ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವಾಲಯವನ್ನು ಪುನಃ ಸಂದರ್ಶಿಸುವದು

ದೇವಾಲಯವನ್ನು ಪುನಃ ಸಂದರ್ಶಿಸುವದು

ಅಧ್ಯಾಯ 103

ದೇವಾಲಯವನ್ನು ಪುನಃ ಸಂದರ್ಶಿಸುವದು

ಯೇಸು ಮತ್ತು ಅವನ ಶಿಷ್ಯರು ಯೆರಿಕೋವಿನಿಂದ ಬಂದಂದಿನಿಂದ ಬೇಥಾನ್ಯದಲ್ಲಿ ಅವರ ಮೂರನೆಯ ರಾತ್ರಿಯನ್ನು ಕಳೆದಿದ್ದರು. ನೈಸಾನ್‌ 10ರ ಸೋಮವಾರದ ಅತಿ ಬೆಳಿಗ್ಗೆಯೇ ಅವರು ಯೆರೂಸಲೇಮಿನ ದಾರಿಯಲ್ಲಿದ್ದರು. ಯೇಸುವು ಹಸಿದಿದ್ದನು. ಈಗ ಅವನು ಎಲೆ ಬಿಟ್ಟಿದ್ದ ಒಂದು ಅಂಜೂರದ ಮರವನ್ನು ದೂರದಲ್ಲಿ ಕಂಡು ಅದರಲ್ಲಿ ಏನಾದರೂ ಹಣ್ಣು ಸಿಕ್ಕೀತೆಂದು ಅಲ್ಲಿಗೆ ಹೋದನು.

ಅಸಾಮಾನ್ಯವಾಗಿ, ಕಾಲಕ್ಕಿಂತ ಮೊದಲು ಮರದ ಎಲೆಗಳು ಚಿಗುರಿದ್ದವು, ಯಾಕಂದರೆ ಅಂಜೂರದ ಹಣ್ಣಿನ ಕಾಲವು ಜೂನ್‌ ತಿಂಗಳಿಗಿಂತ ಮೊದಲು ಅಲ್ಲ, ಮತ್ತು ಈಗ ಅದು ಮಾರ್ಚ್‌ ತಿಂಗಳ ಅಂತ್ಯಭಾಗವಾಗಿತ್ತು. ಆದಾಗ್ಯೂ, ಎಲೆಗಳು ಮೊದಲೇ ಬಂದಿರುವದರಿಂದ, ಅಂಜೂರದ ಹಣ್ಣುಗಳು ಕೂಡ ಮೊದಲೇ ಬರಬಹುದೆಂದು ಯೇಸುವು ಭಾವಿಸಿದ್ದಿರಬೇಕು. ಆದರೆ ಅವನಿಗೆ ನಿರಾಶೆಯಾಯಿತು. ಎಲೆಗಳು ಮರಕ್ಕೆ ಒಂದು ಮೋಸಪಡಿಸುವ ಹೊರ ತೋರಿಕೆಯನ್ನು ಕೊಟ್ಟವು. ಮರವನ್ನು ಶಪಿಸುತ್ತಾ ಯೇಸುವು ಅಂದದ್ದು: “ಇನ್ನು ಮೇಲೆ ಒಬ್ಬರೂ ನಿನ್ನಲ್ಲಿ ಹಣ್ಣನ್ನು ಎಂದೆಂದಿಗೂ ತಿನ್ನದ ಹಾಗಾಗಲಿ.” ಯೇಸುವಿನ ಕೃತ್ಯದ ಪರಿಣಾಮಗಳು ಮತ್ತು ಅದರ ವೈಶಿಷ್ಟ್ಯತೆಯು ಮರುದಿನ ಬೆಳಿಗ್ಗೆ ತಿಳಿದುಬರುತ್ತದೆ.

