ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನುಷ್ಯನನ್ನು ಹೊಲೆಮಾಡುವದು ಯಾವುದು?

ಮನುಷ್ಯನನ್ನು ಹೊಲೆಮಾಡುವದು ಯಾವುದು?

ಅಧ್ಯಾಯ 56

ಮನುಷ್ಯನನ್ನು ಹೊಲೆಮಾಡುವದು ಯಾವುದು?

ಯೇಸುವಿಗೆ ವಿರೋಧವು ಹೆಚ್ಚಾಗುತ್ತಾ ಹೋಯಿತು. ಅವನ ಶಿಷ್ಯರಲ್ಲಿ ಅನೇಕರು ಅವನನ್ನು ತ್ಯಜಿಸಿ ಹೋದದ್ದು ಮಾತ್ರವಲ್ಲ, ಯೂದಾಯದ ಯೆಹೂದ್ಯರು ಅವನನ್ನು ಕೊಲ್ಲಲು ಹುಡುಕುತ್ತಿದ್ದರು. ಇದನ್ನೇ ಅವರು ಸಾ.ಶ. 31 ರ ಪಸ್ಕಹಬ್ಬದ ಸಮಯದಲ್ಲಿ ಅವನು ಯೆರೂಸಲೇಮಿನಲ್ಲಿದ್ದಾಗ ಮಾಡಿದ್ದರು.

ಈಗ ಸಾ.ಶ. 32 ರ ಪಸ್ಕ ಹಬ್ಬದ ಸಮಯ. ಹಾಜರಾಗಬೇಕು ಎಂದಿರುವ ದೇವರ ನಿಯಮಗಳಿಗನುಸಾರ ಯೇಸುವು ಯೆರೂಸಲೇಮಿನ ಪಸ್ಕ ಹಬ್ಬಕ್ಕೆ ಯೇಸು ಹೋಗುತ್ತಾನೆ. ಆದಾಗ್ಯೂ, ಅವನ ಜೀವವು ಅಪಾಯದಲ್ಲಿದ್ದುದರಿಂದ ಅವನು ಅಲ್ಲಿಗೆ ಜಾಗ್ರತೆಯಿಂದ ಹೋಗುತ್ತಾನೆ. ಅನಂತರ ಅವನು ಗಲಿಲಾಯಕ್ಕೆ ಹಿಂತೆರಳುತ್ತಾನೆ.

ಪ್ರಾಯಶಃ ಅವನು ಕಪೆರ್ನೌಮಿನಲ್ಲಿರುವಾಗ ಯೆರೂಸಲೇಮಿನಿಂದ ಫರಿಸಾಯರು ಮತ್ತು ಶಾಸ್ತ್ರಿಗಳು ಅವನ ಬಳಿಗೆ ಬಂದಿರಬೇಕು. ಧಾರ್ಮಿಕ ನಿಯಮಗಳನ್ನು ಮುರಿಯುವ ವಿಷಯದಲ್ಲಿ ಅವನ ಮೇಲೆ ದೋಷ ಹೊರಿಸಲು ಆಧಾರವನ್ನು ಅವರು ಹುಡುಕುತ್ತಾ ಇದ್ದರು. “ನಿನ್ನ ಶಿಷ್ಯರು ಹಿರಿಯರಿಂದ ಬಂದ ಸಂಪ್ರದಾಯಗಳನ್ನು ಯಾಕೆ ಮೀರುತ್ತಾರೆ?” ಎಂದವರು ವಿಚಾರಿಸುತ್ತಾರೆ. “ಅವರು ಕೈ ತೊಳಕೊಳ್ಳದೆ ಆಹಾರ ತೆಗೆದುಕೊಳ್ಳುತ್ತಾರಲ್ಲಾ.” ಇದು ದೇವರಿಂದ ಕೇಳಲ್ಪಟ್ಟ ಒಂದು ವಿಷಯವಲ್ಲ, ಆದರೂ ಫರಿಸಾಯರು ಈ ಸಾಂಪ್ರದಾಯಿಕ ಸಂಸ್ಕಾರವನ್ನು ಮಾಡದಿರುವುದು ಒಂದು ಗಂಭೀರವಾದ ಅಪರಾಧವೆಂದು ಪರಿಗಣಿಸುತ್ತಿದ್ದರು. ಇದರಲ್ಲಿ ಮೊಣಕೈ ತನಕ ತೊಳೆಯುವುದೂ ಕೂಡಿತ್ತು.

