ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಜನನ—ಎಲ್ಲಿ ಮತ್ತು ಯಾವಾಗ?

ಯೇಸುವಿನ ಜನನ—ಎಲ್ಲಿ ಮತ್ತು ಯಾವಾಗ?

ಅಧ್ಯಾಯ 5

ಯೇಸುವಿನ ಜನನ—ಎಲ್ಲಿ ಮತ್ತು ಯಾವಾಗ?

ರೋಮ್‌ ಸಾಮ್ರಾಜ್ಯದ ಚಕ್ರವರ್ತಿಯಾದ ಕೈಸರ ಔಗುಸ್ತನು, ಪ್ರತಿಯೊಬ್ಬರು ತಮ್ಮ ಹುಟ್ಟಿದ ಊರುಗಳಲ್ಲಿ ಖಾನೆಷುಮಾರಿ ಬರಸಿಕೊಳ್ಳಲು ಹಿಂತಿರುಗತಕ್ಕದ್ದು ಎಂಬ ಶಾಸನವನ್ನು ಹೊರಡಿಸಿದನು. ಆದುದರಿಂದ ಯೋಸೇಫನು ತನ್ನ ಜನ್ಮಸ್ಥಳವಾದ ಬೇತ್ಲೆಹೇಮೆಂಬ ಪಟ್ಟಣಕ್ಕೆ ಪ್ರಯಾಣಿಸುತ್ತಾನೆ.

ಹೆಸರು ನೋಂದಣೆ ಮಾಡಲು ಬೇತ್ಲೆಹೇಮಿನಲ್ಲಿ ಬಹಳಷ್ಟು ಜನರು ಬಂದಿದ್ದರಿಂದ, ಯೋಸೇಫನಿಗೆ ಮತ್ತು ಮರಿಯಳಿಗೆ ನಿಲ್ಲಲು ದೊರಕಿದ ಒಂದು ಮಾತ್ರ ಸ್ಥಳ ಒಂದು ಹಟ್ಟಿಯಾಗಿತ್ತು. ಇಲ್ಲಿ, ಕತ್ತೆ ಮತ್ತು ಇತರ ಪ್ರಾಣಿಗಳನ್ನು ಕಟ್ಟುವ ಸ್ಥಳದಲ್ಲಿ ಯೇಸುವು ಜನಿಸಿದನು. ಮರಿಯಳು ಅವನನ್ನು ಬಟ್ಟೆಯಲ್ಲಿ ಸುತ್ತಿ, ಪ್ರಾಣಿಗಳಿಗೆ ಆಹಾರವನ್ನಿಡುವ ಸ್ಥಳವಾಗಿದ್ದ ಗೋದಲಿಯಲ್ಲಿ ಅವನನ್ನು ಇಟ್ಟಳು.

ಖಾನೆಷುಮಾರಿಯ ಶಾಸನವನ್ನು ಕೈಸರ ಔಗುಸ್ತನು, ನಿಶ್ಚಯವಾಗಿ ದೇವರ ಮಾರ್ಗದರ್ಶನದಲ್ಲಿ ಮಾಡಿದ್ದನು. ಈ ಮೂಲಕ, ವಾಗ್ದಾನಿಸಲ್ಪಟ್ಟ ಅಧಿಪತಿಯ ಜನನಸ್ಥಳವು ಯಾವ ಊರೆಂದು ಶಾಸ್ತ್ರವಚನದಲ್ಲಿ ಈ ಮೊದಲೇ ಮುಂತಿಳಿಸಲ್ಪಟ್ಟಿತ್ತೋ ಆ ಬೇತ್ಲೆಹೇಮಿನಲ್ಲಿ ಯೇಸುವು ಜನಿಸುವಂತಾಯಿತು.

ಎಷ್ಟೊಂದು ಪ್ರಾಮುಖ್ಯವಾದ ರಾತ್ರಿ ಅದಾಗಿತ್ತು! ಹೊರಗೆ ಹೊಲದಲ್ಲಿದ್ದ ಕುರುಬರ ಗುಂಪಿನ ಸುತ್ತಲೂ ಒಂದು ಪ್ರಕಾಶಮಾನ ಪ್ರಭೆಯು ಬೆಳಗಿತು. ಅದು ಯೆಹೋವನ ಪ್ರಭೆ! ಮತ್ತು ಯೆಹೋವನ ದೂತನು ಅವರಿಗಂದದ್ದು: “ಹೆದರಬೇಡಿರಿ, ಕೇಳಿರಿ! ಜನರಿಗೆಲ್ಲಾ ಮಹಾ ಸಂತೋಷವನ್ನುಂಟುಮಾಡುವ ಶುಭ ಸಮಾಚಾರವನ್ನು ನಿಮಗೆ ತಿಳಿಸುತ್ತೇನೆ. ಅದೇನಂದರೆ, ಈ ಹೊತ್ತು ನಿಮಗೋಸ್ಕರ ದಾವೀದನೂರಲ್ಲಿ ಒಬ್ಬ ರಕ್ಷಕನು ಹುಟ್ಟಿದ್ದಾನೆ, ಅವನು ಕರ್ತನಾಗಿರುವ ಕ್ರಿಸ್ತನೇ. ಆತನು ನಿಮಗೆ ಗೊತ್ತಾಗುವದಕ್ಕೆ ಗುರುತೇನಂದರೆ—ಬಟ್ಟೆಯಿಂದ ಸುತ್ತಿರುವ ಒಂದು ಕೂಸು ಗೋದಲಿಯಲ್ಲಿ ಮಲಗಿರುವದನ್ನು ಕಾಣುವಿರಿ.” ಫಕ್ಕನೆ ಅನೇಕ ದೇವದೂತರುಗಳು ಕಾಣಿಸಿಕೊಂಡರು ಮತ್ತು ಹಾಡಿದರು: “ಮೇಲಣ ಲೋಕದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಚಿತ್ತದ ಜನರಲ್ಲಿ ಸಮಾಧಾನ.”

