ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಲೋಕದಿಂದ ಸಂದೇಶಗಳು

ಪರಲೋಕದಿಂದ ಸಂದೇಶಗಳು

ಅಧ್ಯಾಯ 1

ಪರಲೋಕದಿಂದ ಸಂದೇಶಗಳು

ಸಂಪೂರ್ಣ ಬೈಬಲು, ವಾಸ್ತವದಲ್ಲಿ, ಪರಲೋಕದಿಂದ ಬಂದ ಒಂದು ಸಂದೇಶ, ನಮ್ಮ ಉಪದೇಶಕ್ಕಾಗಿ ನಮ್ಮ ಸ್ವರ್ಗೀಯ ತಂದೆಯಿಂದ ಒದಗಿಸಲ್ಪಟ್ಟಿದೆ. ಆದಾಗ್ಯೂ, ಸುಮಾರು 2,000 ವರ್ಷಗಳ ಹಿಂದೆ ಎರಡು ವಿಶೇಷ ಸಂದೇಶಗಳು “ದೇವರ ಸನ್ನಿಧಿಯಲ್ಲಿ ನಿಲ್ಲುವ” ಒಬ್ಬ ದೇವದೂತನಿಂದ ತಿಳಿಸಲ್ಪಟ್ಟವು. ಅವನ ಹೆಸರು ಗಬ್ರಿಯೇಲ್‌. ಭೂಮಿಯ ಈ ಎರಡು ಪ್ರಾಮುಖ್ಯ ಸಂದರ್ಶನಗಳ ಸನ್ನಿವೇಶಗಳನ್ನು ನಾವೀಗ ಪರೀಕ್ಷಿಸೋಣ.

ಸಾ.ಶ.ಪೂ. 3 ನೆಯ ವರ್ಷವದಾಗಿತ್ತು. ಪ್ರಾಯಶಃ ಯೆರೂಸಲೇಮಿನಿಂದ ಬಹಳದೂರವಲ್ಲದ ಯೂದಾಯ ಬೆಟ್ಟಗಳಲ್ಲಿ ಜಕರೀಯನೆಂಬ ಹೆಸರಿನ ಯೆಹೋವನ ಯಾಜಕನೊಬ್ಬನು ಜೀವಿಸುತ್ತಿದ್ದನು. ಅವನು ಮತ್ತು ಅವನ ಹೆಂಡತಿ ಎಲಿಸ್‌ಬೇತ್‌ ವಯಸ್ಸಾದವರಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಯೆರೂಸಲೇಮಿನಲ್ಲಿ ದೇವರ ದೇವಾಲಯದಲ್ಲಿ ತನ್ನ ವರ್ಗದ ಸರತಿಯ ಪ್ರಕಾರ, ಜಕರೀಯನು ಯಾಜಕ ಸೇವೆಯನ್ನು ನಡಿಸುತ್ತಾ ಇದ್ದನು. ಪಕ್ಕನೇ ಗಬ್ರಿಯೇಲನು ಧೂಪಪೀಠದ ಬಲಗಡೆಯಲ್ಲಿ ಕಾಣಿಸಿಕೊಂಡನು.

ಜಕರೀಯನು ಬಹಳ ಭಯಗ್ರಸ್ತನಾದನು. ಆದರೆ ಗಬ್ರಿಯೇಲನು ಅವನನ್ನು ಶಾಂತಗೊಳಿಸುತ್ತಾ ಅಂದದ್ದು: “ಜಕರೀಯಾ, ಭಯಪಡಬೇಡ, ನಿನ್ನ ವಿಜ್ಞಾಪನೆ ದೇವರಿಗೆ ಮುಟ್ಟಿತು. ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನಿಗೆ ಯೋಹಾನನೆಂದು ಹೆಸರಿಡಬೇಕು.” ಯೋಹಾನನು “ಯೆಹೋವನ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು,” ಮತ್ತು ಅವನು ಸಿದ್ಧವಾದ ಜನವನ್ನು ಯೆಹೋವನಿಗೆ ಒದಗಿಸುವನು” ಎಂದು ಗಬ್ರಿಯೇಲನು ಹೇಳುತ್ತಾ ಹೋದನು.

ಆದಾಗ್ಯೂ ಜಕರೀಯನಿಗೆ ಅದನ್ನು ನಂಬಲಿಕ್ಕೆ ಸಾಧ್ಯವಾಗಲಿಲ್ಲ. ಅವರ ಈ ವಯಸ್ಸಿನಲ್ಲಿ, ಅವನು ಮತ್ತು ಎಲಿಸಬೇತ್‌ ಮಗುವೊಂದನ್ನು ಪಡೆಯುವುದು ಅಸಾಧ್ಯವಾದದ್ದು ಎಂದು ತೋರಿತು. ಆದುದರಿಂದ ಗಬ್ರಿಯೇಲನು ಅವನಿಗೆ ಅಂದದ್ದು: “ನೀನು ಅದನ್ನು ನಂಬದೆ ಹೋದದ್ದರಿಂದ ಅದೆಲ್ಲಾ ಸಂಭವಿಸುವ ದಿನದ ವರೆಗೂ ಮಾತನಾಡಲಾರದ ಮೂಕನಾಗಿರುವಿ.”

