ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಭಾರೀ ಪ್ರತಿಮೆಯ ಏಳುಬೀಳುಗಳು

ಒಂದು ಭಾರೀ ಪ್ರತಿಮೆಯ ಏಳುಬೀಳುಗಳು

ಅಧ್ಯಾಯ ನಾಲ್ಕು

ಒಂದು ಭಾರೀ ಪ್ರತಿಮೆಯ ಏಳುಬೀಳುಗಳು

1. ಅರಸನಾದ ನೆಬೂಕದ್ನೆಚ್ಚರನು ದಾನಿಯೇಲನನ್ನು ಹಾಗೂ ಇನ್ನಿತರರನ್ನು ಬಾಬೆಲಿಗೆ ಬಂದಿವಾಸಿಗಳೋಪಾದಿ ತಂದು ಸುಮಾರು ಒಂದು ದಶಕವು ಕಳೆದ ಬಳಿಕ ಉಂಟಾದ ಸನ್ನಿವೇಶದ ಕುರಿತು, ನಾವು ಏಕೆ ಆಸಕ್ತಿವಹಿಸಬೇಕು?

ಅರಸನಾದ ನೆಬೂಕದ್ನೆಚ್ಚರನು, ಯೆಹೂದದ ದಾನಿಯೇಲನನ್ನೂ “ದೇಶದ ಪ್ರಧಾನಪುರುಷರ”ಲ್ಲಿ ಇನ್ನಿತರರನ್ನೂ ಬಾಬೆಲಿಗೆ ಬಂದಿವಾಸಿಗಳೋಪಾದಿ ತಂದು ಸುಮಾರು ಒಂದು ದಶಕವು ಕಳೆದಿದೆ. (2 ಅರಸು 24:15) ಯುವಕನಾದ ದಾನಿಯೇಲನು ಅರಸನ ಆಸ್ಥಾನದಲ್ಲಿ ಸೇವೆಮಾಡುತ್ತಿರುವಾಗ, ಪ್ರಾಣಾಪಾಯವನ್ನು ಒಡ್ಡುವಂತಹ ಒಂದು ಸನ್ನಿವೇಶವು ಏಳುತ್ತದೆ. ಇದರ ಕುರಿತು ನಾವೇಕೆ ಆಸಕ್ತಿವಹಿಸಬೇಕು? ಏಕೆಂದರೆ ಈ ಸನ್ನಿವೇಶದಲ್ಲಿ ಯೆಹೋವನು ಹಸ್ತಕ್ಷೇಪಮಾಡುವ ವಿಧವು, ದಾನಿಯೇಲನ ಹಾಗೂ ಇತರ ಇಬ್ರಿಯ ಯುವಕರ ಜೀವಗಳನ್ನು ಕಾಪಾಡುತ್ತದೆ ಮಾತ್ರವಲ್ಲ, ನಮ್ಮ ಸಮಯಗಳಿಗೆ ನಡೆಸುವ ಬೈಬಲ್‌ ಇತಿಹಾಸದ ಲೋಕ ಶಕ್ತಿಗಳ ಮುನ್ನಡೆಯ ಕುರಿತಾದ ನೋಟವನ್ನು ಸಹ ನಮಗೆ ಒದಗಿಸುತ್ತದೆ.

ಸಾಮ್ರಾಟನೊಬ್ಬನು ಜಟಿಲವಾದ ಸಮಸ್ಯೆಯನ್ನು ಎದುರಿಸುತ್ತಾನೆ

2. ನೆಬೂಕದ್ನೆಚ್ಚರನಿಗೆ ಮೊತ್ತಮೊದಲ ಪ್ರವಾದನಾ ಕನಸು ಯಾವಾಗ ಬಿತ್ತು?

2 “ನೆಬೂಕದ್ನೆಚ್ಚರನ ಆಳ್ವಿಕೆಯ ಎರಡನೆಯ ವರ್ಷದಲ್ಲಿ, ನೆಬೂಕದ್ನೆಚ್ಚರನು ಕೆಲವು ಕನಸುಗಳನ್ನು ಕಂಡನು; ಆ ಕನಸುಗಳಿಂದ ಅವನು ತತ್ತರಗೊಂಡನು, ಮತ್ತು ಅವು ಅವನಿಗೆ ನಿದ್ರೆ ಬರದಂತೆ ಮಾಡಿದವು” ಎಂದು ಪ್ರವಾದಿಯಾದ ದಾನಿಯೇಲನು ಬರೆದನು. (ದಾನಿಯೇಲ 2:⁠1, NW) ಈ ಕನಸನ್ನು ಕಂಡಾತನು, ಬಾಬೆಲ್‌ ಸಾಮ್ರಾಜ್ಯದ ಅರಸನಾದ ನೆಬೂಕದ್ನೆಚ್ಚರನೇ ಆಗಿದ್ದನು. ಯೆರೂಸಲೇಮನ್ನೂ ಅದರ ದೇವಾಲಯವನ್ನೂ ನಾಶಮಾಡುವಂತೆ ಯೆಹೋವ ದೇವರು ನೆಬೂಕದ್ನೆಚ್ಚರನಿಗೆ ಅನುಮತಿ ನೀಡಿದ ಸಮಯ​ದಲ್ಲಿ, ಅಂದರೆ ಸಾ.ಶ.ಪೂ. 607ರಲ್ಲಿ ಅವನು ವಾಸ್ತವದಲ್ಲಿ ಲೋಕದ ಅಧಿಪತಿಯಾದನು. ಲೋಕದ ಅಧಿಪತಿಯ ಸ್ಥಾನದಲ್ಲಿದ್ದ ನೆಬೂಕದ್ನೆಚ್ಚರನ ಆಳ್ವಿಕೆಯ ಎರಡನೆಯ ವರ್ಷದಲ್ಲಿ (ಸಾ.ಶ.ಪೂ. 606/605), ದೇವರು ಅವನಿಗೆ ಒಂದು ಭೀಕರ ಕನಸು ಬೀಳುವಂತೆ ಮಾಡಿದನು.

3. ಅರಸನಿಗೆ ಬಿದ್ದ ಕನಸಿನ ಅರ್ಥವನ್ನು ವಿವರಿಸಲು ಯಾರು ಅಸಮರ್ಥರಾಗಿದ್ದರು, ಮತ್ತು ನೆಬೂಕದ್ನೆಚ್ಚರನು ಹೇಗೆ ಪ್ರತಿಕ್ರಿಯಿಸಿದನು?

3 ಈ ಕನಸು ನೆಬೂಕದ್ನೆಚ್ಚರನನ್ನು ಎಷ್ಟು ಕಳವಳಗೊಳಿಸಿತೆಂದರೆ, ಅವನಿಗೆ ನಿದ್ರೆಯೇ ಬರಲಿಲ್ಲ. ಸಹಜವಾಗಿಯೇ, ಅವನು ಕನಸಿನ ಅರ್ಥವನ್ನು ತಿಳಿದುಕೊಳ್ಳಲು ಕಾತುರನಾಗಿದ್ದನು. ಆದರೆ ಈ ಪರಾಕ್ರಮಿ ಅರಸನಿಗೆ ಆ ಕನಸೇ ಮರೆತುಹೋಗಿತ್ತು! ಆದುದರಿಂದ, ಅವನು ಬಾಬೆಲಿನ ಜೋಯಿಸರು, ಮಂತ್ರವಾದಿಗಳು, ಹಾಗೂ ಮಾಟಗಾರರನ್ನು ಕರೆಸಿ, ಅವರು ಆ ಕನಸನ್ನೂ ಅದರ ಅರ್ಥವನ್ನೂ ತಿಳಿಸಲೇಬೇಕೆಂದು ತಗಾದೆ​ಮಾಡಿದನು. ಕನಸಿನ ಅರ್ಥವನ್ನು ತಿಳಿಸಲು ಅವರು ಅಸಮರ್ಥರಾಗಿದ್ದರು. ಅವರ ವೈಫಲ್ಯವು ನೆಬೂಕದ್ನೆಚ್ಚರನನ್ನು ಎಷ್ಟು ಕೋಪೋದ್ರಿಕ್ತಗೊಳಿಸಿತೆಂದರೆ, “ಬಾಬೆಲಿನ ಸಕಲ​ವಿದ್ವಾಂಸರನ್ನು ಕೊಲ್ಲು”ವಂತೆ ಅವನು ಆಜ್ಞೆಹೊರಡಿಸಿದನು. ಈ ಆಜ್ಞೆಯು, ನೇಮಿತ ವಧಕಾರನು ದಾನಿಯೇಲನನ್ನು ಮುಖಾಮುಖಿಯಾಗಿ ಭೇಟಿಮಾಡುವಂತೆ ಮಾಡಿತು. ಏಕೆ? ಏಕೆಂದರೆ ದಾನಿಯೇಲನು ಹಾಗೂ ಅವನ ಮೂವರು ಇಬ್ರಿಯ ಸಂಗಡಿಗರಾದ ಹನನ್ಯ, ಮಿಶಾಯೇಲ ಹಾಗೂ ಅಜರ್ಯರು ಸಹ, ಬಾಬೆಲಿನ ವಿದ್ವಾಂಸರೆಂದು ಪರಿಗಣಿಸಲ್ಪಟ್ಟಿದ್ದರು.​—⁠ದಾನಿಯೇಲ 2:​2-14.

ದಾನಿಯೇಲನು ಸಹಾಯಕ್ಕೆ ಬರುತ್ತಾನೆ

4. (ಎ) ನೆಬೂಕದ್ನೆಚ್ಚರನ ಕನಸು ಹಾಗೂ ಅದರ ಅರ್ಥದ ಬಗ್ಗೆ ದಾನಿಯೇಲನಿಗೆ ಹೇಗೆ ಗೊತ್ತಾಯಿತು? (ಬಿ) ಯೆಹೋವ ದೇವರಿಗೆ ಕೃತಜ್ಞತೆಯನ್ನು ತೋರಿಸುತ್ತಾ ದಾನಿಯೇಲನು ಏನು ಹೇಳಿದನು?

4 ನೆಬೂಕದ್ನೆಚ್ಚರನ ಕಠಿನವಾದ ರಾಜಾಜ್ಞೆಯ ಕಾರಣವನ್ನು ತಿಳಿದುಕೊಂಡ ಬಳಿಕ, “ದಾನಿಯೇಲನು ಅರಮನೆಗೆ ಸೇರಿ​—⁠ನನಗೆ ಸಮಯವನ್ನು ಕೊಟ್ಟರೆ ನಾನು ಆ ಕನಸಿನ ಅರ್ಥವನ್ನು ರಾಜನಿಗೆ ವಿವರಿಸುವೆನು ಎಂದು ಅರಿಕೆ ಮಾಡಿದನು.” ಅವನಿಗೆ ಅನುಮತಿ ದೊರಕಿತು. ದಾನಿಯೇಲನು ತನ್ನ ಮನೆಗೆ ಹಿಂದಿರುಗಿದನು, ಮತ್ತು “ಪರಲೋಕ ದೇವರು ಈ ರಹಸ್ಯದ ವಿಷಯವಾಗಿ ಕೃಪೆತೋರಿಸು”ವಂತೆ ಬೇಡಿಕೊಳ್ಳುತ್ತಾ, ಅವನು ಹಾಗೂ ಅವನ ಮೂವರು ಇಬ್ರಿಯ ಸ್ನೇಹಿತರು ಪ್ರಾರ್ಥಿಸಿದರು. ಅದೇ ರಾತ್ರಿ ಕಂಡುಬಂದ ಒಂದು ದರ್ಶನದಲ್ಲಿ ಯೆಹೋವನು ದಾನಿಯೇಲನಿಗೆ ಆ ಕನಸಿನ ರಹಸ್ಯವನ್ನು ತಿಳಿಯಪಡಿಸಿದನು. ಕೃತಜ್ಞತೆಯಿಂದ ದಾನಿಯೇಲನು ಹೇಳಿದ್ದು: “ದೇವರ ನಾಮಕ್ಕೆ ಯುಗಯುಗಾಂತರಗಳಲ್ಲಿಯೂ ಕೊಂಡಾಟವಾಗಲಿ! ಜ್ಞಾನತ್ರಾಣಗಳು ಆತನವುಗಳೇ. ಕಾಲಸಮಯಗಳನ್ನು ಮಾರ್ಪಡಿಸುತ್ತಾನೆ, ರಾಜರನ್ನು ತಳ್ಳುತ್ತಾನೆ, ನಿಲ್ಲಿಸುತ್ತಾನೆ; ಜ್ಞಾನಿಗಳ ಜ್ಞಾನವು, ವಿವೇಕಿಗಳ ವಿವೇಕವು ಆತನ ವರವೇ; ಆತನು ಅಗಾಧವಿಷಯಗಳನ್ನೂ ಗೂಢಾರ್ಥಗಳನ್ನೂ ಬೈಲಿಗೆ ತರುತ್ತಾನೆ; ಕಗ್ಗತ್ತಲೆಯಲ್ಲಿ ಅಡಗಿರುವದೂ ಆತನಿಗೆ ಗೋಚರ; ತೇಜಸ್ಸು ಆತನಲ್ಲೇ ನೆಲೆಗೊಂಡಿದೆ.” ಇಂತಹ ಒಳನೋಟವನ್ನು ಒದಗಿಸಿದ್ದಕ್ಕಾಗಿ ದಾನಿಯೇಲನು ಯೆಹೋವನನ್ನು ಸ್ತುತಿಸಿದನು.​—⁠ದಾನಿಯೇಲ 2:​15-23.

5. (ಎ) ಅರಸನ ಸನ್ನಿಧಿಗೆ ಬಂದಾಗ, ಕನಸಿನ ಅರ್ಥವನ್ನು ತಿಳಿಯಪಡಿಸಿದ್ದಕ್ಕಾಗಿ ದಾನಿಯೇಲನು ಯೆಹೋವನಿಗೆ ಹೇಗೆ ಕೀರ್ತಿಯನ್ನು ಸಲ್ಲಿಸಿದನು? (ಬಿ) ದಾನಿಯೇಲನು ಕೊಟ್ಟ ವಿವರಣೆಯು ಇಂದು ನಮಗೆ ಏಕೆ ಆಸಕ್ತಿದಾಯಕವಾಗಿದೆ?

5 ಮರುದಿನ, ಬಾಬೆಲಿನ ವಿದ್ವಾಂಸರನ್ನು ಕೊಲ್ಲುವುದಕ್ಕಾಗಿ ರಾಜನು ನೇಮಿಸಿದ್ದ ಮೈಗಾವಲಿನವರ ದಳವಾಯಿಯಾದ ಅರ್ಯೋಕನನ್ನು ದಾನಿಯೇಲನು ಸಂಧಿಸಿದನು. ದಾನಿಯೇಲನು ಕನಸಿನ ಅರ್ಥವನ್ನು ವಿವರಿಸಲು ಶಕ್ತನಾಗಿದ್ದಾನೆಂದು ಗೊತ್ತಾದ ಕೂಡಲೆ, ಅರ್ಯೋಕನು ಅವನನ್ನು ತತ್‌ಕ್ಷಣವೇ ಅರಸನ ಸನ್ನಿಧಿಗೆ ಕರೆದುಕೊಂಡು ಹೋಗುತ್ತಾನೆ. ಕನಸಿನ ಅರ್ಥವನ್ನು ತಿಳಿಸಲು ಶಕ್ತನಾದುದರ ಕೀರ್ತಿಯು ತನಗೆ ಸಲ್ಲತಕ್ಕದ್ದಲ್ಲವೆಂದು ಗೊತ್ತಿದ್ದ ದಾನಿಯೇಲನು ನೆಬೂಕದ್ನೆಚ್ಚರನಿಗೆ ಹೇಳಿದ್ದು: “ರಹಸ್ಯಗಳನ್ನು ವ್ಯಕ್ತಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಪರಲೋಕದಲ್ಲಿದ್ದಾನೆ; ಉತ್ತರಕಾಲದಲ್ಲಿ ನಡೆಯತಕ್ಕದ್ದನ್ನು ಆತನೇ ರಾಜನಾದ ನೆಬೂಕದ್ನೆಚ್ಚರನಿಗೆ ತಿಳಿಯಪಡಿಸಿದ್ದಾನೆ.” ದಾನಿಯೇಲನು ಕೇವಲ ಬಾಬೆಲ್‌ ಸಾಮ್ರಾಜ್ಯದ ಭವಿಷ್ಯತ್ತನ್ನು ಮಾತ್ರವಲ್ಲ, ನೆಬೂಕದ್ನೆಚ್ಚರನ ದಿನದಿಂದ ಹಿಡಿದು ನಮ್ಮ ಸಮಯಗಳಲ್ಲಿ ಹಾಗೂ ಭವಿಷ್ಯತ್ತಿನಲ್ಲಿ ನಡೆಯಲಿಕ್ಕಿದ್ದ ಲೋಕ ಘಟನೆಗಳ ಯೋಜನೆಯನ್ನು ಸಹ ಬಯಲುಪಡಿಸಲು ಸಿದ್ಧ​ನಾಗಿದ್ದನು.​—⁠ದಾನಿಯೇಲ 2:​24-30.

