ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಲಿಲಾಯ ಸಮುದ್ರದ ಬಳಿಯಲ್ಲಿ

ಗಲಿಲಾಯ ಸಮುದ್ರದ ಬಳಿಯಲ್ಲಿ

ಅಧ್ಯಾಯ 130

ಗಲಿಲಾಯ ಸಮುದ್ರದ ಬಳಿಯಲ್ಲಿ

ಅಪೊಸ್ತಲರು ಈಗ ಗಲಿಲಾಯಕ್ಕೆ, ಯೇಸುವು ಅವರಿಗೆ ಈ ಮೊದಲು ಅಪ್ಪಣೆ ಕೊಟ್ಟಂತೆ, ಹಿಂತೆರಳಿದ್ದರು. ಆದರೆ ಅಲ್ಲಿ ಅವರು ಏನು ಮಾಡಬೇಕು ಎಂಬ ವಿಷಯದಲ್ಲಿ ಅನಿಶ್ಚತೆಯಿಂದಿದ್ದರು. ಸ್ವಲ್ಪ ಸಮಯದ ನಂತರ ಪೇತ್ರನು, ತೋಮನಿಗೆ, ನತಾನಯೇಲನಿಗೆ, ಯಾಕೋಬ ಮತ್ತು ಅವನ ಸಹೋದರ ಯೋಹಾನನಿಗೆ ಮತ್ತು ಇನ್ನಿಬ್ಬರು ಅಪೊಸ್ತಲರಿಗೆ ಹೇಳಿದ್ದು: “ನಾನು ಮೀನು ಹಿಡಿಯುವದಕ್ಕೆ ಹೋಗುತ್ತೇನೆ.”

“ನಾವೂ ನಿನ್ನ ಸಂಗಡ ಬರುತ್ತೇವೆ,” ಆರು ಮಂದಿಯೂ ಉತ್ತರಿಸುತ್ತಾರೆ.

ಇಡೀ ರಾತ್ರಿ ಅವರಿಗೆ ಒಂದು ಮೀನೂ ಸಿಕ್ಕಲಿಲ್ಲ. ಆದಾಗ್ಯೂ, ಬೆಳಗಾಗುವಾಗ ಯೇಸುವು ದಡದಲ್ಲಿ ನಿಂತಿದ್ದನಾದರೂ, ಅವನು ಯೇಸುವೆಂದು ಅಪೊಸ್ತಲರಿಗೆ ಗೊತ್ತಾಗಲಿಲ್ಲ. ಅವನು ಕೂಗುವದು: “ಮಕ್ಕಳಿರಾ, ಊಟಕ್ಕೆ ನಿಮಗೆ ಏನೂ ಇಲ್ಲವೇ?”

“ಇಲ್ಲ!” ಎಂದವರು ನೀರಿನ ಮೇಲಿಂದ ಪ್ರತ್ಯುತ್ತರವಾಗಿ ಕೂಗುತ್ತಾರೆ.

“ನೀವು ದೋಣಿಯ ಬಲಗಡೆಯಲ್ಲಿ ಬಲೆ ಬೀಸಿದರೆ ಸಿಕ್ಕುವದು,” ಅವನು ಹೇಳುತ್ತಾನೆ. ಮತ್ತು ಅವರು ಹಾಗೆಯೇ ಮಾಡಿದಾಗ, ಮೀನುಗಳು ಬಹಳ ಹೆಚ್ಚಾಗಿ ಸಿಕ್ಕಿದ್ದರಿಂದ ಬಲೆಯನ್ನು ಎಳೆಯುವದಕ್ಕೆ ಅವರಿಗೆ ಆಗದೆ ಹೋಯಿತು.

“ಅವರು ಸ್ವಾಮಿಯವರು!” ಯೋಹಾನನು ಅರಚುತ್ತಾನೆ.

ಇದನು ಕೇಳಿ, ಪೇತ್ರನು ಮೈಮೇಲಿದ್ದ ಬಟ್ಟೆಯನ್ನು ತೆಗೆದು ಇಟ್ಟದರ್ದಿಂದ, ಒಲ್ಲಿಯನ್ನು ಸುತ್ತಿ ಕೊಂಡು, ಸಮುದ್ರಕ್ಕೆ ಧುಮುಕುತ್ತಾನೆ. ಅಲ್ಲಿಂದ ಸುಮಾರು 90 ಮೀಟರ್‌ ದೂರದ ದಡಕ್ಕೆ ಈಜಿಕೊಂಡು ಬರುತ್ತಾನೆ. ಇತರ ಅಪೊಸ್ತಲರು ಚಿಕ್ಕ ದೋಣಿಯಲ್ಲಿ ಬರುತ್ತಾ, ತುಂಬಾ ಮೀನಿದ್ದ ಬಲೆಯನ್ನು ಎಳೆಯುತ್ತಾ ಬಂದರು.

