆಶ್ಚರ್ಯಪಟ್ಟಿರಬೇಕು. ಸುಮಾರು ಒಂದು ವಾರದ ನಂತರ, ಯೇಸುವು ಪೇತ್ರ, ಯಾಕೋಬ ಮತ್ತು ಯೋಹಾನರನ್ನು ತನ್ನ ಸಂಗಡ ಕೊಂಡೊಯ್ಯುತ್ತಾನೆ ಮತ್ತು ಅವರು ಒಂದು ಎತ್ತರವಾದ ಬೆಟ್ಟಕ್ಕೆ ಏರುತ್ತಾರೆ. ಪ್ರಾಯಶಃ ಇದು ರಾತ್ರಿ ಸಮಯವಾಗಿದ್ದರಬೇಕು, ಯಾಕಂದರೆ ಶಿಷ್ಯರು ನಿದ್ರೆಯ ಮಂದಪರಿನಲ್ಲಿದ್ದರು. ಯೇಸುವು ಪ್ರಾರ್ಥಿಸುತ್ತಿರುವಾಗ, ಅವನು ಅವರ ಮುಂದೆ ಪ್ರಕಾಶರೂಪಭರಿತನಾದನು. ಅವನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು ಮತ್ತು ಅವನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾದವು.

ಅನಂತರ, “ಮೋಶೆ ಮತ್ತು ಎಲೀಯನೆಂದು” ಗುರುತಿಸಲ್ಪಟ್ಟ ಎರಡು ಆಕೃತಿಗಳು ಕಾಣಿಸಿಕೊಂಡವು ಮತ್ತು ಅವನು ‘ಅಗಲಿಹೋಗುವಾಗ ಯೆರೂಸಲೇಮಿನಲ್ಲಿ ಸಂಭವಿಸುವ ವಿಷಯಗಳ’ ಕುರಿತು ಯೇಸುವಿನೊಡನೆ ಅವರು ಮಾತಾಡುತ್ತಿದ್ದರು. ಈ ಅಗಲಿಹೋಗುವಿಕೆಯು ಯೇಸುವಿನ ಮರಣ ಮತ್ತು ಅನಂತರದ ಪುನರುತ್ಥಾನದ ಕುರಿತು ಸೂಚಿಸುತ್ತಿತ್ತು ಎಂದು ವೇದ್ಯವಾಗುತ್ತದೆ. ಆದುದರಿಂದ ಪೇತ್ರನು ಆಶಿಸಿದಂತೆ, ಅವನ ಅವಮಾನಕಾರಿ ಮರಣವು ಒಂದು ಹೋಗಲಾಡಿಸಬೇಕಾದ ಸಂಗತಿಯಾಗಿರಲಿಲ್ಲ ಎಂದು ಈ ಸಂಭಾಷಣೆಯು ತೋರಿಸುತ್ತದೆ.

ಈಗ ಪೂರ್ಣ ಎಚ್ಚತ್ತವರಾಗಿ, ಶಿಷ್ಯರು ಚಕಿತರಾಗಿ, ಇದನ್ನು ಕಾಣುತ್ತಾರೆ ಮತ್ತು ಆಲಿಸುತ್ತಾರೆ. ಇದೊಂದು ದರ್ಶನವಾಗಿರುವದಾದರೂ, ಅದು ಎಷ್ಟೊಂದು ನೈಜವಾಗಿ ಕಾಣುತ್ತಿತ್ತು ಅಂದರೆ, ಪೇತ್ರನು ಆ ದೃಶ್ಯದಲ್ಲಿ ಪಾಲಿಗನಾಗುತ್ತಾ, “ಸ್ವಾಮೀ, ನೀವು ಇಲ್ಲೇ ಇರುವದು ಒಳ್ಳೇದು. ಅಪ್ಪಣೆಯಾದರೆ ಇಲ್ಲಿ ಮೂರು ಪರ್ಣಶಾಲೆಗಳನ್ನು ಕಟ್ಟುವೆನು; ನಿನಗೊಂದು, ಮೋಶೆಗೊಂದು, ಎಲೀಯನಿಗೊಂದು” ಎಂದು ಹೇಳುತ್ತಾನೆ.

