ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೆವ್ವ ಹಿಡಿಯಲ್ಪಟ್ಟ ಹುಡುಗನು ವಾಸಿಮಾಡಲ್ಪಡುತ್ತಾನೆ

ದೆವ್ವ ಹಿಡಿಯಲ್ಪಟ್ಟ ಹುಡುಗನು ವಾಸಿಮಾಡಲ್ಪಡುತ್ತಾನೆ

ಅಧ್ಯಾಯ 61

ದೆವ್ವ ಹಿಡಿಯಲ್ಪಟ್ಟ ಹುಡುಗನು ವಾಸಿಮಾಡಲ್ಪಡುತ್ತಾನೆ

ಯೇಸು, ಪೇತ್ರ, ಯಾಕೋಬ, ಮತ್ತು ಯೋಹಾನರು ಹೆರ್ಮೋನ್‌ ಬೆಟ್ಟದ ಒಂದು ತುದಿಯ ಮೇಲೆ ಇದ್ದಾಗ, ಬೇರೆ ಶಿಷ್ಯರು ಸಮಸ್ಯೆಯೊಂದರಲ್ಲಿ ಸಿಕ್ಕಿಬೀಳುತ್ತಾರೆ. ಅವನು ಹಿಂತೆರಳಿದ ಕೂಡಲೇ, ಯೇಸುವು ಏನೋ ತಪ್ಪಾಗಿರುವದನ್ನು ಕಾಣುತ್ತಾನೆ. ಅವನ ಶಿಷ್ಯರ ಸುತ್ತಲೂ ಜನರ ಒಂದು ದೊಡ್ಡ ಗುಂಪು ನೆರೆದಿದೆ, ಮತ್ತು ಶಾಸ್ತ್ರಿಗಳು ಅವರೊಡನೆ ತರ್ಕ ಮಾಡುತ್ತಾ ಇದ್ದಾರೆ. ಯೇಸುವನ್ನು ಕಂಡು ಜನರು ಬಹಳ ಆಶ್ಚರ್ಯಪಡುತ್ತಾರೆ ಮತ್ತು ಅವನನ್ನು ವಂದಿಸಲು ತರ್ವೆಪಡುತ್ತಾರೆ. “ಇವರ ಸಂಗಡ ಏನು ತರ್ಕಮಾಡುತ್ತೀರಿ?” ಎಂದು ಅವನು ವಿಚಾರಿಸುತ್ತಾನೆ.

ಆಗ ಗುಂಪಿನಿಂದ ಒಬ್ಬ ಮನುಷ್ಯನು ಮುಂದಕ್ಕೆ ಬಂದು, ಯೇಸುವಿನ ಕಾಲಿಗೆ ಎರಗುತ್ತಾ, ವಿವರಿಸಿದ್ದು: “ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರಕೊಂಡು ಬಂದೆನು; ಅವನಿಗೊಂದು ಮೂಗದೆವ್ವ ಹಿಡಿದದೆ; ಅದು ಎಲ್ಲಿ ಅವನ ಮೇಲೆ ಬಂದರೂ ಅವನನ್ನು ಕೆಡವುತ್ತದೆ. ಆಗ ಅವನು ನೊರೆ ಸುರಿಸುತ್ತಾ ಕರಕರನೆ ಹಲ್ಲು ಕಡಿಯುತ್ತಾ, ಕುಂದಿಹೋಗುತ್ತಾನೆ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರಿಗೆ ಹೇಳಿಕೊಂಡೆ; ಆದರೆ ಅವರ ಕೈಯಿಂದ ಆಗದೆ ಹೋಯಿತು.”

ಹುಡುಗನನ್ನು ವಾಸಿಮಾಡುವದರಲ್ಲಿ ಆದ ಶಿಷ್ಯರ ಸೋಲಿನ ಆದಷ್ಟು ಲಾಭ ಪಡೆಯಲು ಪ್ರಾಯಶಃ ಶಾಸ್ತ್ರಿಗಳು ಪ್ರಯತ್ನಿಸುತ್ತಿದ್ದರು ಎಂದು ಕಾಣುತ್ತಿತ್ತು, ಬಹುಶಃ ಅವರ ಪ್ರಯತ್ನಗಳನ್ನು ಗೇಲಿಮಾಡುತ್ತಿದ್ದಿರಬಹುದು. ಇಂತಹ ಸಂದಿಗ್ಧ ಗಳಿಗೆಯಲ್ಲಿ, ಯೇಸುವು ಆಗಮಿಸುತ್ತಾನೆ. “ಎಲಾ ನಂಬಿಕೆಯಿಲ್ಲದಂಥ ಸಂತಾನವೇ,” ಎಂದು ಅವನನ್ನುತ್ತಾನೆ, “ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ? ಇನ್ನೆಷ್ಟು ದಿನ ಸಹಿಸಿಕೊಳ್ಳಲಿ?”

