ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವು ಫರಿಸಾಯರನ್ನು ಗದರಿಸುತ್ತಾನೆ

ಯೇಸುವು ಫರಿಸಾಯರನ್ನು ಗದರಿಸುತ್ತಾನೆ

ಅಧ್ಯಾಯ 42

ಯೇಸುವು ಫರಿಸಾಯರನ್ನು ಗದರಿಸುತ್ತಾನೆ

ತಾನು ಸೈತಾನನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವಲ್ಲಿ, ಸೈತಾನನು ತನಗೆ ವಿರುದ್ಧವಾಗಿ ತಾನೇ ಕೆಲಸ ನಡಿಸುವಂತಾಗುತ್ತದೆ ಎಂದು ಯೇಸು ವಾದಿಸುತ್ತಾನೆ. “ಮರ ಒಳ್ಳೇದೆಂದರೆ ಅದರ ಫಲವೂ ಒಳ್ಳೇದನ್ನಿರಿ. ಮರ ಹುಳುಕು ಅಂದರೆ ಅದರ ಫಲವೂ ಹುಳುಕು ಅನ್ನಿರಿ. ಫಲದಿಂದಲೇ ಮರದ ಗುಣವು ಗೊತ್ತಾಗುವದು,” ಅನ್ನುತ್ತಾನೆ ಅವನು.

ದೆವ್ವಗಳನ್ನು ಬಿಡಿಸುವ ಒಳ್ಳೆಯ ಫಲವು ಯೇಸು ಸೈತಾನನನ್ನು ಸೇವಿಸುವದರಿಂದ ಬಂತೆಂದು ಆರೋಪಿಸುವದು ಮೂರ್ಖತನ. ಫಲ ಒಳ್ಳೆಯದಾಗಿರುವಲ್ಲಿ ಮರ ಕೊಳೆತಿರುವದಿಲ್ಲ. ಆದರೆ ಯೇಸುವಿನ ಮೇಲೆ ಫರಿಸಾಯರು ಹಾಕಿದ ಅವಿವೇಕದ ಆರೋಪ ಮತ್ತು ಅಧಾರವಿಲ್ಲದ ವಿರೋಧಗಳ ಕೊಳೆತಿರುವ ಫಲವು ಅವರು ತಾವೇ ಹುಳುಕಾಗಿದ್ದಾರೆಂದು ರುಜುಪಡಿಸುತ್ತದೆ. ಯೇಸುವು ಹೇಳುವದು: “ಸರ್ಪಜಾತಿಯವರೇ, ನೀವು ಕೆಟ್ಟವರಾಗಿರಲಾಗಿ ಒಳ್ಳೆಯ ಮಾತುಗಳನ್ನಾಡುವದಕ್ಕೆ ನಿಮ್ಮಿಂದ ಹೇಗಾದೀತು? ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಗೆ ಬರುವದು.”

ನಮ್ಮ ಮಾತುಗಳು ನಮ್ಮ ಹೃದಯದ ಪರಿಸ್ಥಿತಿಯನ್ನು ಪ್ರತಿಬಿಂಬಿಸುವದರಿಂದ ನಾವೇನು ಹೇಳುತ್ತೇವೋ ಅದು ನ್ಯಾಯತೀರ್ಪಿಗೆ ಆಧಾರವನ್ನೊದಗಿಸುತ್ತದೆ. “ನಾನು ನಿಮಗೆ ಹೇಳುವದು,” ಯೇಸುವು ಅನ್ನುತ್ತಾನೆ, “ಏನಂದರೆ ಮನುಷ್ಯರು ಸುಮ್ಮನೆ ಆಡುವ ಪ್ರತಿಯೊಂದು ಮಾತಿನ ವಿಷಯವಾಗಿ ನ್ಯಾಯವಿಚಾರಣೆಯ ದಿನದಲ್ಲಿ ಉತ್ತರ ಕೊಡಬೇಕು. ನಿನ್ನ ಮಾತುಗಳಿಂದಲೇ ನೀತಿವಂತನೆಂದು ತೀರ್ಪು ಹೊಂದುವಿ; ನಿನ್ನ ಮಾತುಗಳಿಂದಲೇ ಅಪರಾಧಿಯೆಂದು ತೀರ್ಪು ಹೊಂದುವಿ.”

