ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಷ್ಯತ್ವದ ಜವಾಬ್ದಾರಿಕೆ

ಶಿಷ್ಯತ್ವದ ಜವಾಬ್ದಾರಿಕೆ

ಅಧ್ಯಾಯ 84

ಶಿಷ್ಯತ್ವದ ಜವಾಬ್ದಾರಿಕೆ

ಸನ್ಹೇದ್ರಿನ್‌ನ ಪ್ರಾಯಶಃ ಒಬ್ಬ ಸದಸ್ಯನಾಗಿರಬಹುದಾದ ಒಬ್ಬ ಗಣ್ಯ ಫರಿಸಾಯನ ಮನೆಯನ್ನು ಬಿಟ್ಟು ಬಂದ ನಂತರ, ಯೇಸುವು ಯೆರೂಸಲೇಮಿನ ಕಡೆಗೆ ಮುಂದುವರಿಯುತ್ತಾನೆ. ಬಹು ಜನರು ಗುಂಪುಗುಂಪಾಗಿ ಅವನ ಸಂಗಡ ಹೋಗುತ್ತಾ ಇದ್ದಾರೆ. ಆದರೆ ಅವರ ಹೇತುಗಳೇನು? ಅವನ ನಿಜ ಹಿಂಬಾಲಕನಾಗಿರುವದರಲ್ಲಿ ನಿಜವಾಗಿಯೂ ಏನು ಒಳಗೂಡಿರುತ್ತದೆ?

ಅವರು ಹೋಗುತ್ತಾ ಇರುವಾಗ, ಯೇಸುವು ಜನರೆಡೆಗೆ ತಿರುಗುತ್ತಾನೆ ಮತ್ತು ಇದನ್ನು ಹೇಳುವದರ ಮೂಲಕ ಜನರನ್ನು ಪ್ರಾಯಶಃ ಆಘಾತಗೊಳಿಸುತ್ತಾನೆ: “ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ತಾಯಿ ಹೆಂಡತಿ ಮಕ್ಕಳು ಅಣ್ಣ ತಮ್ಮಂದಿರು ಅಕ್ಕತಂಗಿಯರು ಇವರನ್ನೂ ತನ್ನ ಪ್ರಾಣವನ್ನು ಸಹ ಹಗೆ ಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.”

ಯೇಸುವಿನ ಮಾತಿನ ಅರ್ಥವೇನು? ಅವರ ಸಂಬಂಧಿಕರನ್ನು ಅವನ ಹಿಂಬಾಲಕರು ಅಕ್ಷರಶಃ ದ್ವೇಷಿಸಬೇಕೆಂದು ಯೇಸುವು ಇಲ್ಲಿ ಹೇಳುವದಿಲ್ಲ. ಬದಲು ಅವನನ್ನು ಪ್ರೀತಿಸುವದಕ್ಕಿಂತ ಕಡಿಮೆಯಾಗಿ ಅವರನ್ನು ಪ್ರೀತಿಸುವ ಅರ್ಥದಲ್ಲಿ, ಅವರನ್ನು ದ್ವೇಷಿಸುವದಾಗಿದೆ. ಯೇಸುವಿನ ಪೂರ್ವಜನಾದ ಯಾಕೋಬನು ಲೇಯಳನ್ನು “ದ್ವೇಷಿಸಿ,” ರಾಹೇಲಳನ್ನು ಪ್ರೀತಿಸಿದನು ಎಂದು ಹೇಳಲ್ಪಟ್ಟಿದೆ, ಅದರ ಅರ್ಥ, ಲೇಯಳನ್ನು ಅವಳ ಸಹೋದರಿಯಾದ ರಾಹೇಲಳಿಗಿಂತ ಕಡಿಮೆ ಪ್ರೀತಿಸಿದನು ಎಂದಾಗಿದೆ.

