ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೂರನೆಯ ಬಾರಿ ದೇವರ ವಾಣಿಯು ಕೇಳಲ್ಪಟ್ಟದ್ದು

ಮೂರನೆಯ ಬಾರಿ ದೇವರ ವಾಣಿಯು ಕೇಳಲ್ಪಟ್ಟದ್ದು

ಅಧ್ಯಾಯ 104

ಮೂರನೆಯ ಬಾರಿ ದೇವರ ವಾಣಿಯು ಕೇಳಲ್ಪಟ್ಟದ್ದು

ದೇವಾಲಯದಲ್ಲಿ ಯೇಸುವು, ಅವನು ಶೀಘ್ರದಲ್ಲಿ ಎದುರಿಸಲಿಕ್ಕಿರುವ ಮರಣದ ಕುರಿತು ಸಂಕಟ ಪಡುತ್ತಾ ಇದ್ದನು. ಅವನ ಮುಖ್ಯ ಚಿಂತೆಯು ಅವನ ತಂದೆಯ ಸತ್ಕೀರ್ತಿಯು ಹೇಗೆ ಬಾಧಿಸಲ್ಪಡಲಿದೆ ಎಂದಾಗಿತ್ತು, ಆದುದರಿಂದ ಅವನು ಪ್ರಾರ್ಥಿಸುವದು: “ತಂದೆಯೇ, ನಿನ್ನ ಹೆಸರನ್ನು ಮಹಿಮೆ ಪಡಿಸಿಕೋ.”

ಆ ಸಮಯದಲ್ಲಿ, ಪರಲೋಕದಿಂದ ಒಂದು ಗಟ್ಟಿಯಾದ ವಾಣಿಯು ಕೇಳಬಂತು, ಅದು ಪ್ರಕಟಿಸಿದ್ದು: “ಮಹಿಮೆ ಪಡಿಸಿದ್ದೇನೆ, ತಿರಿಗಿ ಮಹಿಮೆ ಪಡಿಸುವೆನು.”

ಸುತ್ತಲೂ ನಿಂತುಕೊಂಡಿದ್ದ ಜನರು ದಿಗ್ಭ್ರಾಂತಿಗೊಂಡರು. “ದೇವದೂತನು ಈತನ ಸಂಗಡ ಮಾತಾಡಿದನು,” ಎಂದು ಕೆಲವರು ಹೇಳಿದರು. ಇನ್ನಿತರರು ಗುಡುಗಿತು ಎಂದು ವಾದಿಸಿದರು. ಆದರೆ ನೈಜತೆಯಲ್ಲಿ ಅದು ಯೆಹೋವ ದೇವರು ಮಾತಾಡಿದ್ದಾಗಿತ್ತು! ಆದಾಗ್ಯೂ, ಯೇಸುವಿನ ಕುರಿತಾಗಿ ದೇವರ ವಾಣಿಯನ್ನು ಕೇಳಿದ್ದು ಇದು ಮೊದಲ ಬಾರಿಯಲ್ಲ.

ಸುಮಾರು ಮೂರುವರೆ ವರ್ಷಗಳ ಮುಂಚೆ, ಯೇಸುವಿನ ದೀಕ್ಷಾಸ್ನಾನದಲ್ಲಿ, ದೇವರು ಯೇಸುವಿನ ಕುರಿತು ಹೇಳಿದ್ದನ್ನು ಸ್ನಾನಿಕನಾದ ಯೋಹಾನನು ಕೇಳಿದ್ದನು: “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ.” ಅನಂತರ, ಇದರ ಮೊದಲಿನ ಪಸ್ಕ ಹಬ್ಬದ ನಂತರ, ಯೇಸುವು ಯಾಕೋಬ, ಯೋಹಾನ ಮತ್ತು ಪೇತ್ರನ ಮುಂದೆ ಪ್ರಕಾಶರೂಪ ಧರಿಸಿದಾಗ, ಅವರು ದೇವರು ಹೇಳಿದ್ದನ್ನು ಕೇಳಿದ್ದರು: “ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ.” ಮತ್ತು ಈಗ ಮೂರನೆಯ ಬಾರಿ, ನೈಸಾನ್‌ 10ರಲ್ಲಿ, ಯೇಸುವಿನ ಮರಣದ ನಾಲ್ಕು ದಿನಗಳ ಮೊದಲು ದೇವರ ವಾಣಿಯು ಮನುಷ್ಯರಿಂದ ಪುನಃ ಕೇಳಲ್ಪಟ್ಟಿತು. ಆದರೆ ಈ ಬಾರಿ ಯೆಹೋವನು ಮಾತಾಡಿದಾಗ, ಜನರ ಸಮೂಹವೇ ಕೇಳಶಕ್ತವಾಯಿತು!