ಮುಂದುವರಿಯುತ್ತಾ ಯೇಸುವು ಮತ್ತು ಅವನ ಶಿಷ್ಯರು ಬಲುಬೇಗನೆ ಯೆರೂಸಲೇಮನ್ನು ತಲುಪಲಿದ್ದರು. ಅವನು ಮೊದಲನೆಯ ದಿನದ ಮಧ್ಯಾಹ್ನ ಪರೀಕ್ಷಿಸಿದ್ದ ದೇವಾಲಯಕ್ಕೆ ಹೋಗುತ್ತಾನೆ. ಆದಾಗ್ಯೂ, ಇಂದು ಅವನು, ಸುಮಾರು ಮೂರು ವರ್ಷಗಳ ಹಿಂದೆ ಅವನು ಸಾ.ಶ. 30ರ ಪಸ್ಕ ಹಬ್ಬಕ್ಕೆ ಬಂದಾಗ ತೆಗೆದುಕೊಂಡ ಅದೇ ರೀತಿಯ ಕಾರ್ಯವೆಸಗುತ್ತಾನೆ. ಯೇಸುವು ಕೊಳ್ಳುವವರನ್ನೂ ಮಾರುವವರನ್ನೂ ದೇವಾಲಯದಿಂದ ಹೊರಗೆ ದಬ್ಬಿಬಿಡುತ್ತಾನೆ ಮತ್ತು ಚಿನಿವಾರರ ಮೇಜುಗಳನ್ನೂ ಪಾರಿವಾಳ ಮಾರುವವರ ಕಾಲ್ಮಣೆಗಳನ್ನೂ ಕೆಡವಿ ಹಾಕುತ್ತಾನೆ. ಒಬ್ಬನನ್ನಾದರೂ ಸಾಮಾನು ಹೊತ್ತು ಕೊಂಡು ದೇವಾಲಯದೊಳಗೆ ಹಾದುಹೋಗಲು ಅವನು ಬಿಡಲಿಲ್ಲ.

ಚಿನಿವಾರರನ್ನೂ, ದೇವಾಲಯದಲ್ಲಿ ಪ್ರಾಣಿಗಳನ್ನು ಮಾರುವವರನ್ನೂ ಖಂಡಿಸುತ್ತಾ, ಅವನು ಅಂದದ್ದು: “ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವದು ಎಂದು ಬರೆದಿದೆಯಲ್ಲಾ? ಆದರೆ ನೀವು ಅದನ್ನು ಕಳ್ಳರ ಗವಿ ಮಾಡಿದ್ದೀರಿ.” ಅವರು ಕಳ್ಳರಾಗಿದ್ದರು, ಯಾಕಂದರೆ ಯಜ್ಞಕ್ಕಾಗಿ ಆವಶ್ಯಕವಾದ ಪ್ರಾಣಿಗಳನ್ನು ಖರೀದಿಸಲು ಬೇರೆ ಯಾವ ದಾರಿಯೂ ಇಲ್ಲದ ಜನರಿಂದ ಅವರು ದುಬಾರಿಯಾದ ಬೆಲೆ ಕೇಳುತ್ತಿದ್ದರು. ಆದುದರಿಂದ ಇಂಥಾ ವ್ಯಾಪಾರದ ವ್ಯವಹಾರಗಳನ್ನು ಒಂದು ರೀತಿಯ ಸುಲುಕೊಳ್ಳುವಿಕೆ ಯಾ ಕಳ್ಳತನವೆಂದು ಯೇಸುವು ದೃಷ್ಟಿಸುತ್ತಾನೆ.

ಮಹಾ ಯಾಜಕರೂ, ಶಾಸ್ತ್ರಿಗಳೂ ಮತ್ತು ಜನರ ಮುಖ್ಯಸ್ಥರೂ ಯೇಸುವು ಮಾಡಿದ್ದನ್ನು ಕೇಳಿದಾಗ, ಅವನನ್ನು ಕೊಲ್ಲುವದು ಹೇಗೆ ಎಂಬ ಉಪಾಯವನ್ನು ಹುಡುಕಲು ಪುನೊಮ್ಮೆ ಆಲೋಚಿಸಲಾರಂಭಿಸಿದರು. ಈ ಮೂಲಕ ಅವರು ಸುಧಾರಿತವಾಗದವರು ಎಂದು ಅವರು ರುಜುಪಡಿಸಿದರು. ಆದರೂ, ಯೇಸುವನ್ನು ನಾಶಮಾಡುವದು ಹೇಗೆ ಎಂದು ಅವರಿಗೆ ತಿಳಿದಿರಲಿಲ್ಲ, ಯಾಕಂದರೆ ಅವನ ಉಪದೇಶವನ್ನು ಕೇಳಲು ಯೇಸುವಿನ ಸುತ್ತಲೂ ಜನರು ಯಾವಾಗಲೂ ಇರುತ್ತಿದ್ದರು.

