ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆರೂಸಲೇಮಿಗೆ ಪ್ರಯಾಣಗಳು

ಯೆರೂಸಲೇಮಿಗೆ ಪ್ರಯಾಣಗಳು

ಅಧ್ಯಾಯ 10

ಯೆರೂಸಲೇಮಿಗೆ ಪ್ರಯಾಣಗಳು

ವಸಂತ ಋತುವು ಬಂದಿದೆ. ಇದು ಯೋಸೇಫನ ಕುಟುಂಬಕ್ಕೆ ಸ್ನೇಹಿತರು ಮತ್ತು ಸಂಬಂಧಿಕರೊಡನೆ ಯೆರೂಸಲೇಮಿನಲ್ಲಿ ಪಸ್ಕವನ್ನು ಆಚರಿಸುವ ವಾರ್ಷಿಕ ವಸಂತಕಾಲದ ಪ್ರಯಾಣದ ಸಮಯವಾಗಿತ್ತು. ಅವರ 100 ಕಿಲೊಮೀಟರ್‌ ದೂರದ ಪ್ರಯಾಣಕ್ಕಾಗಿ ಅವರು ಹೊರಡುವಾಗ ಅಲ್ಲಿ ಸಾಮಾನ್ಯವಾದ ಉತ್ಸುಕತೆಯು ಇತ್ತು. ಯೇಸುವಿಗೆ ಈಗ 12 ವಯಸ್ಸು ಮತ್ತು ಅವನು ವಿಶೇಷ ಅಭಿರುಚಿಯಿಂದ ಹಬ್ಬವನ್ನು ಎದುರುನೋಡುತ್ತಿದ್ದನು.

ಯೇಸುವಿಗೆ ಮತ್ತು ಅವನ ಕುಟುಂಬಕ್ಕೆ ಪಸ್ಕವು ಕೇವಲ ಒಂದು ದಿನದ ಸಂಗತಿಯಲ್ಲ. ಅವರು ಅನಂತರದ 7 ದಿನಗಳ ಹುಳಿಯಿಲ್ಲದ ರೊಟ್ಟಿಗಳ ಹಬ್ಬಕ್ಕೆ ನಿಲ್ಲುತ್ತಿದ್ದರು ಮತ್ತು ಅದನ್ನು ಪಸ್ಕ ಪರ್ವದ ಒಂದು ಭಾಗವೆಂದು ಪರಿಗಣಿಸುತ್ತಿದ್ದರು. ಈ ರೀತಿ ಅವರ ಇಡೀ ಪ್ರಯಾಣವು, ನಜರೇತಿನ ಅವರ ಮನೆಯಿಂದ ಹಿಡಿದು ಯೆರೂಸಲೇಮಿನಲ್ಲಿ ನಿಲ್ಲುತ್ತಿದ್ದ ಸಮಯವನ್ನು ಕೂಡಿಸಿದರೆ ಸುಮಾರು ಎರಡು ವಾರಗಳಷ್ಟು ಆಗುತ್ತಿತ್ತು. ಆದರೆ ಯೇಸುವನ್ನು ಒಳಗೂಡಿದ ಒಂದು ವಿಷಯದಿಂದಾಗಿ ಈ ವರ್ಷ ಸ್ವಲ್ಪ ಹೆಚ್ಚು ಸಮಯವನ್ನು ತೆಗೆದು ಕೊಂಡಿತು.

ಯೆರೂಸಲೇಮಿನಿಂದ ಹಿಂದಿರುಗುವಾಗ, ಸಮಸ್ಯೆಯು ಬೆಳಕಿಗೆ ಬರುತ್ತದೆ. ಯೇಸುವು ಜತೆ ಸಂಬಂಧಿಕರ ಅಥವಾ ಗೆಳೆಯರ ಗುಂಪಿನಲ್ಲಿದ್ದಾನೆ ಎಂದು ಯೋಸೇಫನು ಮತ್ತು ಮರಿಯಳು ಭಾವಿಸುತ್ತಾರೆ. ಈಗ ಕತ್ತಲಾದಾಗ ಅವರು ಒಂದೆಡೆ ನಿಂತರು, ಯೇಸುವು ಕಾಣಿಸುವದಿಲ್ಲ. ಆದ್ದರಿಂದ ತಮ್ಮ ಸಹ ಪ್ರಯಾಣಿಕರೊಂದಿಗೆ ಅವನನ್ನು ಹುಡುಕಲು ಹೋಗುತ್ತಾರೆ. ಅವನು ಎಲ್ಲಿಯೂ ಸಿಗಲಿಲ್ಲ. ಆದುದರಿಂದ ಯೋಸೇಫನು ಮತ್ತು ಮರಿಯಳು ಅವನನ್ನು ಹುಡುಕಲು ಪುನಃ ಯೆರೂಸಲೇಮಿಗೆ ಹಿಂತೆರಳುತ್ತಾರೆ.

