ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾಯಿರನ ಮನೆಯನ್ನು ಬಿಟ್ಟು ನಜರೇತಿಗೆ ಪುನಃಭೇಟಿ ನೀಡುವುದು

ಯಾಯಿರನ ಮನೆಯನ್ನು ಬಿಟ್ಟು ನಜರೇತಿಗೆ ಪುನಃಭೇಟಿ ನೀಡುವುದು

ಅಧ್ಯಾಯ 48

ಯಾಯಿರನ ಮನೆಯನ್ನು ಬಿಟ್ಟು ನಜರೇತಿಗೆ ಪುನಃಭೇಟಿ ನೀಡುವುದು

ಯೇಸುವಿಗೆ ಆ ದಿನವು ಕಾರ್ಯಮಗ್ನತೆಯದ್ದಾಗಿತ್ತು.—ದೆಕಪೊಲಿಯಿಂದ ಸಮುದ್ರ ಯಾನ, ರಕ್ತ ಕುಸುಮ ರೋಗಿ ಸ್ತ್ರೀಯನ್ನು ವಾಸಿಮಾಡಿದ್ದು ಮತ್ತು ಯಾಯಿರನ ಮಗಳನ್ನು ಪುನರುತ್ಥಾನ ಮಾಡಿದ್ದು. ಆದರೆ ಆ ದಿನವು ಇನ್ನೂ ಮುಗಿದಿರಲಿಲ್ಲ. ಯಾಯಿರನ ಮನೆಯನ್ನು ಬಿಟ್ಟಾದ ಮೇಲೆ, ಅವನನ್ನು ಹಿಂಬಾಲಿಸಿ ಇಬ್ಬರು ಕುರುಡರು “ದಾವೀದನ ಕುಮಾರನೇ ನಮ್ಮ ಕರುಣಿಸು” ಎಂದು ಕೂಗುತ್ತಿದ್ದರೆಂದು ವಿದಿತವಾಗುತ್ತದೆ.

ಯೇಸುವನ್ನು “ದಾವೀದನ ಕುಮಾರನು” ಎಂದು ಸಂಬೋಧಿಸಿದ ಮೂಲಕ, ಯೇಸುವು ದಾವೀದನ ಸಿಂಹಾಸನಕ್ಕೆ ಬಾಧ್ಯಸ್ಥನೆಂಬ ತಮ್ಮ ನಂಬಿಕೆಯನ್ನು ಈ ಪುರುಷರು ವ್ಯಕ್ತಪಡಿಸುತ್ತಿದ್ದರು, ಯಾಕಂದರೆ ಅವನು ವಾಗ್ದಾನಿತ ಮೆಸ್ಸೀಯನಾಗಿದ್ದನು. ಪ್ರಾಯಶಃ ಅವರ ತಾಳ್ಮೆಯನ್ನು ಪರೀಕ್ಷಿಸುವುದಕ್ಕಾಗಿ ಯೇಸು ಸಹಾಯಕ್ಕಾಗಿ ಅವರ ಮೊರೆಯನ್ನು ಅಲಕ್ಷ್ಯಿಸುವಂತೆ ಕಂಡನು. ಆದರೆ ಈ ಮನುಷ್ಯರು ಬಿಟ್ಟುಬಿಡುವಂತಿರಲಿಲ್ಲ. ಯೇಸು ಎಲ್ಲಿ ತಂಗಿದ್ದನೋ ಅಲ್ಲಿಗೆ ಅವರು ಅವನನ್ನು ಹಿಂಬಾಲಿಸುತ್ತಾರೆ ಮತ್ತು ಅವನು ಮನೆಯನ್ನು ಪ್ರವೇಶಿಸಿದಾಗ ಅವರೂ ಅವನೊಂದಿಗೆ ಒಳಗೆ ಹೋಗುತ್ತಾರೆ.

ಅಲ್ಲಿ ಯೇಸು ಪ್ರಶ್ನಿಸಿದ್ದು: “ನಾನಿದನ್ನು ಮಾಡಬಲ್ಲೆನೆಂದು ನೀವು ನಂಬುತ್ತೀರೋ?”

“ಹೌದು, ಸ್ವಾಮೀ, ನಂಬುತ್ತೇವೆ” ಎಂದು ಭರವಸದಿಂದ ಉತ್ತರಿಸುತ್ತರೆ ಅವರು.

ಹೀಗೆ, ಆತನು ಅವರ ಕಣ್ಣುಗಳನ್ನು ಮುಟ್ಟಿ ಅಂದದ್ದು: “ನೀವು ನಂಬಿದಂತೆ ನಿಮಗೆ ಆಗಲಿ.” ತಕ್ಷಣವೇ ಅವರು ಕಾಣಶಕ್ತರಾದರು! ಯೇಸು ಆಗ ಖಂಡಿತವಾಗಿಯೂ ಅವರಿಗೆ ಆಜ್ಞಾಪಿಸಿದ್ದು: “ಇದು ಯಾರಿಗೂ ತಿಳಿಯಬಾರದು, ನೋಡಿರಿ.” ಆದರೆ ಸಂತೋಷದಿಂದ ತುಂಬಿದ ಕಾರಣ, ಅವರು ಯೇಸುವಿನ ಅಪ್ಪಣೆಯನ್ನು ಅಲಕ್ಷ್ಯಿಸುತ್ತಾರೆ ಮತ್ತು ಅವನ ಕುರಿತಾಗಿ ದೇಶದಲ್ಲಿಲ್ಲಾ ಸುದ್ದಿಯನ್ನು ಹಬ್ಬಿಸುತ್ತಾರೆ.

