ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆರಿಕೋನಲ್ಲಿ ಯೇಸು ಕಲಿಸುವದು

ಯೆರಿಕೋನಲ್ಲಿ ಯೇಸು ಕಲಿಸುವದು

ಅಧ್ಯಾಯ 99

ಯೆರಿಕೋನಲ್ಲಿ ಯೇಸು ಕಲಿಸುವದು

ಬಲುಬೇಗನೇ ಯೇಸು ಮತ್ತು ಅವನೊಂದಿಗೆ ಪ್ರಯಾಣಮಾಡುತ್ತಿದ್ದ ಜನರ ಗುಂಪು ಯೆರಿಕೋಗೆ ಬಂದು ತಲುಪುತ್ತಾರೆ, ಈ ನಗರ ಯೆರೂಸಲೇಮಿನಿಂದ ಒಂದು ದಿನದ ಪ್ರಯಾಣದಷ್ಟು ದೂರದಲ್ಲಿ ಇತ್ತು. ಪ್ರಾಯಶಃ ಯೆರಿಕೋ ಎರಡು ನಗರವಾಗಿತ್ತು, ಹೊಸ ರೋಮನ್‌ ಶಹರದಿಂದ ಸುಮಾರು ಒಂದೂವರೆ ಕಿಲೊಮೀಟರ್‌ನಷ್ಟು ದೂರದಲ್ಲಿ ಹಳೆಯ ಯೆಹೂದಿ ನಗರವಿತ್ತು. ಜನರ ಗುಂಪು ಹಳೆಯ ನಗರದಿಂದ ಹೊರಟು, ಹೊಸ ನಗರಕ್ಕೆ ಸಮೀಪಿಸುತ್ತಿರುವಾಗ, ಇಬ್ಬರು ಕುರುಡರಾಗಿದ್ದ ಭಿಕ್ಷುಕರು ಜನಸಮೂಹದ ಗದ್ದಲವನ್ನು ಆಲಿಸುತ್ತಾರೆ. ಅವರಲ್ಲಿ ಒಬ್ಬನ ಹೆಸರು ಬಾರ್ತಿಮಾಯನು ಎಂದಾಗಿತ್ತು.

ಯೇಸುವು ಆ ಮಾರ್ಗವಾಗಿ ಹೋಗುತ್ತಾನೆಂದು ತಿಳಿದುಕೊಂಡು, ಬಾರ್ತಿಮಾಯನೂ ಅವನ ಸಂಗಡಿಗನೂ ಕೂಗಿಕೊಳ್ಳುವದಕ್ಕೆ ಪ್ರಾರಂಭಿಸಿದರು: “ಸ್ವಾಮೀ, ದಾವೀದನ ಕುಮಾರನೇ, ನಮ್ಮನ್ನು ಕರುಣಿಸು!” ಆಗ ಗುಂಪಿನವರು ಗದರಿಸುತ್ತಾ ಸುಮ್ಮನಿರುವಂತೆ ಹೇಳಿದಾಗ, ಅವರು ಇನ್ನಷ್ಟು ಹೆಚ್ಚು ಗಟ್ಟಿಯಾಗಿ ಕೂಗಲಾರಂಬಿಸಿದರು: “ಸ್ವಾಮೀ, ದಾವೀದನ ಕುಮಾರನೇ, ನಮ್ಮನ್ನು ಕರುಣಿಸು!”

ಗದ್ದಲವನ್ನು ಗಮನಿಸಿ, ಯೇಸುವು ನಿಲ್ಲುತ್ತಾನೆ. ಅವನನ್ನು ಕರೆಯುವವರನ್ನು ತನ್ನ ಹತ್ತಿರಕ್ಕೆ ತರುವಂತೆ ಅವನೊಂದಿಗೆ ಇರುವವರಿಗೆ ಅಪ್ಪಣೆ ಕೊಡುತ್ತಾನೆ. ಕುರುಡ ಭಿಕ್ಷಗಾರರನ್ನು ಕರತರಲು ಹೋದವರು ಒಬ್ಬನೊಡನೆ ಹೇಳಿದರು: “ಧೈರ್ಯವಿರಲಿ, ಏಳು, ನಿನ್ನನ್ನು ಕರೆಯುತ್ತಾನೆ.” ಮಿತಿಯಿಲ್ಲದ ಉತ್ಸುಕತೆಯಿಂದ ಆ ಕುರುಡ ಮನುಷ್ಯನು ತನ್ನ ಹೊರಹೊದಿಕೆಯನ್ನು ತೆಗೆದು ಹಾಕಿ ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದು ಅಡ್ಡಬೀಳುತ್ತಾನೆ.

“ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ?” ಯೇಸುವು ಕೇಳುತ್ತಾನೆ.

“ನಮಗೆ ಕಣ್ಣುಬರುವಂತೆ ಮಾಡಬೇಕು, ಸ್ವಾಮೀ” ಎಂದು ಇಬ್ಬರು ಕುರುಡರೂ ಬೇಡುತ್ತಾರೆ.

ಕನಿಕರ ಪಟ್ಟು, ಯೇಸುವು ಅವರ ಕಣ್ಣುಗಳನ್ನು ಸ್ಪರ್ಶಿಸುತ್ತಾನೆ. ಮಾರ್ಕನ ದಾಖಲೆಗನುಸಾರವಾಗಿ, ಯೇಸುವು ಅವರಲ್ಲಿ ಒಬ್ಬನಿಗೆ ಹೇಳುವದು: “ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿ ಅದೆ.” ತಕ್ಷಣವೇ ಕುರುಡ ಭಿಕ್ಷಗಾರರು ದೃಷ್ಟಿಯನ್ನು ಪಡೆಯುತ್ತಾರೆ ಮತ್ತು ನಿಸ್ಸಂದೇಹವಾಗಿ ಅವರಿಬ್ಬರೂ ದೇವರನ್ನು ಸ್ತುತಿಸಲು ಆರಂಭಿಸಿದರು ಎನ್ನುವದರಲ್ಲಿ ಸಂದೇಹವಿಲ್ಲ. ಜನರೆಲ್ಲರೂ ನಡೆದ ಸಂಗತಿಯನ್ನು ನೋಡಿ, ಅವರು ಕೂಡ ದೇವರಿಗೆ ಸ್ತುತಿಯನ್ನು ಸಲ್ಲಿಸುತ್ತಾರೆ. ತಡಮಾಡದೆ, ಬಾರ್ತಿಮಾಯನು ಮತ್ತು ಅವನ ಸಂಗಡಿಗನು ಯೇಸುವನ್ನು ಹಿಂಬಾಲಿಸಿದರು.

ಯೇಸು ಯೆರಿಕೋವನ್ನು ದಾಟಿ ಹೋಗುತ್ತಿರುವಾಗ, ಜನಸಂದಣಿಯು ಬಹಳವಾಗಿತ್ತು. ಕುರುಡರನ್ನು ವಾಸಿಮಾಡಿದವನನ್ನು ಕಾಣಲು ಪ್ರತಿಯೊಬ್ಬನೂ ಬಯಸಿದನು. ಎಲ್ಲಾ ಕಡೆಗಳಿಂದ ಜನರು ಒತ್ತಿ ಯೇಸುವಿನ ಬಳಿಗೆ ಬರುತ್ತಿದ್ದುದರಿಂದ, ಕೆಲವರಿಗೆ ಅವನನ್ನು ದೃಷ್ಟಿಸಿ ನೋಡಲು ಆಗುತ್ತಿರಲಿಲ್ಲ. ಇವರಲ್ಲಿ ಯೆರಿಕೋವಿನ ಸುತ್ತುಮುತ್ತಲಿನ ಸುಂಕದವರ ಮುಖ್ಯಸ್ಥನಾಗಿದ್ದ ಜಕ್ಕಾಯನು ಒಬ್ಬನು. ನಡೆಯುತ್ತಿರುವದೇನು ಎಂದು ಕಾಣಲು ಅವನಿಗೆ ಆಗುತ್ತಿರಲಿಲ್ಲ ಯಾಕಂದರೆ ಅವನು ಬಹಳ ಗಿಡ್ಡನಾಗಿದ್ದನು.

ಆದುದರಿಂದ ಜಕ್ಕಾಯನು ಮುಂದಕ್ಕೆ ಓಡಿ ಯೇಸುವು ಬರುತ್ತಿರುವ ಮಾರ್ಗದಲ್ಲಿದ್ದ ಒಂದು ಆಲದ ಮರವನ್ನು ಹತ್ತಿ ಕೂತುಕೊಳ್ಳುತ್ತಾನೆ. ಈ ಆಯಕಟ್ಟಿನ ಸ್ಥಳದಿಂದ ಅವನಿಗೆ ಎಲ್ಲಾ ಸಂಗತಿಗಳ ನೋಟವು ಚೆನ್ನಾಗಿ ತೋರುತ್ತಿತ್ತು. ಜನರ ಗುಂಪು ಬಂದಷ್ಟಕ್ಕೆ, ಯೇಸುವು ಮೇಲೆ ಮರಕ್ಕೆ ನೋಡಿ, ಕರೆಯುವದು: “ಜಕ್ಕಾಯನೇ, ತಟ್ಟನೆ ಇಳಿದು ಬಾ, ನಾನು ಈ ಹೊತ್ತು ನಿನ್ನ ಮನೆಯಲ್ಲಿ ಇಳಿದು ಕೊಳ್ಳಬೇಕು.” ಜಕ್ಕಾಯನು ಸಂತೋಷದಿಂದ ತಟ್ಟನೆ ಇಳಿದು ಬಂದು, ಅವನ ಈ ಪ್ರಖ್ಯಾತ ಸಂದರ್ಶಕನಿಗೆ ವಸ್ತುಗಳನ್ನು ಸಿದ್ಧಗೊಳಿಸಲು ಮನೆಗೆ ಧಾವಿಸುತ್ತಾನೆ.

