ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಕೊದೇಮನಿಗೆ ಕಲಿಸಿದ್ದು

ನಿಕೊದೇಮನಿಗೆ ಕಲಿಸಿದ್ದು

ಅಧ್ಯಾಯ 17

ನಿಕೊದೇಮನಿಗೆ ಕಲಿಸಿದ್ದು

ಸಾ.ಶ. 30ರ ಪಸ್ಕಕ್ಕೆ ಹಾಜರಾದಾಗ, ಯೇಸು ಅನೇಕ ಗಮನಾರ್ಹವಾದ ಸೂಚಕ ಕಾರ್ಯಗಳನ್ನು ಯಾ ಅದ್ಭುತಗಳನ್ನು ನಡಿಸುತ್ತಾನೆ. ಇದರ ಫಲಿತಾಂಶವಾಗಿ ಅನೇಕ ಜನರು ಆತನಲ್ಲಿ ನಂಬಿಕೆ ಇಟ್ಟರು. ಯೆಹೂದಿ ಹಿರೀ ನ್ಯಾಯಾಲಯವಾದ ಸನ್ಹೆದ್ರಿನ್‌ನ ಒಬ್ಬ ಸದಸ್ಯನಾದ ನಿಕೊದೇಮನು ಪ್ರಭಾವಿತನಾದನು ಮತ್ತು ಹೆಚ್ಚನ್ನು ಕಲಿಯಲು ಬಯಸಿದನು. ಆದುದರಿಂದ ಅವನು ರಾತ್ರಿಯ ಸಮಯದಲ್ಲಿ ಯೇಸುವನ್ನು ಭೇಟಿಯಾಗುತ್ತಾನೆ, ಅವನನ್ನು ಇತರರು ಕಂಡರೆ ಇತರ ಯೆಹೂದಿ ಮುಖಂಡರೊಂದಿಗೆ ಅವನಿಗಿರುವ ಖ್ಯಾತಿಗೆ ಪ್ರಾಯಶಃ ಹಾನಿಯಾಗುವ ಹೆದರಿಕೆಯಿಂದಿರಲೂ ಬಹುದು.

“ಗುರುವೇ,” ಅವನನ್ನುವದು, “ನೀನು ದೇವರ ಕಡೆಯಿಂದ ಬಂದ ಬೋಧಕನೆಂದು ಬಲ್ಲೆವು; ನೀನು ಮಾಡುವಂಥ ಈ ಸೂಚಕ ಕಾರ್ಯಗಳನ್ನು ದೇವರ ಸಹಾಯವಿಲ್ಲದೆ ಮಾಡುವದು ಯಾರಿಂದಲೂ ಆಗದು.” ಅದಕ್ಕುತ್ತರವಾಗಿ, ಒಬ್ಬನು “ಹೊಸದಾಗಿ ಹುಟ್ಟದಿದ್ದರೆ” ದೇವರ ರಾಜ್ಯವನ್ನು ಪ್ರವೇಶಿಸಲಾರನು ಎಂದು ಯೇಸು ಅನ್ನುತ್ತಾನೆ.

ಆದರೂ, ಒಬ್ಬನು ಹೊಸದಾಗಿ ಹುಟ್ಟುವದು ಹೇಗೆ? “ಅವನು ತನ್ನ ತಾಯಿಯ ಗರ್ಭದಲ್ಲಿ ತಿರುಗಿ ಸೇರಿ ಹುಟ್ಟುವದಾದೀತೇ?” ಎಂದು ನಿಕೊದೇಮನು ವಿಚಾರಿಸುತ್ತಾನೆ.