ದೇವದೂತರುಗಳು ಹೊರಟು ಹೋದ ಬಳಿಕ, ಕುರುಬರು ತಮ್ಮ ತಮ್ಮೊಳಗೆ ಹೀಗೆ ಮಾತಾಡಿಕೊಂಡರು: “ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ಯೆಹೋವನು ನಮಗೆ ತಿಳಿಯ ಪಡಿಸಿದ ಮತ್ತು ಸಂಭವಿಸಿದ್ದ ಈ ಸಂಗತಿಯನ್ನು ನೋಡೋಣ, ನಡೆಯಿರಿ.” ಅವರು ಅವಸರದಿಂದ ಹೋದರು ಮತ್ತು ದೇವದೂತನು ತಿಳಿಸಿದ್ದ ಸ್ಥಳದಲ್ಲಿಯೇ ಯೇಸುವನ್ನು ಕಂಡುಕೊಂಡರು. ತಮಗೆ ದೇವದೂತನು ಹೇಳಿದ್ದನ್ನೆಲ್ಲಾ ಕುರುಬರು ತಿಳಿಸಿದಾಗ, ಕೇಳಿದವರೆಲ್ಲರೂ ಆಶ್ಚರ್ಯ ಪಟ್ಟರು. ಮರಿಯಳು ಈ ಮಾತುಗಳನ್ನೆಲ್ಲಾ ತನ್ನ ಹೃದಯದಲ್ಲಿ ಜೋಪಾಸನೆಯಲ್ಲಿಟ್ಟುಕೊಂಡು, ಅದರ ಕುರಿತು ಧ್ಯಾನಿಸುತ್ತಿದ್ದಳು.

ಯೇಸುವು ದಶಂಬರ 25 ರಂದು ಹುಟ್ಟಿದನೆಂದು ಇಂದು ಬಹು ಮಂದಿ ನಂಬುತ್ತಾರೆ. ಆದರೆ ದಶಂಬರವು ಬೇತ್ಲೆಹೇಮಿನಲ್ಲಿ ಮಳೆ ಬರುವ ಮತ್ತು ಚಳಿಗಾಲದ ತಿಂಗಳು. ವರ್ಷದ ಆ ಸಮಯದಲ್ಲಿ ಕುರುಬರು ಹೊರಗೆ ಹೊಲದಲ್ಲಿ ತಮ್ಮ ಹಿಂಡುಗಳನ್ನು ರಾತ್ರಿ ವೇಳೆ ಬಿಡುತ್ತಿರಲಿಲ್ಲ. ಅಲ್ಲದೇ, ದಂಗೆ ಏಳುವ ಪ್ರವೃತ್ತಿ ಈಗಾಗಲೇ ತೋರಿಸಿರುವ ಜನರಿಂದ, ಖಾನೆಷುಮಾರಿ ನೋಂದಣಿ ಮಾಡಿಸಿಕೊಳ್ಳಲು, ಈ ಕಡು ಚಳಿಯ ಕಾಲದಲ್ಲಿ ಪ್ರಯಾಣ ಮಾಡುವಂತೆ ರೋಮನ್‌ ಕೈಸರನು ಕೇಳಿಕೊಳ್ಳುವ ಸಾಧ್ಯತೆಗಳು ಅಸಂಭವನೀಯ. ಯೇಸುವು ವರ್ಷದ ಶರತ್ಕಾಲದ ಆರಂಭದ ಸಮಯದಲ್ಲಿ ಜನಿಸಿರಬೇಕು ಎಂಬದು ವ್ಯಕ್ತ. ಲೂಕ 2:1-20; ಮೀಕ 5:2.

▪ ಯೋಸೇಫನು ಮತ್ತು ಮರಿಯಳು ಬೇತ್ಲೆಹೇಮಿಗೆ ಯಾಕೆ ಪ್ರಯಾಣ ಮಾಡಿದರು?

▪ ಯೇಸುವು ಜನಿಸಿದ ರಾತ್ರಿಯಲ್ಲಿ ಯಾವ ಅದ್ಭುತ ಸಂಗತಿಯೊಂದು ಸಂಭವಿಸಿತು?

▪ ದಶಂಬರ 25 ರಲ್ಲಿ ಯೇಸುವು ಜನಿಸಿರಲಿಲ್ಲವೆಂದು ನಾವು ಹೇಗೆ ಬಲ್ಲೆವು?