ಅವರು ದಡಕ್ಕೆ ಬಂದು ತಲುಪಿದಾಗ, ಅಲ್ಲಿ ಕೆಂಡಗಳನ್ನೂ, ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನೂ ರೊಟ್ಟಿಸಹಿತವಾಗಿ ಕಂಡರು. “ನೀವು ಈಗ ಮೀನುಗಳಲ್ಲಿ ಕೆಲವನ್ನು ತನ್ನಿರಿ,” ಯೇಸುವು ಹೇಳುತ್ತಾನೆ. ಪೇತ್ರನು ದೋಣೆಯನ್ನು ಹತ್ತಿ, ಬಲೆಯನ್ನು ಭೂಮಿಗೆ ಎಳಕೊಂಡು ಬರುತ್ತಾನೆ. ಅದು 153 ದೊಡ್ಡ ಮೀನುಗಳಿಂದ ತುಂಬಿತ್ತು!

“ಬಂದು ಊಟಮಾಡಿರಿ,” ಯೇಸುವು ಕರೆಯುತ್ತಾನೆ.

ಅವರಲ್ಲಿ ಒಬ್ಬರಿಗೂ “ನೀನು ಯಾರು?” ಎಂದು ಕೇಳುವ ಧೈರ್ಯವಿರಲಿಲ್ಲ, ಯಾಕಂದರೆ ಅವನು ಯೇಸುವೆಂದು ಎಲ್ಲರಿಗೂ ತಿಳಿದಿತ್ತು. ಅವನ ಪುನರುತ್ಥಾನದ ನಂತರ ಇದು ಏಳನೆಯ ಬಾರಿಯ ಮತ್ತು ಅಪೊಸ್ತಲರಿಗೆ ಗುಂಪಿನೋಪಾದಿ ಅವನ ಮೂರನೆಯ ಬಾರಿಯ ಕಾಣಿಸಿಕೊಳ್ಳುವಿಕೆಯಾಗಿತ್ತು. ಅವನೀಗ ಉಪಹಾರ ಬಡಿಸುತ್ತಾ ಅವರಲ್ಲಿ ಪ್ರತಿಯೊಬ್ಬನಿಗೆ ಕೆಲವು ರೊಟ್ಟಿ ಮತ್ತು ಮೀನುಗಳನ್ನು ಕೊಡುತ್ತಾನೆ.

ಅವರು ಊಟ ಮಾಡಿ ಮುಗಿಸಿದ ನಂತರ, ಹಿಡಿದ ಮೀನುಗಳ ದೊಡ್ಡ ರಾಶಿಯನ್ನು ಪ್ರಾಯಶಃ ನೋಡುತ್ತಾ ಯೇಸು ಪೇತ್ರನಿಗೆ ಕೇಳುವದು: “ಯೋಹಾನನ ಮಗನಾದ ಸೀಮೋನನೇ, ನೀನು ಇವುಗಳಿಗಿಂತ ಹೆಚ್ಚಾಗಿ ನನ್ನ ಮೇಲೆ ಪ್ರೀತಿ ಇಟ್ಟಿದ್ದಿಯೋ?” ನಿಸ್ಸಂದೇಹವಾಗಿ ಅವನ ಅರ್ಥವು, ನೀನು ಮಾಡಲು ನಾನು ಸಿದ್ಧ ಮಾಡಿರುವ ಕೆಲಸಕ್ಕಿಂತ, ಮೀನು ಹಿಡಿಯುವ ವ್ಯಾಪಾರದಲ್ಲಿ ನೀನು ಹೆಚ್ಚು ಆಸಕ್ತನಾಗಿದಿಯ್ದೋ?

“ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬದನ್ನು ನೀನೇ ಬಲ್ಲಿ,” ಪೇತ್ರನು ಪ್ರತಿವರ್ತಿಸುತ್ತಾನೆ.

“ನನ್ನ ಕುರಿಮರಿಗಳನ್ನು ಮೇಯಿಸು,” ಯೇಸುವು ಉತ್ತರಿಸುತ್ತಾನೆ.

ಎರಡನೆಯ ಸಲ, ಪುನಃ ಅವನು ಕೇಳುವದು: “ಯೋಹಾನನ ಮಗನಾದ ಸೀಮೋನನೇ, ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ?”

“ಹೌದು, ಸ್ವಾಮೀ, ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂಬದನ್ನು ನೀನೇ ಬಲ್ಲಿ,” ಪೇತ್ರನು ಆಸಕ್ತಿಯಿಂದ ಉತ್ತರಿಸುತ್ತಾನೆ.

