ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಗ್ವಾದದ ಒಂದು ಕೇಂದ್ರ

ವಾಗ್ವಾದದ ಒಂದು ಕೇಂದ್ರ

ಅಧ್ಯಾಯ 41

ವಾಗ್ವಾದದ ಒಂದು ಕೇಂದ್ರ

ಸೀಮೋನನ ಮನೆಯಲ್ಲಿ ಸತ್ಕರಿಸಲ್ಪಟ್ಟ ಬಳಿಕ ಸ್ವಲ್ಪದರಲ್ಲಿ ಯೇಸು ಗಲಿಲಾಯದ ತನ್ನ ಎರಡನೆಯ ಉಪದೇಶದ ಪ್ರಯಾಣವನ್ನು ಕೈಗೊಳ್ಳುತ್ತಾನೆ. ಈ ಪ್ರದೇಶದಲ್ಲಿ ಅವನು ಮಾಡಿದ್ದ ಹಿಂದಿನ ಪ್ರಯಾಣದಲ್ಲಿ ಅವನ ಪ್ರಥಮ ಶಿಷ್ಯರುಗಳಾದ ಪೇತ್ರ, ಅಂದ್ರೆಯ, ಯಾಕೋಬ ಮತ್ತು ಯೋಹಾನರು ಅವನ ಜೊತೆಯಲ್ಲಿದ್ದರು. ಆದರೆ ಈಗ 12 ಅಪೊಸ್ತಲರೂ, ಕೆಲವು ಸ್ತ್ರೀಯರೂ ಅವನ ಜೊತೆಗೆ ಹೋಗುತ್ತಾರೆ. ಇವರಲ್ಲಿ ಮಗ್ದಲದ ಮರಿಯ, ಸೂಸನ್ನ ಮತ್ತು ಹೆರೋದ ರಾಜನ ಅಧಿಕಾರಿಯ ಹೆಂಡತಿಯಾಗಿದ್ದ ಯೊಹನ್ನ ಎಂಬವರು ಇದ್ದಾರೆ.

ಯೇಸುವಿನ ಶುಶ್ರೂಷೆಯ ಗತಿ ತೀವ್ರವಾದಂತೆ, ಅವನ ಚಟುವಟಿಕೆಯ ಕುರಿತಾದ ವಾಗ್ವಾದವೂ ತೀವ್ರಗೊಳ್ಳುತ್ತದೆ. ದೆವ್ವ ಹಿಡಿದಿದ್ದ ಮತ್ತು ಕುರುಡನೂ ಮೂಕನೂ ಆದ ಒಬ್ಬ ಮನುಷ್ಯನನ್ನು ಯೇಸುವಿನ ಬಳಿಗೆ ತರಲಾಗುತ್ತದೆ. ಯೇಸುವು ಅವನನ್ನು ಗುಣಪಡಿಸಲಾಗಿ, ಅವನು ದೆವ್ವದ ಹಿಡಿತದಿಂದ ಮುಕ್ತನಾಗಿ ಮಾತಾಡಲು ಮತ್ತು ನೋಡಲು ಶಕ್ತನಾದನು, ಆಗ ಜನಸಂದಣಿ ಆನಂದ ಪರವಶಗೊಳ್ಳುತ್ತದೆ. “ಈತನು ದಾವೀದನ ಕುಮಾರನೇನು?” ಎಂದವರು ಹೇಳಲಾರಂಭಿಸುತ್ತಾರೆ.