ಅವನ ಈ ಹೇಳಿಕೆಗಳನ್ನು ಅಲ್ಲಿ ಹಾಜರಿದ್ದ ಎಲ್ಲರಿಗೂ ಸಂಬೋಧಿಸಿರಬಹುದಾದರೂ, ಅದು ಅವನ ಶಿಷ್ಯರಿಗೆ ಉಪದ್ರವ ಕೊಡುತ್ತಿದ್ದ ಶಾಸ್ತ್ರಿಗಳಿಗೆ ನೇರವಾಗಿ ನಿರ್ದೇಶಿಸಲ್ಪಟ್ಟಿತ್ತು ಎಂಬುದರಲ್ಲಿ ಸಂದೇಹವಿರಲಿಲ್ಲ. ಅನಂತರ, ಯೇಸುವು ಹುಡುಗನ ಕುರಿತಾಗಿ ಹೇಳುವದು: “ನನ್ನ ಬಳಿಗೆ ಅವನನ್ನು ತೆಗೆದುಕೊಂಡು ಬನ್ನಿರಿ.” ಆದರೆ ಹುಡುಗನು ಯೇಸುವಿನ ಬಳಿಗೆ ಬರುತ್ತಿರುವಾಗಲೇ, ಅವನನ್ನು ಹಿಡಿದಿದ್ದ ದೆವ್ವವು ಹುಡುಗನನ್ನು ನೆಲಕ್ಕೆ ಉರುಳಿಸುತ್ತದೆ ಮತ್ತು ಅವನನ್ನು ಉಗ್ರ ಕಲಕಾಟಕ್ಕೆ ಒಳಪಡಿಸುತ್ತದೆ. ಹುಡುಗನು ನೆಲದ ಮೇಲೆ ಬಿದ್ದು ನೊರೆ ಸುರಿಸುತ್ತಾ ಹೊರಳಾಡುತ್ತಾನೆ.

“ಇದು ಇವನಿಗೆ ಎಂದಿನಿಂದ ಸಂಭವಿಸುತ್ತದೆ?” ಯೇಸುವು ಕೇಳುತ್ತಾನೆ.

“ಚಿಕ್ಕಂದಿನಿಂದಲೇ ಬಂದಿದೆ” ಎಂದು ತಂದೆಯು ಉತ್ತರಿಸುತ್ತಾನೆ. “ಇವನನ್ನು ಕೊಲ್ಲಬೇಕೆಂದು, ಆಗಾಗ್ಯೆ [ದೆವ್ವವು] ಬೆಂಕಿಯಲ್ಲಿಯೂ, ನೀರಿನಲ್ಲಿಯೂ ಕೆಡಹುತ್ತದೆ.” ಅನಂತರ ತಂದೆಯು ಬೇಡುವದು: “ನಿನ್ನ ಕೈಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕರುಣವಿಟ್ಟು ನಮಗೆ ಸಹಾಯ ಮಾಡು.”

ಪ್ರಾಯಶಃ ಅನೇಕ ವರ್ಷಗಳಿಂದ ತಂದೆಯು ಸಹಾಯಕ್ಕಾಗಿ ಹುಡುಕುತ್ತಿದ್ದನು. ಮತ್ತು ಈಗ ಯೇಸುವಿನ ಶಿಷ್ಯರ ಸೋಲಿನಿಂದ ಅವನ ಹತಾಶೆಯು ಇನ್ನೂ ಹೆಚ್ಚಾಗಿತ್ತು. ಈ ಮನುಷ್ಯನ ಹತಾಶೆಯ ಕೋರಿಕೆಯನ್ನು ಆಲಿಸುತ್ತಾ, ಯೇಸುವು ಪ್ರೋತ್ಸಾಹಕರವಾಗಿ ಹೇಳಿದ್ದು: “ನಿನ್ನ ಕೈಲಿ ಆಗುವ ಹಾಗಿದ್ದರೆ ಅನ್ನುತ್ತೀಯೋ? ಒಬ್ಬನಿಗೆ ನಂಬಿಕೆ ಇದ್ದರೆ ಎಲ್ಲಾ ಆಗುವದು.”