ಅವರ ಆರೋಪಕ್ಕೆ ಉತ್ತರಿಸುವ ಬದಲು, ಯೇಸುವು ದೇವರ ನಿಯಮಗಳ ಅವರ ದುಷ್ಟ ಮತ್ತು ಸ್ವೇಚ್ಛೆಯ ಮುರಿಯುವಿಕೆಯ ಕಡೆಗೆ ಗಮನ ಸೆಳೆಯುತ್ತಾನೆ. “ನೀವು ಸಹ ನಿಮ್ಮ ಸಂಪ್ರದಾಯದ ನಿಮಿತ್ತ ದೇವರ ಆಜ್ಞೆಗಳನ್ನು ಯಾಕೆ ಮೀರುತ್ತೀರಿ?” ಇದನ್ನು ಅವನು ತಿಳಿಯಬಯಸಿದ್ದನು. “ಹೇಗಂದರೆ ತಂದೆತಾಯಿಗಳನ್ನು ಸನ್ಮಾನಿಸ ಬೇಕೆಂತಲೂ ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣದಂಡನೆ ಆಗಬೇಕೆಂತಲೂ ದೇವರು ಹೇಳಿದ್ದಾನೆ. ನೀವೂ ಯಾವನಾದರೂ ತಂದೆಯನ್ನಾಗಲಿ, ತಾಯಿಯನ್ನಾಗಲಿ ನೋಡಿ—ನಾನು ನಿನ್ನ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ದೇವರಿಗಾಗಿ ಇಟ್ಟಿದ್ದೇನೆ ಎಂದು ಹೇಳುವದಾದರೆ ಅವನಿಗೆ ತನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕಾದದ್ದಿಲ್ಲ ಅನ್ನುತ್ತೀರಿ.”

ದೇವರಿಗೆ ಕಾಣಿಕೆಯಾಗಿ ಕೊಟ್ಟಿರುವ ಹಣ, ಆಸ್ತಿಪಾಸ್ತಿ ಇಲ್ಲವೇ ಬೇರೆ ಏನೇ ಆದರೂ ಸಮರ್ಪಿಸಲ್ಪಟ್ಟಿದ್ದರೆ, ಅದು ದೇವಾಲಯಕ್ಕೆ ಸಲ್ಲತಕ್ಕದ್ದು ಮತ್ತು ಅದನ್ನು ಬೇರೆ ಉದ್ದೇಶಗಳಿಗೆ ಬಳಸಬಾರದು ಎಂದು ಫರಿಸಾಯರು ಕಲಿಸುತ್ತಿದ್ದದ್ದು ನಿಜ. ಆದರೆ ವಾಸ್ತವದಲ್ಲಿ ಸಮರ್ಪಿಸಲ್ಪಟ್ಟ ಕಾಣಿಕೆಯು ಸಮರ್ಪಿಸುವವನ ಹತೋಟಿಯಲ್ಲಿಯೇ ಇಡಲ್ಪಡುತ್ತಿತು. ಈ ರೀತಿಯಲ್ಲಿ ಮಗನು ಅವನ ಹಣ ಇಲ್ಲವೇ ಆಸ್ತಿಯ “ಕೊರ್ಬಾನ್‌”—ದೇವರಿಗೆ ಇಲ್ಲವೇ ದೇವಾಲಯಕ್ಕೆ ಸಮರ್ಪಿಸಲ್ಪಟ್ಟ ಕಾಣಿಕೆ—ಎಂದು ಕೇವಲ ಸರಳವಾಗಿ ಹೇಳುವುದರ ಮೂಲಕ, ಬಹಳ ಕಷ್ಟಕರ ಪರಿಸ್ಥಿತಿಯಲ್ಲಿರಬಹುದಾದ ಪ್ರಾಯ ಸಂದ ತನ್ನ ಹೆತ್ತವರಿಗೆ ಸಹಾಯ ಮಾಡುವ ತನ್ನ ಜವಾಬ್ದಾರಿಕೆಯನ್ನು ಸುಲಭವಾಗಿ ಜಾರಿಸಿಕೊಳ್ಳಬಹುದು.