ಪೇತ್ರನು ಮಾತಾಡುತ್ತಿರುವಾಗಲೇ ಕಾಂತಿಯುಳ್ಳ ಮೋಡವು ಅವರ ಮೇಲೆ ಕವಿಯಿತು, ಮತ್ತು ಒಂದು ಧ್ವನಿಯು ಮೋಡದೊಳಗಿಂದ ಹೀಗೆ ಹೇಳಿತು: “ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ.” ಧ್ವನಿಯನ್ನು ಕೇಳಿದ ಶಿಷ್ಯರು ಬೋರಲ ಬಿದ್ದರು. ಆದರೆ ಯೇಸುವು ಹೇಳಿದ್ದು: “ಏಳಿರಿ, ಹೆದರಬೇಡಿರಿ.” ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನೇ ಹೊರತು ಮತ್ತಾರನ್ನೂ ಕಾಣಲಿಲ್ಲ.

ಮರುದಿನ ಬೆಟ್ಟದಿಂದ ಕೆಳಗಿಳಿಯುವಾಗ, ಯೇಸುವು ಆಜ್ಞಾಪಿಸುವದು: “ನೀವು ಕಂಡ ದರ್ಶನವನ್ನು ಮನುಷ್ಯಕುಮಾರನು ಸತ್ತು ಜೀವಿತನಾಗಿ ಎದ್ದು ಬರುವ ತನಕ ಯಾರಿಗೂ ತಿಳಿಸಕೂಡದು.” ದರ್ಶನದಲ್ಲಿ ಎಲೀಯನ ಕಾಣಿಸಿಕೊಳ್ಳುವಿಕೆಯು ಶಿಷ್ಯರ ಮನಸ್ಸಿನಲ್ಲಿ ಒಂದು ಪ್ರಶ್ನೆಯನ್ನು ಎಬ್ಬಿಸುತ್ತದೆ. “ಎಲೀಯನು ಮೊದಲು ಬರುವದು ಅಗತ್ಯವೆಂಬದಾಗಿ ಶಾಸ್ತ್ರಿಗಳು ಹೇಳುತ್ತಾರಲ್ಲಾ, ಇದು ಹೇಗೆ?” ಎಂದು ಅವರು ವಿಚಾರಿಸುತ್ತಾರೆ.

“ಎಲೀಯನು ಈಗಾಗಲೇ ಬಂದು ಹೋದನು ಮತ್ತು ಅವರು ಅವನ ಗುರುತು ಹಿಡಿಯದೇ ಹೋದರು,” ಎಂದು ಯೇಸು ಹೇಳುತ್ತಾನೆ. ಆದಾಗ್ಯೂ, ಯೇಸುವು ಎಲೀಯನಂತಹ ಪಾತ್ರವನ್ನು ನೆರವೇರಿಸಿದ ಸ್ನಾನಿಕನಾದ ಯೋಹಾನನ ಕುರಿತಾಗಿ ಮಾತಾಡುತ್ತಿದ್ದನು. ಎಲೀಯನು ಎಲೀಷನಿಗೆ ದಾರಿಯನ್ನು ಸಿದ್ಧಮಾಡಿದೋಪಾದಿ, ಯೋಹಾನನು ಕ್ರಿಸ್ತನಿಗೆ ದಾರಿಯನ್ನು ತಯಾರಿಸಿದನು.

