ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತೋಟದಲ್ಲಿ ಸಂಕಟ

ತೋಟದಲ್ಲಿ ಸಂಕಟ

ಅಧ್ಯಾಯ 117

ತೋಟದಲ್ಲಿ ಸಂಕಟ

ಯೇಸುವು ಪ್ರಾರ್ಥನೆಯನ್ನು ಮುಗಿಸಿದ ನಂತರ, ಅವನೂ, ಅವನ 11 ಮಂದಿ ನಂಬಿಗಸ್ತ ಅಪೊಸ್ತಲರೂ ಯೆಹೋವನಿಗೆ ಕೀರ್ತನೆಗಳನ್ನು ಹಾಡುತ್ತಾರೆ. ಅನಂತರ ಅವರು ಮೇಲಂತಸ್ತಿನ ಕೋಣೆಯಿಂದ ಇಳಿದು, ರಾತ್ರಿಯ ತಣ್ಣಗಿನ ಕತ್ತಲಲ್ಲಿ ಸೇರುತ್ತಾರೆ ಮತ್ತು ಬೇಥಾನ್ಯಕ್ಕೆ ಹೋಗಲು ಕಿದ್ರೋನ್‌ ಹಳ್ಳದ ಆಚೆಗೆ ಹೊರಟು ಹೋಗುತ್ತಾರೆ. ಆದರೆ ದಾರಿಯಲ್ಲಿ ಅವರು ಒಂದು ಮೆಚ್ಚಿನ ಸ್ಥಳವಾದ, ಗೆತ್ಸೇಮನೆ ತೋಟದಲ್ಲಿ ತಂಗುತ್ತಾರೆ. ಇದು ಎಣ್ಣೇಮರಗಳ ಗುಡ್ಡದ ಮೇಲೆ ಯಾ ಅದರ ಪರಿಸರದಲ್ಲಿ ಇತ್ತು. ಯೇಸುವು ತನ್ನ ಅಪೊಸ್ತಲರೊಂದಿಗೆ ಆಗಾಗ್ಯೆ ಇಲ್ಲಿ ಎಣ್ಣೇಮರಗಳ ನಡುವೆ ಒಟ್ಟು ಸೇರುತ್ತಿದ್ದನು.

ಅಪೊಸ್ತಲರಲ್ಲಿ ಎಂಟು ಮಂದಿಯನ್ನು—ಪ್ರಾಯಶಃ ತೋಟದ ಪ್ರವೇಶ ದ್ವಾರದ ಹತ್ತಿರ—ಬಿಟ್ಟು, ಅವರಿಗೆ ಹೀಗೆ ಹೇಳುತ್ತಾನೆ: “ಇಲ್ಲೇ ಕೂತುಕೊಳ್ಳಿರಿ, ನಾನು ಅತಲ್ತಾಗಿ ಹೋಗಿ ಪ್ರಾರ್ಥನೆ ಮಾಡಿ ಬರುತ್ತೇನೆ.” ಅನಂತರ ಅವನು ಉಳಿದ ಮೂವರನ್ನು—ಪೇತ್ರ, ಯಾಕೋಬ ಮತ್ತು ಯೋಹಾನರನ್ನು ತೆಗೆದು ಕೊಂಡು ತೋಟದಲ್ಲಿ ಇನ್ನಷ್ಟು ಒಳಗೆ ಹೋಗುತ್ತಾನೆ. ಯೇಸುವು ದುಃಖ ಪಟ್ಟು ಮನಗುಂದಿದವನಾದನು. “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ,” ಎಂದು ಅವನು ಅವರಿಗೆ ಹೇಳುತ್ತಾನೆ, “ನೀವು ಇಲ್ಲೇ ಇದ್ದು ನನ್ನ ಸಂಗಡ ಎಚ್ಚರವಾಗಿರ್ರಿ.”

