ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಮಾರ್ಯದ ಸ್ತ್ರೀಗೆ ಕಲಿಸುವುದು

ಸಮಾರ್ಯದ ಸ್ತ್ರೀಗೆ ಕಲಿಸುವುದು

ಅಧ್ಯಾಯ 19

ಸಮಾರ್ಯದ ಸ್ತ್ರೀಗೆ ಕಲಿಸುವುದು

ಯೇಸು ಮತ್ತು ಆತನ ಶಿಷ್ಯರು ಯೂದಾಯದಿಂದ ಗಲಿಲಾಯಕ್ಕೆ ಹೋಗುವ ದಾರಿಯಲ್ಲಿ ಸಮಾರ್ಯ ಸೀಮೆಯನ್ನು ಹಾದುಹೋಗಬೇಕಾಯಿತು. ಪ್ರಯಾಣದಿಂದಾಗಿ ಆಯಾಸಗೊಂಡ ಅವರು ಸುಮಾರು ಮಧ್ಯಾಹ್ನದ ಹೊತ್ತಿಗೆ ಸುಖರೆಂಬ ಊರಿನ ಬಾವಿಯ ಬಳಿ ತಂಗುತ್ತಾರೆ. ಇದು ಶತಮಾನಗಳ ಹಿಂದೆ ಯಾಕೋಬನು ತೆಗೆಸಿದ ಬಾವಿಯಾಗಿತ್ತು. ಆಧುನಿಕ ಕಾಲದ ನೇಬ್ಲಸ್‌ ಪಟ್ಟಣದಲ್ಲಿ ಆ ಬಾವಿಯು ಇಂದಿನ ತನಕವೂ ಉಳಿದಿರುತ್ತದೆ.

ಅಲ್ಲಿ ಯೇಸುವು ದಣುವಾರಿಸಿಕೊಳ್ಳುತ್ತಿದ್ದಾಗ ಆತನ ಶಿಷ್ಯರಾದರೋ ಊಟಕ್ಕೆ ಬೇಕಾದ್ದದನ್ನು ಕೊಂಡು ಕೊಳ್ಳುವದಕ್ಕಾಗಿ ಊರೊಳಗೆ ಹೋಗುತ್ತಾರೆ. ಸಮಾರ್ಯದವಳಾದ ಒಬ್ಬ ಹೆಂಗಸು ನೀರು ಸೇದುವದಕ್ಕಾಗಿ ಬಂದಾಗ ಯೇಸು ಆಕೆಗೆ ವಿನಂತಿಸಿದ್ದು: “ಕುಡಿಯುವದಕ್ಕೆ ನೀರು ಕೊಡು.”

ಸಮಾರ್ಯದವರಲ್ಲಿ ಮತ್ತು ಯೆಹೂದ್ಯರಲ್ಲಿ ಆಳವಾಗಿ ಬೇರೂರಿದ್ದ ದುರಭಿಮಾನಗಳಿಂದಾಗಿ, ಸಾಮಾನ್ಯವಾಗಿ ಅವರಲ್ಲಿ ಯಾವ ಹೊಕ್ಕುಬಳಿಕೆ ಇರಲಿಲ್ಲ. ಇದರಿಂದಾಗಿ, ಆಶ್ಚರ್ಯದಿಂದ ಅವಳು ಕೇಳುವದು: “ಯೆಹೂದ್ಯನಾದ ನೀನು ಸಮಾರ್ಯದವಳಾದ ನನ್ನೊಡನೆ ನೀರು ಕೇಳುವದು ಹೇಗೆ?”

“ಕುಡಿಯುವದಕ್ಕೆ ನೀರು ಕೊಡು ಎಂದು ನಿನಗೆ ಹೇಳಿದವನು ಯಾರೆಂದು ನಿನಗೆ ತಿಳಿದಿದ್ದರೆ, ನೀನು ಅವನೊಡನೆ ಬೇಡಿಕೊಳ್ಳುತ್ತಿದ್ದಿ, ಮತ್ತು ಅವನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು,” ಎಂದು ಯೇಸು ಉತ್ತರಿಸುತ್ತಾನೆ.

