ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋಹಾನನು ಕಡಿಮೆಯಾಗುತ್ತಾನೆ, ಯೇಸುವು ವೃದ್ಧಿಯಾಗುತ್ತಾನೆ

ಯೋಹಾನನು ಕಡಿಮೆಯಾಗುತ್ತಾನೆ, ಯೇಸುವು ವೃದ್ಧಿಯಾಗುತ್ತಾನೆ

ಅಧ್ಯಾಯ 18

ಯೋಹಾನನು ಕಡಿಮೆಯಾಗುತ್ತಾನೆ, ಯೇಸುವು ವೃದ್ಧಿಯಾಗುತ್ತಾನೆ

ಸಾ.ಶ. 30ರ ವಸಂತಕಾಲದ ಪಸ್ಕವನ್ನು ಹಿಂಬಾಲಿಸಿ ಯೇಸು ಮತ್ತು ಅವನ ಶಿಷ್ಯರು ಯೆರೂಸಲೇಮಿನಿಂದ ಹೊರಟು ಹೋಗುತ್ತಾರೆ. ಆದಾಗ್ಯೂ, ಅವರು ಗಲಿಲಾಯದಲ್ಲಿರುವ ತಮ್ಮ ಮನೆಗಳಿಗೆ ಹಿಂದಿರುಗಿ ಹೋಗದೇ, ಯೂದಾಯ ದೇಶಕ್ಕೆ ಹೋಗಿ, ಅಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾರೆ. ಸ್ನಾನಿಕನಾದ ಯೋಹಾನನು ಈಗ ಒಂದು ವರ್ಷದಿಂದ ಅದೇ ಕೆಲಸವನ್ನು ಮಾಡುತ್ತಾ ಇದ್ದನು ಮತ್ತು ಅವನೊಂದಿಗೆ ಇನ್ನೂ ಅವನ ಶಿಷ್ಯರು ಇದ್ದರು.

ವಾಸ್ತವದಲ್ಲಿ, ಯೇಸುವು ಸ್ವತಃ ಯಾರನ್ನೂ ದೀಕ್ಷಾಸ್ನಾನ ಮಾಡಿಸಲಿಲ್ಲ, ಆದರೆ ಅವನ ಮಾರ್ಗದರ್ಶನದ ಕೆಳಗೆ ಅವನ ಶಿಷ್ಯರು ಮಾಡುತ್ತಿದ್ದರು. ಅವರ ದೀಕ್ಷಾಸ್ನಾನಕ್ಕೆ, ಯೋಹಾನನಿಂದ ನಡಿಸಲ್ಪಡುತ್ತಿದ್ದ ಅದೇ ಸೂಚಿತಾರ್ಥ ಇತ್ತು, ದೇವರ ನಿಯಮದೊಡಂಬಡಿಕೆಯ ವಿರುದ್ಧ ಮಾಡಿದ ಪಾಪಗಳಿಗಾಗಿ ಯೆಹೂದಿಯೊಬ್ಬನು ಪಶ್ಚಾತ್ತಾಪ ಪಡುವದರ ಸಂಕೇತ ಅದಾಗಿತ್ತು. ಆದಾಗ್ಯೂ, ಅವನ ಪುನರುತ್ಥಾನದ ನಂತರ, ಬೇರೊಂದು ಸೂಚಿತಾರ್ಥವಿರುವ ಒಂದು ದೀಕ್ಷಾಸ್ನಾನವನ್ನು ಮಾಡಿಸುವಂತೆ ಯೇಸುವು ತನ್ನ ಶಿಷ್ಯರಿಗೆ ಉಪದೇಶಿಸುತ್ತಾನೆ. ಯೆಹೋವ ದೇವರನ್ನು ಸೇವಿಸುವುದಕ್ಕೆ ಒಬ್ಬನು ಮಾಡುವ ಸಮರ್ಪಣೆಯ ಸಂಕೇತವಾಗಿ ಇಂದು ಕ್ರೈಸ್ತ ದೀಕ್ಷಾಸ್ನಾನ ಇರುತ್ತದೆ.

ಯೇಸುವಿನ ಶುಶ್ರೂಷೆಯ ಆರಂಭದ ಹಂತದಲ್ಲಿಯಾದರೋ, ಅವರು ಪ್ರತ್ಯೇಕವಾಗಿ ಕಾರ್ಯ ನಡಿಸುತ್ತಿದ್ದರೂ, ಯೋಹಾನನು ಮತ್ತು ಯೇಸುವು ಪಶ್ಚಾತ್ತಾಪ ಹೊಂದಿದ ವ್ಯಕ್ತಿಗಳಿಗೆ ಕಲಿಸುತ್ತಿದ್ದರು ಮತ್ತು ದೀಕ್ಷಾಸ್ನಾನ ಮಾಡಿಸುತ್ತಿದ್ದರು. ಆದರೆ ಯೋಹಾನನ ಶಿಷ್ಯರು ಮತ್ಸರಗೊಳ್ಳುತ್ತಾರೆ ಮತ್ತು ಯೇಸುವಿನ ಕುರಿತು ದೂರಿಡುತ್ತಾರೆ: “ಗುರುವೇ, ಅವನೂ ದೀಕ್ಷಾಸ್ನಾನ ಮಾಡಿಸುತ್ತಾನೆ, ಮತ್ತು ಎಲ್ಲರೂ ಅವನ ಬಳಿಗೆ ಹೋಗುತ್ತಾರೆ.”

ಅದಕ್ಕಾಗಿ ಮತ್ಸರ ಪಡುವ ಬದಲು, ಯೇಸುವಿನ ಯಶಸ್ಸಿಗಾಗಿ ಯೋಹಾನನು ಸಂತೋಷಿಸುತ್ತಾನೆ ಮತ್ತು ಅವನ ಶಿಷ್ಯರೂ ಸಂತೋಷಿಸುವಂತೆ ಕೂಡಾ ಬಯಸುತ್ತಾನೆ. ಅವನು ಅವರಿಗೆ ನೆನಪಿಸಿದ್ದು: “ನಾನು ಕ್ರಿಸ್ತನಲ್ಲ, ಆತನ ಮುಂದೆ ಕಳುಹಿಸಲ್ಪಟ್ಟವನಾಗಿದ್ದೇನೆ ಎಂದು ಹೇಳಿದ್ದಕ್ಕೆ ನೀವೇ ಸಾಕ್ಷಿ.” ಅನಂತರ ಒಂದು ಸುಂದರವಾದ ನಿದರ್ಶನೆಯನ್ನು ಕೊಡುತ್ತಾನೆ: “ಮದಲಗಿತ್ತಿಯುಳ್ಳವನೇ ಮದಲಿಂಗನು; ಆದರೂ ಮದಲಿಂಗನ ಗೆಳೆಯನು ಅವನ ಹತ್ತರ ನಿಂತುಕೊಂಡು ಅವನ ಮಾತುಗಳನ್ನು ಕೇಳಿ ಮದಲಿಂಗನ ಧ್ವನಿಗೆ ಬಹು ಸಂತೋಷ ಪಡುತ್ತಾನಲ್ಲವೇ. ಆದ್ದರಿಂದ ಈ ನನ್ನ ಸಂತೋಷವು ಸಂಪೂರ್ಣವಾಗಿ ಮಾಡಲ್ಪಟ್ಟಿದೆ.”

ಮದಲಿಂಗನ ಗೆಳೆಯನೋಪಾದಿ, ಸುಮಾರು ಆರು ತಿಂಗಳ ಹಿಂದೆ ತನ್ನ ಶಿಷ್ಯರನ್ನು ಯೇಸುವಿಗೆ ಪರಿಚಯಪಡಿಸಿಕೊಟ್ಟದರ್ದಲ್ಲಿ ಯೋಹಾನನು ಸಂತೋಷಿಸಿದ್ದನು. ಅವರಲ್ಲಿ ಕೆಲವರು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟ ಕ್ರೈಸ್ತರಿಂದ ಕೂಡಿದ ಕ್ರಿಸ್ತನ ಸ್ವರ್ಗೀಯ ಮದಲಗಿತ್ತಿ ವರ್ಗದ ಭಾವೀ ಸದಸ್ಯರಾಗಿ ಪರಿಣಮಿಸಿದರು. ತನ್ನ ಸದ್ಯದ ಶಿಷ್ಯರು ಕೂಡಾ ಯೇಸುವನ್ನು ಹಿಂಬಾಲಿಸುವಂತೆ ಯೋಹಾನನು ಬಯಸಿದ್ದನು, ಯಾಕಂದರೆ ಕ್ರಿಸ್ತನ ಯಶಸ್ವಿ ಶುಶ್ರೂಷೆಗಾಗಿ ಮಾರ್ಗವನ್ನು ಸಿದ್ಧಮಾಡುವದೇ ಅವನ ಉದ್ದೇಶವಾಗಿತ್ತು. ಯೋಹಾನನು ವಿವರಿಸಿದ್ದು: “ಆತನು ವೃದ್ಧಿಯಾಗಬೇಕು; ನಾನು ಕಡಿಮೆಯಾಗಬೇಕು.”

ಮೊದಲು ಸ್ನಾನಿಕನಾದ ಯೋಹಾನನ ಶಿಷ್ಯನಾಗಿದ್ದ, ಆದರೆ ಈಗ ಯೇಸುವಿನ ಹೊಸ ಶಿಷ್ಯನಾದ ಯೋಹಾನನು ಯೇಸುವಿನ ಮೂಲದ ಮತ್ತು ಮಾನವ ರಕ್ಷಣೆಯಲ್ಲಿ ಅವನ ಪ್ರಾಮುಖ್ಯ ಪಾತ್ರದ ಕುರಿತು ಬರೆಯುತ್ತಾ, ಹೀಗಂದನು: “ಪರಲೋಕದಿಂದ ಬರುವವನು ಎಲ್ಲರ ಮೇಲೆ ಇದ್ದಾನೆ. . . . ತಂದೆಯು ತನ್ನ ಮಗನನ್ನು ಪ್ರೀತಿಸಿ ಎಲ್ಲವನ್ನೂ ಆತನ ಕೈಯಲ್ಲಿ ಕೊಟ್ಟಿದ್ದಾನೆ. ಆತನ ಮಗನನ್ನು ನಂಬುವವನಿಗೆ ನಿತ್ಯ ಜೀವ ಉಂಟು; ಮಗನಿಗೆ ಒಳಗಾಗದವನು ಜೀವವನ್ನು ಕಾಣುವದೇ ಇಲ್ಲ, ಬದಲಿಗೆ ದೇವರ ಕೋಪವು ಅವನ ಮೇಲೇ ನೆಲೆಗೊಂಡಿರುವದು.”

ತನ್ನ ಸ್ವಂತ ಚಟುವಟಿಕೆಯು ಕಡಿಮೆಯಾಗುವದನ್ನು ಸ್ನಾನಿಕನಾದ ಯೋಹಾನನು ಮಾತಾಡಿದ ಸ್ವಲ್ಪ ಸಮಯದೊಳಗೆ, ಅರಸನಾದ ಹೆರೋದನು ಅವನನ್ನು ಕೈದು ಮಾಡುತ್ತಾನೆ. ಹೆರೋದನು ತನ್ನ ಅಣನ್ಣಾದ ಫಿಲಿಪ್ಪನ ಹೆಂಡತಿ ಹೆರೋದ್ಯಳನ್ನು ಸ್ವತಃ ಇಟ್ಟುಕೊಂಡಿದ್ದನು ಮತ್ತು ಅವನ ಈ ಕೃತ್ಯವು ಅಯೋಗ್ಯವೆಂದು ಯೋಹಾನನು ಬಹಿರಂಗವಾಗಿ ಖಂಡಿಸಿದಾಗ, ಹೆರೋದನು ಅವನನ್ನು ಸೆರೆಮನೆಗೆ ಹಾಕುತ್ತಾನೆ. ಯೋಹಾನನ ದಸ್ತಗಿರಿಯನ್ನು ಯೇಸುವು ಕೇಳಿದಾಗ, ಅವನು ತನ್ನ ಶಿಷ್ಯರೊಂದಿಗೆ ಯೂದಾಯವನ್ನು ಬಿಟ್ಟು, ಗಲಿಲಾಯಕ್ಕೆ ಹೊರಟುಹೋಗುತ್ತಾನೆ. ಯೋಹಾನ 3:22–4:3; ಅ. ಕೃತ್ಯಗಳು 19:4; ಮತ್ತಾಯ 28:19; 2 ಕೊರಿಂಥ 11:2; ಮಾರ್ಕ 1:14; 6:17-20.

▪ ಯೇಸುವಿನ ಪುನರುತ್ಥಾನಕ್ಕೆ ಮುಂಚೆ ಆತನ ಮಾರ್ಗದರ್ಶನೆಯ ಕೆಳಗೆ ನಡಿಸಲ್ಪಟ್ಟ ದೀಕ್ಷಾಸ್ನಾನಗಳ ಸೂಚಿತಾರ್ಥವೇನು? ಮತ್ತು ಅವನ ಪುನರುತ್ಥಾನದ ನಂತರದವುಗಳು?

▪ ತನ್ನ ಶಿಷ್ಯರ ದೂರು ಅನಗತ್ಯವಾದದ್ದು ಎಂದು ಯೋಹಾನನು ಹೇಗೆ ತೋರಿಸಿದನು?

▪ ಯೋಹಾನನನ್ನು ಸೆರೆಮನೆಗೆ ಹಾಕಿದ್ದೇಕೆ?