ಕನಸು ಜ್ಞಾಪಿಸಿಕೊಳ್ಳಲ್ಪಟ್ಟದ್ದು

6, 7. ಅರಸನ ಪರವಾಗಿ ದಾನಿಯೇಲನು ಜ್ಞಾಪಿಸಿಕೊಂಡ ಕನಸು ಯಾವುದಾಗಿತ್ತು?

6 ದಾನಿಯೇಲನು ಕನಸನ್ನು ವಿವರಿಸುತ್ತಿದ್ದಾಗ, ನೆಬೂಕದ್ನೆಚ್ಚರನು ಆಸಕ್ತಿಯಿಂದ ಆಲಿಸಿದನು. ದಾನಿಯೇಲನು ಹೇಳಿದ್ದು: “ರಾಜನೇ, ನೀನು ಕಂಡದು ಆಹಾ, ಅದ್ಭುತ​ಪ್ರತಿಮೆ; ಥಳಥಳನೆ ಹೊಳೆಯುವ ಆ ದೊಡ್ಡ ಪ್ರತಿಮೆಯು ನಿನ್ನೆದುರಿಗೆ ನಿಂತಿತ್ತು; ಭಯಂಕರವಾಗಿ ಕಾಣಿಸಿತು. ಆ ಪ್ರತಿಮೆಯ ತಲೆಯು ಅಪರಂಜಿ, ಎದೆತೋಳುಗಳು ಬೆಳ್ಳಿ, ಹೊಟ್ಟೆಸೊಂಟಗಳು ತಾಮ್ರ, ಕಾಲುಗಳು ಕಬ್ಬಿಣ, ಹೆಜ್ಜೆಗಳು ಕಬ್ಬಿಣ ಮತ್ತು ಮಣ್ಣು. ನೀನು ನೋಡುತ್ತಿರಲಾಗಿ [ಬೆಟ್ಟದೊಳಗಿಂದ] ಒಂದು ಗುಂಡು ಬಂಡೆಯು ಕೈಯಿಲ್ಲದೆ ಒಡೆಯಲ್ಪಟ್ಟು [ಸಿಡಿದು ಬಂದು] ಆ ಪ್ರತಿಮೆಯ ಕಬ್ಬಿಣಮಣ್ಣಿನ ಹೆಜ್ಜೆಗಳಿಗೆ ಬಡಿದು ಚೂರುಚೂರು ಮಾಡಿತು. ಆಗ ಕಬ್ಬಿಣಮಣ್ಣುತಾಮ್ರಬೆಳ್ಳಿಬಂಗಾರಗಳೆಲ್ಲವೂ ಪುಡಿ​ಪುಡಿಯಾಗಿ ಸುಗ್ಗಿಯ ಕಣಗಳ ಹೊಟ್ಟಿನಂತಾದವು; ಗಾಳಿಯು ತೂರಿಕೊಂಡು ಹೋಗಲು ಅವುಗಳಿಗೆ ನೆಲೆಯೇ ಇಲ್ಲವಾಯಿತು; ಪ್ರತಿಮೆಗೆ ಬಡಿದ ಆ ಬಂಡೆಯು ಮಹಾ ಪರ್ವತ​ವಾಗಿ ಲೋಕದಲ್ಲೆಲ್ಲಾ ತುಂಬಿಕೊಂಡಿತು.”​—⁠ದಾನಿಯೇಲ 2:​31-35.

7 ತನಗೆ ಬಿದ್ದ ಕನಸನ್ನು ದಾನಿಯೇಲನು ವಿವರಿಸುತ್ತಿರುವುದನ್ನು ಕೇಳಿಸಿಕೊಂಡು ನೆಬೂಕದ್ನೆಚ್ಚರನು ಎಷ್ಟು ರೋಮಾಂಚಗೊಂಡಿದ್ದಿರಬೇಕು! ಆದರೆ ಸ್ವಲ್ಪ ಇರಿ! ದಾನಿಯೇಲನು ಕನಸಿನ ಅರ್ಥವನ್ನು ತಿಳಿಯಪಡಿಸಿದರೆ ಮಾತ್ರ ಬಾಬೆಲಿನ ವಿದ್ವಾಂಸರ ಜೀವ ಉಳಿಯುತ್ತಿತ್ತು. ತನ್ನ ಕುರಿತು ಹಾಗೂ ತನ್ನ ಮೂವರು ಇಬ್ರಿಯ ಸ್ನೇಹಿತರ ಪರವಾಗಿ ಮಾತಾಡುತ್ತಾ ದಾನಿಯೇಲನು ಹೇಳಿದ್ದು: “ಕನಸು ಇದೇ; ಇದರ ಅರ್ಥವನ್ನೂ ಸನ್ನಿಧಿಯಲ್ಲಿ ಅರಿಕೆಮಾಡುವೆವು.”​—⁠ದಾನಿಯೇಲ 2:⁠36.

ಗಮನಾರ್ಹ ವೈಶಿಷ್ಟ್ಯವುಳ್ಳ ಒಂದು ರಾಜ್ಯ

8. (ಎ) ಪ್ರತಿಮೆಯ ಬಂಗಾರದ ತಲೆಯು ಯಾರು ಅಥವಾ ಯಾವುದು ಎಂದು ದಾನಿಯೇಲನು ವಿವರಿಸಿದನು? (ಬಿ) ಬಂಗಾರದ ತಲೆಯು ಯಾವಾಗ ಅಸ್ತಿತ್ವಕ್ಕೆ ಬಂತು?

8 “ಅರಸೇ, ನೀನು ರಾಜಾಧಿರಾಜ, ಪರಲೋಕದೇವರು ನಿನಗೆ ರಾಜ್ಯಬಲಪರಾಕ್ರಮವೈಭವಗಳನ್ನು ದಯಪಾಲಿಸಿದ್ದಾನೆ; ನರಜಾತಿಯವರು ವಾಸಿಸುವ ಸಕಲ ಪ್ರಾಂತಗಳಲ್ಲಿ ಆಕಾಶಪಕ್ಷಿಗಳನ್ನೂ ಭೂಜಂತುಗಳನ್ನೂ ನಿನ್ನ ಕೈಗೆ ಒಪ್ಪಿಸಿ ನೀನು ಅವುಗಳನ್ನೆಲ್ಲಾ ಆಳುವಂತೆ ಮಾಡಿದ್ದಾನೆ; ನೀನೇ ಆ ಬಂಗಾರದ ತಲೆ.” (ದಾನಿಯೇಲ 2:​37, 38) ಸಾ.ಶ.ಪೂ. 607ರಲ್ಲಿ, ಯೆರೂಸಲೇಮನ್ನು ನಾಶಗೊಳಿಸಲಿಕ್ಕಾಗಿ ಯೆಹೋವನು ನೆಬೂಕದ್ನೆಚ್ಚರನನ್ನು ಉಪಯೋಗಿಸಿದ ಬಳಿಕ, ಈ ಮಾತುಗಳು ಅವನಿಗೆ ಅನ್ವಯವಾದವು. ಏಕೆಂದರೆ ಯೆರೂಸಲೇಮಿನಲ್ಲಿ ಸಿಂಹಾಸನವೇರಿದ ಅರಸರು, ಯೆಹೋವನ ಅಭಿಷಿಕ್ತ ರಾಜನಾದ ದಾವೀದನ ವಂಶದವರಾಗಿದ್ದರು. ಯೆರೂಸಲೇಮು ಯೆಹೂದದ ರಾಜಧಾನಿಯಾಗಿತ್ತು, ಅಂದರೆ ಭೂಮಿಯ ಮೇಲೆ ಯೆಹೋವನ ಪರಮಾಧಿಕಾರವನ್ನು ಸೂಚಿಸುವಂತಹ ದೇವರ ಸಾಂಕೇತಿಕ ರಾಜ್ಯವಾಗಿತ್ತು. ಆದರೆ, ಸಾ.ಶ.ಪೂ. 607ರಲ್ಲಿ ಯೆರೂಸಲೇಮ್‌ ನಾಶಗೊಂಡಾಗ, ದೇವರ ಈ ಸಾಂಕೇತಿಕ ರಾಜ್ಯವು ಅಸ್ತಿತ್ವಹೀನ​ವಾಯಿತು. (1 ಪೂರ್ವಕಾಲವೃತ್ತಾಂತ 29:23; 2 ಪೂರ್ವಕಾಲವೃತ್ತಾಂತ 36:17-⁠21) ಪ್ರತಿಮೆಯ ಲೋಹದ ಭಾಗಗಳಿಂದ ಪ್ರತಿನಿಧಿಸಲ್ಪಟ್ಟ ಆನುಕ್ರಮಿಕ ಲೋಕ ಶಕ್ತಿಗಳು, ದೇವರ ಸಾಂಕೇತಿಕ ರಾಜ್ಯವು ಯಾವುದೇ ರೀತಿಯಲ್ಲಿ ಮಧ್ಯೆಪ್ರವೇಶಿಸದೆ ಈಗ ಲೋಕಾಧಿಪತ್ಯವನ್ನು ನಡೆಸಸಾಧ್ಯವಿತ್ತು. ಪುರಾತನ ಸಮಯಗಳಲ್ಲಿ ಬಹುಮೂಲ್ಯ ಲೋಹವೆಂದು ಪ್ರಸಿದ್ಧವಾಗಿದ್ದ ಬಂಗಾರದ ತಲೆಯೋಪಾದಿ, ಯೆರೂಸಲೇಮನ್ನು ನಾಶಗೊಳಿಸುವ ಮೂಲಕ ದೇವರ ಆ ಸಾಂಕೇತಿಕ ರಾಜ್ಯವನ್ನು ಉರುಳಿಸಿದ ಕೀರ್ತಿ ನೆಬೂಕದ್ನೆಚ್ಚರನಿಗೆ ದೊರಕಿತು.​—⁠63ನೆಯ ಪುಟದಲ್ಲಿರುವ, “ಒಬ್ಬ ಯುದ್ಧವೀರ ಅರಸನು ಒಂದು ಸಾಮ್ರಾಜ್ಯವನ್ನು ಕಟ್ಟುತ್ತಾನೆ” ಎಂಬ ರೇಖಾಚೌಕವನ್ನು ನೋಡಿರಿ.

9. ಬಂಗಾರದ ತಲೆಯು ಏನನ್ನು ಪ್ರತಿನಿಧಿಸಿತು?

9 ಸುಮಾರು 43 ವರ್ಷಗಳ ವರೆಗೆ ಆಳ್ವಿಕೆ ನಡೆಸಿದ ನೆಬೂಕದ್ನೆಚ್ಚರನು, ಬಾಬೆಲ್‌ ಸಾಮ್ರಾಜ್ಯದ ಮೇಲೆ ಅಧಿಕಾರ ನಡೆಸಿದ ರಾಜವಂಶದ ಮುಖ್ಯಸ್ಥನಾಗಿದ್ದನು. ಈ ರಾಜವಂಶದಲ್ಲಿ ನೆಬೂಕದ್ನೆಚ್ಚರನ ಅಳಿಯನಾದ ನೆಬೊನೈಡಸನೂ ಹಿರಿಯ ಮಗನಾದ ಎವೀಲ್ಮೆರೋದಕನೂ ಸೇರಿದ್ದರು. ಈ ರಾಜವಂಶವು ಇನ್ನೂ 43 ವರ್ಷಗಳ ವರೆಗೆ, ಅಂದರೆ ಸಾ.ಶ.ಪೂ. 539ರಲ್ಲಿ ನೆಬೊನೈಡಸನ ಮಗನಾದ ಬೇಲ್ಶಚ್ಚರನ ಮರಣದ ತನಕ ಮುಂದುವರಿಯಿತು. (2 ಅರಸು 25:27; ದಾನಿಯೇಲ 5:30) ಹೀಗೆ ಕನಸಿನ ಪ್ರತಿಮೆಯಲ್ಲಿನ ಬಂಗಾರದ ತಲೆಯು, ಕೇವಲ ನೆಬೂಕದ್ನೆಚ್ಚರನನ್ನು ಪ್ರತಿನಿಧಿಸುವುದಿಲ್ಲ, ಬದಲಾಗಿ ಬಾಬೆಲನ್ನು ಆಳಿದ ವಂಶವನ್ನೇ ಪ್ರತಿನಿಧಿಸುತ್ತದೆ.

10. (ಎ) ಬಾಬೆಲ್‌ ಲೋಕ ಶಕ್ತಿಯು ಬಹಳ ಸಮಯ ಉಳಿಯುವುದಿಲ್ಲ ಎಂಬುದನ್ನು ನೆಬೂಕದ್ನೆಚ್ಚರನ ಕನಸು ಹೇಗೆ ಸೂಚಿಸಿತು? (ಬಿ) ಬಾಬೆಲನ್ನು ಸೋಲಿಸುವ ಅರಸನ ಕುರಿತಾಗಿ ಪ್ರವಾದಿಯಾದ ಯೆಶಾಯನು ಏನನ್ನು ಮುಂತಿಳಿಸಿದನು? (ಸಿ) ಯಾವ ಅರ್ಥದಲ್ಲಿ ಮೇದ್ಯಯಪಾರಸಿಯವು ಬಾಬೆಲಿಗಿಂತ ಕನಿಷ್ಠವಾಗಿತ್ತು?

10 ದಾನಿಯೇಲನು ನೆಬೂಕದ್ನೆಚ್ಚರನಿಗೆ ಹೇಳಿದ್ದು: “ನಿನ್ನ ಕಾಲವಾದ ಮೇಲೆ ನಿನಗಿಂತ ಕನಿಷ್ಠವಾದ ಮತ್ತೊಂದು ರಾಜ್ಯವುಂಟಾಗುವದು.” (ದಾನಿಯೇಲ 2:39) ನೆಬೂಕದ್ನೆಚ್ಚರನ ರಾಜವಂಶಕ್ಕೆ ಬದಲಾಗಿ, ಪ್ರತಿಮೆಯ ಬೆಳ್ಳಿಯ ಎದೆ ಹಾಗೂ ತೋಳುಗಳಿಂದ ಸಂಕೇತಿಸಲ್ಪಟ್ಟ ಒಂದು ರಾಜ್ಯವು ಅಧಿಕಾರಕ್ಕೆ ಬರಲಿತ್ತು. ಸುಮಾರು 200 ವರ್ಷಗಳಿಗೆ ಮುಂಚೆಯೇ ಯೆಶಾಯನು ಈ ರಾಜ್ಯದ ಕುರಿತು ಮುಂತಿಳಿಸಿದ್ದನು; ಅಷ್ಟುಮಾತ್ರವಲ್ಲ ಕೋರೆಷ ಎಂಬುದು ಆ ರಾಜ್ಯದ ವಿಜೇತ ಅರಸನ ಹೆಸರಾಗಿರುವುದೆಂದೂ ತಿಳಿಯಪಡಿಸಿದ್ದನು. (ಯೆಶಾಯ 13:​1-17; 21:​2-9; ​44:​24–45:​7, 13) ಇದು ಮೇದ್ಯಯ​ಪಾರಸಿಯ ಸಾಮ್ರಾಜ್ಯವೇ ಆಗಿತ್ತು. ಮೇದ್ಯಯಪಾರಸಿಯರು ವಿಕಸಿಸಿದ ಅಸಾಮಾನ್ಯ ನಾಗರಿಕತೆಯು, ಬಾಬಿಲೋನ್ಯ ಸಾಮ್ರಾಜ್ಯದ ನಾಗರಿಕತೆಗಿಂತ ಕೆಳಮಟ್ಟದ್ದಾಗಿರಲಿಲ್ಲವಾದರೂ, ಬಂಗಾರಕ್ಕಿಂತಲೂ ಕಡಿಮೆ ಮೌಲ್ಯದ ಲೋಹವಾದ ಬೆಳ್ಳಿಯಿಂದ ಅದು ಪ್ರತಿನಿಧಿಸಲ್ಪಟ್ಟಿದೆ. ಇದು ಬಾಬಿಲೋನ್ಯ ಲೋಕ ಶಕ್ತಿಗಿಂತ ಕೆಳಮಟ್ಟದ್ದಾಗಿತ್ತು, ಹೇಗೆಂದರೆ ದೇವರ ಸಾಂಕೇತಿಕ ರಾಜ್ಯವಾಗಿದ್ದ ಯೆಹೂದವನ್ನೂ ಯೆರೂಸಲೇಮಿನಲ್ಲಿರುವ ಅದರ ರಾಜಧಾನಿಯನ್ನೂ ಉರುಳಿಸಿದ ಹೆಗ್ಗಳಿಕೆ ಇದಕ್ಕೆ ದೊರೆಯಲಿಲ್ಲ.

