ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಯಂಕರ ಚಂಡಮಾರುತವನ್ನು ಸುಮ್ಮನಾಗಿಸುವದು

ಭಯಂಕರ ಚಂಡಮಾರುತವನ್ನು ಸುಮ್ಮನಾಗಿಸುವದು

ಅಧ್ಯಾಯ 44

ಭಯಂಕರ ಚಂಡಮಾರುತವನ್ನು ಸುಮ್ಮನಾಗಿಸುವದು

ಯೇಸುವಿನ ಆ ದಿನ ಚಟುವಟಿಕೆ ತುಂಬಿದ ದಿನ. ಅವನು ಸಮುದ್ರ ತೀರದಲ್ಲಿ ಜನರಿಗೆ ಕಲಿಸಿದ ಬಳಿಕ ದೃಷ್ಟಾಂತಗಳನ್ನು ಖಾಸಗಿಯಾಗಿ ಶಿಷ್ಯರಿಗೆ ತಿಳಿಸುತ್ತಾನೆ. ಸಾಯಂಕಾಲವಾದಾಗ ಅವನು “ಆಚೇದಡಕ್ಕೆ ಹೋಗೋಣ” ಎನ್ನುತ್ತಾನೆ.

ಗಲಿಲಾಯ ಸಮುದ್ರದ ಪೂರ್ವ ತೀರದಲ್ಲಿ ದೆಕಪೊಲಿ ಎಂಬ ಪ್ರದೇಶವದೆ. ಈ ಹೆಸರು ಗ್ರೀಕ್‌ ಭಾಷೆಯ ಡೆಕ ಅಂದರೆ “ಹತ್ತು” ಮತ್ತು ಪೊಲಿಸ್‌ ಅಂದರೆ “ನಗರ” ಎಂಬ ಪದಗಳಿಂದ ಬಂದಿವೆ. ದೆಕಪೊಲಿಯ ನಗರಗಳು ಗ್ರೀಕ್‌ ಸಂಸ್ಕೃತಿಯ ಕೇಂದ್ರ ಮತ್ತು ಅನೇಕ ಯೆಹೂದ್ಯರು ಅಲ್ಲಿದ್ದರೆಂಬದು ನಿಸ್ಸಂಶಯ. ಆದರೆ ಈ ಪ್ರದೇಶದಲ್ಲಿ ಯೇಸುವಿನ ಚಟುವಟಿಕೆ ಅತಿ ಪರಿಮಿತವಾಗಿದೆ. ಈ ಭೇಟಿಯಲ್ಲಿಯೂ ನಾವು ಮುಂದೆ ನೋಡಲಿರುವಂತೆ, ಅವನನ್ನು ಹೆಚ್ಚು ಸಮಯ ಅಲ್ಲಿರುವಂತೆ ಬಿಡಲಾಗುವದಿಲ್ಲ.

ಆಚೇ ದಡಕ್ಕೆ ಹೋಗೋಣ ಎಂದು ಯೇಸು ಕೇಳಿಕೊಂಡಾಗ ಶಿಷ್ಯರು ಅವನನ್ನು ದೋಣಿಯಲ್ಲಿ ದಾಟಿಸುತ್ತಾರೆ. ಆದರೂ ಅವನ ತೆರಳುವಿಕೆ ಜನರ ಕಣ್ಣಿಗೆ ಮರೆಯಾಗುವದಿಲ್ಲ. ಒಡನೇ ಇತರರೂ ತಮ್ಮ ದೋಣಿಗಳನ್ನು ಹತ್ತಿ ಅವರ ಸಂಗಡ ದಾಟುತ್ತಾರೆ. ಆಚೇ ದಡ ಹೆಚ್ಚು ದೂರವಿಲ್ಲ. ವಾಸ್ತವವೇನಂದರೆ ಗಲಿಲಾಯ ಸಮುದ್ರ ಒಂದು ದೊಡ್ಡ ಸರೋವರ. ಅದು 21 ಕಿಲೊಮೀಟರುಗಳು ಉದ್ದ ಮತ್ತು ಹೆಚ್ಚೆಂದರೆ 12 ಕಿಲೊಮೀಟರುಗಳು ಅಗಲದ ಸರೋವರ.

