ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿಜವಾಗಿ ಈತನು ದೇವಕುಮಾರನಾಗಿದ್ದನು”

“ನಿಜವಾಗಿ ಈತನು ದೇವಕುಮಾರನಾಗಿದ್ದನು”

ಅಧ್ಯಾಯ 126

“ನಿಜವಾಗಿ ಈತನು ದೇವಕುಮಾರನಾಗಿದ್ದನು”

ಯೇಸುವು ಕಂಭದ ಮೇಲೆ ಇದ್ದು ತುಂಬಾ ಸಮಯವಾಗಿರಲಿಲ್ಲ, ಆಗ ಮಧ್ಯಾಹ್ನದ ಹೊತ್ತಿಗೆ ಒಂದು ರಹಸ್ಯಕರವಾದ ಮೂರು ತಾಸುಗಳ ತನಕ ಕತ್ತಲೆಗವಿಯುತ್ತದೆ. ಒಂದು ಸೂರ್ಯಗ್ರಹಣವು ಇದಕ್ಕೆ ಕಾರಣವಾಗಿರಲಿಕ್ಕಿಲ್ಲ, ಯಾಕಂದರೆ ಅದು ಅಮಾವಾಸ್ಯೆಯ ಸಮಯದಲ್ಲಿ ಮಾತ್ರ ಆಗುತ್ತದೆ, ಆದರೆ ಪಸ್ಕ ಹಬ್ಬದ ಸಮಯದಲ್ಲಿ ಪೂರ್ಣ ಹುಣ್ಣಿಮೆ ಇದೆ. ಅಲ್ಲದೆ, ಸೂರ್ಯಗ್ರಹಣವು ಕೇವಲ ಕೆಲವು ನಿಮಿಷಗಳ ತನಕ ಇರುತ್ತದೆ. ಆದುದರಿಂದ ಆ ಕತ್ತಲೆಯು ದೈವಿಕ ಮೂಲದಿಂದ ಆಗಿರಬೇಕು! ಯೇಸುವನ್ನು ಅಪಹಾಸ್ಯಮಾಡುವವರಿಗೆ ಅದನ್ನು ಕೆಲವು ಸಮಯ ತಡೆಯುವಂತೆ, ಇಲ್ಲವೇ ಅವರ ಹಂಗಿಸುವಿಕೆಯನ್ನು ನಿಲ್ಲಿಸುವಂತೆ ಅದು ಬಹುಶಃ ಕಾರಣಮಾಡಿರಬಹುದು.

ಒಬ್ಬ ದುಷ್ಕರ್ಮಿಯು ಅವನ ಸಂಗಾತಿಯನ್ನು ಗದರಿಸುವ ಮತ್ತು ಅವನ ನೆನಪನ್ನು ಮಾಡುವಂತೆ ಯೇಸುವನ್ನು ಕೇಳುವದರ ಮೊದಲು ಈ ಭಯ ಹುಟ್ಟಿಸುವ ಈ ಅದ್ಭುತವು ನಡೆದಿದ್ದರೆ, ಅವನ ಪಶ್ಚಾತ್ತಾಪಕ್ಕೆ ಅದೊಂದು ಕಾರಣವಾಗಿದ್ದಿರಬಹುದು. ಪ್ರಾಯಶಃ ಈ ಕತ್ತಲಿನ ಸಮಯದಲ್ಲಿ ನಾಲ್ವರು ಸ್ತ್ರೀಯರು, ವಿಶೇಷವಾಗಿ, ಯೇಸುವಿನ ತಾಯಿ, ಅವಳ ತಂಗಿ ಸಲೋಮೆ, ಮಗಲ್ದದ ಮರಿಯ ಮತ್ತು ಅಪೊಸ್ತಲನಾದ ಚಿಕ್ಕ ಯಾಕೋಬನ ತಾಯಿ, ಯಾತನೆಯ ಕಂಭದ ಬಳಿಗೆ ಬಂದಿರಬೇಕು. ಯೇಸುವಿನ ಪ್ರೀತಿಯ ಅಪೊಸ್ತಲನಾಗಿದ್ದ ಯೋಹಾನನೂ ಅವರೊಂದಿಗೆ ಇದ್ದನು.