11. ನೆಬೂಕದ್ನೆಚ್ಚರನ ರಾಜವಂಶವು ಯಾವಾಗ ಅಸ್ತಿತ್ವಹೀನವಾಯಿತು?

11 ಈ ಪ್ರತಿಮೆಯ ಕನಸಿನ ಅರ್ಥವನ್ನು ವಿವರಿಸಿ ಸುಮಾರು 60 ವರ್ಷಗಳು ಕಳೆದ ಬಳಿಕ, ನೆಬೂಕದ್ನೆಚ್ಚರನ ರಾಜವಂಶವು ಕೊನೆಗೊಂಡದ್ದನ್ನು ದಾನಿಯೇಲನು ಕಣ್ಣಾರೆ​ಕಂಡನು. ಸಾ.ಶ.ಪೂ. 539, ಅಕ್ಟೋಬರ್‌ 5/6ರ ರಾತ್ರಿ, ಅಭೇದ್ಯವಾಗಿ ಕಂಡುಬರುತ್ತಿದ್ದ ಬಾಬೆಲನ್ನು ಮೇದ್ಯಯಪಾರಸಿಯ ಸೈನ್ಯವು ವಶಪಡಿಸಿಕೊಂಡು, ಅರಸನಾದ ಬೇಲ್ಶಚ್ಚರನನ್ನು ಕೊಂದಾಗ, ದಾನಿಯೇಲನು ಅಲ್ಲಿಯೇ ಇದ್ದನು. ಬೇಲ್ಶಚ್ಚರನು ಮರಣಹೊಂದಿದಾಗ, ಕನಸಿನ ಪ್ರತಿಮೆಯ ಬಂಗಾರದ ತಲೆಯಾಗಿದ್ದ ಬಾಬೆಲ್‌ ಸಾಮ್ರಾಜ್ಯವು ಅಸ್ತಿತ್ವಹೀನವಾಯಿತು.

ದೇಶಭ್ರಷ್ಟರಾಗಿದ್ದ ಜನರನ್ನು ಒಂದು ರಾಜ್ಯವು ಬಿಡುಗಡೆಮಾಡಿದ್ದು

12. ಸಾ.ಶ.ಪೂ. 537ರಲ್ಲಿ ಕೋರೆಷನು ಹೊರಡಿಸಿದ ಆಜ್ಞೆಯು, ದೇಶಭ್ರಷ್ಟರಾಗಿದ್ದ ಯೆಹೂದ್ಯರಿಗೆ ಹೇಗೆ ಪ್ರಯೋಜನಕರವಾಗಿತ್ತು?

12 ಸಾ.ಶ.ಪೂ. 539ರಲ್ಲಿ, ಬಾಬೆಲ್‌ ಸಾಮ್ರಾಜ್ಯಕ್ಕೆ ಬದಲಾಗಿ ಮೇದ್ಯಯಪಾರಸಿಯವು ಆಧಿಪತ್ಯ ನಡೆಸುವ ಲೋಕ ಶಕ್ತಿಯಾಗಿ ಪರಿಣಮಿಸಿತು. ತನ್ನ 62ನೆಯ ಪ್ರಾಯದಲ್ಲಿ, ಮೇದ್ಯಯನಾದ ದಾರ್ಯಾವೆಷನು ವಿಜೇತ ಬಾಬೆಲ್‌ ಪಟ್ಟಣದ ಮೊತ್ತಮೊದಲ ಅರಸನಾದನು. (ದಾನಿಯೇಲ 5:​30, 31) ಸ್ವಲ್ಪ ಸಮಯದ ವರೆಗೆ, ಮೇದ್ಯಯನಾದ ದಾರ್ಯಾವೆಷನೂ ಪಾರಸಿಯನಾದ ಕೋರೆಷನೂ ಒಟ್ಟಿಗೆ ಸೇರಿ ಮೇದ್ಯಯಪಾರಸಿಯ ಸಾಮ್ರಾಜ್ಯವನ್ನು ಆಳಿದರು. ದಾರ್ಯಾವೆಷನು ಮೃತಪಟ್ಟಾಗ, ಕೋರೆಷನೇ ಪಾರಸಿಯ ಸಾಮ್ರಾಜ್ಯದ ಏಕಮಾತ್ರ ಸರ್ವಾಧಿಕಾರಿಯಾದನು. ಬಾಬೆಲಿನಲ್ಲಿದ್ದ ಯೆಹೂದ್ಯರಿಗಾದರೋ, ಕೋರೆಷನ ಆಳ್ವಿಕೆಯು ಬಂದಿವಾಸದಿಂದ ಬಿಡುಗಡೆಯನ್ನು ಒದಗಿಸಿತು. ಸಾ.ಶ.ಪೂ. 537ರಲ್ಲಿ ಕೋರೆಷನು, ಬಾಬೆಲಿನಲ್ಲಿದ್ದ ಯೆಹೂದಿ ದೇಶಭ್ರಷ್ಟರು ತಮ್ಮ ಸ್ವದೇಶಕ್ಕೆ ಹಿಂದಿರುಗಿ, ಯೆರೂಸಲೇಮನ್ನೂ ಯೆಹೋವನ ಆಲಯವನ್ನೂ ಪುನಃ ಕಟ್ಟುವ ಒಂದು ಆಜ್ಞೆಯನ್ನು ಹೊರಡಿಸಿದನು. ಆದರೂ, ಯೆಹೂದ ಹಾಗೂ ಯೆರೂಸಲೇಮಿನಲ್ಲಿ ದೇವರ ಸಾಂಕೇತಿಕ ರಾಜ್ಯವು ಪುನಸ್ಸ್ಥಾಪಿಸಲ್ಪಡಲಿಲ್ಲ.​—⁠2 ಪೂರ್ವಕಾಲವೃತ್ತಾಂತ 36:​22, 23; ಎಜ್ರ 1:​1–2:2ಎ.

13. ನೆಬೂಕದ್ನೆಚ್ಚರನ ಕನಸಿನ ಪ್ರತಿಮೆಯ ಬೆಳ್ಳಿಯ ಎದೆ ಹಾಗೂ ತೋಳುಗಳು ಏನನ್ನು ಚಿತ್ರಿಸಿದವು?

13 ಕನಸಿನ ಪ್ರತಿಮೆಯ ಬೆಳ್ಳಿಯ ಎದೆ ಹಾಗೂ ತೋಳುಗಳು, ಮಹಾ ಕೋರೆಷನಿಂದ ಆರಂಭವಾದ ಪಾರಸಿಯ ಅರಸರ ರಾಜವಂಶವನ್ನು ಚಿತ್ರಿಸಿದವು. ಈ ರಾಜವಂಶವು 200ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಉಳಿಯಿತು. ಸಾ.ಶ.ಪೂ. 530ರಲ್ಲಿ ಒಂದು ಮಿಲಿಟರಿ ದಂಡಯಾತ್ರೆಯಲ್ಲಿದ್ದಾಗ, ಕೋರೆಷನು ಮರಣಪಟ್ಟನೆಂದು ನಂಬಲಾಗುತ್ತದೆ. ಅವನ ನಂತರ ಪಾರಸಿಯ ಸಾಮ್ರಾಜ್ಯದ ಸಿಂಹಾಸನವನ್ನೇರಿದ ಸುಮಾರು 12 ಮಂದಿ ಅರಸರಲ್ಲಿ, ಕಡಿಮೆಪಕ್ಷ ಇಬ್ಬರು ಅರಸರು ಯೆಹೋವನಾದುಕೊಂಡ ಜನರೊಂದಿಗೆ ಒಳ್ಳೆಯ ರೀತಿಯಲ್ಲಿ ವ್ಯವಹರಿಸಿದರು. ಅವರಲ್ಲಿ ಒಬ್ಬನು (ಪಾರಸಿಯನಾದ) Iನೆಯ ದಾರ್ಯಾವೆಷನಾಗಿದ್ದನು, ಮತ್ತು ಇನ್ನೊಬ್ಬನು Iನೆಯ ಅರ್ತಷಸ್ತನಾಗಿದ್ದನು.

14, 15. ಮಹಾ ದಾರ್ಯಾವೆಷ ಹಾಗೂ Iನೆಯ ಅರ್ತಷಸ್ತರು ಯೆಹೂದ್ಯರಿಗೆ ಹೇಗೆ ಸಹಾಯ ಮಾಡಿದರು?

14 ಮಹಾ ಕೋರೆಷನ ಬಳಿಕ ಬಂದ ಪಾರಸಿಯ ಅರಸರ ವಂಶದಲ್ಲಿ, Iನೆಯ ದಾರ್ಯಾವೆಷನು ಮೂರನೆಯ ರಾಜನಾಗಿದ್ದನು. IIನೆಯ ಕ್ಯಾಂಬಿಸಿಸ್‌ ಮತ್ತು ಅವನ ಸಹೋದರನಾದ ಬಾರ್ಡಿಯ (ಅಥವಾ ಬಹುಶಃ ಗೌಮಾಟ ಎಂಬ ಹೆಸರಿನ ಮೇಜ್ಯನ್‌ ಸುಳ್ಳು ಹಕ್ಕುದಾರನು) ಎಂಬುವವರು ಅದಕ್ಕೆ ಮುಂಚೆ ಆಳ್ವಿಕೆ ನಡೆಸಿದ ಇಬ್ಬರು ಅರಸರಾಗಿದ್ದಿರಬಹುದು. ಮಹಾ ದಾರ್ಯಾವೆಷನೆಂದೂ ಪ್ರಸಿದ್ಧನಾಗಿದ್ದ Iನೆಯ ದಾರ್ಯಾ​ವೆಷನು ಸಾ.ಶ.ಪೂ. 521ರಲ್ಲಿ ಸಿಂಹಾಸನವೇರಿದಾಗ, ಯೆರೂಸಲೇಮಿನಲ್ಲಿದ್ದ ದೇವಾಲಯವನ್ನು ಪುನಃ ಕಟ್ಟುವ ಕಾರ್ಯವು ನಿಷೇಧಕ್ಕೊಳಗಾಗಿತ್ತು. ಎಕ್‌ಬ್ಯಾಟನದಲ್ಲಿ ಚಾರಿತ್ರಿಕ ಕಾಗದಪತ್ರಗಳನ್ನು ಇಟ್ಟಿರುವ ಸ್ಥಳದಲ್ಲಿ ಕೋರೆಷನ ಆಜ್ಞೆಯು ಸೇರಿರುವ ದಾಖಲೆಯನ್ನು ಕಂಡುಹಿಡಿದಾಗ, ದಾರ್ಯಾವೆಷನು ಸಾ.ಶ.ಪೂ. 520ರಲ್ಲಿ ಆ ನಿಷೇಧವನ್ನು ತೆಗೆದುಹಾಕಿದನು. ಅಷ್ಟುಮಾತ್ರವಲ್ಲ, ದೇವಾಲಯವನ್ನು ಪುನಃ ಕಟ್ಟಲಿಕ್ಕಾಗಿ ಅವನು ರಾಜಭಂಡಾರದಿಂದ ಹಣಕಾಸನ್ನು ಸಹ ಒದಗಿಸಿದನು.​—⁠ಎಜ್ರ 6:​1-12.

15 ಯೆಹೂದ್ಯರ ಪುನಸ್ಸ್ಥಾಪನೆಯ ಪ್ರಯತ್ನಗಳಲ್ಲಿ ಸಹಾಯ ಮಾಡಿದ ಇನ್ನೊಬ್ಬ ಪಾರಸಿಯ ಅರಸನು, Iನೆಯ ಅರ್ತಷಸ್ತನಾಗಿದ್ದನು. ಇವನು ಸಾ.ಶ.ಪೂ. 475ರಲ್ಲಿ ತನ್ನ ತಂದೆಯಾದ ಅಹಷ್ವೇರೋಷ (Iನೆಯ ಸರ್‌ಕ್ಸೀಸ್‌)ನಿಗೆ ಬದಲಾಗಿ ಅಧಿಕಾರಕ್ಕೆ ಬಂದನು. ಅರ್ತಷಸ್ತನಿಗೆ ಲಾಂಜಾಯ್‌ಮೆನಸ್‌ ಎಂಬ ಅಡ್ಡ ಹೆಸರು ಕೊಡಲ್ಪಟ್ಟಿತ್ತು, ಏಕೆಂದರೆ ಅವನ ಎಡಗೈಗಿಂತಲೂ ಬಲಗೈ ಹೆಚ್ಚು ಉದ್ದವಾಗಿತ್ತು. ಸಾ.ಶ.ಪೂ. 455ರಲ್ಲಿ, ಅಂದರೆ ತನ್ನ ಆಳ್ವಿಕೆಯ 20ನೆಯ ವರ್ಷದಲ್ಲಿ, ತನ್ನ ಯೆಹೂದಿ ಪಾನಸೇವಕನಾದ ನೆಹೆಮೀಯನನ್ನು ಯೆಹೂದದ ಅಧಿಪತಿಯನ್ನಾಗಿ ಮಾಡಿ, ಯೆರೂಸಲೇಮಿನ ಗೋಡೆಗಳನ್ನು ಪುನಃ ಕಟ್ಟುವಂತೆ ಅವನಿಗೆ ಆದೇಶನೀಡಿದನು. ಈ ಕೃತ್ಯವು, ದಾನಿಯೇಲ ಪುಸ್ತಕದ 9ನೆಯ ಅಧ್ಯಾಯದಲ್ಲಿ ತಿಳಿಸಲ್ಪಟ್ಟಿರುವ ‘ವರ್ಷಗಳೋಪಾದಿ ಎಣಿಸಲ್ಪಡುವ ಎಪ್ಪತ್ತು ವಾರಗಳ’ ಆರಂಭವನ್ನು ಗುರುತಿಸಿತು ಮತ್ತು ನಜರೇತಿನ ಯೇಸು, ಕ್ರಿಸ್ತ ಅಥವಾ ಮೆಸ್ಸೀಯನ ತೋರಿಬರುವಿಕೆ ಹಾಗೂ ಮರಣದ ತಾರೀಖುಗಳನ್ನು ನಿಗದಿಪಡಿಸಿತು.​—⁠ದಾನಿಯೇಲ 9:​24-27; ನೆಹೆಮೀಯ 1:1; 2:​1-18.

16. ಯಾವಾಗ ಹಾಗೂ ಯಾವ ಅರಸನಿಂದ ಮೇದ್ಯಯಪಾರಸಿಯ ಲೋಕ ಶಕ್ತಿಯು ಕೊನೆಗೊಂಡಿತು?