ಆದಾಗ್ಯೂ, ಸಂಭವಿಸುತ್ತಿರುವದನ್ನು ಜನರು ನೋಡಲಾಗಿ, ಅವರು ಗುಣುಗುಟ್ಟಲಾರಂಭಿಸಿದರು. ಅಂಥ ಮನುಷ್ಯನ ಅತಿಥಿಯಾಗಿ ಯೇಸುವು ಇರುವದು ಅಯೋಗ್ಯವೆಂದು ಅವರು ಎಣಿಸಿದರು. ಅವನ ಸುಂಕ ವಸೂಲಿಯ ವ್ಯವಹಾರದಲ್ಲಿ ಅಪ್ರಾಮಾಣಿಕವಾಗಿ ಹಣವನ್ನು ದೋಚುವುದರ ಮೂಲಕ ಜಕ್ಕಾಯನು ಐಶ್ವರ್ಯವಂತನಾಗಿದ್ದನು.

ಬಹುಮಂದಿ ಹಿಂಬಾಲಿಸುತ್ತಾರೆ ಮತ್ತು ಜಕ್ಕಾಯನ ಮನೆಯನ್ನು ಯೇಸುವು ಪ್ರವೇಶಿಸುವಾಗ, ಅವರು ದೂರುತ್ತಾರೆ: “ಈತನು ಪಾಪಿಯಾಗಿರುವವನ ಬಳಿಯಲ್ಲಿ ಇಳುಕೊಳ್ಳುವದಕ್ಕೆ ಹೋಗಿದ್ದಾನೆ.” ಆದರೂ ಜಕ್ಕಾಯನನ್ನು ಪಶ್ಚಾತ್ತಾಪಪಡಬಹುದಾದ ಒಬ್ಬ ವ್ಯಕ್ತಿಯೋಪಾದಿ ಯೇಸುವು ವೀಕ್ಷೆಸುತ್ತಾನೆ. ಮತ್ತು ಯೇಸುವಿಗೆ ಆಶಾಭಂಗವಾಗಲಿಲ್ಲ, ಯಾಕಂದರೆ ಜಕ್ಕಾಯನು ಎದ್ದು ನಿಂತುಕೊಂಡು ಪ್ರಕಟಿಸುವದು: “ಸ್ವಾಮೀ, ನೋಡು, ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ; ಮತ್ತು ನಾನು ಅನ್ಯಾಯವಾಗಿ ಯಾರಿಂದ ಏನಾದರೂ ಎಳಕೊಂಡದ್ದೇಯಾದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ.”

ಜಕ್ಕಾಯನು ತನ್ನ ಪಶ್ಚಾತ್ತಾಪವು ಅಪ್ಪಟವಾದದ್ದು ಎಂಬುದನ್ನು ಬಡವರಿಗೆ ಅವನ ಸೊತ್ತುಗಳ ಅರ್ಧವನ್ನು ದಾನಮಾಡುವದರ ಮೂಲಕ ಮತ್ತು ಉಳಿದ ಅರ್ಧವನ್ನು, ಅವನು ಯಾರಿಗೆ ಮೋಸ ಮಾಡಿದ್ದನೋ ಅವರಿಗೆ ಹಿಂದಕ್ಕೆ ಕೊಡುವದರಿಂದ ರುಜುಮಾಡುತ್ತಾನೆ. ಈ ವ್ಯಕ್ತಿಗಳಿಗೆ ಎಷ್ಟು ಕೊಡಬೇಕೆಂಬದನ್ನು ಅವನು ಸುಂಕ ವಸೂಲಿಯ ದಾಖಲೆಗಳನ್ನು ಪರೀಕ್ಷಿಸುವದರ ಮೂಲಕ ಲೆಕ್ಕ ಮಾಡಲು ಸಾಧ್ಯವಿದೆ. ದೇವರ ನಿಯಮಶಾಸ್ತ್ರಕ್ಕನುಗುಣವಾಗಿ, ಹೀಗೆ ನಾಲ್ಕು ಪಟ್ಟು ಹಿಂದಕ್ಕೆ ಕೊಡುತ್ತೇನೆಂದು ಅವನು ಆಣೆಯಿಡುತ್ತಾನೆ: ‘ಒಬ್ಬನು ಒಂದು ಕುರಿಯನ್ನು ಕಳವು ಮಾಡಿದರೆ, ಅವನು ಕುರಿಗೆ ಪ್ರತಿಯಾಗಿ ನಾಲ್ಕು ಕುರಿಗಳನ್ನು ನಷ್ಟಭರ್ತಿ ಮಾಡಿಕೊಡಬೇಕು.’