ದೇವರ ನಿಯಮಗಳನ್ನು ಫರಿಸಾಯರು ದುಷ್ಟತನದಿಂದ ತಿರುಚುವುದರೆಡೆಗೆ ಯೋಗ್ಯವಾಗಿಯೇ ಕೋಪಗೊಂಡು ಯೇಸುವಂದದ್ದು: “ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ. ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ವಿಹಿತವಾಗಿ ಪ್ರವಾದಿಸಿದ್ದಾನೆ; ಅವನು ಬರೆದದ್ದೇನಂದರೆ—ಈ ಜನರು ಮಾತಿನಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಮನಸ್ಸು ನನಗೆ ದೂರವಾಗಿದೆ. ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಅವರು ಬೋಧಿಸುವದರಿಂದ ನನಗೆ ಭಕ್ತಿ ತೋರಿಸುವುದು ವ್ಯರ್ಥ ಎಂಬದೇ.”

ಯೇಸುವನ್ನು ಪ್ರಶ್ನಿಸಲು ಫರಿಸಾಯರಿಗೆ ಸಾಧ್ಯವಾಗುವಂತೆ ಪ್ರಾಯಶಃ ಜನಸಮೂಹವು ಅಲ್ಲಿಂದ ದೂರ ತೆರಳಿದ್ದಿರಬಹುದು. ಈಗ ಫರಿಸಾಯರನ್ನು ಯೇಸುವು ಬಲವಾಗಿ ಖಂಡಿಸಿದ್ದರ ಕಾರಣ, ಅವರಲ್ಲಿ ಪ್ರತ್ಯುತ್ತರವಿರಲಿಲ್ಲ. ಈಗ ಯೇಸು ಜನರ ಗುಂಪನ್ನು ಹತ್ತರ ಕರೆದು ಅವನಂದದ್ದು: “ಕಿವಿಗೊಟ್ಟು ಕೇಳಿರಿ, ತಿಳುಕೊಳ್ಳಿರಿ. ಬಾಯೊಳಕ್ಕೆ ಹೋಗುವಂಥದು ಮನುಷ್ಯನನ್ನು ಹೊಲೆ ಮಾಡುವದಿಲ್ಲ; ಬಾಯೊಳಗಿಂದ ಹೊರಡುವಂಥದೇ ಮನುಷ್ಯನನ್ನು ಹೊಲೆ ಮಾಡುವದು.”

ಅನಂತರ, ಅವರು ಮನೆಯೊಳಗೆ ಹೋದ ಮೇಲೆ, ಅವನ ಶಿಷ್ಯರು ಪ್ರಶ್ನಿಸುತ್ತಾರೆ: “ಫರಿಸಾಯರು ಈ ಮಾತನ್ನು ಕೇಳಿ ಬೇಸರಗೊಂಡರೆಂದು ನಿನಗೆ ಗೊತ್ತಾಯಿತೋ?”

“ಪರಲೋಕದಲ್ಲಿರುವ ನನ್ನ ತಂದೆಯು ನೆಡದೆ ಇರುವ ಗಿಡಗಳೆಲ್ಲಾ ಬೇರಿನೊಂದಿಗೆ ಕಿತ್ತುಹಾಕಲ್ಪಡುವವು. ಅವರ ಮಾತನ್ನು ಬಿಡಿರಿ. ತಾವೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸುವುದಕ್ಕೆ ಹೋಗುತ್ತಾರೆ; ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಕುಣಿಯಲ್ಲಿ ಬೀಳುವರು,” ಎಂದು ಯೇಸು ಉತ್ತರಿಸುತ್ತಾನೆ.

