ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಬಲಗಡೆಯಲ್ಲಿ

ದೇವರ ಬಲಗಡೆಯಲ್ಲಿ

ಅಧ್ಯಾಯ 132

ದೇವರ ಬಲಗಡೆಯಲ್ಲಿ

ಪಂಚಾಶತ್ತಮದಲ್ಲಿ ಪವಿತ್ರಾತ್ಮದ ಸುರಿಯುವಿಕೆಯು ಯೇಸುವು ಪರಲೋಕಕ್ಕೆ ಹೋಗಿ ತಲುಪಿದ್ದಾನೆ ಎಂಬುದರ ರುಜುವಾತಾಗಿರುತ್ತದೆ. ಸ್ವಲ್ಪ ಸಮಯದ ನಂತರ ಶಿಷ್ಯನಾದ ಸೆಫ್ತನನಿಗೆ ನೀಡಿದ ದರ್ಶನವೊಂದರಲ್ಲಿ ಅವನು ಅಲ್ಲಿಗೆ ಆಗಮಿಸಿದ್ದಾನೆ ಎಂದು ರುಜುವಾಗುತ್ತದೆ. ಅವನ ನಂಬಿಗಸ್ತಿಕೆಯ ಸಾಕ್ಷಿಗಾಗಿ ಅವನನ್ನು ಕಲ್ಲೆಸೆದು ಕೊಲ್ಲುವದರ ಮೊದಲು, ಸೆಫ್ತನನು ಹೇಳುವದು: “ಅಗೋ, ಆಕಾಶವು ತೆರೆದಿರುವದನ್ನೂ ಮನುಷ್ಯ ಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವದನ್ನೂ ನೋಡುತ್ತೇನೆ.”

ದೇವರ ಬಲಗಡೆಯಲ್ಲಿರುವಾಗ, ಯೇಸುವು ಅವನ ತಂದೆಯ ಆಜ್ಞೆಗೆ ಕಾದಿರುತ್ತಾನೆ: “ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನ ಮಾಡು.” ಆದರೆ, ಅವನ ವೈರಿಗಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವ ತನಕ, ಯೇಸು ಏನು ಮಾಡಲಿದ್ದಾನೆ? ಅವನು ತನ್ನ ಅಭಿಷಿಕ್ತ ಶಿಷ್ಯರ ಮೇಲೆ ಆಳುವನು ಯಾ ಅಧಿಕಾರ ನಡಿಸುವನು, ಅವರ ಸಾರುವ ಚಟುವಟಿಕೆಯನ್ನು ಮಾರ್ಗದರ್ಶಿಸುವನು ಮತ್ತು ಪುನರುತ್ಥಾನದ ನಂತರ, ಅವನ ತಂದೆಯ ರಾಜ್ಯದಲ್ಲಿ ಅವನೊಂದಿಗೆ ಜೊತೆ ಅರಸರಾಗುವಂತೆ ಅವರನ್ನು ಸಿದ್ಧಗೊಳಿಸುವನು.