“ನನ್ನ ಕುರಿಗಳನ್ನು ಕಾಯಿ,” ಯೇಸುವು ಪುನಃ ಅವನಿಗೆ ಅಪ್ಪಣೆ ಕೊಡುತ್ತಾನೆ.

ಅನಂತರ, ಇನ್ನೂ ಮೂರನೆಯ ಸಲ, ಅವನು ಕೇಳುವದು: “ಯೋಹಾನನ ಮಗನಾದ ಸೀಮೋನನೇ, ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ?”

ಈಗ ಪೇತ್ರನು ದುಃಖ ಪಡುತ್ತಾನೆ. ಅವನ ನಿಷ್ಠೆಯನ್ನು ಯೇಸುವು ಸಂದೇಹಿಸುತ್ತಾನೋ ಎಂದು ಅವನು ಚಿಂತಿಸಿದ್ದಿರಬಹುದು. ಎಷ್ಟೆಂದರೂ, ಇತ್ತೀಚಿಗೆ, ಯೇಸುವಿನ ಜೀವದ ವಿಚಾರಣೆಯ ಸಮಯದಲ್ಲಿ ಅವನ ಪರಿಚಯವೇ ಇಲ್ಲ ಎಂದು ಮೂರು ಸಲ ಪೇತ್ರನು ನಿರಾಕರಿಸಿದ್ದನು. ಆದುದರಿಂದ ಪೇತ್ರನು ಹೇಳುವದು: “ಸ್ವಾಮೀ, ನೀನು ಎಲ್ಲಾ ಬಲ್ಲಿ; ನಿನ್ನ ಮೇಲೆ ನಾನು ಮಮತೆ ಇಟ್ಟಿದ್ದೇನೆಂಬದು ನಿನಗೆ ತಿಳಿದದೆ.”

“ನನ್ನ ಕುರಿಗಳನ್ನು ಮೇಯಿಸು,” ಯೇಸುವು ಮೂರನೆಯ ಸಲ ಅಪ್ಪಣೆ ಕೊಡುತ್ತಾನೆ.

ಅವರು ಮಾಡಬೇಕೆಂದು ಅವನು ಬಯಸುವ ಕೆಲಸವನ್ನು ಅವರ ಮನದಲ್ಲಿ ಅಚ್ಚೊತ್ತಲು, ಈ ರೀತಿಯಲ್ಲಿ ಪೇತ್ರನನ್ನು ಪ್ರತಿಫಲಕದೋಪಾದಿ ಯೇಸುವು ಬಳಸುತ್ತಾನೆ. ಅವನು ಬೇಗನೇ ಭೂಮಿಯನ್ನು ಬಿಟ್ಟು ಹೋಗಲಿದ್ದನು ಮತ್ತು ದೇವರ ಕುರೀಮಂದೆಯೊಳಗೆ ಬರಲಿರುವವರ ಶುಶ್ರೂಪಷೆಯನ್ನು ಮಾಡುವದರಲ್ಲಿ ಮುಂದಾಳುತನವನ್ನು ವಹಿಸುವಂತೆ ಅವರಿಂದ ಬಯಸಿದನು.

ಅವನು ಮಾಡಬೇಕೆಂದು ದೇವರು ನೇಮಿಸಿದ ಕೆಲಸವನ್ನು ಅವನು ಮಾಡಿದ್ದರಿಂದ ಯೇಸುವನ್ನು ಕಟ್ಟಿಸಿ ವಧಿಸಿದಂತೆ, ಪೇತ್ರನೂ ತದ್ರೀತಿಯ ಅನುಭವದಿಂದ ಬಾಧೆ ಪಡುವನು ಎಂದವನು ಈಗ ಪ್ರಕಟಿಸುತ್ತಾನೆ. “ನೀನು ಯೌವನಸ್ಥನಾಗಿದ್ದಾಗ,” ಯೇಸುವು ಅವನಿಗೆ ಹೇಳುವದು, “ನೀನೇ ನಡುವನ್ನು ಕಟ್ಟಿಕೊಂಡು ಇಷ್ಟ ಬಂದ ಕಡೆಗೆ ತಿರುಗಾಡುತ್ತಿದ್ದಿ; ಆದರೆ ನೀನು ಮುದುಕನಾದಾಗ, ನಿನ್ನ ಕೈಗಳನ್ನು ಚಾಚುವಿ, ಮತ್ತೊಬ್ಬನು ನಿನ್ನ ನಡುವನ್ನು ಕಟ್ಟಿಕೊಂಡು ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ತೆಗೆದು ಕೊಂಡು ಹೋಗುವನು.” ಧರ್ಮಬಲಿಯಾಗಿ ಸಾಯುವದು ಪೇತ್ರನಿಗೆ ಕಾದಿರುವದಾದರೂ, ಯೇಸುವು ಅವನಿಗೆ ಪ್ರೇರಿಸುವದು: “ನನ್ನನ್ನು ಹಿಂಬಾಲಿಸು.”