ಮನುಷ್ಯನನ್ನು ಹೊಲೆ ಮಾಡುವುದು ಯಾವುದು ಎಂದು ಶಿಷ್ಯರ ಪರವಾಗಿ ಪೇತ್ರನು ಕೇಳಿದಾಗ ಯೇಸು ಆಶ್ಚರ್ಯಗೊಂಡವನಂತೆ ತೋರುತ್ತದೆ. “ನಿಮಗೂ ಇನ್ನು ಬುದ್ಧಿಯಿಲ್ಲವೇ?” ಕೇಳುತ್ತಾನೆ ಯೇಸು. “ಬಾಯೊಳಕ್ಕೆ ಹೋಗುವಂಥದ್ದು ಹೊಟ್ಟೆಯಲ್ಲಿ ಸೇರಿ ಬಹಿರ್ದೇಶಕ್ಕೆ ಹೋಗುತ್ತದೆಂದು ನಿಮಗೆ ತಿಳಿಯಲಿಲ್ಲವೋ? ಆದರೆ ಬಾಯೊಳಗಿಂದ ಹೊರಡುವಂಥವುಗಳು ಹೃದಯದೊಳಗಿಂದ ಬರುತ್ತವೆ; ಇವೇ ಮನುಷ್ಯನನ್ನು ಹೊಲೆ ಮಾಡುವವು. ಹೇಗಂದರೆ ಹೃದಯದೊಳಗಿಂದ ಕೆಟ್ಟ ಆಲೋಚನೆ, ಕೊಲೆ, ಹಾದರ, ಸೂಳೆಗಾರಿಕೆ, ಕಳ್ಳತನ, ಸುಳ್ಳು ಸಾಕ್ಷಿ, ಬೈಗಳು ಹೊರಟು ಬರುತ್ತವೆ. ಮನುಷ್ಯನನ್ನು ಕೆಡಿಸುವಂಥವುಗಳು ಇವೇ; ಆದರೆ ಕೈ ತೊಳಕೊಳ್ಳದೆ ಊಟಮಾಡುವುದು ಮನುಷ್ಯನನ್ನು ಕೆಡಿಸುವುದಿಲ್ಲ.”

ಇಲ್ಲಿ ಯೇಸುವು ಸಾಮಾನ್ಯ ಆರೋಗ್ಯವಿಜ್ಞಾನವನ್ನು ನಿರುತ್ತೇಜಿಸುವುದಿಲ್ಲ. ಆಹಾರವನ್ನು ತಯಾರಿಸುವಾಗ ಇಲ್ಲವೇ ಉಣ್ಣುವಾಗ ಒಬ್ಬನು ತನ್ನ ಕೈಗಳನ್ನು ತೊಳೆದು ಕೊಳ್ಳುವ ಆವಶ್ಯಕತೆಯಿಲ್ಲ ಎಂದು ಹೇಳುವುದಿಲ್ಲ. ಬದಲಿಗೆ, ಅಶಾಸ್ತ್ರೀಯವಾದ ಸಂಪ್ರದಾಯಗಳ ಮೂಲಕ ದೇವರ ನೀತಿಯ ನಿಯಮಗಳನ್ನು ಗುಪ್ತವಾಗಿ ಮೀರಲು ಪ್ರಯತ್ನಿಸುತ್ತಿದ್ದ ಧಾರ್ಮಿಕ ಮುಂದಾಳುಗಳ ಕಪಟತನವನ್ನು ಯೇಸುವು ಖಂಡಿಸಿದನು. ಹೌದು, ಕೆಟ್ಟ ಕೆಲಸಗಳು ಮನುಷ್ಯನನ್ನು ಹೊಲೆ ಮಾಡುತ್ತವೆ ಮತ್ತು ಇವುಗಳು ಮನುಷ್ಯನ ಹೃದಯದಿಂದ ಹುಟ್ಟಿ ಬರುತ್ತವೆ ಎಂದು ಯೇಸು ತೋರಿಸಿದನು. ಯೋಹಾನ 7:1; ಧರ್ಮೋಪದೇಶಕಾಂಡ 16:16; ಮತ್ತಾಯ 15:1-20; ಮಾರ್ಕ 7:1-23; ವಿಮೋಚನಕಾಂಡ 20:12; 21:17; ಯೆಶಾಯ 29:13.

▪ ಈಗ ಯೇಸು ಯಾವ ವಿರೋಧವನ್ನು ಎದುರಿಸುತ್ತಾನೆ?

▪ ಫರಿಸಾಯರು ಯಾವ ದೋಷಾರೋಪಣೆ ಮಾಡುತ್ತಾರೆ, ಆದರೆ ಯೇಸುವಿಗನುಸಾರ, ಫರಿಸಾಯರು ಸ್ವೇಚ್ಛೆಯಿಂದ ದೇವರ ನಿಯಮಗಳನ್ನು ಹೇಗೆ ಮುರಿಯುತ್ತಿದ್ದರು?

▪ ಮನುಷ್ಯನನ್ನು ಹೊಲೆ ಮಾಡುವ ಸಂಗತಿಗಳ ಕುರಿತು ಯೇಸು ಏನನ್ನು ಪ್ರಕಟಿಸಿದನು?