16 ಒಂದನೆಯ ಅರ್ತಷಸ್ತನ ಬಳಿಕ ಪಾರಸಿಯ ಸಾಮ್ರಾಜ್ಯದ ಸಿಂಹಾಸನ​ವೇರಿದ ಆರು ಮಂದಿ ಅರಸರಲ್ಲಿ, IIIನೆಯ ದಾರ್ಯಾವೆಷನು ಕೊನೆಯವನಾಗಿದ್ದನು. ಸಾ.ಶ.ಪೂ. 331ರಲ್ಲಿ, ಪುರಾತನ ನಿನವೆಯ ಸಮೀಪವಿರುವ ಗಾಗಮೇಲದಲ್ಲಿ, ಮಹಾ ಅಲೆಕ್ಸಾಂಡರನು IIIನೆಯ ದಾರ್ಯಾವೆಷನನ್ನು ಸಂಪೂರ್ಣವಾಗಿ ಸೋಲಿಸಿದಾಗ, ಅವನ ಆಳ್ವಿಕೆಯು ಇದ್ದಕ್ಕಿದ್ದಂತೆ ಅಂತ್ಯಗೊಂಡಿತು. ಈ ಅಪಜಯವು, ನೆಬೂಕದ್ನೆಚ್ಚರನ ಕನಸಿನ ಪ್ರತಿಮೆಯ ಬೆಳ್ಳಿಯ ಭಾಗದಿಂದ ಸಂಕೇತಿಸಲ್ಪಟ್ಟ ಮೇದ್ಯಯಪಾರಸಿಯ ಲೋಕ ಶಕ್ತಿಯನ್ನು ಕೊನೆಗೊಳಿಸಿತು. ಮುಂದೆ ಬರಲಿಕ್ಕಿದ್ದ ಲೋಕ ಶಕ್ತಿಯ ಕೆಲವು ಅಂಶಗಳು ಶ್ರೇಷ್ಠವೂ, ಇನ್ನಿತರ ಅಂಶಗಳು ಕನಿಷ್ಠವೂ ಆಗಿದ್ದವು. ನೆಬೂಕದ್ನೆಚ್ಚರನ ಕನಸಿನ ಅರ್ಥವನ್ನು ದಾನಿಯೇಲನು ವಿವರಿಸುತ್ತಾ ಹೋದಂತೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ.

ಬಹು ವಿಸ್ತಾರವಾಗಿದ್ದರೂ ಕನಿಷ್ಠವಾಗಿದ್ದ ಒಂದು ರಾಜ್ಯ

17-19. (ಎ) ತಾಮ್ರದ ಹೊಟ್ಟೆ ಹಾಗೂ ಸೊಂಟವು ಯಾವ ಲೋಕ ಶಕ್ತಿಯನ್ನು ಸೂಚಿಸಿತು, ಮತ್ತು ಅದರ ಆಳ್ವಿಕೆಯು ಎಷ್ಟು ವ್ಯಾಪಕವಾಗಿತ್ತು? (ಬಿ) IIIನೆಯ ಅಲೆಕ್ಸಾಂಡರನು ಯಾರಾಗಿದ್ದನು? (ಸಿ) ಗ್ರೀಕ್‌ ಭಾಷೆಯು ಹೇಗೆ ಒಂದು ಅಂತಾರಾಷ್ಟ್ರೀಯ ಭಾಷೆಯಾಯಿತು, ಮತ್ತು ಈ ಭಾಷೆಯು ಯಾವುದಕ್ಕೆ ಉಪಯುಕ್ತವಾಗಿತ್ತು?

17 ಆ ಭಾರೀ ಪ್ರತಿಮೆಯ ಹೊಟ್ಟೆ ಹಾಗೂ ಸೊಂಟವು “ಬೇರೊಂದು ರಾಜ್ಯವನ್ನು, ಅಂದರೆ ಮೂರನೆಯ ತಾಮ್ರದ ರಾಜ್ಯ”ವನ್ನು ಒಳಗೂಡಿದೆ ಮತ್ತು “ಅದು ಇಡೀ ಭೂಮಂಡಲವನ್ನೇ ಆಳುವುದು” ಎಂದು ದಾನಿಯೇಲನು ನೆಬೂಕದ್ನೆಚ್ಚರನಿಗೆ ಹೇಳಿದನು. (ದಾನಿಯೇಲ 2:​32, 39, NW) ಬಾಬಿಲೋನ್ಯ ಹಾಗೂ ಮೇದ್ಯಯಪಾರಸಿಯ ಲೋಕ ಶಕ್ತಿಯ ಬಳಿಕ ಈ ಮೂರನೆಯ ರಾಜ್ಯವು ಆಳ್ವಿಕೆ ನಡಿಸಲಿಕ್ಕಿತ್ತು. ತಾಮ್ರವು ಬೆಳ್ಳಿಗಿಂತ ಕೆಳಮಟ್ಟದ ಲೋಹವಾಗಿರುವಂತೆ, ಈ ಹೊಸ ಲೋಕ ಶಕ್ತಿಯು ಮೇದ್ಯಯಪಾರಸಿಯ ಲೋಕ ಶಕ್ತಿಗಿಂತ ಕನಿಷ್ಠವಾಗಿರುವುದು; ಹೇಗೆಂದರೆ ಯೆಹೋವನ ಜನರನ್ನು ಬಿಡುಗಡೆಗೊಳಿಸುವಂತಹ ಯಾವುದೇ ಸುಯೋಗವು ಇದಕ್ಕೆ ಕೊಡಲ್ಪಡುವುದಿಲ್ಲ. ಆದರೂ, ತಾಮ್ರದಂತಹ ಈ ರಾಜ್ಯವು “ಇಡೀ ಭೂಮಂಡಲವನ್ನೇ ಆಳುವುದು” ಎಂಬ ಅಭಿವ್ಯಕ್ತಿಯು, ಬಾಬಿಲೋನ್ಯ ಅಥವಾ ಮೇದ್ಯಯಪಾರಸಿಯ ಲೋಕ ಶಕ್ತಿಗಳಿ​ಗಿಂತಲೂ ಇದು ಹೆಚ್ಚು ವ್ಯಾಪಕವಾಗಿ ಆಳ್ವಿಕೆ ನಡಿಸುವುದು ಎಂಬುದನ್ನು ಸೂಚಿಸುತ್ತದೆ. ಈ ಲೋಕ ಶಕ್ತಿಯ ಕುರಿತು ಐತಿಹಾಸಿಕ ಸಂಗತಿಗಳು ಏನನ್ನು ದೃಢೀಕರಿಸುತ್ತವೆ?

18 ಸಾ.ಶ.ಪೂ. 336ರಲ್ಲಿ, ಅಂದರೆ ತನ್ನ 20ರ ಪ್ರಾಯದಲ್ಲಿ, ಮ್ಯಾಸಿಡೋನಿಯಾದ ಸಿಂಹಾಸನಕ್ಕೆ ಉತ್ತರಾಧಿಕಾರಿಯಾದ ಸ್ವಲ್ಪ ಸಮಯದ ಬಳಿಕ, ಮಹತ್ವಾಕಾಂಕ್ಷಿಯಾದ IIIನೆಯ ಅಲೆಕ್ಸಾಂಡರನು ವಿಜಯದ ದಂಡಯಾತ್ರೆಯನ್ನು ಆರಂಭಿಸಿದನು. ತನ್ನ ಮಿಲಿಟರಿ ಯಶಸ್ಸಿನಿಂದಾಗಿ ಅವನು ಮಹಾ ಅಲೆಕ್ಸಾಂಡರನೆಂದು ಪ್ರಸಿದ್ಧನಾದನು. ಒಂದರ ಹಿಂದೆ ಇನ್ನೊಂದು ವಿಜಯವನ್ನು ಸಾಧಿಸುತ್ತಾ, ಅವನು ಪಾರಸಿಯ ಆಧಿಪತ್ಯದ ಕಡೆಗೆ ಮುನ್ನುಗ್ಗಿದನು. ಸಾ.ಶ.ಪೂ. 331ರಲ್ಲಿ, ಗಾಗಮೇಲ ಕದನದಲ್ಲಿ ಅವನು IIIನೆಯ ದಾರ್ಯಾವೆಷನನ್ನು ಸೋಲಿಸಿದಾಗ, ಪಾರಸಿಯ ಸಾಮ್ರಾಜ್ಯವು ಕುಸಿಯಲಾರಂಭಿಸಿತು ಮತ್ತು ಅಲೆಕ್ಸಾಂಡರನು ಗ್ರೀಸನ್ನು ಬೈಬಲ್‌ ಇತಿಹಾಸದ ಹೊಸ ಲೋಕ ಶಕ್ತಿಯಾಗಿ ಮಾಡಿದನು.

19 ಗಾಗಮೇಲದಲ್ಲಿ ಜಯಗಳಿಸಿದ ಬಳಿಕ ಅಲೆಕ್ಸಾಂಡರನು, ಬಾಬೆಲ್‌, ಸೂಸ, ಪರ್ಸಿಪೊಲಿಸ್‌, ಮತ್ತು ಎಕ್‌ಬ್ಯಾಟನ ಎಂಬ ಪಾರಸಿಯ ರಾಜಧಾನಿಗಳನ್ನು ವಶಪಡಿಸಿಕೊಳ್ಳುತ್ತಾ ಹೋದನು. ಪಾರಸಿಯ ಸಾಮ್ರಾಜ್ಯದ ಉಳಿದ ಭಾಗಗಳನ್ನು ಸೋಲಿಸುತ್ತಾ, ಅವನು ತನ್ನ ದಂಡಯಾತ್ರೆಯನ್ನು ಪಶ್ಚಿಮ ಭಾರತದ ಕಡೆಗೂ ವಿಸ್ತರಿಸಿದನು. ಗೆದ್ದ ದೇಶಗಳಲ್ಲಿ ಗ್ರೀಕ್‌ ವಸಾಹತುಗಳು ಸ್ಥಾಪಿಸಲ್ಪಟ್ಟವು. ಹೀಗೆ, ಸಾಮ್ರಾಜ್ಯದಾದ್ಯಂತ ಗ್ರೀಕ್‌ ಭಾಷೆ ಹಾಗೂ ಸಂಸ್ಕೃತಿಗಳು ಹಬ್ಬಿಕೊಂಡವು. ಈ ಮುಂಚೆ ಅಸ್ತಿತ್ವದಲ್ಲಿದ್ದ ಲೋಕ ಶಕ್ತಿಗಳಿಗಿಂತಲೂ ಗ್ರೀಕ್‌ ಸಾಮ್ರಾಜ್ಯವು ಹೆಚ್ಚು ಪ್ರಖ್ಯಾತವಾಯಿತು ಎಂಬುದು ನಿಜ. ದಾನಿಯೇಲನು ಮುಂತಿಳಿಸಿದ್ದಂತೆ, ತಾಮ್ರದ ರಾಜ್ಯವು ‘ಇಡೀ ಭೂಮಂಡಲವನ್ನೇ ಆಳಿತು.’ ಇದರ ಒಂದು ಫಲಿತಾಂಶವೇನೆಂದರೆ, ಗ್ರೀಕ್‌ (ಕೊಯಿನೆ) ಭಾಷೆಯು ಅಂತಾರಾಷ್ಟ್ರೀಯ ಭಾಷೆಯಾಗಿ ಪರಿಣಮಿಸಿತು. ಈ ಭಾಷೆಯಲ್ಲಿ ಸಾಕಷ್ಟು ಭಾಷಾ ಅಭಿವ್ಯಕ್ತಿಗಳಿರುವುದರಿಂದ, ಕ್ರೈಸ್ತ ಗ್ರೀಕ್‌ ಶಾಸ್ತ್ರವನ್ನು ಬರೆಯಲು ಹಾಗೂ ದೇವರ ರಾಜ್ಯದ ಸುವಾರ್ತೆಯನ್ನು ಹಬ್ಬಿಸಲು ಇದು ಅತಿ ಉಪಯುಕ್ತಕರವಾಗಿ ಕಂಡುಬಂತು.

20. ಮಹಾ ಅಲೆಕ್ಸಾಂಡರನ ಮರಣಾನಂತರ ಗ್ರೀಕ್‌ ಸಾಮ್ರಾಜ್ಯಕ್ಕೆ ಏನಾಯಿತು?

20 ಮಹಾ ಅಲೆಕ್ಸಾಂಡರನು ಕೇವಲ ಎಂಟು ವರ್ಷಗಳ ವರೆಗೆ ಮಾತ್ರ ಲೋಕದ ಅಧಿಪತಿಯಾಗಿ ಆಳಿದನು. ಅಲೆಕ್ಸಾಂಡರನು 32 ವರ್ಷ ಪ್ರಾಯದವನಾಗಿದ್ದಾಗ, ಒಂದು ಔತಣ​ಕೂಟದಲ್ಲಿ ಭಾಗವಹಿಸಿದ ಬಳಿಕ ಅಸ್ವಸ್ಥನಾಗಿ, ಸಾ.ಶ.ಪೂ. 323ರ ಜೂನ್‌ ತಿಂಗಳಿನ 13ನೆಯ ತಾರೀಖಿನಂದು ಮೃತಪಟ್ಟನು. ಸಕಾಲದಲ್ಲಿ, ಅವನ ದೊಡ್ಡ ಸಾಮ್ರಾಜ್ಯವು ನಾಲ್ಕು ವಿಭಾಗವಾಯಿತು, ಮತ್ತು ಪ್ರತಿಯೊಂದು ವಿಭಾಗವನ್ನು ಅವನ ನಾಲ್ಕು ಅಧಿಕಾರಿಗಳಲ್ಲಿ ಒಬ್ಬೊಬ್ಬರು ಆಳತೊಡಗಿದರು. ಹೀಗೆ, ಒಂದು ದೊಡ್ಡ ರಾಜ್ಯದಿಂದ ನಾಲ್ಕು ರಾಜ್ಯಗಳು ಉದಯವಾದವು, ಮತ್ತು ಕಾಲಕ್ರಮೇಣ ಇವು ರೋಮನ್‌ ಸಾಮ್ರಾಜ್ಯದಿಂದ ಕಬಳಿಸಲ್ಪಟ್ಟು, ಅದರ ಭಾಗವಾದವು. ಸಾ.ಶ.ಪೂ. 30ರ ವರೆಗೆ, ಅಂದರೆ ಈ ನಾಲ್ಕು ರಾಜ್ಯಗಳಲ್ಲಿ ಕೊನೆಯ ರಾಜ್ಯವನ್ನು​—⁠ಐಗುಪ್ತದಲ್ಲಿ ಆಳುತ್ತಿದ್ದ ಟಾಲೆಮಿಕ್‌ ರಾಜವಂಶವನ್ನು​—⁠ರೋಮ್‌ ವಶಪಡಿಸಿಕೊಳ್ಳುವ ವರೆಗೆ ಮಾತ್ರ, ತಾಮ್ರ​ದಂತಹ ಲೋಕ ಶಕ್ತಿಯು ಮುಂದುವರಿಯಿತು.

ಚೂರುಚೂರಾಗಿ ಒಡೆದು ಧ್ವಂಸಮಾಡುವ ಒಂದು ರಾಜ್ಯ

21. ದಾನಿಯೇಲನು “ನಾಲ್ಕನೆಯ ರಾಜ್ಯ”ವನ್ನು ಹೇಗೆ ವರ್ಣಿಸಿದನು?

