ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹುಟ್ಟು ಕುರುಡನನ್ನು ಗುಣಪಡಿಸಿದ್ದು

ಹುಟ್ಟು ಕುರುಡನನ್ನು ಗುಣಪಡಿಸಿದ್ದು

ಅಧ್ಯಾಯ 70

ಹುಟ್ಟು ಕುರುಡನನ್ನು ಗುಣಪಡಿಸಿದ್ದು

ಯೆಹೂದ್ಯರು ಯೇಸುವನ್ನು ಕಲ್ಲೆಸೆಯಲು ಪ್ರಯತ್ನಿಸಿದಾಗ, ಅವನು ಯೆರೂಸಲೇಮನ್ನು ಬಿಟ್ಟುಹೋಗಲಿಲ್ಲ. ಅನಂತರ, ಸಬ್ಬತ್‌ ದಿನದಲ್ಲಿ ಅವನು ಮತ್ತು ಅವನ ಶಿಷ್ಯರು ನಗರವನ್ನು ಹಾದುಹೋಗುತ್ತಿರುವಾಗ, ಅವರು ಒಬ್ಬ ಹುಟ್ಟು ಕುರುಡನನ್ನು ಕಂಡರು. ಶಿಷ್ಯರು ಯೇಸುವನ್ನು ಕೇಳುವದು: “ಗುರುವೇ, ಇವನು ಕುರುಡನಾಗಿ ಹುಟ್ಟಿರುವದಕ್ಕೆ ಯಾರು ಪಾಪ ಮಾಡಿದರು? ಇವನೋ? ಇವನ ತಂದೆತಾಯಿಗಳೋ?”

ಕೆಲವು ರಬ್ಬೀಗಳು ನಂಬುತ್ತಿದ್ದಂತೆ, ಒಬ್ಬ ವ್ಯಕ್ತಿಯು ತಾಯಿಯ ಹೊಟ್ಟೆಯಲ್ಲಿರುವಾಗಲೂ ಕೂಡಾ ಪಾಪ ಮಾಡಬಹುದು ಎಂಬುದನ್ನು, ಪ್ರಾಯಶಃ ಶಿಷ್ಯರು ಕೂಡಾ ನಂಬುತ್ತಿದ್ದಿರಬಹುದು. ಆದರೆ ಯೇಸುವು ಉತ್ತರಿಸುವದು: “ಇವನೂ ಪಾಪ ಮಾಡಲಿಲ್ಲ, ಇವನ ತಂದೆತಾಯಿಗಳೂ ಪಾಪ ಮಾಡಲಿಲ್ಲ; ದೇವರ ಕ್ರಿಯೆಗಳು ಇವನಲ್ಲಿ ತೋರಿಬರುವದಕ್ಕೆ ಇದಾಯಿತು.” ಆ ಮನುಷ್ಯನಾಗಲಿ, ಅವನ ತಂದೆತಾಯಿಗಳಾಗಲಿ ಯಾವುದೇ ಒಂದು ನಿರ್ದಿಷ್ಟ ತಪ್ಪನ್ನು ಇಲ್ಲವೇ ಪಾಪವನ್ನು ಮಾಡಿದರ್ದ ಫಲಿತಾಂಶವಾಗಿ ಆ ಮನುಷ್ಯನ ಕುರುಡುತನ ಉಂಟಾದದ್ದು ಅಲ್ಲ. ಎಲ್ಲಾ ಮಾನವ ಅಪರಿಪೂರ್ಣತೆಯು ಮೊದಲನೆಯ ಮನುಷ್ಯನಾದ ಆದಾಮನ ಪಾಪದ ಫಲವಾಗಿರುತ್ತದೆ, ಮತ್ತು ಕುರುಡರಾಗಿ ಹುಟ್ಟುವಂತಹ ಎಲ್ಲಾ ನ್ಯೂನತೆಗಳಿಗೆ ಒಳಪಟ್ಟಿರುತ್ತಾರೆ. ಈ ಮನುಷ್ಯನಲ್ಲಿದ್ದ ಈ ನ್ಯೂನತೆಯು ದೇವರ ಕಾರ್ಯಗಳನ್ನು ವ್ಯಕ್ತಪಡಿಸಲು ಯೇಸುವಿಗೆ ಒಂದು ಅವಕಾಶವನ್ನು ಒದಗಿಸುತ್ತದೆ.

