ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ಮತ್ತು ಒಬ್ಬ ಐಶ್ವರ್ಯವಂತ ಯೌವನಸ್ಥ ಅಧಿಕಾರಿ

ಯೇಸು ಮತ್ತು ಒಬ್ಬ ಐಶ್ವರ್ಯವಂತ ಯೌವನಸ್ಥ ಅಧಿಕಾರಿ

ಅಧ್ಯಾಯ 96

ಯೇಸು ಮತ್ತು ಒಬ್ಬ ಐಶ್ವರ್ಯವಂತ ಯೌವನಸ್ಥ ಅಧಿಕಾರಿ

ಯೇಸುವು ಯೆರೂಸಲೇಮಿಗೆ ಹೋಗಲು ಪೆರಿಯ ಪ್ರಾಂತ್ಯದ ಮೂಲಕ ಹಾದುಹೋಗುವಾಗ, ಒಬ್ಬ ಯೌವನಸ್ಥನು ಓಡುತ್ತಾ ಆತನ ಎದುರಿಗೆ ಬಂದು ಮೊಣಕಾಲೂರುತ್ತಾನೆ. ಈ ಮನುಷ್ಯನನ್ನು ಒಬ್ಬ ಅಧಿಕಾರಿ ಎಂದು ಕರೆಯಲಾಗುತ್ತದೆ, ಪ್ರಾಯಶಃ ಅವನು ಸ್ಥಳೀಯ ಸಭಾಮಂದಿರವೊಂದರಲ್ಲಿ ಒಂದು ಪ್ರತಿಷ್ಠೆಯ ಸ್ಥಾನವನ್ನು ಹೊಂದಿರಬಹುದು ಇಲ್ಲವೆ ಸನ್ಹೇದ್ರಿನ್‌ನ ಒಬ್ಬ ಸದಸ್ಯನಾಗಿದ್ದಿರಲೂಬಹುದು. ಅಲ್ಲದೆ, ಅವನು ಐಶ್ವರ್ಯವಂತನೂ ಆಗಿದ್ದನು. “ಒಳ್ಳೇ ಬೋಧಕನೇ,” ಅವನು ಕೇಳುವದು, “ನಾನು ನಿತ್ಯಜೀವಕ್ಕೆ ಬಾಧ್ಯಸ್ಥನಾಗಬೇಕಾದರೆ ಏನು ಮಾಡಬೇಕು?”

“ನನ್ನನ್ನು ಒಳ್ಳೆಯವನೆಂದು ಯಾಕೆ ಹೇಳುತ್ತೀ?” ಯೇಸುವು ಉತ್ತರಿಸುತ್ತಾನೆ. “ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಲ್ಲ.” ಇಲ್ಲಿ “ಒಳ್ಳೆಯವನು” ಎಂಬದನ್ನು ಯೌವನಸ್ಥನು ಒಂದು ಬಿರುದಿನೋಪಾದಿ ಉಪಯೋಗಿಸಿರಬಹುದು, ಆದುದರಿಂದ ಅಂಥಾ ಬಿರುದು ದೇವರೊಬ್ಬನಿಗೆ ಮಾತ್ರ ಸಲ್ಲುತ್ತದೆ ಎಂದು ಯೇಸುವು ಅವನಿಗೆ ತಿಳಿಯುವಂತೆ ಮಾಡುತ್ತಾನೆ.

“ಆದರೆ” ಯೇಸುವು ಮುಂದುವರಿಸಿದ್ದು, “ಆ ಜೀವದಲ್ಲಿ ಸೇರಬೇಕೆಂದಿದ್ದರೆ ದೇವರಾಜ್ಞೆಗಳಿಗೆ ಸರಿಯಾಗಿ ನಡೆದುಕೋ.”

“ಅವು ಯಾವವು?” ಅವನು ಕೇಳುತ್ತಾನೆ.

