ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಕೇಳಿದ್ದನ್ನೆಲ್ಲಾ ಯೇಸುವು ಪೂರ್ತಿಮಾಡುತ್ತಾನೆ

ದೇವರು ಕೇಳಿದ್ದನ್ನೆಲ್ಲಾ ಯೇಸುವು ಪೂರ್ತಿಮಾಡುತ್ತಾನೆ

ಅಧ್ಯಾಯ 133

ದೇವರು ಕೇಳಿದ್ದನ್ನೆಲ್ಲಾ ಯೇಸುವು ಪೂರ್ತಿಮಾಡುತ್ತಾನೆ

ಯೋಧ-ರಾಜನಾದ ಯೇಸು ಕ್ರಿಸ್ತನು ಸೈತಾನನನ್ನೂ, ಅವನ ಅನೀತಿಯ ಲೋಕವನ್ನೂ ನಿರ್ಮೂಲಮಾಡಿದಾಗ, ಸಂತೋಷ ಪಡಲು ಎಷ್ಟೊಂದು ಕಾರಣ ಅಲ್ಲಿರುವದು! ಯೇಸುವಿನ ಸಾವಿರ ವರ್ಷದ ಶಾಂತಿಯ ಆಳಿಕ್ವೆಯು ಕೊನೆಗೂ ಆರಂಭಗೊಳ್ಳುತ್ತದೆ!

ಯೇಸುವಿನ ಮತ್ತು ಅವನ ಜೊತೆ ಅರಸುಗಳ ಮಾರ್ಗದರ್ಶನದಲ್ಲಿ, ಅರ್ಮಗೆದೋನಿನಲ್ಲಿ ಪಾರಾದವರು, ಆ ನೀತಿಯ ಯುದ್ಧದಿಂದ ಉಳಿದಿರುವ ಅವಶೇಷಗಳನ್ನು ಶುದ್ಧ ಮಾಡುವರು. ಭೂಮಿಯಲ್ಲಿ ಪಾರಾದವರು, ಕೆಲವು ಸಮಯಗಳ ತನಕ ಮಕ್ಕಳನ್ನು ಪಡೆಯುವ ಸಾಧ್ಯತೆಗಳಿವೆ ಮತ್ತು ಜಾಜ್ವಲ್ಯಮಾನವಾದ ಉದ್ಯಾನವನದಂಥದ್ದಾಗಿ ಪರಿವರ್ತಿಸುವದರಲ್ಲಿ ಈ ಭೂಮಿಯನ್ನು ಕೃಷಿ ಮಾಡುವ ಆಹ್ಲಾದಕರ ಕೆಲಸದಲ್ಲಿ ಇವರು ಪಾಲುಗಾರರಾಗುವರು.

ತಕ್ಕ ಸಮಯದಲ್ಲಿ, ಅಗಣಿತ ಲಕ್ಷಾಂತರ ಮಂದಿಗಳನ್ನು ಅವರ ಸಮಾಧಿಗಳಿಂದ ಯೇಸುವು ಹೊರಗೆ ತರುವನು. ಅವನ ಸ್ವಂತ ಖಾತರಿಯ ನೆರವೇರಿಕೆಯಲ್ಲಿ ಅವನು ಇದನ್ನು ಮಾಡುವನು: “ಸಮಾಧಿಗಳಲ್ಲಿರುವವರೆಲ್ಲರು . . . ಹೊರಗೆ ಬರುವ ಕಾಲ ಬರುತ್ತದೆ.”

