ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲಾಜರನು ಪುನರುತ್ಥಾನಗೊಳಿಸಲ್ಪಟ್ಟಾಗ

ಲಾಜರನು ಪುನರುತ್ಥಾನಗೊಳಿಸಲ್ಪಟ್ಟಾಗ

ಅಧ್ಯಾಯ 91

ಲಾಜರನು ಪುನರುತ್ಥಾನಗೊಳಿಸಲ್ಪಟ್ಟಾಗ

ಯೇಸುವು, ಅವನೊಂದಿಗೆ ಇದ್ದವರೊಂದೊಡಗೂಡಿ, ಈಗ ಲಾಜರನ ಸಮಾಧಿಯ ಬಳಿಗೆ ಬರುತ್ತಾನೆ. ಅದೊಂದು ಗವಿಯಾಗಿದ್ದು, ಪ್ರವೇಶದ್ವಾರದಲ್ಲಿ ಒಂದು ಕಲ್ಲು ಇಡಲ್ಪಟ್ಟಿತ್ತು. “ಆ ಕಲ್ಲನ್ನು ತೆಗೆದುಹಾಕಿರಿ,” ಯೇಸುವು ಅನ್ನುತ್ತಾನೆ.

ಯೇಸುವು ಏನನ್ನು ಮಾಡಲು ಯೋಜಿಸಿದ್ದಾನೆಂದು ಪ್ರಾಯಶಃ ಇನ್ನೂ ತಿಳಿಯದೇ, ಮಾರ್ಥಳು ಅಡ್ಡಿಮಾಡುತ್ತಾಳೆ. “ಸ್ವಾಮೀ,” ಆಕೆ ಅನ್ನುವದು, “ಅವನು ಸತ್ತು ನಾಲ್ಕು ದಿವಸವಾಯಿತು; ಈಗ ನಾತ ಹುಟ್ಟಿದೆ.”

ಆದರೆ ಯೇಸುವು ಕೇಳುವದು: “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ ಎಂದು ನಾನು ನಿನಗೆ ಹೇಳಲಿಲ್ಲವೇ?”

ಆದುದರಿಂದ ಕಲ್ಲನ್ನು ತೆಗೆದು ಹಾಕಿದರು. ಅನಂತರ ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, ಪ್ರಾರ್ಥಿಸಿದನು: “ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಿನ್ನನ್ನು ಕೊಂಡಾಡುತ್ತೇನೆ; ನೀನು ಯಾವಾಗಲೂ ನನ್ನ ಪ್ರಾರ್ಥನೆಯನ್ನು ಕೇಳುವವನಾಗಿದ್ದೀ ಎಂದು ನನಗೆ ಗೊತ್ತೇ ಇದೆ; ಆದರೂ ನೀನೇ ನನ್ನನ್ನು ಕಳುಹಿಸಿಕೊಟ್ಟಿ ಎಂದು ಸುತ್ತಲು ನಿಂತಿರುವ ಜನರು ನಂಬುವಂತೆ ಅವರಿಗೋಸ್ಕರ ಈ ಮಾತುಗಳನ್ನಾಡಿದೆನು.” ಅವನು ಈಗ ಏನು ಮಾಡಲಿಕ್ಕಿದ್ದನೋ ಅದು ಅವನಿಗೆ ದೇವರಿಂದ ದೊರಕಿದ ಬಲದಿಂದ ಪೂರೈಸಶಕ್ತನಾಗಿದ್ದೇನೆ ಎಂದು ಜನರು ತಿಳಿದು ಕೊಳ್ಳಲು, ಯೇಸುವು ಬಹಿರಂಗವಾಗಿ ಪ್ರಾರ್ಥಿಸುತ್ತಾನೆ. ಅನಂತರ ಅವನು ದೊಡ್ಡ ಶಬ್ದದಿಂದ ಕೂಗಿ ಹೇಳಿದ್ದು: “ಲಾಜರನೇ, ಹೊರಗೆ ಬಾ!”

ಆಗ, ಲಾಜರನು ಹೊರಗೆ ಬಂದನು. ಅವನ ಕೈಕಾಲುಗಳು ಇನ್ನೂ ಬಟ್ಟೆಗಳಿಂದ ಕಟ್ಟಿದ್ದವು, ಅವನ ಮುಖವು ಕೈಪಾವಡದಿಂದ ಸುತ್ತಿತ್ತು. “ಅವನನ್ನು ಬಿಚ್ಚಿರಿ, ಹೋಗಲಿ,” ಎಂದನು ಯೇಸು.

