ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾನಿಯೇಲ—ಪರೀಕ್ಷೆಗೊಳಗಾಗಿರುವ ಒಂದು ಪುಸ್ತಕ

ದಾನಿಯೇಲ—ಪರೀಕ್ಷೆಗೊಳಗಾಗಿರುವ ಒಂದು ಪುಸ್ತಕ

ಅಧ್ಯಾಯ ಎರಡು

ದಾನಿಯೇಲ​—⁠ಪರೀಕ್ಷೆಗೊಳಗಾಗಿರುವ ಒಂದು ಪುಸ್ತಕ

1, 2. ಯಾವ ಅರ್ಥದಲ್ಲಿ ದಾನಿಯೇಲ ಪುಸ್ತಕವು ಆರೋಪಕ್ಕೆ ಒಳಗಾಗಿದೆ, ಮತ್ತು ