ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶುಕ್ರವಾರ ಹೂಣಿಡಲ್ಪಟ್ಟನು—ಆದಿತ್ಯವಾರ ಖಾಲಿ ಸಮಾಧಿ

ಶುಕ್ರವಾರ ಹೂಣಿಡಲ್ಪಟ್ಟನು—ಆದಿತ್ಯವಾರ ಖಾಲಿ ಸಮಾಧಿ

ಅಧ್ಯಾಯ 127

ಶುಕ್ರವಾರ ಹೂಣಿಡಲ್ಪಟ್ಟನು—ಆದಿತ್ಯವಾರ ಖಾಲಿ ಸಮಾಧಿ

ಇಷ್ಟರೊಳಗೆ ಶುಕ್ರವಾರ ಮಧ್ಯಾಹ್ನದ ಕೊನೆಯ ಭಾಗವಾಗಿತ್ತು, ಮತ್ತು ನೈಸಾನ್‌ 15ರ ಸೂರ್ಯಾಸ್ತಮಾನದಲ್ಲಿ ಸಬ್ಬತ್‌ ಆರಂಭಗೊಳ್ಳಲಿತ್ತು. ಯೇಸುವಿನ ಮೃತ ದೇಹವು ತಿರುಚಿಕೊಂಡು ಕಂಭದ ಮೇಲೆ ತೂಗಿಕೊಂಡಿತ್ತು, ಆದರೆ ಅವನ ಪಕ್ಕಗಳಲ್ಲಿದ್ದ ಇಬ್ಬರು ಕಳ್ಳರು ಇನ್ನೂ ಜೀವಂತವಾಗಿದ್ದರು. ಶುಕ್ರವಾರ ಮಧ್ಯಾಹ್ನ ಸೌರಣೆಯ ದಿನವಾಗಿತ್ತು, ಕಾರಣವೇನಂದರೆ ಜನರು ಊಟಗಳನ್ನು ತಯಾರಿಸಲು ಮತ್ತು ಸಬ್ಬತ್‌ ನಂತರದ ತನಕ ಕಾದಿಡಲು ಸಾಧ್ಯವಿಲ್ಲದ ತುರ್ತಿನ ಕೆಲಸಗಳನ್ನು ಪೂರೈಸಲು ಇದಿತ್ತು.

ಆರಂಭಗೊಳ್ಳಲಿದ್ದ ಸಬ್ಬತ್‌ ಕೇವಲ ಕ್ರಮದ ಸಬ್ಬತ್‌ (ವಾರದ ಏಳನೆಯ ದಿನ) ಮಾತ್ರವಾಗಿರಲಿಲ್ಲ, ಬದಲು ಅದು ಇಮ್ಮಡಿ, ಅಥವಾ “ಬಹು ವಿಶೇಷ” ಸಬ್ಬತ್‌ ಆಗಿತ್ತು. ಈ ರೀತಿಯಲ್ಲಿ ಅದನ್ನು ಕರೆಯುವದು ಯಾಕಂದರೆ ಹುಳಿಯಿಲ್ಲದ ರೊಟ್ಟಿಗಳ ಏಳು ದಿನಗಳ ಹಬ್ಬದ ಮೊದಲನೆಯ ದಿನವು ನೈಸಾನ್‌ 15 ಆಗಿದ್ದು (ಮತ್ತು ಇದು ವಾರದ ಯಾವುದೇ ದಿನದಲ್ಲಿ ಬರಲಿ, ಅದು ಯಾವಾಗಲೂ ಒಂದು ಸಬ್ಬತ್‌ ಆಗಿತ್ತು) ಕ್ರಮದ ಸಬ್ಬತ್‌ ದಿನವು ಕೂಡ ಅದೇ ದಿನ ಬರುತ್ತದೆ.

ದೇವರ ನಿಯಮಗಳಿಗನುಸಾರ, ರಾತ್ರಿ ಸಮಯದಲ್ಲಿ ಮೃತ ದೇಹಗಳು ತೂಗಹಾಕಲ್ಪಟ್ಟು ಕಂಭದ ಮೇಲೆ ಬಿಡಬಾರದು. ಆದುದರಿಂದ ಮರಣವು ಬೇಗ ಬರುವಂತೆ ಮಾಡಲಿಕ್ಕಾಗಿ ಮರಣ ದಂಡನೆಗೆ ಒಳಗಾದವರ ಕಾಲುಗಳನ್ನು ಮುರಿಸಲು ಪಿಲಾತನನ್ನು ಯೆಹೂದ್ಯರು ಕೇಳಿಕೊಂಡರು. ಆದಕಾರಣ ಸಿಪಾಯಿಗಳು ಆ ಇಬ್ಬರು ಕಳ್ಳರ ಕಾಲುಗಳನ್ನು ಮುರಿದರು. ಆದರೆ ಯೇಸುವು ಸತ್ತದರ್ದಿಂದ, ಅವನ ಕಾಲು ಮುರಿಯಲಿಲ್ಲ. ಇದು ಒಂದು ಶಾಸ್ತ್ರವಚನವನ್ನು ನೆರವೇರಿಸಿತು: “ಆತನ ಒಂದು ಎಲುಬನ್ನಾದರೂ ಮುರಿಯಕೂಡದು.”

ಆದಾಗ್ಯೂ, ಯೇಸುವು ನಿಜವಾಗಿ ಸತ್ತಿದ್ದಾನೋ ಎಂಬ ವಿಷಯದಲ್ಲಿ ಯಾವುದೇ ಸಂಶಯವನ್ನು ನಿವಾರಿಸಲು, ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು. ಈಟಿಯು ಅವನ ಹೃದಯದ ಪ್ರದೇಶದಲ್ಲಿ ಹೋಗಿ ಇರಿಯಿತು, ಮತ್ತು ಕೂಡಲೇ ರಕ್ತವೂ, ನೀರೂ ಹೊರಗೆ ಬಂತು. ಇದನ್ನು ಕಣ್ಣಾರೆ ಕಂಡ ಸಾಕ್ಷಿಯಾಗಿದ್ದ ಅಪೊಸ್ತಲ ಯೋಹಾನನು, ಇದು ಇನ್ನೊಂದು ಶಾಸ್ತ್ರವಚನವನ್ನು ನೆರವೇರಿಸಿತು ಎಂದು ವರದಿ ಮಾಡುತ್ತಾನೆ: “ಅವರು ತಾವು ಇರಿದವನನ್ನು ದಿಟ್ಟಿಸು ನೋಡುವರು.”

ಸನ್ಹೇದ್ರಿನ್‌ನ ಸತ್ಕೀರ್ತಿಯುಳ್ಳ ಸದಸ್ಯನಾಗಿದ್ದ ಅರಿಮಥಾಯ ಪಟ್ಟಣದ ಯೋಸೇಫನು ಕೂಡ ಆ ವಧಿಸಲ್ಪಟ್ಟ ಸ್ಥಳದಲ್ಲಿ ಇದ್ದನು. ಯೇಸುವಿನ ವಿರುದ್ಧವಾಗಿ ಮುಖ್ಯ ನ್ಯಾಯಾಲಯ [ಹಿರೀಸಭೆ] ಮಾಡಿದ ಅನ್ಯಾಯದ ಕೃತ್ಯಕ್ಕೆ ಅವನು ಸಮ್ಮತಿಪಟ್ಟಿರಲಿಲ್ಲ. ಯೋಸೇಫನು ನಿಜವಾಗಿಯೂ ಯೇಸುವಿನ ಶಿಷ್ಯನಾಗಿದ್ದನು, ಆದರೂ ಹಾಗೆಂದು ಗುರುತಿಸಿಕೊಳ್ಳಲು ಅವನು ಹೆದರುತ್ತಿದ್ದನು. ಈಗಲಾದರೋ, ಅವನು ಧೈರ್ಯ ತೆಗೆದುಕೊಂಡು, ಯೇಸುವಿನ ದೇಹಕ್ಕಾಗಿ ಪಿಲಾತನ ಬಳಿಗೆ ಹೋಗಿ ಕೇಳುತ್ತಾನೆ. ಪಿಲಾತನು ನಿರ್ವಹಣೆ ವಹಿಸಿದ್ದ ಶತಾಧಿಪತಿಯನ್ನು ಕರೆಸಿ, ಅವನಿಂದ ಯೇಸುವು ಸತ್ತಿದ್ದಾನೆಂಬುದನ್ನು ಸ್ಥಿರೀಕರಿಸಿದ ನಂತರ, ಶವವನ್ನು ಒಪ್ಪಿಸುತ್ತಾನೆ.

ಯೋಸೇಫನು ದೇಹವನ್ನು ಕೊಂಡು ಹೋಗಿ, ಸಮಾಧಿ ಮಾಡುವ ಸಿದ್ಧತೆಯಲ್ಲಿ ಒಂದು ಶುದ್ಧವಾದ ನಾರುಮಡಿಯಲ್ಲಿ ಸುತ್ತುತ್ತಾನೆ. ಸನ್ಹೇದ್ರಿನ್‌ನ ಇನ್ನೊಬ್ಬ ಸದಸ್ಯನಾಗಿದ್ದ ನಿಕೊದೇಮನು ಅವನಿಗೆ ಸಹಾಯ ಕೊಡುತ್ತಾನೆ. ತನ್ನ ಸ್ಥಾನವನ್ನು ಕಳಕೊಳ್ಳುವ ಅಂಜಿಕೆಯ ಕಾರಣ, ನಿಕೊದೇಮನು ಕೂಡ ಯೇಸುವಿನಲ್ಲಿ ನಂಬಿಕೆಯನ್ನು ಅರಿಕೆ ಮಾಡಲು ತಪ್ಪಿಹೋದನು. ಆದರೆ ಈಗ ಅವನು ರಕ್ತಬೋಳ ಮತ್ತು ಬೆಲೆಬಾಳುವ ಅಗರುಗಳನ್ನು ಕಲಸಿದ ರೋಮನರ ನೂರು ಪೌಂಡುಗಳಷ್ಟು [33 ಕಿಲೊಗ್ರಾಮ್‌] ಚೂರ್ಣವನ್ನು ತರುತ್ತಾನೆ. ಯೇಸುವಿನ ದೇಹವನ್ನು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಆ ಸುಗಂಧ ದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು.

