ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಾದಿಯನ್ನು ಸಿದ್ಧಪಡಿಸುವವನು ಹುಟ್ಟುತ್ತಾನೆ

ಹಾದಿಯನ್ನು ಸಿದ್ಧಪಡಿಸುವವನು ಹುಟ್ಟುತ್ತಾನೆ

ಅಧ್ಯಾಯ 3

ಹಾದಿಯನ್ನು ಸಿದ್ಧಪಡಿಸುವವನು ಹುಟ್ಟುತ್ತಾನೆ

ಎಲಿಸಬೇತಳು ಈಗ ತನ್ನ ಮಗುವನ್ನು ಪಡೆಯಲು ಸಿದ್ಧವಾಗಿದ್ದಾಳೆ. ಕಳೆದ ಮೂರು ತಿಂಗಳುಗಳಿಂದ ಮರಿಯಳು ಅವಳೊಂದಿಗೆ ಇದ್ದಳು. ಆದರೆ ಈಗ ಮರಿಯಳು ವಿದಾಯಹೇಳಿ, ನಜರೇತಿನ ತನ್ನ ಮನೆಗೆ ಹಿಂತಿರುಗಿ ಹೋಗಲು ಒಂದು ದೀರ್ಘ ಪ್ರಯಾಣ ಮಾಡಬೇಕಿತ್ತು. ಇನ್ನು ಹೆಚ್ಚುಕಡಿಮೆ ಆರು ತಿಂಗಳುಗಳಲ್ಲಿ ಅವಳಿಗೂ ಒಂದು ಮಗು ಹುಟ್ಟಲಿಕ್ಕಿತ್ತು.

ಮರಿಯಳು ಹೋದ ನಂತರ ಬಲುಬೇಗನೆ, ಎಲಿಸಬೇತಳು ಮಗುವನ್ನು ಹೆರುತ್ತಾಳೆ. ಜನನವು ಯಶಸ್ವಿಯಾಗಿ, ಎಲಿಸಬೇತಳು ಮತ್ತು ಮಗುವು ಉತ್ತಮ ಆರೋಗ್ಯದಲ್ಲಿರುವದನ್ನು ಕಂಡು ಅಲ್ಲಿ ಎಷ್ಟೊಂದು ಸಂತೋಷ! ಎಲಿಸಬೇತಳು ಚಿಕ್ಕ ಕೂಸನ್ನು ನೆರೆಹೊರೆಯವರಿಗೆ ಮತ್ತು ಸಂಬಂಧಿಕರಿಗೆ ತೋರಿಸಿದಾಗ ಅವರೆಲ್ಲರೂ ಅವಳೊಂದಿಗೆ ಆನಂದಪಟ್ಟರು.

ದೇವರ ನಿಯಮಶಾಸ್ತ್ರಕ್ಕನುಸಾರ, ಇಸ್ರಾಯೇಲ್ಯರಲ್ಲಿ ಹುಟ್ಟಿದ ಪ್ರತಿಯೊಬ್ಬ ಹುಡುಗನಿಗೆ ಅವನ ಜನನದ ನಂತರ ಎಂಟನೆಯ ದಿನದಲ್ಲಿ ಸುನ್ನತಿಯಾಗಬೇಕಿತ್ತು. ಈ ಸಂದರ್ಭದಲ್ಲಿ ಸ್ನೇಹಿತರು ಮತ್ತು ಸಂಬಂಧಿಕರು ಭೇಟಿಕೊಡಲು ಬರುತ್ತಾರೆ. ಅವನ ತಂದೆಯ ಹೆಸರಾದ ಜಕರೀಯನೆಂದು ಹುಡುಗನಿಗೆ ನಾಮಕರಣ ಮಾಡಬೇಕೆಂದು ಅವರನ್ನುತ್ತಾರೆ. ಆದರೆ ಎಲಿಸಬೇತಳು ಮಾತಾಡಿ “ಅದು ಖಂಡಿತ ಬೇಡ! ಯೋಹಾನನೆಂದು ಹೆಸರಿಡಬೇಕು” ಎಂದನ್ನುತ್ತಾಳೆ. ನೆನಪಿಸಿರಿ, ಮಗುವಿಗೆ ಆ ಹೆಸರನ್ನು ಇಡಬೇಕೆಂದು ಗಬ್ರಿಯೇಲ ದೇವದೂತನು ಹೇಳಿದ್ದನು.

