ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರ ನಂಬಿಕೆಯು ಅಗ್ನಿಪರೀಕ್ಷೆಯನ್ನು ಪಾರಾಯಿತು

ಅವರ ನಂಬಿಕೆಯು ಅಗ್ನಿಪರೀಕ್ಷೆಯನ್ನು ಪಾರಾಯಿತು

ಅಧ್ಯಾಯ ಐದು

ಅವರ ನಂಬಿಕೆಯು ಅಗ್ನಿಪರೀಕ್ಷೆಯನ್ನು ಪಾರಾಯಿತು

1. ದೇವರಿಗೆ ಹಾಗೂ ತಮ್ಮ ಸ್ವದೇಶಕ್ಕೆ ಭಕ್ತಿ ಸಲ್ಲಿಸುವುದರ ಕುರಿತು ಅನೇಕರಿಗೆ ಯಾವ ಅನಿಸಿಕೆಯಿದೆ?

ನಿಮ್ಮ ಭಕ್ತಿಯು ದೇವರಿಗೆ ಸಲ್ಲಬೇಕೊ ಅಥವಾ ನೀವು ವಾಸಿಸುತ್ತಿರುವ ದೇಶಕ್ಕೆ ಸಲ್ಲಬೇಕೊ? ಅನೇಕರು ಹೀಗೆ ಉತ್ತರಿಸುತ್ತಾರೆ: ‘ನಾನು ಎರಡಕ್ಕೂ ಪೂಜ್ಯಭಾವವನ್ನು ಸಲ್ಲಿಸುತ್ತೇನೆ. ನನ್ನ ಧರ್ಮದ ನಿಯಮಗಳಿಗನುಸಾರ ನಾನು ದೇವರನ್ನು ಆರಾಧಿಸುತ್ತೇನೆ; ಅದೇ ಸಮಯದಲ್ಲಿ, ನನ್ನ ಸ್ವದೇಶಕ್ಕೂ ನಿಷ್ಠೆ ತೋರಿಸುತ್ತೇನೆಂದು ಪ್ರತಿಜ್ಞೆ​ಮಾಡುತ್ತೇನೆ.’

2. ಬಾಬೆಲಿನ ರಾಜನು ಹೇಗೆ ಒಬ್ಬ ಧಾರ್ಮಿಕ ಹಾಗೂ ರಾಜಕೀಯ ವ್ಯಕ್ತಿಯಾಗಿದ್ದನು?

2 ಇಂದು, ಧಾರ್ಮಿಕಭಕ್ತಿ ಹಾಗೂ ದೇಶಭಕ್ತಿಯ ನಡುವೆ ಸ್ವಲ್ಪಮಟ್ಟಿಗಿನ ಭಿನ್ನತೆಯನ್ನು ಕಂಡುಕೊಳ್ಳಬಹುದಾದರೂ, ಪುರಾತನ ಬಾಬೆಲಿನಲ್ಲಿ ಆ ಭಿನ್ನತೆಯು ಅಸ್ತಿತ್ವದಲ್ಲಿರಲಿಲ್ಲ. ವಾಸ್ತವವಾಗಿ, ಪೌರ ವ್ಯವಹಾರಗಳು ಹಾಗೂ ಧಾರ್ಮಿಕ ವಿಚಾರಗಳು ಎಷ್ಟರ ಮಟ್ಟಿಗೆ ಒಂದಕ್ಕೊಂದು ಹೆಣೆದುಕೊಂಡಿದ್ದವೆಂದರೆ, ಕೆಲವೊಮ್ಮೆ ಅವುಗಳ ವ್ಯತ್ಯಾಸವನ್ನು ಕಂಡುಕೊಳ್ಳುವುದು ಅಸಾಧ್ಯವಾಗಿತ್ತು. “ಪುರಾತನ ಬಾಬೆಲಿನಲ್ಲಿ, ಅರಸನೇ ಮಹಾಯಾಜಕನಾಗಿ ಮತ್ತು ಪೌರ ನಾಯಕನಾಗಿ ಕಾರ್ಯನಡಿಸುತ್ತಿದ್ದನು. ಅವನೇ ಯಜ್ಞಬಲಿಗಳನ್ನು ಅರ್ಪಿಸುತ್ತಿದ್ದನು ಹಾಗೂ ತನ್ನ ಪ್ರಜೆಗಳ ಧಾರ್ಮಿಕ ಜೀವಿತಗಳ ಬಗ್ಗೆ ಅವನೇ ನಿರ್ಣಯ ತೆಗೆದುಕೊಳ್ಳುತ್ತಿದ್ದನು” ಎಂದು ಪ್ರೊಫೆಸರ್‌ ಚಾರ್ಲ್ಸ್‌ ಎಫ್‌. ಫೈಫರ್‌ ಬರೆಯುತ್ತಾರೆ.

3. ನೆಬೂಕದ್ನೆಚ್ಚರನು ತುಂಬ ಧಾರ್ಮಿಕ ವ್ಯಕ್ತಿಯಾಗಿದ್ದನು ಎಂಬುದನ್ನು ಯಾವುದು ತೋರಿಸುತ್ತದೆ?

3 ನೆಬೂಕದ್ನೆಚ್ಚರನನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಅವನ ಹೆಸರಿನ ಅರ್ಥವೇ “ಓ ನೆಬೋ, ಉತ್ತರಾಧಿಕಾರಿಯನ್ನು ಕಾಪಾಡು!” ಎಂದಾಗಿತ್ತು. ನೆಬೋ ಬಾಬೆಲಿನ ಜ್ಞಾನ ಹಾಗೂ ಕೃಷಿ ದೇವನಾಗಿದ್ದನು. ನೆಬೂಕದ್ನೆಚ್ಚರನು ತುಂಬ ಧಾರ್ಮಿಕ ವ್ಯಕ್ತಿಯಾಗಿದ್ದನು. ಈ ಮುಂಚೆಯೇ ಗಮನಿಸಿರುವಂತೆ, ಅವನು ಬಾಬೆಲಿನ ಅನೇಕ ದೇವದೇವತೆಗಳಿಗೆ ದೇವಾಲಯಗಳನ್ನು ಕಟ್ಟಿಸಿ, ಅವುಗಳನ್ನು ಹೆಚ್ಚೆಚ್ಚು ಅಂದಗೊಳಿಸಿದನು. ಅಷ್ಟುಮಾತ್ರವಲ್ಲ, ಅವನು ಮಾರ್ದೂಕನಿಗೆ ವಿಶೇಷವಾಗಿ ಭಕ್ತಿ ಸಲ್ಲಿಸುತ್ತಿದ್ದು, ತನ್ನ ಮಿಲಿಟರಿ ವಿಜಯಗಳಿಗೆ ಮಾರ್ದೂಕನೇ ಕಾರಣನೆಂದು ಬಲವಾಗಿ ನಂಬಿದ್ದನು. * ನೆಬೂಕದ್ನೆಚ್ಚರನು ತನ್ನ ಕದನಗಳ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿಕ್ಕಾಗಿ, ಕಣಿಕೇಳುವಿಕೆಯ ಮೇಲೆ ಅತ್ಯಧಿಕವಾಗಿ ಅವಲಂಬಿಸಿದ್ದನು ಎಂದೂ ಕಂಡುಬರುತ್ತದೆ.​—⁠ಯೆಹೆಜ್ಕೇಲ 21:​18-23.

4. ಬಾಬೆಲಿನ ಧಾರ್ಮಿಕ ಮನೋಭಾವವನ್ನು ವರ್ಣಿಸಿರಿ.

4 ಬಾಬೆಲಿನಲ್ಲಿ ಎಲ್ಲ ಕಡೆಯೂ ಧಾರ್ಮಿಕ ವಾತಾವರಣವಿತ್ತು ಎಂಬುದಂತೂ ಸತ್ಯ. ಆ ಪಟ್ಟಣದಲ್ಲಿ 50ಕ್ಕಿಂತಲೂ ಹೆಚ್ಚು ದೇವಾಲಯಗಳಿದ್ದವು; ಅವುಗಳಲ್ಲಿ ಅನೇಕ ದೇವದೇವತೆಗಳ ತಂಡವನ್ನೇ ಆರಾಧಿಸಲಾಗುತ್ತಿತ್ತು. ಅನೂ (ಆಕಾಶ ದೇವತೆ), ಎನ್ಲಿಲ್‌ (ಭೂಮಿ, ಗಾಳಿ, ಹಾಗೂ ಬಿರುಗಾಳಿಯ ದೇವತೆ), ಮತ್ತು ಈಯ (ಜಲ ದೇವತೆ) ಎಂಬ ತ್ರಿಮೂರ್ತಿಗಳ ಆರಾಧನೆಯು ಸಹ ಅವುಗಳಲ್ಲಿ ಒಳಗೂಡಿತ್ತು. ಸಿನ್‌ (ಚಂದ್ರದೇವ), ಶೇಮಾಷ್‌ (ಸೂರ್ಯದೇವ), ಮತ್ತು ಇಷ್ಟಾರ್‌ (ಫಲವಂತಿಕೆಯ ದೇವ) ಎಂಬ ಇನ್ನೊಂದು ತ್ರಿಮೂರ್ತಿಯನ್ನು ಆರಾಧಿಸಲಾಗುತ್ತಿತ್ತು. ಯಕ್ಷಿಣಿ, ಮಾಟಮಂತ್ರ, ಹಾಗೂ ಜ್ಯೋತಿಶ್ಶಾಸ್ತ್ರಗಳು, ಬಾಬೆಲಿನ ಆರಾಧನೆಯಲ್ಲಿ ಪ್ರಮುಖ ಪಾತ್ರವನ್ನು ​ವಹಿಸಿದವು.