ಅನಂತರ ದೇಹವನ್ನು ಹತ್ತರದ ತೋಟದಲ್ಲಿದ್ದ ಬಂಡೆಯಲ್ಲಿ ತೋಡಿದ್ದ ಯೋಸೇಫನ ಹೊಸ ಸಮಾಧಿಯಲ್ಲಿ ಇಟ್ಟರು. ಕಡೆಗೆ ಸಮಾಧಿಯ ಬಾಗಲಿಗೆ ಒಂದು ದೊಡ್ಡ ಕಲ್ಲನ್ನು ಉರುಳಿಸಿ ಇಡಲಾಯಿತು. ಸಬ್ಬತ್‌ನ ಮೊದಲು ಹೂಣಿಡುವಿಕೆಯನ್ನು ಪೂರೈಸುವ ಸಲುವಾಗಿ, ದೇಹದ ಸಿದ್ಧತೆಯನ್ನು ಅವಸರದಿಂದ ಮಾಡಲಾಯಿತು. ಆದಕಾರಣ, ಪ್ರಾಯಶಃ ಸಿದ್ಧತೆಗಳಿಗಾಗಿ, ಮೊದಲು ಸಹಾಯ ಮಾಡುತ್ತಿದ್ದ ಮಗಲ್ದದ ಮರಿಯಳು ಮತ್ತು ಮರಿಯಳು ಮತ್ತು ಚಿಕ್ಕ ಯಾಕೋಬನ ತಾಯಿಯಾದ ಮರಿಯಳು, ಇನ್ನಷ್ಟು ಪರಿಮಳದ್ರವ್ಯಗಳನ್ನೂ, ಸುಗಂಧತೈಲವನ್ನೂ ಸಿದ್ಧಗೊಳಿಸಲು ಮನೆಗೆ ಧಾವಿಸುತ್ತಾರೆ. ಸಬ್ಬತ್ತಿನ ನಂತರ ಅದಕ್ಕೆ ಇನ್ನಷ್ಟು ಲೇಪಿಸಿ, ಹೆಚ್ಚು ಸಮಯದ ತನಕ ಯೇಸುವಿನ ದೇಹವನ್ನು ಸಂರಕ್ಷಿಸಲು ಸಾಧ್ಯವಾಗುವಂತೆ ಅವರು ಯೋಜಿಸುತ್ತಾರೆ.

ಮರುದಿನ, ಶನಿವಾರ (ಸಬ್ಬತ್‌), ಮಹಾ ಯಾಜಕರು ಮತ್ತು ಫರಿಸಾಯರು ಪಿಲಾತನ ಬಳಿಗೆ ಹೋಗಿ, ಅಂದದ್ದು: “ದೊರೆಯೇ, ಆ ಮೋಸಗಾರನು ಬದುಕಿದ್ದಾಗ ತಾನು ಮೂರು ದಿನದ ಮೇಲೆ ಏಳುತ್ತೇನೆ ಅಂತ ಹೇಳಿದ್ದು ನೆನಪಿಗೆ ಬಂತು; ಆದಕಾರಣ ಮೂರನೆಯ ದಿನದ ತನಕ ಸಮಾಧಿಯನ್ನು ಭದ್ರಮಾಡಿ ಕಾಯುವದಕ್ಕೆ ಅಪ್ಪಣೆ ಕೊಡಬೇಕು; ಇಲ್ಲದಿದ್ದರೆ ಅವನ ಶಿಷ್ಯರು ಬಂದು ಅವನನ್ನು ಕದ್ದುಕೊಂಡು ಹೋಗಿ ಸತ್ತವನು ಬದುಕಿ ಬಂದಿದ್ದಾನೆ ಎಂದು ಹೇಳಾರು; ಆಗ ಮೊದಲನೆಯ ಮೋಸಕ್ಕಿಂತ ಕಡೆಯ ಮೋಸವು ಕೆಡುಕಾದೀತು.”