ಈ ಅದ್ಭುತವನ್ನು ಕಂಡಾಗ, ಮರಿಯ ಮತ್ತು ಮಾರ್ಥಳನ್ನು ಸಂತೈಸಲು ಬಂದ ಅನೇಕ ಯೆಹೂದ್ಯರು ಯೇಸುವಿನ ಮೇಲೆ ನಂಬಿಕೆಯನ್ನಿಟ್ಟರು. ಆದರೂ, ಇತರರು ಸಂಭವಿಸಿದ್ದನ್ನು ತಿಳಿಸಲು ಫರಿಸಾಯರ ಬಳಿಗೆ ಹೋದರು. ಅವರೂ ಮತ್ತು ಮಹಾಯಾಜಕರೂ ಸನ್ಹೇದ್ರಿನ್‌ ಅಂದರೆ ಯೆಹೂದಿ ಮುಖ್ಯ ನ್ಯಾಯಾಲಯದ ಒಂದು ಕೂಟವನ್ನು ತಕ್ಷಣವೇ ಏರ್ಪಡಿಸುತ್ತಾರೆ.

ಸನ್ಹೇದ್ರಿನ್‌ನಲ್ಲಿ ಪ್ರಚಲಿತ ಮಹಾಯಾಜಕ ಕಾಯಫನೂ, ಫರಿಸಾಯರೂ, ಸದ್ದುಕಾಯರೂ, ಮುಖ್ಯಯಾಜಕರುಗಳೂ ಮತ್ತು ಹಿಂದಿನ ಮಹಾಯಾಜಕರುಗಳೂ ಕೂಡಿದ್ದರು. ಅವರು ಪ್ರಲಾಪಿಸುವದು: “ನಾವು ಮಾಡುವದು ಇದೇನು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ; ಇವನನ್ನು ಹೀಗೆಯೇ ಬಿಟ್ಟರೆ ಎಲ್ಲರೂ ಅವನನ್ನು ನಂಬಾರು; ಮತ್ತು ರೋಮ್‌ ರಾಜ್ಯದವರು ಬಂದು ನಮ್ಮ ಸ್ಥಾನವನ್ನೂ ಜನವನ್ನೂ ಸೆಳಕೊಂಡಾರು.”

“ಬಹು ಸೂಚಕಕಾರ್ಯಗಳನ್ನು” ಯೇಸು ಮಾಡುತ್ತಾನೆಂದು ಧಾರ್ಮಿಕ ಮುಖಂಡರುಗಳು ಒಪ್ಪುವದಾದರೂ, ಅವರ ಒಂದೇ ಚಿಂತೆ ಏನಂದರೆ ಅವರ ಸ್ವಂತ ಸ್ಥಾನ ಮತ್ತು ಅಧಿಕಾರವಾಗಿತ್ತು. ಪುನರುತ್ಥಾನದಲ್ಲಿ ಸದ್ದುಕಾಯರು ನಂಬುವದಿಲ್ಲವಾದುದರಿಂದ, ಲಾಜರನನ್ನು ಮರಣದಿಂದ ಎಬ್ಬಿಸಿದ್ದು ಅವರಿಗೆ ವಿಶೇಷವಾಗಿ ಒಂದು ಬಲವಾದ ಹೊಡೆತವಾಗಿತ್ತು.

ಪ್ರಾಯಶಃ ಒಬ್ಬ ಸದ್ದುಕಾಯನಾಗಿರಬಹುದಾದ ಕಾಯಫನು, ಈಗ ಮಾತಾಡುತ್ತಾನೆ: “ನಿಮಗೇನೂ ತಿಳಿಯುವದಿಲ್ಲ; ಜನವೆಲ್ಲಾ ನಾಶವಾಗುವದಕ್ಕಿಂತ ಒಬ್ಬ ಮನುಷ್ಯನು ಜನಕ್ಕೋಸ್ಕರ ಸಾಯುವದು ಹಿತವೆಂದು ನೀವು ಆಲೋಚಿಸುವದೂ ಇಲ್ಲ.”

