ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮತ್ತಾಯನನ್ನು ಕರೆಯುವದು

ಮತ್ತಾಯನನ್ನು ಕರೆಯುವದು

ಅಧ್ಯಾಯ 27

ಮತ್ತಾಯನನ್ನು ಕರೆಯುವದು

ಪಾರ್ಶ್ವವಾಯು ರೋಗಿಯನ್ನು ವಾಸಿಮಾಡಿದ ಸ್ವಲ್ಪ ಸಮಯದ ನಂತರ, ಯೇಸುವು ಕಪೆರ್ನೌಮಿನಿಂದ ಹೊರಟು, ಗಲಿಲಾಯ ಸಮುದ್ರದ ಬಳಿಗೆ ಬಂದನು. ಪುನಃ ಜನರ ಗುಂಪುಗಳು ಅಲ್ಲಿಗೆ ಅವನ ಬಳಿ ಬರಲಾರಂಭಿಸಿದವು ಮತ್ತು ಅವನು ಅವರಿಗೆ ಉಪದೇಶಿಸಲಾರಂಭಿಸಿದನು. ಅವನು ಅಲ್ಲಿಂದ ನಡೆದು ಹೋಗುತ್ತಿರುವಾಗ, ಸುಂಕಕ್ಕೆ ಕೂತಿದ್ದ, ಲೇವಿ ಎಂದು ಕರೆಯಲ್ಪಡುತ್ತಿದ್ದ ಮತ್ತಾಯನನ್ನು ಕಂಡನು. “ನನ್ನನ್ನು ಹಿಂಬಾಲಿಸು” ಎಂದೇ ಯೇಸುವಿನ ಆಮಂತ್ರಣವಾಗಿತ್ತು.

ಪೇತ್ರ, ಅಂದ್ರೆಯ, ಯಾಕೋಬ ಮತ್ತು ಯೋಹಾನರು ಕರೆಯಲ್ಪಟ್ಟಾಗ ಹೇಗಿದ್ದರೋ, ತದ್ರೀತಿಯಲ್ಲಿ ಯೇಸುವಿನ ಬೋಧನೆಗಳ ಪರಿಚಯ ಪ್ರಾಯಶಃ ಮತ್ತಾಯನಿಗೆ ಆ ಮೊದಲೇ ಇದ್ದಿರಬೇಕು. ಮತ್ತು ಅವರಂತೆಯೇ, ಮತ್ತಾಯನು ತಕ್ಷಣವೇ ಆಮಂತ್ರಣಕ್ಕೆ ಪ್ರತಿಕ್ರಿಯೆ ತೋರಿಸುತ್ತಾನೆ. ಅವನು ಎದ್ದು, ಸುಂಕ ವಸೂಲಿಯ ಜವಾಬ್ದಾರಿಕೆಯನ್ನು ಹಿಂದಕ್ಕೆ ಬಿಟ್ಟು, ಯೇಸುವನ್ನು ಹಿಂಬಾಲಿಸುತ್ತಾನೆ.

ತದನಂತರ, ಪ್ರಾಯಶಃ ಅವನ ಕರೆಯನ್ನು ಆಚರಿಸಲಿಕ್ಕಾಗಿ, ಮತ್ತಾಯನು ತನ್ನ ಮನೆಯಲ್ಲಿ ಒಂದು ದೊಡ್ಡ ಔತಣ ಸಮಾರಂಭವನ್ನು ಏರ್ಪಡಿಸುತ್ತಾನೆ. ಯೇಸು ಮತ್ತು ಅವನ ಶಿಷ್ಯರಲ್ಲದೆ, ಮತ್ತಾಯನ ಹಿಂದಿನ ಸಂಗಾತಿಗಳೂ ಅಲ್ಲಿ ಹಾಜರಿದ್ದರು. ಈ ಜನರನ್ನು ಜೊತೆ-ಯೆಹೂದ್ಯರು ಸರ್ವ ಸಾಮಾನ್ಯವಾಗಿ ಹೀನೈಸುತ್ತಿದ್ದರು. ಯಾಕಂದರೆ ದ್ವೇಷಪಾತ್ರ ರೋಮೀಯ ಅಧಿಕಾರಿಗಳ ಪರವಾಗಿ ಅವರು ಸುಂಕವನ್ನು ವಸೂಲಿ ಮಾಡುತ್ತಿದ್ದರು. ಅದಲ್ಲದೆ, ಕ್ರಮದ ಸುಂಕ ದರಕ್ಕಿಂತ ಹೆಚ್ಚು ಹಣವನ್ನು ಜನರಿಂದ ಆಗಿಂದಾಗ್ಯೆ ಅಪ್ರಾಮಾಣಿಕವಾಗಿ ಸುಲಿಯುತ್ತಲೂ ಇದ್ದರು.