“ಕಾವಲುಗಾರರನ್ನು ತಕ್ಕೊಳ್ಳಿ,” ಪಿಲಾತನು ಉತ್ತರಿಸುತ್ತಾನೆ. “ಹೋಗಿ ನಿಮಗೆ ತಿಳಿದ ಹಾಗೆ ಭದ್ರ ಮಾಡಿ ಕಾಯಿರಿ.” ಆದುದರಿಂದ ಅವರು ಹೊರಟು ಹೋಗಿ, ಆ ಕಲ್ಲಿಗೆ ಮುದ್ರೆ ಹಾಕಿ, ಕಾವಲುಗಾರರನ್ನಾಗಿ ರೋಮನ್‌ ಸಿಪಾಯಿಗಳನ್ನು ನೇಮಿಸಿ, ಸಮಾಧಿಯನ್ನು ಭದ್ರ ಪಡಿಸುತ್ತಾರೆ.

ಆದಿತ್ಯವಾರ ಮುಂಜಾನೆಯೇ ಮಗಲ್ದದ ಮರಿಯಳು ಮತ್ತು ಯಾಕೋಬನ ತಾಯಿಯಾದ ಮರಿಯಳು, ಸಲೋಮೆ, ಯೊಹನ್ನಳು ಮತ್ತು ಇತರ ಸ್ತ್ರೀಯರೂ ಯೇಸುವಿನ ದೇಹಕ್ಕೆ ಹಚ್ಚಲು ಸಿದ್ಧ ಮಾಡಿದ್ದ ಸುಗಂಧ ದ್ರವ್ಯಗಳನ್ನು ತಂದರು. ದಾರಿಯಲ್ಲಿ ಅವರು ತಮ್ಮತಮ್ಮೊಳಗೆ ಮಾತಾಡಿಕೊಳ್ಳುವದು: “ಸಮಾಧಿಯ ಬಾಗಲಿಂದ ಆ ಕಲ್ಲನ್ನು ನಮಗೋಸ್ಕರ ಉರುಳಿಸುವವರು ಯಾರಿದ್ದಾರೆ?” ಆದರೆ ಅವರು ಬಂದಾಗ, ಒಂದು ಮಹಾ ಭೂಕಂಪವಾದುದನ್ನೂ, ಯೆಹೋವನ ದೂತನು ಕಲ್ಲನ್ನು ಉರುಳಿಸಿರುವದನ್ನು ಕಂಡರು. ಕಾವಲುಗಾರರು ಅಲ್ಲಿಂದ ಹೋಗಿದ್ದರು ಮತ್ತು ಸಮಾಧಿಯು ಖಾಲಿಯಾಗಿತ್ತು! ಮತ್ತಾಯ 27:57–28:2; ಮಾರ್ಕ 15:42–16:4; ಲೂಕ 23:50–24:3, 10; ಯೋಹಾನ 19:14, 31ಯೋಹಾನ 19:31 ರಿಂದ 20:1; ಯೋಹಾನ 12:42; ಯಾಜಕಕಾಂಡ 23:5-7; ಧರ್ಮೋಪದೇಶಕಾಂಡ 21:22, 23; ಕೀರ್ತನೆ 34:20; ಜೆಕರ್ಯ 12:10.

▪ ಶುಕ್ರವಾರವನ್ನು ಸೌರಣೆಯ ದಿನವೆಂದು ಯಾಕೆ ಕರೆಯಲಾಗಿದೆ, ಮತ್ತು “ಬಹು ವಿಶೇಷ” ಸಬ್ಬತ್‌ ಅಂದರೇನು?

▪ ಯೇಸುವಿನ ದೇಹದ ಸಂಬಂಧದಲ್ಲಿ ಯಾವ ಶಾಸ್ತ್ರವಚನಗಳು ನೆರವೇರಿದವು?

▪ ಯೇಸುವಿನ ಹೂಣಿಡುವಿಕೆಯಲ್ಲಿ ಯೋಸೇಫನು ಮತ್ತು ನಿಕೊದೇಮನು ಏನು ಮಾಡಲಿದ್ದರು, ಮತ್ತು ಯೇಸುವಿನೊಂದಿಗೆ ಅವರ ಸಂಬಂಧ ಏನಾಗಿತ್ತು?

▪ ಪಿಲಾತನಿಗೆ ಯಾಜಕರು ಯಾವ ಕೇಳಿಕೆಯನ್ನು ಮಾಡುತ್ತಾರೆ, ಮತ್ತು ಅವನು ಹೇಗೆ ಪ್ರತಿಕ್ರಿಯಿಸುತ್ತಾನೆ?

▪ ಆದಿತ್ಯವಾರ ಮುಂಜಾನೆಯಲ್ಲಿಯೇ ಏನು ಸಂಭವಿಸುತ್ತದೆ?