ಯೇಸು ಉಳುಕೊಂಡಿದ್ದ ಮನೆಯ ಸುತ್ತಲೂ ಎಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದಾರೆಂದರೆ ಅವನಿಗೆ ಮತ್ತು ಶಿಷ್ಯರಿಗೆ ಊಟಮಾಡಲೂ ಸಾಧ್ಯವಾಗುವದಿಲ್ಲ. ಇವನು ಪ್ರಾಯಶಃ ವಾಗ್ದತ್ತ “ದಾವೀದನ ಕುಮಾರನು” ಎಂದು ಎಣಿಸಿದವರಲ್ಲದೆ, ಅವನ ಗೌರವಹಾನಿ ಮಾಡಲು ಯೆರೂಸಲೇಮಿನಷ್ಟು ದೂರದಿಂದ ಬಂದಿದ್ದ ಶಾಸ್ತ್ರಿಗಳೂ, ಫರಿಸಾಯರೂ ಅಲ್ಲಿದ್ದರು. ಯೇಸುವಿನ ವಿಷಯದಲ್ಲಿ ಗಲಾಟೆ ನಡೆಯುತ್ತದೆ ಎಂದು ಕೇಳಿದ ಅವನ ಸಂಬಂಧಿಗಳು ಅವನನ್ನು ಹಿಡಿದು ಕರೆದು ಕೊಂಡು ಹೋಗಲು ಬರುತ್ತಾರೆ. ಆದರೆ ಯಾವ ಕಾರಣಕ್ಕಾಗಿ?

ಒಳ್ಳೆಯದು, ಯೇಸುವಿನ ಸ್ವಂತ ತಮ್ಮಂದಿರು ಅವನು ದೇವರ ಮಗನೆಂದು ಇನ್ನೂ ನಂಬುತ್ತಿರಲಿಲ್ಲ. ಇದಲ್ಲದೆ ಯೇಸುವು ಉಂಟು ಮಾಡಿದ ಸಾರ್ವಜನಿಕ ಗಲಾಟೆ ಮತ್ತು ವಿವಾದವು, ನಜರೇತಿನಲ್ಲಿ ಚಿಕ್ಕಂದಿನಲ್ಲಿ ತಾವು ತಿಳಿದಿದ್ದ ಯೇಸುವಿನ ನಡತೆಗೆ ಪ್ರತಿಕೂಲವಾಗಿತ್ತು. ಆದುದರಿಂದ ಯೇಸುವಿಗೆ ಮಾನಸಿಕವಾಗಿ ಏನೋ ಗಂಭೀರ ದೋಷವಿರಬೇಕೆಂದು ಅವರು ನಂಬುತ್ತಾರೆ. “ಅವನಿಗೆ ಹುಚ್ಚು ಹಿಡಿದದೆ” ಎಂದು ಅವರು ತೀರ್ಮಾನಿಸಿ, ಅವನನ್ನು ಹಿಡಿದು ಕರೆದು ಕೊಂಡು ಹೋಗಲು ಅಪೇಕ್ಷಿಸುತ್ತಾರೆ.

ಆದರೂ ದೆವ್ವ ಹಿಡಿದ ಮನುಷ್ಯನನ್ನು ಯೇಸು ಗುಣ ಮಾಡಿದ್ದಕ್ಕೆ ಸ್ಪಷ್ಟವಾದ ಸಾಕ್ಷ್ಯವಿತ್ತು. ಇದರ ಮತ್ತು ಯೇಸುವಿನ ಇತರ ಅದ್ಭುತಗಳ ನಿಜತ್ವವನ್ನು ತಾವು ಅಲ್ಲಗಳೆಯ ಸಾಧ್ಯವಿಲ್ಲವೆಂದು ಶಾಸ್ತ್ರಿಗಳಿಗೂ, ಫರಿಸಾಯರಿಗೂ ತಿಳಿದದೆ. ಆದುದರಿಂದ ಯೇಸುವಿನ ಗೌರವ ಹಾನಿ ಮಾಡಲು, ಅವರು ಜನರಿಗೆ ಹೇಳುವದು: “ಇವನು ದೆವ್ವಗಳ ಒಡೆಯನಾದ ಬೆಲ್ಚೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೆಯೇ ಹೊರತು ಬೇರೆ ರೀತಿಯಿಂದ ಬಿಡಿಸುವದಿಲ್ಲ.”