5. ಬಾಬೆಲಿನ ಧಾರ್ಮಿಕ ವಾತಾವರಣವು ಯೆಹೂದಿ ದೇಶಭ್ರಷ್ಟರಿಗೆ ಯಾವ ಪಂಥಾಹ್ವಾನವನ್ನು ಒಡ್ಡಿತು?

5 ಅನೇಕ ದೇವದೇವತೆಗಳನ್ನು ಆರಾಧಿಸುತ್ತಿದ್ದ ಜನರ ನಡುವೆ ಜೀವಿಸುವುದು, ಯೆಹೂದಿ ದೇಶಭ್ರಷ್ಟರಿಗೆ ಅತಿ ಕಷ್ಟಕರವಾದ ಒಂದು ಪಂಥಾಹ್ವಾನವನ್ನೊಡ್ಡಿತು. ಒಂದುವೇಳೆ ಇಸ್ರಾಯೇಲ್ಯರು ಪರಮಪ್ರಧಾನ ನಿಯಮದಾತನ ವಿರುದ್ಧ ದಂಗೆಯೇಳುವ ಮಾರ್ಗವನ್ನು ಕೈಕೊಳ್ಳುವಲ್ಲಿ, ಅವರು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುವುದೆಂದು ಮೋಶೆಯು ಅವರಿಗೆ ಅನೇಕ ಶತಮಾನಗಳಿಗೆ ಮೊದಲೇ ಎಚ್ಚರಿಕೆ ನೀಡಿದ್ದನು. ಮೋಶೆಯು ಅವರಿಗೆ ಹೇಳಿದ್ದು: “ನಿಮಗೂ ನಿಮ್ಮ ಪಿತೃಗಳಿಗೂ ಗೊತ್ತಿಲ್ಲದ ಜನಾಂಗದವರ ದೇಶಕ್ಕೆ ಯೆಹೋವನು ನಿಮ್ಮನ್ನೂ ನೀವು ನೇಮಿಸಿಕೊಳ್ಳುವ ಅರಸರನ್ನೂ ಒಯ್ಯಿಸುವನು; ಅಲ್ಲಿ ನೀವು ಮರದ ದೇವರುಗಳನ್ನೂ ಕಲ್ಲಿನ ದೇವರುಗಳನ್ನೂ ಸೇವಿಸುವಿರಿ.”​—⁠ಧರ್ಮೋಪದೇಶಕಾಂಡ 28:​15, 36.

6. ಬಾಬೆಲಿನಲ್ಲಿ ವಾಸಿಸುವುದು, ದಾನಿಯೇಲ, ಹನನ್ಯ, ಮಿಶಾಯೇಲ, ಹಾಗೂ ಅಜರ್ಯರಿಗೆ ಏಕೆ ಒಂದು ವಿಶೇಷ ಪಂಥಾಹ್ವಾನವನ್ನು ಒಡ್ಡಿತು?

6 ಯೆಹೂದ್ಯರು ಈಗ ಅಂತಹದ್ದೇ ಕಷ್ಟಕರ ಸನ್ನಿವೇಶದಲ್ಲಿದ್ದರು. ವಿಶೇಷವಾಗಿ ದಾನಿಯೇಲ, ಹನನ್ಯ, ಮಿಶಾಯೇಲ, ಹಾಗೂ ಅಜರ್ಯರಿಗೆ, ಯೆಹೋವನ ಕಡೆಗೆ ಯಥಾರ್ಥತೆಯನ್ನು ಕಾಪಾಡಿಕೊಳ್ಳುವುದು ತುಂಬ ಕಷ್ಟಕರವಾಗಿರಲಿತ್ತು. ಏಕೆಂದರೆ, ಸರಕಾರಿ ಹುದ್ದೆಗಾಗಿ ತರಬೇತಿಯನ್ನು ಪಡೆದುಕೊಳ್ಳುವಂತೆ ಈ ನಾಲ್ಕು ಮಂದಿ ಇಬ್ರಿಯ ಯುವಕರನ್ನು ವಿಶೇಷವಾಗಿ ಆಯ್ಕೆಮಾಡಲಾಗಿತ್ತು. (ದಾನಿಯೇಲ 1:​3-5) ಬಹುಶಃ ಅವರು ತಮ್ಮ ಹೊಸ ಪರಿಸರಕ್ಕೆ ಹೊಂದಿಕೊಳ್ಳುವಂತೆ ಅವರನ್ನು ಪ್ರಭಾವಿಸಲಿಕ್ಕಾಗಿ, ಅವರಿಗೆ ಬೇಲ್ತೆಶಚ್ಚರ್‌, ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಎಂಬ ಬಾಬೆಲ್‌ ಹೆಸರುಗಳನ್ನು ಕೊಡಲಾಗಿತ್ತೆಂಬುದನ್ನೂ ಜ್ಞಾಪಿಸಿಕೊಳ್ಳಿರಿ. * ಈ ಪುರುಷರಿಗೆ ಉಚ್ಚ ಸ್ಥಾನಗಳಿದ್ದದರಿಂದ, ಆ ದೇಶದ ದೇವದೇವತೆಗಳನ್ನು ಅವರು ಆರಾಧಿಸಲು ನಿರಾಕರಿಸುವಲ್ಲಿ, ಅದು ಎಲ್ಲರ ಗಮನವನ್ನು ಸೆಳೆಯುವುದು ಮಾತ್ರವಲ್ಲ, ಅವರನ್ನು ರಾಜದ್ರೋಹಿಗಳನ್ನಾಗಿಯೂ ಮಾಡಲಿಕ್ಕಿತ್ತು.

ಒಂದು ಬಂಗಾರದ ಪ್ರತಿಮೆಯು ಅಪಾಯವನ್ನು ತಂದೊಡ್ಡುತ್ತದೆ

7. (ಎ) ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯನ್ನು ವರ್ಣಿಸಿರಿ. (ಬಿ) ಈ ಪ್ರತಿಮೆಯ ಉದ್ದೇಶ​ವೇನಾಗಿತ್ತು?

7 ತನ್ನ ಸಾಮ್ರಾಜ್ಯದ ಐಕ್ಯವನ್ನು ಬಲಪಡಿಸುವ ಪ್ರಯತ್ನದಿಂದ, ನೆಬೂಕದ್ನೆಚ್ಚರನು ದೂರಾ ಎಂಬ ಬೈಲಿನಲ್ಲಿ ಒಂದು ಬಂಗಾರದ ಪ್ರತಿಮೆಯನ್ನು ನಿಲ್ಲಿಸಿದನೆಂಬುದು ವ್ಯಕ್ತ. ಅದು 60 ಮೊಳ (90 ಅಡಿ) ಎತ್ತರ ಹಾಗೂ 6 ಮೊಳ (9 ಅಡಿ) ಅಗಲವಿತ್ತು. * ಈ ಪ್ರತಿಮೆಯು ಬರೀ ಒಂದು ಸ್ತಂಭ ಅಥವಾ ಚೌಕ ನಿಲುಗಂಬವಾಗಿತ್ತು ಎಂದು ಕೆಲವರು ನಂಬುತ್ತಾರೆ. ಈ ನಿಲುಗಂಬಕ್ಕೆ ಒಂದು ಎತ್ತರವಾದ ಆಧಾರಪೀಠವಿದ್ದು, ಅದರ ಮೇಲೆ ಮಾನವ ಪ್ರತಿರೂಪದ ಒಂದು ದೊಡ್ಡ ಮೂರ್ತಿಯಿದ್ದಿರಬಹುದು; ಹಾಗೂ ಇದು ಸ್ವತಃ ನೆಬೂಕದ್ನೆಚ್ಚರನನ್ನು ಅಥವಾ ನೆಬೋ ದೇವತೆಯನ್ನು ಪ್ರತಿನಿಧಿಸಿದ್ದಿರಬಹುದು. ಏನೇ ಆಗಲಿ, ಅತಿ ಎತ್ತರವಾಗಿದ್ದ ಈ ಸ್ಮಾರಕವು, ಬಾಬೆಲ್‌ ಸಾಮ್ರಾಜ್ಯದ ಸಂಕೇತವಾಗಿತ್ತು. ಆದುದರಿಂದ, ಅದನ್ನು ನೋಡಿ ಆರಾಧನೆ ಸಲ್ಲಿಸಲಿಕ್ಕಾಗಿ ಇಡಲಾಗಿತ್ತು.​—⁠ದಾನಿಯೇಲ 3:⁠1.