ಯಾತನೆಯ ಕಂಭದಲ್ಲಿ ಅವನ ಪಕ್ಕದಲ್ಲಿ ಅವನೊಂದಿಗೆ ಸತ್ತಿದ್ದ ಹಿಂದಿನ ದುಷ್ಕರ್ಮಿಯು ಕೂಡ, ಯೇಸುವು ಎಬ್ಬಿಸುವವರಲ್ಲಿ ಇರುವನು. ಯೇಸುವು ಅವನಿಗೆ ವಾಗ್ದಾನಿಸಿದ್ದನ್ನು ನೆನಪಿಸಿರಿ: “ನನ್ನ ಸಂಗಡ ಪರದೈಸದಲ್ಲಿರುವಿ ಎಂದು ಈ ಹೊತ್ತೇ ನಿನಗೆ ಸತ್ಯವಾಗಿ ಹೇಳುತ್ತೇನೆ.” ಯೇಸುವಿನೊಂದಿಗೆ ರಾಜನಾಗಿ ಆಳಲು ಆ ಮನುಷ್ಯನನ್ನು ಪರಲೋಕಕ್ಕೆ ಕೊಂಡೊಯ್ಯಲಾಗುವದಿಲ್ಲ, ಇಲ್ಲವೇ ಪರದೈಸ ಭೂಮಿಯಲ್ಲಿ ಅವನೊಂದಿಗೆ ಜೀವಿಸಲು ಯೇಸುವು ಪುನಃ ಮನುಷ್ಯನಾಗುವದಿಲ್ಲ. ಬದಲಾಗಿ, ಯೇಸುವು ಹಿಂದಿನ ದುಷ್ಕರ್ಮಿಯ ಸಂಗಡ ಇರುವದು ಅಂದರೆ ಪರದೈಸದಲ್ಲಿ ಜೀವಿಸಲು ಅವನನ್ನು ಪುನರುತ್ಥಾನಗೊಳಿಸುವದು ಮತ್ತು ಅವನ ಆವಶ್ಯಕತೆಗಳನ್ನು ನೋಡಿಕೊಳ್ಳುವದು, ಮುಂದಿನ ಪುಟದ ಚಿತ್ರದಲ್ಲಿ ಉದಾಹರಿಸಿದಂತೆ, ಶಾರೀರಿಕ ಮತ್ತು ಆತ್ಮಿಕ ಅಗತ್ಯತೆಗಳ ಜಾಗ್ರತೆ ವಹಿಸುವದು ಎಂಬರ್ಥದಲ್ಲಿರುತ್ತದೆ.

ಅದನ್ನು ಯೋಚಿಸಿರಿ! ಯೇಸುವಿನ ಪ್ರೀತಿಯ ಗಮನದ ಕೆಳಗೆ, ಸಮಗ್ರ ಮಾನವ ಕುಟುಂಬವು—ಅರ್ಮಗೆದೋನ್‌ ಪಾರಾದವರು, ಅವರ ಸಂತಾನ ಮತ್ತು ಅವನಿಗೆ ವಿಧೇಯರಾಗುವ ಸಾವಿರಾರು ಲಕ್ಷಾಂತರ ಪುನರುತಿತ್ಥ ಮೃತರು—ಮಾನವ ಪರಿಪೂರ್ಣತೆಯ ಕಡೆಗೆ ಬೆಳೆಯುವರು. ಅವನ ರಾಜ-ಪುತ್ರನಾದ ಯೇಸುವಿನ ಮೂಲಕ, ಯೆಹೋವನು ಮಾನವ ಕುಲದೊಂದಿಗೆ ಆತ್ಮಿಕವಾಗಿ ನಿವಾಸಿಸುವನು. “ಮತ್ತು” ಯೋಹಾನನು ಕೇಳಿದ, ಪರಲೋಕದಿಂದ ಬಂದ ಧ್ವನಿಯು ಹೇಳುವದು: “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” ಭೂಮಿಯ ಮೇಲಿರುವ ಯಾವ ವ್ಯಕ್ತಿಯೂ ಬಾಧೆ ಪಡುವದಿಲ್ಲ ಯಾ ಅಸ್ವಸ್ಥನಾಗುವದಿಲ್ಲ.