ಇನ್ನು ಸ್ವಲ್ಪ ಮುಂದೆ ಹೋಗಿ, ಯೇಸುವು ನೆಲದ ಮೇಲೆ ಬೋರಲ ಬಿದ್ದು, ತೀವ್ರಾಸಕಿಯ್ತಿಂದ ಪ್ರಾರ್ಥಿಸಲು ಆರಂಭಿಸುತ್ತಾನೆ: “ನನ್ನ ತಂದೆಯೇ, ಸಾಧ್ಯವಾಗಿದ್ದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ; ಹೇಗೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ.” ಅವನ ಅರ್ಥವೇನು? ಅವನ “ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾದದ್ದು” ಯಾಕೆ? ಮರಣ ಪಡುವ ಮತ್ತು ವಿಮೋಚನೆಯನ್ನು ಒದಗಿಸುವ ತನ್ನ ನಿರ್ಧಾರದಲ್ಲಿ ಅವನು ಹಿಮ್ಮೆಟ್ಟುತ್ತಾನೋ?

ಎಂದೆಂದಿಗೂ ಇಲ್ಲ! ಮರಣದಿಂದ ತನ್ನನ್ನು ಉಳಿಸಲು ಯೇಸುವು ಇಲ್ಲಿ ಭಿನ್ನಹ ಮಾಡುವದಲ್ಲ. ಒಮ್ಮೆ ಪೇತ್ರನಿಂದ ಸೂಚಿಸಲ್ಪಟ್ಟ, ಒಂದು ಯಜ್ಞಾರ್ಪಿತ ಮರಣವನ್ನು ಹೋಗಲಾಡಿಸುವ ಯೋಚನೆಯು ಕೂಡ, ಅವನಿಗೆ ಹೇಯಕರವಾಗಿತ್ತು. ಬದಲಾಗಿ ಅವನು ಸಂಕಟದಲ್ಲಿದ್ದನು, ಯಾಕಂದರೆ ಅವನು ಬೇಗನೆ ಸಾಯಲಿರುವ ವಿಧವು—ಒಬ್ಬ ಅಧಮನಾದ ಪಾತಕಿಯಂತೆ—ಅವನ ತಂದೆಯ ಹೆಸರಿನ ಮೇಲೆ ಅಪಮಾನವನ್ನು ತರುತ್ತದೋ ಎಂದು ಅವನು ಭಯಪಟ್ಟನು. ಮನುಷ್ಯರಲ್ಲಿ ಒಬ್ಬ ಅತೀ ಕೆಡುಕನೋಪಾದಿ—ದೇವರ ವಿರುದ್ಧ ದೇವನಿಂದಕನೋಪಾದಿ ಇನ್ನು ಕೆಲವೇ ತಾಸುಗಳಲ್ಲಿ ಅವನು ವಧಾಸ್ತಂಭದ ಮೇಲೆ ತೂಗಲ್ಪಡಲಿದ್ದನು ಎಂಬುದನ್ನು ಅವನು ಈಗ ತಿಳಿಯುತ್ತಾನೆ! ಅದು ಅವನನ್ನು ಬಹಳಷ್ಟು ಕಠಿಣವಾಗಿ ದುಃಖಕ್ಕೀಡುಮಾಡುತ್ತದೆ.

ದೀರ್ಘ ಸಮಯ ಪ್ರಾರ್ಥಿಸಿದ ನಂತರ, ಯೇಸುವು ಹಿಂತೆರಳಿದಾಗ ತನ್ನ ಮೂವರು ಅಪೊಸ್ತಲರು ನಿದ್ರಿಸುವುದನ್ನು ಕಾಣುತ್ತಾನೆ. ಪೇತ್ರನನ್ನು ಸಂಬೋಧಿಸುತ್ತಾ, ಅವನನ್ನುವದು: “ಹೀಗೋ? ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ? ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ.” ಆದಾಗ್ಯೂ, ಒತ್ತಡದ ಕೆಳಗೆ ಅವರಿರುವದನ್ನು ಮತ್ತು ರಾತ್ರಿ ಬಹಳ ಕಳೆದಿರುವದನ್ನು ಅಂಗೀಕರಿಸುತ್ತಾ, ಅವನು ಹೇಳುವದು: “ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು.”