ಯೇಸುವು ವಿವರಿಸುವದು: “ಈ ಆಕಾಶವಾಣಿಯು ನನಗಾಗಿ ಆಗಲಿಲ್ಲ; ನಿಮಗಾಗಿ ಆಯಿತು.” ಯೇಸುವು ಖಂಡಿತವಾಗಿಯೂ ದೇವರ ಮಗನೂ, ವಾಗ್ದಾನಿತ ಮೆಸ್ಸೀಯನೂ ಎಂದು ರುಜುವಾತನ್ನು ಒದಗಿಸಿತು. “ಈಗ ಈ ಲೋಕಕ್ಕೆ ತೀರ್ಪು ಆಗುತ್ತದೆ,” ಯೇಸುವು ಮುಂದರಿಸುವದು. “ಈಗ ಇಹ ಲೋಕಾಧಿಪತಿಯು ಹೊರಗೆ ನೂಕಲ್ಪಡುವನು.” ಯೇಸುವಿನ ನಂಬಿಗಸ್ತ ಜೀವಿತದ ನಮೂನೆಯ ಫಲಿತಾಂಶವಾಗಿ, ಇಹಲೋಕಾಧಿಪತಿಯಾದ, ಪಿಶಾಚನಾದ ಸೈತಾನನು “ಹೊರಗೆ ನೂಕಲ್ಪಡಲು” ಯಾ ನಾಶಹೊಂದಲು ಯೋಗ್ಯನಾಗಿರುತ್ತಾನೆಂದು ಸ್ಥಿರೀಕರಿಸಿತು.

ಸಮೀಪಿಸುತ್ತಿರುವ ಅವನ ಮರಣದ ಫಲಿತಾಂಶಗಳ ಕಡೆಗೆ ತೋರಿಸುತ್ತಾ, ಯೇಸುವು ಅಂದದ್ದು: “ಆದರೆ ನಾನು ಭೂಮಿಯಲ್ಲಿಂದ ಮೇಲಕ್ಕೆ ಎತ್ತಲ್ಪಟ್ಟಾಗ ಎಲ್ಲರನ್ನೂ ನನ್ನ ಬಳಿಗೆ ಎಳಕೊಳ್ಳುವೆನು.” ಅವನ ಮರಣವು ಯಾವುದೇ ರೀತಿಯಲ್ಲಿ ಒಂದು ಸೋಲಾಗಿರಲಿಲ್ಲ, ಬದಲು ಅದರ ಮೂಲಕ, ಅವನು ಇತರರನ್ನು ತನ್ನೆಡೆಗೆ ಎಳೆದುಕೊಳ್ಳುವನು, ಅದರಿಂದ ಅವರು ನಿತ್ಯ ಜೀವದಲ್ಲಿ ಆನಂದಿಸಲಾಗುವಂತೆ ಆಗುತ್ತದೆ.

ಆದರೆ ಜನರ ಗುಂಪು ಪ್ರತಿರೋಧಿಸುವದು: “ಕ್ರಿಸ್ತನು ಸದಾಕಾಲವೂ ಇರುತ್ತಾನೆಂದು ಧರ್ಮಶಾಸ್ತ್ರದಲ್ಲಿ ಕೇಳಿದ್ದೇವೆ; ಹಾಗಾದರೆ ಮನುಷ್ಯ ಕುಮಾರನು ಮೇಲಕ್ಕೆ ಎತ್ತಲ್ಪಡಬೇಕೆಂದು ನೀನು ಹೇಳುವದು ಹೇಗೆ? ಆ ಮನುಷ್ಯ ಕುಮಾರನು ಯಾರು?”

ದೇವರ ಸ್ವಂತ ವಾಣಿಯ ಸಹಿತ ಎಲ್ಲಾ ರುಜುವಾತುಗಳ ಹೊರತಾಗಿಯೂ, ಬಹುಮಂದಿ ಯೇಸುವು ನಿಜ ಮನುಷ್ಯ ಕುಮಾರನೂ, ವಾಗ್ದಾನಿತ ಮೆಸ್ಸೀಯನೂ ಎಂದು ನಂಬುವದಿಲ್ಲ. ಆದರೂ, ಆರು ತಿಂಗಳುಗಳಷ್ಟು ಹಿಂದೆ ಪರ್ಣ ಶಾಲೆಗಳ ಹಬ್ಬದಲ್ಲಿ ಹೇಳಿದಂತೆ, ಯೇಸುವು ಸ್ವತಃ ತನ್ನ ಕುರಿತಾಗಿ “ಬೆಳಕು” ತಾನೆಂದು ಪುನಃ ಹೇಳುತ್ತಾ, ತನ್ನನ್ನು ಆಲಿಸುವವರಿಗೆ ಉತ್ತೇಜಿಸುವದು: “ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ; ನಂಬಿದರೆ ನೀವು ಬೆಳಕಿನವರಾಗುವಿರಿ.” ಈ ಸಂಗತಿಗಳನ್ನು ಹೇಳಿದ ನಂತರ, ಯೇಸುವು ಅವರನ್ನು ಬಿಟ್ಟು ಹೋಗಿ ಅಡಗಿಕೊಳ್ಳುತ್ತಾನೆ, ಯಾಕಂದರೆ ಅವನ ಪ್ರಾಣವು ಅಪಾಯದಲ್ಲಿತ್ತೆಂಬದು ವ್ಯಕ್ತ.

