ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಬ್ಬತ್‌ನಲ್ಲಿ ಸತ್ಕಾರ್ಯಗಳನ್ನು ಮಾಡುವುದು

ಸಬ್ಬತ್‌ನಲ್ಲಿ ಸತ್ಕಾರ್ಯಗಳನ್ನು ಮಾಡುವುದು

ಅಧ್ಯಾಯ 29

ಸಬ್ಬತ್‌ನಲ್ಲಿ ಸತ್ಕಾರ್ಯಗಳನ್ನು ಮಾಡುವುದು

ಅದು ಸಾ.ಶ. 31ರ ವಸಂತ ಕಾಲವಾಗಿತ್ತು! ಯೂದಾಯದಿಂದ ಗಲಿಲಾಯಕ್ಕೆ ಹೋಗುವ ದಾರಿಯಲ್ಲಿ ಸಮಾರ್ಯದ ಒಂದು ಬಾವಿಯ ಪಕ್ಕದಲ್ಲಿ ಒಬ್ಬ ಹೆಂಗಸಿನ ಸಂಗಡ ಮಾತಾಡಿ, ಕೆಲವು ತಿಂಗಳುಗಳನ್ನು ಗತಿಸಿದ್ದವು.

ಈಗ, ಗಲಿಲಾಯದಲ್ಲಿ ವ್ಯಾಪಕವಾಗಿ ಬೋಧಿಸಿಯಾದ ಮೇಲೆ, ಯೂದಾಯಕ್ಕೆ ಯೇಸುವು ಹಿಂತೆರಳಿ, ಅಲ್ಲಿನ ಸಭಾಮಂದಿರಗಳಲ್ಲಿ ಸಾರುತ್ತಾನೆ. ಗಲಿಲಾಯದ ಅವನ ಶುಶ್ರೂಷೆಗೆ ಬೈಬಲು ಕೊಟ್ಟ ಗಮನವನ್ನು ಹೋಲಿಸುವಲ್ಲಿ, ಈ ಬಾರಿಯ ಯೂದಾಯದ ಸಂದರ್ಶನದಲ್ಲಿ ಮತ್ತು ಹಿಂದಿನ ಪಸ್ಕ ಹಬ್ಬದ ನಂತರ ಅಲ್ಲಿ ಕಳೆದ ತಿಂಗಳುಗಳಲ್ಲಿ ಯೇಸುವಿನ ಚಟುವಟಿಕೆಯ ಕುರಿತು, ಬೈಬಲು ಕೊಂಚವೇ ತಿಳಿಸುತ್ತದೆ. ಗಲಿಲಾಯದಲ್ಲಿ ದೊರಕಿದಷ್ಟು ನೆಚ್ಚಿನ ಪ್ರತಿವರ್ತನೆ ಯೂದಾಯದಲ್ಲಿ ಅವನ ಶುಶ್ರೂಷೆಗೆ ದೊರಕಲಿಲ್ಲವೆಂದು ವ್ಯಕ್ತವಾಗುತ್ತದೆ.

ಬಲುಬೇಗನೇ, ಯೂದಾಯದ ಪ್ರಮುಖ ನಗರವಾದ ಯೆರೂಸಲೇಮಿಗೆ ಯೇಸುವು ಸಾ.ಶ. 31ರ ಪಸ್ಕ ಹಬ್ಬಕ್ಕಾಗಿ ಪಯಣಿಸುತ್ತಾನೆ. ಇಲ್ಲಿ ನಗರದ ಕುರೀ ಅಗಸೇ ಬಾಗಲಿನ ಹತ್ತಿರ ಬೇತ್ಸಥಾ ಹೆಸರಿನ ಕೊಳವಿದೆ. ಇಲ್ಲಿ ಬಹುಮಂದಿ ರೋಗಿಗಳೂ, ಕುರುಡರೂ, ಕುಂಟರೂ ಬರುತ್ತಿದ್ದರು. ಇಲ್ಲಿನ ಕೊಳದ ನೀರು ಉಕ್ಕುವಾಗ ಜನರು ನೀರಿನೊಳಗೆ ಇಳಿಸಲ್ಪಟ್ಟರೆ ಗುಣಮುಖರಾಗುತ್ತಾರೆ ಎಂದವರ ನಂಬಿಕೆ.

ಅಂದು ಸಬ್ಬತ್‌ ಆಗಿತ್ತು, ಮತ್ತು ಯೇಸುವು ಕೊಳದ ಬಳಿ 38 ವರ್ಷಗಳಿಂದ ರೋಗಿಯಾಗಿದ್ದ ಒಬ್ಬ ವ್ಯಕ್ತಿಯನ್ನು ಕಾಣುತ್ತಾನೆ. ಮನುಷ್ಯನ ದೀರ್ಘಕಾಲದ ರೋಗದ ಕುರಿತು ತಿಳಿದವನಾಗಿ, ಯೇಸುವು ಕೇಳುವದು: “ನಿನಗೆ ಸ್ವಸ್ಥವಾಗಲಿಕ್ಕೆ ಮನಸ್ಸುಂಟೋ?”

ಅವನು ಯೇಸುವಿಗೆ ಉತ್ತರಿಸುವದು: “ಸ್ವಾಮೀ, ನೀರು ಉಕ್ಕುವಾಗ ನನ್ನನ್ನು ಕೊಳದೊಳಗೆ ಇಳಿಸುವವರು ಒಬ್ಬರೂ ಇಲ್ಲ; ನಾನು ಬರುವದರೊಳಗೆ ನನಗಿಂತ ಮುಂದಾಗಿ ಮತ್ತೊಬ್ಬನು ಇಳಿಯುತ್ತಾನೆ.”

ಯೇಸುವು ಅವನಿಗಂದದ್ದು: “ಎದ್ದು ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ.” ಆ ಕೂಡಲೇ ಆ ಮನುಷ್ಯನು ಶರೀರದಲ್ಲಿ ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ಹೊತ್ತುಕೊಂಡು ಹೋಗುತ್ತಾನೆ!

ಆದರೆ ಯೆಹೂದ್ಯರು ಈ ಮನುಷ್ಯನನ್ನು ನೋಡಿದಾಗ, ಅವರಂದದ್ದು: “ಈ ಹೊತ್ತು ಸಬ್ಬತ್‌ ದಿನವಾಗಿದೆ, ಮತ್ತು ನೀನು ಹಾಸಿಗೆಯನ್ನು ಹೊರುವದು ಸರಿಯಲ್ಲ.”

ಆ ಮನುಷ್ಯನು ಅವರಿಗೆ ಉತ್ತರಿಸಿದ್ದು: “ನನ್ನನ್ನು ಸ್ವಸ್ಥ ಮಾಡಿದವನೇ ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ ಎಂದು ನನಗೆ ಹೇಳಿದನು.”

“ಹೊತ್ತುಕೊಂಡು ನಡೆ ಎಂದು ನಿನಗೆ ಹೇಳಿದ ಆ ಮನುಷ್ಯನು ಯಾರು?” ಎಂದು ಅವರು ವಿಚಾರಿಸುತ್ತಾರೆ. ಜನರ ಗುಂಪು ಇದ್ದದರಿಂದ, ಯೇಸು ಸರಕೊಂಡು ಹೋಗಿದ್ದನು ಮತ್ತು ವಾಸಿಯಾದವನಿಗೆ ಯೇಸುವಿನ ಹೆಸರು ಗೊತ್ತಿರಲಿಲ್ಲ. ಆದಾಗ್ಯೂ, ತದನಂತರ ಯೇಸು ಮತ್ತು ಈ ಮನುಷ್ಯನು ದೇವಾಲಯದಲ್ಲಿ ಭೇಟಿಯಾಗುತ್ತಾರೆ ಮತ್ತು ತನ್ನನ್ನು ಗುಣಪಡಿಸಿದವನು ಯಾರೆಂದು ಅವನಿಗೆ ತಿಳಿಯುತ್ತದೆ.

ಆದುದರಿಂದ ತನ್ನನ್ನು ಸ್ವಸ್ಥಪಡಿಸಿದವನು ಯೇಸುವೆಂದು ಯೆಹೂದ್ಯರಿಗೆ ತಿಳಿಸಲು ಈ ವಾಸಿಯಾದವನು ಶಕ್ತನಾಗುತ್ತಾನೆ. ಇದನ್ನು ತಿಳಿದ ಯೆಹೂದ್ಯರು, ಯೇಸುವಿನ ಬಳಿಗೆ ಹೋಗುತ್ತಾರೆ. ಯಾವ ಕಾರಣಕ್ಕಾಗಿ? ಈ ಮಹತ್ಕಾರ್ಯಗಳನ್ನು ಯಾವ ಬಲದಿಂದ ಅವನು ಮಾಡಶಕ್ತನಾದನು ಎಂದು ತಿಳಿದುಕೊಳ್ಳಲಿಕ್ಕೋ? ಅಲ್ಲ. ಬದಲಾಗಿ ತಪ್ಪನ್ನು ಹುಡುಕಲಿಕ್ಕಾಗಿ, ಯಾಕಂದರೆ ಅವನು ಸಬ್ಬತ್‌ನಲ್ಲಿ ಸತ್ಕಾರ್ಯಗಳನ್ನು ಮಾಡುತ್ತಿದ್ದನು. ಮತ್ತು ಅವರು ಅವನನ್ನೂ ಹಿಂಸಿಸಲೂ ಕೂಡಾ ಆರಂಭಿಸಿದರು! ಲೂಕ 4:44; ಯೋಹಾನ 5:1-16.

▪ ಯೂದಾಯವನ್ನು ಈ ಮೊದಲು ಎಷ್ಟು ಸಮಯದ ಹಿಂದೆ ಯೇಸು ಸಂದರ್ಶಿಸಿದ್ದನು?

▪ ಬೇತ್ಸಥಾ ಎಂಬ ಕೊಳವು ಅಷ್ಟು ಪ್ರಸಿದ್ಧಿಯಾಗಲು ಕಾರಣವೇನು?

▪ ಕೊಳದ ಬಳಿ ಯೇಸುವು ಯಾವ ಮಹತ್ಕಾರ್ಯ ಮಾಡಿದನು, ಮತ್ತು ಯೆಹೂದ್ಯರ ಪ್ರತಿಕ್ರಿಯೆ ಏನಾಗಿತ್ತು?