ಉದಾಹರಣೆಗೆ, ಯೇಸುವು ಇತರ ದೇಶಗಳಲ್ಲಿ ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ನುಗ್ಗುಮೊನೆಯಾಗಿ ಮುಂದರಿಸಲು ಸೌಲನನ್ನು (ಪೌಲ ಎಂಬ ರೋಮನ್‌ ಹೆಸರಿನಿಂದ ಹೆಚ್ಚು ಪರಿಚಿತನು) ಆರಿಸಿದನು. ದೇವರ ಧರ್ಮಶಾಸ್ತ್ರದಲ್ಲಿ ಸೌಲನು ಉತ್ಸುಕನಾಗಿದ್ದನು, ಆದರೂ ಯೆಹೂದ್ಯ ಧಾರ್ಮಿಕ ಮುಖಂಡರುಗಳಿಂದ ತಪ್ಪಾಗಿ ಮಾರ್ಗದರ್ಶಿಸಲ್ಪಟ್ಟಿದ್ದನು. ಅದರ ಪರಿಣಾಮವಾಗಿ, ಅವನು ಸೆಫ್ತನನ ಕೊಲೆಗೆ ಸಮ್ಮತಿಸುವವನಾದನು ಮಾತ್ರವಲ್ಲ, ಯೇಸುವಿನ ಹಿಂಬಾಲಕರೆಂದು ಹೇಳಿಕೊಳ್ಳುವ ಪುರುಷನಾಗಲಿ, ಸ್ತ್ರೀಯಾಗಲಿ, ಅವರನ್ನು ಬೇಡಿಹಾಕಿಸಿ ಯೆರೂಸಲೇಮಿಗೆ ಹಿಂದಕ್ಕೆ ತರುವಂತೆ, ಮಹಾ ಯಾಜಕನಾದ ಕಾಯಫನ ಅಧಿಕಾರಪತ್ರದೊಂದಿಗೆ ದಮಸ್ಕಕ್ಕೆ ಹೋದನು. ಆದಾಗ್ಯೂ, ಸೌಲನು ಪ್ರಯಾಣ ಮಾಡುತ್ತಿರುವಾಗ, ಫಕ್ಕನೆ ಒಂದು ಶುಭ್ರ ಬೆಳಕು ಅವನ ಸುತ್ತಲೂ ಮಿಂಚುತ್ತದೆ ಮತ್ತು ಅವನು ನೆಲಕ್ಕೆ ಬೀಳುತ್ತಾನೆ.

“ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆ ಪಡಿಸುತ್ತೀ?” ಅದೃಶ್ಯ ಉಗಮದಿಂದ ಒಂದು ವಾಣಿಯು ಕೇಳುತ್ತದೆ. “ಕರ್ತನೇ, ನೀನು ಯಾರು?” ಸೌಲನು ವಿಚಾರಿಸುತ್ತಾನೆ.

“ನೀನು ಹಿಂಸೆ ಪಡಿಸುವ ಯೇಸುವೇ ನಾನು,” ಬರುತ್ತದೆ ಪ್ರತ್ಯುತ್ತರ.

ಈ ಅದ್ಭುತಕರ ಬೆಳಕಿನಿಂದ ಕುರುಡನಾಗಿದ್ದ ಸೌಲನಿಗೆ, ದಮಸ್ಕಕ್ಕೆ ಹೋಗಲು ಮತ್ತು ಅಲ್ಲಿ ಅಪ್ಪಣೆಗಳಿಗೆ ಕಾದುನಿಲ್ಲುವಂತೆ ತಿಳಿಸಲಾಗುತ್ತದೆ. ಅನಂತರ, ಯೇಸುವು ತನ್ನ ಶಿಷ್ಯರಲ್ಲೊಬ್ಬನಾದ ಅನನೀಯನಿಗೆ ದರ್ಶನದಲ್ಲಿ ಕಾಣಿಸಿಕೊಳ್ಳುತ್ತಾನೆ. ಸೌಲನ ಕುರಿತು, ಅನನೀಯನಿಗೆ ಯೇಸುವು ಹೇಳುವದು: “ಆ ಮನುಷ್ಯನು ಅನ್ಯ ಜನರಿಗೂ, ಅರಸುಗಳಿಗೂ ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ.”

ಖಂಡಿತವಾಗಿಯೂ, ಯೇಸುವಿನ ಬೆಂಬಲದೊಂದಿಗೆ, ಸೌಲನಿಗೆ (ಈಗ ಪೌಲನೆಂದು ಪರಿಚಿತನಾಗಿದ್ದಾನೆ) ಮತ್ತು ಇತರ ಸುವಾರ್ತಿಕರಿಗೆ ಸಾರುವ ಮತ್ತು ಕಲಿಸುವ ಅವರ ಕೆಲಸದಲ್ಲಿ ಪ್ರಚಂಡವಾದ ಯಶಸ್ಸು ದೊರಕಿತು. ವಾಸ್ತವದಲ್ಲಿ, ದಮಸ್ಕದ ಮಾರ್ಗದಲ್ಲಿ ಅವನಿಗೆ ಯೇಸುವಿನ ಕಾಣಿಸಿಕೊಳ್ಳುವಿಕೆಯ ಸುಮಾರು 25 ವರ್ಷಗಳ ನಂತರ, “ಸುವಾರ್ತೆಯು” “ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೆ ಸಾರಲ್ಪಟ್ಟಿದೆ” ಎಂದು ಪೌಲನು ಬರೆಯುತ್ತಾನೆ.