21 ದಾನಿಯೇಲನು ಕನಸಿನ ಪ್ರತಿಮೆಯ ಕುರಿತಾದ ತನ್ನ ವಿವರಣೆಯನ್ನು ಮುಂದುವರಿಸಿದನು: “[ಬಾಬೆಲ್‌, ಮೇದ್ಯಯಪಾರಸಿಯ, ಹಾಗೂ ಗ್ರೀಸ್‌ನ ನಂತರ ಬರುವ] ನಾಲ್ಕನೆಯ ರಾಜ್ಯವು ಕಬ್ಬಿಣದಷ್ಟು ಗಟ್ಟಿ; ಕಬ್ಬಿಣವು ಎಲ್ಲಾ ವಸ್ತುಗಳನ್ನು ಚೂರುಚೂರಾಗಿ ಒಡೆದು ಹಾಕುತ್ತದಷ್ಟೆ; ಸಕಲವನ್ನೂ ಧ್ವಂಸಮಾಡುವ ಕಬ್ಬಿಣದಂತೆಯೇ ಅದು ಚೂರುಚೂರಾಗಿ ಧ್ವಂಸಮಾಡುವದು.” (ದಾನಿಯೇಲ 2:40) ಚೂರುಚೂರು ಮಾಡುವ ಅದರ ಬಲ ಹಾಗೂ ಸಾಮರ್ಥ್ಯದಲ್ಲಿ, ಈ ಲೋಕ ಶಕ್ತಿಯು ಕಬ್ಬಿಣದಂತಿರುವುದು; ಅದು ಬಂಗಾರ, ಬೆಳ್ಳಿ, ಅಥವಾ ತಾಮ್ರದಿಂದ ಪ್ರತಿನಿಧಿಸಲ್ಪಟ್ಟ ಸಾಮ್ರಾಜ್ಯಗಳಿಗಿಂತಲೂ ಹೆಚ್ಚು ಪ್ರಬಲವಾಗಿರುವುದು. ರೋಮನ್‌ ಸಾಮ್ರಾಜ್ಯವು ಅಂತಹ ಒಂದು ಲೋಕ ಶಕ್ತಿಯಾಗಿತ್ತು.

22. ರೋಮನ್‌ ಸಾಮ್ರಾಜ್ಯವು ಯಾವ ರೀತಿಯಲ್ಲಿ ಕಬ್ಬಿಣದಂತಿತ್ತು?

22 ರೋಮನ್‌ ಸಾಮ್ರಾಜ್ಯವು ಗ್ರೀಕ್‌ ಸಾಮ್ರಾಜ್ಯವನ್ನು ಚೂರುಚೂರಾಗಿ ಒಡೆದು ಧ್ವಂಸಮಾಡಿ, ಮೇದ್ಯಯಪಾರಸಿಯ ಹಾಗೂ ಬಾಬೆಲ್‌ ಲೋಕ ಶಕ್ತಿಗಳ ಉಳಿದ ಭಾಗಗಳನ್ನು ಸಹ ನುಂಗಿಹಾಕಿತು. ಯೇಸು ಕ್ರಿಸ್ತನಿಂದ ಸಾರಲ್ಪಟ್ಟ ದೇವರ ರಾಜ್ಯಕ್ಕೆ ಯಾವುದೇ ಗೌರವವನ್ನು ತೋರಿಸದೆ, ಸಾ.ಶ. 33ರಲ್ಲಿ ಅದು ಅವನನ್ನು ಯಾತನಾ ಕಂಭಕ್ಕೆ ಜಡಿದು ಕೊಂದುಹಾಕಿತು. ನಿಜ ಕ್ರೈಸ್ತತ್ವವನ್ನು ಧ್ವಂಸಮಾಡುವ ಪ್ರಯತ್ನದಿಂದ, ರೋಮನ್‌ ಸಾಮ್ರಾಜ್ಯವು ಯೇಸುವಿನ ಶಿಷ್ಯರನ್ನು ಸಹ ಹಿಂಸೆಗೊಳಪಡಿಸಿತು. ಅಷ್ಟುಮಾತ್ರವಲ್ಲ, ಸಾ.ಶ. 70ರಲ್ಲಿ ಯೆರೂಸಲೇಮನ್ನು ಹಾಗೂ ಅದರ ದೇವಾಲಯವನ್ನು ರೋಮನರು ನಾಶಮಾಡಿದರು.

23, 24. ಪ್ರತಿಮೆಯ ಕಾಲುಗಳು, ರೋಮನ್‌ ಸಾಮ್ರಾಜ್ಯದ ಜೊತೆಗೆ ಇನ್ನೂ ಏನನ್ನು ​ಚಿತ್ರಿಸುತ್ತವೆ?

23 ನೆಬೂಕದ್ನೆಚ್ಚರನ ಕನಸಿನ ಪ್ರತಿಮೆಯ ಕಬ್ಬಿಣದ ಕಾಲುಗಳು, ರೋಮನ್‌ ಸಾಮ್ರಾಜ್ಯವನ್ನು ಮಾತ್ರವಲ್ಲ, ಅದರ ರಾಜಕೀಯ ಬೆಳವಣಿಗೆಯನ್ನು ಸಹ ಚಿತ್ರಿಸಿದವು. ಪ್ರಕಟನೆ 17:10ರಲ್ಲಿ ದಾಖಲಿಸಲ್ಪಟ್ಟಿರುವ ಈ ಮಾತುಗಳನ್ನು ಗಮನಿಸಿರಿ: “ಅವು ಏಳು ಮಂದಿ ಅರಸುಗಳನ್ನು ಸೂಚಿಸುತ್ತವೆ; ಅವರಲ್ಲಿ ಐದು ಮಂದಿ ಬಿದ್ದುಹೋಗಿದ್ದಾರೆ, ಒಬ್ಬನು ಇದ್ದಾನೆ, ಮತ್ತೊಬ್ಬನು ಇನ್ನೂ ಬಂದಿಲ್ಲ. ಬಂದ ಮೇಲೆ ಅವನು ಸ್ವಲ್ಪಕಾಲ ಇರಬೇಕು.” ಅಪೊಸ್ತಲ ಯೋಹಾನನು ಈ ಮಾತುಗಳನ್ನು ಬರೆದಾಗ, ರೋಮನರು ಅವನನ್ನು ಪತ್ಮೊಸ್‌ ದ್ವೀಪದಲ್ಲಿ ಒಬ್ಬ ದೇಶಭ್ರಷ್ಟನೋಪಾದಿ ಇರಿಸಿದ್ದರು. ಬಿದ್ದುಹೋಗಿರುವ ಐದು ಮಂದಿ ಅರಸರು, ಅಥವಾ ಲೋಕ ಶಕ್ತಿಗಳು, ಐಗುಪ್ತ, ಅಶ್ಶೂರ್ಯ, ಬಾಬೆಲ್‌, ಮೇದ್ಯಯಪಾರಸಿಯ, ಹಾಗೂ ಗ್ರೀಸ್‌ ಆಗಿದ್ದವು. ಆರನೆಯದ್ದಾದ ರೋಮನ್‌ ಸಾಮ್ರಾಜ್ಯವು ಇನ್ನೂ ಅಧಿಕಾರದಲ್ಲಿತ್ತು. ಆದರೆ ಅದು ಕೂಡ ಬಿದ್ದುಹೋಗಲಿತ್ತು, ಮತ್ತು ತದನಂತರ ರೋಮನ್‌ ಸಾಮ್ರಾಜ್ಯವು ಸ್ವಾಧೀನಪಡಿಸಿಕೊಂಡ ಪ್ರದೇಶಗಳಲ್ಲೊಂದರಿಂದ, ಏಳನೆಯ ಅರಸನು ಬರಲಿದ್ದನು. ಅದು ಯಾವ ರೀತಿಯ ಲೋಕ ಶಕ್ತಿಯಾಗಿರಲಿತ್ತು?

24 ಒಂದು ಕಾಲದಲ್ಲಿ ಬ್ರಿಟನ್‌, ರೋಮನ್‌ ಸಾಮ್ರಾಜ್ಯದ ವಾಯವ್ಯ ದಿಕ್ಕಿನ ಭಾಗವಾಗಿತ್ತು. ಆದರೆ 1763ನೆಯ ವರ್ಷದಷ್ಟಕ್ಕೆ, ಅದು ಬ್ರಿಟಿಷ್‌ ಸಾಮ್ರಾಜ್ಯ​—⁠ಸಪ್ತ ಸಾಗರಗಳನ್ನು ತನ್ನ ನಿಯಂತ್ರಣದ ಕೆಳಗೆ ಇಟ್ಟುಕೊಂಡಿದ್ದಂತಹ ಬ್ರಿಟ್ಯಾನಿಯ​—⁠ಆಗಿ ಮಾರ್ಪಟ್ಟಿತ್ತು. 1776ರಷ್ಟಕ್ಕೆ, ಬ್ರಿಟನ್‌ನ 13 ಅಮೆರಿಕನ್‌ ವಸಾಹತುಗಳು ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿ, ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಅಮೆರಿಕವನ್ನು ಸ್ಥಾಪಿಸಿದವು. ಆದರೂ, ತದನಂತರದ ವರ್ಷಗಳಲ್ಲಿ, ಯುದ್ಧ ಹಾಗೂ ಶಾಂತಿ ಸಂಧಾನಗಳಲ್ಲಿ ಬ್ರಿಟನ್‌ ಹಾಗೂ ಅಮೆರಿಕಗಳು ಸಹಭಾಗಿಗಳಾದವು. ಹೀಗೆ, ಬೈಬಲ್‌ ಇತಿಹಾಸದ ಏಳನೆಯ ಲೋಕ ಶಕ್ತಿಯೋಪಾದಿ ಆ್ಯಂಗ್ಲೊ-ಅಮೆರಿಕನ್‌ ಒಕ್ಕೂಟವು ಅಸ್ತಿತ್ವಕ್ಕೆ ಬಂತು. ರೋಮನ್‌ ಸಾಮ್ರಾಜ್ಯದಂತೆ, ಕಬ್ಬಿಣದಂತಹ ಅಧಿಕಾರವನ್ನು ಚಲಾಯಿಸುವುದರಲ್ಲಿ ಇದು ಸಹ “ಕಬ್ಬಿಣದಷ್ಟು ಗಟ್ಟಿ”ಯಾಗಿ ಕಂಡುಬಂದಿದೆ. ಆದುದರಿಂದ, ಕನಸಿನ ಪ್ರತಿಮೆಯ ಕಬ್ಬಿಣದ ಕಾಲುಗಳಲ್ಲಿ, ರೋಮನ್‌ ಸಾಮ್ರಾಜ್ಯ ಹಾಗೂ ಆ್ಯಂಗ್ಲೊ-ಅಮೆರಿಕನ್‌ ಉಭಯ ಲೋಕ ಶಕ್ತಿಗಳು ಒಳಗೂಡಿವೆ.

ದುರ್ಬಲವಾದ ಒಂದು ಮಿಶ್ರಣ

25. ಪ್ರತಿಮೆಯ ಕಾಲುಗಳು ಹಾಗೂ ಬೆರಳುಗಳ ಕುರಿತು ದಾನಿಯೇಲನು ಏನು ಹೇಳಿದನು?

25 ತದನಂತರ ದಾನಿಯೇಲನು ನೆಬೂಕದ್ನೆಚ್ಚರನಿಗೆ ಹೇಳಿದ್ದು: “ಹೆಜ್ಜೆಗಳಲ್ಲಿ ಮತ್ತು ಬೆರಳುಗಳಲ್ಲಿ ಒಂದಂಶವು ಕುಂಬಾರನ ಮಣ್ಣೂ ಒಂದಂಶವು ಕಬ್ಬಿಣವೂ ಆಗಿದ್ದದ್ದನ್ನು ನೀನು ನೋಡಿದ ಪ್ರಕಾರ ಆ ರಾಜ್ಯವು ಭಿನ್ನಭಿನ್ನವಾಗಿರುವದು; ಜೇಡಿಮಣ್ಣಿನೊಂದಿಗೆ ಕಬ್ಬಿಣವು ಮಿಶ್ರವಾಗಿದ್ದದ್ದನ್ನು ನೀನು ನೋಡಿದಂತೆ ಆ ರಾಜ್ಯದಲ್ಲಿ ಕಬ್ಬಿಣದ ಬಲವು ಸೇರಿರುವದು. ಕಾಲ್ಬೆರಳುಗಳ ಒಂದಂಶವು ಕಬ್ಬಿಣ ಒಂದಂಶವು ಮಣ್ಣು ಆಗಿದ್ದ ಹಾಗೆ ಆ ರಾಜ್ಯದ ಒಂದಂಶವು ಗಟ್ಟಿ ಒಂದಂಶವು ಬೆಂಡು. ಕಬ್ಬಿಣವು ಜೇಡಿಮಣ್ಣಿನೊಂದಿಗೆ ​ಬೆರೆತಿರುವದನ್ನು ನೀನು ನೋಡಿದ ಮೇರೆಗೆ ಆ ರಾಜ್ಯಾಂಶಗಳು ಸಂತತಿ ಸಂಬಂಧದಿಂದ ಬೆರೆತುಕೊಳ್ಳುವವು; ಆದರೆ ಕಬ್ಬಿಣವು ಮಣ್ಣಿನೊಂದಿಗೆ ಹೇಗೆ ಕಲೆಯುವದಿಲ್ಲವೋ ಹಾಗೆ ಅವು ಒಂದಕ್ಕೊಂದು ಅಂಟಿಕೊಳ್ಳುವದಿಲ್ಲ.”​—⁠ದಾನಿಯೇಲ 2:​41-43.

26. ಕಾಲುಗಳು ಹಾಗೂ ಬೆರಳುಗಳಿಂದ ಚಿತ್ರಿಸಲ್ಪಟ್ಟ ಆಳ್ವಿಕೆಯು ಯಾವಾಗ ಸ್ಪಷ್ಟವಾಗಿ ತೋರಿಬರುತ್ತದೆ?

26 ನೆಬೂಕದ್ನೆಚ್ಚರನ ಕನಸಿನಲ್ಲಿ ಕಂಡುಬಂದಿದ್ದ ಪ್ರತಿಮೆಯ ಬೇರೆ ಬೇರೆ ಭಾಗಗಳಿಂದ ಪ್ರತಿನಿಧಿಸಲ್ಪಟ್ಟ ಲೋಕ ಶಕ್ತಿಗಳ ಅನುಕ್ರಮವು, ತಲೆಯಿಂದ ಆರಂಭವಾಗಿ ಕಾಲುಗಳ ತನಕ ಮುಂದುವರಿಯಿತು. ತರ್ಕಬದ್ಧವಾಗಿಯೇ, “ಜೇಡಿಮಣ್ಣಿನೊಂದಿಗೆ ಕಬ್ಬಿಣವು ಮಿಶ್ರ”ವಾಗಿದ್ದ ಕಾಲುಗಳು ಹಾಗೂ ಬೆರಳುಗಳು, “ಅಂತ್ಯ ಕಾಲ”ದ ಸಮಯದಲ್ಲಿ ಅಸ್ತಿತ್ವದಲ್ಲಿರುವ ಮಾನವ ಆಳ್ವಿಕೆಯ ತೋರಿಬರುವಿಕೆಯನ್ನು ಸಂಕೇತಿಸುತ್ತವೆ.​—⁠ದಾನಿಯೇಲ 12:⁠4.

27. (ಎ) ಜೇಡಿಮಣ್ಣಿನೊಂದಿಗೆ ಕಬ್ಬಿಣವು ಮಿಶ್ರವಾಗಿದ್ದ ಕಾಲುಗಳು ಹಾಗೂ ಬೆರಳುಗಳು, ಯಾವ ರೀತಿಯ ಲೋಕ ಸನ್ನಿವೇಶವನ್ನು ಚಿತ್ರಿಸುತ್ತವೆ? (ಬಿ) ಪ್ರತಿಮೆಯ ಹತ್ತು ಬೆರಳುಗಳಿಂದ ಏನು ಚಿತ್ರಿಸಲ್ಪಟ್ಟಿದೆ?