ಯೇಸುವಿನಲ್ಲಿ ಯೆಹೂದ್ಯರ ನಂಬಿಕೆಯ ಕೊರತೆಯು, ‘ಸ್ವಸ್ಥತೆಯನ್ನು ಅವರು ಹೊಂದದಂತೆ ಆತನು ಜನರ ಕಣ್ಣುಗಳನ್ನು ಕುರುಡುಮಾಡಿ, ಹೃದಯವನ್ನು ಕಠಿಣಮಾಡಿದನು’ ಎಂಬ ಯೆಶಾಯನ ಮಾತುಗಳನ್ನು ನೆರವೇರಿಸಿದವು. ಯೆಹೋವನೊಂದಿಗೆ ಅವನ ಮಾನವ-ಪೂರ್ವದ ಅಸ್ತಿತ್ವದಲ್ಲಿನ ಮಹಿಮೆಯಲ್ಲಿ ಯೇಸುವಿನ ಸಹಿತ, ಯೆಹೋವನ ಸ್ವರ್ಗೀಯ ಆಸ್ಥಾನದ ದರ್ಶನವನ್ನು ಯೆಶಾಯನು ಕಂಡಿದ್ದನು. ಆದರೂ, ಯೆಶಾಯನು ಏನು ಬರೆದನೋ ಅದರ ನೆರವೇರಿಕೆಯಲ್ಲಿ ಯೆಹೂದ್ಯರು ಮೊಂಡತನದಿಂದ ಅವರ ವಾಗ್ದಾನಿತ ವಿಮೋಚಕನಾದ ಇವನ ರುಜುವಾತನ್ನು ನಿರಾಕರಿಸುತ್ತಾರೆ.

ಇನ್ನೊಂದು ಪಕ್ಕದಲ್ಲಿ, ಅಧಿಪತಿಗಳಲ್ಲಿ ಕೂಡ ಕೆಲವರು (ಯೆಹೂದ್ಯರ ಮುಖ್ಯ ನ್ಯಾಯಾಲಯ, ಸನ್ಹೇದ್ರಿನ್‌ ಸದಸ್ಯರು ಎಂದು ವ್ಯಕ್ತವಾಗುತ್ತದೆ) ನಿಜವಾಗಿಯೂ ಯೇಸುವನ್ನು ನಂಬಿದರು. ಇಂಥ ಅಧಿಪತಿಗಳಲ್ಲಿ ನಿಕೊದೇಮನು ಮತ್ತು ಅರಿಮಥಾಯದ ಯೋಸೇಫನು ಇಬ್ಬರಾಗಿದ್ದರು. ಆದರೆ ಅಧಿಪತಿಗಳು ಸದ್ಯಕ್ಕೆ ತಮ್ಮ ನಂಬಿಕೆಯನ್ನು ಬಹಿರಂಗವಾಗಿ ಹೇಳಲು, ಸಭೆಯ ಸ್ಥಾನಗಳಿಂದ ಬಹಿಷ್ಕಾರವಾದೀತೆಂದು ಅಂಜಿಕೊಂಡು ಹಿಂಜರಿದರು. ಇಂಥವರು ಎಷ್ಟೊಂದು ಸಂಗತಿಗಳನ್ನು ಕಳಕೊಳ್ಳಲಿದ್ದರು!

ಯೇಸುವು ಗಮನಿಸುತ್ತಾ ಹೋದದ್ದು: “ನನ್ನನ್ನು ನಂಬಿದವನು ನನ್ನನ್ನೇ ನಂಬುವವನಲ್ಲ; ನನ್ನನ್ನು ಕಳುಹಿಸಿಕೊಟ್ಟಾತನನ್ನು ನಂಬುವವನಾಗಿದ್ದಾನೆ. ಮತ್ತು ನನ್ನನ್ನು ನೋಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನು ನೋಡುವವನಾಗಿದ್ದಾನೆ. . . . . ಯಾವನಾದರೂ ನನ್ನ ಮಾತುಗಳನ್ನು ಕೇಳಿದರೂ ಕೈಕೊಂಡು ನಡೆಯದೆ ಹೋದರೆ ನಾನೇ ಅವನಿಗೆ ತೀರ್ಪುಮಾಡುವದಿಲ್ಲ; ಲೋಕಕ್ಕೆ ತೀರ್ಪುಮಾಡುವದಕ್ಕಾಗಿ ನಾನು ಬಂದಿಲ್ಲ; ಲೋಕವನ್ನು ರಕ್ಷಿಸುವದಕ್ಕಾಗಿ ಬಂದಿದ್ದೇನೆ. . . . ನಾನು ಆಡಿದ ಮಾತು ಅವನಿಗೆ ಕಡೇ ದಿನದಲ್ಲಿ ತೀರ್ಪುಮಾಡುವದು.”