ಈ ಪುರುಷರು ಹೊರಟು ಹೋಗುತ್ತಿದ್ದಾಗ, ದೆವ್ವ ಹಿಡಿದಿದ್ದ ಮೂಕನೊಬ್ಬನನ್ನು ಅವನ ಬಳಿಗೆ ತರುತ್ತಾರೆ, ಆ ದೆವ್ವ ಇವನ ಮಾತಾಡುವ ಶಕ್ತಿಯನ್ನು ಅಪಹರಿಸಿತ್ತು. ಯೇಸುವು ದೆವ್ವವನ್ನು ಬಿಡಿಸಿದ ತಕ್ಷಣ, ಆ ಮನುಷ್ಯನು ಮಾತಾಡಲು ಆರಂಭಿಸುತ್ತಾನೆ. ಈ ಅದ್ಭುತಗಳನ್ನು ನೋಡಿ ಜನರ ಗುಂಪು ಆಶ್ಚರ್ಯಪಟ್ಟು, “ಇಸ್ರಾಯೇಲ್ಯ ಜನರಲ್ಲಿ ಇಂಥ ಕಾರ್ಯವನ್ನು ಇದುವರೆಗೆ ಯಾರೂ ನೋಡಲಿಲ್ಲ” ಅನ್ನುತ್ತಾರೆ.

ಫರಿಸಾಯರು ಸಹ ಹಾಜರಿದ್ದರು. ಅವರು ಅದ್ಭುತಗಳನ್ನು ಅಲ್ಲಗಳೆಯಲಾರದೆ ಹೋದರು, ಆದರೆ ತಮ್ಮ ಕೆಟ್ಟ ಅಪನಂಬಿಕೆಯಲ್ಲಿ ಅವರು ಯೇಸುವಿನ ಮಹತ್ಕಾರ್ಯಗಳ ಮೂಲದ ಕುರಿತು ಪುನಃ ಆಪಾದನೆ ಹೊರಿಸುತ್ತಾ, “ಇವನು ದೆವ್ವಗಳ ಸಹಾಯದಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ” ಅನ್ನುತ್ತಾರೆ.

ಈ ಘಟನೆಗಳಾದ ಕೊಂಚ ಸಮಯದಲ್ಲೇ ಯೇಸು ತನ್ನ ಸ್ವಂತ ಊರಾದ ನಜರೇತಿಗೆ ಹಿಂತಿರುಗುತ್ತಾನೆ. ಈ ಸಾರಿ ಅವನೊಂದಿಗೆ ಅವನ ಶಿಷ್ಯರು ಜತೆಯಾಗಿ ಬಂದಿದ್ದರು. ಸುಮಾರು ಒಂದು ವರ್ಷದ ಹಿಂದೆ ಅವನು ಅಲ್ಲಿಯ ಸಭಾಮಂದಿರಕ್ಕೆ ಭೇಟಿನೀಡಿ ಅಲ್ಲಿ ಕಲಿಸಿದ್ದನು. ಮೊದಮೊದಲು ಅವನ ಮೆಚ್ಚು ನುಡಿಗಳೆಡೆಗೆ ಜನರು ಆಶ್ಚರ್ಯಪಟ್ಟರೂ, ಅನಂತರ ಅವನ ಬೋಧನೆಯಿಂದ ನೊಂದುಕೊಂಡು, ಅವನನ್ನು ಕೊಲ್ಲಲು ಪ್ರಯತ್ನಿಸಿದರು. ಯೇಸುವೀಗ ಕರುಣೆಯಿಂದ ತನ್ನ ಮೊದಲ ನೆರೆಯವರಿಗೆ ಸಹಾಯ ಮಾಡುವ ಇನ್ನೊಂದು ಪ್ರಯತ್ನ ಮಾಡುತ್ತಾನೆ.

