ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಗ್ದಾನಿತ ಮಗು

ವಾಗ್ದಾನಿತ ಮಗು

ಅಧ್ಯಾಯ 6

ವಾಗ್ದಾನಿತ ಮಗು

ನಜರೇತಿಗೆ ಹಿಂತಿರುಗುವ ಬದಲು, ಯೋಸೇಫನು ಮತ್ತು ಮರಿಯಳು ಬೇತ್ಲೆಹೇಮಿನಲ್ಲಿ ನಿಲ್ಲುತ್ತಾರೆ. ಮತ್ತು ಯೇಸುವು ಎಂಟು ದಿವಸದವನಾದಾಗ, ಮೋಶೆಗೆ ಕೊಟ್ಟ ದೇವರ ನಿಯಮದ ಪ್ರಕಾರ, ಅವರು ಅವನ ಸುನ್ನತಿ ಮಾಡಿಸುತ್ತಾರೆ. ವಾಡಿಕೆಯ ಪ್ರಕಾರ ಎಂಟನೆಯ ದಿನದಲ್ಲಿ ಗಂಡುಮಗುವಿಗೆ ಹೆಸರಿಡುತ್ತಿದ್ದುರು ಎಂದೂ ವೇದ್ಯವಾಗುತ್ತದೆ. ಆದುದರಿಂದ, ಈ ಮೊದಲೇ ಗಬ್ರಿಯೇಲ ದೇವದೂತನು ಸೂಚಿಸಿದಂತೆ, ಅವರು ತಮ್ಮ ಮಗುವಿಗೆ ಯೇಸು ಎಂದು ಹೆಸರು ಇಡುತ್ತಾರೆ.

ಈಗ ಒಂದಕ್ಕಿಂತಲೂ ಹೆಚ್ಚು ತಿಂಗಳು ಕಳೆಯುತ್ತದೆ, ಮತ್ತು ಈಗ ಯೇಸುವು 40 ದಿವಸದವನಾಗಿದ್ದಾನೆ. ಈಗ ಅವನ ಹೆತ್ತವರು ಅವನನ್ನು ಎಲ್ಲಿಗೆ ಕೊಂಡೊಯ್ಯುತ್ತಾರೆ? ಯೆರೂಸಲೇಮ್‌ ದೇವಾಲಯಕ್ಕೆ, ಅದು ಅವರು ವಾಸವಾಗಿದ್ದ ಸ್ಥಳದಿಂದ ಕೆಲವೇ ಕಿಲೊಮೀಟರ್‌ ಮಾತ್ರ ದೂರದಲ್ಲಿತ್ತು. ಮೋಶೆಗೆ ಕೊಟ್ಟ ದೇವರ ನಿಯಮಕ್ಕನುಸಾರವಾಗಿ, ಗಂಡು ಮಗುವಿಗೆ ಜನನ ಕೊಟ್ಟಾದ 40 ದಿನಗಳ ನಂತರ, ತಾಯಿಯು ದೇವಾಲಯದಲ್ಲಿ ಶುದ್ಧೀಕರಣದ ಸಮರ್ಪಣೆಯ ಕಾಣಿಕೆ ನೀಡಬೇಕಿತ್ತು.