ಯೇಸುವಿನ ಈ ಎಲ್ಲಾ ಅದ್ಭುತಕಾರ್ಯಗಳನ್ನು ನೋಡಿದ ಬಳಿಕವೂ, ಶಾಸ್ತ್ರಿಗಳೂ, ಫರಿಸಾಯರೂ ವಿನಂತಿಸುವದು: “ಬೋಧಕನೇ, ನಿನ್ನಿಂದಾಗುವ ಒಂದು ಸೂಚಕ ಕಾರ್ಯವನ್ನು ನೋಡಬೇಕೆಂದು ನಮಗೆ ಅಪೇಕ್ಷೆಯದೆ.” ಯೆರೂಸಲೇಮಿನ ಈ ವ್ಯಕ್ತಿಗಳು ತಾವೇ ಅವನ ಅದ್ಭುತಗಳನ್ನು ನೋಡಿರಲಿಕ್ಕಿಲ್ಲವಾದರೂ, ಅವುಗಳ ಕುರಿತಾದ ನಿರಾಕರಿಸಲಾಗದ ಪ್ರತ್ಯಕ್ಷ ಸಾಕ್ಷ್ಯಗಳು ಇದ್ದವು. ಆದುದರಿಂದ ಯೇಸು ಈ ಯೆಹೂದಿ ಮುಖಂಡರಿಗೆ ಹೇಳುವದು: “ವ್ಯಭಿಚಾರಿಣಿಯಂತಿರುವ ಈ ಕೆಟ್ಟ ಸಂತತಿಯು ಸೂಚಕ ಕಾರ್ಯವನ್ನು ನೋಡಬೇಕೆಂದು ಅಪೇಕ್ಷಿಸುತ್ತದೆ. ಆದರೆ ಯೋನನೆಂಬ ಪ್ರವಾದಿಯಲ್ಲಿ ಆದ ಸೂಚಕ ಕಾರ್ಯವೇ ಹೊರತು ಬೇರೆ ಯಾವದೂ ಇದಕ್ಕೆ ಸಿಕ್ಕುವದಿಲ್ಲ.”

ಇದರ ಅರ್ಥವನ್ನು ವಿವರಿಸುತ್ತಾ ಯೇಸು ಮುಂದುವರಿಸುವದು: “ಯೋನನು ಹೇಗೆ ಮೂರು ದಿನ ರಾತ್ರಿ ಹಗಲು ದೊಡ್ಡ ಮೀನಿನ ಹೊಟ್ಟೆಯೊಳಗೆ ಇದ್ದನೋ, ಹಾಗೆಯೇ ಮನುಷ್ಯ ಕುಮಾರನು ಮೂರು ದಿನ ರಾತ್ರಿ ಹಗಲು ಭೂಗರ್ಭದೊಳಗೆ ಇರುವನು.” ಮೀನಿನಿಂದ ನುಂಗಲ್ಪಟ್ಟ ಬಳಿಕ ಯೋನನು ಪುನರುತ್ಥಾನವಾದವನಂತೆ ಹೊರಗೆ ಬಂದನು. ಹಾಗೆಯೇ ತಾನು ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡುವನೆಂದು ಯೇಸುವು ಮುಂತಿಳಿಸುತ್ತಾನೆ. ಆದರೂ ಈ ಯೆಹೂದಿ ಮುಖಂಡರು, ತದನಂತರ ಯೇಸುವಿಗೆ ಪುನರುತ್ಥಾನವಾದಾಗಲೂ, “ಯೋನನೆಂಬ ಪ್ರವಾದಿಯಲ್ಲಿ ಆದ ಸೂಚಕ ಕಾರ್ಯ”ವನ್ನು ಉಪೇಕ್ಷಿಸುತ್ತಾರೆ.