“ಅಯ್ಯಾ, ಸೇದುವದಕ್ಕೆ ನಿನ್ನಲ್ಲಿ ಏನೂ ಇಲ್ಲ, ಬಾವಿ ಆಳವಾಗಿದೆ. ಹೀಗಿರುವಾಗ ಆ ಜೀವಕರವಾದ ನೀರು ನಿನಗೆ ಎಲ್ಲಿಂದ ಬಂತು? ನಮ್ಮ ಹಿರಿಯನಾದ ಯಾಕೋಬನಿಗಿಂತ ನೀನು ದೊಡ್ಡವನೋ? ಅವನೇ ಈ ಬಾವಿಯನ್ನು ನಮಗೆ ಕೊಟ್ಟವನು. ಅವನೂ ಅವನ ಮಕ್ಕಳೂ ಅವನು ಸಾಕಿದೆಲ್ಲವೂ ಸಹಿತವಾಗಿ ಇದೇ ಬಾವಿಯ ನೀರು ಕುಡಿದರು,” ಎಂದು ಹೇಳುತ್ತಾಳೆ.

“ಈ ನೀರನ್ನು ಕುಡಿಯುವವರೆಲ್ಲರಿಗೆ ತಿರಿಗಿ ನೀರಡಿಕೆಯಾಗುವದು,” ಎಂದು ಯೇಸುವು ಅವಲೋಕಿಸುತ್ತಾನೆ. “ಆದರೆ ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ; ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ಒರತೆಯಾಗಿದ್ದು, ನಿತ್ಯ ಜೀವವನ್ನು ಉಂಟುಮಾಡುವದು.”

“ಅಯ್ಯಾ, ನನಗೆ ಆ ನೀರನ್ನು ಕೊಡು, ಕೊಟ್ಟರೆ ಇನ್ನು ಮೇಲೆ ನನಗೆ ನೀರಡಿಕೆಯಾಗಲಿಕ್ಕಿಲ್ಲ. ನೀರು ಸೇದುವದಕ್ಕೆ ಇಷ್ಟು ದೂರ ಬರಬೇಕಾದದ್ದೂ ಇರುವದಿಲ್ಲ,” ಎಂದು ಆ ಸ್ತ್ರೀಯು ಪ್ರತಿಕ್ರಿಯಿಸುತ್ತಾಳೆ.

ಯೇಸುವು ಈಗ ಅವಳಿಗೆ ಹೀಗನ್ನುತ್ತಾನೆ: “ಹೋಗು, ನಿನ್ನ ಗಂಡನನ್ನು ಕರಗೊಂಡು ಇಲ್ಲಿ ಬಾ.”

“ನನಗೆ ಗಂಡನಿಲ್ಲ,” ಎಂದವಳು ಉತ್ತರಿಸುತ್ತಾಳೆ.

ಯೇಸುವು ಆಕೆಯ ಮಾತನ್ನು ದೃಢೀಕರಿಸುತ್ತಾನೆ: “ನಿನಗೆ ಗಂಡನಿಲ್ಲವೆಂದು ನೀನು ಹೇಳಿದ್ದು ಸರಿಯಾದ ಮಾತು. ನಿನಗೆ ಐದು ಮಂದಿ ಗಂಡರಿದ್ದರು. ಈಗ ಇರುವವನು ನಿನಗೆ ಗಂಡನಲ್ಲ.”