ಮರಿಯಳು ಅದನ್ನೇ ಮಾಡುತ್ತಾಳೆ. ಅವಳು ಎರಡು ಸಣ್ಣ ಹಕ್ಕಿಗಳನ್ನು ತನ್ನ ಸಮರ್ಪಣೆಯಾಗಿ ತರುತ್ತಾಳೆ. ಇದು ಯೋಸೇಫ ಮತ್ತು ಮರಿಯಳ ಆರ್ಥಿಕ ಪರಿಸ್ಥಿತಿಯ ಕುರಿತು ಸ್ವಲ್ಪ ತಿಳಿಸುತ್ತದೆ. ಹಕ್ಕಿಗಳಿಗಿಂತಲೂ ಹೆಚ್ಚು ಬೆಲೆಯ ಎಳೆಯ ಕುರಿಯನ್ನು ಸಮರ್ಪಿಸಬೇಕು ಎಂದು ಮೋಶೆಯ ಧರ್ಮ ಶಾಸ್ತ್ರವು ಸೂಚಿಸುತ್ತದೆ. ಆದರೆ ತಾಯಿಗೆ ಸಾಧ್ಯವಿಲ್ಲದ ಪಕ್ಷದಲ್ಲಿ ಎರಡು ಬೆಳವಕ್ಕಿಗಳನ್ನಾಗಲಿ ಯಾ ಎರಡು ಪಾರಿವಾಳದ ಮರಿಗಳನ್ನಾಗಲಿ ಕೊಡುವದರಿಂದ ಸಾಕಾಗುತ್ತಿತ್ತು.

ದೇವಾಲಯದಲ್ಲಿ ಯೇಸುವನ್ನು ಒಬ್ಬ ವಯಸ್ಸಾದ ಮನುಷ್ಯನು ತನ್ನ ಕೈಯಲ್ಲಿ ತಕ್ಕೊಳ್ಳುತ್ತಾನೆ. ಅವನ ಹೆಸರು ಸಿಮೆಯೋನ. ಯೆಹೋವನ ವಾಗ್ದಾನಿತ ಕ್ರಿಸ್ತನು ಇಲ್ಲವೇ ಮೆಸ್ಸೀಯನನ್ನು ಅವನು ಕಾಣದೇ ಸಾಯುವದಿಲ್ಲ ಎಂದು ದೇವರು ಅವನಿಗೆ ಪ್ರಕಟಿಸಿದ್ದನು. ಆ ದಿವಸ ಸಿಮೆಯೋನನು ದೇವಾಲಯಕ್ಕೆ ಬಂದಾಗ, ಯೋಸೇಫನಿಂದ ಮತ್ತು ಮರಿಯಳಿಂದ ತರಲ್ಪಟ್ಟ ಮಗುವಿನ ಬಳಿಗೆ ಬರುವಂತೆ ಅವನು ಪವಿತ್ರಾತ್ಮನಿಂದ ಮಾರ್ಗದರ್ಶಿಸಲ್ಪಟ್ಟನು.

ಸಿಮೆಯೋನನು ಯೇಸುವನ್ನು ಕೈಯಲ್ಲಿ ಹಿಡಿದುಕೊಂಡು ಹೀಗನ್ನುತ್ತಾ ದೇವರನ್ನು ಕೊಂಡಾಡುತ್ತಾನೆ: “ಸಾರ್ವಭೌಮ ಒಡೆಯನೇ, ನಿನ್ನ ಮಾತು ನೆರವೇರಿತು; ಈಗ ಸಮಾಧಾನದಿಂದ ಹೋಗುವದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಯಿತು. ನೀನು ನೇಮಿಸಿರುವ ರಕ್ಷಕನನ್ನು ನಾನು ಕಣ್ಣಾರೆ ಕಂಡೆನು; ಎಲ್ಲಾ ಜನಗಳಿಗೆ ಪ್ರತ್ಯಕ್ಷನಾಗಲಿ ಎಂದು ಆತನನ್ನು ಒದಗಿಸಿಕೊಟ್ಟಿದ್ದೀ. ಆತನು ಅನ್ಯದೇಶದವರಿಗೆ ಜ್ಞಾನೋದಯದ ಬೆಳಕು, ನಿನ್ನ ಪ್ರಜೆಯಾದ ಇಸ್ರಾಯೇಲ್ಯರಿಗೆ ಕೀರ್ತಿ.”