27 ಇಪ್ಪತ್ತನೆಯ ಶತಮಾನದ ಆರಂಭದಲ್ಲಿ, ಭೂಮಿಯ ಜನಸಂಖ್ಯೆಯ ನಾಲ್ಕನೆಯ ಒಂದು ಭಾಗದ ಮೇಲೆ ಬ್ರಿಟಿಷ್‌ ಸಾಮ್ರಾಜ್ಯವು ಅಧಿಕಾರ ನಡೆಸಿತು. ಇನ್ನಿತರ ಐರೋಪ್ಯ ಸಾಮ್ರಾಜ್ಯಗಳು, ಇನ್ನೂ ಲಕ್ಷಾಂತರ ಮಂದಿಯ ಮೇಲೆ ಆಳ್ವಿಕೆ ನಡೆಸಿದವು. ಆದರೆ Iನೆಯ ಲೋಕ ಯುದ್ಧದ ಫಲಿತಾಂಶವಾಗಿ, ಸಾಮ್ರಾಜ್ಯಗಳಿಗೆ ಬದಲಾಗಿ ರಾಷ್ಟ್ರೀಯ ಗುಂಪುಗಳು ಉದಯವಾದವು. IIನೆಯ ಲೋಕ ಯುದ್ಧದ ಬಳಿಕ ಈ ಪ್ರವೃತ್ತಿಯು ಇನ್ನೂ ತೀವ್ರಗೊಂಡಿತು. ರಾಷ್ಟ್ರೀಯತೆಯು ಹೆಚ್ಚೆಚ್ಚು ವಿಕಾಸಗೊಂಡಂತೆ, ಲೋಕದಲ್ಲಿರುವ ರಾಷ್ಟ್ರಗಳ ಸಂಖ್ಯೆಯೂ ಇದ್ದಕ್ಕಿದ್ದಂತೆ ಹೆಚ್ಚುತ್ತಾ ಹೋಯಿತು. ಕನಸಿನ ಪ್ರತಿಮೆಯ ಹತ್ತು ಬೆರಳುಗಳು, ಒಟ್ಟಿಗೆ ಅಸ್ತಿತ್ವದಲ್ಲಿದ್ದ ಅಂತಹ ಎಲ್ಲ ಲೋಕ ಶಕ್ತಿಗಳು ಹಾಗೂ ಸರಕಾರಗಳನ್ನು ಪ್ರತಿನಿಧಿಸುತ್ತವೆ. ಏಕೆಂದರೆ ಕೆಲವೊಮ್ಮೆ ಬೈಬಲಿನಲ್ಲಿ ಹತ್ತು ಎಂಬ ಸಂಖ್ಯೆಯು ಭೂಸಂಬಂಧವಾದ ಪೂರ್ಣತೆಯನ್ನು ಸೂಚಿಸುತ್ತದೆ.​—⁠ಹೋಲಿಸಿರಿ ವಿಮೋಚನಕಾಂಡ 34:28; ಮತ್ತಾಯ 25:1; ಪ್ರಕಟನೆ 2:⁠10.

28, 29. (ಎ) ದಾನಿಯೇಲನಿಗನುಸಾರ ಜೇಡಿಮಣ್ಣು ಏನನ್ನು ಪ್ರತಿನಿಧಿಸಿತು? (ಬಿ) ಕಬ್ಬಿಣ ಹಾಗೂ ಜೇಡಿಮಣ್ಣಿನ ಮಿಶ್ರಣದ ಕುರಿತು ಏನು ಹೇಳಸಾಧ್ಯವಿದೆ?

28 ಈಗ ನಾವು “ಅಂತ್ಯ ಕಾಲ”ದಲ್ಲಿ ಜೀವಿಸುತ್ತಿರುವುದರಿಂದ, ಕನಸಿನ ಪ್ರತಿಮೆಯ ಕಾಲುಗಳಿಂದ ಚಿತ್ರಿಸಲ್ಪಟ್ಟ ಆಧಿಪತ್ಯದ ಸಮಯವನ್ನು ತಲಪಿದ್ದೇವೆ. ಪ್ರತಿಮೆಯ ಜೇಡಿಮಣ್ಣಿನೊಂದಿಗೆ ಮಿಶ್ರವಾದ ಕಬ್ಬಿಣದ ಕಾಲುಗಳು ಹಾಗೂ ಬೆರಳುಗಳಿಂದ ಚಿತ್ರಿಸಲ್ಪಟ್ಟ ಸರಕಾರಗಳಲ್ಲಿ ಕೆಲವು, ಕಬ್ಬಿಣದಂತೆ ಸರ್ವಾಧಿಕಾರ ಅಥವಾ ನಿರಂಕುಶಾಧಿಕಾರ ಉಳ್ಳವುಗಳಾಗಿವೆ. ಇತರ ಸರಕಾರಗಳು ಜೇಡಿಮಣ್ಣಿನಂತಿವೆ. ಯಾವ ರೀತಿಯಲ್ಲಿ? ದಾನಿಯೇಲನು ಜೇಡಿಮಣ್ಣನ್ನು “ಮಾನವಕುಲದ ಸಂತತಿ”ಯೊಂದಿಗೆ ಜೊತೆಗೂಡಿಸುತ್ತಾನೆ. (ದಾನಿಯೇಲ 2:43) ಮಾನವಕುಲದ ಸಂತತಿಯವರು ಯಾವುದರಿಂದ ಮಾಡಲ್ಪಟ್ಟಿದ್ದಾರೋ ಆ ಜೇಡಿಮಣ್ಣಿನ ದುರ್ಬಲ ಗುಣಗಳು ಮಾನವರಲ್ಲಿ ಇರುವುದಾದರೂ, ತಮ್ಮ ಮೇಲೆ ಅಧಿಕಾರ ನಡೆಸುತ್ತಿರುವ ಸರಕಾರಗಳಲ್ಲಿ ತಮ್ಮ ಅಭಿಪ್ರಾಯಗಳೂ ಸೇರಿರಬೇಕು ಎಂದು ಬಯಸುವ ಸಾಮಾನ್ಯ ಜನರ ಬೇಡಿಕೆಗಳಿಗೆ, ಕಬ್ಬಿಣದಂತಹ ಪ್ರಬಲ​ವಾದ ಆಳ್ವಿಕೆಗಳು ಸಹ ಕಿವಿಗೊಡುವ ಹಂಗಿಗೊಳಗಾಗಿವೆ. (ಯೋಬ 10:⁠9) ಆದರೆ, ಕಬ್ಬಿಣವನ್ನು ಜೇಡಿಮಣ್ಣಿನೊಂದಿಗೆ ಒಂದುಗೂಡಿಸುವುದು ಅಸಾಧ್ಯವಾಗಿರುವಂತೆಯೇ, ನಿರಂಕುಶ ಪ್ರಭುತ್ವ ಹಾಗೂ ಸಾಮಾನ್ಯ ಜನರ ನಡುವೆ ಹೊಂದಾಣಿಕೆಯನ್ನು ಸ್ಥಾಪಿಸುವುದು ಅಸಾಧ್ಯವಾಗಿದೆ. ಆ ಪ್ರತಿಮೆಯು ಸಂಪೂರ್ಣವಾಗಿ ಅಳಿದುಹೋಗುವ ಸಮಯದಷ್ಟಕ್ಕೆ, ರಾಜಕೀಯ ರೀತಿಯಲ್ಲಿ ಲೋಕವು ಛಿದ್ರಗೊಳ್ಳುತ್ತದೆ ಎಂಬುದಂತೂ ಖಂಡಿತ!

29 ಕಾಲು ಹಾಗೂ ಬೆರಳುಗಳ ವಿಭಾಗಿತ ಸ್ಥಿತಿಯು, ಇಡೀ ಪ್ರತಿಮೆಯು ಕುಸಿದು ಬೀಳುವಂತೆ ಮಾಡುವುದೊ? ಆ ಪ್ರತಿಮೆಗೆ ಏನು ಸಂಭವಿಸುವುದು?

ಒಂದು ನಾಟಕೀಯ ಪರಮಾವಧಿ!

30. ನೆಬೂಕದ್ನೆಚ್ಚರನ ಕನಸಿನ ಪರಮಾವಧಿಯನ್ನು ವಿವರಿಸಿರಿ.

30 ಕನಸಿನ ಪರಮಾವಧಿಯನ್ನು ಪರಿಗಣಿಸಿರಿ. ದಾನಿಯೇಲನು ಅರಸನಿಗೆ ಹೇಳಿದ್ದು: “ನೀನು ನೋಡುತ್ತಿರಲಾಗಿ [ಬೆಟ್ಟದೊಳಗಿಂದ] ಒಂದು ಗುಂಡು ಬಂಡೆಯು ಕೈಯಿಲ್ಲದೆ ಒಡೆಯಲ್ಪಟ್ಟು [ಸಿಡಿದು ಬಂದು] ಆ ಪ್ರತಿಮೆಯ ಕಬ್ಬಿಣಮಣ್ಣಿನ ಹೆಜ್ಜೆಗಳಿಗೆ ಬಡಿದು ಚೂರುಚೂರು ಮಾಡಿತು. ಆಗ ಕಬ್ಬಿಣಮಣ್ಣುತಾಮ್ರಬೆಳ್ಳಿಬಂಗಾರಗಳೆಲ್ಲವೂ ಪುಡಿಪುಡಿ​ಯಾಗಿ ಸುಗ್ಗಿಯ ಕಣಗಳ ಹೊಟ್ಟಿನಂತಾದವು; ಗಾಳಿಯು ತೂರಿಕೊಂಡು ಹೋಗಲು ಅವುಗಳಿಗೆ ನೆಲೆಯೇ ಇಲ್ಲವಾಯಿತು; ಪ್ರತಿಮೆಗೆ ಬಡಿದ ಆ ಬಂಡೆಯು ಮಹಾ ಪರ್ವತವಾಗಿ ಲೋಕದಲ್ಲೆಲ್ಲಾ ತುಂಬಿಕೊಂಡಿತು.”​—⁠ದಾನಿಯೇಲ 2:​34, 35.

31, 32. ನೆಬೂಕದ್ನೆಚ್ಚರನ ಕನಸಿನ ಕೊನೆಯ ಭಾಗದ ವಿಷಯದಲ್ಲಿ ಏನು ಮುಂತಿಳಿಸಲ್ಪಟ್ಟಿತ್ತು?

31 ಇದಕ್ಕೆ ವಿವರಣೆ ನೀಡುತ್ತಾ, ಪ್ರವಾದನೆಯು ಹೀಗೆ ಮುಂದುವರಿಯಿತು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು. [ಬೆಟ್ಟದೊಳಗಿಂದ] ಒಂದು ಗುಂಡು ಬಂಡೆಯು ಕೈಯಿಲ್ಲದೆ ಒಡೆಯಲ್ಪಟ್ಟು ಕಬ್ಬಿಣತಾಮ್ರಮಣ್ಣುಬೆಳ್ಳಿಬಂಗಾರಗಳನ್ನು ಚೂರು ಚೂರು ಮಾಡಿದ್ದು ನಿನ್ನ ಕಣ್ಣಿಗೆ ಬಿತ್ತಲ್ಲಾ; ಇದರಿಂದ ಪರಲೋಕ​ದೇವರು ಮುಂದೆ ನಡೆಯುವ ವಿಷಯಗಳನ್ನು ರಾಜನಿಗೆ ತಿಳಿಯಪಡಿಸಿದ್ದಾನೆ; ಕನಸು ನಿಜ, ಅದರ ಅರ್ಥವು ನಂಬತಕ್ಕದು.”​—⁠ದಾನಿಯೇಲ 2:​44, 45.

32 ತನ್ನ ಕನಸು ಜ್ಞಾಪಕಕ್ಕೆ ತರಲ್ಪಟ್ಟು, ವಿವರಿಸಲ್ಪಟ್ಟಿದೆ ಎಂಬುದನ್ನು ಮನಗಂಡು, ಕೇವಲ ದಾನಿಯೇಲನ ದೇವರು “ರಾಜರ ಒಡೆಯನೂ ರಹಸ್ಯಗಳನ್ನು ವ್ಯಕ್ತಗೊಳಿಸುವವನೂ ಆಗಿದ್ದಾನೆ” ಎಂಬುದನ್ನು ನೆಬೂಕದ್ನೆಚ್ಚರನು ಒಪ್ಪಿಕೊಂಡನು. ದಾನಿಯೇಲನಿಗೆ ಹಾಗೂ ಅವನ ಮೂವರು ಇಬ್ರಿಯ ಸಂಗಡಿಗರಿಗೆ ಅರಸನು ಇನ್ನೂ ಹೆಚ್ಚಿನ ಅಧಿಕಾರ ಸ್ಥಾನಗಳನ್ನು ಕೊಟ್ಟನು. (ದಾನಿಯೇಲ 2:​46-49) ಆದರೆ, ದಾನಿಯೇಲನ ‘ನಂಬತಕ್ಕ ಅರ್ಥವಿವರಣೆಗೆ’ ಆಧುನಿಕ ದಿನದಲ್ಲಿ ಯಾವ ಸೂಚಿತಾರ್ಥವಿದೆ?

‘ಒಂದು ಪರ್ವತವು ಲೋಕದಲ್ಲೆಲ್ಲಾ ತುಂಬಿಕೊಳ್ಳುತ್ತದೆ’

33. ಯಾವ “ಬೆಟ್ಟ”ದೊಳಗಿಂದ “ಬಂಡೆಯು” ಸಿಡಿದು ಬಂತು, ಮತ್ತು ಇದು ಯಾವಾಗ ಹಾಗೂ ಹೇಗೆ ಸಂಭವಿಸಿತು?

33 ಇಸವಿ 1914ರ ಅಕ್ಟೋಬರ್‌ ತಿಂಗಳಿನಲ್ಲಿ “ಜನಾಂಗಗಳ ನೇಮಿತ ಸಮಯಗಳು” ಕೊನೆಗೊಂಡಾಗ, “ಪರಲೋಕದ ದೇವರು” ತನ್ನ ಅಭಿಷಿಕ್ತ ಮಗನಾದ ಯೇಸು ಕ್ರಿಸ್ತನನ್ನು, ‘ರಾಜಾಧಿರಾಜ ಹಾಗೂ ಕರ್ತರ ಕರ್ತ’ನೋಪಾದಿ ಸಿಂಹಾಸನಕ್ಕೇರಿಸುವ ಮೂಲಕ ಸ್ವರ್ಗೀಯ ರಾಜ್ಯವನ್ನು ಸ್ಥಾಪಿಸಿದನು. * (ಲೂಕ 21:​24, NW; ಪ್ರಕಟನೆ 12:1-⁠5; 19:16) ಹೀಗೆ ಮೆಸ್ಸೀಯ ರಾಜ್ಯ ಎಂಬ “ಬಂಡೆಯು,” ಯೆಹೋವನ ವಿಶ್ವ ಪರಮಾಧಿಕಾರದ “ಬೆಟ್ಟದೊಳಗಿಂದ” ಒಡೆಯಲ್ಪಟ್ಟು ಸಿಡಿದು ಬಂದದ್ದು ಮಾನವ ಕೈಗಳಿಂದ ಅಲ್ಲ, ಬದಲಾಗಿ ದೈವಿಕ ಶಕ್ತಿಯಿಂದಲೇ. ಈ ಸ್ವರ್ಗೀಯ ಸರಕಾರವು ಯೇಸು ಕ್ರಿಸ್ತನ ವಶದಲ್ಲಿದೆ, ಮತ್ತು ದೇವರು ಅವನಿಗೆ ಅಮರತ್ವವನ್ನು ದಯಪಾಲಿಸಿದ್ದಾನೆ. (ರೋಮಾಪುರ 6:9; 1 ತಿಮೊಥೆಯ 6:​15, 16) ಆದುದರಿಂದ, ಯೆಹೋವನ ವಿಶ್ವ ಪರಮಾಧಿಕಾರದ ಒಂದು ಅಭಿವ್ಯಕ್ತಿಯಾಗಿರುವ “ನಮ್ಮ ಕರ್ತನ [ದೇವರ] ಹಾಗೂ ಆತನ ಕ್ರಿಸ್ತನ ಈ ರಾಜ್ಯವು,” ಎಂದೂ ಬೇರೆ ಯಾವ ಜನಾಂಗಕ್ಕೂ ದಾಟಿಸಲ್ಪಡುವುದಿಲ್ಲ. ಅದು ಶಾಶ್ವತ​ವಾಗಿ ನಿಲ್ಲುವುದು.​—⁠ಪ್ರಕಟನೆ 11:⁠15, NW.

34. “ಆ ರಾಜರ ಕಾಲದಲ್ಲಿ” ದೇವರ ರಾಜ್ಯವು ಹೇಗೆ ಸ್ಥಾಪಿಸಲ್ಪಟ್ಟಿತು?