ಶಿಷ್ಯನೊಬ್ಬನು “ತನ್ನ ಸ್ವಂತ ಪ್ರಾಣವನ್ನು ಸಹ” ಅಂದರೆ ಜೀವವನ್ನು ಸಹ ಹಗೆ ಮಾಡತಕ್ಕದ್ದು ಎಂದು ಯೇಸು ಹೇಳಿದ್ದನ್ನು ಕೂಡ ಪರಿಗಣಿಸಿರಿ. ಪುನಃ, ತನ್ನ ಸ್ವಂತ ಜೀವವನ್ನು ಪ್ರೀತಿಸುವದಕ್ಕಿಂತಲೂ ಅಧಿಕವಾಗಿ ಅವನನ್ನು ನಿಜ ಶಿಷ್ಯನೊಬ್ಬನು ಪ್ರೀತಿಸಬೇಕು ಎಂದು ಯೇಸುವು ಹೇಳಿದ್ದರ ಅರ್ಥವಾಗಿದೆ. ಅವನ ಶಿಷ್ಯನಾಗುವದು ಅಂದರೆ ಗಂಭೀರವಾದ ಜವಾಬ್ದಾರಿಕೆ ಎಂದು ಈ ರೀತಿಯಲ್ಲಿ ಯೇಸುವು ಒತ್ತಿ ಹೇಳುತ್ತಾನೆ. ಯಾವುದೇ ಜಾಗರೂಕ ಪರಿಗಣನೆ ಇಲ್ಲದೇ ತೆಗೆದುಕೊಳ್ಳುವ ಏನೋ ಒಂದು ವಿಷಯ ಅದಲ್ಲ.

ಯೇಸುವಿನ ಶಿಷ್ಯನಾಗುವದರಲ್ಲಿ ಕಷ್ಟ ಮತ್ತು ಹಿಂಸೆಯು ಒಳಗೂಡಿರುತ್ತದೆ ಎಂಬದನ್ನು ಸೂಚಿಸುತ್ತಾ ಅವನು ಅನ್ನುವುದು: “ಯಾವನಾದರೂ ತನ್ನ ಶಿಲುಬೆಯನ್ನು [ಯಾತನಾಕಂಭವನ್ನು NW] ಹೊತ್ತುಕೊಂಡು ನನ್ನ ಹಿಂದೆ ಬರದ ಹೊರತು ಅವನು ನನ್ನ ಶಿಷ್ಯನಾಗಿರಲಾರನು.” ಈ ರೀತಿಯಲ್ಲಿ ಒಬ್ಬ ನಿಜ ಶಿಷ್ಯನು ಯೇಸುವು ಸಹಿಸಿದ ಅದೇ ರೀತಿಯ ಅವಮಾನದ ಹೊರೆಯನ್ನು, ದೇವರ ವೈರಿಗಳ ಹಸ್ತದಲ್ಲಿ ಆವಶ್ಯ ಬಿದ್ದಲ್ಲಿ ಸಾವನ್ನು ಅನುಭವಿಸಲೂ ಸಿದ್ಧನಾಗಿರಬೇಕು, ಇದನ್ನು ಯೇಸುವು ಶೀಘ್ರದಲ್ಲಿ ಅನುಭವಿಸಲಿದ್ದನು.

ಆದ್ದರಿಂದ ಕ್ರಿಸ್ತನ ಶಿಷ್ಯನಾಗಿರುವದೆಂದರೆ, ಅವನನ್ನು ಹಿಂಬಾಲಿಸುತ್ತಿದ್ದ ಜನರ ಗುಂಪುಗಳು ಬಹಳ ಜಾಗ್ರತೆಯಿಂದ ತೂಗಿನೋಡುವ ಒಂದು ಸಂಗತಿಯಾಗಿದೆ. ಒಂದು ಸಾಮ್ಯದ ಮೂಲಕ ಯೇಸುವು ಈ ನಿಜಾಂಶವನ್ನು ಒತ್ತಿಹೇಳುತ್ತಾನೆ. “ಉದಾಹರಣೆಗೆ,” ಅವನನ್ನುವದು, “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ? ಹೀಗೆ ಲೆಕ್ಕಮಾಡದೆ ಅದಕ್ಕೆ ಅಸ್ತಿವಾರ ಹಾಕಿದ ಮೇಲೆ ಆ ಕೆಲಸವನ್ನು ಪೂರೈಸಲಾರದೆ ಹೋದರೆ ನೋಡುವವರೆಲ್ಲರು—ಈ ಮನುಷ್ಯನು ಕಟ್ಟಿಸುವದಕ್ಕಂತೂ ತೊಡಗಿದನು, ಕೆಲಸ ಪೂರೈಸಲಾರದೆ ಹೋದನು ಎಂದು ಅವನನ್ನು ಹಾಸ್ಯಮಾಡಾರು.”