ದಶಾಜ್ಞೆಗಳಲ್ಲಿ ಐದನ್ನು ಉಲ್ಲೇಖಿಸುತ್ತಾ, ಯೇಸುವು ಉತ್ತರಿಸುವದು: “ನರಹತ್ಯಮಾಡಬಾರದು, ವ್ಯಭಿಚಾರಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿ ಹೇಳಬಾರದು, ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸಬೇಕು.” ಮತ್ತು ಅದರೊಂದಿಗೆ ಒಂದು ಪ್ರಾಮುಖ್ಯವಾದ ಆಜ್ಞೆಯನ್ನೂ ಸಹಾ ಕೂಡಿಸುತ್ತಾ, ಯೇಸುವು ಹೇಳುವದು: “ನಿನ್ನ ಹಾಗೆಯೇ ನಿನ್ನ ನೆರೆಯವನನ್ನು ಪ್ರೀತಿ ಮಾಡಬೇಕು.”

“ನಾನು ಚಿಕ್ಕಂದಿನಿಂದಲೂ ಇವೆಲ್ಲಕ್ಕೂ ಸರಿಯಾಗಿ ನಡಕೊಂಡು ಬಂದಿದ್ದೇನೆ,” ಆ ಮನುಷ್ಯನು ಪೂರ್ಣ ಯಥಾರ್ಥತೆಯಿಂದ ಉತ್ತರಿಸುತ್ತಾನೆ. “ಇನ್ನೇನು ಕಡಮೆಯಾಗಿರಬಹುದು?”

ಈ ಮನುಷ್ಯನ ಆತುರತೆಯ ಹಾಗೂ, ಆಸಕ್ತಕರ ವಿನಂತಿಯನ್ನು ಆಲಿಸಿ, ಯೇಸುವು ಅವನೆಡೆಗೆ ಪ್ರೀತಿಯುಳ್ಳವನಾಗುತ್ತಾನೆ. ಆದರೆ ಐಹಿಕ ಸ್ವತ್ತುಗಳ ಕಡೆಗೆ ಈ ಮನುಷ್ಯನಿಗಿರುವ ಒಲವನ್ನು ಯೇಸುವು ಗ್ರಹಿಸುತ್ತಾನೆ ಮತ್ತು ಅವನ ಆವಶ್ಯಕತೆಯೆಡೆಗೆ ನಿರ್ದೇಶಿಸುತ್ತಾನೆ: “ನಿನಗೆ ಒಂದು ಕಡಿಮೆಯಾಗಿದೆ; ಹೋಗು, ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು.”

ಈ ಮನುಷ್ಯನು ಮೋರೆ ಬಾಡಿದವನಾಗಿ ಎದ್ದು ದುಃಖದಿಂದ ಹೊರಟುಹೋಗುವದನ್ನು ಯೇಸುವು ನಿಸ್ಸಂದೇಹವಾಗಿ ಕನಿಕರದಿಂದ ನೋಡುತ್ತಾನೆ. ನಿಜ ಐಶ್ವರ್ಯದ ಮೌಲ್ಯತೆಯ ಕಡೆಗೆ ಅವನ ಸಂಪತ್ತು ಅವನನ್ನು ಕುರುಡನನ್ನಾಗಿ ಮಾಡುತ್ತದೆ. “ಧನವಂತರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ,” ಯೇಸುವು ರೋದಿಸುತ್ತಾನೆ.

ಯೇಸುವಿನ ಮಾತುಗಳು ಶಿಷ್ಯರನ್ನು ಬೆರಗುಗೊಳಿಸುತ್ತವೆ. ಆದರೆ ಅವನು ಒಂದು ಸರ್ವಸಾಮಾನ್ಯ ಸೂತ್ರವನ್ನು ಹೇಳಿದಾಗ ಅವರು ಇನ್ನಷ್ಟು ಬೆರಗಾಗುತ್ತಾರೆ: “ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜೀಕಣ್ಣಿನಲ್ಲಿ ನುಗ್ಗುವದು ಸುಲಭ.”

“ಹೀಗಿದ್ದರೆ ಯಾರಿಗೆ ರಕ್ಷಣೆಯಾದೀತು?” ಶಿಷ್ಯರು ತಿಳಿಯಲು ಬಯಸಿದರು.