ಅವನ ಸೊತ್ತುಗಳನ್ನು ಹಂಚಿಬಿಡುವ ಕ್ರಮದ ಜಕ್ಕಾಯನ ವಾಗ್ದಾನದಿಂದ ಯೇಸುವಿಗೆ ಸಂತೋಷವಾಯಿತು, ಅವನನ್ನುವದು: “ಈ ಹೊತ್ತು ಈ ಮನೆಗೆ ರಕ್ಷಣೆಯಾಯಿತು; ಇವನು ಸಹ ಅಬ್ರಹಾಮನ ವಂಶಿಕನಲ್ಲವೇ. ಮನುಷ್ಯ ಕುಮಾರನು ಕೆಟ್ಟು ಹೋಗಿರುವದನ್ನು ಹುಡುಕಿ ರಕ್ಷಿಸುವದಕ್ಕೆ ಬಂದನು.”

ಇತ್ತೇಚಿಗೆ, ‘ಕಳೆದು ಹೋದ’ ಅವನ ಕಥನದಲ್ಲಿ, ಪೋಲಿ ಹೋಗಿದ್ದ ಮಗನ ಸನ್ನಿವೇಶವನ್ನು ಯೇಸುವು ಉದಾಹರಿಸಿದ್ದನು. ಕಳೆದು ಹೋದ ಒಬ್ಬನು ಕಂಡುಕೊಳ್ಳಲ್ಪಟ್ಟ ನೈಜ ಜೀವನ ಉದಾಹರಣೆಯು ಈಗ ನಮಗಿರುತ್ತದೆ. ಜಕ್ಕಾಯನಂಥ ವ್ಯಕ್ತಿಗಳ ಕಡೆಗೆ ಯೇಸುವು ಗಮನ ಕೊಡುವುದರ ಕುರಿತು ಧಾರ್ಮಿಕ ಮುಖಂಡರುಗಳು ಮತ್ತು ಅವರನ್ನು ಹಿಂಬಾಲಿಸುವವರು ಗುಣುಗುಟ್ಟುತ್ತಾ, ದೂರುವುದಾದರೂ, ಅಬ್ರಹಾಮನ ಕಳೆದುಹೋದ ಈ ಪುತ್ರರುಗಳನ್ನು ಹುಡುಕುತ್ತಾ ಅವರನ್ನು ಪುನಃ ಸ್ಥಾಪಿಸುವದನ್ನು ಯೇಸುವು ಮುಂದರಿಸುತ್ತಾನೆ. ಮತ್ತಾಯ 20:29-34; ಮಾರ್ಕ 10:46-52; ಲೂಕ 18:35–19:10; ವಿಮೋಚನಕಾಂಡ 22:1.

▪ ಯೇಸುವು ಕುರುಡ ಭಿಕ್ಷಗಾರರನ್ನು ಪ್ರಾಯಶಃ ಎಲ್ಲಿ ಭೇಟಿಯಾದನು, ಮತ್ತು ಅವನು ಅವರಿಗಾಗಿ ಏನು ಮಾಡಿದನು?

▪ ಜಕ್ಕಾಯನು ಯಾರು, ಮತ್ತು ಅವನು ಮರವನ್ನು ಹತ್ತಿ ಕೂತದ್ದೇಕೆ?

▪ ಜಕ್ಕಾಯನು ತನ್ನ ಪಶ್ಚಾತ್ತಾಪವನ್ನು ರುಜುಪಡಿಸಿದ್ದು ಹೇಗೆ?

▪ ಜಕ್ಕಾಯನೊಂದಿಗಿನ ಯೇಸುವಿನ ವರ್ತನೆಯಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?