ಆದ್ದರಿಂದ, ಬುರುಜನ್ನು ಕಟ್ಟಲು ಆರಂಭಿಸುವ ಮೊದಲು, ಅದನ್ನು ಕಟ್ಟಿ ಪೂರೈಸಲು ಬೇಕಾಗುವಷ್ಟು ಸಾಧನ ಸಂಪತ್ತು ತನ್ನಲ್ಲಿ ಇದೆ ಎಂದು ಬುರುಜನ್ನು ಕಟ್ಟಲು ಬಯಸುವ ಮನುಷ್ಯನೊಬ್ಬನು ಖಚಿತಮಾಡಿಕೊಳ್ಳುವಂತೆ, ಯೇಸುವು ಅವನನ್ನು ಹಿಂಬಾಲಿಸುವ ಜನರ ಗುಂಪುಗಳಿಗೆ, ಅವರು ಅವನ ಶಿಷ್ಯರಾಗುವ ಮೊದಲು, ಅದರಲ್ಲಿ ಒಳಗೂಡಿರುವದನ್ನೆಲ್ಲಾ ಪೂರೈಸಶಕ್ತರು ಎಂದು ಸ್ಥಿರವಾಗಿ ತೀರ್ಮಾನಿಸತಕ್ಕದ್ದು ಎಂಬದನ್ನು ತೋರಿಸಲು ಇನ್ನೊಂದು ಸಾಮ್ಯವನ್ನು ಕೊಡುತ್ತಾ, ಹೇಳುವುದು:

“ಇಲ್ಲವೆ ಯಾವ ಅರಸನಾದರೂ ಮತ್ತೊಬ್ಬ ಅರಸನ ಸಂಗಡ ಯುದ್ಧಮಾಡುವದಕ್ಕೆ ಹೋಗುವಾಗ ತನ್ನ ಮೇಲೆ ಇಪ್ಪತ್ತು ಸಾವಿರ ದಂಡು ತೆಗೆದುಕೊಂಡು ಬರುವವನನ್ನು ತಾನು ಹತ್ತು ಸಾವಿರ ದಂಡಿನಿಂದ ಎದುರಿಸುವದಕ್ಕೆ ಶಕ್ತನಾಗುವೆನೋ ಇಲ್ಲವೋ ಎಂದು ಕೂತುಕೊಂಡು ಆಲೋಚಿಸುವದಿಲ್ಲವೇ? ತಾನು ಶಕ್ತನಲ್ಲದಿದ್ದರೆ ಬರುವ ಅರಸನು ಇನ್ನೂ ದೂರದಲ್ಲಿರುವಾಗಲೇ ರಾಯಭಾರಿಗಳನ್ನು ಕಳುಹಿಸಿ ಸಂಧಾನಕ್ಕೆ ಒಪ್ಪಂದವನ್ನು ಕೇಳಿಕೊಳ್ಳುವನು.”

ತದನಂತರ, ಯೇಸುವು ತನ್ನ ಸಾಮ್ಯದ ಮುಖ್ಯ ವಿಷಯವನ್ನು ಹೀಗೆ ಹೇಳುವದರಿಂದ ಒತ್ತಿ ಹೇಳಿದನು: “ಹಾಗೆಯೇ ನಿಮ್ಮಲ್ಲಿ ಯಾವನೇ ಆಗಲಿ ತನಗಿರುವದನ್ನೆಲ್ಲಾ ಬಿಟ್ಟುಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಿರಲಾರನು.” ಇದನ್ನು ತಾನೇ ಅವನನ್ನು ಹಿಂಬಾಲಿಸುತ್ತಿದ್ದ ಜನಸಮೂಹವು ಮತ್ತು ಕ್ರಿಸ್ತನ ಕುರಿತು ಕಲಿಯುವ ಇತರ ಪ್ರತಿಯೊಬ್ಬನು, ಮಾಡಲು ಸಿದ್ಧನಾಗಿರಬೇಕು. ಅವನ ಶಿಷ್ಯರಾಗುವದಕ್ಕಾಗಿ ಅವರಿಗಿರುವದನ್ನೆಲ್ಲಾ—ತಮ್ಮ ಸ್ವಂತ ಜೀವದ ಸಹಿತ ತಮ್ಮೆಲ್ಲಾ ಸ್ವತ್ತುಗಳನ್ನು ಕೂಡ, ತ್ಯಾಗ ಮಾಡಲು ಸಿದ್ಧರಾಗಿರಬೇಕು. ನೀವು ಇದನ್ನು ಮಾಡಲು ತಯಾರಿದ್ದೀರೋ?