ಆದರೆ ಅವರ ಮಿತ್ರರು ಅದನ್ನು ಪ್ರತಿರೋಧಿಸುತ್ತಾ ಅಂದದ್ದು: “ನಿನ್ನ ಬಂಧುಬಾಂಧವರಲ್ಲಿ ಈ ಹೆಸರಿನವರು ಒಬ್ಬರಾದರೂ ಇಲ್ಲವಲ್ಲಾ.” ಅನಂತರ ಅವರು ಸನ್ನೆಭಾಷೆಯಲ್ಲಿ ಹುಡುಗನಿಗೆ ಏನು ಹೆಸರು ಇಡಬೇಕೆಂದು ತಂದೆಯನ್ನು ಕೇಳುತ್ತಾರೆ. ಒಂದು ಬರೆಯುವ ಹಲಿಗೆಯನ್ನು ಕೇಳಿ, ಪಡೆದುಕೊಂಡು ಜಕರೀಯನು ಎಲ್ಲರೂ ಆಶ್ಚರ್ಯಪಡುವಂತೆ ಬರೆಯುತ್ತಾನೆ: “ಯೋಹಾನನೆಂತಲೇ ಅವನ ಹೆಸರು.”

ಇದರೊಂದಿಗೆ, ಅದ್ಭುತಕರವಾಗಿ ಜಕರೀಯನಿಗೆ ಮಾತಾಡುವ ಶಕ್ತಿಯು ಪುನಃ ಕೊಡಲ್ಪಟ್ಟಿತು. ಎಲಿಸಬೇತಳಿಗೆ ಒಂದು ಮಗುವು ಹುಟ್ಟುವದು ಎಂಬ ದೇವದೂತನ ಪ್ರಕಟನೆಯನ್ನು ಅವನು ನಂಬದಿದ್ದಾಗ ಅವನು ತನ್ನ ಮಾತಾಡುವ ಸಾಮರ್ಥ್ಯವನ್ನು ಕಳಕೊಂಡಿದ್ದನು ಎಂಬುದನ್ನು ನೀವು ನೆನಪಿಗೆ ತರಬಹುದು. ಒಳ್ಳೆಯದು, ಜಕರೀಯನು ಮಾತಾಡಿದಾಗ, ನೆರೆಹೊರೆಯಲ್ಲಿ ಜೀವಿಸುವವರೆಲ್ಲರೂ ಆಶ್ಚರ್ಯ ಪಟ್ಟು, ತಮ್ಮೊಳಗೆ ಹೀಗೆ ಹೇಳಿಕೊಂಡರು: “ಆಹಾ, ಈ ಕೂಸು ಎಂಥವನಾಗುವನೋ?”

ಜಕರೀಯನು ಈಗ ಪವಿತ್ರಾತ್ಮಭರಿತನಾದನು ಮತ್ತು ಅವನು ಅತ್ಯಾನಂದ ಪಟ್ಟು ಹೀಗಂದನು: “ಇಸ್ರಾಯೇಲ್‌ ಜನರ ದೇವರಾಗಿರುವ ಯೆಹೋವನಿಗೆ ಸ್ತೋತ್ರವು, ಯಾಕಂದರೆ ಅವನು ತನ್ನ ಪ್ರಜೆಯನ್ನು ಪರಾಮರಿಸಿ ಅವರಿಗೆ ಬಿಡುಗಡೆಯನ್ನುಂಟುಮಾಡಿದ್ದಾನೆ. ತನ್ನ ಸೇವಕನಾದ ದಾವೀದನ ಮನೆತನದಲ್ಲಿ ನಮಗೋಸ್ಕರ ಒಬ್ಬ ರಕ್ಷಣೆಯ ಕೊಂಬನ್ನು ಎಬ್ಬಿಸಿದ್ದಾನೆ.” ಈ “ರಕ್ಷಣೆಯ ಕೊಂಬು”, ವಾಸ್ತವದಲ್ಲಿ ಇನ್ನೂ ಜನಿಸಲಿರುವ ಕರ್ತನಾದ ಯೇಸುವಾಗಿದ್ದನು. ಅವನ ಮೂಲಕ, ಜಕರೀಯನು ಹೇಳುವದು, ದೇವರು “ಹೀಗೆ ನಾವು ನಮ್ಮ ವೈರಿಗಳ ಕೈಯಿಂದ ಬಿಡುಗಡೆ ಹೊಂದಿ, ಭಯವಿಲ್ಲದವರಾಗಿದ್ದು, ನಮ್ಮ ಜೀವಮಾನದಲೆಲ್ಲಾ ನಿರ್ಮಲಚಿತ್ತದಿಂದಲೂ ನೀತಿಯಿಂದಲೂ ತನ್ನ ಸನ್ನಿಧಿಯಲ್ಲಿ ಪವಿತ್ರ ಸೇವೆ ಮಾಡುವಂತೆ ನಮಗೆ ಅನುಕೂಲಮಾಡಿದ್ದಾನೆ.”