ಯೇಸುವಿನ ಸಾವಿರ ವರ್ಷದ ಆಳಿಕ್ವೆಯ ಅಂತ್ಯದೊಳಗೆ, ಮೊದಲನೆಯ ದಂಪತಿಗಳಾದ ಆದಾಮ ಮತ್ತು ಹವ್ವರಿಗೆ ಬಹು ಸಂತಾನವುಳ್ಳವರಾಗಿ ಹೆಚ್ಚಲು ಮತ್ತು ಭೂಮಿಯನ್ನು ತುಂಬಿಕೊಳ್ಳಲು ದೇವರು ಹೇಳಿದಾಗ, ಅವನ ಮೂಲ ಉದ್ದೇಶವು ಏನಾಗಿತ್ತೋ, ಅದೇ ಸನ್ನಿವೇಶವು ಇರುವದು. ಹೌದು, ನೀತಿಯ ಪರಿಪೂರ್ಣ ಮಾನವರ ಒಂದು ಕುಲದಿಂದ ಭೂಮಿಯು ತುಂಬಲಿರುವದು. ಯೇಸುವಿನ ವಿಮೋಚನಾ ಯಜ್ಞದ ಪ್ರಯೋಜನಗಳನ್ನು ಪ್ರತಿಯೊಬ್ಬರಿಗೆ ಅನ್ವಯಿಸುವದರಿಂದ ಇದು ಸಾಧ್ಯವಾಗುತ್ತದೆ. ಆದಾಮನ ಪಾಪವು ಇನ್ನು ಇಲ್ಲದಿರುವದರಿಂದ ಮರಣವು ಇರುವದಿಲ್ಲ!

ಈ ರೀತಿಯಲ್ಲಿ ಅವನಿಂದ ಯೆಹೋವನು ಏನನ್ನು ಕೇಳಿದ್ದನೋ, ಅದೆಲ್ಲವನ್ನೂ ಯೇಸುವು ಪೂರೈಸುತ್ತಾನೆ. ಆದಕಾರಣ, ಸಾವಿರ ವರ್ಷಗಳ ಕೊನೆಯಲ್ಲಿ, ರಾಜ್ಯವನ್ನೂ, ಪರಿಪೂರ್ಣತೆಗೇರಿಸಲ್ಪಟ್ಟ ಮಾನವ ಕುಲವನ್ನೂ ಅವನು ತನ್ನ ತಂದೆಗೆ ಒಪ್ಪಿಸುವನು. ಅನಂತರ ದೇವರು ಸೈತಾನನನ್ನೂ, ಅವನ ದೆವ್ವಗಳನ್ನೂ ಮರಣದಂಥ ಕಾರ್ಯವಿಹೀನತೆಯ ಅಧೋಲೋಕದಿಂದ ಬಿಡುಗಡೆ ಮಾಡುವನು. ಯಾವ ಉದ್ದೇಶಕ್ಕಾಗಿ?

ಒಳ್ಳೇದು, ಸಾವಿರ ವರ್ಷಗಳ ಅಂತ್ಯದೊಳಗೆ, ಪುನರುತ್ಥಾನಗೊಳಿಸಲ್ಪಟ್ಟು, ಪರದೈಸದೊಳಗೆ ಜೀವಿಸುವವರಲ್ಲಿ ಹೆಚ್ಚಿನವರ ನಂಬಿಕೆಯು ಎಂದಿಗೂ ಪರೀಕ್ಷಿಸಲ್ಪಟ್ಟಿರಲಿಲ್ಲ. ಸಾಯುವ ಮೊದಲು ಅವರಿಗೆ ದೇವರ ವಾಗ್ದಾನಗಳು ಎಂದಿಗೂ ತಿಳಿದಿರಲಿಲ್ಲ, ಆದ್ದರಿಂದ ಅವುಗಳಲ್ಲಿ ನಂಬಿಕೆಯನ್ನು ಪ್ರದರ್ಶಿಸಸಾಧ್ಯವಿರಲಿಲ್ಲ. ಅನಂತರ, ಪುನರುತ್ಥಾನಗೊಳಿಸಲ್ಪಟ್ಟು, ತದನಂತರ, ಬೈಬಲಿನ ಸತ್ಯತೆಗಳನ್ನು ಕಲಿಸಲ್ಪಟ್ಟ ನಂತರ, ಯಾವುದೇ ವಿರೋಧವಿಲ್ಲದೆ ಅವರಿಗೆ ಪರದೈಸದಲ್ಲಿ ದೇವರನ್ನು ಸೇವಿಸುವುದು ಸುಲಭವಾಗಿತ್ತು. ಆದರೆ ದೇವರನ್ನು ಸೇವಿಸುವದನ್ನು ಮುಂದುವರಿಸುವದರಿಂದ ಅವರನ್ನು ನಿಲ್ಲಿಸಲು ಪ್ರಯತ್ನಿಸುವಂತೆ ಸೈತಾನನಿಗೆ ಸಂದರ್ಭವನ್ನು ಕೊಟ್ಟರೆ, ಪರೀಕ್ಷೆಯ ಕೆಳಗೆ ಅವರು ನಿಷ್ಠೆಯವರೆಂದು ರುಜು ಮಾಡಲ್ಪಡುವರೋ? ಈ ಪ್ರಶ್ನೆಯನ್ನು ಪರಿಹರಿಸಲು, ಸೈತಾನನನ್ನು ಬಿಡುಗಡೆ ಮಾಡಲಾಗುವದು.

