ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾರ್ಥನೆಯ ಮತ್ತು ನಮ್ರತೆಯ ಆವಶ್ಯಕತೆ

ಪ್ರಾರ್ಥನೆಯ ಮತ್ತು ನಮ್ರತೆಯ ಆವಶ್ಯಕತೆ

ಅಧ್ಯಾಯ 94

ಪ್ರಾರ್ಥನೆಯ ಮತ್ತು ನಮ್ರತೆಯ ಆವಶ್ಯಕತೆ

ಈ ಮೊದಲು, ಅವನು ಯೂದಾಯದಲ್ಲಿರುವಾಗ, ಪ್ರಾರ್ಥನೆಯನ್ನು ಪಟ್ಟುಹಿಡಿದು ಮಾಡುವದರ ಪ್ರಾಮುಖ್ಯತೆಯ ಕುರಿತಾಗಿ ಯೇಸುವು ಒಂದು ಉದಾಹರಣೆಯನ್ನು ಹೇಳಿದ್ದನು. ಈಗ ಯೆರೂಸಲೇಮಿಗೆ ಅವನು ಮಾಡುವ ಕೊನೆಯ ಪ್ರಯಾಣದಲ್ಲಿ, ಅವನು ಪುನಃ ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕಾದ ಆವಶ್ಯಕತೆಯನ್ನು ಒತ್ತಿಹೇಳುತ್ತಾನೆ. ಪ್ರಾಯಶಃ ಯೇಸುವು ಇನ್ನೂ ಸಮಾರ್ಯದಲ್ಲಿಯೋ, ಗಲಿಲಾಯದಲ್ಲಿಯೋ ಇದ್ದಾಗ, ಈ ಹೆಚ್ಚಿನ ಸಾಮ್ಯವನ್ನು ತನ್ನ ಶಿಷ್ಯರಿಗೆ ಹೇಳುತ್ತಾನೆ:

“ಒಂದಾನೊಂದು ಊರಿನಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು; ಅವನು ದೇವರಿಗೆ ಹೆದರದೆ ಮನುಷ್ಯರನ್ನು ಲಕ್ಷ್ಯಮಾಡದೆ ಇದ್ದವನು. ಅದೇ ಊರಿನಲ್ಲಿ ಒಬ್ಬ ವಿಧವೆ ಇದ್ದಳು. ಆಕೆಯು ಅವನ ಬಳಿಗೆ ಬಂದು—ನ್ಯಾಯವಿಚಾರಣೆ ಮಾಡಿ ನನ್ನ ವಿರೋಧಿಯಿಂದ ನನ್ನನ್ನು ಬಿಡಿಸು ಎಂದು ಹೇಳಿಕೊಳ್ಳುತ್ತಿದ್ದಳು. ಅವನು ಸ್ವಲ್ಪ ಕಾಲ ಮನಸ್ಸು ಕೊಡಲಿಲ್ಲ. ಆ ಮೇಲೆ ಅವನು—ನಾನು ದೇವರಿಗೆ ಹೆದರುವವನಲ್ಲ, ಮನುಷ್ಯರನ್ನು ಲಕ್ಷ್ಯ ಮಾಡುವವನಲ್ಲ; ಆದರೂ ಈ ವಿಧವೆ ನನ್ನನ್ನು ಕಾಡುತ್ತಾ ಬರುವದರಿಂದ ಈಕೆಯ ನ್ಯಾಯವನ್ನು ವಿಚಾರಿಸಿ ತೀರ್ಪುಮಾಡುವೆನು; ಇಲ್ಲವಾದರೆ ಈಕೆಯು ಬಂದು ಬಂದು ಕಡೆಗೆ ನನ್ನನ್ನು ದಣಿಸಾಳು ಎಂದು ತನ್ನೊಳಗೆ ಅಂದುಕೊಂಡನು.”