ತಾನು ಮೊಲೆಯುಣಿಸಿ, ಬೆಳಸಿದ ತನ್ನ ಮಗನು ಅಲ್ಲಿ ಯಾತನೆಯಿಂದ ತೂಗಾಡುವದನ್ನು ಅವಳು ನೋಡುತ್ತಿರುವಾಗ, ಯೇಸುವಿನ ತಾಯಿಯ ಹೃದಯವು ಎಷ್ಟೊಂದು ‘ಇರಿದಂತೆ’ ಆಗಿರಬೇಕು! ಆದರೂ, ಯೇಸುವು ಅವನ ಸ್ವಂತ ನೋವನ್ನು ಯೋಚಿಸುವದಿಲ್ಲ, ಬದಲಿಗೆ ಅವಳ ಒಳಿತನ್ನು ಯೋಚಿಸುತ್ತಾನೆ. ಬಹಳಷ್ಟು ಕಷ್ಟದಿಂದ ಅವನು ಯೋಹಾನನ ಕಡೆಗೆ ತಲೆ ಅಲುಗಿಸುತ್ತಾ, ಅವನ ತಾಯಿಗೆ ಹೇಳುತ್ತಾನೆ: “ಅಮ್ಮಾ, ಇಗೋ, ನಿನ್ನ ಮಗನು!” ಅನಂತರ ಮರಿಯಳ ಕಡೆಗೆ ತಲೆ ಅಲ್ಲಾಡಿಸುತ್ತಾ, ಅವನು ಯೋಹಾನನಿಗೆ ಹೇಳುವದು: “ಇಗೋ, ನಿನ್ನ ತಾಯಿ!”

ಈಗ ವಿಧವೆಯಾಗಿರಬಹುದೆಂದು ತೋರುವ ಅವನ ತಾಯಿಯ ಜಾಗ್ರತೆಯನ್ನು ಆ ಮೂಲಕ ಯೇಸು ತನ್ನ ವಿಶೇಷ ಪ್ರೀತಿಯ ಅಪೊಸ್ತಲನಿಗೆ ಒಪ್ಪಿಸುತ್ತಾನೆ. ಮರಿಯಳ ಇತರ ಪುತ್ರರು ಅವನ ಮೇಲೆ ಇನ್ನೂ ನಂಬಿಕೆಯನ್ನು ತೋರಿಸಿರಲಿಲ್ಲವಾದ್ದರಿಂದ ಅವನದನ್ನು ಮಾಡುತ್ತಾನೆ. ಈ ಮೂಲಕ ಅವನ ತಾಯಿಯ ಶಾರೀರಿಕ ಆವಶ್ಯಕತೆಗಳಿಗೆ ಮಾತ್ರವಲ್ಲ, ಅವಳ ಆತ್ಮಿಕ ಆವಶ್ಯಕತೆಗಳಿಗೂ ಬೇಕಾದ ಒದಗಿಸುವಿಕೆಗಳನ್ನು ಮಾಡುವದರಲ್ಲಿ ಒಂದು ಉತ್ತಮ ಮಾದರಿಯನ್ನು ಇಡುತ್ತಾನೆ.

ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ, ಯೇಸುವು ಹೇಳುವದು: “ನನಗೆ ನೀರಡಿಕೆ ಆಗಿದೆ.” ಕಡೆಯ ಹಂತದ ತನಕ ಅವನ ಯಥಾರ್ಥತೆಯನ್ನು ಪರೀಕ್ಷಿಸಲು ಅವನ ತಂದೆಯು ಅವನಿಂದ ಸುರಕ್ಷತೆಯನ್ನು ತೆಗೆದಿದ್ದಾನೋ ಎಂಬಂತೆ ಯೇಸುವು ಭಾವಿಸುತ್ತಾನೆ. ಆದುದರಿಂದ ಅವನು ಮಹಾಧ್ವನಿಯಿಂದ ಕೂಗಿ ಕರೆಯುತ್ತಾನೆ: “ನನ್ನ ತಂದೆಯೇ, ನನ್ನ ತಂದೆಯೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ?” ಇದನ್ನು ಕೇಳಿ, ಹತ್ತಿರದಲ್ಲಿ ನಿಂತಿದ್ದವರಲ್ಲಿ ಕೆಲವರು, ಹೇಳುವದು: “ಇವನು ಎಲೀಯನನ್ನು ಕರೆಯುತ್ತಾನೆ.” ಆಗ ಒಬ್ಬನು ಓಡಿಹೋಗಿ ಸ್ಪಂಜನ್ನು ಹುಳಿರಸದಿಂದ ತುಂಬಿಸಿ ಕೋಲಿಗೆ ಸಿಕ್ಕಿಸಿ ಆತನಿಗೆ ಕುಡಿಯುವದಕ್ಕೆ ಕೊಡುತ್ತಾನೆ. ಆದರೆ ಇತರರು ಹೇಳಿದ್ದು: “ಬಿಡಿರಿ, ಎಲೀಯನು ಇವನನ್ನು ಇಳಿಸುವದಕ್ಕೆ ಬರುವನೇನೋ ನೋಡೋಣ.”