8. (ಎ) ಈ ಪ್ರತಿಮೆಯ ಪ್ರಾರಂಭೋತ್ಸವಕ್ಕೆ ಯಾರನ್ನು ಆಮಂತ್ರಿಸಲಾಗಿತ್ತು, ಮತ್ತು ಅಲ್ಲಿ ಹಾಜರಾಗಿದ್ದವರೆಲ್ಲರೂ ಏನು ಮಾಡುವ ಅಗತ್ಯವಿತ್ತು? (ಬಿ) ಪ್ರತಿಮೆಯ ಮುಂದೆ ಅಡ್ಡಬೀಳಲು ನಿರಾಕರಿಸುವಲ್ಲಿ ಯಾವ ಶಿಕ್ಷೆಯು ವಿಧಿಸಲ್ಪಡುತ್ತಿತ್ತು?

8 ಅದರಂತೆ, ನೆಬೂಕದ್ನೆಚ್ಚರನು ಅದರ ಪ್ರಾರಂಭೋತ್ಸವ ಸಮಾರಂಭಕ್ಕಾಗಿ ಏರ್ಪಾಡುಗಳನ್ನು ಮಾಡಿದನು. ಅವನು ಉಪರಾಜರು, ನಾಯಕರು, ದೇಶಾಧಿಪತಿಗಳು, ಮಂತ್ರಿಗಳು, ಕೋಶಾಧ್ಯಕ್ಷರು, ನ್ಯಾಯಾಧಿಪತಿಗಳು, ವಿಚಾರಕರು ಹಾಗೂ ಸಮಸ್ತ ಸಂಸ್ಥಾನಾಧಿಕಾರಿಗಳನ್ನು ಒಟ್ಟುಗೂಡಿಸಿದನು. ತದನಂತರ ಒಬ್ಬ ರಾಜ​ಘೋಷಕನು ಹೀಗೆ ಸಾರಿದನು: “ವಿವಿಧಜನಾಂಗಕುಲಭಾಷೆಗಳವರೇ, ನಿಮಗೆ ರಾಜಾಜ್ಞೆಯಾಗಿದೆ​—⁠ನೀವು ತುತೂರಿ ಕೊಳಲು ಕಿನ್ನರಿ ತಂಬೂರಿ ವೀಣೆ ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ನೀವು ಅಡ್ಡಬಿದ್ದು ರಾಜನಾದ ನೆಬೂಕದ್ನೆಚ್ಚರನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಪೂಜಿಸಬೇಕು. ಯಾವನು ಅಡ್ಡಬಿದ್ದು ಪೂಜಿಸುವದಿಲ್ಲವೋ ಅವನು ತಕ್ಷಣವೇ ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲ್ಪಡುವನು.”​—⁠ದಾನಿಯೇಲ 3:​2-6.

9. ನೆಬೂಕದ್ನೆಚ್ಚರನು ನಿಲ್ಲಿಸಿದ್ದ ಪ್ರತಿಮೆಯ ಮುಂದೆ ಅಡ್ಡಬೀಳುವುದು ಯಾವುದರ ಸೂಚಿತಾರ್ಥವಾಗಿತ್ತು?

9 ಯೆಹೂದ್ಯರು ಯೆಹೋವನ ಆರಾಧನೆಯೊಂದಿಗೆ ಸಂಧಾನ ಮಾಡಿಕೊಳ್ಳುವಂತೆ ಒತ್ತಾಯಿಸುವ ಪ್ರಯತ್ನದಿಂದ ನೆಬೂಕದ್ನೆಚ್ಚರನು ಈ ಸಮಾರಂಭವನ್ನು ಏರ್ಪಡಿಸಿದನು ಎಂದು ಕೆಲವರು ನಂಬುತ್ತಾರೆ. ಈ ಅಭಿಪ್ರಾಯವು ಅಸಂಭವನೀಯವಾಗಿತ್ತು, ಏಕೆಂದರೆ ಕೇವಲ ಸರಕಾರಿ ಅಧಿಕಾರಿಗಳು ಮಾತ್ರ ಈ ಸಮಾರಂಭಕ್ಕೆ ಆಹ್ವಾನಿಸಲ್ಪಟ್ಟಿದ್ದರು. ಆದುದರಿಂದ, ಯಾವುದೇ ಸರಕಾರಿ ಸ್ಥಾನದಲ್ಲಿ ಕೆಲಸಮಾಡುತ್ತಿರುವ ಯೆಹೂದ್ಯರು ಮಾತ್ರ ಅಲ್ಲಿ ಹಾಜರಾಗಲಿದ್ದರು. ಹೀಗಿರುವುದರಿಂದ, ಈ ಪ್ರತಿಮೆಯ ಮುಂದೆ ಅಡ್ಡಬಿದ್ದು ಆರಾಧಿಸುವುದು, ಆಳುವ ವರ್ಗದ ಒಗ್ಗಟ್ಟನ್ನು ಬಲಪಡಿಸುವ ಉದ್ದೇಶ​ದಿಂದ ಏರ್ಪಡಿಸಲ್ಪಟ್ಟ ಒಂದು ಸಮಾರಂಭವಾಗಿದ್ದಂತೆ ತೋರುತ್ತದೆ. ವಿದ್ವಾಂಸರಾದ ಜಾನ್‌ ಎಫ್‌. ವಾಲ್‌ವೋರ್ಡ್‌ ಹೀಗೆ ದಾಖಲಿಸುತ್ತಾರೆ: “ಈ ರೀತಿಯಲ್ಲಿ ಅಧಿಕಾರಿಗಳನ್ನು ಮೆರೆಸುವುದು, ಒಂದು ಕಡೆಯಲ್ಲಿ ನೆಬೂಕದ್ನೆಚ್ಚರನ ಸಾಮ್ರಾಜ್ಯದ ಅಧಿಕಾರದ ಒಂದು ಪ್ರದರ್ಶನವೂ ಇನ್ನೊಂದು ಕಡೆಯಲ್ಲಿ ಬಾಬೆಲಿನವರು ತಮ್ಮ ವಿಜಯಗಳಿಗೆ ಯಾರು ಕಾರಣರೆಂದು ನಂಬಿದ್ದರೋ ಆ ದೇವದೇವತೆಗಳನ್ನು ಅಂಗೀಕರಿಸುವುದಕ್ಕೆ ಸೂಚಿತವಾಗಿತ್ತು.”

ಯೆಹೋವನ ಸೇವಕರು ಸಂಧಾನವನ್ನು ಮಾಡಿಕೊಳ್ಳಲು ನಿರಾಕರಿಸುತ್ತಾರೆ

10. ನೆಬೂಕದ್ನೆಚ್ಚರನ ಅಪ್ಪಣೆಗನುಸಾರ ನಡೆಯುವ ವಿಷಯದಲ್ಲಿ ಯೆಹೂದ್ಯೇತರರಿಗೆ ಯಾವ ಸಮಸ್ಯೆಯೂ ಇರಲಿಲ್ಲವೇಕೆ?

10 ನೆಬೂಕದ್ನೆಚ್ಚರನ ಪ್ರತಿಮೆಯ ಮುಂದೆ ಒಟ್ಟುಗೂಡಿದ್ದವರಲ್ಲಿ ಅಧಿಕಾಂಶ ಜನರು ಬೇರೆ ಬೇರೆ ರೀತಿಯ ದೇವದೇವತೆಗಳನ್ನು ಆರಾಧಿಸುತ್ತಿದ್ದರೂ, ಈ ಪ್ರತಿಮೆಯನ್ನು ಆರಾಧಿಸುವ ವಿಷಯದಲ್ಲಿ ಅವರಿಗೆ ಯಾವುದೇ ಅಳುಕು ಇರಲಿಲ್ಲ. “ಅವರೆಲ್ಲರೂ ಮೂರ್ತಿಪೂಜೆಗೆ ಬಹಳವಾಗಿ ಒಗ್ಗಿಹೋಗಿದ್ದರು, ಮತ್ತು ಅವರು ಒಬ್ಬ ದೇವನನ್ನು ಆರಾಧಿಸುತ್ತಿರುವ ವಿಷಯವು, ಇನ್ನೊಬ್ಬ ದೇವನಿಗೆ ಪೂಜ್ಯಭಾವವನ್ನು ​ಸಲ್ಲಿಸುವುದರಿಂದ ಅವರನ್ನು ತಡೆಯುತ್ತಿರಲಿಲ್ಲ” ಎಂದು ಒಬ್ಬ ಬೈಬಲ್‌ ವಿದ್ವಾಂಸನು ವಿವರಿಸಿದನು. ಅವನು ಮುಂದುವರಿಸಿದ್ದು: “ಆಗ ಇದ್ದಂತಹ ವಿಗ್ರಹಾರಾಧಕರ ದೃಷ್ಟಿಕೋನಕ್ಕನುಸಾರ ಅನೇಕ ದೇವದೇವತೆಗಳಿದ್ದವು . . . ಮತ್ತು ಯಾವುದೇ ಜನಾಂಗದ ಅಥವಾ ದೇಶದ ದೇವದೇವತೆಗಳಿಗೆ ಪೂಜ್ಯಭಾವವನ್ನು ಸಲ್ಲಿಸುವುದು ಅಯೋಗ್ಯ ಕಾರ್ಯವಾಗಿರಲಿಲ್ಲ.”

11. ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋರು ಪ್ರತಿಮೆಯ ಮುಂದೆ ಅಡ್ಡಬೀಳಲು ಏಕೆ ನಿರಾಕರಿಸಿದರು?

11 ಯೆಹೂದ್ಯರಿಗಾದರೋ ಇದು ತೀರ ಭಿನ್ನವಾದ ವಿಷಯವಾಗಿತ್ತು. ಅವರ ದೇವರಾದ ಯೆಹೋವನಿಂದ ಅವರಿಗೆ ಈ ಆಜ್ಞೆಯು ಕೊಡಲ್ಪಟ್ಟಿತ್ತು: “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜೆಮಾಡಲೂ ಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದವನಾದದರಿಂದ ನನ್ನನ್ನು ದ್ವೇಷಿಸುವವರ ವಿಷಯದಲ್ಲಿ ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳ ವರೆಗೆ ಬರಮಾಡುವೆನು.” (ವಿಮೋಚನಕಾಂಡ 20:​4, 5) ಆದುದರಿಂದ, ಸಂಗೀತವು ಆರಂಭವಾಗಿ, ಅಲ್ಲಿ ಹಾಜರಿದ್ದವರೆಲ್ಲರೂ ಪ್ರತಿಮೆಯ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದಾಗ, ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಎಂಬ ಮೂವರು ಇಬ್ರಿಯ ಯುವಕರು ನಿಂತೇ ಇದ್ದರು.​—⁠ದಾನಿಯೇಲ 3:⁠7.

12. ಕೆಲವು ಕಸ್ದೀಯರು ಈ ಮೂವರು ಇಬ್ರಿಯರ ಮೇಲೆ ಯಾವ ದೂರುಹೊರಿಸಿದರು, ಮತ್ತು ಅವರು ಹಾಗೇಕೆ ಮಾಡಿದರು?

12 ಈ ಮೂವರು ಇಬ್ರಿಯ ಅಧಿಕಾರಿಗಳು ಪ್ರತಿಮೆಗೆ ಅಡ್ಡಬಿದ್ದು ಆರಾಧಿಸಲು ನಿರಾಕರಿಸಿದ್ದು, ಕೆಲವು ಕಸ್ದೀಯರನ್ನು ಕೋಪೋದ್ರಿಕ್ತಗೊಳಿಸಿತು. ಆ ಕೂಡಲೆ ಅವರು ಅರಸನ ಬಳಿಗೆ ಹೋಗಿ, “ಯೆಹೂದ್ಯರ ಮೇಲೆ ದೂರುಹೊರಿಸಿ”ದರು. * ಅದಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳಲು ಅವರು ಬಯಸಲಿಲ್ಲ. ಬದಲಾಗಿ, ನಿಷ್ಠಾದ್ರೋಹ ಹಾಗೂ ರಾಜದ್ರೋಹಕ್ಕಾಗಿ ಈ ಇಬ್ರಿಯರನ್ನು ಶಿಕ್ಷೆಗೊಳಪಡಿಸಲು ಬಯಸುತ್ತಾ, ಆ ದೂರುಗಾರರು ಹೇಳಿದ್ದು: “ನೀನು ಬಾಬೆಲ್‌ ಸಂಸ್ಥಾನದ ಕಾರ್ಯಭಾರವನ್ನು ವಹಿಸಿಕೊಟ್ಟ ಶದ್ರಕ್‌ ಮೇಶಕ್‌ ಅಬೇದ್‌ನೆಗೋ ಎಂಬ ಕೆಲವು ಮಂದಿ ಯೆಹೂದ್ಯರು ಇದ್ದಾರೆ; ರಾಜನೇ, ಇವರು ನಿನ್ನನ್ನು ಲಕ್ಷಿಸುವದಿಲ್ಲ, ನಿನ್ನ ದೇವರುಗಳನ್ನು ಸೇವಿಸುವದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವದಿಲ್ಲ.”​—⁠ದಾನಿಯೇಲ 3:8-⁠12.

13, 14. ಶದ್ರಕ್‌, ಮೇಶಕ್‌, ಅಬೇದ್‌ನೆಗೋರು ಕೈಕೊಂಡ ನಿರ್ಣಯಕ್ಕೆ ನೆಬೂಕದ್ನೆಚ್ಚರನು ಹೇಗೆ ಪ್ರತಿಕ್ರಿಯಿಸಿದನು?

13 ಮೂವರು ಇಬ್ರಿಯರು ತನ್ನ ಆಜ್ಞೆಯನ್ನು ಉಲ್ಲಂಘಿಸಿದರು ಎಂಬ ವಿಚಾರವು ನೆಬೂಕದ್ನೆಚ್ಚರನಿಗೆ ಎಷ್ಟೊಂದು ಆಶಾಭಂಗವನ್ನು ಉಂಟುಮಾಡಿದ್ದಿರಬೇಕು! ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋರನ್ನು, ಬಾಬೆಲ್‌ ಸಾಮ್ರಾಜ್ಯದ ನಿಷ್ಠಾವಂತ ಸಮರ್ಥಕರನ್ನಾಗಿ ಪರಿವರ್ತಿಸುವುದರಲ್ಲಿ ಅವನು ಸಫಲನಾಗಿರಲಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬಂತು. ಅವನು ಅವರಿಗೆ ಕಸ್ದೀಯ ಪಂಡಿತರ ಭಾಷೆಯನ್ನು ಹಾಗೂ ಶಾಸ್ತ್ರವನ್ನು ಕಲಿಸಿರಲಿಲ್ಲವೋ? ಅಷ್ಟೇಕೆ, ಅವರ ಹೆಸರುಗಳನ್ನು ಸಹ ಅವನು ಬದಲಾಯಿಸಿದ್ದನು! ಘನೋದ್ದೇಶವುಳ್ಳ ಶಿಕ್ಷಣವು ಅವರಿಗೆ ಒಂದು ಹೊಸ ಆರಾಧನಾ ವಿಧಾನವನ್ನು ಕಲಿಸಬಲ್ಲದು ಅಥವಾ ಅವರ ಹೆಸರುಗಳನ್ನು ಬದಲಾಯಿಸುವುದರಿಂದ ಅವರ ವ್ಯಕ್ತಿತ್ವಗಳು ಬದಲಾಗಸಾಧ್ಯವಿದೆ ಎಂದು ನೆಬೂಕದ್ನೆಚ್ಚರನು ಭಾವಿಸಿರುತ್ತಿದ್ದಲ್ಲಿ, ಅವನ ಕಲ್ಪನೆಯು ಸಂಪೂರ್ಣವಾಗಿ ತಪ್ಪಾಗಿತ್ತು. ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋರು ಯೆಹೋವನ ನಿಷ್ಠಾವಂತ ಸೇವಕರಾಗಿ ಉಳಿದರು.

14 ಅರಸನಾದ ನೆಬೂಕದ್ನೆಚ್ಚರನಿಗೆ ಕೋಪ ಉಕ್ಕಿಬಂತು. ತತ್‌ಕ್ಷಣವೇ ಅವನು ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋರನ್ನು ಹಿಡಿದುತರುವಂತೆ ಅಪ್ಪಣೆ ಕೊಟ್ಟನು. ಅವನು ಕೇಳಿದ್ದು: “ಶದ್ರಕ್‌ ಮೇಶಕ್‌ ಅಬೇದ್‌ನೆಗೋ ಎಂಬವರೇ, ನೀವು ನನ್ನ ದೇವರನ್ನು ಸೇವಿಸದೆ ನಾನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸದೆ ಇರುವದು ಬೇಕೆಂದೇ ಮಾಡಿದ್ದೋ?” ಅವನು ಅಪನಂಬಿಕೆಯಿಂದ ತಬ್ಬಿಬ್ಬಾಗಿ ಈ ಮಾತುಗಳನ್ನು ನುಡಿದನು ಎಂಬುದರಲ್ಲಿ ಸಂದೇಹವಿಲ್ಲ. ಎಷ್ಟೆಂದರೂ, ‘ಸ್ವಸ್ಥಮನಸ್ಸುಳ್ಳ ಈ ಮೂವರು ಇಬ್ರಿಯರು ಇಂತಹ ಒಂದು ಸ್ಪಷ್ಟವಾದ ಆಜ್ಞೆಯನ್ನು​—⁠ಒಂದುವೇಳೆ ಅವಿಧೇಯತೆ ತೋರಿಸುವಲ್ಲಿ ಭಾರಿ ಗಂಭೀರವಾದ ಶಿಕ್ಷೆಯನ್ನು ಅನುಭವಿಸಬೇಕಾದ ಆಜ್ಞೆಯನ್ನು ಹೇಗೆ ಕಡೆಗಣಿಸಸಾಧ್ಯವಿದೆ?’ ಎಂದು ಅವನು ತರ್ಕಿಸಿದ್ದಿರಬಹುದು.​—⁠ದಾನಿಯೇಲ 3:13,⁠14.