ಅನಂತರ ಯೇಸುವು ಎರಡನೆಯ ಬಾರಿ ಹೋಗುತ್ತಾನೆ ಮತ್ತು “ಈ ಪಾತ್ರೆ” ಯನ್ನು ಅಂದರೆ ಅವನಿಗಾಗಿ ಯೆಹೋವನಿಂದ ನೇಮಿತವಾದ ಪಾಲನ್ನು ಅಥವಾ ಚಿತ್ತವನ್ನು, ಅವನಿಂದ ದೇವರು ತೆಗೆಯುವಂತೆ ವಿಜ್ಞಾಪಿಸುತ್ತಾನೆ. ಅವನು ಹಿಂತೆರಳಿದಾಗ, ಈ ಮೂವರು, ತಾವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸುವ ಬದಲಿಗೆ ಪುನಃ ನಿದ್ರಿಸುವದನ್ನು ಕಾಣುತ್ತಾನೆ. ಯೇಸುವು ಅವರಿಗೆ ಮಾತಾಡಿದಾಗ, ಏನು ಉತ್ತರ ಕೊಡುವದೆಂದು ಅವರು ತಿಳಿಯದಾದರು.

ಕಟ್ಟಕಡೆಗೆ, ಮೂರನೆಯ ಬಾರಿ, ಅವನು ಕಲ್ಲೆಸುಗೆಯಷ್ಟು ದೂರ ಹೋಗಿ, ಮೊಣಕಾಲೂರಿ, ಬಲವಾಗಿ ಕೂಗುತ್ತಾ, ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥಿಸುತ್ತಾನೆ: “ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು.” ಒಬ್ಬ ಪಾತಕಿಯೋಪಾದಿ ಅವನ ಮರಣವು ಅವನ ತಂದೆಯ ಹೆಸರಿನ ಮೇಲೆ ಅಪಮಾನವನ್ನು ತರುವ ಕಾರಣ ಯೇಸುವು ತೀವ್ರವಾದ ನೋವನ್ನು ಅನುಭವಿಸಿದನು. ಯಾಕೆ, ದೇವದೂಷಕನು—ದೇವರನ್ನು ಶಪಿಸುವವನು—ಎಂಬ ಆಪಾದನೆಯನ್ನು ತಾಳಿಕೊಳ್ಳಲು ಬಹಳ ಹೆಚ್ಚಾಗಿತ್ತು!

ಆದಾಗ್ಯೂ, ಯೇಸುವು ಪ್ರಾರ್ಥಿಸುವದನ್ನು ಮುಂದರಿಸುತ್ತಾನೆ: “ಹೇಗೂ ನನ್ನ ಚಿತ್ತವಲ್ಲ. ನಿನ್ನ ಚಿತ್ತವೇ ಆಗಲಿ.” ದೇವರ ಚಿತ್ತಕ್ಕೆ ಯೇಸುವು ವಿಧೇಯತೆಯಿಂದ ಅಧೀನನಾಗುತ್ತಾನೆ. ಈ ಸಮಯದಲ್ಲಿ ಪರಲೋಕದಿಂದ ದೇವದೂತನೊಬ್ಬನು ಕಾಣಿಸಿಕೊಳ್ಳುತ್ತಾನೆ ಮತ್ತು ಕೆಲವು ಧೈರ್ಯದಾಯಕ ಮಾತುಗಳಿಂದ ಅವನನ್ನು ಬಲಪಡಿಸುತ್ತಾನೆ. ಅವನ ತಂದೆಯ ಪ್ರಸನ್ನತೆಯ ಸಮ್ಮತಿ ಇದೆ ಎಂದು ಯೇಸುವಿಗೆ ದೇವದೂತನು ಪ್ರಾಯಶಃ ಹೇಳಿರಬಹುದು.

ಆದರೂ, ಯೇಸುವಿನ ಭುಜಗಳ ಮೇಲೆ ಎಂಥ ಭಾರವಿತ್ತು! ಅವನ ಸ್ವಂತ ನಿತ್ಯ ಜೀವ ಮತ್ತು ಇಡೀ ಮಾನವ ಕುಲದ ನಿತ್ಯ ಜೀವವು ಅನಿಶ್ಚಿತ ಸ್ಥಿತಿಯಲ್ಲಿತ್ತು. ಭಾವನಾತ್ಮಕ ಒತ್ತಡವು ಭಾರೀ ಪ್ರಮಾಣದ್ದಾಗಿತ್ತು. ಆದುದರಿಂದ ಯೇಸು ತೀವ್ರ ಆಸಕ್ತಿಯಿಂದ ಪ್ರಾರ್ಥಿಸುತ್ತಿರುವದನ್ನು ಮುಂದರಿಸುತ್ತಾನೆ ಮತ್ತು ಅವನ ಬೆವರು ಭೂಮಿಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿ ಇತ್ತು. “ಇದು ಒಂದು ಬಹಳ ವಿರಳವಾದ ಪ್ರಕೃತಿ ಘಟನೆಯಾಗಿರುವದಾದರೂ,” ದ ಜರ್ನಲ್‌ ಆಫ್‌ ದ ಅಮೆರಿಕನ್‌ ಮೆಡಿಕಲ್‌ ಎಸೋಸಿಯೇಶನ್‌ ಅವಲೋಕಿಸುವದು, “ರಕ್ತದ ಬೆವರು . . . ಉಚ್ಛಮಟ್ಟದ ಭಾವನಾವೇಶದ ಸ್ಥಿತಿಯಲ್ಲಿ ಸಂಭವಿಸಬಹುದು.”