ಅವರನ್ನು ನೇರವಾಗಿ ದೃಷ್ಟಿಸಿನೋಡಿ, ಯೇಸುವು ಉತ್ತರಿಸಿದ್ದು: “ಇದು ಮನುಷ್ಯರಿಗೆ ಅಸಾಧ್ಯ; ದೇವರಿಗೆ ಅಸಾಧ್ಯವಲ್ಲ. ದೇವರಿಗೆ ಎಲ್ಲವು ಸಾಧ್ಯ.”

ಐಶ್ವರ್ಯವಂತ ಯೌವನಸ್ಥ ಅಧಿಕಾರಿಯು ಮಾಡಿದ್ದಕ್ಕಿಂತ ಅತಿ ಭಿನ್ನವಾದ ಆಯ್ಕೆಯನ್ನು ಅವರು ಮಾಡಿದ್ದರು. ಪೇತ್ರನು ಹೇಳಿದ್ದು: “ಇಗೋ, ನಾವು ಎಲ್ಲಾ ಬಿಟ್ಟುಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ.” ಆದುದರಿಂದ ಅವನು ಕೇಳುವದು: “ನಮಗೆ ಏನು ದೊರಕುವದು?”

“ಹೊಸ ಸೃಷ್ಟಿಯಲ್ಲಿ,” ಯೇಸುವು ವಾಗ್ದಾನಿಸುವದು, “ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವಾಗ ನನ್ನನ್ನು ಹಿಂಬಾಲಿಸಿರುವ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.” ಹೌದು, ಏದೆನ್‌ ತೋಟದಲ್ಲಿದ್ದಂತೆಯೇ, ಪರಿಸ್ಥಿತಿಗಳ ಹೊಸ ಸೃಷ್ಟಿಯು ಆಗಲಿರುವದು ಎಂದು ಯೇಸುವು ತೋರಿಸುತ್ತಾನೆ. ಈ ಭೂವ್ಯಾಪಕ ಪರದೈಸದ ಮೇಲೆ ಕ್ರಿಸ್ತನೊಂದಿಗೆ ಆಳುವ ಬಹುಮಾನವು ಪೇತ್ರನೂ, ಇತರ ಶಿಷ್ಯರೂ ಪಡೆಯಲಿಕ್ಕಿದ್ದರು. ಅಂಥ ಮಹಾ ಬಹುಮಾನವು ಯಾವುದೇ ತ್ಯಾಗಕ್ಕೆ ಯೋಗ್ಯವಾದದ್ದಾಗಿದೆ!

ಆದಾಗ್ಯೂ, ಈಗಲೂ ಕೂಡ, ಕೆಲವು ಬಹುಮಾನಗಳು, ಯೇಸುವು ಖಂಡಿತವಾಗಿ ಹೇಳುವಂತೆ ಅಲ್ಲಿರುತ್ತವೆ: “ಯಾವನು ನನ್ನ ನಿಮಿತ್ತವೂ ಸುವಾರ್ತೆಯ ನಿಮಿತ್ತವೂ ಮನೆಯನ್ನಾಗಲಿ ಅಣ್ಣ ತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟುಬಿಟ್ಟಿರುವನೋ ಅವನಿಗೆ ಈಗಿನ ಕಾಲದಲ್ಲಿ ಮನೆ ಅಣ್ಣ ತಮ್ಮ ಅಕ್ಕ ತಂಗಿ ತಾಯಿ ಮಕ್ಕಳು ಭೂಮಿ ಇವೆಲ್ಲವೂ ಹಿಂಸೆಗಳು ಸಹಿತವಾಗಿ ನೂರರಷ್ಟು ಸಿಕ್ಕೇ ಸಿಕ್ಕುವವು; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು.”