ಯೋನನ ಸಾರುವಿಕೆಯನ್ನು ಕೇಳಿ ಪಶ್ಚಾತ್ತಾಪ ಪಟ್ಟ ನಿನವೆಯ ಜನರು ನ್ಯಾಯ ವಿಚಾರಣೆಯಲ್ಲಿ ಎದ್ದು ಬಂದು ಯೇಸುವನ್ನು ತಿರಸ್ಕರಿಸಿದ ಯೆಹೂದ್ಯರನ್ನು ಖಂಡಿಸುವರೆಂದು ಹೀಗೆ ಯೇಸು ನುಡಿಯುತ್ತಾನೆ. ಇದೇ ರೀತಿ, ಸೊಲೊಮೋನನ ವಿವೇಕವನ್ನು ಕೇಳಲು ಭೂಮಿಯ ಕಟ್ಟಕಡೆಯಿಂದ ಬಂದು, ತಾನು ನೋಡಿದ ಮತ್ತು ಕೇಳಿದ ಸಂಗತಿಗಳಿಂದ ಅಚ್ಚರಿಪಟ್ಟ ಶೀಬಾ ದೇಶದ ರಾಣಿಯಲ್ಲಿಯೂ ಒಂದು ಹೋಲಿಕೆಯನ್ನು ಯೇಸು ತೋರಿಸುತ್ತಾನೆ. “ಆದರೆ, ನೋಡಿರಿ!” ಯೇಸುವು ಗಮನಿಸಿದ್ದು, “ಇಲ್ಲಿ ಸೊಲೊಮೋನನಿಗಿಂತಲೂ ಹೆಚ್ಚಿನವನಿದ್ದಾನೆ.”

ಆ ಬಳಿಕ ಯೇಸುವು, ದುಷ್ಟಾತ್ಮವು ಹೊರಗೆ ಬಂದಿದ್ದ ಮನುಷ್ಯನೊಬ್ಬನ ದೃಷ್ಟಾಂತವನ್ನು ಕೊಡುತ್ತಾನೆ. ಆದರೆ ಆ ಮನುಷ್ಯನು ಶೂನ್ಯ ಸ್ಥಾನವನ್ನು ಒಳ್ಳೆಯ ವಿಷಯಗಳಿಂದ ತುಂಬಿಸದೆ ಇದ್ದ ಕಾರಣ ಅವನಲ್ಲಿ ಇನ್ನು ಏಳು ದುಷ್ಟಾತ್ಮಗಳು ಬಂದು ನೆಲಸುತ್ತವೆ. “ಇದರಂತೆಯೇ ಈ ಕೆಟ್ಟ ಸಂತತಿಗೆ ಆಗುವದು” ಅನ್ನುತ್ತಾನೆ ಯೇಸು. ಇಸ್ರಾಯೇಲ್‌ ಜನಾಂಗಕ್ಕೆ ಶುದ್ಧೀಕರಣವಾಗಿತ್ತು ಮತ್ತು ಸುಧಾರಣೆಗಳನ್ನೂ ಅನುಭವಿಸಿತ್ತು—ಒಂದು ಅಶುದ್ಧಾತ್ಮದ ತಾತ್ಕಾಲಿಕ ತೊಲಗೋಣದಂತೆ. ಆದರೆ ದೇವರ ಪ್ರವಾದಿಗಳನ್ನು ತಿರಸ್ಕರಿಸುತ್ತಾ, ಕ್ರಿಸ್ತನನ್ನು ವಿರೋಧಿಸುವ ವರೆಗೂ ತಲುಪಿದ್ದ ಆ ಜನಾಂಗವು ಅದರ ದುಸ್ಥಿತಿ ಪ್ರಾರಂಭಕ್ಕಿಂತಲೂ ಹೆಚ್ಚು ಕೆಟ್ಟದ್ದಾಗಿರುವದನ್ನು ಪ್ರಕಟಿಸಿತ್ತು.