ಹುಳಿರಸವನ್ನು ಯೇಸುವು ತಕ್ಕೊಂಡ ಮೇಲೆ, ಅವನು ಮಹಾಧ್ವನಿಯಿಂದ ಕೂಗಿದ್ದು: “ಈಗ ತೀರಿತು! [ಪೂರೈಸಲ್ಪಟ್ಟಿತು! NW]” ಹೌದು, ಭೂಮಿಯ ಮೇಲೆ ಮಾಡಲು ಅವನ ತಂದೆಯು ಕಳುಹಿಸಿಕೊಟ್ಟ ಎಲ್ಲವನ್ನೂ ಅವನು ಮುಗಿಸಿದನು. ಕೊನೆಯಲ್ಲಿ, ಅವನು ಅಂದದ್ದು: “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ.” ಈ ಮೂಲಕ, ದೇವರು ಅವನಿಗೆ ಪುನಃ ಜೀವ-ಶಕ್ತಿಯನ್ನು ಕೊಡುವನು ಎಂಬ ಭರವಸೆಯಲ್ಲಿ ದೇವರ ವಶದಲ್ಲಿ ತನ್ನ ಜೀವ-ಶಕ್ತಿಯನ್ನು ಕೊಡುತ್ತಾನೆ. ತದನಂತರ ಅವನು ತಲೇ ಬಾಗಿಸಿ, ಸಾಯುತ್ತಾನೆ.

ಯೇಸುವು ತನ್ನ ಕೊನೆಯ ಉಸಿರನ್ನು ಬಿಟ್ಟಾಗ, ಒಂದು ಭಯಂಕರ ಭೂಕಂಪವು ಸಂಭವಿಸುತ್ತದೆ, ಬಂಡೆಗಳು ಸೀಳಿಹೋಗುತ್ತವೆ. ಭೂಕಂಪವು ಎಷ್ಟೊಂದು ಬಲವತ್ತಾಗಿತ್ತೆಂದರೆ ಯೆರೂಸಲೇಮಿನ ಹೊರಗಿದ್ದ ಸಮಾಧಿಗಳು ಒಡೆಯಲ್ಪಟ್ಟು, ಅದರೊಳಗಿಂದ ಹೆಣಗಳು ಹೊರಗೆ ಎಸೆಯಲ್ಪಟ್ಟವು. ಹೊರಗೆ ಎಸೆಯಲ್ಪಟ್ಟ ಮೃತ ದೇಹಗಳನ್ನು ಹಾದುಹೋಗುವವರು ಕಂಡುಕೊಂಡು, ಪಟ್ಟಣದೊಳಕ್ಕೆ ಪ್ರವೇಶಿಸಿ, ವರದಿ ಮಾಡಿದರು.

ಅಷ್ಟಲ್ಲದೆ, ಯೇಸುವು ಸತ್ತ ಕ್ಷಣದಲ್ಲಿ, ದೇವರ ಆಲಯದಲ್ಲಿ, ಪವಿತ್ರ ಸ್ಥಾನದಿಂದ ಮಹಾ ಪವಿತ್ರ ಸ್ಥಾನವನ್ನು ಪ್ರತ್ಯೇಕಿಸುವ ಮಹಾ ತೆರೆಯು ಮೇಲಿಂದ ಕೆಳಗಿನ ವರೆಗೂ ಹರಿದು ಎರಡು ಭಾಗವಾಯಿತು. ಈ ಸುಂದರವಾಗಿರುವ ಅಲಂಕೃತ ತೆರೆಯು ಸುಮಾರು 18 ಮೀಟರ್‌ ಉದ್ದವಿದ್ದು, ಬಹಳ ಭಾರವಾಗಿತ್ತೆಂದು ತೋರುತ್ತದೆ! ತನ್ನ ಮಗನ ಕೊಲೆಗಾರರ ವಿರುದ್ಧ ದೇವರ ಕೋಪವನ್ನು ಈ ಆಶ್ಚರ್ಯಗೊಳಿಸುವ ಅದ್ಭುತವು ವ್ಯಕ್ತಪಡಿಸಿದ್ದು ಮಾತ್ರವಲ್ಲ, ಮಹಾ ಪವಿತ್ರ ಸ್ಥಾನವಾಗಿರುವ ಪರಲೋಕಕ್ಕೆ ಸ್ವತಃ ಹೋಗಲು ದಾರಿಯು ಯೇಸುವಿನ ಮರಣದಿಂದ ಈಗ ಸಾಧ್ಯವಾಯಿತು ಎಂಬುದನ್ನು ಸೂಚಿಸಿತು.

