ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಮೊದಲ ಶಿಷ್ಯರು

ಯೇಸುವಿನ ಮೊದಲ ಶಿಷ್ಯರು

ಅಧ್ಯಾಯ 14

ಯೇಸುವಿನ ಮೊದಲ ಶಿಷ್ಯರು

ಅಡವಿಯಲ್ಲಿ 40 ದಿನಗಳನ್ನು ಕಳೆದ ನಂತರ, ಯೇಸುವು ಅವನಿಗೆ ದೀಕ್ಷಾಸ್ನಾನ ಕೊಟ್ಟ ಯೋಹಾನನ ಬಳಿಗೆ ಹಿಂತೆರಳುತ್ತಾನೆ. ಅವನು ಸಮೀಪಿಸುತ್ತಿರುವಾಗ, ಯೋಹಾನನು ಅವನ ಕಡೆಗೆ ತೋರಿಸಿ, ಹಾಜರಿದ್ದವರಿಗೆ ಹೀಗೆಂದು ಉದ್ಗರಿಸುತ್ತಾನೆ: “ಅಗೋ, ದೇವರ ಕುರಿಮರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು! ನನ್ನ ಹಿಂದೆ ಬರುವವನು ನನಗಿಂತ ಮೊದಲೇ ಇದ್ದುದರಿಂದ ನನಗೆ ಮುಂದಿನವನಾದನು ಎಂದು ನಾನು ಹೇಳಿದ ಮಾತು ಈತನ ವಿಷಯವಾಗಿಯೇ.” ಯೋಹಾನನು ತನ್ನ ಸೋದರನಂಟನಿಗಿಂತ ಹಿರಿಯನಾಗಿದ್ದರೂ ಕೂಡಾ, ಯೇಸು ಸ್ವರ್ಗದಲ್ಲಿ ಆತ್ಮ ವ್ಯಕ್ತಿಯಾಗಿ ತನಗಿಂತ ಮೊದಲೇ ಅಸ್ತಿತ್ವದಲ್ಲಿ ಇದ್ದನು ಎಂದು ಯೋಹಾನನಿಗೆ ತಿಳಿದಿತ್ತು.

ಆದರೂ, ಕೆಲವು ವಾರಗಳ ಮೊದಲು, ಯೇಸುವು ದೀಕ್ಷಾಸ್ನಾನವಾಗಲು ಬಂದಾಗ, ಯೇಸುವೇ ಮೆಸ್ಸೀಯನೆಂದು ಯೋಹಾನನಿಗೆ ಖಾತ್ರಿಯಾಗಿ ತಿಳಿದಿರಲಿಲ್ಲವೆಂದು ಕಂಡುಬರುತ್ತದೆ. “ನನಗೂ ಆತನ ಗುರುತು ಇರಲಿಲ್ಲ,” ಎಂದು ಯೋಹಾನನು ಒಪ್ಪಿಕೊಳ್ಳುತ್ತಾನೆ. “ಆದರೆ ಆತನನ್ನು ಇಸ್ರಾಯೇಲ್ಯರಿಗೆ ತಿಳಿಯಪಡಿಸುವದಕ್ಕೋಸ್ಕರವೇ ನಾನು ನೀರಿನ ದೀಕ್ಷಾಸ್ನಾನವನ್ನು ಮಾಡಿಸುವವನಾಗಿ ಬಂದೆನು.”

ಅವನು ಯೇಸುವನ್ನು ದೀಕ್ಷಾಸ್ನಾನ ಮಾಡಿಸುವಾಗ ಏನು ಸಂಭವಿಸಿತು ಎಂದು ತನ್ನನ್ನು ಆಲಿಸುವವರಿಗೆ ಯೋಹಾನನು ವಿವರಿಸುತ್ತಾ ಹೋದನು: “ದೇವರಾತ್ಮವು ಪಾರಿವಾಳದಂತೆ ಆಕಾಶದಿಂದ ಇಳಿಯುವದನ್ನು ನೋಡಿದೆನು. ಅದು ಆತನ ಮೇಲೆ ನೆಲೆಗೊಂಡಿತು. ನನಗೂ ಆತನ ಗುರುತಿರಲಿಲ್ಲ; ಆದರೆ ನೀರಿನ ದೀಕ್ಷಾಸ್ನಾನವನ್ನು ಮಾಡಿಸುವದಕ್ಕೆ ನನ್ನನ್ನು ಕಳುಹಿಸಿದಾತನು—ಯಾವನ ಮೇಲೆ ಆತ್ಮವು ಇಳಿದುಬಂದು ಇರುವದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮದ ದೀಕ್ಷಾಸ್ನಾನವನ್ನು ಕೊಡುವವನು ಎಂದು ತಾನೇ ನನಗೆ ಹೇಳಿದನು. ನಾನು ಅದನ್ನು ನೋಡಿ ಈತನೇ ದೇವಕುಮಾರನೆಂದು ಸಾಕ್ಷಿ ಕೊಟ್ಟಿದ್ದೇನೆ.”