ಈ ದರ್ಶನವು ಯೇಸುವಿಗೂ ಅವನ ಶಿಷ್ಯರಿಗೂ ಎಷ್ಟೊಂದು ಬಲದಾಯಕವಾಗಿ ರುಜುವಾಗಿದ್ದಿರಬಹುದು! ಇದು ಇದ್ದಂತಹ ರೀತಿಯಲ್ಲಿ ಕ್ರಿಸ್ತನ ರಾಜ್ಯದ ಮಹಿಮೆಯ ಒಂದು ಮುನ್ನೋಟವಾಗಿರುತ್ತದೆ. ಪರಿಣಾಮವಾಗಿ, ಒಂದು ವಾರದ ಹಿಂದೆ ಯೇಸುವು ವಾಗ್ದಾನಿಸಿದಂತೆ, ಶಿಷ್ಯರು “ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವದನ್ನು” ಕಂಡಿದ್ದರು. ಯೇಸುವಿನ ಮರಣದ ನಂತರ, ಅವರು ‘ಆತನ ಸಂಗಡ ಪರಿಶುದ್ಧ ಪರ್ವತದ ಮೇಲೆ ಇದ್ದಾಗ, ಕ್ರಿಸ್ತನ ಘನಮಾನಗಳನ್ನು ಕಣ್ಣಾರೆ ಕಂಡ ಸಾಕ್ಷಿಗಳು’ ಅವರಾಗಿದ್ದರು ಎಂದು ಪೇತ್ರನು ಬರೆಯುತ್ತಾನೆ.

ಶಾಸ್ತ್ರ ಗ್ರಂಥಗಳಲ್ಲಿ ವಾಗ್ದಾನಿಸಲ್ಪಟ್ಟ, ದೇವರಿಂದ ಆರಿಸಲ್ಪಟ್ಟ ಅರಸನು ಅವನಾಗಿದ್ದನೆಂದು ರುಜುಪಡಿಸುವ ಸೂಚನೆಯೊಂದನ್ನು ಫರಿಸಾಯರು ಯೇಸುವಿನಿಂದ ಬಯಸಿದ್ದರು. ಆದರೆ ಅವರಿಗೆ ಅಂತಹ ಒಂದು ಸೂಚನೆಯು ಕೊಡಲ್ಪಡಲಿಲ್ಲ. ಅದಕ್ಕೆ ಬದಲಾಗಿ, ರಾಜ್ಯದ ಪ್ರವಾದನೆಗಳ ದೃಢೀಕರಣವಾಗಿ, ಯೇಸುವಿನ ಪ್ರಕಾಶರೂಪಾಂತರವನ್ನು ಕಾಣಲು ಯೇಸುವಿನ ಆಪ್ತ ಶಿಷ್ಯರಿಗೆ ಅವಕಾಶವು ದೊರಕಿತು. ಈ ರೀತಿಯಲ್ಲಿ, ಪೇತ್ರನು ತದನಂತರದಲ್ಲಿ ಬರೆದದ್ದು: “ಇದಲ್ಲದೆ ಪ್ರವಾದನವಾಕ್ಯವು ನಮಗೆ ಮತ್ತೂ ದೃಢವಾಗಿ ಮಾಡಲ್ಪಟ್ಟಿರುತ್ತದೆ.” ಮತ್ತಾಯ 16:13, ಮತ್ತಾಯ 16:28–17:13; ಮಾರ್ಕ 9:1-13; ಲೂಕ 9:27-37; 2 ಪೇತ್ರ 1:16-19.

▪ ಮರಣದ ಅನುಭವ ಪಡೆಯುವ ಮೊದಲು, ಆತನ ರಾಜ್ಯದಲ್ಲಿ ಕ್ರಿಸ್ತನು ಬರುವದನ್ನು ಕೆಲವರು ಹೇಗೆ ಕಾಣುತ್ತಾರೆ?

▪ ದರ್ಶನದಲ್ಲಿ, ಮೋಶೆ ಮತ್ತು ಎಲೀಯರು ಯೇಸುವಿನೊಂದಿಗೆ ಯಾವುದರ ಕುರಿತಾಗಿ ಮಾತಾಡುತ್ತಾರೆ?

▪ ಈ ದರ್ಶನವು ಶಿಷ್ಯರಿಗೆ ಅಷ್ಟೊಂದು ಬಲದಾಯಕ ಸಹಾಯವಾದದ್ದು ಯಾಕೆ?