ಯೇಸು ದಣಿದಿರುವದು ಗ್ರಹಿಸಬಹುದಾದ ವಿಷಯ. ಈ ಕಾರಣದಿಂದ ಅವರು ತೀರ ಬಿಟ್ಟು ಹೊರಟಾಗ ಅವನು ದೋಣಿಯ ಹಿಂಭಾಗದಲ್ಲಿ ಮಲಗಿ ದಿಂಬಿನ ಮೇಲೆ ತಲೆಯಿಟ್ಟು ಗಾಢ ನಿದ್ರೆ ಮಾಡುತ್ತಾನೆ. ಅಪೊಸ್ತಲರಲ್ಲಿ ಅನೇಕರು, ಗಲಿಲಾಯ ಸಮುದ್ರದಲ್ಲಿ ವ್ಯಾಪಕವಾಗಿ ಮೀನುಗಾರಿಕೆ ಮಾಡಿರುವದರಿಂದ ಅನುಭವಸ್ಥ ನಾವಿಕರಾಗಿದ್ದಾರೆ. ಆದ್ದರಿಂದ ಅವರು ಈ ಹಾಯಿಹಡಗದ ಜವಾಬ್ದಾರಿ ವಹಿಸುತ್ತಾರೆ.

ಆದರೆ ಈ ಪ್ರಯಾಣ ಸುಲಭವಾಗಿರಲಿಲ್ಲ. ಸಮುದ್ರ ಮಟ್ಟಕ್ಕಿಂತ ಸುಮಾರು 213 ಕಿಲೊಮೀಟರುಗಳು ಕೆಳಗಿರುವ ಈ ಸರೋವರದ ಮೇಲ್ಮೈಯ ಬೆಚ್ಚಗಿನ ಶಾಖಮಟ್ಟದ ಮತ್ತು ಹತ್ತಿರದ ಬೆಟ್ಟಗಳ ತಣ್ಣಗಿನ ಗಾಳಿಯ ಕಾರಣ ಕೆಲವು ಸಲ ಬಲವಾದ ಗಾಳಿ ಕೆಳಮುಖವಾಗಿ ಬೀಸಿ ಥಟ್ಟನೇ ಭಯಂಕರ ಚಂಡಮಾರುತ ಸರೋವರದಲ್ಲಿ ಏಳುವದುಂಟು. ಈಗ ಹಾಗೆಯೇ ನಡಿಯುತ್ತದೆ. ಒಡನೇ ತೆರೆಗಳು ದೋಣಿಗೆ ಬಡಿದು ಒಳಗೆ ಚೆಲ್ಲಿ ಬೀಳುವ ಕಾರಣ ದೋಣಿ ಮುಳುಗಲು ಹತ್ತರವಾಗುತ್ತದೆ. ಹೀಗಿದ್ದರೂ ಯೇಸು ಇನ್ನೂ ನಿದ್ದೆ ಮಾಡುತ್ತಿದ್ದಾನೆ!

ಆ ಅನುಭವಸ್ಥ ನಾವಿಕರು ಬಿರುಸಿನಿಂದ ದೋಣಿ ನಡಿಸಲು ಪ್ರಯತ್ನಿಸುತ್ತಾರೆ. ಈ ಹಿಂದೆಯೂ ಅವರು ಇಂತಹ ಚಂಡಮಾರುತದ ಮಧ್ಯೆ ದೋಣಿ ನಡಿಸಿದ್ದಾರೆಂಬದು ನಿಸ್ಸಂಶಯ. ಆದರೆ ಈ ಸಲ ಅವರಿಗೆ ದಿಕ್ಕು ತೋರುವದಿಲ್ಲ. ಪ್ರಾಣಭಯದಿಂದ ಅವರು ಯೇಸುವನ್ನು ಎಬ್ಬಿಸುತ್ತಾರೆ. ‘ಸ್ವಾಮೀ, ನಿನಗೆ ಚಿಂತೆಯೇ ಇಲ್ಲವೋ? ನಾವು ಮುಳುಗುತ್ತಿದ್ದೇವೆ!’ ‘ನಮ್ಮನ್ನು ರಕ್ಷಿಸು!’ ‘ನಾವು ಮುಳುಗಿ ಸಾಯುವದರಲ್ಲಿದ್ದೇವೆ!’ ಎಂದು ಅವರು ಕೂಗಾಡುತ್ತಾರೆ.