ಕಾಯಫನು ಈ ರೀತಿ ಹೇಳಲು ದೇವರು ಪ್ರಭಾವ ಬೀರಿರಬೇಕು, ಯಾಕಂದರೆ ಅಪೊಸ್ತಲ ಯೋಹಾನನು ಅನಂತರ ಬರೆದದ್ದು: “ಇದನ್ನು ಅವನು [ಕಾಯಫನು] ತನ್ನಷ್ಟಕ್ಕೆ ತಾನೇ ಹೇಳಲಿಲ್ಲ.” ಅವರ ಅಧಿಕಾರದ ಮತ್ತು ಪ್ರಭಾವದ ಸ್ಥಾನಮಾನವನ್ನು ಯೇಸುವು ಇನ್ನಷ್ಟು ಶಿಥಿಲಗೊಳಿಸುವ ಮೊದಲೇ, ಅದನ್ನು ತಡೆಯಲು ಅವನನ್ನು ಕೊಲ್ಲಬೇಕು ಎಂಬುದೇ ಕಾಯಫನ ನೈಜ ಅರ್ಥವಾಗಿತ್ತು. ಆದರೂ, ಯೋಹಾನನಿಗನುಸಾರ, ‘ಕಾಯಫನು ದೇವಪ್ರೇರಣೆಯಿಂದ ಮಾತಾಡಿ ಯೇಸು ಆ ಜನಕ್ಕೋಸ್ಕರ ಮಾತ್ರವಲ್ಲದೆ ಚದರಿರುವ ದೇವರ ಮಕ್ಕಳನ್ನು ಒಟ್ಟುಗೂಡಿಸುವದಕ್ಕೆ ಸಹ ಸಾಯುವದಕ್ಕಿದ್ದನು.’ ಮತ್ತು, ಎಲ್ಲರಿಗೋಸ್ಕರ ದೇವರ ಮಗನು ವಿಮೋಚನೆಯ ಈಡಾಗಿ ಸಾಯುವದು ದೇವರ ಉದ್ದೇಶವಾಗಿತ್ತು ಎಂಬುದು ಖಂಡಿತ.

ಯೇಸುವನ್ನು ಕೊಲ್ಲಲು ಯೋಜನೆಗಳನ್ನು ಸನ್ಹೇದ್ರಿನ್‌ ಮಾಡಲು ಕಾಯಫನು ಅದರ ಮೇಲೆ ಪ್ರಭಾವ ಬೀರಲು ಶಕ್ತನಾದನು. ಆದರೆ ಯೇಸುವು, ಪ್ರಾಯಶಃ ಅವನೊಂದಿಗೆ ಮಿತ್ರತ್ವವಿದ್ದ, ಸನ್ಹೇದ್ರಿನ್‌ನ ಒಬ್ಬ ಸದಸ್ಯನಾದ ನಿಕೊದೇಮನ ಮೂಲಕ ಅವರ ಹಂಚಿಕೆಗಳನ್ನು ತಿಳಿದುಕೊಂಡು, ಅಲ್ಲಿಂದ ದೂರ ಹೋಗುತ್ತಾನೆ. ಯೋಹಾನ 11:38-54.

▪ ಲಾಜರನನ್ನು ಪುನರುತ್ಥಾನಗೊಳಿಸುವ ಮೊದಲು ಯೇಸುವು ಬಹಿರಂಗವಾಗಿ ಯಾಕೆ ಪ್ರಾರ್ಥಿಸುತ್ತಾನೆ?

▪ ಈ ಪುನರುತ್ಥಾನವನ್ನು ನೋಡಿದವರು ಹೇಗೆ ಪ್ರತಿಕ್ರಿಯೆ ತೋರಿಸುತ್ತಾರೆ?

▪ ಸನ್ಹೇದ್ರಿನ್‌ನ ಸದಸ್ಯರುಗಳ ದುಷ್ಟತನವು ಹೇಗೆ ಪ್ರಕಟವಾಗುತ್ತದೆ?

▪ ಕಾಯಫನ ಹೇತುವೇನಾಗಿತ್ತು, ಆದರೆ ಏನನ್ನು ಪ್ರವಾದಿಸಲು ದೇವರು ಅವನನ್ನು ಉಪಯೋಗಿಸಿದನು?