ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಯೆರೂಸಲೇಮಿನ ಕೊನೆಯ ಸಂಚಾರದಲ್ಲಿ ಹತ್ತು ಮಂದಿ ಕುಷ್ಠರೋಗಿಗಳು ವಾಸಿಯಾದದ್ದು

ಯೇಸುವಿನ ಯೆರೂಸಲೇಮಿನ ಕೊನೆಯ ಸಂಚಾರದಲ್ಲಿ ಹತ್ತು ಮಂದಿ ಕುಷ್ಠರೋಗಿಗಳು ವಾಸಿಯಾದದ್ದು

ಅಧ್ಯಾಯ 92

ಯೇಸುವಿನ ಯೆರೂಸಲೇಮಿನ ಕೊನೆಯ ಸಂಚಾರದಲ್ಲಿ ಹತ್ತು ಮಂದಿ ಕುಷ್ಠರೋಗಿಗಳು ವಾಸಿಯಾದದ್ದು

ಯೇಸುವು ಯೆರೂಸಲೇಮನ್ನು ಬಿಟ್ಟು ಎಫ್ರಾಯಿಮ್‌ ನಗರಕ್ಕೆ ಪ್ರಯಾಣ ಬೆಳಸಿದ್ದರಿಂದ ಅವನನ್ನು ಕೊಲ್ಲುವ ಸನ್ಹೇದ್ರಿನ್‌ನ ಪ್ರಯತ್ನಗಳು ನಿಷ್ಫಲಗೊಂಡವು. ಈ ನಗರವು ಯೆರೂಸಲೇಮಿನಿಂದ ಕೇವಲ 24 ಕಿಲೊಮೀಟರ್‌ ದೂರ, ಈಶಾನ್ಯ ದಿಕ್ಕಿನಲ್ಲಿತ್ತು. ಅಲ್ಲಿ ಅವನು ತನ್ನ ಶಿಷ್ಯರೊಂದಿಗೆ ಕೆಲವು ಸಮಯ ನಿಲ್ಲುತ್ತಾನೆ, ಹೀಗೆ ಅವನ ವಿರೋಧಿಗಳಿಂದ ದೂರವಿರುತ್ತಾನೆ.

ಆದಾಗ್ಯೂ, ಸಾ.ಶ. 33 ರ ಪಸ್ಕ ಹಬ್ಬದ ಸಮಯವು ಹತ್ತರಿಸುತ್ತಾ ಇತ್ತು, ಮತ್ತು ಬೇಗನೇ ಯೇಸುವು ಪುನಃ ಚಲಿಸಲಾರಂಭಿಸಿದನು. ಅವನು ಸಮಾರ್ಯದ ಮೂಲಕ ಸಂಚಾರ ಮಾಡುತ್ತಾ, ಗಲಿಲಾಯದ ತನಕ ಸಂಚರಿಸಿದನು. ಅವನ ಮರಣದ ಮೊದಲು, ಇದು ಅವನ ಕೊನೆಯ ಭೇಟಿಯಾಗಿತ್ತು. ಗಲಿಲಾಯದಲ್ಲಿರುವಾಗ, ಪಸ್ಕಹಬ್ಬದ ಆಚರಣೆಗಾಗಿ ಯೆರೂಸಲೇಮಿಗೆ ಹೋಗುವವರ ಸಂಗಡ ದಾರಿಯಲ್ಲಿ ಅವನೂ, ಅವನ ಶಿಷ್ಯರೂ ಇತರರೊಂದಿಗೆ ಜೊತೆಗೂಡಿರಬಹುದು. ಅವರು ಯೊರ್ದನ್‌ ಹೊಳೆಯ ಪೂರ್ವದಲ್ಲಿರುವ ಪೆರಿಯ ಪ್ರಾಂತ್ಯದ ಮೂಲಕವಾಗಿರುವ ಮಾರ್ಗವನ್ನು ಆರಿಸಿದ್ದಿರಬಹುದು.