“ಉಪ್ಪಂತೂ ಒಳ್ಳೆಯ ಪದಾರ್ಥವೇ,” ಯೇಸುವು ಮುಂದುವರಿಸುತ್ತಾನೆ. ಅವನ ಪರ್ವತ ಪ್ರಸಂಗದಲ್ಲಿ, ಅವನು ಶಿಷ್ಯರು “ಭೂಮಿಯ ಉಪ್ಪಾಗಿರುವರು” ಎಂದವನು ಹೇಳಿದ್ದನು, ಅಕ್ಷರಶಃ ಉಪ್ಪು ಸಂರಕ್ಷವಾಗಿರುವಂತೆಯೇ, ಜನರ ಮೇಲೆ ಅವರು ಸಂರಕ್ಷಕ ಪ್ರಭಾವ ಬೀರಬಲ್ಲರು ಎಂದಿದರ ಅರ್ಥ. “ಉಪ್ಪು ಸಹ ಸಪ್ಪಗಾದರೆ ಅದಕ್ಕೆ ಇನ್ನಾತರಿಂದ ರುಚಿಬಂದೀತು? ಅದು ಭೂಮಿಗಾದರೂ ತಿಪ್ಪೆಗಾದರೂ ಉಪಯೋಗವಲ್ಲ,” ಯೇಸುವು ಸಮಾಪ್ತಿಗೊಳಿಸಿದ್ದು. “ಅದನ್ನು ಹೊರಗೆ ಬಿಸಾಡುತ್ತಾರೆ. ಕೇಳುವದಕ್ಕೆ ಕಿವಿಯುಳ್ಳವನು ಕೇಳಲಿ.”

ಆದರಿಂದ ಕೆಲವು ಸಮಯದಿಂದ ತನ್ನ ಶಿಷ್ಯರಾಗಿದ್ದವರು ಕೂಡ ಹಾಗೆ ಮುಂದರಿಯುವ ತಮ್ಮ ನಿರ್ಧಾರವನ್ನು ದುರ್ಬಲಗೊಳಿಸಕೂಡದು ಎಂದು ಯೇಸು ತೋರಿಸುತ್ತಾನೆ. ಹಾಗೆ ಮಾಡಿದರೆ, ಅವರು ನಿಷ್ಪ್ರಯೋಜಕರಾಗುವರು, ಈ ಲೋಕದ ಮುಂದೆ ಅವರು ಅಪಮಾನಕ್ಕೆ ಈಡಾಗುತ್ತಾರೆ ಮತ್ತು ದೇವರ ಮುಂದೆ ಅಯೋಗ್ಯವಾಗುತ್ತಾರೆ, ವಾಸ್ತವದಲ್ಲಿ ದೇವರಿಗೆ ನಿಂದೆಯಾಗುತ್ತದೆ. ಆದುದರಿಂದ, ಸ್ವತರಹಿತವೂ, ಮಲಿನಗೊಳಿಸಲ್ಪಟ್ಟದ್ದೂ ಆದ ಉಪ್ಪಿನಂತೆ, ಅವರು ಹೊರಗೆ ಬಿಸಾಡಲ್ಪಡುವರು, ಹೌದು, ನಾಶಗೊಳಿಸಲ್ಪಡುವರು. ಲೂಕ 14:25-35; ಆದಿಕಾಂಡ 29:30-33; ಮತ್ತಾಯ 5:13.

▪ ಒಬ್ಬನ ಸಂಬಂಧಿಕರನ್ನು ಮತ್ತು ಸ್ವತಃ ತನ್ನನ್ನೇ “ದ್ವೇಷಿಸು”ವದು ಅಂದರೆ ಅರ್ಥವೇನು?

▪ ಯೇಸುವು ಯಾವ ಎರಡು ಸಾಮ್ಯಗಳನ್ನು ಕೊಟ್ಟನು, ಮತ್ತು ಅವುಗಳ ಅರ್ಥವೇನು?

▪ ಉಪ್ಪಿನ ಕುರಿತು ಯೇಸುವಿನ ಸಮಾಪ್ತಿಯ ಹೇಳಿಕೆಗಳ ತಾತ್ಪರ್ಯವೇನು?