ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಸ್ವಂತ ಊರಿನ ಸಭಾಮಂದಿರದಲ್ಲಿ

ಯೇಸುವಿನ ಸ್ವಂತ ಊರಿನ ಸಭಾಮಂದಿರದಲ್ಲಿ

ಅಧ್ಯಾಯ 21

ಯೇಸುವಿನ ಸ್ವಂತ ಊರಿನ ಸಭಾಮಂದಿರದಲ್ಲಿ

ಯೇಸು ಮನೆಗೆ ಹಿಂದಿರುಗುವಾಗ ನಜರೇತಿನಲ್ಲಿ ಸಡಗರದ ಉತ್ಸಾಹ ನಡೆದಿತ್ತೆಂಬದು ನಿಸ್ಸಂಶಯ. ಸುಮಾರು ಒಂದು ವರ್ಷಕ್ಕಿಂತ ತುಸು ಹೆಚ್ಚು ಸಮಯಕ್ಕೆ ಮುಂಚೆ, ಯೋಹಾನನಿಂದ ದೀಕ್ಷಾಸ್ನಾನ ಪಡೆಯಲು ಅವನು ಹೊರಟು ಹೋದಾಗ, ಯೇಸು ಒಬ್ಬ ಬಡಗಿಯೆಂದು ತಿಳಿಯಲ್ಪಟ್ಟಿದ್ದನು. ಆದರೆ ಈಗ ಅದ್ಭುತ ಮಾಡುವವನೆಂಬ ಅತಿ ವ್ಯಾಪಕ ಪ್ರಖ್ಯಾತಿ ಅವನಿಗಿದೆ. ಸ್ಥಳೀಕ ನಿವಾಸಿಗಳು, ಅವನು ತಮ್ಮ ಮಧ್ಯದಲ್ಲಿ ಕೆಲವು ಮಹತ್ಕಾರ್ಯಗಳನ್ನು ಮಾಡುವುದನ್ನು ನೋಡಲು ತವಕ ಪಡುತ್ತಾರೆ.

ಯೇಸು ತನ್ನ ವಾಡಿಕೆಯ ಪ್ರಕಾರ ಸ್ಥಳೀಕ ಸಭಾಮಂದಿರಕ್ಕೆ ಹೋಗುವಾಗ ಈ ನಿರೀಕ್ಷಣೆ ವೃದ್ಧಿಯಾಗುತ್ತದೆ. ಆರಾಧನೆಯ ಸಮಯದಲ್ಲಿ ಅವನು ಓದಲಿಕ್ಕಾಗಿ ಎದ್ದು ನಿಲ್ಲುವಾಗ ಯೆಶಾಯ ಪ್ರವಾದಿಯ ಸುರುಳಿ ಅವನಿಗೆ ಕೊಡಲಾಗುತ್ತದೆ. ಅಲ್ಲಿ, ಯೆಹೋವನ ಆತ್ಮದಿಂದ ಅಭಿಷಿಕ್ತನಾಗುವವನ ಕುರಿತು ಹೇಳಿರುವ ಸ್ಥಳವನ್ನು ಅವನು ಕಂಡುಹಿಡಿಯುತ್ತಾನೆ. ಅದು ನಮ್ಮ ಬೈಬಲಿನಲ್ಲಿ 61 ನೆಯ ಅಧ್ಯಾಯದಲ್ಲಿರುತ್ತದೆ.

ಈ ಅಭಿಷಿಕ್ತನು ಬಂದಿಗಳಿಗೆ ಬಿಡುಗಡೆಯನ್ನು, ಕುರುಡರಿಗೆ ದೃಷ್ಟಿಯನ್ನು ಮತ್ತು ಯೆಹೋವನ ಅಂಗೀಕಾರ ಯೋಗ್ಯ ವರ್ಷವನ್ನು ಸಾರುವ ವಿಷಯವನ್ನು ಓದಿದ ಬಳಿಕ ಯೇಸು ಆ ಸುರುಳಿಯನ್ನು ಸೇವಕನಿಗೆ ಹಿಂದೆಕೊಟ್ಟು ಕುಳಿತುಕೊಳ್ಳುತ್ತಾನೆ. ಎಲ್ಲಾ ಕಣ್ಣುಗಳು ಅವನನ್ನು ಆಸಕ್ತಿಯಿಂದ ನೋಡುತ್ತವೆ. ಅನಂತರ ಅವನು, ಪ್ರಾಯಶಃ ಸ್ವಲ್ಪ ಹೊತ್ತು ವಿವರಿಸಿ ಮಾತಾಡುತ್ತಾ ಹೇಳಿದ್ದು: “ಈ ಹೊತ್ತು ನೀವು ಈಗೀಗಲೇ ಕೇಳಿದ ಈ ಶಾಸ್ತ್ರವಚನವು ನೆರವೇರಿದೆ.”