ಮಾನವ ಕುಲದ ಲೋಕಕ್ಕೋಸ್ಕರ ಯೆಹೋವನಿಗಿದ್ದ ಪ್ರೀತಿಯು ಯೇಸುವನ್ನು ಕಳುಹಿಸುವಂತೆ ಅವನನ್ನು ನಡಿಸಿತು, ಆ ಮೂಲಕ ಅವನಲ್ಲಿ ನಂಬಿಕೆಯನ್ನಿಡುವವರು ರಕ್ಷಣೆಹೊಂದಶಕ್ತರಾಗುವರು. ಯೇಸುವು ಮಾತಾಡುವಂತೆ ದೇವರು ಆಜ್ಞಾಪಿಸಿದ ವಿಷಯಗಳಿಗೆ ಅವರು ವಿಧೇಯರಾಗುವದರ ಮೇಲೆ ಜನರು ರಕ್ಷಿಸಲ್ಪಡುವರೋ ಇಲ್ಲವೋ ಎನ್ನುವದು ಆತುಕೊಂಡಿದೆ. ನ್ಯಾಯತೀರ್ಪು “ಕಡೇದಿನದಲ್ಲಿ” ಅಂದರೆ ಕ್ರಿಸ್ತನ ಸಾವಿರ ವರ್ಷದ ಆಳಿಕ್ವೆಯಲ್ಲಿ ನಡೆಯುವದು.

ಯೇಸುವು ಇದನ್ನು ಹೇಳುವದರ ಮೂಲಕ ಸಮಾಪ್ತಿಗೊಳಿಸುತ್ತಾನೆ: “ನನ್ನಷ್ಟಕ್ಕೆ ನಾನೇ ಮಾತಾಡಿದವನಲ್ಲ; ನನ್ನನ್ನು ಕಳುಹಿಸಿಕೊಟ್ಟ ತಂದೆಯೇ—ನೀನು ಇಂಥಿಂಥದನ್ನು ಹೇಳಬೇಕು. ಹೀಗೆ ಹೀಗೆ ಮಾತಾಡಬೇಕು ಎಂಬದಾಗಿ ನನಗೆ ಆಜ್ಞೆ ಕೊಟ್ಟಿದ್ದಾನೆ. ಆತನ ಆಜ್ಞೆ ನಿತ್ಯಜೀವವಾಗಿದೆ ಎಂದು ಬಲ್ಲೆನು. ಆದದರಿಂದ ನಾನು ಮಾತಾಡುವದನ್ನೆಲ್ಲಾ ತಂದೆ ನನಗೆ ಹೇಳಿದ ಮೇರೆಗೆ ಮಾತಾಡುತ್ತೇನೆ.” ಯೋಹಾನ 12:28-50; 19:38, 39; ಮತ್ತಾಯ 3:17; 17:5; ಯೆಶಾಯ 6:1, 8-10.

▪ ಯೇಸುವಿನ ಕುರಿತಾಗಿ ಯಾವ ಮೂರು ಸಂದರ್ಭಗಳಲ್ಲಿ ದೇವರ ವಾಣಿಯು ಕೇಳಬಂತು?

▪ ಯೇಸುವಿನ ಮಹಿಮೆಯನ್ನು ಪ್ರವಾದಿ ಯೆಶಾಯನು ನೋಡಿದ್ದು ಹೇಗೆ?

▪ ಯೇಸುವಿನ ಮೇಲೆ ನಂಬಿಕೆಯನ್ನಿಟ್ಟ ಅಧಿಪತಿಗಳು ಯಾರು, ಆದರೆ ಅವರು ಬಹಿರಂಗವಾಗಿ ಹಾಗೆ ಯಾಕೆ ಹೇಳಿಕೊಳ್ಳಲಿಲ್ಲ?

▪ “ಕಡೇ ದಿನ” ಎಂದರೆ ಏನು, ಮತ್ತು ಆಗ ಜನರನ್ನು ಯಾವುದರ ಮೇಲೆ ತೀರ್ಪು ಮಾಡಲಾಗುವದು?