ಪೇತ್ರನು ತಿರುಗಿಕೊಂಡು ಯೋಹಾನನನ್ನು ಕಾಣುತ್ತಾನೆ, ಮತ್ತು ಕೇಳುತ್ತಾನೆ: “ಸ್ವಾಮೀ, ಇವನ ವಿಷಯವೇನು?”

“ನಾನು ಬರುವ ತನಕ ಇವನು ಇರಬೇಕೆಂದು ನನಗೆ ಮನಸ್ಸಿದ್ದರೆ,” ಯೇಸುವು ಉತ್ತರಿಸುವದು, “ಅದು ನಿನಗೇನು? ನೀನು ನನ್ನನ್ನು ಹಿಂಬಾಲಿಸು.” ಅಪೊಸ್ತಲ ಯೋಹಾನನು ಎಂದಿಗೂ ಸಾಯುವದಿಲ್ಲ ಎಂಬರ್ಥದಲ್ಲಿ ಯೇಸು ಈ ಮಾತುಗಳನ್ನು, ಹೇಳಿದನು ಎಂದು ಅನೇಕ ಶಿಷ್ಯರು ಅರ್ಥೈಸಿಕೊಂಡರು. ಆದಾಗ್ಯೂ, ಅಪೊಸ್ತಲ ಯೋಹಾನನು ತದನಂತರ ವಿವರಿಸಿದಂತೆ, ಅವನು ಸಾಯುವದಿಲ್ಲವೆಂದು ಯೇಸುವು ಹೇಳಲಿಲ್ಲ, ಬದಲು ಸರಳವಾಗಿ ಯೇಸುವು ಹೇಳಿದ್ದು: “ನಾನು ಬರುವ ತನಕ ಅವನು ಇರಬೇಕೆಂದು ನನಗೆ ಮನಸ್ಸಿದ್ದರೆ ಅದು ನಿನಗೇನು?”

ಅನಂತರ ಯೋಹಾನನು ಒಂದು ಮಹತ್ವಾರ್ಥವುಳ್ಳ ಅವಲೋಕನೆಯನ್ನು ಕೂಡ ಮಾಡಿದನು: “ಇದಲ್ಲದೆ ಯೇಸು ಮಾಡಿದ್ದು ಇನ್ನೂ ಬಹಳವಿದೆ; ಅದನ್ನೆಲ್ಲಾ ಒಂದೊಂದಾಗಿ ಬರೆಯುವದಾದರೆ, ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸದೆ ಹೋದೀತೆಂದು ನಾನು ನೆನಸುತ್ತೇನೆ.” ಯೋಹಾನ 21:1-25; ಮತ್ತಾಯ 26:32; 28:7, 10.

▪ ಗಲಿಲಾಯದಲ್ಲಿ ಏನು ಮಾಡಬೇಕೆಂದು ಅಪೊಸ್ತಲರು ಅನಿಶ್ಚಯತೆಯಿಂದ ಇದ್ದರು ಎಂಬುದನ್ನು ಯಾವದು ತೋರಿಸುತ್ತದೆ?

▪ ಗಲಿಲಾಯದ ಸಮುದ್ರದ ಪಕ್ಕದಲ್ಲಿ ಯೇಸುವನ್ನು ಅಪೊಸ್ತಲರು ಗುರುತು ಹಿಡಿದದ್ದು ಹೇಗೆ?

▪ ಅವನ ಪುನರುತ್ಥಾನದ ನಂತರ ಯೇಸುವು ಈಗ ಎಷ್ಟು ಸಲ ಕಾಣಿಸಿಕೊಂಡನು?

▪ ಅಪೊಸ್ತಲರು ಏನು ಮಾಡಬೇಕೆಂಬುದನ್ನು ಯೇಸುವು ಒತ್ತಿ ತಿಳಿಸಿದ್ದು ಹೇಗೆ?

▪ ಪೇತ್ರನು ಯಾವ ವಿಧದಲ್ಲಿ ಸಾಯಲಿರುವನು ಎಂದು ಯೇಸುವು ಸೂಚಿಸಿದ್ದು ಹೇಗೆ?

▪ ಯೋಹಾನನ ಕುರಿತು ಯೇಸುವಿನ ಯಾವ ಹೇಳಿಕೆಗಳನ್ನು ಅನೇಕ ಶಿಷ್ಯರು ತಪ್ಪಾಗಿ ಗ್ರಹಿಸಿದರು?