ಇಲ್ಲ, ಹೊಸದಾಗಿ ಹುಟ್ಟುವದೆಂದರೆ ಆ ಅರ್ಥದಲ್ಲಿ ಅಲ್ಲ. “ಒಬ್ಬನು ನೀರಿನಿಂದಲೂ ಆತ್ಮದಿಂದಲೂ ಹುಟ್ಟದಿದ್ದರೆ ದೇವರ ರಾಜ್ಯಕ್ಕೆ ಸೇರಲಾರನು,” ಎಂದು ಯೇಸುವು ವಿವರಿಸುತ್ತಾನೆ. ಯೇಸುವು ದೀಕ್ಷಾಸ್ನಾನ ಪಡೆದಾಗ ಮತ್ತು ಪವಿತ್ರಾತ್ಮವು ಅವನ ಮೇಲೆ ಇಳಿದಾಗ, ಅವನು “ನೀರಿನಿಂದಲೂ ಆತ್ಮದಿಂದಲೂ” ಈ ರೀತಿಯಲ್ಲಿ ಪುನಃ ಹುಟ್ಟಿದವನಾದನು. ಅದರೊಂದಿಗೆ ‘ಈತನು ನನ್ನ ಮಗನು, ಇವನನ್ನು ನಾನು ಮೆಚ್ಚಿದ್ದೇನೆ’ ಎಂದು ಪರಲೋಕ ವಾಣಿಯ ಮೂಲಕ, ಪರಲೋಕ ರಾಜ್ಯದೊಳಗೆ ಪ್ರವೇಶಿಸುವ ಪ್ರತೀಕ್ಷೆಯುಳ್ಳ ಒಬ್ಬ ಆತ್ಮೀಯ ಮಗನನ್ನು ತಾನು ಹುಟ್ಟಿಸಿದ್ದೇನೆ ಎಂದು ಪ್ರಕಟಿಸಿದನು. ತದನಂತರ ಸಾ.ಶ. 33ರ ಪಂಚಾಶತ್ತಮದಲ್ಲಿ, ದೀಕ್ಷಾಸ್ನಾನಗೊಂಡ ಇತರರು ಪವಿತ್ರಾತ್ಮವನ್ನು ಪಡೆಯುವರು ಮತ್ತು ಈ ರೀತಿಯಲ್ಲಿ ದೇವರ ಆತ್ಮೀಯ ಪುತ್ರರಾಗಿ ಅವರೂ ಹೊಸದಾಗಿ ಹುಟ್ಟಲಿರುವರು.

ಆದರೆ ದೇವರ ವಿಶೇಷ ಮಾನವ ಪುತ್ರನ ಪಾತ್ರವಾದರೋ ಪ್ರಾಮುಖ್ಯವಾದದ್ದು: “ಮೋಶೆಯು ಅಡವಿಯಲ್ಲಿ ಆ ಸರ್ಪವನ್ನು ಎತ್ತರದಲ್ಲಿಟ್ಟ ಹಾಗೆಯೇ ಮನುಷ್ಯ ಕುಮಾರನು ತನ್ನನ್ನು ನಂಬುವವರೆಲ್ಲರು ನಿತ್ಯಜೀವವನ್ನು ಪಡೆಯಬೇಕೆಂದು ಎತ್ತರದಲ್ಲಿಡಬೇಕು” ಎಂದು ಯೇಸುವು ನಿಕೊದೇಮನಿಗೆ ಹೇಳುತ್ತಾನೆ. ಹೌದು, ವಿಷ ಸರ್ಪಗಳಿಂದ ಕಚ್ಚಲ್ಪಟ್ಟ ಆ ಇಸ್ರಾಯೇಲ್ಯರು ರಕ್ಷಣೆಗಾಗಿ ತಾಮ್ರದ ಸರ್ಪದ ಕಡೆಗೆ ಹೇಗೆ ನೋಡಬೇಕಿತ್ತೋ ಹಾಗೆಯೇ ಅವರ ಮರಣ ದಶೆಯಿಂದ ರಕ್ಷಿಸಲ್ಪಡಬೇಕಾದರೆ ಮಾನವರೆಲ್ಲರೂ ದೇವ ಕುಮಾರನಲ್ಲಿ ನಂಬಿಕೆಯನ್ನಿಡಬೇಕಾದ ಅಗತ್ಯವಿತ್ತು.

ಇದರಲ್ಲಿ ಯೆಹೋವನ ಪ್ರೀತಿಯ ಪಾತ್ರವನ್ನು ಒತ್ತಿ ಹೇಳುತ್ತಾ ಯೇಸು ಅನಂತರ ನಿಕೊದೇಮನಿಗೆ ಹೇಳಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” ಹೀಗೆ, ತನ್ನ ಶುಶ್ರೂಪಷೆಯನ್ನು ಆರಂಭಿಸಿ ಕೇವಲ ಆರು ತಿಂಗಳ ನಂತರ, ಮಾನವ ಕುಲದ ರಕ್ಷಣೆಗಾಗಿ ತಾನು ಯೆಹೋವ ದೇವರ ಸಾಧನವಾಗಿದ್ದೇನೆಂದು ಇಲ್ಲಿ ಯೆರೂಸಲೇಮಿನಲ್ಲಿ ಯೇಸುವು ಸ್ಪಷ್ಟಪಡಿಸುತ್ತಾನೆ.