ಬೇರೆ ಸ್ಥಳಗಳಲ್ಲಿ ಜನರು ಗುಂಪುಗುಂಪಾಗಿ ನೆರೆಯುತ್ತಿದ್ದರೂ, ಇಲ್ಲಿ ಅವರು ಹಾಗೆ ಮಾಡುತ್ತಿಲ್ಲವೆಂದು ತೋರುತ್ತದೆ. ಆದ್ದರಿಂದ, ಸಬ್ಬತ್ತಿನಲ್ಲಿ ಕಲಿಸಲು ಅವನು ಸಭಾಮಂದಿರಕ್ಕೆ ಹೋಗುತ್ತಾನೆ. ಅಲ್ಲಿ ನೆರೆದವರಲ್ಲಿ ಹೆಚ್ಚಿನವರು ಆಶ್ಟರ್ಯಪಡುತ್ತಾರೆ. “ಈ ಮನುಷ್ಯನಿಗೆ ಈ ಜ್ಞಾನವೂ, ಈ ಮಹತ್ಕಾರ್ಯಗಳೂ ಎಲ್ಲಿಂದ ಬಂದವು?” ಎಂದವರು ಪ್ರಶ್ನಿಸುತ್ತಾರೆ. “ಇವನು ಆ ಬಡಗಿಯ ಮಗನಲ್ಲವೇ? ಇವನ ತಾಯಿ ಮರಿಯಳೆಂಬವಳಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಇವರು ಇವನ ತಮ್ಮಂದಿರಲ್ಲವೇ? ಇವನ ತಂಗಿಯರೆಲ್ಲಾ ನಮ್ಮಲ್ಲಿ ಇದ್ದಾರಲ್ಲವೇ? ಹಾಗಾದರೆ ಇವೆಲ್ಲಾ ಇವನಿಗೆ ಎಲ್ಲಿಂದ ಬಂದಿದ್ದಾವು?”

‘ಯೇಸುವು ನಮ್ಮಂತೆಯೇ ಒಬ್ಬ ಸ್ಥಳೀಕ ಮನುಷ್ಯನು’ ಎಂದವರು ತರ್ಕಿಸುತ್ತಾರೆ. ‘ಅವನು ಬೆಳೆಯುವುದನ್ನು ನಾವು ನೋಡಿದೆವು. ಅವನ ಕುಟುಂಬ ನಮಗೆ ತಿಳಿದದೆ. ಅವನೊಬ್ಬ ಮೆಸ್ಸೀಯನಾಗುವುದು ಹೇಗೆ?’ ಹೀಗೆ ಎಲ್ಲಾ ಸಾಕ್ಷ್ಯಗಳ ನಡುವೆಯೂ—ಅವನ ಮಹತ್ತಾದ ವಿವೇಕ ಮತ್ತು ಮಹತ್ಕಾರ್ಯಗಳು—ಅವರವನನ್ನು ನಿರಾಕರಿಸುತ್ತಾರೆ. ಅವನ ಸ್ವಂತ ಸಂಬಂಧಿಕರು, ತಮ್ಮ ಆಪ್ತ ಪರಿಚಯದ ಕಾರಣ ಅವನಲ್ಲಿ ಮುಗ್ಗರಿಸಿ ಬೀಳುತ್ತಾರೆ. ಅದು ಯೇಸುವು ಈ ತೀರ್ಮಾನಕ್ಕೆ ಬರಲು ಕಾರಣವಾಯಿತು: “ಪ್ರವಾದಿಯು ಬೇರೆಲ್ಲಿ ಇದ್ದರೂ ಅವನಿಗೆ ಮರ್ಯಾದೆ ಉಂಟು. ಆದರೆ ಸ್ವದೇಶದಲ್ಲಿಯೂ ಸ್ವಂತ ಮನೆಯಲ್ಲಿಯೂ ಮಾತ್ರ ಮರ್ಯಾದೆ ಇಲ್ಲ.”

ನಿಜವಾಗಿಯೂ, ಯೇಸು ಅವರ ನಂಬಿಕೆಯ ಕೊರತೆಗಾಗಿ ಆಶ್ಚರ್ಯಪಡುತ್ತಾನೆ. ಆದುದರಿಂದ ಕೆಲವೇ ಅಸ್ವಸ್ಥರನ್ನು ಮುಟ್ಟಿ ವಾಸಿಮಾಡುತ್ತಾನೆಯೇ ಹೊರತು, ಬೇರೆ ಯಾವ ಅದ್ಭುತವನ್ನೂ ಅವನು ನಡಿಸುವುದಿಲ್ಲ. ಮತ್ತಾಯ 9:27-34; 13:54-58; ಮಾರ್ಕ 6:1-6; ಯೆಶಾಯ 9:7.

▪ “ದಾವೀದನ ಕುಮಾರನು” ಎಂದು ಯೇಸುವನ್ನು ಸಂಬೋಧಿಸಿದರ ಮೂಲಕ, ತಾವೇನು ನಂಬುತ್ತೇವೆಂದು ಕುರುಡರು ತೋರಿಸಿದರು?

▪ ಯೇಸುವಿನ ಅದ್ಭುತಗಳ ಕುರಿತು ಯಾವ ವಿವರಣೆಯನ್ನು ಫರಿಸಾಯರು ನೀಡಿದರು?

▪ ನಜರೇತಿನಲ್ಲಿರುವವರಿಗೆ ನೆರವಾಗಲು ಯೇಸು ಹಿಂದಿರುಗಿದ್ದು ಕರುಣಾಪೂರ್ಣವಾಗಿತ್ತೇಕೆ?

▪ ನಜರೇತಿನಲ್ಲಿ ಯೇಸುವಿಗೆ ಯಾವ ರೀತಿಯ ಸತ್ಕಾರ ದೊರಕಿತು ಮತ್ತು ಯಾಕೆ?