15, 16. ಮೂವರು ಇಬ್ರಿಯರಿಗೆ ನೆಬೂಕದ್ನೆಚ್ಚರನು ಪುನಃ ಯಾವ ಅವಕಾಶವನ್ನು ಕೊಟ್ಟನು?

15 ನೆಬೂಕದ್ನೆಚ್ಚರನು ಈ ಮೂವರು ಇಬ್ರಿಯರಿಗೆ ಇನ್ನೊಂದು ಅವಕಾಶವನ್ನು ಸಹ ಕೊಡಲು ಸಿದ್ಧನಿದ್ದನು. ಅವನು ಹೇಳಿದ್ದು: “ಈಗಲಾದರೂ ನೀವು ಸಿದ್ಧವಾಗಿದ್ದು ತುತೂರಿ ಕೊಳಲು ಕಿನ್ನರಿ ತಂಬೂರಿ ವೀಣೆ ವಾಲಗ ಮುಂತಾದ ಸಕಲ ವಾದ್ಯಗಳ ಧ್ವನಿಯನ್ನು ಕೇಳಿದ ಕೂಡಲೆ ಅಡ್ಡಬಿದ್ದು ನಾನು ನಿಲ್ಲಿಸಿದ ಪ್ರತಿಮೆಯನ್ನು ಪೂಜಿಸಿದರೆ ಸರಿ; ಇಲ್ಲವಾದರೆ ತಕ್ಷಣವೇ ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲ್ಪಡುವಿರಿ; ನಿಮ್ಮನ್ನು ನನ್ನ ಕೈಯೊಳಗಿಂದ ಬಿಡಿಸಬಲ್ಲ ದೇವರು ಯಾರು”?​—⁠ದಾನಿಯೇಲ 3:⁠15.

16 ಸ್ಪಷ್ಟವಾಗಿಯೇ, (ದಾನಿಯೇಲ ಪುಸ್ತಕದ 2ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ) ಕನಸಿನ ಪ್ರತಿಮೆಯ ಪಾಠವು, ನೆಬೂಕದ್ನೆಚ್ಚರನ ಹೃದಮನಗಳ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿರಲಿಲ್ಲ. “ನಿಮ್ಮ ದೇವರು ದೇವಾಧಿದೇವನೂ ರಾಜರ ಒಡೆಯನೂ ರಹಸ್ಯಗಳನ್ನು ವ್ಯಕ್ತಗೊಳಿಸುವವನೂ ಆಗಿದ್ದಾನೆ” ಎಂದು ಅವನು ದಾನಿಯೇಲನಿಗೆ ಹೇಳಿದ ತನ್ನ ಸ್ವಂತ ಮಾತುಗಳನ್ನು ಬಹುಶಃ ಈಗಾಗಲೇ ಮರೆತುಬಿಟ್ಟಿದ್ದನು. (ದಾನಿಯೇಲ 2:47) ಈ ದೇವರು ಸಹ ಮೂವರು ಇಬ್ರಿಯ ಯುವಕರಿಗಾಗಿ ಕಾದಿರುವ ಶಿಕ್ಷೆಯಿಂದ ಅವರನ್ನು ಕಾಪಾಡಲಾರನು ಎಂದು ಹೇಳುವ ಮೂಲಕ, ಈಗ ನೆಬೂಕದ್ನೆಚ್ಚರನು ಯೆಹೋವನಿಗೆ ಸವಾಲೊಡ್ಡುತ್ತಿರುವಂತೆ ತೋರಿತು.

17. ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋ ಅರಸನ ಮಾತಿಗೆ ಹೇಗೆ ಪ್ರತಿಕ್ರಿಯಿಸಿದರು?

17 ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋರು ವಿಷಯವನ್ನು ಪುನಃ ಪರಿಗಣಿಸುವ ಅಗತ್ಯವಿರಲಿಲ್ಲ. ತತ್‌ಕ್ಷಣವೇ ಅವರು ಪ್ರತಿಕ್ರಿಯಿಸಿದ್ದು: “ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಏನೂ ಹೇಳಬೇಕಾಗಿಲ್ಲ. ಅರಸೇ, ನಾವು ಸೇವಿಸುವ ದೇವರಿಗೆ ಚಿತ್ತವಿದ್ದರೆ ಆತನು ಧಗಧಗನೆ ಉರಿಯುವ ಆವಿಗೆಯೊಳಗಿಂದ ನಮ್ಮನ್ನು ಬಿಡಿಸಬಲ್ಲನು; ಹೇಗೂ ನಿನ್ನ ಕೈಯಿಂದ ನಮ್ಮನ್ನು ಬಿಡಿಸುವನು. ಚಿತ್ತವಿಲ್ಲದಿದ್ದರೂ ರಾಜನೇ, ಇದು ನಿನಗೆ ತಿಳಿದಿರಲಿ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ, ನೀನು ನಿಲ್ಲಿಸಿದ ಬಂಗಾರದ ಪ್ರತಿಮೆಯನ್ನು ಪೂಜಿಸುವದಿಲ್ಲ.”​—⁠ದಾನಿಯೇಲ 3:​16-18.

ಉರಿಯುವ ಆವಿಗೆಯೊಳಗೆ!

18, 19. ಮೂವರು ಇಬ್ರಿಯರು ಧಗಧಗನೆ ಉರಿಯುವ ಆವಿಗೆಯೊಳಗೆ ಎತ್ತಿಹಾಕಲ್ಪಟ್ಟಾಗ ಏನು ಸಂಭವಿಸಿತು?

18 ಕೋಪೋದ್ರಿಕ್ತನಾಗಿ, ಆವಿಗೆಯನ್ನು ನಿತ್ಯಕ್ಕಿಂತ ಏಳರಷ್ಟು ಹೆಚ್ಚಾಗಿ ಉರಿಸುವಂತೆ ನೆಬೂಕದ್ನೆಚ್ಚರನು ತನ್ನ ಸೇವಕರಿಗೆ ಆಜ್ಞಾಪಿಸಿದನು. ತದನಂತರ, ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋರನ್ನು ಕಟ್ಟಿ, “ಧಗಧಗನೆ ಉರಿಯುವ ಆವಿಗೆಯೊಳಗೆ ಎತ್ತಿಹಾಕು”ವಂತೆ ಅವನು “ತನ್ನ ಸೈನ್ಯದ ಕೆಲವು ಮಂದಿ ಶೂರರಿಗೆ” ಅಪ್ಪಣೆಕೊಟ್ಟನು. ಪ್ರಾಯಶಃ ಈ ಮೂವರು ವ್ಯಕ್ತಿಗಳು ಇನ್ನೂ ಬೇಗನೆ ಸಂಪೂರ್ಣವಾಗಿ ಸುಟ್ಟುಹೋಗಲಿ ಎಂಬ ಉದ್ದೇಶದಿಂದ, ಉಡುಪಿನ ಜೊತೆಗೆ ಅವರನ್ನು ಕಟ್ಟಿ ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕುವ ಮೂಲಕ, ಅವರು ಅರಸನ ಅಪ್ಪಣೆಯನ್ನು ಪಾಲಿಸಿದರು. ಆದರೂ, ಈ ಇಬ್ರಿಯರನ್ನು ಆವಿಗೆಯೊಳಗೆ ಎತ್ತಿಹಾಕಲಿಕ್ಕಾಗಿ ನೆಬೂಕದ್ನೆಚ್ಚರನಿಂದ ನೇಮಿಸಲ್ಪಟ್ಟವರೇ ಆ ಉರಿಯ ಕಾವಿಗೆ ಸತ್ತುಹೋದರು.​—⁠ದಾನಿಯೇಲ 3:​19-22.