ಅನಂತರ ಯೇಸುವು ಮೂರನೆಯ ಸಲ ಅಪೊಸ್ತಲರ ಬಳಿಗೆ ಹಿಂತೆರಳಿದಾಗ, ಅವರು ಪುನಃ ನಿದ್ದೆ ಮಾಡುವದನ್ನು ಕಂಡನು. ಅವರು ಬಹಳ ವ್ಯಥೆಯಿಂದ ಬಳಲಿದ್ದರು. “ಇಂಥಹ ಸಮಯದಲ್ಲಿ, ನೀವು ಇನ್ನೂ ನಿದ್ದೆ ಮಾಡಿ ದಣುವಾರಿಸಿಕೊಳ್ಳುತ್ತೀರಿ!” ಎಂದು ಅವನು ಹೇಳುತ್ತಾನೆ. “ಸಾಕು! ಆ ಗಳಿಗೆ ಬಂತು! ಇಗೋ, ಮನುಷ್ಯ ಕುಮಾರನು ದುರ್ಜನರ ಕೈಗೆ ಒಪ್ಪಿಸಲ್ಪಡುತ್ತಾನೆ. ಏಳಿರಿ, ಹೋಗೋಣ; ನನ್ನನ್ನು ಹಿಡುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ, ನೋಡಿರಿ.”

ಅವನು ಇನ್ನೂ ಮಾತಾಡುತ್ತಿರುವಾಗಲೇ, ಇಸ್ಕರಿಯೋತ ಯೂದನು ಸಮೀಪಿಸುತ್ತಾನೆ, ಅವನೊಂದಿಗೆ ದೀವಿಟಿಗಳನ್ನು, ಪಂಜುಗಳನ್ನು ಮತ್ತು ಆಯುಧಗಳನ್ನು ಹಿಡಿದಿರುವ ಒಂದು ದೊಡ್ಡ ಜನರ ಗುಂಪು ಇತ್ತು. ಮತ್ತಾಯ 26:30, 36-47; 16:21-23; ಮಾರ್ಕ 14:26, 32-43; ಲೂಕ 22:39-47; ಯೋಹಾನ 18:1-3; ಇಬ್ರಿಯ 5:7.

▪ ಮೇಲಂತಸ್ತಿನ ಕೋಣೆಯನ್ನು ಬಿಟ್ಟು ಹೊರಟು ಬಂದ ನಂತರ ಯೇಸುವು ಅಪೊಸ್ತಲರನ್ನು ಎಲ್ಲಿಗೆ ನಡಿಸುತ್ತಾನೆ, ಮತ್ತು ಅಲ್ಲಿ ಅವನು ಏನು ಮಾಡುತ್ತಾನೆ?

▪ ಯೇಸುವು ಪ್ರಾರ್ಥಿಸುತ್ತಿರುವಾಗ, ಅಪೊಸ್ತಲರು ಏನು ಮಾಡುತ್ತಾರೆ?

▪ ಯೇಸುವು ಸಂಕಟ ಪಡುವದು ಯಾಕೆ, ಮತ್ತು ಅವನು ದೇವರಿಗೆ ಯಾವ ಭಿನ್ನಹವನ್ನು ಮಾಡುತ್ತಾನೆ?

▪ ಯೇಸುವಿನ ಬೆವರು ರಕ್ತದ ಹನಿಗಳೋಪಾದಿ ಆಗುವದು ಏನನ್ನು ಸೂಚಿಸುತ್ತದೆ?