ಮರುದಿನ ಯೋಹಾನನು ಅವನ ಇಬ್ಬರು ಶಿಷ್ಯರೊಂದಿಗೆ ನಿಂತುಕೊಂಡಿದ್ದಾಗ, ಯೇಸುವು ಅವನನ್ನು ಸಮೀಪಿಸಿದನು, ಆಗ ಅವನು ಅಂದದ್ದು: “ಅಗೋ, ದೇವರ ಕುರಿಮರಿ!” ಆಗ, ಸ್ನಾನಿಕ ಯೋಹಾನನ ಇಬ್ಬರು ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. ಅವರಲ್ಲೊಬ್ಬನು ಅಂದ್ರೆಯ, ಮತ್ತು ಇನ್ನೊಬ್ಬನು ಇವೆಲ್ಲಾ ಸಂಗತಿಗಳನ್ನು ದಾಖಲೆ ಮಾಡಿದ ವ್ಯಕ್ತಿಯೆಂದು ರುಜುವಾಗುತ್ತದೆ. ಅವನ ಹೆಸರು ಯೋಹಾನನೆಂದಾಗಿತ್ತು. ಈ ಯೋಹಾನನು ಕೂಡಾ, ಸೂಚನೆಗಳಿಗನುಸಾರ ಯೇಸುವಿನ ಸೋದರನಂಟನು, ಪ್ರಾಯಶಃ ಮರಿಯಳ ಸಹೋದರಿಯಾದ ಸಲೋಮಿಯ ಒಬ್ಬ ಮಗನು.

ಯೇಸು ಹಿಂತಿರುಗಿ ಅಂದ್ರೆಯ ಮತ್ತು ಯೋಹಾನರು ತನ್ನ ಹಿಂದೆ ಬರುವದನ್ನು ನೋಡಿ, ಕೇಳುವದು: “ನಿಮಗೆ ಏನು ಬೇಕಾಗಿದೆ?”

“ರಬ್ಬಿಯೇ,” ಅವರು ವಿಚಾರಿಸುವದು, “ನೀನು ಇಳುಕೊಂಡಿರುವದು ಎಲ್ಲಿ?”

“ಬನ್ನಿರಿ, ಮತ್ತು ನೀವು ನೋಡುವಿರಿ,” ಎಂದು ಯೇಸು ಉತ್ತರಿಸುತ್ತಾನೆ.

ಆಗ ಹೆಚ್ಚುಕಡಿಮೆ ಅಪರಾಹ್ನದ ನಾಲ್ಕು ಘಂಟೆಯಾಗಿತ್ತು, ಮತ್ತು ಅಂದ್ರೆಯ, ಯೋಹಾನರು ಆ ದಿನದ ಉಳಿದ ಸಮಯ ಯೇಸುವಿನೊಂದಿಗೆ ಇರುತ್ತಾರೆ. ಅನಂತರ ಅಂದ್ರೆಯನು ಎಷ್ಟೊಂದು ಆತುರತೆಯವನಾಗಿದ್ದನೆಂದರೆ ಪೇತ್ರನೆಂದು ಕರೆಯಲ್ಪಡುತ್ತಿದ್ದ ತನ್ನ ಸಹೋದರನನ್ನು ಹುಡುಕಲು ಅವಸರಿಸುತ್ತಿದ್ದನು. “ನಾವು ಮೆಸ್ಸೀಯನನ್ನು ಕಂಡೆವು,” ಎಂದು ಅವನಿಗೆ ಹೇಳುತ್ತಾನೆ. ಮತ್ತು ಅವನು ಪೇತ್ರನನ್ನು ಯೇಸುವಿನ ಬಳಿಗೆ ಕರೆದೊಯ್ಯುತ್ತಾನೆ. ಬಹುಶಃ ಯೋಹಾನನು ಅದೇ ಸಮಯದಲ್ಲಿ ತನ್ನ ಸಹೋದರ ಯಾಕೋಬನನ್ನೂ ಕಂಡುಕೊಂಡು ಅವನನ್ನು ಯೇಸುವಿನ ಬಳಿಗೆ ಕರತರುತ್ತಾನೆ. ಆದರೂ, ತನ್ನ ಸುವಾರ್ತೆಯಲ್ಲಿ ಯೋಹಾನನು ಈ ವೈಯಕ್ತಿಕ ಸಮಾಚಾರವನ್ನು ಕೊಡದಿರುವದು ಒಂದು ವೈಶಿಷ್ಟ್ಯತೆಯಾಗಿದೆ.

ಮರುದಿನ, ಯೇಸುವು ಬೇತ್ಸಾಯಿದದ ಫಿಲಿಪ್ಪನನ್ನು ಕಂಡನು, ಅಂದ್ರೆಯ ಮತ್ತು ಪೇತ್ರರು ಮೂಲತಃ ಅದೇ ನಗರದವರು. ಯೇಸುವು ಫಿಲಿಪ್ಪನನ್ನು ಆಮಂತ್ರಿಸುತ್ತಾನೆ: “ನನ್ನನ್ನು ಹಿಂಬಾಲಿಸು.”