ಸಂಚಾರದ ಆರಂಭದಲ್ಲಿ, ಸಮಾರ್ಯದಲ್ಲಿಯೋ, ಗಲಿಲಾಯದಲ್ಲಿಯೋ ಯೇಸುವು ಪ್ರವೇಶ ಮಾಡುತ್ತಿರುವಾಗ, ಅವನು ಹತ್ತು ಮಂದಿ ಕುಷ್ಠರೋಗಿಗಳನ್ನು ಸಂಧಿಸುತ್ತಾನೆ. ಇದೊಂದು ಭಯಂಕರವಾದ ವ್ಯಾಧಿಯಾಗಿದ್ದು, ವ್ಯಕ್ತಿಯೊಬ್ಬನ ಶರೀರದ ಅವಯವಗಳನ್ನು—ಅವನ ಕೈಬೆರಳುಗಳನ್ನು, ಕಾಲ್ಬೆರಳುಗಳನ್ನು, ಕಿವಿಗಳನ್ನು, ಮೂಗನ್ನು ಮತ್ತು ತುಟಿಗಳನ್ನು—ಮೆಲ್ಲಮೆಲ್ಲನೆ ತಿಂದುಹಾಕುತ್ತದೆ. ಬೇರೆಯವರಿಗೆ ಇದು ಸೋಂಕದಂತೆ ಅವರನ್ನು ಸುರಕ್ಷಿತವಾಗಿಡಲು ದೇವರ ನಿಯಮವು ಒಬ್ಬ ಕುಷ್ಠರೋಗಿಯ ಕುರಿತು ಹೇಳುವದು: “ಅವನು ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡು—ನಾನು ಅಶುದ್ಧನು, ಅಶುದ್ಧನು ಎಂದು ಕೂಗಿಕೊಳ್ಳಬೇಕು. ಆ ರೋಗದ ಗುರುತುಗಳು ಇರುವ ದಿನಗಳೆಲ್ಲಾ ಅವನು ಅಶುದ್ಧನಾಗಿರುವನು. . . . ಅವನು ಪ್ರತ್ಯೇಕವಾಗಿಯೇ ವಾಸವಾಗಿರಬೇಕು.”

ಈ ಹತ್ತು ಮಂದಿ ಕುಷ್ಠರೋಗಿಗಳು ನಿಯಮಶಾಸ್ತ್ರದ ನಿರ್ಬಂಧತೆಗಳನ್ನು ಪರಿಪಾಲಿಸಿ, ಯೇಸುವಿನಿಂದ ಬಲುದೂರದಲ್ಲಿ ನಿಂತುಕೊಳ್ಳುತ್ತಾರೆ. ಆದರೂ, ಅವರು ಗಟ್ಟಿಯಾದ ಸ್ವರದಲ್ಲಿ ಕೂಗಿ ಹೇಳುವುದು: “ಯೇಸುವೇ, ಗುರುವೇ, ನಮ್ಮ ಮೇಲೆ ದಯವಿಡು!”

ದೂರದಲ್ಲಿಯೇ ಅವರನ್ನು ಕಾಣುತ್ತಾ, ಯೇಸುವು ಆಜ್ಞಾಪಿಸಿದ್ದು: “ನೀವು ಹೋಗಿ ಯಾಜಕರಿಗೆ ತೋರಿಸಿಕೊಳ್ಳಿರಿ.” ತಮ್ಮ ರೋಗಗಳಿಂದ ಗುಣಮುಖ ಹೊಂದಿದ ಕುಷ್ಠ ರೋಗಿಗಳನ್ನು ಹಾಗೆ ಗುಣವಾಗಿದ್ದರೆಂದು ಉಚ್ಛರಿಸಲು ಯಾಜಕರಿಗೆ ದೇವರ ನಿಯಮಶಾಸ್ತ್ರವು ಅಧಿಕಾರ ಕೊಟ್ಟಿರುವದರಿಂದ, ಯೇಸುವು ಇದನ್ನು ಹೇಳುತ್ತಾನೆ. ಈ ರೀತಿಯಲ್ಲಿ ಸಮ್ಮತಿಯನ್ನು ಪಡೆದವರು ಪುನೊಮ್ಮೆ ಆರೋಗ್ಯವಂತ ಮನುಷ್ಯರೊಟ್ಟಿಗೆ ಸಹವಸಿಸಬಹುದಿತ್ತು.

ಯೇಸುವಿನ ಅದ್ಭುತಕರ ಶಕ್ತಿಯ ಮೇಲೆ ಈ ಹತ್ತು ಮಂದಿ ಕುಷ್ಠರೋಗಿಗಳಿಗೆ ಭರವಸ ಇತ್ತು. ಆದುದರಿಂದ ಅವರು ಇನ್ನೂ ಗುಣಮುಖವಾಗದೆ ಇದ್ದರೂ, ಯಾಜಕರನ್ನು ಕಾಣಲು ಧಾವಿಸುತ್ತಾರೆ. ದಾರಿಯಲ್ಲಿ ಹೋಗುತ್ತಿರುವಾಗಲೇ, ಯೇಸುವಿನ ಮೇಲಿನ ಅವರ ನಂಬಿಕೆಗೆ ಬಹುಮಾನ ದೊರೆಯಿತು. ಅವರು ಪುನಃ ಸ್ಥಾಪಿಸಲ್ಪಟ್ಟ ತಮ್ಮ ಆರೋಗ್ಯವನ್ನು ಕಾಣಲು ಮತ್ತು ಅನುಭವಿಸಲು ಶಕ್ತರಾದರು!