34 “ಆ ರಾಜರ ಕಾಲದಲ್ಲಿ” ದೇವರ ರಾಜ್ಯವು ಸ್ಥಾಪಿತವಾಯಿತು. (ದಾನಿಯೇಲ 2:44) ಕೇವಲ ಪ್ರತಿಮೆಯ ಹತ್ತು ಬೆರಳುಗಳಿಂದ ಸೂಚಿಸಲ್ಪಟ್ಟ ರಾಜರ ಬಗ್ಗೆ ಇದು ಮಾತಾಡುತ್ತಿಲ್ಲ, ಬದಲಾಗಿ ಆ ಪ್ರತಿಮೆಯ ಕಬ್ಬಿಣ, ತಾಮ್ರ, ಬೆಳ್ಳಿ, ಹಾಗೂ ಬಂಗಾರದ ಭಾಗಗಳಿಂದ ಸಂಕೇತಿಸಲ್ಪಟ್ಟ ರಾಜರುಗಳನ್ನು ಸಹ ಇದು ಒಳಗೂಡಿದೆ. ಈಗಾಗಲೇ ಬಾಬೆಲ್‌, ಪಾರಸಿಯ, ಗ್ರೀಕ್‌, ಹಾಗೂ ರೋಮನ್‌ ಸಾಮ್ರಾಜ್ಯಗಳು ಲೋಕ ಶಕ್ತಿ​ಗಳೋಪಾದಿ ಅಳಿದುಹೋಗಿದ್ದವಾದರೂ, 1914ರಲ್ಲಿ ಆ ಸಾಮ್ರಾಜ್ಯಗಳ ಕೆಲವು ಅಂಶಗಳು ಇನ್ನೂ ಅಸ್ತಿತ್ವದಲ್ಲಿದ್ದವು. ಆ ಸಮಯದಲ್ಲಿ, ಟರ್ಕಿಷ್‌ ಆಟೊಮನ್‌ ಸಾಮ್ರಾಜ್ಯವು ಬಾಬೆಲಿನ ಪ್ರದೇಶವನ್ನು ಆಕ್ರಮಿಸಿತ್ತು, ಹಾಗೂ ಪರ್ಷಿಯ (ಇರಾನ್‌), ಗ್ರೀಸ್‌ ಮತ್ತು ಇಟಲಿಯ ರೋಮ್‌ನಲ್ಲಿ ರಾಷ್ಟ್ರೀಯ ಸರಕಾರಗಳು ಆಳ್ವಿಕೆ ನಡಿಸುತ್ತಿದ್ದವು.

35. ಆ “ಬಂಡೆಯು” ಯಾವಾಗ ಪ್ರತಿಮೆಗೆ ಬಡಿಯುವುದು, ಮತ್ತು ಆ ಪ್ರತಿಮೆಯು ಹೇಗೆ ಸಂಪೂರ್ಣವಾಗಿ ತೊಲಗಿಸಲ್ಪಡುವುದು?

35 ಬೇಗನೆ ದೇವರ ಸ್ವರ್ಗೀಯ ರಾಜ್ಯವು, ಆ ಪ್ರತಿಮೆಯ ಕಾಲುಗಳಿಗೆ ಬಡಿಯುವುದು. ಇದರ ಫಲಿತಾಂಶವಾಗಿ, ಅದರಿಂದ ಚಿತ್ರಿಸಲ್ಪಟ್ಟ ಎಲ್ಲ ರಾಜ್ಯಗಳು ಚೂರುಚೂರಾಗುವವು, ಮತ್ತು ದೇವರ ರಾಜ್ಯವು ಅವುಗಳನ್ನು ಸಂಪೂರ್ಣವಾಗಿ ಅಂತ್ಯಗೊಳಿಸುವುದು. ವಾಸ್ತವದಲ್ಲಿ, “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧ”ದಲ್ಲಿ, ಆ “ಬಂಡೆಯು” ಎಷ್ಟು ಬಲವಾಗಿ ಬಡಿಯುವುದೆಂದರೆ, ಈ ಸಾಂಕೇತಿಕ ಪ್ರತಿಮೆಯು ಪುಡಿಪುಡಿ ಮಾಡಲ್ಪಡುವುದು ಮತ್ತು ದೇವರ ಆಕ್ರಮಣದ ಚಂಡಮಾರುತವು ಅದನ್ನು ಸುಗ್ಗಿಯ ಕಣಗಳ ಹೊಟ್ಟಿನಂತೆ ತೂರಿಕೊಂಡು ಹೋಗುವುದು. (ಪ್ರಕಟನೆ 16:​14, 16) ಆಗ, ಮಹಾ ಪರ್ವತವಾಗಿ ಲೋಕದಲ್ಲೆಲ್ಲಾ ತುಂಬಿಕೊಂಡ ಆ ಬಂಡೆಯಂತೆ, ದೇವರ ರಾಜ್ಯವು “ಲೋಕದಲ್ಲೆಲ್ಲಾ” ಪ್ರಭಾವ ಬೀರುವ ಸರಕಾರೀ ಪರ್ವತವಾಗಿ ಮಾರ್ಪಡುವುದು.​—⁠ದಾನಿಯೇಲ 2:⁠35.

36. ಮೆಸ್ಸೀಯ ರಾಜ್ಯವನ್ನು ಒಂದು ಸ್ಥಿರವಾದ ಸರಕಾರವೆಂದು ಏಕೆ ಕರೆಯಸಾಧ್ಯವಿದೆ?

36 ಮೆಸ್ಸೀಯ ರಾಜ್ಯವು ಸ್ವರ್ಗೀಯ ರಾಜ್ಯವಾಗಿರುವುದಾದರೂ, ಭೂಮಿಯಲ್ಲಿರುವ ಎಲ್ಲ ವಿಧೇಯ ನಿವಾಸಿಗಳಿಗೆ ಆಶೀರ್ವಾದವನ್ನು ತರಲಿಕ್ಕಾಗಿ, ಅದು ತನ್ನ ಅಧಿಕಾರವನ್ನು ನಮ್ಮ ಭೂಮಿಯ ಕಡೆಗೂ ವಿಸ್ತರಿಸುವುದು. ಈ ಅಚಲ ಸರಕಾರವು “ಎಂದಿಗೂ ಅಳಿಯದು” ಅಥವಾ “ಬೇರೆ ಜನಾಂಗಕ್ಕೆ ಕದಲಿಹೋಗದು.” ಮೃತಪಡುವ ಮಾನವ ಅರಸರ ರಾಜ್ಯಗಳಿಗೆ ಅಸದೃಶವಾಗಿ, ಇದು ಸದಾಕಾಲಕ್ಕೂ “ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಶಾಶ್ವತವಾಗಿ ಈ ರಾಜ್ಯದ ಪ್ರಜೆಗಳಲ್ಲಿ ಒಬ್ಬರಾಗುವ ಸುಯೋಗ ನಿಮಗೂ ದೊರಕಲಿ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 33 ಈ ಪುಸ್ತಕದ 6ನೆಯ ಅಧ್ಯಾಯವನ್ನು ನೋಡಿರಿ.

ನೀವೇನನ್ನು ಗ್ರಹಿಸಿದಿರಿ?

• ನೆಬೂಕದ್ನೆಚ್ಚರನ ಕನಸಿನ ಭಾರೀ ಪ್ರತಿಮೆಯ ವಿವಿಧ ಭಾಗ​ಗಳಿಂದ ಯಾವ ಲೋಕ ಶಕ್ತಿಗಳು ಪ್ರತಿನಿಧಿಸಲ್ಪಟ್ಟಿವೆ?

• ಜೇಡಿಮಣ್ಣಿನೊಂದಿಗೆ ಕಬ್ಬಿಣವು ಮಿಶ್ರವಾಗಿದ್ದ ಕಾಲುಗಳು ಹಾಗೂ ಬೆರಳುಗಳು, ಯಾವ ರೀತಿಯ ಲೋಕ ಸನ್ನಿವೇಶವನ್ನು ಪ್ರತಿನಿಧಿಸುತ್ತವೆ?

• ಯಾವಾಗ ಹಾಗೂ ಯಾವ “ಬೆಟ್ಟ”ದೊಳಗಿಂದ “ಬಂಡೆಯು” ಸಿಡಿದು ಬಂತು?

• “ಆ ಬಂಡೆಯು” ಯಾವಾಗ ಪ್ರತಿಮೆಗೆ ಬಡಿಯುವುದು?

[ಅಧ್ಯಯನ ಪ್ರಶ್ನೆಗಳು]

[ಪುಟ 74-78 ರಲ್ಲಿರುವ ಚೌಕ/ಚಿತ್ರಗಳು]

 

ಒಬ್ಬ ಯುದ್ಧವೀರ ಅರಸನು ಒಂದು ಸಾಮ್ರಾಜ್ಯವನ್ನು ಕಟ್ಟುತ್ತಾನೆ

ಬಾಬೆಲಿನ ಯುವರಾಜನೂ ಅವನ ಸೈನಿಕರೂ ಸೇರಿ, ಸಿರಿಯದ ಕರ್ಕೆಮೀಷಿನ ಬಳಿಯಲ್ಲಿ ಫರೋಹ ನೆಕೋವಿನ ಐಗುಪ್ತ್ಯ ಸೈನ್ಯಗಳನ್ನು ಧ್ವಂಸಮಾಡಿಬಿಡುತ್ತಾರೆ. ಸೋತುಹೋದ ಐಗುಪ್ತ್ಯರು, ದಕ್ಷಿಣದ ಕಡೆಗಿರುವ ಐಗುಪ್ತಕ್ಕೆ ಪಲಾಯನಗೈಯಲಾಗಿ, ಬಾಬೆಲಿನವರು ಅವರನ್ನು ಬೆನ್ನಟ್ಟುತ್ತಾ ಹೋಗುತ್ತಾರೆ. ಆದರೆ ಬಾಬೆಲಿನಿಂದ ಬಂದ ವಾರ್ತೆಯು, ವಿಜೇತ ರಾಜಕುಮಾರನು ತನ್ನ ಬೆನ್ನಟ್ಟುವಿಕೆಯನ್ನು ನಿಲ್ಲಿಸುವಂತೆ ಮಾಡುತ್ತದೆ. ನೆಬೂಕದ್ನೆಚ್ಚರನ ತಂದೆಯಾಗಿದ್ದ ನೆಬೊಪೊಲಾಸರನು ಮೃತಪಟ್ಟಿದ್ದಾನೆ ಎಂಬುದೇ ಆ ವಾರ್ತೆಯಾಗಿತ್ತು. ಬಂದಿವಾಸಿಗಳನ್ನು ಹಾಗೂ ಕೊಳ್ಳೆಹೊಡೆದ ವಸ್ತುಗಳನ್ನು ಬಾಬೆಲಿಗೆ ತರುವ ಜವಾಬ್ದಾರಿಯನ್ನು ತನ್ನ ಸೇನಾಧಿಪತಿಗಳಿಗೆ ವಹಿಸಿ, ಆ ಕೂಡಲೆ ನೆಬೂಕದ್ನೆಚ್ಚರನು ಸ್ವದೇಶಕ್ಕೆ ಹಿಂದಿರುಗಿ, ತನ್ನ ತಂದೆಯ ಸಿಂಹಾಸನವೇರುತ್ತಾನೆ.

ಹೀಗೆ ನೆಬೂಕದ್ನೆಚ್ಚರನು ಸಾ.ಶ.ಪೂ. 624ನೆಯ ವರ್ಷದಲ್ಲಿ ಬಾಬೆಲಿನ ಸಿಂಹಾಸನವನ್ನು ಏರಿ, ನವಬಾಬೆಲ್‌ ಸಾಮ್ರಾಜ್ಯದ ಎರಡನೆಯ ಅರಸನಾದನು. ಅವನ ಆಳ್ವಿಕೆಯ 43 ವರ್ಷಗಳ ಸಮಯಾವಧಿಯಲ್ಲಿ ಅವನು, ಒಂದುಕಾಲದಲ್ಲಿ ಅಶ್ಶೂರ್ಯ ಲೋಕ ಶಕ್ತಿಯ ವಶದಲ್ಲಿದ್ದ ಕ್ಷೇತ್ರಗಳನ್ನು ಸ್ವಾಧೀನಪಡಿಸಿಕೊಂಡನು. ಉತ್ತರ ಭಾಗದಲ್ಲಿ ಸಿರಿಯದಿಂದ ಹಿಡಿದು ಪಶ್ಚಿಮದಲ್ಲಿನ ಪ್ಯಾಲೆಸ್ಟೀನ್‌ ಹಾಗೂ ಐಗುಪ್ತದ ಗಡಿಯ ತನಕದ ಕ್ಷೇತ್ರ​ಗಳನ್ನು ವಶಪಡಿಸಿಕೊಂಡು ತನ್ನ ಆಧಿಪತ್ಯವನ್ನು ಇನ್ನೂ ವಿಸ್ತರಿಸಿದನು.​—⁠ನಕ್ಷೆ ನೋಡಿ.

ತನ್ನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ (ಸಾ.ಶ.ಪೂ. 620) ನೆಬೂಕದ್ನೆಚ್ಚರನು, ಯೆಹೂದವನ್ನು ತನ್ನ ಸಾಮಂತ ರಾಜ್ಯವಾಗಿ ಮಾಡಿಕೊಂಡನು. (2 ಅರಸು 24:⁠1) ಮೂರು ವರ್ಷಗಳ ಬಳಿಕ, ಯೆಹೂದ ರಾಜ್ಯವು ದಂಗೆಯೆದ್ದದ್ದರಿಂದ, ಬಾಬೆಲು ಯೆರೂಸಲೇಮಿಗೆ ಮುತ್ತಿಗೆ ಹಾಕಿತು. ನೆಬೂಕದ್ನೆಚ್ಚರನು ಯೆಹೋಯಾಖೀನನನ್ನು, ದಾನಿಯೇಲನನ್ನು, ಹಾಗೂ ಇನ್ನಿತರರನ್ನು ಬಾಬೆಲಿಗೆ ಬಂದಿವಾಸಿಗಳಾಗಿ ಕರೆದೊಯ್ದನು. ಅರಸನು ಯೆಹೋವನ ದೇವಾಲಯದ ಪಾತ್ರೆಗಳನ್ನು ಸಹ ತನ್ನೊಂದಿಗೆ ಕೊಂಡೊಯ್ದನು. ಅವನು ಯೆಹೋಯಾಖೀನನ ಚಿಕ್ಕಪ್ಪನಾದ ಚಿದ್ಕೀಯನನ್ನು ಯೆಹೂದದ ಸಾಮಂತ ರಾಜನನ್ನಾಗಿ ಮಾಡಿದನು.​—⁠2 ಅರಸು 24:​2-17; ದಾನಿಯೇಲ 1:​6, 7.

ಸ್ವಲ್ಪ ಸಮಯಾನಂತರ, ಐಗುಪ್ತದೊಡನೆ ಸ್ನೇಹ ಬೆಳೆಸುತ್ತಾ, ಚಿದ್ಕೀಯನು ಸಹ ನೆಬೂಕದ್ನೆಚ್ಚರನಿಗೆ ವಿರುದ್ಧ ತಿರುಗಿಬಿದ್ದನು. ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಪುನಃ ಮುತ್ತಿಗೆ​ಹಾಕಿದನು, ಮತ್ತು ಸಾ.ಶ.ಪೂ. 607ರಲ್ಲಿ, ಅವನು ಯೆರೂಸಲೇಮಿನ ಗೋಡೆಗಳನ್ನು ಬಿರುಕುಮಾಡಿ, ದೇವಾಲಯವನ್ನು ಸುಟ್ಟುಹಾಕಿ, ಪಟ್ಟಣವನ್ನು ಸಂಪೂರ್ಣವಾಗಿ ನಾಶಮಾಡಿದನು. ಅವನು ಚಿದ್ಕೀಯನ ಪುತ್ರರಲ್ಲಿ ಎಲ್ಲರನ್ನೂ ವಧಿಸಿ, ಚಿದ್ಕೀಯನನ್ನು ಕುರುಡುಗೊಳಿಸಿ, ಅವನನ್ನು ಬಾಬೆಲಿಗೆ ಸೆರೆಯಾಳಾಗಿ ಕರೆದೊಯ್ಯಲಿಕ್ಕಾಗಿ ಬೇಡಿಹಾಕಿಸಿದನು. ನೆಬೂಕದ್ನೆಚ್ಚರನು ಅಧಿಕಾಂಶ ಮಂದಿಯನ್ನು ಬಂದಿವಾಸಿಗಳಾಗಿ ಕೊಂಡೊಯ್ದು, ದೇವಾಲಯದ ಉಳಿದ ಪಾತ್ರೆಗಳನ್ನು ಬಾಬೆಲಿಗೆ ರವಾನಿಸಿದನು. “ಹೀಗೆ ಯೆಹೂದ್ಯರು ಸೆರೆಯವರಾಗಿ ತಮ್ಮ ದೇಶವನ್ನು ಬಿಟ್ಟು ಹೋಗಬೇಕಾಯಿತು.”​—⁠2 ಅರಸು 24:​18–25:⁠21.