19 ಆದರೆ ಇನ್ನೂ ಅಸಾಮಾನ್ಯವಾದ ಒಂದು ಘಟನೆಯು ಅಲ್ಲಿ ನಡೆಯಿತು. ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋರು ಧಗಧಗನೆ ಉರಿಯುವ ಆವಿಗೆಯ ಮಧ್ಯದಲ್ಲಿದ್ದರೂ, ಬೆಂಕಿಯು ಅವರಿಗೆ ಯಾವ ಹಾನಿಯನ್ನೂ ಮಾಡಲಿಲ್ಲ. ನೆಬೂಕದ್ನೆಚ್ಚರನಿಗೆ ಎಷ್ಟು ಆಶ್ಚರ್ಯವಾಯಿತೆಂಬುದನ್ನು ಊಹಿಸಿಕೊಳ್ಳಿರಿ! ಭದ್ರವಾಗಿ ಕಟ್ಟಿ, ಧಗಧಗನೆ ಉರಿಯುತ್ತಿರುವ ಆವಿಗೆಯೊಳಗೆ ಅವರನ್ನು ಎತ್ತಿಹಾಕಲಾಗಿತ್ತಾದರೂ, ಅವರಿನ್ನೂ ಜೀವಂತವಾಗಿದ್ದರು. ಅಷ್ಟೇಕೆ, ಅವರು ಬೆಂಕಿಯಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದರು! ಆದರೆ ನೆಬೂಕದ್ನೆಚ್ಚರನು ಇನ್ನೂ ಒಂದು ಸಂಗತಿಯನ್ನು ಗಮನಿಸಿದನು. “ಕಟ್ಟಿದ ಮೂವರನ್ನು ನಾವು ಬೆಂಕಿಯೊಳಗೆ ಹಾಕಿಸಲಿಲ್ಲವೋ”? ಎಂದು ಅರಸನು ತನ್ನ ಮಂತ್ರಿಗಳಿಗೆ ಕೇಳಿದನು. “ಅರಸೇ, ಹೌದು, ಸತ್ಯ” ಎಂದು ಅವರು ಉತ್ತರಿಸಿದರು. ಅದಕ್ಕೆ ನೆಬೂಕದ್ನೆಚ್ಚರನು ಆಶ್ಚರ್ಯದಿಂದ ಉದ್ಗರಿಸಿದ್ದು: “ಇಗೋ, ಕಟ್ಟಿಲ್ಲದ ನಾಲ್ವರನ್ನು ನೋಡುತ್ತೇನೆ, ಬೆಂಕಿಯಲ್ಲಿ ತಿರುಗಾಡುತ್ತಿದ್ದಾರೆ, ಅವರಿಗೆ ಯಾವ ಹಾನಿಯೂ ಇಲ್ಲ; ನಾಲ್ಕನೆಯವನ ರೂಪವು ದೇವಕುಮಾರನ ರೂಪದಂತಿದೆ.”​—⁠ದಾನಿಯೇಲ 3:23-⁠25.

20, 21. (ಎ) ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋರು ಆವಿಗೆಯೊಳಗಿಂದ ಹೊರ​ಬಂದಾಗ, ಅವರ ವಿಷಯದಲ್ಲಿ ನೆಬೂಕದ್ನೆಚ್ಚರನು ಏನನ್ನು ಗಮನಿಸಿದನು? (ಬಿ) ತದನಂತರ ನೆಬೂಕದ್ನೆಚ್ಚರನು ಏನನ್ನು ಒಪ್ಪಿಕೊಳ್ಳಬೇಕಾಯಿತು?

20 ನೆಬೂಕದ್ನೆಚ್ಚರನು ಧಗಧಗನೆ ಉರಿಯುವ ಆವಿಗೆಯ ಬಾಯಿಯ ಬಳಿಗೆ ಹೋದನು. “ಪರಾತ್ಪರ ದೇವರ ಸೇವಕರಾದ ಶದ್ರಕ್‌ ಮೇಶಕ್‌ ಅಬೇದ್‌ನೆಗೋ ಎಂಬವರೇ ಬನ್ನಿ, ಹೊರಗೆ ಬನ್ನಿ” ಎಂದು ಅವರನ್ನು ಕರೆದನು. ಆ ಮೂವರು ಇಬ್ರಿಯರು ಬೆಂಕಿಯ ಮಧ್ಯದಿಂದ ಹೊರಟುಬಂದರು. ಈ ಅದ್ಭುತ ಘಟನೆಯನ್ನು ಕಣ್ಣಾರೆ​ಕಂಡಿದ್ದ ಉಪರಾಜರು, ನಾಯಕರು, ದೇಶಾಧಿಪತಿಗಳು, ಹಾಗೂ ಮಂತ್ರಿಗಳೆಲ್ಲರೂ ದಿಗ್ಭ್ರಮೆಗೊಂಡರು ಎಂಬುದರಲ್ಲಿ ಸಂಶಯವೇ ಇಲ್ಲ. ಅಷ್ಟೇಕೆ, ಈ ಮೂವರು ಯುವಕರು ಧಗಧಗನೆ ಉರಿಯುವ ಆವಿಗೆಯೊಳಗೆ ಹೋಗಿಯೇ ಇಲ್ಲವೇನೋ ಎಂಬಂತೆ ಕಾಣುತ್ತಿದ್ದರು! ಅವರಿಗೆ ಬೆಂಕಿಯ ವಾಸನೆಯೇ ತಾಗಿರಲಿಲ್ಲ, ಮತ್ತು ಅವರ ತಲೆಗಳ ಒಂದು ಕೂದಲು ಸಹ ಸುಟ್ಟಿರಲಿಲ್ಲ.​—⁠ದಾನಿಯೇಲ 3:​26, 27.

21 ಯೆಹೋವನೇ ಪರಾತ್ಪರನಾದ ದೇವರು ಎಂಬುದನ್ನು ಈಗ ಅರಸನಾದ ನೆಬೂಕದ್ನೆಚ್ಚರನು ಒಪ್ಪಿಕೊಳ್ಳಬೇಕಾಯಿತು. “ಶದ್ರಕ್‌ ಮೇಶಕ್‌ ಅಬೇದ್‌ನೆಗೋ ಎಂಬವರ ದೇವರಿಗೆ ಸ್ತೋತ್ರವಾಗಲಿ! ಆತನು ತನ್ನ ದೂತನನ್ನು ಕಳುಹಿಸಿ ತನ್ನಲ್ಲಿ ಭರವಸವಿಟ್ಟು ರಾಜಾಜ್ಞೆಯನ್ನು ಜಯಿಸಿ ತನ್ನನ್ನೇ ಹೊರತು ಇನ್ನಾವ ದೇವರನ್ನೂ ಸೇವಿಸಿ ಪೂಜಿಸಬಾರದೆಂದು ಸ್ವದೇಹಗಳನ್ನು ಮರಣಕ್ಕೆ ಒಪ್ಪಿಸಿದ ತನ್ನ ಸೇವಕರನ್ನು ಉದ್ಧರಿಸಿದ್ದಾನಲ್ಲಾ” ಎಂದು ಅವನು ಹೇಳಿದನು. ಆ ಬಳಿಕ ಅರಸನು ಈ ಕಟ್ಟಾಜ್ಞೆಯನ್ನು ಜಾರಿಗೆ ತಂದನು: “ಸಕಲ ಜನಾಂಗಕುಲಭಾಷೆಗಳವರಲ್ಲಿ ಯಾರಾದರೂ ಶದ್ರಕ್‌ ಮೇಶಕ್‌ ಅಬೇದ್‌ನೆಗೋ ಎಂಬವರ ದೇವರ ವಿಷಯದಲ್ಲಿ ಅಲ್ಲದ ಮಾತನ್ನಾಡಿದರೆ ಅವರನ್ನು ಚೂರುಚೂರಾಗಿ ಕತ್ತರಿಸಿ ಅವರ ಮನೆಗಳನ್ನು ತಿಪ್ಪೆಯನ್ನಾಗಿ ಮಾಡಬೇಕೆಂಬ ಆಜ್ಞೆಯನ್ನು ವಿಧಿಸುತ್ತೇನೆ; ಹೀಗೆ ಉದ್ಧರಿಸಲು ಸಮರ್ಥನಾದ ಇನ್ನಾವ ದೇವರೂ ಇಲ್ಲವಲ್ಲಾ.” ತದನಂತರ, ಈ ಮೂವರು ಇಬ್ರಿಯರು ಪುನಃ ರಾಜಯೋಗ್ಯ ಕೃಪೆಗೆ ಪಾತ್ರರಾದರು ಮತ್ತು ‘ಬಾಬೆಲ್‌ ಸಂಸ್ಥಾನದಲ್ಲಿ ಉನ್ನತ ಸ್ಥಾನ’ವನ್ನು ಪಡೆದುಕೊಂಡರು.​—⁠ದಾನಿಯೇಲ 3:28-⁠30.

ಇಂದು ನಂಬಿಕೆ ಮತ್ತು ಅಗ್ನಿಪರೀಕ್ಷೆ

22. ಪ್ರಸ್ತುತ ದಿನದ ಯೆಹೋವನ ಸೇವಕರು, ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋ ಎದುರಿಸಿದಂತಹ ಸನ್ನಿವೇಶಗಳನ್ನೇ ಹೇಗೆ ಎದುರಿಸುತ್ತಾರೆ?