“ಅಯ್ಯಾ, ನೀನು ಪ್ರವಾದಿಯೆಂದು ನನಗೆ ತೋಚುತ್ತದೆ,” ಎಂದು ಅಚ್ಚರಿಯಿಂದ ಆ ಸ್ತ್ರೀಯು ಅವನಿಗನ್ನುತ್ತಾಳೆ. ತನ್ನ ಆತ್ಮಿಕ ಅಭಿರುಚಿಗಳನ್ನು ವ್ಯಕ್ತಪಡಿಸುತ್ತಾ, ಸಮಾರ್ಯದವರು “ಈ ಬೆಟ್ಟದಲ್ಲಿ [ಗೆರಿಜೀಮ್‌, ಅಲ್ಲಿಯೇ ಪಕ್ಕದಲ್ಲಿತ್ತು] ದೇವಾರಾಧನೆ ಮಾಡುತ್ತಿದ್ದರು, ಆದರೆ ನೀವು [ಯೆಹೂದ್ಯರು] ಆರಾಧನೆ ಮಾಡತಕ್ಕ ಸ್ಥಳವು ಯೆರೂಸಲೇಮಿನಲ್ಲಿ ಅದೆ ಅನ್ನುತ್ತೀರಿ,” ಎಂದು ಹೇಳಿದಳು.

ಆದರೂ, ಆರಾಧನಾ ಸ್ಥಳವು ಪ್ರಾಮುಖ್ಯವಾದ ಸಂಗತಿಯಲ್ಲವೆಂದು ಯೇಸುವು ಸೂಚಿಸುತ್ತಾನೆ. “ಸತ್ಯಾರಾಧಕರು ತಂದೆಯನ್ನು ಆತ್ಮದಿಂದಲೂ, ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ; ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ. ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮ ಮತ್ತು ಸತ್ಯದಿಂದ ಆರಾಧಿಸತಕ್ಕದ್ದು,” ಎಂದವನು ಹೇಳುತ್ತಾನೆ.

ಸ್ತ್ರೀಯು ಅಳವಾಗಿ ಪ್ರಭಾವಿತಳಾಗುತ್ತಾಳೆ. “ಮೆಸ್ಸೀಯನು ಅಂದರೆ ಕ್ರಿಸ್ತನು ಬರುತ್ತಾನೆಂದು ನಾನು ಬಲ್ಲೆನು,” ಎಂದವಳು ಹೇಳುತ್ತಾಳೆ. “ಆತನು ಬಂದ ಮೇಲೆ ನಮಗೆ ಎಲ್ಲಾ ಸಂಗತಿಗಳನ್ನು ಬಹಿರಂಗವಾಗಿ ತಿಳಿಸುವನು.”

“ನಿನ್ನ ಸಂಗಡ ಮಾತಾಡುತ್ತಿರುವ ನಾನೇ ಅವನು,” ಯೇಸುವು ಘೋಷಿಸುತ್ತಾನೆ. ಅದರ ಕುರಿತು ಯೋಚಿಸಿರಿ! ತನ್ನ ಜೀವನಕ್ರಮವನ್ನು ಹೀನೈಸುವ ಊರ ಹೆಂಗಸರ ಸಂಪರ್ಕವನ್ನು ಪ್ರಾಯಶಃ ತಪ್ಪಿಸಿಕೊಳ್ಳಲಿಕ್ಕಾಗಿ ಮಧ್ಯಾಹ್ನದ ಹೊತ್ತಿಗೆ ನೀರು ಸೇದಲು ಬಂದಿದ್ದ ಈ ಹೆಂಗಸಿಗೆ ಎಂಥಹ ಒಂದು ಆಶ್ಚರ್ಯಕರ ರೀತಿಯಲ್ಲಿ ಯೇಸುವಿನಿಂದ ಅನುಗ್ರಹವು. ಬೇರೆ ಯಾರಿಗೂ ಇಷ್ಟರ ತನಕ ತಿಳಿಸದ ವಿಷಯವನ್ನು ಅವನು ಅವಳಿಗೆ ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳುತ್ತಾನೆ. ಅದರಿಂದಾದ ಫಲಿತಾಂಶವೇನು?

ಅನೇಕ ಸಮಾರ್ಯರು ನಂಬುತ್ತಾರೆ

ಸುಖರೆಂಬ ಊರಿನಿಂದ ಆಹಾರದೊಂದಿಗೆ ಶಿಷ್ಯರು ಹಿಂದೆ ಬಂದಾಗ ಯೇಸುವಿನ್ನೂ ಯಾಕೋಬನ ಬಾವಿಯ ಬಳಿ ಇದ್ದದ್ದನ್ನು ಕಂಡರು ಮತ್ತು ಅವನು ಈಗ ಒಬ್ಬಾಕೆ ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡುತ್ತಿದ್ದಾನೆ. ಶಿಷ್ಯರು ಬಂದಾಗ, ಆಕೆ ತನ್ನ ಕೊಡವನ್ನು ಅಲ್ಲೇ ಬಿಟ್ಟು ಊರೊಳಕ್ಕೆ ಹೊರಟುಹೋಗುತ್ತಾಳೆ.

ಯೇಸು ತನಗಂದ ಮಾತುಗಳಿಂದ ಆಳವಾಗಿ ಪ್ರಭಾವಿತಳಾದ ಆಕೆ, ಊರಜನರಿಗೆ ಹೀಗನ್ನುತ್ತಾಳೆ: “ಅಲ್ಲಿ ಒಬ್ಬ ಮನುಷ್ಯನಿದ್ದಾನೆ, ನಾನು ಇದುವರೆಗೆ ಮಾಡಿದ್ದನ್ನೆಲ್ಲಾ ನನಗೆ ಹೇಳಿದನು; ಬಂದು ಅವನನ್ನು ನೋಡಿರಿ.” ಅನಂತರ ಕುತೂಹಲವನ್ನೆಬ್ಬಿಸುವಂಥಹ ರೀತಿಯಲ್ಲಿ ಅವಳು ಕೇಳುವದು: “ಬರತಕ್ಕ ಕ್ರಿಸ್ತನು ಅವನೇ ಏನೋ?” ಆ ಪ್ರಶ್ನೆಯು ತನ್ನ ಉದ್ದೇಶವನ್ನು ಪೂರೈಸುತ್ತದೆ—ತಾವಾಗಿಯೇ ನೋಡುವಂತೆ ಜನರು ಹೊರಟರು.

ತನ್ಮಧ್ಯೆ, ಶಿಷ್ಯರು ಊರಿನಿಂದ ತಾವು ತಂದ ಊಟವನ್ನು ಉಣ್ಣುವಂತೆ ಯೇಸುವನ್ನು ಒತ್ತಾಯಿಸುತ್ತಾರೆ. ಆದರೆ ಅವನು ಉತ್ತರಿಸುವದು: “ನಿಮಗೆ ತಿಳಿಯದಂಥ ಆಹಾರವು ನನಗುಂಟು.”

“ಆತನಿಗೆ ಯಾರಾದರೂ ಆಹಾರವನ್ನು ಊಟ ತಂದುಕೊಟ್ಟರೋ ಏನೋ?” ಎಂದು ಶಿಷ್ಯರು ತಮ್ಮ ತಮ್ಮೊಳಗೆ ಮಾತಾಡಿಕೊಂಡರು. ಆಗ ಯೇಸು ವಿವರಿಸಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಅವನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು. ಇನ್ನು ನಾಲ್ಕು ತಿಂಗಳಿಗೆ ಸುಗ್ಗೀ ಬರುವದೆಂದು ನೀವು ಹೇಳುವದುಂಟಷ್ಟೇ?” ಆದಾಗ್ಯೂ, ಆತ್ಮಿಕ ಕೊಯ್ಲಿನ ಕಡೆಗೆ ನಿರ್ದೇಶಿಸುತ್ತಾ, ಯೇಸುವು ಹೇಳುವದು: “ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ, ಅವು ಬೆಳ್ಳಗಾಗಿ ಕೊಯ್ಲಿಗೆ ಬಂದವೆಂದು ನಿಮಗೆ ಹೇಳುತ್ತೇನೆ. ಕೊಯ್ಯುವವನಿಗೆ ಈಗಲೇ ಕೂಲಿ ದೊರೆಯುತ್ತದೆ. ಅವನು ನಿತ್ಯ ಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ. ಹೀಗೆ ಬಿತ್ತುವವನಿಗೂ ಕೊಯ್ಯುವವನಿಗೂ ಕೂಡಾ ಸಂತೋಷವಾಗುವದು.”