ಆಗ ಯೇಸು ಎದ್ದು ಗಾಳಿಗೂ ಸಮುದ್ರಕ್ಕೂ, ‘ಸದ್ದು ಬೇಡ! ಸುಮ್ಮನಿರಿ!’ ಎಂದು ಆಜ್ಞಾಪಿಸುತ್ತಾನೆ. ಆಗ ಪ್ರಬಲವಾದ ಗಾಳಿ ನಿಂತು ಸಮುದ್ರ ಶಾಂತವಾಗುತ್ತದೆ. ಅವನು ಶಿಷ್ಯರ ಕಡೆಗೆ ತಿರುಗಿ, ‘ನಿಮಗೆ ಅಷ್ಟು ಭಯವೇಕೆ? ಇನ್ನೂ ನಿಮಗೆ ನಂಬಿಕೆ ಇಲ್ಲವೋ?’ ಎಂದು ಕೇಳುತ್ತಾನೆ.

ಆಗ ಶಿಷ್ಯರಿಗೆ ಅಸಾಧಾರಣವಾದ ಭಯ ಹಿಡಿಯುತ್ತದೆ. ‘ಇವನು ನಿಜವಾಗಿಯೂ ಯಾರು? ಗಾಳಿ ಮತ್ತು ನೀರಿಗೆ ಆಜ್ಞೆ ಕೊಟ್ಟಾಗ ಅವು ಅವನಿಗೆ ವಿಧೇಯತೆ ತೋರಿಸುತ್ತವೆ’ ಎಂದು ಅವರು ತಮ್ಮೊಳಗೆ ಮಾತಾಡಿ ಕೊಳ್ಳುತ್ತಾರೆ.

ಯೇಸುವಿನ ಶಕ್ತಿಯ ಎಂತಹ ಪ್ರದರ್ಶನವಿದು! ನಮ್ಮ ಅರಸನಿಗೆ ಪ್ರಕೃತಿ ಶಕ್ತಿಗಳ ಮೇಲೆ ಅಧಿಕಾರವಿದೆ ಮತ್ತು ಅವನ ರಾಜ್ಯದಾಳಿಕೆಯ ಸಮಯದಲ್ಲಿ ಅವನ ಪೂರ್ತಿ ಗಮನ ನಮ್ಮ ಭೂಮಿಯ ಮೇಲಿರುವಾಗ ಎಲ್ಲರೂ ಭಯಂಕರವಾದ ಪ್ರಾಕೃತಿಕ ವಿಪತ್ತುಗಳಿಂದ ಸುರಕ್ಷಿತರಾಗಿ ಜೀವಿಸುವರೆಂದು ತಿಳಿಯುವದು ಎಷ್ಟು ಭರವಸೆಯನ್ನು ನಮಗೆ ನೀಡುತ್ತದೆ!

ಬಿರುಗಾಳಿ ನಿಂತ ಮೇಲೆ ಯೇಸು ಮತ್ತು ಶಿಷ್ಯರು ಸುರಕ್ಷಿತವಾಗಿ ಪೂರ್ವ ತೀರವನ್ನು ಮುಟ್ಟಿರುತ್ತಾರೆ. ಪ್ರಾಯಶಃ ಇತರ ದೋಣಿಗಳೂ ಚಂಡಮಾರುತದ ಭರದಿಂದ ತಪ್ಪಿ ಸುರಕ್ಷಿತವಾಗಿ ಮನೆಗೆ ಮುಟ್ಟುತ್ತವೆ. ಮಾರ್ಕ 4:35—5:1; ಮತ್ತಾಯ 8:18, 23-27; ಲೂಕ 8:22-26.

▪ ದೆಕಪೊಲಿ ಎಂದರೇನು, ಮತ್ತು ಅದು ಎಲ್ಲಿದೆ?

▪ ಗಲಿಲಾಯ ಸಮುದ್ರದ ಚಂಡಮಾರುತಗಳಿಗೆ ಯಾವ ಪ್ರಕೃತಿ ವೈಶಿಷ್ಟ್ಯಗಳು ಕಾರಣ?

▪ ಶಿಷ್ಯರ ದೋಣಿ ನಡಿಸುವ ಚಾತುರ್ಯ ಅವರನ್ನು ರಕ್ಷಿಸದ್ದಿದಾಗ ಅವರೇನು ಮಾಡುತ್ತಾರೆ?