ಇನ್ನೂ ಅನೇಕ ವರ್ಷಗಳು ಗತಿಸಿದ ನಂತರ, ಅವನ ಪ್ರಿಯ ಅಪೊಸ್ತಲನಾಗಿದ್ದ ಯೋಹಾನನಿಗೆ ಯೇಸುವು ದರ್ಶನಗಳ ಒಂದು ಸರಣಿಯನ್ನೇ ತೋರಿಸುತ್ತಾನೆ. ಈ ದರ್ಶನಗಳ ಮೂಲಕ, ಪ್ರಕಟನೆಯೆಂಬ ಬೈಬಲ್‌ ಪುಸ್ತಕದಲ್ಲಿ ಯೋಹಾನನು ವಿವರಿಸಿದಂತೆ, ತತ್ಪರಿಣಾಮವಾಗಿ, ರಾಜ್ಯದ ಬಲದೊಂದಿಗೆ ಯೇಸುವು ಹಿಂತೆರಳುವದನ್ನು ಕಾಣುವಂತೆ, ಅವನು ಜೀವಿಸುತ್ತಾನೆ. “ದೇವರಾತ್ಮವಶನಾಗಿ” ತಾನು ಮುಂದಕ್ಕೆ “ಕರ್ತನ ದಿನದ” ಸಮಯಗಳಿಗೆ ಒಯ್ಯಲ್ಪಟ್ಟನು ಎಂದು ಯೋಹಾನನು ಹೇಳುತ್ತಾನೆ. ಆ “ದಿನ” ಯಾವುದು?

ಕಡೇ ದಿನಗಳ ಕುರಿತಾಗಿ ಯೇಸುವಿನ ಸ್ವಂತ ಪ್ರವಾದನೆಯ ಸಹಿತ, ಬೈಬಲ್‌ ಪ್ರವಾದನೆಗಳ ಒಂದು ಜಾಗರೂಕ ಅಧ್ಯಯನವು, “ಕರ್ತನ ದಿನವು” ಇತಿಹಾಸವನ್ನುಂಟುಮಾಡಿದ 1914ನೆಯ ವರ್ಷದಲ್ಲಿ, ಹೌದು, ನಮ್ಮ ಸಂತತಿಯಲ್ಲಿಯೇ ಆರಂಭಗೊಂಡಿದೆ ಎಂದು ಪ್ರಕಟಿಸುತ್ತದೆ! ಆದ್ದರಿಂದ ಸಾರ್ವಜನಿಕ ಗೌಜು-ಗದ್ದಲವಿಲ್ಲದೇ ಮತ್ತು ಅವನ ನಂಬಿಗಸ್ತ ಸೇವಕರು ಮಾತ್ರ ಅವನ ಹಿಂತೆರಳುವಿಕೆಯನ್ನು ವಿವೇಚಿಸುವಂಥ ರೀತಿಯಲ್ಲಿ, ಯೇಸುವು 1914ರಲ್ಲಿ ಅದೃಶ್ಯನಾಗಿ ಹಿಂತೆರಳಿದ್ದಾನೆ. ಅದೇ ವರ್ಷದಲ್ಲಿ, ಅವನ ವೈರಿಗಳ ಮಧ್ಯದಲ್ಲಿ ದೊರೆತನ ಮಾಡಲು ಹೋಗುವಂತೆ ಯೇಸುವಿಗೆ ಯೆಹೋವನು ಅಪ್ಪಣೆ ಕೊಡುತ್ತಾನೆ!