ಅನಂತರ ಜಕರೀಯನು ತನ್ನ ಮಗನಾದ ಯೋಹಾನನ ಕುರಿತು ಪ್ರವಾದಿಸುತ್ತಾನೆ: “ಮಗುವೇ, ನೀನಾದರೋ ಪರಾತ್ಪರನ ಪ್ರವಾದಿಯೆನಿಸಿಕೊಳ್ಳುವಿ. ನೀನು ಯೆಹೋವನ ಮುಂದೆ ಹೋಗಿ ಆತನ ಹಾದಿಗಳನ್ನು ಸಿದ್ಧಪಡಿಸುವವನಾಗಿಯೂ, ನಮ್ಮ ದೇವರು ಅತ್ಯಂತ ಕರುಣೆಯಿಂದ ದಯಪಾಲಿಸುವ ಪಾಪಪರಿಹಾರವೆಂಬ ರಕ್ಷಣೆಯ ತಿಳುವಳಿಕೆಯನ್ನು ಆತನ ಪ್ರಜೆಗೆ ಕೊಡುವವನಾಗಿಯೂ ಇರುವಿ. ಆ ಕರುಣೆಯಿಂದಲೇ ನಮಗೆ ಮೇಲಿನಿಂದ ಅರುಣೋದಯವು ಉಂಟಾಗಿ ಕತ್ತಲಲ್ಲಿಯೂ ಮರಣಾಂಧಕಾರದಲ್ಲಿಯೂ ವಾಸಿಸಿರುವವರಾದ ನಮಗೆ ಪ್ರಕಾಶವನ್ನು ಕೊಟ್ಟು ನಮ್ಮ ಕಾಲುಗಳನ್ನು ಅಭ್ಯುದಯಕರವಾಗಿ ಸಮಾಧಾನದ ಮಾರ್ಗದಲ್ಲಿ ಸೇರಿಸಿ ನಡಿಸುವನು.”

ಇದೇ ಸಮಯಾವಧಿಯಲ್ಲಿ, ಇನ್ನೂ ವಿವಾಹಿತಳಾಗದ ಸ್ತ್ರೀಯಾಗಿರಬಹುದಾದ ಮರಿಯಳು, ನಜರೇತಿನಲ್ಲಿನ ತನ್ನ ಮನೆಗೆ ಆಗಮಿಸಿರುತ್ತಾಳೆ. ಅವಳು ಗರ್ಭಿಣಿಯಾಗಿದ್ದಾಳೆಂದು ಗೊತ್ತಾದಾಗ ಅವಳಿಗೆ ಏನು ಸಂಭವಿಸಲಿರುವದು? ಲೂಕ 1:56-80; ಯಾಜಕಕಾಂಡ 12:2, 3.

▪ ಯೇಸುವಿಗಿಂತ ಯೋಹಾನನು ಎಷ್ಟು ಹಿರಿಯವನಾಗಿದ್ದನು?

▪ ಯೋಹಾನನು ಎಂಟು ದಿವಸದವನಾದಾಗ ಯಾವ ವಿಷಯಗಳು ಸಂಭವಿಸಿದವು?

▪ ದೇವರು ತನ್ನ ಲಕ್ಷ್ಯವನ್ನು ತನ್ನ ಜನರ ಕಡೆಗೆ ಹೇಗೆ ತಿರುಗಿಸಿದನು?

▪ ಯಾವ ಕೆಲಸವನ್ನು ಯೋಹಾನನು ಮಾಡುವನು ಎಂದು ಮುಂತಿಳಿಸಲ್ಪಟ್ಟಿತು?