ತದನಂತರ, ಯೇಸುವು ತನ್ನ ಕಥೆಯ ಅನ್ವಯವನ್ನು ಮಾಡುತ್ತಾ, ಹೇಳುವದು: “ಅನ್ಯಾಯಗಾರನಾದ ಈ ನ್ಯಾಯಾಧಿಪತಿ ಅಂದುಕೊಂಡದ್ದನ್ನು ಆಲೋಚಿಸಿರಿ. ದೇವರಾದುಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡುವಲ್ಲಿ ಆತನು ಅವರ ವಿಷಯದಲ್ಲಿ ತಡಮಾಡಿದರೂ, ಅವರ ನ್ಯಾಯವನ್ನು ತೀರಿಸದೆ ಇರುವನೇ?”

ಆ ಅನ್ಯಾಯಗಾರ ನ್ಯಾಯಾಧಿಪತಿಯಂತೆ ಯೆಹೋವ ದೇವರು ಯಾವುದೇ ರೀತಿಯಲ್ಲಿ ಇದ್ದಾನೆ ಎಂಬ ಒಳಾರ್ಥದಲ್ಲಿ ಯೇಸುವು ಇದನ್ನು ಸೂಚಿಸಿರುವದಿಲ್ಲ. ಬದಲಿಗೆ, ಪಟ್ಟು ಹಿಡಿದು ಮಾಡಿದ ಮೊರೆಗಳಿಗೆ ಒಬ್ಬ ಅನ್ಯಾಯಗಾರನಾದ ನ್ಯಾಯಾಧಿಪತಿಯು ಪ್ರತಿವರ್ತಿಸುವದಾದರೆ, ಸರ್ವ ವಿಧಗಳಲ್ಲಿ ನೀತಿವಂತನೂ, ಒಳ್ಳೆಯವನೂ ಆಗಿರುವ ದೇವರು, ಪ್ರಾರ್ಥನೆಯನ್ನು ಬಿಡದೆ ಮಾಡುವ ಅವನ ಜನರಿಗೆ ಉತ್ತರ ನೀಡುವನೆಂಬುದರಲ್ಲಿ ಯಾವುದೇ ಪ್ರಶ್ನೆಯಿರುವದಿಲ್ಲ. ಆದುದರಿಂದ ಯೇಸುವು ಮುಂದುವರಿಸಿದ್ದು: “ಅವರಿಗೆ ಬೇಗ [ದೇವರು] ನ್ಯಾಯ ತೀರಿಸುವನೆಂದು ನಿಮಗೆ ಹೇಳುತ್ತೇನೆ.”

ದರಿದ್ರರಿಗೆ ಮತ್ತು ಬಡವರಿಗೆ ಆಗಾಗ್ಯೆ ನ್ಯಾಯವು ನಿರಾಕರಿಸಲ್ಪಡುತ್ತದೆ, ಆದರೆ ಬಲಶಾಲಿಗಳಾಗಿರುವವರಿಗೆ ಮತ್ತು ಶ್ರೀಮಂತರಿಗೆ ಒಲವನ್ನು ತೋರಿಸಲಾಗುತ್ತದೆ. ಆದಾಗ್ಯೂ, ದೇವರು, ದುಷ್ಟರಿಗೆ ದಂಡನೆಯಾಗುವದನ್ನು ಮಾತ್ರ ನೋಡುವದಿಲ್ಲ, ಅದರೊಂದಿಗೆ, ಅವನ ಸೇವಕರಿಗೆ ನಿತ್ಯಜೀವವನ್ನು ದಯಪಾಲಿಸುವದರ ಮೂಲಕ ಅವರನ್ನು ನ್ಯಾಯದಿಂದ ಉಪಚರಿಸಲ್ಪಡುವಂತೆ ಖಚಿತಮಾಡುತ್ತಾನೆ. ಆದರೆ ಬಲುಬೇಗನೆ ದೇವರು ನ್ಯಾಯತೀರಿಸುವನೆಂದು ಎಷ್ಟೊಂದು ಜನರು ಖಂಡಿತವಾಗಿ ನಂಬುತ್ತಾರೆ?