ಅಂತಹ ವ್ಯಕ್ತಿಗಳೊಂದಿಗೆ ಔತಣದಲ್ಲಿ ಯೇಸುವು ಸೇರಿರುವದನ್ನು ನೋಡಿ, ಫರಿಸಾಯರು ಅವನ ಶಿಷ್ಯರಿಗೆ ಕೇಳುವದು: “ನಿಮ್ಮ ಗುರುವು ಸುಂಕದವರ ಮತ್ತು ಪಾಪಿಗಳ ಸಂಗಡ ಯಾಕೆ ಊಟ ಮಾಡುತ್ತಾನೆ?” ಅವರ ಪ್ರಶ್ನೆಯನ್ನು ಆಲಿಸಿ, ಯೇಸುವು ಉತ್ತರಿಸಿದ್ದು: “ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು. ನೀವು ಹೋಗಿ—ನನಗೆ ಯಜ್ಞವು ಬೇಡ, ಕರುಣೆಯೇ ಬೇಕು ಎಂಬ ಮಾತಿನ ಅರ್ಥವನ್ನು ಕಲಿತುಕೊಳ್ಳಿರಿ. ನಾನು ನೀತಿವಂತರನ್ನು ಕರೆಯುವದಕ್ಕೆ ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು.”

ಈ ಸುಂಕದವರನ್ನು ತನ್ನ ಮನೆಗೆ ಮತ್ತಾಯನು ಕರೆದದ್ದು, ಪ್ರಾಯಶಃ ಅವರು ಯೇಸುವನ್ನು ಆಲಿಸಿ, ಆತ್ಮಿಕ ವಾಸಿಯನ್ನು ಪಡೆಯಲಿ ಎಂಬ ಉದ್ದೇಶದಿಂದಿರಬಹುದು. ಆದುದರಿಂದ, ದೇವರೊಂದಿಗೆ ಒಂದು ಆರೋಗ್ಯಕರ ಸಂಬಂಧ ಪಡೆಯಲು ಅವರಿಗೆ ನೆರವಾಗಲು ಯೇಸುವು ಅವರೊಂದಿಗೆ ಸಹವಾಸ ಮಾಡುತ್ತಾನೆ. ಯೇಸುವು, ಸ್ವನೀತಿಯ ಫರಿಸಾಯರು ಮಾಡುತ್ತಿದ್ದಂತೆ, ಅವರನ್ನು ಕಡೆಗೆಣಿಸಲಿಲ್ಲ. ಬದಲು, ಕರುಣಾಭರಿತನಾಗಿ ಅವನು ಅವರ ಆತ್ಮಿಕ ವ್ಯೆದ್ಯನೋಪಾದಿ ಸೇವೆ ಸಲ್ಲಿಸಿದನು.

ಈ ರೀತಿಯಲ್ಲಿ ಪಾಪಿಗಳೆಡೆಗೆ ಯೇಸುವು ತೋರಿಸಿದ ಕರುಣೆಯು, ಅವರ ಪಾಪಗಳನ್ನು ಮನ್ನಿಸಿದ್ದಾನೆಂದಲ್ಲ, ಬದಲು ಶಾರೀರಿಕ ರೋಗಿಯೆಡೆಗೆ ವ್ಯಕ್ತ ಪಡಿಸುವ ಕೋಮಲ ಭಾವನೆಗಳಂತೆಯೇ ಇದ್ದವು. ಉದಾಹರಣೆಗೆ, ಕುಷ್ಠ ರೋಗಿಯೆಡೆಗೆ ಕೈಚಾಚಿ, ಕನಿಕರದಿಂದ “ನನಗೆ ಮನಸ್ಸುಂಟು. ಶುದ್ಧನಾಗು” ಎಂದು ಹೇಳಿದ್ದನ್ನು ನೆನಪಿಗೆ ತನ್ನಿರಿ. ಆವಶ್ಯಕತೆಯಿರುವವರಿಗೆ, ವಿಶೇಷವಾಗಿ ಆತ್ಮಿಕ ರೀತಿಯಲ್ಲಿ ನೆರವಾಗುವದರ ಮೂಲಕ, ತದ್ರೀತಿಯ ಕರುಣೆಯನ್ನು ನಾವು ಕೂಡಾ ತೋರಿಸೋಣ. ಮತ್ತಾಯ 8:3; 9:9-13; ಮಾರ್ಕ 2:13-17; ಲೂಕ 5:27-32.

▪ ಯೇಸುವು ಮತ್ತಾಯನನ್ನು ಕಂಡಾಗ, ಅವನು ಎಲ್ಲಿದ್ದನು?

▪ ಮತ್ತಾಯನ ವೃತ್ತಿಯೇನು, ಮತ್ತು ಇತರ ಯೆಹೂದ್ಯರಿಂದ ಅಂಥ ಜನರು ಯಾಕೆ ಕಡೆಗೆಣಿಸಲ್ಪಡುತ್ತಿದ್ದರು?

▪ ಯೇಸುವಿನ ವಿರುದ್ಧ ಯಾವ ಆಪಾದನೆ ಮಾಡಲಾಯಿತು, ಮತ್ತು ಅವನು ಹೇಗೆ ಪ್ರತಿಕ್ರಿಯೆ ತೋರಿಸಿದನು?

▪ ಯೇಸುವು ಪಾಪಿಗಳೊಂದಿಗೆ ಯಾಕೆ ಸಹವಾಸ ಮಾಡಿದನು?