ಯೇಸುವಿನ ಸಾವಿರ ವರ್ಷದ ಆಳಿಕ್ವೆಯ ನಂತರ, ದೇವರನ್ನು ಸೇವಿಸುವದರಿಂದ ಅನಿರ್ಧರಿತ ಸಂಖ್ಯೆಯ ಜನರನ್ನು ತಿರುಗಿಸುವುದರಲ್ಲಿ ಸೈತಾನನು ಯಶಸ್ವಿಯಾಗುತ್ತಾನೆ ಎಂದು ಯೋಹಾನನಿಗೆ ಕೊಡಲ್ಪಟ್ಟ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಆದರೆ, ಕೊನೆಯ ಪರೀಕ್ಷೆಯು ಮುಕ್ತಾಯಗೊಂಡನಂತರ, ಸೈತಾನನನ್ನೂ, ಅವನ ದೆವ್ವಗಳನ್ನೂ, ಮತ್ತು ಯಾರನ್ನು ತಪ್ಪುದಾರಿಗೆ ನಡಿಸಲು ಅವನು ಶಕ್ತನಾಗುವನೋ ಅವರನ್ನು ಸದಾಕಾಲಕ್ಕೂ ನಾಶಗೊಳಿಸಲಾಗುವದು. ಇನ್ನೊಂದು ಪಕ್ಕದಲ್ಲಿ, ಪೂರ್ಣವಾಗಿ ಪರೀಕ್ಷಿತರಾದ, ನಿಷ್ಠೆಯುಳ್ಳ ಪಾರಾದವರು ಸದಾ ನಿತ್ಯತೆಯಲ್ಲಿ ಅವರ ಪರಲೋಕದ ತಂದೆಯ ಆಶೀರ್ವಾದಗಳಲ್ಲಿ ಆನಂದಿಸಲು ಜೀವಿಸುವರು.

ಸ್ಪಷ್ಟವಾಗಿಯೇ, ದೇವರ ಮಹಿಮಾಭರಿತ ಉದ್ದೇಶಗಳನ್ನು ಪೂರೈಸುವದರಲ್ಲಿ ಯೇಸುವು ಒಂದು ಪ್ರಮುಖ ಪಾತ್ರವನ್ನು ವಹಿಸಿದ್ದಾನೆ ಮತ್ತು ಮುಂದಕ್ಕೆ ಪಾತ್ರವನ್ನು ವಹಿಸಲಿರುವನು. ದೇವರ ಮಹಾ ಸ್ವರ್ಗೀಯ ರಾಜನೋಪಾದಿ ಅವನು ಪೂರೈಸಲಿರುವ ಎಲ್ಲವುಗಳ ಫಲಿತಾಂಶವಾಗಿ ನಾವೆಲ್ಲರೂ ಎಂಥ ಒಂದು ಮಹಾ ಭವಿಷ್ಯವನ್ನು ಆನಂದಿಸಬಹುದು. ಆದರೂ, ಅವನು ಒಬ್ಬ ಮನುಷ್ಯನಾಗಿದ್ದಾಗ ಮಾಡಿದ್ದೆಲ್ಲವನ್ನೂ ನಾವು ಮರೆಯ ಸಾಧ್ಯವಿಲ್ಲ.