ಯೇಸುವು ವಾಗ್ದಾನಿಸಿದಂತೆ, ಅವನ ಶಿಷ್ಯರು ಲೋಕದ ಯಾವುದೇ ಭಾಗಕ್ಕೆ ಹೋದರೂ, ಅವರು ತಮ್ಮ ಸಹ ಕ್ರೈಸ್ತರೊಂದಿಗೆ, ಅವರ ಸ್ವಾಭಾವಿಕ ಕುಟುಂಬದ ಸದಸ್ಯರೊಂದಿಗೆ ಆನಂದಿಸುವ ಸಂಬಂಧಕ್ಕಿಂತಲೂ ಹೆಚ್ಚು ನಿಕಟತಮ ಮತ್ತು ಅಧಿಕ ಮೂಲ್ಯತೆಯ ಸಂಬಂಧದಲ್ಲಿ ಆನಂದಿಸುವರು. ಐಶ್ವರ್ಯವಂತ ಯೌವನಸ್ಥ ಅಧಿಕಾರಿಯು ಈ ಬಹುಮಾನವನ್ನೂ ಮತ್ತು ದೇವರ ಸ್ವರ್ಗೀಯ ರಾಜ್ಯದಲ್ಲಿ ನಿತ್ಯಜೀವವನ್ನೂ ಸಹ ಪ್ರಾಯಶಃ ಎರಡನ್ನೂ ಕಳಕೊಳ್ಳುತ್ತಾನೆ.

ಅನಂತರ ಯೇಸುವು ಕೂಡಿಸುವದು: “ಆದರೆ ಬಹು ಮಂದಿ ಮೊದಲಿನವರು ಕಡೆಯವರಾಗುವರು, ಕಡೆಯವರು ಮೊದಲಿನವರಾಗುವರು.” ಅವನ ಅರ್ಥವೇನಾಗಿತ್ತು?

ಧಾರ್ಮಿಕ ಸುಯೋಗಗಳನ್ನು, ಈ ಐಶ್ವರ್ಯವಂತ ಯೌವನಸ್ಥ ಅಧಿಕಾರಿಯಂತೆ “ಮೊದಲು” ಆನಂದಿಸುತ್ತಿರುವ ಅನೇಕರು ಆ ರಾಜ್ಯವನ್ನು ಪ್ರವೇಶಿಸರು. ಅವರು “ಕಡೆಯವರಾಗುವರು.” ಆದರೆ ಯೇಸುವಿನ ನಮ್ರ ಶಿಷ್ಯರ ಸಹಿತ ಅನೇಕರು, ಯಾರನ್ನು ಸ್ವ-ನೀತಿಯ ಫರಿಸಾಯರು “ಕಡೆಯವರೆಂದು”—ಈ ಭೂಮಿಯ ಜನರು, ಇಲ್ಲವೆ ‘ಆಮ್‌ ಹಾ-‘ಆ‘ರೆಟ್ಸ್‌—ಎಂದು ಕರೆದರೋ ಅವರು “ಮೊದಲಿನವರಾಗುವರು.” ಅವರು “ಮೊದಲಿನವರಾಗುವದು” ಅಂದರೆ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಜೊತೆ ಅರಸರಾಗಿ ಆಳುವ ಸುಯೋಗವನ್ನು ಪಡೆಯುವರು. ಮಾರ್ಕ 10:17-31; ಮತ್ತಾಯ 19:16-30; ಲೂಕ 18:18-30.

▪ ಆ ಐಶ್ವರ್ಯವಂತ ಯೌವನಸ್ಥನು ಯಾವ ರೀತಿಯ ಅಧಿಕಾರಿಯಾಗಿದ್ದನು ಎಂದು ತೋರುತ್ತದೆ?

▪ ಒಳ್ಳೆಯವನೆಂದು ಕರೆಯಲ್ಪಡುವದನ್ನು ಯೇಸುವು ಅಡ್ಡಿ ಮಾಡುವದು ಏಕೆ?

▪ ಐಶ್ವರ್ಯವಂತನಾಗಿರುವದರ ಅಪಾಯವು ಯೌವನಸ್ಥ ಅಧಿಕಾರಿಯ ಅನುಭವದಿಂದ ಹೇಗೆ ಉದಾಹರಿಸಲ್ಪಟ್ಟಿದೆ?

▪ ತನ್ನ ಹಿಂಬಾಲಕರಿಗೆ ಯಾವ ಬಹುಮಾನಗಳನ್ನು ಯೇಸುವು ವಾಗ್ದಾನಿಸಿರುತ್ತಾನೆ?

▪ ಮೊದಲಿನವನು ಕಡೆಯವನಾಗುವದೂ, ಕಡೆಯವನು ಮೊದಲಿನವನಾಗುವದೂ ಹೇಗೆ?