ಅವನ ತಂದೆಯ ಅಪ್ಪಣೆಗೆ ವಿಧೇಯತೆಯಲ್ಲಿ, ಈ ಭೂಮಿಗೆ ಸೈತಾನನನ್ನೂ, ಅವನ ದೆವ್ವಗಳನ್ನೂ ದೊಬ್ಬಿಬಿಡುವದರ ಮೂಲಕ ಪರಲೋಕವನ್ನು ಯೇಸುವು ಶುದ್ಧಗೊಳಿಸಿದನು. ಈ ದರ್ಶನವನ್ನು ನೋಡಿದ ನಂತರ, ಪರಲೋಕದ ಒಂದು ಮಹಾಧ್ವನಿಯು ಹೀಗೆ ಹೇಳುವದನ್ನು ಯೋಹಾನನು ಕೇಳುತ್ತಾನೆ: “ಈಗ ಜಯವೂ ಶಕ್ತಿಯೂ ರಾಜ್ಯವೂ ನಮ್ಮ ದೇವರಿಗೆ ಉಂಟಾಯಿತು; ಆತನು ಅಭಿಪಷೇಕಿಸಿದವನ ಅಧಿಕಾರವು ಈಗ ಸ್ಥಾಪಿತವಾಯಿತು.” ಹೌದು, 1914ರಲ್ಲಿ ಕ್ರಿಸ್ತನು ಅರಸನಾಗಿ ಆಳಲು ಆರಂಭಿಸಿದ್ದಾನೆ!

ಪರಲೋಕದಲ್ಲಿರುವ ಯೆಹೋವನ ಆರಾಧಕರಿಗೆ ಇದು ಎಂಥಾ ಒಂದು ಶುಭ ವಾರ್ತೆಯಾಗಿರುತ್ತದೆ! ಅವರು ಪ್ರೇರಿಸುವದು: “ಪರಲೋಕವೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ!” ಆದರೆ ಭೂಮಿಯಲ್ಲಿರುವವರ ಪರಿಸ್ಥಿತಯೇನು? “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ,” ಪರಲೋಕದ ಧ್ವನಿಯು ಮುಂದುವರಿಸುವದು, “ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ.”

ಆ ಸ್ವಲ್ಪ ಸಮಯದಲ್ಲಿ ನಾವು ಈಗ ಇದ್ದೇವೆ. ದೇವರ ನೂತನ ಲೋಕದಲ್ಲಿ ಪ್ರವೇಶಿಸಲು ಯಾ ನಾಶನ ಹೊಂದಲು ಜನರು ಇಂದು ವಿಂಗಡಿಸಲ್ಪಡುತ್ತಾ ಇದ್ದಾರೆ. ಸತ್ಯವು ಏನಂದರೆ, ಕ್ರಿಸ್ತನ ಮಾರ್ಗದರ್ಶನೆಯಲ್ಲಿ ಭೂವ್ಯಾಪಕವಾಗಿ ಸಾರಲ್ಪಡುವ ದೇವರ ರಾಜ್ಯದ ಸುವಾರ್ತೆಗೆ ನೀವು ಹೇಗೆ ಪ್ರತಿವರ್ತನೆ ತೋರಿಸುತ್ತೀರಿ ಎಂಬುದರ ಮೇಲೆ ಈಗ ನಿಮ್ಮ ಸ್ವಂತ ಭವಿಷ್ಯವು ಹೊಂದಿಕೊಂಡಿದೆ.