ಮಾಂಸಿಕ ಯೆಹೂದ್ಯರ ಹೊರತಾಗಿ, ಅನ್ಯಜನರೂ ಪಸ್ಕ ಹಬ್ಬಕ್ಕೆ ಬರುತ್ತಿದ್ದರು. ಅವರು ಪರಿವರ್ತಿತರಾದವರು ಅಂದರೆ ಯೆಹೂದ್ಯರ ಧರ್ಮಕ್ಕೆ ಮತಾಂತರ ಹೊಂದಿದವರಾಗಿದ್ದರು. ಮತಾಂತರಿಗಳಾಗಿರ ಬಹುದಾದ ನಿರ್ದಿಷ್ಟ ಗ್ರೀಕರು, ಈಗ ಫಿಲಿಪ್ಪನ ಬಳಿಗೆ ಬಂದು, ಯೇಸುವನ್ನು ನೋಡಬೇಕೆಂದು ವಿನಂತಿಸುತ್ತಾರೆ. ಫಿಲಿಪ್ಪನು ಅಂದ್ರೆಯನ ಬಳಿಗೆ ಹೋಗಿ, ಪ್ರಾಯಶಃ ಅಂಥ ಭೇಟಿಯು ಯೋಗ್ಯವೋ ಎಂದು ಕೇಳುತ್ತಿರಬಹುದು. ಯೇಸುವು ಇನ್ನೂ ದೇವಾಲಯದಲ್ಲಿ ಇದ್ದನು. ಅಲ್ಲಿ ಗ್ರೀಕರು ಅವನನ್ನು ನೋಡಲು ಶಕ್ತರಾದರು.

ಜೀವಿತದ ಕೆಲವೇ ದಿನಗಳು ಮಾತ್ರ ತನಗೆ ಉಳಿದವೆ ಎಂದು ಯೇಸುವು ಬಲ್ಲವನಾಗಿದ್ದುದರಿಂದ ಅವನು ತನ್ನ ಸನ್ನಿವೇಶವನ್ನು ಬಹಳ ಉತ್ತಮವಾಗಿ ಉದಾಹರಿಸುತ್ತಾನೆ: “ಮನುಷ್ಯ ಕುಮಾರನು ತನ್ನ ಮಹಿಮೆಯ ಪದವಿಯನ್ನು ಹೊಂದುವ ಸಮಯ ಬಂದದೆ. ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಒಂದೇಯಾಗಿ ಉಳಿಯುವದು; ಸತ್ತರೆ ಬಹಳ ಫಲಕೊಡುವದು.”

ಒಂದು ಗೋದಿಕಾಳಿಗೆ ಇರುವ ಬೆಲೆ ಕೊಂಚವೇ. ಆದರೂ, ಅದನ್ನು ಮಣ್ಣಿನಲ್ಲಿ ಹಾಕುವದಾದರೆ ಮತ್ತು ಅದು “ಸತ್ತರೆ”, ಆ ಮೂಲಕ ಬೀಜದೋಪಾದಿ ತನ್ನ ಜೀವಿತವನ್ನು ಕೊನೆಗೊಳಿಸುವದಾದರೆ ಆಗ ಏನು? ಅದು ಆಗ ಚಿಗುರುತ್ತದೆ ಮತ್ತು ಸಮಯ ಕಳೆದಂತೆ ಅದು ದಂಟಾಗಿ ಬೆಳೆಯುತ್ತದೆ, ಅದರಲ್ಲಿ ಗೋದಿಯ ಅನೇಕಾನೇಕ ಗೊಂಚಲುಗಳಿರುತ್ತವೆ. ತದ್ರೀತಿಯಲ್ಲಿ, ಯೇಸುವು ಒಬ್ಬನೇ ಪರಿಪೂರ್ಣ ಮಾನವನಾಗಿದ್ದನು. ಆದರೆ ಅವನು ದೇವರಿಗೆ ನಂಬಿಗಸ್ತನಾಗಿ ಸಾಯುವುದಾದರೆ, ಅವನಲ್ಲಿದ್ದಂಥಾ ಸ್ವ-ತ್ಯಾಗದ ಆತ್ಮವಿರುವ ನಂಬಿಗಸ್ತರಿಗೆ ನಿತ್ಯಜೀವವನ್ನು ನೀಡುವ ಸಾಧನವಾಗುವನು. ಆದಕಾರಣ ಯೇಸುವು ಹೇಳುವದು: “ತನ್ನ ಪ್ರಾಣದ ಮೇಲೆ ಮಮತೆಯಿಡುವವನು ಅದನ್ನು ಕಳಕೊಳ್ಳುವನು, ಇಹಲೋಕದಲ್ಲಿ ತನ್ನ ಪ್ರಾಣವನ್ನು ಹಗೆಮಾಡುವವನು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವನು.”