ಈ ಕಾರ್ಯಗಳನ್ನು ಮಾಡುವ ಜರೂರಿಯನ್ನು ಯೇಸುವು ಒತ್ತಿಹೇಳುತ್ತಾನೆ. “ನನ್ನನ್ನು ಕಳುಹಿಸಿದಾತನ ಕಾರ್ಯಗಳನ್ನು ನಾವು ಹಗಲಿರುವಾಗಲೇ ನಡಿಸಬೇಕು,” ಎಂದವನು ಹೇಳುತ್ತಾನೆ. “ರಾತ್ರಿ ಬರುತ್ತದೆ, ಅದು ಬಂದ ಮೇಲೆ ಯಾರು ಕೆಲಸ ಮಾಡಲಾರರು. ನಾನು ಲೋಕದಲ್ಲಿರುವಾಗ ಲೋಕಕ್ಕೆ ಬೆಳಕಾಗಿದ್ದೇನೆ.” ಬಲುಬೇಗನೆ ಯೇಸುವಿನ ಮರಣವು ಅವನನ್ನು ಸಮಾಧಿಯ ಅಂಧಕಾರದಲ್ಲಿ ಹಾಕಲಿಕ್ಕಿತ್ತು, ಅಲ್ಲಿ ಅವನು ಇನ್ನೇನೂ ಮಾಡಲಿಕ್ಕೆ ಸಾಧ್ಯವಿರಲಿಲ್ಲ. ತನ್ಮಧ್ಯೆ, ಅವನು ಲೋಕಕ್ಕೆ ಜ್ಞಾನೋದಯದ ಉಗಮನಾಗಿದ್ದನು.

ಈ ವಿಷಯಗಳನ್ನು ತಿಳಿಸಿಯಾದ ಮೇಲೆ, ಯೇಸುವು ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಕೆಸರು ಮಾಡುತ್ತಾನೆ. ಆ ಕೆಸರನ್ನು ಅವನು ಆ ಕುರುಡನ ಕಣ್ಣುಗಳಿಗೆ ಹಚ್ಚುತ್ತಾ, ಹೇಳುವದು: “ನೀನು ಸಿಲೋವ ಕೊಳಕ್ಕೆ ಹೋಗಿ ತೊಳಕೋ.” ಆ ಮನುಷ್ಯನು ವಿಧೇಯತೆಯಿಂದ ಅದನ್ನು ಮಾಡುತ್ತಾನೆ, ಈಗ ಅವನು ನೋಡ ಶಕ್ತನಾಗುತ್ತಾನೆ! ಅವನ ಜೀವಿತದಲ್ಲಿ ಮೊದಲ ಬಾರಿ ನೋಡಲಾದುದರಿಂದ, ಹಿಂತೆರಳಿ ಬಂದಾಗ ಅವನು ಎಷ್ಟು ಉಲ್ಲಾಸ ಪಡುತ್ತಾನೆ!

ನೆರೆಹೊರೆಯವರೂ, ಆತನನ್ನು ತಿಳಿದಿದ್ದ ಇತರರೂ ಬೆರಗಾಗುತ್ತಾರೆ. “ಇವನು ಕೂತಿದ್ದ ಆ ಭಿಕ್ಷಕನಲ್ಲವೇ?” ಎಂದವರು ಕೇಳುತ್ತಾರೆ. “ಹೌದು, ಅವನೇ” ಎಂದು ಕೆಲವರು ಉತ್ತರಿಸುತ್ತಾರೆ. ಆದರೆ ಇತರರು ಅದನ್ನು ನಂಬುವದಿಲ್ಲ: “ಅವನಲ್ಲ. ಅವನ ಹಾಗಿದ್ದಾನೆ.” ಆದರೂ ಆ ಮನುಷ್ಯನು ಹೇಳುವದು: “ನಾನೇ ಅವನು.”

“ನಿನಗೆ ಕಣ್ಣು ಹೇಗೆ ಬಂದವು?” ಜನರು ತಿಳಿಯಲು ಬಯಸಿದರು.

“ಯೇಸು ಎಂಬವನಿದ್ದಾನಲ್ಲಾ. ಅವನು ಕೆಸರು ಮಾಡಿ ನನ್ನ ಕಣ್ಣಿಗೆ ಹಚ್ಚಿ ಸಿಲೋವ ಕೊಳಕ್ಕೆ ಹೋಗಿ ತೊಳಕೋ ಎಂದು ಹೇಳಿದನು. ನಾನು ಹೋಗಿ ತೊಳಕೊಂಡೆನು; ಕಣ್ಣು ಬಂದವು.”

“ಅವನೆಲ್ಲಿದ್ದಾನೆ?” ಅವರು ವಿಚಾರಿಸುತ್ತಾರೆ.

“ನನಗೆ ಗೊತ್ತಿಲ್ಲ” ಎಂದವನು ಉತ್ತರಿಸುತ್ತಾನೆ.