ಜನರ ವಿಂಗಡಿಸುವಿಕೆಯು ಮುಕ್ತಾಯಗೊಂಡಾಗ, ದೇವರ ಕಾರ್ಯಭಾರಿಯೋಪಾದಿ ಯೇಸು ಕ್ರಿಸ್ತನು ಸೈತಾನನ ವಿಷಯಗಳ ಸಮಗ್ರ ವ್ಯವಸ್ಥೆಯ ಭೂಮಿಯನ್ನು ಮತ್ತು ಅದನ್ನು ಬೆಂಬಲಿಸುವವರನ್ನು ಅಳಿಸಿಬಿಡುವನು. ಬೈಬಲಿನ ಹರ್ಮ-ಗೆದೋನ್‌ ಅಥವಾ ಅರ್ಮಗೆದ್ದೋನ್‌ ಎಂದು ಕರೆಯಲ್ಪಟ್ಟಿರುವ ಯುದ್ಧದಲ್ಲಿ ಎಲ್ಲಾ ದುಷ್ಟತ್ವದ ಈ ನಿರ್ಮೂಲಮಾಡುವಿಕೆಯನ್ನು ಯೇಸುವು ಪೂರೈಸಲಿರುವನು. ಅನಂತರ, ಸ್ವತಃ ಯೆಹೋವ ದೇವರ ನಂತರ ವಿಶ್ವದಲ್ಲಿ ಅತಿ ಮಹಾ ಪುರುಷನಾದ ಯೇಸುವು, ಸೈತಾನನನ್ನೂ, ಅವನ ದೆವ್ವಗಳನ್ನೂ ಹಿಡಿದು, “ಅಧೋಲೋಕದಲ್ಲಿ” ಅಂದರೆ ಮರಣದಂಥ ಕಾರ್ಯವಿಹೀನ ಸ್ಥಿತಿಯಲ್ಲಿ ಒಂದು ಸಾವಿರ ವರ್ಷಗಳ ತನಕ, ಅವರನ್ನು ಬಂಧಿಸಿಡುವನು. ಅ.ಕೃತ್ಯಗಳು 7:55-60; 8:1-3; 9:1-19; 16:6-10; ಕೀರ್ತನೆ 110:1, 2; ಇಬ್ರಿಯ 10:12, 13; 1 ಪೇತ್ರ 3:22; ಲೂಕ 22:28-30; ಕೊಲೊಸ್ಸೆ 1:13, 23; ಪ್ರಕಟನೆ 1:1, 10; 12:7-12; 16:14-16; 20:1-3; ಮತ್ತಾಯ 24:14; 25:31-33.

▪ ಯೇಸುವು ಪರಲೋಕಕ್ಕೇರಿದ ನಂತರ, ಅವನು ಅಲ್ಲಿ ಎಲ್ಲಿರುತ್ತಾನೆ, ಮತ್ತು ಅವನು ಯಾವುದಕ್ಕಾಗಿ ಕಾದಿರುತ್ತಾನೆ?

▪ ಪರಲೋಕಕ್ಕೇರಿದ ನಂತರ ಯೇಸುವು ಯಾರ ಮೇಲೆ ಅಧಿಕಾರ ನಡಿಸುತ್ತಾನೆ, ಮತ್ತು ಅವನ ಆಳಿಕ್ವೆಯು ಹೇಗೆ ವ್ಯಕ್ತವಾಗುತ್ತದೆ?

▪ “ಕರ್ತನ ದಿನ” ಆರಂಭವಾದದ್ದು ಯಾವಾಗ, ಮತ್ತು ಅದರ ಆರಂಭದಲ್ಲಿ ಏನು ಸಂಭವಿಸುತ್ತದೆ?

▪ ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಾಧಿತವಾಗುವ ವಿಂಗಡಿಸುವ ಯಾವ ಕೆಲಸವು ಇಂದು ಜ್ಯಾರಿಯಲ್ಲಿದೆ ಮತ್ತು ಈ ವಿಂಗಡಿಸುವಿಕೆಯು ಯಾವ ಆಧಾರದ ಮೇಲೆ?

▪ ವಿಂಗಡಿಸುವಿಕೆಯ ಕೆಲಸವು ಕೊನೆಗೊಂಡಾಗ, ಯಾವ ಘಟನೆಗಳು ಹಿಂಬಾಲಿಸಲಿರುವವು?