ಯೋಸೇಫ ಮತ್ತು ಮರಿಯ ಇದನ್ನು ಕೇಳಿ ಆಶ್ಚರ್ಯ ಪಟ್ಟರು. ಅನಂತರ ಸಿಮೆಯೋನನು ಅವರನ್ನು ಆಶೀರ್ವದಿಸುತ್ತಾನೆ ಮತ್ತು ಮರಿಯಳಿಗೆ ಹೇಳಿದ್ದೇನಂದರೆ ಅವಳ ಮಗನು “ಇಸ್ರಾಯೇಲ್‌ ಜನರಲ್ಲಿ ಅನೇಕರು ಬೀಳುವದಕ್ಕೂ, ಅನೇಕರು ಏಳುವದಕ್ಕೂ ಕಾರಣನಾಗುವನು” ಮತ್ತು ದುಃಖವು, ಅವಳ ಪ್ರಾಣಕ್ಕೆ ಅಲಗು ನಾಟಿದಂತಾಗಲಿರುವದು ಎಂದು ಹೇಳಿದನು.

ಈ ಸಂದರ್ಭದಲ್ಲಿ 84 ವರ್ಷ ಪ್ರಾಯದ ಪ್ರವಾದಿನಿ ಅನ್ನಳು ಹಾಜರಿದ್ದಳು. ವಾಸ್ತವದಲ್ಲಿ ಅವಳು ಎಂದೂ ದೇವಾಲಯವನ್ನು ಬಿಟ್ಟು ಹೋಗಿರಲಿಲ್ಲ. ಅದೇ ಗಳಿಗೆಯಲ್ಲಿ ಅವಳು ಹತ್ತಿರಕ್ಕೆ ಬಂದು, ದೇವರಿಂದಾದ ಉಪಕಾರವನ್ನು ನೆನಸಿ ಕೊಂಡಾಡುತ್ತಾಳೆ ಮತ್ತು ಕೇಳುವವರೆಲ್ಲರಿಗೆ ಯೇಸುವಿನ ಕುರಿತು ಮಾತಾನಾಡಲಾರಂಭಿಸುತ್ತಾಳೆ.

ದೇವಾಲಯದಲ್ಲಿ ನಡೆದ ಈ ಘಟನೆಗಳು ಯೋಸೇಫ ಮತ್ತು ಮರಿಯರನ್ನು ಎಷ್ಟೊಂದು ಆನಂದಿತರನ್ನಾಗಿ ಮಾಡಿರಬೇಕು! ಖಂಡಿತವಾಗಿಯೂ, ಈ ಮಗುವು ದೇವರಿಂದ ವಾಗ್ದಾನಿಸಲ್ಪಟ್ಟವನೆಂದು ಇವೆಲ್ಲವೂ ಅವರಿಗೆ ದೃಢೀಕರಿಸಿತು. ಲೂಕ 2:21-38; ಯಾಜಕಕಾಂಡ 12:1-8.

▪ ಇಸ್ರಾಯೇಲ್‌ ಗಂಡು ಮಗುವಿಗೆ ವಾಡಿಕೆಯ ಪ್ರಕಾರ ಪ್ರಾಯಶಃ ಯಾವಾಗ ನಾಮಕರಣ ಮಾಡುತ್ತಿದ್ದುರು?

▪ ಗಂಡು ಮಗುವು 40 ದಿವಸಗಳಾದಾಗ ಇಸ್ರಾಯೇಲ್‌ ತಾಯಿಯು ಏನು ಮಾಡಬೇಕಿತ್ತು ಮತ್ತು ಈ ಆವಶ್ಯಕತೆಯನ್ನು ಪೂರೈಸುವದರಲ್ಲಿ ಮರಿಯಳ ಆರ್ಥಿಕ ಸ್ಥಿತಿಯು ಏನೆಂದು ಹೇಗೆ ಬಯಲಾಯಿತು?

▪ ಈ ಸಂದರ್ಭದಲ್ಲಿ ಯೇಸುವಿನ ಗುರುತನ್ನು ಯಾರು ತಿಳಿದುಕೊಂಡರು ಮತ್ತು ಅದನ್ನು ಅವರು ಹೇಗೆ ತೋರಿಸಿದರು?