ಇಡೀ ದಿವಸ ಅವರು ಹುಡುಕುತ್ತಾರೆ, ಆದರೂ ಫಲಕಾರಿಯಾಗಲಿಲ್ಲ. ಎರಡನೆಯ ದಿನದಲ್ಲಿಯೂ ಅವರು ಅವನನ್ನು ಕಾಣಲಿಲ್ಲ. ಕೊನೆಗೆ, ಮೂರನೆಯ ದಿನ ಅವರು ದೇವಾಲಯಕ್ಕೆ ಹೋಗುತ್ತಾರೆ. ಅಲ್ಲಿ ಅದರ ಸಭಾಂಗಣಗಳಲ್ಲೊಂದರಲ್ಲಿ ಯೆಹೂದಿ ಬೋಧಕರ ನಡುವೆ ಯೇಸುವು ಕುಳಿತು ಕೊಂಡು, ಅವರಿಗೆ ಕಿವಿಗೊಡುತ್ತಾ ಮತ್ತು ಪ್ರಶ್ನಿಸುತ್ತಾ ಇರುವದನ್ನು ಅವರು ಕಾಣುತ್ತಾರೆ.

“ಕಂದಾ, ನೀನು ನಮಗೆ ಯಾಕೆ ಹೀಗೆ ಮಾಡಿದಿ?” ಎಂದು ಮರಿಯಳು ವಿಚಾರಿಸುತ್ತಾಳೆ. “ನಿನ್ನ ತಂದೆಯೂ, ನಾನೂ ಎಷ್ಟೋ ತಳಮಳಗೊಂಡು ನಿನ್ನನ್ನು ಹುಡುಕುತ್ತಾ ಬಂದೆವಲ್ಲಾ.”

ಅವನನ್ನು ಎಲ್ಲಿ ಕಂಡುಕೊಳ್ಳಬಹುದಿತ್ತು ಎಂದು ಅವರಿಗೆ ಗೊತ್ತಿಲ್ಲದಿರುವದು ಯೇಸುವಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ. “ಯಾಕೆ ನೀವು ನನ್ನನ್ನು ಹುಡುಕಿದ್ದೇನು?” ಎಂದವನು ಕೇಳುತ್ತಾನೆ. “ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದದ್ದು ನಿಮಗೆ ತಿಳಿಯಲಿಲ್ಲವೇ?”

ತನ್ನ ಹೆತ್ತವರು ಇದನ್ನು ಯಾಕೆ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಯೇಸುವಿಗೆ ತಿಳಿಯಲು ಸಾಧ್ಯವಾಗಲಿಲ್ಲ. ತದನಂತರ, ಯೇಸುವು ತನ್ನ ಹೆತ್ತವರೊಂದಿಗೆ ಮನೆಗೆ ಹಿಂತಿರುಗುತ್ತಾನೆ ಮತ್ತು ಅವರಿಗೆ ಅಧೀನರಾಗುವದನ್ನು ಮುಂದುವರಿಸುತ್ತಾನೆ. ಅವನು ವಿವೇಕದಲ್ಲಿಯೂ, ದೇಹ ಬಲದಲ್ಲಿಯೂ ಮತ್ತು ದೇವರೊಂದಿಗಿನ ಮತ್ತು ಮನುಷ್ಯರೊಂದಿಗಿನ ಮೆಚ್ಚಿಕೆಯಲ್ಲಿ ವೃದ್ಧಿಯಾಗುತ್ತಾ ಹೋದನು. ಹೌದು, ತನ್ನ ಬಾಲ್ಯದಿಂದಲೇ ಯೇಸುವು ಕೇವಲ ಆತ್ಮಿಕ ವಿಷಯಗಳನ್ನು ಹುಡುಕುವದರಲ್ಲಿ ಮಾತ್ರವಲ್ಲ, ತನ್ನ ಹೆತ್ತವರಿಗೆ ಮರ್ಯಾದೆ ತೋರಿಸುವದರಲ್ಲಿಯೂ ಒಂದು ಉತ್ತಮ ಮಾದರಿಯನ್ನು ಇಡುತ್ತಾನೆ. ಲೂಕ 2:40-52; 22:7.

▪ ವಸಂತಕಾಲದ ಯಾವ ಪ್ರಯಾಣವನ್ನು ಯೇಸುವು ತನ್ನ ಕುಟುಂಬದೊಂದಿಗೆ ಕ್ರಮವಾಗಿ ಮಾಡುತ್ತಿದ್ದನು, ಮತ್ತು ಅದು ಎಷ್ಟು ದೀರ್ಘ ಸಮಯದ್ದಾಗಿತ್ತು?

▪ ಯೇಸುವು 12 ವರ್ಷದವನಾಗಿದ್ದಾಗ ಅವರು ಮಾಡಿದ ಪ್ರಯಾಣದಲ್ಲಿ ಏನು ಸಂಭವಿಸಿತು?

▪ ಯೇಸುವು ಇಂದಿನ ಯುವಕರಿಗೆ ಯಾವ ಒಂದು ಉತ್ತಮ ಮಾದರಿಯನ್ನು ಇಟ್ಟಿರುತ್ತಾನೆ?