ಇಷ್ಟರೊಳಗೆ ಜನರು ಜಕರೀಯನನ್ನು ಕಾದುಕೊಂಡಿದ್ದು, ಅವನು ದೇವಾಲಯದೊಳಗೆ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು. ಅವನು ಕೊನೆಗೂ ಹೊರಗೆ ಬಂದಾಗ, ಏನೂ ಮಾತಾಡಲಾರದೆ, ಕೈಸನ್ನೆ ಮಾಡಲು ಮಾತ್ರ ಸಾಧ್ಯವಾಯಿತು ಮತ್ತು ಅವನಿಗೆ ದೇವಾಲಯದಲ್ಲಿ ಏನೋ ದಿವ್ಯದರ್ಶನವಾಗಿರಬೇಕು ಎಂದವರು ತಿಳುಕೊಂಡರು.

ಜಕರೀಯನು ದೇವಾಲಯದ ಸೇವೆಯ ತನ್ನ ಸಮಯಾವಧಿಯನ್ನು ಮುಗಿಸಿದ ಮೇಲೆ, ಅವನು ತನ್ನ ಮನೆಗೆ ಹಿಂತೆರಳುತ್ತಾನೆ. ಮತ್ತು ಸ್ವಲ್ಪ ಕಾಲದ ನಂತರ ಅದು ನಿಜವಾಗಿ ಸಂಭವಿಸುತ್ತದೆ—ಎಲಿಸಬೇತಳು ನಿಜವಾಗಿ ಬಸುರಾದಳು! ಮಗು ಜನಿಸುವ ನಿರೀಕ್ಷೆಯಲ್ಲಿ, ಎಲಿಸಬೇತಳು ಜನರಿಂದ ಮರೆಯಾಗಿ ಐದು ತಿಂಗಳು ಮನೆಯಲ್ಲೇ ಇದ್ದಳು.

ಸ್ವಲ್ಪ ಸಮಯದ ನಂತರ ಗಬ್ರಿಯೇಲನು ಪುನಃ ಕಾಣಿಸಿಕೊಳ್ಳುತ್ತಾನೆ. ಮತ್ತು ಅವನು ಮಾತಾಡುವದು ಯಾರೊಡನೆ? ಅದು ನಜರೇತೆಂಬ ಊರಿನ ಒಬ್ಬ ಅವಿವಾಹಿತ ಕನ್ಯೆಯಾದ ಮರಿಯಳ ಬಳಿ. ಈ ಸಾರಿ ಅವನು ಯಾವ ಸಂದೇಶವನ್ನು ನೀಡುತ್ತಾನೆ? ಕೇಳಿರಿ! “ನೀನು ದೇವರ ದಯೆ ಹೊಂದಿದವಳಾಗಿದ್ದೀ,” ಎನ್ನುತ್ತಾನೆ ಮರಿಯಳಿಗೆ ಗಬ್ರಿಯೇಲನು. “ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು.” ಗಬ್ರಿಯೇಲನು ಕೂಡಿಸಿದ್ದು: “ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಸಿಕೊಳ್ಳುವನು; . . . ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.”

ಗಬ್ರಿಯೇಲನು, ಈ ಸಂದೇಶವನ್ನು ತಾನು ತಿಳಿಸುವದು ಒಂದು ಸುಯೋಗವೆಂದು ಎಣಿಸಿದ್ದನು ಎಂದು ನಾವು ಖಾತ್ರಿಯಿಂದಿರಬಹುದು. ಮತ್ತು ನಾವು ಯೋಹಾನನ ಮತ್ತು ಯೇಸುವಿನ ಕುರಿತು ಮುಂದಿನ ಸಂಚಿಕೆಗಳಲ್ಲಿ ಓದುವಾಗ ಪರಲೋಕದ ಈ ಸಂದೇಶಗಳು ಯಾಕೆ ಪ್ರಾಮುಖ್ಯ ಎಂದು ಸ್ಪಷ್ಟವಾಗಿ ತಿಳಿಯುವದು. 2 ತಿಮೊಥಿ 3:16; ಲೂಕ 1:5-33.

▪ ಯಾವ ಎರಡು ಪ್ರಾಮುಖ್ಯ ಸಂದೇಶಗಳು ಪರಲೋಕದಿಂದ ಕೊಡಲ್ಪಟ್ಟವು?

▪ ಯಾರು ಈ ಸಂದೇಶಗಳನ್ನು ನೀಡಿದನು ಮತ್ತು ಅವು ಯಾರಿಗೆ ತಿಳಿಸಲ್ಪಟ್ಟವು?

▪ ಈ ಸಂದೇಶಗಳು ನಂಬಲು ಯಾಕೆ ಅಷ್ಟೊಂದು ಕಷ್ಟಕರವಾಗಿದ್ದವು?