ಪ್ರಾರ್ಥನೆಯ ಬಲಕ್ಕೆ ವಿಶೇಷವಾಗಿ ಸಂಬಂಧಿಸಿರುವ ನಂಬಿಕೆಯನ್ನು ಸೂಚಿಸುತ್ತಾ, ಯೇಸುವು ಕೇಳುವದು: “ಹೀಗಿದ್ದರೂ ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ?” ಪ್ರಶ್ನೆಯ ಉತ್ತರವು ಕೊಡಲ್ಪಡದೆ ಇರುವದಾದರೂ, ಕ್ರಿಸ್ತನು ರಾಜ್ಯಬಲದೊಂದಿಗೆ ಬರುವಾಗ ಅಂಥ ನಂಬಿಕೆಯು ಸಾಮಾನ್ಯವಾಗಿರಲಿಕ್ಕಿಲ್ಲ ಎಂಬುದು ಅದರಲ್ಲಿ ಒಳಗೂಡಿರುತ್ತದೆ.

ಯೇಸುವನ್ನು ಆಲಿಸುವವರ ನಡುವೆ ತಮ್ಮ ನಂಬಿಕೆಯ ಕುರಿತು ಸ್ವತಃ ನೆಚ್ಚಿಕೆಯಿದ್ದ ಕೆಲವರು ಇದ್ದರು. ಅವರು ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡವರೂ, ಇತರರನ್ನು ನಿಕೃಷ್ಟತೆಯಿಂದ ನೋಡುವವರೂ ಆಗಿದ್ದರು. ಯೇಸುವಿನ ಶಿಷ್ಯರಲ್ಲಿ ಕೆಲವು ನಿರ್ದಿಷ್ಟ ಮಂದಿ ಈ ಗುಂಪಿನಲ್ಲಿ ಸೇರಿರಲೂ ಬಹುದು. ಆದುದರಿಂದ ಕೆಳಗಿನ ಸಾಮ್ಯವನ್ನು ಅಂಥವರಿಗೆ ಅವನು ನಿರ್ದೇಶಿಸುತ್ತಾನೆ:

“ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು; ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕದವನು. ಫರಿಸಾಯನು ನಿಂತುಕೊಂಡು ಪ್ರಾರ್ಥಿಸುವಾಗ, ತನ್ನೊಳಗೆ—ದೇವರೇ, ಸುಲುಕೊಳ್ಳುವವರೂ ಅನ್ಯಾಯಗಾರರೂ ಹಾದರ ಮಾಡುವವರೂ ಆಗಿರುವ ಉಳಿದ ಜನರಂತೆ ನಾನಲ್ಲ, ಆ ಸುಂಕದವನಂತೆಯೂ ಅಲ್ಲ; ಆದದರಿಂದ ನಿನಗೆ ಸ್ತೋತ್ರ ಮಾಡುತ್ತೇನೆ. ವಾರಕ್ಕೆ ಎರಡಾವರ್ತಿ ಉಪವಾಸಮಾಡುತ್ತೇನೆ; ನಾನು ಸಂಪಾದಿಸುವ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ.”

ಇತರರ ಮೇಲೆ ಪ್ರಭಾವ ಬೀರಲು ಅವರ ನೀತಿಯುಕ್ತತೆಯ ಬಹಿರಂಗ ಪ್ರದರ್ಶನಗಳಿಗಾಗಿ ಫರಿಸಾಯರು ಹೆಸರುವಾಸಿಯಾಗಿದ್ದರು. ಅವರು ಸ್ವತಃ ಮಾಡಿಕೊಂಡ ಉಪವಾಸದ ಎರಡು ದಿನಗಳು ಸೋಮವಾರ ಮತ್ತು ಗುರುವಾರ ಮತ್ತು ಅವರು ಹತ್ತನೆಯ ಒಂದು ಭಾಗ ಕೊಡುವದರಲ್ಲಿ, ಗದ್ದೆಯಲ್ಲಿ ಬೆಳೆಯುವ ಅತಿ ಚಿಕ್ಕ ಗಿಡಮೂಲಿಕೆಗಳ ಸಹಿತ, ಕಟ್ಟುನಿಟ್ಟಾಗಿ ಕೊಡುತ್ತಿದ್ದರು. ಕೆಲವು ತಿಂಗಳುಗಳ ಮೊದಲು, ಪರ್ಣಶಾಲೆಗಳ ಹಬ್ಬದ ಸಮಯದಲ್ಲಿ ಸಾಮಾನ್ಯ ಜನರ ಕಡೆಗೆ ಅವರಿಗೆ ಇರುವ ತುಚ್ಛ ಮನೋಭಾವವು, ಅವರು ಹೀಗೆ ಹೇಳುವದರಿಂದ ವ್ಯಕ್ತವಾಯಿತು: “ಧರ್ಮಶಾಸ್ತ್ರವನ್ನು [ಅಂದರೆ ಅದಕ್ಕೆ ಕೊಟ್ಟಂಥ ಫರಿಸಾಯರ ಅರ್ಥವಿವರಣೆ] ಅರಿಯದಂಥ ಈ ಹಿಂಡು ಶಾಪಗ್ರಸ್ತವಾದದ್ದೇ.”