22 ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋರು ಯಾವ ಸನ್ನಿವೇಶವನ್ನು ಎದುರಿಸಿದರೋ ಅಂತಹದ್ದೇ ಸನ್ನಿವೇಶಗಳನ್ನು ಇಂದು ಯೆಹೋವನ ಆರಾಧಕರೂ ಎದುರಿಸುತ್ತಾರೆ. ಅಕ್ಷರಾರ್ಥ ರೀತಿಯಲ್ಲಿ ದೇವಜನರು ದೇಶಭ್ರಷ್ಟರಾಗಿಲ್ಲದಿರಬಹುದೆಂಬುದು ಒಪ್ಪತಕ್ಕ ವಿಷಯವೇ. ಆದರೂ, ತನ್ನ ಹಿಂಬಾಲಕರು “ಲೋಕದ ಭಾಗವಾಗಿರುವುದಿಲ್ಲ” ಎಂದು ಯೇಸು ಹೇಳಿದನು. (ಯೋಹಾನ 17:​14, NW) ಅವರು ಹೇಗೆ “ಪರಕೀಯ”ರಾಗಿದ್ದಾರೆಂದರೆ, ತಮ್ಮ ಸುತ್ತಲೂ ಇರುವ ಜನರ ಅಶಾಸ್ತ್ರೀಯ ಪದ್ಧತಿಗಳನ್ನು, ಮನೋಭಾವಗಳನ್ನು, ಹಾಗೂ ರೂಢಿಗಳನ್ನು ಅವರು ಅನುಸರಿಸುವುದಿಲ್ಲ. ಅಪೊಸ್ತಲ ಪೌಲನು ಬರೆದಂತೆ, ಕ್ರೈಸ್ತರು “ಇಹಲೋಕದ ನಡವಳಿಕೆಯನ್ನು ಅನುಸರಿಸ”ಬಾರದಾಗಿತ್ತು.​—⁠ರೋಮಾಪುರ 12:⁠2.

23. ಮೂವರು ಇಬ್ರಿಯರು ಹೇಗೆ ದೃಢನಿಷ್ಠೆಯನ್ನು ತೋರಿಸಿದರು, ಮತ್ತು ಇಂದು ಕ್ರೈಸ್ತರು ಅವರ ಮಾದರಿಯನ್ನು ಹೇಗೆ ಅನುಸರಿಸಸಾಧ್ಯವಿದೆ?

23 ಈ ಮೂವರು ಇಬ್ರಿಯರು, ಬಾಬೆಲಿನ ವ್ಯವಸ್ಥೆಗೆ ಹೊಂದಿಕೊಳ್ಳಲು ನಿರಾಕರಿಸಿದರು. ಕಸ್ದೀಯ ಪಂಡಿತರ ಭಾಷೆ ಹಾಗೂ ಶಾಸ್ತ್ರದಲ್ಲಿನ ಅವರ ಪಾಂಡಿತ್ಯವು, ಅವರ ಮನಸ್ಸನ್ನು ಪರಿವರ್ತಿಸಲಿಲ್ಲ. ಆರಾಧನೆಯ ವಿಷಯವಾದ ಅವರ ನಿಲುವು, ಯಾವುದೇ ಚರ್ಚೆಯಿಂದ ಬದಲಾಗುವ ಸ್ಥಿತಿಯಲ್ಲಿರಲಿಲ್ಲ, ಮತ್ತು ಅವರ ನಿಷ್ಠೆ ಕೇವಲ ಯೆಹೋವನಿಗೇ ಸಲ್ಲತಕ್ಕದ್ದಾಗಿತ್ತು. ಇಂದು ಸಹ ಕ್ರೈಸ್ತರು ಅವರಂತೆಯೇ ದೃಢನಿಷ್ಠರಾಗಿರಬೇಕು. ಲೋಕದಲ್ಲಿರುವವರಿಗಿಂತ ತಾವು ಭಿನ್ನರಾಗಿದ್ದೇವೆ ಎಂದು ಅವರು ನಾಚಿಕೆಪಟ್ಟುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ.” (1 ಯೋಹಾನ 2:17) ಆದುದರಿಂದ, ನಾಶವಾಗಿ ಹೋಗುವ ಈ ವಿಷಯಗಳ ವ್ಯವಸ್ಥೆಗೆ ಹೊಂದಿಕೊಳ್ಳುವುದು, ಮೂರ್ಖತನವೂ ನಿಷ್ಪ್ರಯೋಜಕವೂ ಆದದ್ದಾಗಿದೆ.

24. ನಿಜ ಕ್ರೈಸ್ತರ ನಿಲುವು, ಮೂವರು ಇಬ್ರಿಯರ ನಿಲುವಿಗೆ ಹೇಗೆ ತುಲನಾತ್ಮಕವಾಗಿದೆ?

24 ವಿಗ್ರಹಾರಾಧನೆಯ ನವಿರಾದ ರೂಪಗಳನ್ನೂ ಸೇರಿಸಿ, ಪ್ರತಿಯೊಂದು ರೀತಿಯ ವಿಗ್ರಹಾರಾಧನೆಯ ವಿಷಯದಲ್ಲಿ ಕ್ರೈಸ್ತರು ಎಚ್ಚರವಾಗಿರಬೇಕಾಗಿದೆ. * (1 ಯೋಹಾನ 5:21) ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋ, ವಿಧೇಯತೆಯಿಂದ ಹಾಗೂ ಗೌರವ​ಭಾವದಿಂದ ಬಂಗಾರದ ಪ್ರತಿಮೆಯ ಮುಂದೆ ನಿಂತರು, ಆದರೆ ಅದರ ಮುಂದೆ ಅಡ್ಡಬೀಳುವುದು, ಗೌರವಭಾವವನ್ನು ಸೂಚಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಅರ್ಥೈಸುತ್ತದೆ ಎಂಬುದು ಅವರಿಗೆ ಗೊತ್ತಿತ್ತು. ಅದು ಒಂದು ಆರಾಧನಾ ಕೃತ್ಯವಾಗಿತ್ತು, ಮತ್ತು ಅದರಲ್ಲಿ ಭಾಗವಹಿಸುವುದು ಯೆಹೋವನ ಕೋಪಕ್ಕೆ ಗುರಿಯಾಗುವಂತೆ ಮಾಡಸಾಧ್ಯವಿತ್ತು. (ಧರ್ಮೋಪದೇಶಕಾಂಡ 5:​8-10) ಜಾನ್‌ ಎಫ್‌. ವಾಲ್‌ವೋರ್ಡ್‌ ಹೀಗೆ ಬರೆಯುತ್ತಾರೆ: “ಕಾರ್ಯತಃ ಅದು ಧ್ವಜವಂದನೆಯಾಗಿತ್ತಾದರೂ, ಧಾರ್ಮಿಕ ಹಾಗೂ ರಾಷ್ಟ್ರೀಯ ನಿಷ್ಠೆಯ ಮಧ್ಯೆ ಅನ್ಯೋನ್ಯ ಸಂಬಂಧವಿದ್ದ ಕಾರಣ, ಅದಕ್ಕೆ ಧಾರ್ಮಿಕ ಸೂಚಿತಾರ್ಥವೂ ಇದ್ದಿರಬಹುದು.” ಇಂದು, ವಿಗ್ರಹಾರಾಧನೆಯ ವಿರುದ್ಧ ನಿಜ ಕ್ರೈಸ್ತರು ಸಹ ಅಷ್ಟೇ ದೃಢವಾದ ನಿಲುವನ್ನು ತೆಗೆದುಕೊಳ್ಳುತ್ತಾರೆ.

25. ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋ ಅವರ ನಿಜ ಜೀವನ ಕಥೆಯಿಂದ ನೀವು ಯಾವ ಪಾಠವನ್ನು ಕಲಿತಿದ್ದೀರಿ?