ಯೇಸುವು ಕೇವಲ ತನ್ನ ವಿಷಯವಾಗಿ ಮಾತ್ರ ಯೋಚಿಸುತ್ತಿರಲಿಲ್ಲ, ಯಾಕಂದರೆ ಅವನು ಅನಂತರ ವಿವರಿಸುವದು: “ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನ ಹಿಂದೆ ಬರಲಿ; ಮತ್ತು ಎಲ್ಲಿ ನಾನು ಇರುತ್ತೇನೋ ಅಲ್ಲಿ ನನ್ನ ಸೇವಕನು ಸಹ ಇರುವನು. ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ತಂದೆಯು ಅವನಿಗೆ ಬಹುಮಾನ ನೀಡುವನು.” ಯೇಸುವನ್ನು ಹಿಂಬಾಲಿಸಿ, ಅವನ ಸೇವೆ ಮಾಡುವವನಾದರೆ ಅವನಿಗೆ ಎಂಥಾ ಅದ್ಭುತಕರವಾದ ಬಹುಮಾನ ಇದಾಗಿರುತ್ತದೆ! ಅದು ರಾಜ್ಯದಲ್ಲಿ ಯೇಸುವಿನೊಂದಿಗೆ ಜೊತೆಯಾಗಿ ಇರುವ ಬಹುಮಾನದಿಂದ ತಂದೆಯು ಗೌರವಿಸುವದೇ ಆಗಿದೆ.

ಅವನಿಗಾಗಿ ಕಾದಿಟ್ಟಿರುವ ಮಹಾ ಬಾಧೆ ಮತ್ತು ಸಂಕಟಮಯ ಮರಣದ ಕುರಿತು ಯೋಚಿಸುತ್ತಾ ಯೇಸುವು ಮುಂದರಿಸುವದು: “ಈಗ ನನ್ನ ಪ್ರಾಣವು ತತ್ತರಿಸುತ್ತದೆ; ಮತ್ತು ನಾನೇನು ಹೇಳಲಿ? ತಂದೆಯೇ, ಈ ಕಾಲದೊಳಗಿಂದ ನನ್ನನ್ನು ತಪ್ಪಿಸು.” ಅವನಿಗಾಗಿ ಯಾವದು ಕಾದಿಡಲ್ಪಟ್ಟಿದೆಯೋ, ಅದನ್ನು ಪಾರುಗೊಳಿಸಶಕ್ಯವಾಗಿದ್ದರೆ! ಆದರೆ, ಇಲ್ಲ, ಅವನು ಹೇಳುವದು: “ಆದರೆ ಇದಕ್ಕಾಗಿಯೇ ಈ ಕಾಲ ಸೇರಿದೆನು.” ತನ್ನ ಸ್ವಂತ ಯಜ್ಞಾರ್ಪಿತ ಮರಣದ ಸಹಿತ, ದೇವರ ಪೂರ್ಣ ಏರ್ಪಾಡಿನೊಂದಿಗೆ ಯೇಸುವು ಸಹಮತದಲ್ಲಿದ್ದನು. ಮತ್ತಾಯ 21:12, 13, 18, 19; ಮಾರ್ಕ 11:12-18; ಲೂಕ 19:45-48; ಯೋಹಾನ 12:20-27.

▪ ಹಣ್ಣಿನ ಕಾಲವದಲ್ಲದಿದ್ದರೂ, ಯೇಸುವು ಅಂಜೂರವನ್ನು ಕಾಣಲು ನಿರೀಕ್ಷಿಸಿದ್ದೇಕೆ?

▪ ದೇವಾಲಯದಲ್ಲಿ ಮಾರುವವರನ್ನು ಯೇಸುವು “ಕಳ್ಳರು” ಎಂದು ಕರೆದದ್ದು ಯಾಕೆ?

▪ ಸಾಯುವ ಒಂದು ಗೋದಿಕಾಳಿನಂತೆ ಯೇಸುವು ಇದ್ದದ್ದು ಹೇಗೆ?

▪ ಅವನಿಗಾಗಿ ಕಾದಿಡಲ್ಪಟ್ಟಿರುವ ಬಾಧೆ ಮತ್ತು ಮರಣದ ಕುರಿತು ಯೇಸುವಿನ ಭಾವನೆಯೇನಾಗಿತ್ತು?