ಶುದ್ಧಗೊಳಿಸಲ್ಪಟ್ಟವರಲ್ಲಿ ಒಂಭತ್ತು ಮಂದಿ ತಮ್ಮ ದಾರಿಯಲ್ಲಿ ಮುಂದುವರಿದರು, ಆದರೆ ಒಬ್ಬ ಕುಷ್ಠರೋಗಿಯು, ಸಮಾರ್ಯನು, ಯೇಸುವನ್ನು ಕಾಣಲು ಹಿಂದಿರುಗಿ ಬರುತ್ತಾನೆ. ಯಾಕೆ? ಕಾರಣವೇನಂದರೆ, ಅವನಿಗೆ ಏನು ಸಂಭವಿಸಿತೋ ಅದರಿಂದ ಅವನು ಅಷ್ಟೊಂದು ಕೃತಜ್ಞತೆಯುಳ್ಳವನಾದನು. ಅವನು ದೇವರನ್ನು ಮಹಾ ಶಬ್ದದಿಂದ ಕೊಂಡಾಡುತ್ತಾನೆ ಮತ್ತು ಯೇಸುವನ್ನು ಕಂಡುಕೊಂಡಾಗ, ಅವನ ಪಾದಗಳಿಗೆ ಅಡ್ಡಬಿದ್ದು ಆತನಿಗೆ ಉಪಕಾರ ಹೇಳುತ್ತಾನೆ.

ಅದಕ್ಕುತ್ತರವಾಗಿ ಯೇಸುವು ಹೇಳುವದು: “ಹತ್ತು ಮಂದಿ ಶುದ್ಧರಾದರಲ್ಲವೇ. ಮಿಕ್ಕ ಒಂಭತ್ತು ಮಂದಿ ಎಲ್ಲಿ? ದೇವರನ್ನು ಸ್ತುತಿಸುವದಕ್ಕೆ ಈ ಅನ್ಯ ದೇಶದವನೇ ಹೊರತು ಇನ್ನಾರೂ ಹಿಂತಿರುಗಿ ಬರಲಿಲ್ಲವೇ?”

ಅನಂತರ ಅವನು ಸಮಾರ್ಯದವನಿಗೆ ಹೇಳುತ್ತಾನೆ: “ಎದ್ದು ಹೋಗು, ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥ ಮಾಡಿಯದೆ.”

ಹತ್ತು ಮಂದಿ ಕುಷ್ಠ ರೋಗಿಗಳನ್ನು ಯೇಸುವು ವಾಸಿಮಾಡಿದ್ದನ್ನು ನಾವು ಓದುವಾಗ, ಅವನ ಪ್ರಶ್ನೆಯಲ್ಲಿ ಅಡಕವಾಗಿರುವ ಪಾಠವನ್ನು ನಾವು ನಮ್ಮ ಹೃದಯಕ್ಕೆ ತೆಗೆದು ಕೊಳ್ಳತಕ್ಕದ್ದು: “ಮಿಕ್ಕ ಒಂಭತ್ತು ಮಂದಿ ಎಲ್ಲಿ?” ಇತರ ಒಂಭತ್ತು ಮಂದಿಗಳಿಂದ ತೋರಿಸಲ್ಪಟ್ಟ ಕೃತಘ್ನತೆಯು ಒಂದು ಗಂಭೀರವಾದ ಲೋಪದೋಷವಾಗಿರುತ್ತದೆ. ದೇವರ ನೀತಿಯ ಹೊಸ ಲೋಕದಲ್ಲಿ ನಿತ್ಯಜೀವದ ಖಚಿತವಾದ ವಾಗ್ದಾನದ ಸಹಿತ, ದೇವರಿಂದ ನಮಗೆ ದೊರಕುವ ಸಂಗತಿಗಳಿಗಾಗಿ ನಾವು ಅವನಿಗೆ, ಆ ಸಮಾರ್ಯದವನಂತೆ, ಕೃತಜ್ಞತೆಯುಳ್ಳವರಾಗಿದ್ದೇವೆ ಎಂದು ತೋರಿಸುವೆವೋ? ಯೋಹಾನ 11:54, 55; ಲೂಕ 17:11-19; ಯಾಜಕಕಾಂಡ 13:16, 17, 45, 46; ಪ್ರಕಟನೆ 21:3, 4.

▪ ಯೇಸುವು ಅವನನ್ನು ಕೊಲ್ಲುವ ಹಂಚಿಕೆಯನ್ನು ಹೇಗೆ ನಿಷ್ಫಲಗೊಳಿಸುತ್ತಾನೆ?

▪ ಅನಂತರ ಯೇಸುವು ಎಲ್ಲಿಗೆ ಪ್ರಯಾಣ ಮಾಡುತ್ತಾನೆ, ಮತ್ತು ಅವನು ಹೋಗಬೇಕಾದ ಸ್ಥಳ ಯಾವುದಾಗಿತ್ತು?

▪ ಕುಷ್ಠರೋಗಿಗಳು ದೂರದಲ್ಲಿ ನಿಲ್ಲುವದು ಯಾಕೆ, ಮತ್ತು ಯಾಜಕರ ಬಳಿಗೆ ಹೋಗಲು ಯೇಸುವು ಹೇಳಿದ್ದು ಯಾಕೆ?

▪ ಈ ಅನುಭವದಿಂದ ನಾವು ಯಾವ ಪಾಠವನ್ನು ಕಲಿಯತಕ್ಕದ್ದು?