ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಆರಾಧನೆಗಾಗಿ ಅಭಿಮಾನ

ಯೆಹೋವನ ಆರಾಧನೆಗಾಗಿ ಅಭಿಮಾನ

ಅಧ್ಯಾಯ 16

ಯೆಹೋವನ ಆರಾಧನೆಗಾಗಿ ಅಭಿಮಾನ

ಯೇಸುವಿನ ಮಲತಮ್ಮಂದಿರು—ಮರಿಯಳ ಇತರ ಪುತ್ರರು—ಯಾಕೋಬ, ಯೋಸೇಫ, ಸೀಮೋನ ಮತ್ತು ಯೂದರಾಗಿದ್ದರು. ಯೇಸು ಮತ್ತು ಅವನ ಶಿಷ್ಯರೊಂದಿಗೆ ಕಪೆರ್ನೌಮಿಗೆ ಈ ಪ್ರಯಾಣವನ್ನು ಮಾಡುವ ಮೊದಲು, ಕುಟುಂಬವು ತಮಗೆ ಬೇಕಾಗಿರುವ ವಸ್ತುಗಳನ್ನು ಕಟ್ಟಿ ಕೊಳ್ಳಲಿಕ್ಕಾಗಿ, ಪ್ರಾಯಶಃ ನಜರೇತಿನಲ್ಲಿದ್ದ ಅವರ ಮನೆಯಲ್ಲಿ ತಂಗಿರಬೇಕು.

ಆದರೆ ಕಾನಾದಲ್ಲಿ, ನಜರೇತಿನಲ್ಲಿ ಯಾ ಗಲಿಲಾಯದ ಬೆಟ್ಟ ಪ್ರಾಂತ್ಯದ ಇತರ ಕೆಲವು ಕಡೆಗಳಲ್ಲಿ ತನ್ನ ಶುಶ್ರೂಷೆಯನ್ನು ಮುಂದುವರಿಸುವ ಬದಲು ಯೇಸುವು ಕಪೆರ್ನೌಮಿಗೆ ಯಾಕೆ ಹೋದನು? ಒಂದು ಕಾರಣವು, ಕಪೆರ್ನೌಮ್‌ ಒಂದು ಅಧಿಕ ಪ್ರಮುಖ ಸ್ಥಾನದಲ್ಲಿ ಇದ್ದದ್ದು ಮತ್ತು ದೊಡ್ಡ ನಗರವಾಗಿದದ್ದರಿಂದಲೇ ಎಂದು ವಿದಿತವಾಗುತ್ತದೆ. ಅಲ್ಲದೇ, ಯೇಸುವು ಪಡೆದ ಹೊಸ ಶಿಷ್ಯರಲ್ಲಿ ಹೆಚ್ಚಿನವರು ಕಪೆರ್ನೌಮಿನಲ್ಲಿ ಇಲ್ಲವೇ ಅದರ ಸಮೀಪದಲ್ಲಿ ವಾಸಿಸುತ್ತಿದ್ದರಿಂದ, ಅವನಿಂದ ತರಬೇತಿಯನ್ನು ಪಡೆಯಲು ಅವರು ತಮ್ಮ ಮನೆಗಳನ್ನು ತೊರೆದು ಬರುವ ಜರೂರಿಯಿರಲಿಲ್ಲ.

ಕಪೆರ್ನೌಮಿನಲ್ಲಿ ಅವನು ಉಳಿದಾಗ, ಯೇಸುವು ಕೆಲವು ಮಹತ್ಕಾರ್ಯಗಳನ್ನು ಮಾಡಿದ್ದನೆಂಬುದು, ಅವನು ತಾನೇ ಕೆಲವು ತಿಂಗಳುಗಳ ನಂತರ ನುಡಿದ ಮಾತುಗಳಿಂದ ರುಜುವಾಗುತ್ತದೆ. ಆದರೆ ಬಲುಬೇಗನೆ ಯೇಸುವು ಮತ್ತು ಅವನ ಸಂಗಡಿಗರು ಪುನಃ ಪ್ರಯಾಣವನ್ನು ಕೈಗೊಂಡರು. ಅದು ವಸಂತಕಾಲವಾಗಿತ್ತು ಮತ್ತು ಸಾ.ಶ. 30ರ ಪಸ್ಕ ಹಬ್ಬವನ್ನು ಆಚರಿಸಲು ಅವರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿದ್ದರು. ಅಲ್ಲಿದ್ದಾಗ, ಶಿಷ್ಯರು ಯೇಸುವಿನಲ್ಲಿ ಈ ಹಿಂದೆ ಪ್ರಾಯಶಃ ಎಂದೂ ನೋಡಿರದ ಸಂಗತಿಯನ್ನು ನೋಡಲಿದ್ದರು.