ಫಿಲಿಪ್ಪನು ಬಾರ್ತಲೋಮಿಯನೆಂದು ಕರೆಯಲ್ಪಡುವ ನತಾನಯೇಲನನ್ನು ಕಂಡುಕೊಂಡನು, ಮತ್ತು ಅವನಿಗೆ ಅಂದದ್ದು: “ಯಾವನ ವಿಷಯವಾಗಿ ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ, ಆತನು ನಮಗೆ ಸಿಕ್ಕಿದನು. ಆತನು ಯಾರಂದರೆ ಯೋಸೇಫನ ಮಗನಾದ ನಜರೇತಿನ ಯೇಸು.” ನತಾನಯೇಲನು ಸಂದೇಹ ಪಡುತ್ತಾನೆ. “ಒಳ್ಳೇದೇನಾದರೂ ನಜರೇತಿನಿಂದ ಬರುವದುಂಟೋ?” ಎಂದು ಅವನು ಕೇಳುತ್ತಾನೆ.

“ಬಂದು ನೋಡು,” ಎಂದು ಫಿಲಿಪ್ಪನು ಒತ್ತಾಯಿಸುತ್ತಾನೆ. ಅವರು ಯೇಸುವಿನ ಬಳಿಗೆ ಬರುವಾಗ, ನತಾನಯೇಲನ ಕುರಿತು ಯೇಸು ಅಂದದ್ದು: “ಇಗೋ, ಇವನು ನಿಜವಾದ ಇಸ್ರಾಯೇಲ್ಯನು; ಇವನಲ್ಲಿ ಕಪಟವಿಲ್ಲ.”

“ನನ್ನನ್ನು ನೀನು ಹೇಗೆ ಬಲ್ಲಿ?” ನತಾನಯೇಲನು ಕೇಳುತ್ತಾನೆ.

“ಫಿಲಿಪ್ಪನು ನಿನ್ನನ್ನು ಕರೆಯುವ ಮುಂಚೆ, ನೀನು ಆ ಅಂಜೂರದ ಮರದ ಕೆಳಗೆ ಇದ್ದಾಗ ನಿನ್ನನ್ನು ನೋಡಿದೆನು,” ಯೇಸುವು ಉತ್ತರಿಸುತ್ತಾನೆ.

ನತಾನಯೇಲನು ಆಶ್ಚರ್ಯಗೊಳ್ಳುತ್ತಾನೆ. “ರಬ್ಬಿಯೇ [ಅರ್ಥ, ಗುರುವೇ], ನೀನು ದೇವಕುಮಾರನು ಸರಿ, ನೀನೇ ಇಸ್ರಾಯೇಲಿನ ಅರಸನು,” ಎಂದವನು ಹೇಳುತ್ತಾನೆ.

“ಆ ಅಂಜೂರದ ಮರದ ಕೆಳಗೆ ನಿನ್ನನ್ನು ನೋಡಿದೆನು ಎಂದು ನಾನು ನಿನಗೆ ಹೇಳಿದ ಮಾತ್ರದಿಂದ ನಂಬುತ್ತೀಯೋ?” ಯೇಸು ಕೇಳುತ್ತಾನೆ. “ಇದಕ್ಕಿಂತ ಹೆಚ್ಚಿನ ಕಾರ್ಯಗಳನ್ನು ನೋಡುವಿ.” ಅನಂತರ ಅವನು ವಾಗ್ದಾನಿಸಿದ್ದು: “ಪರಲೋಕವು ತೆರೆದಿರುವದನ್ನೂ, ಮನುಷ್ಯ ಕುಮಾರನ ಬಳಿಗೆ ದೇವದೂತರು ಏರಿಹೋಗುತ್ತಾ ಇಳಿದು ಬರುತ್ತಾ ಇರುವದನ್ನೂ ನೋಡುವಿ.”

ಇದಾದ ಕೂಡಲೇ, ಬೇಗನೇ ಯೇಸುವು ತಾನು ಪಡೆದ ಹೊಸ ಶಿಷ್ಯರೊಂದಿಗೆ ಯೊರ್ದನ್‌ ಕಣಿವೆಯನ್ನು ಬಿಟ್ಟು, ಗಲಿಲಾಯಕ್ಕೆ ಪ್ರಯಾಣಿಸುತ್ತಾನೆ. ಯೋಹಾನ 1:29-51.

▪ ಯೇಸುವಿನ ಮೊದಲ ಶಿಷ್ಯರು ಯಾರು?

▪ ಯೇಸುವಿಗೆ ಪೇತ್ರನು ಮತ್ತು ಪ್ರಾಯಶಃ ಯಾಕೋಬನು ಹೇಗೆ ಪರಿಚಯಿಸಲ್ಪಟ್ಟರು?

▪ ಯೇಸುವು ದೇವಕುಮಾರನೆಂದು ನತಾನಯೇಲನಿಗೆ ಮನವರಿಕೆ ಮಾಡಿದ್ದು ಯಾವುದು?