ಅವನ ಸಾಮ್ಯವನ್ನು ಮುಂದುವರಿಸುತ್ತಾ, ಯೇಸುವು ಅಂಥ “ಶಾಪಗ್ರಸ್ತ” ವ್ಯಕ್ತಿಯೊಬ್ಬನ ಕುರಿತು ಹೇಳುವದು: “ಆದರೆ ಆ ಸುಂಕದವನು ದೂರದಲ್ಲಿ ನಿಂತು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ಎದೆಯನ್ನು ಬಡುಕೊಳ್ಳುತ್ತಾ—ದೇವರೇ, ಪಾಪಿಯಾದ ನನ್ನನ್ನು ಕರುಣಿಸು ಅಂದನು. ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು, ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ನಾನು ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.”

ಈ ರೀತಿಯಲ್ಲಿ ಪುನಃ ನಮ್ರತೆಯವರಾಗಿರುವ ಆವಶ್ಯಕತೆಯನ್ನು ಯೇಸುವು ಒತ್ತಿಹೇಳಿದನು. ಬಹಳ ಪ್ರಭಾವ ಬೀರುವವರೂ, ಪದವಿ ಮತ್ತು ಸ್ಥಾನಮಾನದ ಅಂತಸ್ತನ್ನು ಯಾವಾಗಲೂ ಒತ್ತಿ ಹೇಳುವವರೂ ಆಗಿದ್ದ ಸ್ವ-ನೀತಿಯ ಫರಿಸಾಯರ ಸಮಾಜವೊಂದರಲ್ಲಿ ಬೆಳೆಸಲ್ಪಟ್ಟದ್ದರಿಂದ, ಯೇಸುವಿನ ಶಿಷ್ಯರೂ ಅದರಿಂದ ಬಾಧಿತರಾಗಿದ್ದರೆಂಬದಕ್ಕೆ ಏನೂ ಸಂಶಯವಿರುವದಿಲ್ಲ. ಆದರೂ, ಯೇಸುವು ನಮ್ರತೆಯ ಎಂಥಾ ಉತ್ತಮ ಪಾಠಗಳನ್ನು ಕಲಿಸಿದನು! ಲೂಕ 18:1-14; ಯೋಹಾನ 7:49.

▪ ಅನ್ಯಾಯಗಾರ ನ್ಯಾಯಾಧಿಪತಿಯು ವಿಧವೆಯ ವಿನಂತಿಯನ್ನು ಕೇಳಿದ್ದೇಕೆ, ಮತ್ತು ಯೇಸುವಿನ ಸಾಮ್ಯದಿಂದ ಯಾವ ಪಾಠವನ್ನು ಕಲಿಸಲಾಗಿದೆ?

▪ ಯೇಸುವು ಬರುವಾಗ ಯಾವ ರೀತಿಯ ನಂಬಿಕೆಗಾಗಿ ನೋಡುವನು?

▪ ಫರಿಸಾಯನ ಮತ್ತು ಸುಂಕದವನ ಸಾಮ್ಯವನ್ನು ಯೇಸು ಯಾರ ಕಡೆಗೆ ನಿರ್ದೇಶಿಸಿ ಹೇಳುತ್ತಾನೆ?

▪ ಫರಿಸಾಯರ ಯಾವ ಮನೋಭಾವವನ್ನು ದೂರ ಮಾಡತಕ್ಕದ್ದು?