ನೆಬೂಕದ್ನೆಚ್ಚರನು ತೂರ್‌ ದೇಶಕ್ಕೆ 13 ವರ್ಷಗಳ ಕಾಲ ಮುತ್ತಿಗೆ ಹಾಕಿ, ಅದನ್ನು ಸಹ ವಶಪಡಿಸಿಕೊಂಡನು. ಮುತ್ತಿಗೆಯ ಸಮಯದಲ್ಲಿ, ನೆಬೂಕದ್ನೆಚ್ಚರನ ಸೈನಿಕರ ತಲೆಗಳು ಶಿರಸ್ತ್ರಾಣಗಳ ತಿಕ್ಕಾಟದಿಂದ “ಬೋಳಾ”ಗಿದ್ದವು, ಹಾಗೂ ಮುತ್ತಿಗೆಯ ನಿರ್ಮಾಣ ಕೆಲಸಗಳಲ್ಲಿ ಉಪಯೋಗಿಸಲ್ಪಟ್ಟ ಸಾಮಗ್ರಿಗಳ ಭಾರವನ್ನು ಹೊತ್ತು ಹೊತ್ತು ಅವರ ಭುಜಗಳು “ಸವೆದುಹೋಗಿದ್ದವು.” (ಯೆಹೆಜ್ಕೇಲ 29:​18, NW) ಕಟ್ಟಕಡೆಗೆ, ತೂರ್‌ ದೇಶವು ಬಾಬೆಲಿನ ಸೈನಿಕರಿಗೆ ಶರಣಾಗತವಾಯಿತು.

ಬಾಬೆಲಿನ ಅರಸನು ಮಿಲಿಟರಿ ಯುದ್ಧನಿರ್ವಹಣೆಯಲ್ಲಿ ಚಾಣಾಕ್ಷನಾಗಿದ್ದನು ಎಂಬುದು ಸ್ಪಷ್ಟವಾಗಿ ಕಂಡುಬರುತ್ತದೆ. ಕೆಲವು ಸಾಹಿತ್ಯ ಕೃತಿಗಳು, ವಿಶೇಷವಾಗಿ ಬಾಬೆಲಿನ ಮೂಲದಿಂದ ಬಂದವುಗಳು, ಅವನೊಬ್ಬ ನಿಷ್ಪಕ್ಷಪಾತಿ ಅರಸನಾಗಿದ್ದನು ಎಂದು ವರ್ಣಿಸುತ್ತವೆ. ನೆಬೂಕದ್ನೆಚ್ಚರನು ನಿಷ್ಪಕ್ಷಪಾತಿಯಾಗಿದ್ದನು ಎಂದು ಶಾಸ್ತ್ರವಚನಗಳು ನಿರ್ದಿಷ್ಟವಾಗಿ ಹೇಳುವುದಿಲ್ಲವಾದರೂ, ಚಿದ್ಕೀಯನು ಅವನ ವಿರುದ್ಧ ತಿರುಗಿಬಿದ್ದರೂ, ‘ಅವನು ಬಾಬೆಲಿನ ಅರಸನ ಸರದಾರರ ಮೊರೆಹೊಕ್ಕರೆ’ ಅವನಿಗೆ ಒಳಿತಾಗುವುದು ಎಂದು ಪ್ರವಾದಿಯಾದ ಯೆರೆಮೀಯನು ಹೇಳಿದನು. (ಯೆರೆಮೀಯ 38:​17, 18) ಮತ್ತು ಯೆರೂಸಲೇಮಿನ ನಾಶನದ ಬಳಿಕ, ನೆಬೂಕದ್ನೆಚ್ಚರನು ಯೆರೆಮೀಯನನ್ನು ಗೌರವದಿಂದ ಉಪಚರಿಸಿದನು. ಯೆರೆಮೀಯನ ಕುರಿತು ರಾಜನು ಆಜ್ಞಾಪಿಸಿದ್ದು: “ಅವನನ್ನು ಕರೆಸಿಕೊಂಡು ಏನೂ ಕೇಡುಮಾಡದೆ ಅವನು ಬೇಡುವದನ್ನೆಲ್ಲಾ ನೆರವೇರಿಸಿ ಕಟಾಕ್ಷಿಸು.”​—⁠ಯೆರೆಮೀಯ 39:11,⁠12; 40:​1-4.

ಒಬ್ಬ ಆಡಳಿತಗಾರನೋಪಾದಿ ನೆಬೂಕದ್ನೆಚ್ಚರನು, ದಾನಿಯೇಲ ಹಾಗೂ ಹನನ್ಯ, ಮಿಶಾಯೇಲ, ಹಾಗೂ ಅಜರ್ಯ ಎಂಬ ಇಬ್ರಿಯ ಹೆಸರುಗಳಿದ್ದ ಅವನ ಮೂವರು ಸಂಗಡಿಗರಾದ ಶದ್ರಕ್‌, ಮೇಶಕ್‌, ಹಾಗೂ ಅಬೇದ್‌ನೆಗೋರ ಗುಣಗಳು ಹಾಗೂ ಸಾಮರ್ಥ್ಯಗಳನ್ನು ಅತಿ ಬೇಗನೆ ಗುರುತಿಸಿದನು. ಆದುದರಿಂದ ಅರಸನು ಅವರನ್ನು ತನ್ನ ರಾಜ್ಯದಲ್ಲಿ ಜವಾಬ್ದಾರಿಯುತವಾದ ಸ್ಥಾನಗಳಲ್ಲಿ ಇರಿಸಿದನು.​—⁠ದಾನಿಯೇಲ 1:​6, 7, 19-21; 2:⁠49.

ನೆಬೂಕದ್ನೆಚ್ಚರನು, ಬಾಬೆಲಿನ ಮುಖ್ಯ ದೇವತೆಯಾಗಿದ್ದ ಮಾರ್ದೂಕನ ಭಕ್ತನಾಗಿದ್ದನು. ತನ್ನ ಎಲ್ಲ ವಿಜಯಗಳಿಗಾಗಿ ಅರಸನು ಮಾರ್ದೂಕನಿಗೇ ಕೀರ್ತಿ ಸಲ್ಲಿಸುತ್ತಿದ್ದನು. ಬಾಬೆಲಿನಲ್ಲಿ ಅವನು ಮಾರ್ದೂಕನ ಹಾಗೂ ಇತರ ದೇವದೇವತೆಗಳ ದೇವಾಲಯಗಳನ್ನು ಕಟ್ಟಿಸಿ, ಅವುಗಳನ್ನು ಹೆಚ್ಚೆಚ್ಚು ಅಂದಗೊಳಿಸಿದನು. ದೂರಾ ಬೈಲಿನಲ್ಲಿ ಸ್ಥಾಪಿಸಲ್ಪಟ್ಟ ಬಂಗಾರದ ಪ್ರತಿಮೆಯು ಸಹ ಮಾರ್ದೂಕನಿಗೋಸ್ಕರ ಪ್ರತಿಷ್ಠಾಪಿಸಲ್ಪಟ್ಟದ್ದಾಗಿದ್ದಿರಬಹುದು. ಮತ್ತು ನೆಬೂಕದ್ನೆಚ್ಚರನು ತನ್ನ ಮಿಲಿಟರಿ ಚಲನೆಗಳನ್ನು ಯೋಜಿಸಲಿಕ್ಕಾಗಿ, ಅತ್ಯಧಿಕವಾಗಿ ಕಣಿಕೇಳುವಿಕೆಯನ್ನೇ ಅವಲಂಬಿಸಿದ್ದಂತೆ ತೋರುತ್ತದೆ.

ಆ ಸಮಯದ ಅತಿ ದೊಡ್ಡ ಗೋಡೆಗಳುಳ್ಳ ಪಟ್ಟಣವಾಗಿದ್ದ ಬಾಬೆಲನ್ನು ಪುನಃ ಕಟ್ಟಿದ್ದರ ಬಗ್ಗೆಯೂ ನೆಬೂಕದ್ನೆಚ್ಚರನಿಗೆ ಹೆಮ್ಮೆಯಿತ್ತು. ತನ್ನ ತಂದೆಯು ಕಟ್ಟಿಸಲು ಆರಂಭಿಸಿದ್ದ ಬೃಹದಾಕಾರದ ಎರಡು ಗೋಡೆಗಳನ್ನು ಕಟ್ಟಿಸಿ ಪೂರ್ಣಗೊಳಿಸುವ ಮೂಲಕ, ನೆಬೂಕದ್ನೆಚ್ಚರನು ಆ ಪಟ್ಟಣದ ರಾಜಧಾನಿಯನ್ನು ದುರ್ಗಮವಾದದ್ದಾಗಿ ಮಾಡಿದನು. ನೆಬೂಕದ್ನೆಚ್ಚರನು ಪಟ್ಟಣದ ಮಧ್ಯಭಾಗದಲ್ಲಿದ್ದ ಒಂದು ಹಳೆಯ ಅರಮನೆಯನ್ನು ಸರಿಪಡಿಸಿದನು ಮತ್ತು ಪಟ್ಟಣದಲ್ಲಿದ್ದ ಅರಮನೆಯಿಂದ ಉತ್ತರಕ್ಕೆ ಸುಮಾರು ಎರಡು ಕಿಲೊಮೀಟರುಗಳಷ್ಟು ದೂರದಲ್ಲಿ ಒಂದು ಬೇಸಗೆ ಅರಮನೆಯನ್ನೂ ಕಟ್ಟಿಸಿದನು. ಸ್ವದೇಶದ ಗಿರಿವನಗಳಿಗಾಗಿ ಹಂಬಲಿಸುತ್ತಿದ್ದ ತನ್ನ ಮೇದ್ಯ ರಾಣಿಯ ಆಸೆಯನ್ನು ಪೂರೈಸಲಿಕ್ಕಾಗಿ, ನೆಬೂಕದ್ನೆಚ್ಚರನು ತೂಗುದೋಟವನ್ನು ಕಟ್ಟಿಸಿದನೆಂದು ಹೇಳಲಾಗುತ್ತದೆ. ಮತ್ತು ಇದನ್ನು ಪುರಾತನ ಲೋಕದ ಏಳು ಅದ್ಭುತಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ.

ಒಂದು ದಿನ ಬಾಬೆಲಿನ ಅರಮನೆಯ ಮೇಲೆ ತಿರುಗಾಡುತ್ತಿದ್ದಾಗ, “ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯಬಲದಿಂದ ರಾಜನಿವಾಸಕ್ಕಾಗಿ ನಾನು ಕಟ್ಟಿಸಿಕೊಂಡಿರುವದು ಇಗೋ, ಮಹಾಪಟ್ಟಣವಾದ ಈ ಬಾಬೆಲ್‌” ಎಂದು ಅರಸನಾದ ನೆಬೂಕದ್ನೆಚ್ಚರನು ಜಂಬಕೊಚ್ಚಿಕೊಂಡನು. “ಈ ಮಾತು ರಾಜನ ಬಾಯಿಂದ ಹೊರಡುತ್ತಿರುವಾಗ”ಲೇ ಅವನಿಗೆ ಹುಚ್ಚುಹಿಡಿಯಿತು. ದಾನಿಯೇಲನು ಮುಂತಿಳಿಸಿದ್ದಂತೆಯೇ, ಏಳು ವರ್ಷಗಳ ವರೆಗೆ ಆಳ್ವಿಕೆಯನ್ನು ನಡೆಸಲು ಅವನು ಅಸಮರ್ಥನಾಗಿದ್ದು, ಅವನು ಪಶುಗಳಂತೆ ಹುಲ್ಲು ತಿಂದನು. ಆ ಕಾಲಾವಧಿಯು ಕಳೆದ ಬಳಿಕ, ನೆಬೂಕದ್ನೆಚ್ಚರನಿಗೆ ರಾಜ್ಯವು ಪುನಃ ದೊರಕಿತು, ಮತ್ತು ಅವನು ಸಾ.ಶ.ಪೂ. 582ರಲ್ಲಿ ಮರಣಹೊಂದುವ ತನಕ ಆಳ್ವಿಕೆ ನಡೆಸಿದನು.​—⁠ದಾನಿಯೇಲ 4:​30-36.

ನೀವೇನನ್ನು ಗ್ರಹಿಸಿದಿರಿ?

ನೆಬೂಕದ್ನೆಚ್ಚರನ ಕುರಿತು ಏನು ಹೇಳಸಾಧ್ಯವಿದೆ?

• ಒಬ್ಬ ಮಿಲಿಟರಿ ವ್ಯೂಹರಚಕನೋಪಾದಿ

• ಒಬ್ಬ ಆಡಳಿತಗಾರನೋಪಾದಿ

• ಮಾರ್ದೂಕನ ಒಬ್ಬ ಭಕ್ತನೋಪಾದಿ

• ಒಬ್ಬ ಕಟ್ಟಡ ನಿರ್ಮಾಪಕನೋಪಾದಿ

[ಭೂಪಟ]

(For fully formatted text, see publication)

ಬಾಬೆಲ್‌ ಸಾಮ್ರಾಜ್ಯ

ಕೆಂಪು ಸಮುದ್ರ

ಯೆರೂಸಲೇಮ್‌

ಯೂಫ್ರೇಟೀಸ್‌ ನದಿ

ಟೈಗ್ರಿಸ್‌ ನದಿ

ನಿನವೆ

ಸೂಸ

ಬಾಬೆಲ್‌

ಊರ್‌

[ಚಿತ್ರ]

ಆ ಕಾಲದ ಅತಿ ದೊಡ್ಡ ಗೋಡೆಗಳಿದ್ದ ಪಟ್ಟಣವಾದ ಬಾಬೆಲ್‌

[ಚಿತ್ರ]

ಘಟಸರ್ಪವು ಮಾರ್ದೂಕನ ಲಾಂಛನವಾಗಿತ್ತು

[ಚಿತ್ರ]

ಬಾಬೆಲಿನ ಜಗತ್ಪ್ರಸಿದ್ಧ ತೂಗುದೋಟ

[ಪುಟ 67 ರಲ್ಲಿರುವ ಚಿತ್ರ]

(For fully formatted text, see publication)

ದಾನಿಯೇಲನ ಪ್ರವಾದನೆಯ ಲೋಕ ಶಕ್ತಿಗಳು

ಭಾರೀ ಪ್ರತಿಮೆ (ದಾನಿಯೇಲ 2:​31-45)

ಬಾಬಿಲೋನಿಯ ಸಾ.ಶ.ಪೂ. 607ರಿಂದ

ಮೇದ್ಯಯಪಾರಸಿಯ ಸಾ.ಶ.ಪೂ. 539ರಿಂದ

ಗ್ರೀಸ್‌ ಸಾ.ಶ.ಪೂ. 331ರಿಂದ

ರೋಮ್‌ ಸಾ.ಶ.ಪೂ. 30ರಿಂದ

ಆ್ಯಂಗ್ಲೊ-ಅಮೆರಿಕನ್‌ ಲೋಕ ಶಕ್ತಿ ಸಾ.ಶ. 1763ರಿಂದ

ರಾಜಕೀಯವಾಗಿ ವಿಭಾಗಿತವಾಗಿರುವ ಲೋಕ ಅಂತ್ಯಕಾಲದಲ್ಲಿ

[ಪುಟ 58 ರಲ್ಲಿ ಇಡೀ ಪುಟದ ಚಿತ್ರ]

[ಪುಟ 69 ರಲ್ಲಿ ಇಡೀ ಪುಟದ ಚಿತ್ರ]