ಯೇಸುವು ಸ್ವ-ಇಚ್ಛೆಯಿಂದ ಭೂಮಿಗೆ ಬಂದನು ಮತ್ತು ಅವನ ತಂದೆಯ ಕುರಿತಾಗಿ ನಮಗೆ ಕಲಿಸಿದನು. ಅದಕ್ಕೂ ಹೆಚ್ಚಾಗಿ, ದೇವರ ಅಮೂಲ್ಯ ಗುಣಗಳನ್ನು ಅವನು ಉದಾಹರಿಸಿದನು. ಅವನ ಘನ ಗಂಭೀರತೆಯ ಧೈರ್ಯವನ್ನು ಮತ್ತು ಪುರುಷತ್ವವನ್ನು, ಸರಿಸಾಟಿಯಿಲ್ಲದ ಅವನ ವಿವೇಕವನ್ನು, ಒಬ್ಬ ಬೋಧಕನೋಪಾದಿ ಅವನ ಅತ್ಯುತ್ಕೃಷ್ಟ ಸಾಮರ್ಥ್ಯವನ್ನು, ಅವನ ನಿರ್ಭೀತಿಯ ನಾಯಕತ್ವವನ್ನು, ಮತ್ತು ಅವನ ಕೋಮಲವಾದ ಕನಿಕರವನ್ನು ಮತ್ತು ಸಹಾನುಭೂತಿಯನ್ನು ನಾವು ಗಮನಿಸುವಾಗ, ನಮ ಹೃದಯಗಳು ಮಿಡಿಯುತ್ತವೆ. ಯಾವುದೊಂದರ ಮೂಲಕ ಮಾತ್ರವೇ ನಾವು ಜೀವವನ್ನು ಪಡೆಯಬಹುದೋ, ಆ ವಿಮೋಚನೆಯನ್ನು ಅವನು ಒದಗಿಸಿದಾಗ, ವಿವರಿಸಲಸಾಧ್ಯವಾದ ರೀತಿಯಲ್ಲಿ ಅವನು ಬಾಧೆ ಪಟ್ಟ ವಿಧವನ್ನು ನಾವು ನೆನಪಿಗೆ ತರುವಾಗ, ಖಂಡಿತವಾಗಿಯೂ ಅವನೆಡೆಗೆ ಮೆಚ್ಚಿಕೆಯಿಂದ ನಮ್ಮ ಹೃದಯಗಳು ಕಲುಕುತ್ತವೆ!

ನಿಜವಾಗಿಯೂ, ಯೇಸುವಿನ ಜೀವನದ ಈ ಅಧ್ಯಯನದಲ್ಲಿ ನಾವು ಎಂಥಾ ಒಬ್ಬ ಮನುಷ್ಯನನ್ನು ಕಂಡಿದ್ದೇವೆ! ಅವನ ದೊಡ್ಡಸ್ತಿಕೆಯು ಸ್ಫುಟವಾಗಿ ಗೋಚರಿಸುತ್ತದೆ ಮತ್ತು ಭಾವ ಪರವಶ ಮಾಡುವಂಥದ್ದು. ರೋಮನ್‌ ದೇಶಾಧಿಪತಿಯಾದ ಪೊಂತ್ಯ ಪಿಲಾತನ ಮಾತುಗಳನ್ನು ನಾವು ಪ್ರತಿಧ್ವನಿಸುವಂತೆ ನಡಿಸಲ್ಪಡುತ್ತೇವೆ: “ಇಗೋ, ಈ ಮನುಷ್ಯನು!” ಖಂಡಿತವಾಗಿಯೂ ಹೌದು, “ಈ ಮನುಷ್ಯನು,” ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷನು!