ಜನರು ಈಗ ಮುಂಚೆ ಕುರುಡನಾಗಿದ್ದ ಮನುಷ್ಯನನ್ನು ಅವರ ಧಾರ್ಮಿಕ ಮುಖಂಡರುಗಳಾಗಿದ್ದ ಫರಿಸಾಯರ ಮುಂದೆ ಕೊಂಡೊಯ್ಯುತ್ತಾರೆ. ಅವನು ದೃಷ್ಟಿಯನ್ನು ಪುನಃ ಪಡೆದದ್ದು ಹೇಗೆ ಎಂದು ಅವನನ್ನು ವಿಚಾರಿಸಲು ತೊಡಗುತ್ತಾರೆ. “ಕೆಸರನ್ನು ನನ್ನ ಕಣ್ಣಿನ ಮೇಲೆ ಇಟ್ಟನು, ನಾನು ತೊಳಕೊಂಡೆನು, ಕಣ್ಣು ಕಾಣುತ್ತವೆ” ಎಂದು ಆ ಮನುಷ್ಯನು ವಿವರಿಸುತ್ತಾನೆ.

ಒಬ್ಬ ಗುಣಮುಖನಾದ ಭಿಕ್ಷಕನಿಗಾಗಿ ಫರಿಸಾಯರು ಖಂಡಿತವಾಗಿ ಸಂತೋಷಪಡ ಬೇಕಿತ್ತು! ಅದಕ್ಕೆ ಬದಲು, ಅವರು ಯೇಸುವನ್ನು ಖಂಡಿಸುತ್ತಾರೆ. “ಈ ಮನುಷ್ಯನು ದೇವರಿಂದ ಬಂದವನಲ್ಲ,” ಎಂದವರು ತರ್ಕಿಸುತ್ತಾರೆ. ಅವರು ಹಾಗೆ ಯಾಕೆ ಹೇಳುವದು? “ಯಾಕಂದರೆ ಅವನು ಸಬ್ಬತ್‌ದಿವಸವನ್ನು ಲಕ್ಷ್ಯಮಾಡುವದಿಲ್ಲವಲ್ಲಾ.” ಆದರೂ ಇತರ ಕೆಲವು ಫರಿಸಾಯರು ಬೆರಗಾಗುತ್ತಾರೆ: “ಇಂಥ ಮಹತ್ತುಗಳನ್ನು ಮಾಡುವದು ಭಕ್ತಿಹೀನನ ಕೈಯಿಂದ ಹೇಗಾದೀತು?” ಹೀಗೆ ಅವರಲ್ಲಿ ಭೇದ ಉಂಟಾಯಿತು.

ಆದುದರಿಂದ ಅವರು ಆ ಮನುಷ್ಯನನ್ನು ಕೇಳುವದು: “ಅವನು ನಿನಗೆ ಕಣ್ಣು ಕೊಟ್ಟದರ್ದಿಂದ ನೀನು ಅವನ ವಿಷಯವಾಗಿ ಏನು ಹೇಳುತ್ತೀ?”

“ಆತನು ಪ್ರವಾದಿ” ಎಂದವನು ಉತ್ತರಿಸಿದನು.

ಫರಿಸಾಯರು ಇದನ್ನು ನಂಬಲು ನಿರಾಕರಿಸಿದರು. ಜನರನ್ನು ವಂಚಿಸಲು ಯೇಸು ಮತ್ತು ಈ ಮನುಷ್ಯನ ನಡುವೆ ಏನೋ ಒಂದು ರಹಸ್ಯವಾದ ಒಪ್ಪಂದ ಇರಬೇಕೆಂದು ಅವರು ಮನವರಿಕೆ ಮಾಡಿಕೊಂಡರು. ಆದುದರಿಂದ ಈ ವಿಷಯವನ್ನು ಬಗೆಹರಿಸಲು, ಅವರು ಭಿಕ್ಷಕನ ತಂದೆತಾಯಿಗಳನ್ನು, ಅವರನ್ನು ವಿಚಾರಿಸಲು ಕರೆಯಿಸುತ್ತಾರೆ. ಯೋಹಾನ 8:59; 9:1-18.

▪ ಆ ಮನುಷ್ಯನ ಕುರುಡುತನಕ್ಕೆ ಕಾರಣ ಯಾವುದು, ಮತ್ತು ಯಾವುದು ಅಲ್ಲ?

▪ ಮನುಷ್ಯನು ಕೆಲಸ ಮಾಡಲು ಆಗದ ರಾತ್ರಿ ಯಾವುದು?

▪ ಆ ಮನುಷ್ಯನು ಗುಣಮುಖನಾದಾಗ ಅವನ ಪರಿಚಯವಿದ್ದ ಜನರ ಪ್ರತಿಕ್ರಿಯೆ ಏನು?

▪ ಆ ಮನುಷ್ಯನು ಗುಣಮುಖನಾದದ್ದರ ಮೇಲೆ ಫರಿಸಾಯರಲ್ಲಿ ಹೇಗೆ ಭೇದ ಉಂಟಾಯಿತು?