ಆ ಸಮಾರ್ಯದ ಸ್ತ್ರೀಯ ಭೇಟಿಯಿಂದಾದ ಮಹಾ ಪರಿಣಾಮವನ್ನು ಈಗಾಗಲೇ ಯೇಸು ಕಂಡಿರಬಹುದು—ಆಕೆಯ ಸಾಕ್ಷಿಯಿಂದ ಅನೇಕರು ಅವನ ಮೇಲೆ ನಂಬಿಕೆಯನ್ನಿಡಲಾರಂಭಿಸಿದರು. ಅವಳು ಊರಿನ ಜನರಿಗೆ ಸಾಕ್ಷಿಯನ್ನೀಯುತ್ತಾ ಹೇಳಿದ್ದು: “ನಾನು ಇದುವರೆಗೆ ಮಾಡಿದ್ದನ್ನೆಲ್ಲಾ ಅವನು ನನಗೆ ಹೇಳಿದನು.” ಆದಕಾರಣ, ಬಾವಿಯ ಬಳಿಗೆ ಸುಖರ್‌ ಊರಿನ ಜನರು ಬಂದಾಗ, ಅವನು ಉಳುಕೊಳ್ಳುವಂತೆ ಮತ್ತು ಅವರಿಗೆ ಹೆಚ್ಚು ವಿಷಯಗಳನ್ನು ತಿಳಿಸುವಂತೆ ಅವನೊಡನೆ ವಿನಂತಿಸುತ್ತಾರೆ. ಯೇಸುವು ಅವರ ಆಮಂತ್ರಣವನ್ನು ಸ್ವೀಕರಿಸಿ, ಅಲ್ಲಿ ಎರಡು ದಿನ ನಿಲ್ಲುತ್ತಾರೆ.

ಸಮಾರ್ಯದವರು ಯೇಸುವಿಗೆ ಕಿವಿಗೊಡುತ್ತಿದ್ದಂತೆ, ಇನ್ನೂ ಅನೇಕರು ಆತನನ್ನು ನಂಬುವವರಾದರು. ಅನಂತರ ಅವರು ಆ ಹೆಂಗಸಿಗೆ ಅಂದದ್ದು: “ನಾವು ಆತನನ್ನು ನಂಬಿರುವದು ಇನ್ನು ಮೇಲೆ ನಿನ್ನ ಮಾತಿನ ಮೇಲೆ ಅಲ್ಲ, ನಾವು ಕಿವಿಯಾರೆ ಕೇಳಿ ಈತನು ಲೋಕ ರಕ್ಷಕನೇ ಹೌದೆಂದು ತಿಳುಕೊಂಡಿದ್ದೇವೆ.” ಹೀಗೆ ಕಿವಿಗೊಡುವವರು ಹೆಚ್ಚನ್ನು ಸಂಶೋಧಿಸುವಂತೆ, ಕುತೂಹಲವನ್ನೆಬ್ಬಿಸುವ ಮೂಲಕ ನಾವು ಹೇಗೆ ಕ್ರಿಸ್ತನ ವಿಷಯವಾದ ಸಾಕ್ಷಿಯನ್ನು ಕೊಡಬಹುದೆಂಬುದಕ್ಕೆ ಈ ಸಮಾರ್ಯದ ಹೆಂಗಸು ಒಂದು ಒಳ್ಳೆಯ ಮಾದರಿ ಒದಗಿಸಿದ್ದಾಳೆ ನಿಶ್ಚಯ!