ಅವನ ವಿಮೋಚನೆಯ ಯಜ್ಞದ ಒದಗಿಸುವಿಕೆಗಳನ್ನು ನಾವು ಸ್ವೀಕರಿಸುವದರಿಂದ, ಅದಾಮನಿಂದ ಬಾಧ್ಯತೆಯಾಗಿ ಬಂದ ಪಾಪ ಮತ್ತು ಮರಣದ ಹೊರೆಯನ್ನು ನಮ್ಮಿಂದ ತೆಗೆಯ ಸಾಧ್ಯವಿದೆ, ಮತ್ತು ಯೇಸುವು ನಮ್ಮ “ನಿತ್ಯನಾದ ತಂದೆ”ಯಾಗ ಸಾಧ್ಯವಿದೆ. ನಿತ್ಯ ಜೀವವನ್ನು ಪಡೆಯುವ ಎಲ್ಲರೂ, ದೇವರ ಜ್ಞಾನವನ್ನು ಮಾತ್ರವಲ್ಲ, ಅವನ ಮಗನಾದ ಯೇಸು ಕ್ರಿಸ್ತನ ಜ್ಞಾನವನ್ನು ಕೂಡ ತೆಗೆದು ಕೊಳ್ಳಬೇಕು. ಈ ಪುಸ್ತಕದ ನಿಮ್ಮ ವಾಚನವು ಮತ್ತು ಅಧ್ಯಯನವು ಅಂಥ ಜೀವ ನೀಡುವ ಜ್ಞಾನವನ್ನು ತೆಗೆದುಕೊಳ್ಳುವದರಲ್ಲಿ ನಿಮಗೆ ಸಹಾಯ ಮಾಡಲಿ! 1 ಯೋಹಾನ 2:17; 1:7; ಯೋಹಾನ 5:28, 29; 3:16; 17:3; 19:5; ಲೂಕ 23:43; ಆದಿಕಾಂಡ 1:28; 1 ಕೊರಿಂಥ 15:24-28; ಪ್ರಕಟನೆ 20:1-3, 6-10; 21:3, 4; ಯೆಶಾಯ 9:6.

▪ ಅರ್ಮಗೆದೋನ್‌ ಪಾರಾಗುವವರಿಗೆ ಮತ್ತು ಅವರ ಮಕ್ಕಳಿಗೆ ಯಾವ ಒಂದು ಸಂತೋಷದ ಸುಯೋಗವು ಇರುವದು?

▪ ಅರ್ಮಗೆದೋನ್‌ ಪಾರಾಗುವವರು ಮತ್ತು ಅವರ ಮಕ್ಕಳು ಕೂಡಿಸಿ ಬೇರೆ ಯಾರು ಪರದೈಸದಲ್ಲಿ ಆನಂದಿಸಲಿರುವರು ಮತ್ತು ಯಾವ ಅರ್ಥದಲ್ಲಿ ಯೇಸುವು ಅವರ ಸಂಗಡ ಇರುವನು?

▪ ಸಾವಿರ ವರ್ಷಗಳ ಅಂತ್ಯದಲ್ಲಿ ಸನ್ನಿವೇಶವು ಏನಾಗಿರುವದು, ಮತ್ತು ಆಗ ಯೇಸುವು ಏನು ಮಾಡಲಿರುವನು?

▪ ಅಧೋಲೋಕದಿಂದ ಸೈತಾನನು ಯಾಕೆ ಬಿಡುಗಡೆ ಮಾಡಲ್ಪಡುವನು ಮತ್ತು ಕ್ರಮೇಣ ಅವನಿಗೂ, ಅವನನ್ನು ಹಿಂಬಾಲಿಸುವವರಿಗೂ ಏನಾಗಲಿರುವದು?

▪ ಯೇಸುವು ಹೇಗೆ ನಮ್ಮ “ನಿತ್ಯನಾದ ತಂದೆ”ಯಾಗಸಾಧ್ಯವಿದೆ?