25 ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋ ಕುರಿತಾದ ಬೈಬಲ್‌ ವೃತ್ತಾಂತವು, ಯೆಹೋವನಿಗೆ ಸಂಪೂರ್ಣವಾದ ಭಕ್ತಿಯನ್ನು ಸಲ್ಲಿಸಲು ನಿರ್ಧರಿಸಿರುವವರೆಲ್ಲರಿಗೆ, ಒಂದು ಅತ್ಯುತ್ತಮ ನೀತಿ ಬೋಧೆಯನ್ನು ಒದಗಿಸುತ್ತದೆ. “ನಂಬಿಕೆಯ ಮೂಲಕ . . . ಬೆಂಕಿಯ ಬಲವನ್ನು ಆರಿಸಿದ”ವರನ್ನೂ ಸೇರಿಸಿ, ನಂಬಿಗಸ್ತಿಕೆಯಿಂದ ನಡೆದ ಅನೇಕ ಜನರ ಕುರಿತು ಅಪೊಸ್ತಲ ಪೌಲನು ಮಾತಾಡಿದಾಗ, ಅವನ ಮನಸ್ಸಿನಲ್ಲಿ ಈ ಮೂವರು ಇಬ್ರಿಯರ ಕುರಿತಾದ ಚಿತ್ರಣವೇ ಇತ್ತು ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. (ಇಬ್ರಿಯ 11:​33, 34) ಇಂತಹ ನಂಬಿಕೆಯನ್ನು ಅನುಕರಿಸುವವರೆಲ್ಲರಿಗೆ ಯೆಹೋವನು ಖಂಡಿತವಾಗಿಯೂ ಪ್ರತಿಫಲ ನೀಡುವನು. ಈ ಮೂವರು ಇಬ್ರಿಯರಾದರೋ ಬೆಂಕಿಯ ಆವಿಗೆಯೊಳಗಿಂದ ಪಾರುಗೊಳಿಸಲ್ಪಟ್ಟರು, ಆದರೆ ಯಥಾರ್ಥತೆಯನ್ನು ಕಾಪಾಡಿಕೊಂಡವರಾಗಿದ್ದು, ಪ್ರಾಣನಷ್ಟಪಟ್ಟಿರುವ ಎಲ್ಲ ನಿಷ್ಠಾವಂತರನ್ನು ಆತನು ಪುನರುತ್ಥಾನಗೊಳಿಸುವನು ಮತ್ತು ಅವರಿಗೆ ನಿತ್ಯಜೀವವನ್ನು ಕೊಟ್ಟು ಆಶೀರ್ವದಿಸುವನು ಎಂಬ ಖಾತ್ರಿ ನಮಗಿರಸಾಧ್ಯವಿದೆ. ಒಂದಲ್ಲ ಒಂದು ವಿಧದಲ್ಲಿ, ಯೆಹೋವನು “ತನ್ನ ಭಕ್ತರ ಪ್ರಾಣಗಳನ್ನು ಕಾಯುವವನಾಗಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.”​—⁠ಕೀರ್ತನೆ 97:⁠10.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 3 ಬಾಬೆಲ್‌ ಸಾಮ್ರಾಜ್ಯದ ಸ್ಥಾಪಕನೆಂದು ಪರಿಗಣಿಸಲ್ಪಟ್ಟಿದ್ದ ಮಾರ್ದೂಕನು, ದೈವೀಕರಿಸಲ್ಪಟ್ಟ ನಿಮ್ರೋದ​ನನ್ನು ಪ್ರತಿನಿಧಿಸುತ್ತಾನೆ ಎಂದು ಕೆಲವರು ನಂಬುತ್ತಾರೆ. ಆದರೂ, ಇದನ್ನು ಖಡಾಖಂಡಿತವಾಗಿ ಹೇಳಸಾಧ್ಯವಿಲ್ಲ.

^ ಪ್ಯಾರ. 6 “ಬೇಲ್ತೆಶಚ್ಚರ್‌” ಅಂದರೆ “ಅರಸನ ಜೀವವನ್ನು ಸಂರಕ್ಷಿಸು.” “ಶದ್ರಕ್‌” ಎಂಬುದು, ಸುಮೇರಿಯನ್‌ ಚಂದ್ರದೇವನಾದ “ಆಕುವಿನ ಅಪ್ಪಣೆ” ಎಂದರ್ಥವನ್ನು ಕೊಡಬಹುದು. “ಮೇಶಕ್‌” ಎಂಬುದು ಸುಮೇರಿಯನ್‌ ದೇವತೆಯನ್ನು ಸೂಚಿಸುವ ಸಾಧ್ಯತೆಯಿದೆ, ಮತ್ತು “ಅಬೇದ್‌ನೆಗೋ” ಎಂಬ ಹೆಸರಿನ ಅರ್ಥ “ನೆಗೋ” ಅಥವಾ ನೆಬೋವಿನ “ಸೇವಕ” ಎಂದಾಗಿತ್ತು.

^ ಪ್ಯಾರ. 7 ಈ ಪ್ರತಿಮೆಯ ಬೃಹತ್‌ ಗಾತ್ರವನ್ನು ಪರಿಗಣಿಸುತ್ತಾ, ಇದು ಮರದಿಂದ ಮಾಡಲ್ಪಟ್ಟು, ಚಿನ್ನದಿಂದ ಲೇಪಿತವಾಗಿತ್ತು ಎಂದು ಕೆಲವು ಬೈಬಲ್‌ ವಿದ್ವಾಂಸರು ನಂಬುತ್ತಾರೆ.

^ ಪ್ಯಾರ. 12 “ದೂರುಹೊರಿಸು” ಎಂದು ಭಾಷಾಂತರಿಸಲ್ಪಟ್ಟಿರುವ ಅರಮಾಯ ಭಾಷೆಯ ಶಬ್ದವು, ಒಬ್ಬ ವ್ಯಕ್ತಿಯನ್ನು ‘ಚೂರು ಚೂರಾಗಿ ತಿನ್ನು’ವುದನ್ನು ಅರ್ಥೈಸುತ್ತದೆ, ಅಂದರೆ ಮಿಥ್ಯಾಪವಾದವನ್ನು ಹೊರಿಸುವ ಮೂಲಕ ಅವನನ್ನು ಜಗಿದುಬಿಡುವುದು.

^ ಪ್ಯಾರ. 24 ಉದಾಹರಣೆಗಾಗಿ, ಬೈಬಲು ಹೊಟ್ಟೆಬಾಕತನ ಹಾಗೂ ದುರಾಶೆಯನ್ನು ವಿಗ್ರಹಾರಾಧನೆಯೊಂದಿಗೆ ಜೊತೆಗೂಡಿಸುತ್ತದೆ.​—⁠ಫಿಲಿಪ್ಪಿ 3:​18, 19; ಕೊಲೊಸ್ಸೆ 3:⁠5.

ನೀವೇನನ್ನು ಗ್ರಹಿಸಿದಿರಿ?

• ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋರು, ನೆಬೂಕದ್ನೆಚ್ಚರನು ನಿಲ್ಲಿಸಿದ ಪ್ರತಿಮೆಯ ಮುಂದೆ ಅಡ್ಡಬೀಳಲು ಏಕೆ ನಿರಾಕರಿಸಿದರು?

• ಮೂವರು ಇಬ್ರಿಯರು ತೆಗೆದುಕೊಂಡ ನಿಲುವನ್ನು ನೋಡಿ ನೆಬೂಕದ್ನೆಚ್ಚರನು ಹೇಗೆ ಪ್ರತಿಕ್ರಿಯಿಸಿದನು?

• ಮೂವರು ಇಬ್ರಿಯರು ನಂಬಿಕೆಯನ್ನು ತೋರಿಸಿದ್ದರಿಂದ, ಯೆಹೋವನು ಅವರಿಗೆ ಹೇಗೆ ಪ್ರತಿಫಲ ನೀಡಿದನು?

• ಶದ್ರಕ್‌, ಮೇಶಕ್‌, ಮತ್ತು ಅಬೇದ್‌ನೆಗೋ ಅವರ ನಿಜ ಜೀವನ ಕಥೆಗೆ ಗಮನಕೊಡುವ ಮೂಲಕ ನೀವು ಯಾವ ಪಾಠವನ್ನು ಕಲಿತಿದ್ದೀರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 79 ರಲ್ಲಿ ಇಡೀ ಪುಟದ ಚಿತ್ರ]

[ಪುಟ 81 ರಲ್ಲಿರುವ ಚಿತ್ರಗಳು]

1. ಬಾಬೆಲಿನಲ್ಲಿರುವ ದೇವಾಲಯ ಗೋಪುರ (ziggurat)

2. ಮಾರ್ದೂಕನ ದೇವಾಲಯ

3. ಮಾರ್ದೂಕ್‌ (ಎಡಭಾಗದಲ್ಲಿ) ಹಾಗೂ ನೆಬೋ (ಬಲಭಾಗದಲ್ಲಿ) ದೇವತೆಗಳನ್ನು ಘಟಸರ್ಪಗಳೋಪಾದಿ ಚಿತ್ರಿಸುವ ಕಂಚಿನ ಅಲಂಕಾರದ ಬಿಲ್ಲೆ

4. ನಿರ್ಮಾಣ ಯೋಜನೆಗಳಿಗೆ ಪ್ರಸಿದ್ಧವಾಗಿರುವ ನೆಬೂಕದ್ನೆಚ್ಚರನ ರತ್ನಶಿಲಾಕೆತ್ತನೆ

[ಪುಟ 87 ರಲ್ಲಿ ಇಡೀ ಪುಟದ ಚಿತ್ರ]

[ಪುಟ 89 ರಲ್ಲಿ ಇಡೀ ಪುಟದ ಚಿತ್ರ]