ಯೇಸುವು ನಿಕೊದೇಮನಿಗೆ ಇನ್ನಷ್ಟು ಸಂಗತಿಗಳನ್ನು ವಿವರಿಸುತ್ತಾನೆ: “ದೇವರು ಲೋಕಕ್ಕೆ ತನ್ನ ಮಗನನ್ನು ಕಳುಹಿಸಿಕೊಟ್ಟದ್ದು ತೀರ್ಪು ಮಾಡಲಿಕ್ಕಾಗಿ ಅಲ್ಲ,” ಅಂದರೆ ಅದಕ್ಕೆ ಪ್ರತಿಕೂಲ ತೀರ್ಪು ಮಾಡಿ ಅಥವಾ ಖಂಡಿಸಿ, ಮಾನವ ಕುಲಕ್ಕೆ ನಾಶನದ ಶಿಕ್ಷೆಯನ್ನು ವಿಧಿಸಲಿಕ್ಕಾಗಿ ಅಲ್ಲ. ಬದಲಾಗಿ, ಯೇಸುವು ಹೇಳುವಂತೆ “ಆತನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು” ಅವನನ್ನು ಕಳುಹಿಸಿ ಕೊಟ್ಟನು.

ನಿಕೊದೇಮನು ಹೆದರಿಕೆಯಿಂದ ಯೇಸುವಿನ ಬಳಿಗೆ ಕತ್ತಲೆಯ ಮರೆಯಲ್ಲಿ ಬಂದಿದ್ದನು. ಆದುದರಿಂದ ಅವನೊಂದಿಗಿನ ತನ್ನ ಸಂಭಾಷಣೆಯನ್ನು ಯೇಸುವು ಹೀಗೆ ಹೇಳಿ ಮುಕ್ತಾಯಗೊಳಿಸಿದ್ದು ಬಹಳ ರಸಕರ: “ಆ ತೀರ್ಪು ಏನಂದರೆ—ಆ ಬೆಳಕು [ತನ್ನ ಜೀವಿತದ ಮತ್ತು ಬೋಧನೆಗಳ ಮೂಲಕ ಯೇಸುವು ಅದನ್ನು ವ್ಯಕ್ತೀಕರಣಗೊಳಿಸಿದನು] ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಹೆಚ್ಚು ಪ್ರೀತಿಸಿದರು. ಕೆಟ್ಟದ್ದನ್ನು ಮಾಡುವವರು ಬೆಳಕನ್ನು ಸಹಿಸುವದಿಲ್ಲ, ತಮ್ಮ ಕೃತ್ಯಗಳು ದುಷ್ಕ್ರತ್ಯಗಳಾಗಿ ತೋರಿಬಂದಾವೆಂದು ಬೆಳಕಿಗೆ ಬರುವದಿಲ್ಲ; ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ತಾನು ದೇವರಿಂದ ನಡಿಸಿಕೊಂಡು ತನ್ನ ಕೃತ್ಯಗಳನ್ನು ಮಾಡಿದ್ದೇನೆಂದು ತೋರಿ ಬರುವಂತೆ ಬೆಳಕಿಗೆ ಬರುತ್ತಾನೆ.” ಯೋಹಾನ 2:23—3:21; ಮತ್ತಾಯ 3:16, 17; ಅ.ಕೃತ್ಯಗಳು 2:1-4; ಅರಣ್ಯಕಾಂಡ 21:9.

▪ ನಿಕೊದೇಮನ ಸಂದರ್ಶನವನ್ನು ಪ್ರೇರೇಪಿಸಿದ್ದು ಯಾವುದು, ಮತ್ತು ಅವನು ರಾತ್ರಿಯಲ್ಲಿ ಯಾಕೆ ಬರುತ್ತಾನೆ?

▪ “ಹೊಸದಾಗಿ ಹುಟ್ಟುವದು” ಅಂದರೆ ಏನು?

▪ ನಮ್ಮ ರಕ್ಷಣೆಯಲ್ಲಿ ತನ್ನ ಪಾತ್ರವೇನು ಎಂದು ಯೇಸುವು ಹೇಗೆ ನಿರೂಪಿಸುತ್ತಾನೆ?

▪ ಲೋಕಕ್ಕೆ ತೀರ್ಪು ಮಾಡಲು ಯೇಸುವು ಬರಲಿಲ್ಲ ಎನ್ನುವದರ ಅರ್ಥವೇನು?