ಅವರ ಯೋಚನೆಗಳನ್ನು ತಿಳಿದ ಯೇಸುವು ಶಾಸ್ತ್ರಿಗಳನ್ನೂ, ಫರಿಸಾಯರನ್ನೂ ತನ್ನ ಬಳಿಗೆ ಕರೆದು, ಹೇಳುವದು: “ಯಾವ ರಾಜ್ಯವಾದರೂ ತನ್ನಲ್ಲಿ ಭೇದ ಹುಟ್ಟಿದರೆ ಹಾಳಾಗುವದು; ತನ್ನಲ್ಲಿ ಭೇದ ಹುಟ್ಟಿದ ಯಾವ ಪಟ್ಟಣವಾದರೂ, ಮನೆಯಾದರೂ ನಿಲ್ಲದು. ಅದರಂತೆ ಸೈತಾನನು ಸೈತಾನನನ್ನು ಹೊರಡಿಸಿದರೆ ತನ್ನಲ್ಲಿ ಭೇದ ಹುಟ್ಟಿಸಿಕೊಂಡ ಹಾಗಾಯಿತು. ಹಾಗಾದರೆ ಅವನ ರಾಜ್ಯವು ಹೇಗೆ ಉಳಿದೀತು?”

ಎಂತಹ ಧ್ವಂಸಕಾರಕ ತರ್ಕವಿದು! ತಮ್ಮ ಸ್ವಂತ ವರ್ಗಕ್ಕೆ ಸೇರಿದ ವ್ಯಕ್ತಿಗಳು ಸಹ ದೆವ್ವ ಬಿಡಿಸುತ್ತಾರೆಂಬ ಫರಿಸಾಯರ ವಾದಕ್ಕೆ ಉತ್ತರವಾಗಿ ಯೇಸು ಪ್ರಶ್ನಿಸುವದು: “ನಾನು ಬೆಲ್ಚೆಬೂಲನ ಬಲದಿಂದ ದೆವ್ವಗಳನ್ನು ಬಿಡಿಸುವದಾದರೆ ನಿಮ್ಮವರು ಯಾರ ಬಲದಿಂದ ಬಿಡಿಸುತ್ತಾರೆ?” ಇನ್ನೊಂದು ಮಾತಿನಲ್ಲಿ ಹೇಳುವದಾದರೆ, ಯೇಸುವಿನ ಮೇಲೆ ಅವರು ಹಾಕಿದ ಆರೋಪವು ಅವನಿಗೆ ಅನ್ವಯಿಸುವಂತೆ ಅವರಿಗೂ ಅನ್ವಯಿಸಬೇಕು. ಬಳಿಕ ಯೇಸು ಎಚ್ಚರಿಸಿದ್ದು: “ನಾನು ದೇವರ ಆತ್ಮನ ಬಲದಿಂದಲೇ ದೆವ್ವಗಳನ್ನು ಬಿಡಿಸುವದಾದರೆ, ದೇವರ ರಾಜ್ಯವು ನಿಮ್ಮ ಹತ್ತರಕ್ಕೆ ಬಂತಲ್ಲಾ, (ನಿಜವಾಗಿ ನಿಮ್ಮನ್ನು ದಾಟಿದೆ, NW).”

ದೆವ್ವಗಳನ್ನು ಬಿಡಿಸುವ ಈ ಕಾರ್ಯವು ಸೈತಾನನ ಮೇಲೆ ತನಗಿರುವ ಶಕ್ತಿಗೆ ಸಾಕ್ಷಿ ಎಂಬುದನ್ನು ಚಿತ್ರಿಸಲು ಯೇಸುವು ಹೇಳುವದು: “ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಆ ಬಲಿಷ್ಠನ ಮನೆಯನ್ನು ಹೊಕ್ಕು ಅವನ ಸೊತ್ತನ್ನು ಸುಲುಕೊಳ್ಳುವದು ಹೇಗೆ? ಕಟ್ಟಿ ಹಾಕಿದ ಮೇಲೆ ಅವನ ಮನೆಯನ್ನು ಸುಲುಕೊಂಡಾನು. ನನ್ನ ಪಕ್ಷ ಹಿಡಿಯದವನು ನನಗೆ ವಿರೋಧಿ; ನನ್ನ ಜೊತೆಯಲ್ಲಿ ಒಟ್ಟುಗೂಡಿಸದವನು ಚದರಿಸುವವನಾಗುತ್ತಾನೆ.” ಫರಿಸಾಯರು ಯೇಸುವಿನ ಸ್ಪಷ್ಟ ವಿರೋಧಿಗಳಾಗಿದ್ದು ತಾವು ಸೈತಾನನ ಕಾರ್ಯಭಾರಿಗಳೆಂದು ತೋರಿಸಿಕೊಳ್ಳುತ್ತಾರೆ. ಅವರು ಇಸ್ರಾಯೇಲ್ಯರನ್ನು ಯೇಸುವಿನಿಂದ ದೂರ ಚದರಿಸುತ್ತಿದ್ದಾರೆ.