ಯೇಸುವು ಇನ್ನೂ ಮಾತಾಡುತ್ತಿರುವಾಗಲೇ, ಅವನ ತಾಯಿ ಮತ್ತು ಸಹೋದರರು ಬಂದು ಜನರ ಗುಂಪಿನ ಅಂಚಿನಲ್ಲಿ ನಿಲ್ಲುತ್ತಾರೆ. ಆಗ ಯಾರೋ ಒಬ್ಬನು ಹೇಳುತ್ತಾನೆ: “ಇಗೋ, ನಿನ್ನ ತಾಯಿಯೂ, ಸಹೋದರರೂ ನಿನ್ನನ್ನು ಮಾತಾಡಿಸಬೇಕೆಂದು ಹೊರಗೆ ನಿಂತಿದ್ದಾರೆ.”

“ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಯೇಸು ವಿಚಾರಿಸುತ್ತಾನೆ. ತನ್ನ ಶಿಷ್ಯರೆಡೆಗೆ ಕೈಚಾಚಿ, ಅವನು ಹೇಳುವದು: “ಇಗೋ, ನನ್ನ ತಾಯಿ, ನನ್ನ ಸಹೋದರರು! ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ನನಗೆ ಸಹೋದರನೂ, ಸಹೋದರಿಯೂ ಮತ್ತು ತಾಯಿಯೂ ಆಗಬೇಕು.” ಈ ರೀತಿಯಲ್ಲಿ ಯೇಸುವು, ಸಂಬಂಧಿಗಳಿಗೆ ತನಗಿರುವ ಬಂಧ ಎಷ್ಟು ನೆಚ್ಚಿನದ್ದಾಗಿರಬಹುದಾದರೂ, ತನ್ನ ಶಿಷ್ಯರೊಂದಿಗೆ ತನಗಿರುವ ಸಂಬಂಧವು ಅದಕ್ಕಿಂತಲೂ ಹೆಚ್ಚು ಪ್ರೀತಿಪೂರ್ಣವಾದದ್ದು ಎಂದು ತೋರಿಸುತ್ತಾನೆ. ಮತ್ತಾಯ 12:33-50; ಮಾರ್ಕ 3:31-35; ಲೂಕ 8:19-21.

▪ “ಮರ” ಮತ್ತು “ಫಲ” ಇವೆರಡನ್ನೂ ಒಳ್ಳೆಯದಾಗಿ ಮಾಡುವದರಲ್ಲಿ ಫರಿಸಾಯರು ಪರಾಜಯಗೊಂಡದ್ದು ಹೇಗೆ?

▪ “ಯೋನನೆಂಬ ಪ್ರವಾದಿಯಲ್ಲಿ ಆದ ಸೂಚಕ ಕಾರ್ಯ” ಯಾವದು, ಮತ್ತು ಅದು ನಂತರ ಹೇಗೆ ಉಪೇಕ್ಷಿಸಲ್ಪಟ್ಟಿತು?

▪ ಮೊದಲ ಶತಕದ ಇಸ್ರಾಯೇಲ್‌ ಜನಾಂಗವು, ಅಶುದ್ಧಾತ್ಮವು ಹೊರಗೆ ಬಂದಿದ್ದ ಮನುಷ್ಯನಂತೆ ಹೇಗೆ ಇತ್ತು?

▪ ತನ್ನ ಶಿಷ್ಯರೊಂದಿಗೆ ತನಗಿದ್ದ ಆಪ್ತ ಸಂಬಂಧವನ್ನು ಯೇಸುವು ಹೇಗೆ ಒತ್ತಿ ಹೇಳಿದನು?