ಒಳ್ಳೇದು, ಭೂಕಂಪದ ಅನುಭವ ಮತ್ತು ನಡೆದ ಸಂಗತಿಗಳನ್ನು ನೋಡಿದ ಜನರು ಬಹಳ ಹೆದರಿದರು. ಈ ಹತ್ಯೆಯನ್ನು ನಿರ್ವಹಿಸುತ್ತಿದ್ದ ಶತಾಧಿಪತಿಯು ದೇವರಿಗೆ ಮಹಿಮೆಯನ್ನು ಕೊಡುತ್ತಾನೆ. “ನಿಜವಾಗಿ ಈತನು ದೇವಕುಮಾರನಾಗಿದ್ದನು,” ಎಂದು ಹೇಳುತ್ತಾನೆ. ಪಿಲಾತನ ಮುಂದೆ ಯೇಸುವಿನ ವಿಚಾರಣೆಯಲ್ಲಿ ದೈವಿಕ ಪುತ್ರತ್ವದ ವಾದವನ್ನು ಚರ್ಚಿಸುತ್ತಿರುವಾಗ ಇವನು ಹಾಜರಿದ್ದಿರಬೇಕು. ಮತ್ತು ಈಗ ಯೇಸುವು ದೇವರ ಕುಮಾರನೆಂದೂ, ಹೌದು, ಅವನು ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ವ್ಯಕ್ತಿಯೆಂದೂ ಅವನಿಗೆ ಮನವರಿಕೆಯಾಯಿತು.

ಈ ಅದ್ಭುತಕರ ಘಟನೆಗಳಿಂದ ಇತರರೂ ಪ್ರಭಾವಿತರಾದರು ಮತ್ತು ಅವರ ಆಳವಾದ ದುಃಖವನ್ನೂ, ಲಜ್ಜೆಯನ್ನೂ ತೋರಿಸುವ ಒಂದು ಕೃತ್ಯವಾಗಿ, ಅವರು ಎದೆಬಡುಕೊಳ್ಳುತ್ತಾ ತಮ್ಮ ಮನೆಗಳಿಗೆ ಹಿಂತಿರುಗಿ ಹೋಗಲು ಆರಂಭಿಸಿದರು. ದೂರದಿಂದ ಈ ನೋಟವನ್ನು ನೋಡುತ್ತಿದ್ದ ಯೇಸುವಿನ ಶಿಪಷ್ಯೆಯರಾಗಿದ್ದ ಅನೇಕ ಸ್ತ್ರೀಯರು, ಈ ಬಹು ಪರಿಣಾಮಕಾರಿಯಾದ ಘಟನೆಗಳಿಂದ ಗಾಢವಾಗಿ ಪ್ರಭಾವಿತರಾದರು. ಅಪೊಸ್ತಲ ಯೋಹಾನನು ಸಹಾ ಅಲ್ಲಿದ್ದನು. ಮತ್ತಾಯ 27:45-56; ಮಾರ್ಕ 15:33-41; ಲೂಕ 23:44-49; 2:34, 35; ಯೋಹಾನ 19:25-30.

▪ ಮೂರು ತಾಸುಗಳ ಕತ್ತಲೆಗೆ ಸೂರ್ಯಗ್ರಹಣ ಕಾರಣವಲ್ಲ ಯಾಕೆ?

▪ ಅವನ ಮರಣದ ಕೊಂಚ ಮೊದಲು, ವಯಸ್ಸಾದ ಹೆತ್ತವರಿರುವವರಿಗೆ ಯೇಸುವು ಯಾವ ಉತ್ತಮ ಮಾದರಿಯನ್ನು ಒದಗಿಸಿದನು?

▪ ಅವನು ಸಾಯುವ ಮೊದಲು ಯೇಸುವು ಮಾಡಿದ ಕೊನೆಯ ನಾಲ್ಕು ಹೇಳಿಕೆಗಳು ಯಾವವು?

▪ ಭೂಕಂಪವು ಏನನ್ನು ಪೂರೈಸಿತು, ಮತ್ತು ದೇವಾಲಯ ತೆರೆಗಳು ಇಬ್ಭಾಗವಾಗಿ ಹರಿದದರ್ದ ವೈಶಿಷ್ಟ್ಯತೆಯೇನು?

▪ ಹತ್ಯೆಯ ನಿರ್ವಹಣೆ ಮಾಡುತ್ತಿದ್ದ ಶತಾಧಿಪತಿಯು ಈ ಅದ್ಭುತಗಳಿಂದ ಹೇಗೆ ಪ್ರಭಾವಿತನಾದನು?