ಈ ಕಾರಣದಿಂದ ಯೇಸು ಈ ಸೈತಾನ-ಪ್ರವೃತ್ತಿಯ ವಿರೋಧಿಗಳನ್ನು “ಪವಿತ್ರಾತ್ಮ ದೂಷಣೆಗೆ ಕ್ಷಮಾಪಣೆಯಿಲ್ಲ” ಎಂದು ಎಚ್ಚರಿಸುತ್ತಾನೆ. ಅವನು ವಿವರಿಸುವದು: “ಯಾವನಾದರೂ ಮನುಷ್ಯ ಕುಮಾರನಿಗೆ ವಿರೋಧವಾಗಿ ಮಾತಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವದು. ಪವಿತ್ರಾತ್ಮನಿಗೆ ವಿರೋಧವಾಗಿ ಮಾತಾಡಿದರೆ ಅವನಿಗೆ ವಿಷಯಗಳ ಈ ವ್ಯವಸ್ಥಯಲ್ಲಾಗಲಿ ಬರುವ ವ್ಯವಸ್ಥಯಲ್ಲಾಗಲಿ ಕ್ಷಮಿಸಲ್ಪಡುವದಿಲ್ಲ.” ಆ ಶಾಸ್ತ್ರಿಗಳೂ, ಫರಿಸಾಯರುಗಳೂ, ಯಾವುದು ನಿಶ್ಚಯವಾಗಿಯೂ ದೇವರ ಪವಿತ್ರಾತ್ಮದ ಅದ್ಭುತ ಕೆಲಸವಾಗಿದೆಯೋ ಅದನ್ನು ಸೈತಾನನಿಗೆ ಸೇರಿದ್ದೆಂದು ಮತ್ಸರದಿಂದ ಹೇಳಿ ಹೀಗೆ ಕ್ಷಮಾಪಣೆಯಿಲ್ಲದ ಪಾಪವನ್ನು ಮಾಡಿದ್ದಾರೆ. ಮತ್ತಾಯ 12:22-32; ಮಾರ್ಕ 3:19-30; ಯೋಹಾನ 7:5.

▪ ಯೇಸುವಿನ ಗಲಿಲಾಯದ ಎರಡನೆಯ ಪ್ರಯಾಣ ಮೊದಲನೆಯದಕ್ಕಿಂತ ಹೇಗೆ ಭಿನ್ನವಾಗಿದೆ?

▪ ಯೇಸುವಿನ ಸಂಬಂಧಿಗಳು ಅವನನ್ನು ಹಿಡಿದು ತೆಗೆದುಕೊಂಡು ಹೋಗಲು ಪ್ರಯತ್ನಿಸುವದೇಕೆ?

▪ ಫರಿಸಾಯರು ಯೇಸುವಿನ ಅದ್ಭುತಗಳಿಗೆ ಗೌರವಹಾನಿ ಮಾಡಲು ಹೇಗೆ ಪ್ರಯತ್ನಿಸುತ್ತಾರೆ ಮತ್ತು ಯೇಸು ಅವರನ್ನು ತಪ್ಪೆಂದು ಹೇಗೆ ಸ್ಥಾಪಿಸುತ್ತಾನೆ?

▪ ಆ ಫರಿಸಾಯರು ಯಾವುದರ ದೋಷಿಗಳಾಗಿದ್ದಾರೆ, ಮತ್ತು ಏಕೆ?