ದೇವರ ನಿಯಮಶಾಸ್ತ್ರಕ್ಕನುಸಾರವಾಗಿ, ಇಸ್ರಾಯೇಲ್ಯರು ಪ್ರಾಣಿಗಳ ಯಜ್ಞಗಳನ್ನು ಅರ್ಪಿಸಬೇಕಾಗಿತ್ತು. ಆದುದರಿಂದ, ಅವರ ಅನುಕೂಲತೆಗಾಗಿ ವ್ಯಾಪಾರಿಗಳು ಯೆರೂಸಲೇಮಿನಲ್ಲಿ ಪ್ರಾಣಿಗಳನ್ನು ಯಾ ಪಕ್ಷಿಗಳನ್ನು ಮಾರುತ್ತಿದ್ದರು. ಆದರೆ ಅದನ್ನು ದೇವಾಲಯದೊಳಗೆಯೇ ಮಾರುತ್ತಿದ್ದರು ಮತ್ತು ಅದರ ಮೇಲೆ ಹೆಚ್ಚು ಹಣ ಹೊರಿಸಿ, ಅವರು ಜನರಿಗೆ ಮೋಸ ಮಾಡುತ್ತಿದ್ದರು.

ಧರ್ಮಕ್ರೋಧವುಳ್ಳವನಾಗಿ, ಯೇಸುವು ಹಗ್ಗದಿಂದ ಕೊರಡೆ ಮಾಡಿ, ಮಾರುವವರನ್ನು ಅಲ್ಲಿಂದ ಹೊರಗಟ್ಟುತ್ತಾನೆ. ಚಿನಿವಾರರ ರೊಕ್ಕವನ್ನು ಚೆಲ್ಲಿ ಮೇಜುಗಳನ್ನು ಕೆಡವಿ ಹಾಕುತ್ತಾನೆ. “ಇವುಗಳನ್ನು ಇಲ್ಲಿಂದ ತಕ್ಕೊಂಡು ಹೋಗಿರಿ!” ಎಂದು ಪಾರಿವಾಳ ಮಾರುವವರಿಗೆ ಕೂಗಿಹೇಳುತ್ತಾನೆ. “ನನ್ನ ತಂದೆಯ ಮನೆಯನ್ನು ಸಂತೆ ಮಾಡಬೇಡಿರಿ!”

ಯೇಸುವಿನ ಶಿಷ್ಯರು ಇದನ್ನು ನೋಡಿದಾಗ, ದೇವರ ಕುಮಾರನ ಕುರಿತಾದ ಒಂದು ಪ್ರವಾದನೆಯು ಅವರ ನೆನಪಿಗೆ ಬರುತ್ತದೆ: “ನಿನ್ನ ಆಲಯಾಭಿಮಾನವು ಬೆಂಕಿಯಂತೆ ನನ್ನನ್ನು ದಹಿಸಲಿದೆ.” ಆದರೆ ಯೆಹೂದ್ಯರು ಪ್ರಶ್ನಿಸುವದು: “ನಿನಗೆ ಇದನ್ನೆಲ್ಲಾ ಮಾಡುವದರಿಂದ, ನಮಗೆ ನೀನು ಯಾವ ಸೂಚಕಕಾರ್ಯವನ್ನು ತೋರಿಸುತ್ತೀ?” ಯೇಸುವು ಉತ್ತರಿಸುವದು: “ಈ ದೇವಾಲಯವನ್ನು ಕೆಡವಿರಿ, ಮತ್ತು ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು.”

ಯೇಸುವು ಅಕ್ಷರಾರ್ಥವಾದ ದೇವಾಲಯದ ಕುರಿತು ಮಾತಾಡುತ್ತಾನೆ ಎಂದು ಯೆಹೂದ್ಯರು ಎಣಿಸಿದರು, ಆದುದರಿಂದ ಅವರು ಕೇಳಿದ್ದು: “ಈ ದೇವಾಲಯವನ್ನು ಕಟ್ಟಲು ನಾಲ್ವತ್ತಾರು ವರುಷಗಳು ಹಿಡಿದವು, ಮತ್ತು ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವಿಯೋ?” ಆದಾಗ್ಯೂ, ಯೇಸುವು ತನ್ನ ದೇಹವೆಂಬ ದೇವಾಲಯದ ವಿಷಯವಾಗಿ ಆ ಮಾತನ್ನು ಹೇಳಿದ್ದನು. ಮತ್ತು ಮೂರು ವರ್ಷಗಳ ನಂತರ, ಅವನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಾಗ ಅವನ ಈ ಮಾತುಗಳನ್ನು ಶಿಷ್ಯರು ನೆನಪಿಸಿಕೊಂಡರು. ಯೋಹಾನ 2:12-22; ಮತ್ತಾಯ 13:55; ಲೂಕ 4:23.

▪ ಕಾನಾದ ಮದುವೆಯ ನಂತರ ಯೇಸುವು ಯಾವ ಸ್ಥಳಗಳಿಗೆ ಪ್ರಯಾಣ ಮಾಡಿದನು?

▪ ಯೇಸುವು ಧರ್ಮಕ್ರೋಧವುಳ್ಳವನಾದದ್ದು ಯಾಕೆ, ಮತ್ತು ಅವನೇನು ಮಾಡಿದನು?

▪ ಯೇಸುವಿನ ವರ್ತನೆಗಳನ್ನು ನೋಡಿದಾಗ ಅವನ ಶಿಷ್ಯರು ಯಾವದನ್ನು ನೆನಪಿಗೆ ತಂದರು?

▪ ಯೇಸುವು “ಈ ದೇವಾಲಯದ” ಕುರಿತು ಏನನ್ನು ಹೇಳಿದನು, ಮತ್ತು ಅವನ ಅರ್ಥವೇನಾಗಿತ್ತು?