“ನನಗೆ ನಂಬಿಕೆ ಇದೆ,” ಎಂದು ತಂದೆಯು ಕೂಡಲೇ ಕೂಗಿ ಹೇಳುತ್ತಾನೆ, ಆದರೆ ಅವನು ಬೇಡುವದು: “ನನಗೆ ನಂಬಿಕೆ ಕಡಿಮೆಯಾಗಿದ್ದರೂ, ಸಹಾಯ ಮಾಡು!”

ಆಗ ಜನರ ಗುಂಪು ಅವರ ಬಳಿಗೆ ಓಡಿಬರುವದನ್ನು ಕಂಡು, ಯೇಸುವು ದೆವ್ವಕ್ಕೆ ಗದರಿಸಿದ್ದು: “ಎಲೇ, ಕಿವುಡಾದ ಮೂಗದೆವ್ವವೇ, ಇವನನ್ನು ಬಿಟ್ಟುಹೋಗು; ಇನ್ನು ಮುಂದೆ ಇವನನ್ನು ಹಿಡಿಯಬೇಡ ಎಂದು ನಾನು ನಿನಗೆ ಅಪ್ಪಣೆ ಕೊಡುತ್ತೇನೆ.” ದೆವ್ವವು ಅವನನ್ನು ಬಿಟ್ಟು ಹೋಗುತ್ತಿದ್ದಂತೆಯೇ, ಅದು ಪುನಃ ಹುಡುಗನನ್ನು ಜೋರಾಗಿ ಅಬ್ಬರಿಸುವಂತೆ ಮಾಡುತ್ತದೆ ಮತ್ತು ಅವನಿಗೆ ಕಲಕಾಟವನ್ನು ಮಾಡಿ ಒದ್ದಾಡಿಸುತ್ತದೆ. ಅನಂತರ ಆ ಹುಡುಗನು ನಿಶ್ಚೇತನನಾಗಿ ನೆಲದ ಮೇಲೆ ಬಿದ್ದುಕೊಳ್ಳುತ್ತಾನೆ, ಆಗ ಬಹು ಜನರು “ಅವನು ಸತ್ತುಹೋದ!” ಎಂದು ಹೇಳಲಾರಂಭಿಸಿದರು. ಆದರೆ ಯೇಸುವು ಹುಡುಗನನ್ನು ಕೈಹಿಡಿದು ಎಬ್ಬಿಸಲು, ಅವನು ಎದ್ದು ನಿಲ್ಲುತ್ತಾನೆ.

ಈ ಮೊದಲು ತನ್ನ ಶಿಷ್ಯರನ್ನು ಸಾರಲಿಕ್ಕೆ ಕಳುಹಿಸಿದಾಗ, ಅವರು ದೆವ್ವಗಳನ್ನು ಬಿಡಿಸಿದ್ದರು. ಆದುದರಿಂದ ಅವರು ಮನೆಯೊಳಗೆ ಬಂದಾಗ, ಯೇಸುವಿನ ಹತ್ತಿರ ಅವರು ಏಕಾಂತವಾಗಿ ಕೇಳುತ್ತಾರೆ: “ಅದನ್ನು ಬಿಡಿಸಲು ನಮಗೆ ಯಾಕೆ ಆಗಲಿಲ್ಲ?”

ಅವರ ನಂಬಿಕೆಯ ಕೊರತೆಯ ಕಾರಣದಿಂದಲೇ ಎಂದು ಸೂಚಿಸುತ್ತಾ, ಯೇಸುವು ಉತ್ತರಿಸುವದು: “ಈ ಜಾತಿಯು ದೇವರ ಪ್ರಾರ್ಥನೆಯಿಂದಲೇ ಹೊರತು ಬೇರೆ ಯಾತರಿಂದಲೂ ಬಿಟ್ಟುಹೋಗುವದಿಲ್ಲ.” ಇಲ್ಲಿ ಒಳಗೂಡಿರುವಂತಹ, ವಿಶೇಷವಾಗಿ ಬಲವತ್ತಾದ ದೆವ್ವವನ್ನು ಬಿಡಿಸಲು ಸಿದ್ಧತೆಯನ್ನು ಮಾಡುವ ಆವಶ್ಯಕತೆ ಇರುತ್ತದೆ ಎಂದು ರುಜುವಾಗುತ್ತದೆ. ಆವಶ್ಯಕವಾದ ದೇವರ ಮಹತ್ತಾದ ಸಹಾಯಕ್ಕಾಗಿ ಪ್ರಾರ್ಥನೆಯೊಂದಿಗೆ ಬಲವಾದ ನಂಬಿಕೆಯು ಬೇಕಾಗಿತ್ತು.