ಜನರು ಇವನ “ಇಂಪಾದ ಮಾತು”ಗಳನ್ನು ಕೇಳಿ ಬೆರಗಾಗಿ, “ಇವನು ಯೋಸೇಫನ ಮಗನಲ್ಲವೇ?” ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾರೆ. ಆದರೆ ಅವರು ಅದ್ಭುತಗಳನ್ನು ನೋಡಬಯಸುತ್ತಾರೆಂದು ಯೇಸು ಮನಗಂಡವನಾಗಿ ಮುಂದುವರಿಸುವುದು: “ನೀವಂತೂ ಈ ನಿದರ್ಶನವನ್ನು ನನಗೆ ಅನ್ವಯಿಸುವಿರಿ ಎಂಬುದರಲ್ಲಿ ಸಂದೇಹವಿಲ್ಲ, ಏನಂದರೆ ‘ವೈದ್ಯನೇ, ನಿನ್ನನ್ನೇ ವಾಸಿಮಾಡಿಕೋ; ಕಪೆರ್ನೌಮಿನಲ್ಲಿ ಎಂಥೆಂಥ ಕಾರ್ಯಗಳು ನಡೆದವು ಎಂದು ನಾವು ಕೇಳಿದೆವೂ ಅಂಥವುಗಳನ್ನು ಈ ನಿನ್ನ ಸ್ವಂತ ಊರಿನಲ್ಲಿ ಮಾಡು.’” ಯೇಸುವಿನ ಮೊದಲಿನ ನೆರೆಯವರು, ಅವನ ವಾಸಿಮಾಡುವ ಕಾರ್ಯವು ಅವನ ಸ್ವಂತ ಜನರ ಪ್ರಯೋಜನಾರ್ಥವಾಗಿ ಸ್ವಂತ ಊರಿನಲ್ಲಿ ಪ್ರಥಮವಾಗಿ ನಡೆಯಬೇಕೆಂದು ನೆನಸಿದರೆಂದು ವ್ಯಕ್ತವಾಗುತ್ತದೆ. ಆದುದರಿಂದ ಯೇಸು ತಮ್ಮನ್ನು ಕಡೆಗಣಿಸಿದ್ದಾನೆಂದು ಅವರು ಭಾವಿಸುತ್ತಾರೆ.

ಅವರ ಯೋಚನೆಯನ್ನು ಗ್ರಹಿಸುತ್ತಾ, ಯೇಸು ಹೊಂದಿಕೆಯಾಗುವ ಕೆಲವು ಇತಿಹಾಸವನ್ನು ತಿಳಿಸುತ್ತಾನೆ. ಎಲೀಯನ ದಿನಗಳಲ್ಲಿ ಅನೇಕ ವಿಧವೆಯರು ಇಸ್ರಾಯೇಲನಲ್ಲಿದ್ದರೂ, ಎಲೀಯನನ್ನು ಅವರಾರ ಬಳಿಗೆ ಕಳುಹಿಸಲಿಲ್ಲ. ಬದಲಿಗೆ, ಅವನು ಸಿದೋನಿನಲ್ಲಿ ಇಸ್ರಾಯೇಲ್ಯಳಲ್ಲದ ವಿಧವೆಯ ಬಳಿಗೆ ಹೋಗಿ, ಅಲ್ಲಿ ಜೀವರಕ್ಷಕ ಅದ್ಭುತವನ್ನು ಮಾಡಿದನು. ಮತ್ತು ಎಲೀಷನ ದಿನಗಳಲ್ಲಿ ಅಲ್ಲಿ ಅನೇಕ ಕುಷ್ಠರೋಗಿಗಳಿದ್ದರೂ, ಎಲೀಷನು ಸಿರಿಯಾ ದೇಶದ ನಾಮಾನನನ್ನು ಮಾತ್ರ ವಾಸಿಮಾಡಿದನು.

ಹೀಗೆ ಅವರ ಸ್ವಾರ್ಥವನ್ನೂ ನಂಬಿಕೆಯ ಕೊರತೆಯನ್ನೂ ಬಯಲುಪಡಿಸಿದ ಈ ಐತಿಹಾಸಿಕ ತುಲನೆಯಿಂದ ಕೋಪಗೊಂಡವರಾಗಿ, ಸಭಾಮಂದಿರದಲ್ಲಿದ್ದವರು ಎದ್ದು ಯೇಸುವನ್ನು ಊರ ಹೊರಗೆ ಅಟ್ಟಿದರು. ಅಲ್ಲಿ, ನಜರೇತನ್ನು ಯಾವುದರ ಮೇಲೆ ಕಟ್ಟಲಾಗಿತ್ತೋ ಆ ಗುಡ್ಡದ ನೆತ್ತಿಯಿಂದ ಅವನನ್ನು ಕಡಿದಾದ ಕೆಳಪ್ರದೇಶಕ್ಕೆ ದೊಬ್ಬಲು ಪ್ರಯತ್ನಿಸಿದರು. ಆದರೆ ಯೇಸು ಅವರ ಹಿಡಿತದಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಪಾರಾದನು. ಲೂಕ 4:16-30; 1 ಅರಸುಗಳು 17:8-16; 2 ಅರಸುಗಳು 5:8-14.

▪ ನಜರೇತಿನಲ್ಲಿ ಸಡಗರದ ಉತ್ಸಾಹ ಯಾಕೆ ಇತ್ತು?

▪ ಯೇಸುವಿನ ಭಾಷಣದ ಕುರಿತು ಜನರು ಏನು ಭಾವಿಸುತ್ತಾರೆ, ಆದರೆ ಅವರನ್ನು ಅಷ್ಟು ಕೋಪಗೊಳಿಸಿದ್ದು ಯಾವುದು?

▪ ಜನರು ಯೇಸುವಿಗೆ ಏನು ಮಾಡಲು ಪ್ರಯತ್ನಿಸುತ್ತಾರೆ?