ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಜಾಪೀಡಕ ರಾಜನಿಂದ ಪಾರಾಗುವದು

ಪ್ರಜಾಪೀಡಕ ರಾಜನಿಂದ ಪಾರಾಗುವದು

ಅಧ್ಯಾಯ 8

ಪ್ರಜಾಪೀಡಕ ರಾಜನಿಂದ ಪಾರಾಗುವದು

ಯೋಸೇಫನು ಮರಿಯಳನ್ನು ಮಧ್ಯ ರಾತ್ರಿಯಲ್ಲಿ ಒಂದು ತುರ್ತಿನ ಸುದ್ದಿಯನ್ನು ಕೊಡಲು ಎಚ್ಚರಗೊಳಿಸುತ್ತಾನೆ. ಯೆಹೋವನ ದೂತನು ಅವನಿಗೆ ಕಾಣಿಸಿಕೊಂಡು ಹೇಳಿದ್ದು: “ನೀನು ಎದ್ದು ಈ ಕೂಸನ್ನು ಮತ್ತು ಇದರ ತಾಯಿಯನ್ನು ಕರಕೊಂಡು ಐಗುಪ್ತ ದೇಶಕ್ಕೆ ಓಡಿಹೋಗಿ ನಾನು ನಿನಗೆ ಹೇಳುವ ತನಕ ಅಲ್ಲೇ ಇರು; ಹೆರೋದನು ಈ ಕೂಸನ್ನು ಕೊಲ್ಲಬೇಕೆಂದು ಅದನ್ನು ಹುಡುಕುತ್ತಿರುವನು.”

ತಕ್ಷಣವೇ, ಆ ಮೂವರು ಅಲ್ಲಿಂದ ಪಾರಾಗುತ್ತಾರೆ. ಆಗ, ಅದೇ ಸಮಯದಲ್ಲಿ ತನಗೆ ಮೋಸಮಾಡಿ ಜೋಯಿಸರು ದೇಶವನ್ನು ಬಿಟ್ಟು ಹೋಗಿರುತ್ತಾರೆ ಎಂದು ಹೆರೋದನು ತಿಳುಕೊಳ್ಳುತ್ತಾನೆ. ಅವರು ಯೇಸುವನ್ನು ಕಂಡುಕೊಂಡ ನಂತರ ಹೆರೋದನಿಗೆ ವರದಿ ಮಾಡಬೇಕಿತ್ತೆಂಬುದನ್ನು ನೆನಪಿಸಿರಿ. ಹೆರೋದನು ಕ್ರೋಧಾವಿಷ್ಟನಾಗುತ್ತಾನೆ. ಆದುದರಿಂದ ಯೇಸುವನ್ನು ಕೊಲ್ಲುವ ಅವನ ಪ್ರಯತ್ನದಲ್ಲಿ, ಬೇತ್ಲೆಹೇಮಿನಲ್ಲಿಯೂ, ಅದರ ಎಲ್ಲಾ ಜಿಲ್ಲೆಗಳಲ್ಲೂ ಇರುವ ಎರಡು ವರ್ಷದೊಳಗಿನ ಗಂಡುಕೂಸುಗಳನ್ನೆಲ್ಲಾ ಕೊಲ್ಲಬೇಕೆಂಬ ಆಜ್ಞೆಯನ್ನು ಹೆರೋದನು ಹೊರಡಿಸುತ್ತಾನೆ. ವಯಸ್ಸಿನ ಲೆಕ್ಕಾಚಾರವನ್ನು ಮೂಡಣ ದೇಶದಿಂದ ಬಂದ ಜೋಯಿಸರಿಂದ ಆರಂಭದಲ್ಲಿ ಪಡೆದ ಸಮಾಚಾರದ ಮೇಲೆ ಹೆರೋದನು ಆಧರಿಸಿದ್ದನು.

ಎಲ್ಲಾ ಗಂಡು ಕೂಸುಗಳ ಕಗ್ಗೊಲೆಯನ್ನು ನೋಡುವದು ಎಂಥಹ ಒಂದು ದಾರುಣ ದೃಶ್ಯ! ಹೆರೋದನ ಸೈನಿಕರು ಒಂದು ಮನೆಯ ನಂತರ ಇನ್ನೊಂದನ್ನು ನುಗ್ಗುತ್ತಾರೆ. ಅವರು ಗಂಡು ಕೂಸನ್ನು ಕಂಡಾಕ್ಷಣವೇ, ಮಗುವನ್ನು ತಾಯಿಯ ತೋಳಿನಿಂದ ಬಲವಂತವಾಗಿ ಸೆಳೆಯುತ್ತಾರೆ. ಅವರು ಎಷ್ಟು ಕೂಸುಗಳನ್ನು ಕೊಂದರು ಎಂಬದು ನಮಗೆ ತಿಳಿದಿಲ್ಲ, ಆದರೆ ತಾಯಂದಿರ ರೋದನವೂ, ಗೋಳಾಟವೂ, ದೇವರ ಪ್ರವಾದಿಯಾದ ಯೆರೆಮೀಯನ ಬೈಬಲ್‌ ಪ್ರವಾದನೆಯನ್ನು ನೆರವೇರಿಸಿತು.