ಮತ್ತು ಯೇಸುವು ಕೂಡಿಸಿದ್ದು: “ನಿಮಗೆ ಸತ್ಯವಾಗಿ ಹೇಳುತ್ತೇನೆ, ಸಾಸಿವೇಕಾಳಷ್ಟು ನಂಬಿಕೆ ನಿಮಗೆ ಇರುವದಾದರೆ ನೀವು ಈ ಬೆಟ್ಟಕ್ಕೆ —ಇಲ್ಲಿಂದ ಅಲ್ಲಿಗೆ ಹೋಗು ಎಂದು ಹೇಳಿದರೂ ಅದು ಹೋಗುವದು; ಮತ್ತು ನಿಮ್ಮ ಕೈಯಿಂದಾಗದಂಥದು ಒಂದೂ ಇರುವದಿಲ್ಲ.” ನಂಬಿಕೆಯು ಎಷ್ಟು ಬಲಶಾಲಿಯಾಗಿರಬಲ್ಲದು!

ಒಂದು ಮಹಾ ನೈಜವಾದ ಬೆಟ್ಟವು ಹೇಗಿರಬಲ್ಲದೋ, ತದ್ರೀತಿಯಲ್ಲಿ ಯೆಹೋವನ ಸೇವೆಯಲ್ಲಿ ಪ್ರಗತಿಯನ್ನು ತಡೆಗಟ್ಟಲು ಅಡ್ಡಿಗಳು ಮತ್ತು ಕಷ್ಟಗಳು ಅಬೇಧ್ಯವಾಗಿಯೂ, ತೆಗೆಯಲು ಅಸಾಧ್ಯವಾದದ್ದಾಗಿಯೂ ಕಂಡುಬರಬಹುದು. ಆದರೂ, ನಮ್ಮ ಹೃದಯದಲ್ಲಿ ನಾವು ನಂಬಿಕೆಯನ್ನು ನೆಡುವದಾದರೆ, ಅದು ಬೆಳೆಯುವಂತೆ ಅದಕ್ಕೆ ನೀರು ಮತ್ತು ಪ್ರೋತ್ಸಾಹನೆ ನೀಡಲ್ಪಡುವದಾದರೆ, ಅದು ಪ್ರೌಢತೆಯಲ್ಲಿ ವಿಸ್ತಾರಗೊಳ್ಳುತ್ತದೆ ಮತ್ತು ಬೆಟ್ಟದಂತಹ ಅಡ್ಡಿಗಳನ್ನು ಮತ್ತು ಕಷ್ಟಗಳನ್ನು ಜಯಿಸಲು ನಮಗೆ ಸಾಧ್ಯಮಾಡುತ್ತದೆ ಎಂದು ಯೇಸುವು ತೋರಿಸುತ್ತಾನೆ. ಮಾರ್ಕ 9:14-29; ಮತ್ತಾಯ 17:19, 20; ಲೂಕ 9:37-43.

▪ ಹೆರ್ಮೋನ್‌ ಬೆಟ್ಟದಿಂದ ಇಳಿದು ಬಂದ ಮೇಲೆ ಯೇಸುವು ಯಾವ ಸನ್ನಿವೇಶವನ್ನು ಎದುರಿಸಿದನು?

▪ ದೆವ್ವ ಹಿಡಿದ ಹುಡುಗನ ತಂದೆಗೆ ಯೇಸುವು ಯಾವ ಪ್ರೋತ್ಸಾಹವನ್ನು ನೀಡಿದನು?

▪ ಶಿಷ್ಯರು ದೆವವ್ವನ್ನು ಯಾಕೆ ಬಿಡಿಸಶಕ್ತರಾಗಲಿಲ್ಲ?

▪ ನಂಬಿಕೆಯು ಎಷ್ಟು ಬಲವತ್ತಾಗಿರ ಸಾಧ್ಯವಿದೆ ಎಂದು ಯೇಸುವು ತೋರಿಸಿದನು?