ಕೊಯ್ಲಿಗೆ ನಾಲ್ಕು ತಿಂಗಳು ಮುಂಚಿತವಾದ ಸಮಯ ಅದಾಗಿತ್ತೆಂಬುದನ್ನು ನೆನಪಿಗೆ ತನ್ನಿರಿ—ಅದು ಜವೆಗೋದಿಯ ಕೊಯ್ಲಾಗಿರಬಹುದೆಂದು ವ್ಯಕ್ತ! ಪಲೇಸ್ತಿನದಲ್ಲಿ ಇದು ವಸಂತ ಕಾಲದಲ್ಲಿ ಸಂಭವಿಸುತ್ತದೆ. ಹೀಗೆ ಅದೀಗ ಪ್ರಾಯಶಃ ನವಂಬರ ಯಾ ದಶಂಬರ ತಿಂಗಳಾಗಿರಬಹುದು. ಅಂದರೆ ಸಾ.ಶ. 30ರ ಪಸ್ಕವನ್ನು ಹಿಂಬಾಲಿಸಿ, ಯೇಸುವೂ, ಅವನ ಶಿಷ್ಯರೂ ಸುಮಾರು ಎಂಟು ತಿಂಗಳುಗಳಷ್ಟನ್ನು ಯೂದಾಯದಲ್ಲಿ ಕಲಿಸುವದರಲ್ಲಿ ಮತ್ತು ದೀಕ್ಷಾಸ್ನಾನ ಮಾಡಿಸುವದರಲ್ಲಿ ಕಳೆದರು ಎಂದು ಅರ್ಥ. ಈಗ ಅವರು ತಮ್ಮ ಊರು-ಕ್ಷೇತ್ರವಾದ ಗಲಿಲಾಯಕ್ಕೆ ತೆರಳುತ್ತಾರೆ. ಅಲ್ಲಿ ಅವರಿಗೇನು ಕಾದಿರುತ್ತದೆ? ಯೋಹಾನ 4:3-43.

▪ ಯೇಸು ತನ್ನೊಂದಿಗೆ ಮಾತಾಡಿದ್ದಕ್ಕಾಗಿ ಸಮಾರ್ಯದ ಸ್ತ್ರೀಯು ಅಚ್ಚರಿಗೊಂಡದ್ದೇಕೆ?

▪ ಜೀವಜಲದ ಮತ್ತು ಎಲ್ಲಿ ಆರಾಧಿಸಬೇಕೆಂಬದರ ಕುರಿತು ಯೇಸುವು ಅವಳಿಗೆ ಏನನ್ನು ಕಲಿಸಿದನು?

▪ ತಾನು ಯಾರೆಂದು ಯೇಸು ಪ್ರಕಟಿಸಿದ್ದು ಹೇಗೆ, ಮತ್ತು ಈ ಪ್ರಕಟಿಸುವಿಕೆಯು ಯಾಕೆ ಒಂದು ಅಚ್ಚರಿಯಾಗಿತ್ತು?

▪ ಸಮಾರ್ಯದ ಸ್ತ್ರೀಯು ಯಾವ ಸಾಕ್ಷಿಕಾರ್ಯ ಮಾಡಿದಳು, ಮತ್ತು ಯಾವ ಫಲಿತಾಂಶದೊಂದಿಗೆ?

▪ ಯೇಸುವಿನ ಆಹಾರವು ಕೊಯ್ಲಿಗೆ ಸಂಬಂಧಿಸಿದ್ದು ಹೇಗೆ?

▪ ಸಾ.ಶ. 30ರ ಪಸ್ಕವನ್ನು ಹಿಂಬಾಲಿಸಿ, ಯೂದಾಯದಲ್ಲಿ ಯೇಸುವಿನ ಶುಶ್ರೂಷೆಯ ಉದ್ದವನ್ನು ನಾವು ಹೇಗೆ ನಿರ್ಧರಿಸಬಹುದು?