ಈ ಮಧ್ಯೆ, ಯೋಸೇಫನು ಮತ್ತು ಅವನ ಕುಟುಂಬವು ಸುರಕ್ಷಿತವಾಗಿ ಐಗುಪ್ತ ದೇಶಕ್ಕೆ ತಲುಪಿಯಾಗಿತ್ತು ಮತ್ತು ಅವರು ಈಗ ಅಲ್ಲಿ ವಾಸಿಸುತ್ತಾರೆ. ಆದರೆ ಒಂದು ರಾತ್ರಿ ಯೆಹೋವನ ದೂತನು ಪುನಃ ಯೋಸೇಫನಿಗೆ ಕನಸಿನಲ್ಲಿ ಕಾಣಿಸುತ್ತಾನೆ “ನೀನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರಕೊಂಡು ಇಸ್ರಾಯೇಲ್‌ ದೇಶಕ್ಕೆ ಹೋಗು,” ಅನ್ನುತ್ತಾನೆ ದೇವದೂತನು. “ಏಕಂದರೆ ಕೂಸಿನ ಪ್ರಾಣವನ್ನು ತೆಗೆಯಬೇಕೆಂದಿದ್ದವರು ಸತ್ತು ಹೋದರು.” ದೇವರ ಮಗನು ಐಗುಪ್ತ ದೇಶದಿಂದ ಕರೆಯಲ್ಪಡುವನು ಎಂಬ ಬೈಬಲಿನ ಇನ್ನೊಂದು ಪ್ರವಾದನೆಯ ನೆರವೇರಿಕೆಯಲ್ಲಿ ಆ ಕುಟುಂಬವು ಅವರ ಸ್ವದೇಶಕ್ಕೆ ಹಿಂತೆರಳಿತು.

ಯೋಸೇಫನು ಯೂದಾಯದಲ್ಲಿ ನೆಲೆಸಲು ಪ್ರಾಯಶಃ ಉದ್ದೇಶಿಸಿದ್ದನು, ಅವರು ಐಗುಪ್ತಕ್ಕೆ ಓಡಿಹೋಗುವ ಮೊದಲು ಆ ಬೇತ್ಲೆಹೇಮ್‌ ನಗರದಲ್ಲಿ ವಾಸಿಸಿದ್ದರು. ಆದರೆ ಹೆರೋದನ ದುಷ್ಟ ಮಗನಾದ ಆರ್ಖೆಲಾಯನು ಈಗ ಯೂದಾಯದ ಅರಸನಾಗಿ ಆಳುತ್ತಾನೆ ಎಂದವನಿಗೆ ತಿಳಿಯುತ್ತದೆ. ಮತ್ತು ಇನ್ನೊಂದು ಕನಸಿನಲ್ಲಿ ಅಪಾಯದ ಎಚ್ಚರಿಕೆಯನ್ನು ಯೆಹೋವನಿಂದ ಪಡೆಯುತ್ತಾನೆ. ಆದುದರಿಂದ ಯೋಸೇಫನೂ, ಅವನ ಪರಿವಾರವೂ ಉತ್ತರಕ್ಕೆ ಪ್ರಯಾಣಿಸಿ, ಗಲಿಲಾಯದ ನಜರೇತ್‌ ಎಂಬ ನಗರದಲ್ಲಿ ವಸತಿ ಮಾಡುತ್ತದೆ. ಇಲ್ಲಿ ಯೆಹೂದ್ಯ ಧಾರ್ಮಿಕ ಜೀವಿತದ ಕೇಂದ್ರಸ್ಥಾನದಿಂದ ಬಹುದೂರದ ಈ ಸಮುದಾಯದಲ್ಲಿ ಯೇಸುವು ಬೆಳೆಯುತ್ತಾನೆ. ಮತ್ತಾಯ 2:13-23; ಯೆರೆಮೀಯ 31:15; ಹೋಶೇಯ 11:1.

▪ ಜೋಯಿಸರು ಹಿಂದಿರುಗಿ ಬಾರದಿದ್ದಾಗ, ಯಾವ ಭಯಂಕರ ಸಂಗತಿಯನ್ನು ಹೆರೋದನು ಮಾಡಿದನು, ಆದರೆ ಯೇಸು ಸಂರಕ್ಷಿಸಲ್ಪಟ್ಟದ್ದು ಹೇಗೆ?

▪ ಐಗುಪ್ತದೇಶದಿಂದ ಹಿಂದಿರುಗಿದ ಮೇಲೆ, ಯೋಸೇಫನು ಪುನಃ ಬೇತ್ಲೆಹೇಮಿನಲ್ಲಿ ಯಾಕೆ ವಾಸಿಸಲಿಲ್ಲ?

▪ ಆ ಸಮಯದಲ್ಲಿ ಯಾವ ಬೈಬಲ್‌ ಪ್ರವಾದನೆಗಳು ನೆರವೇರಿದವು?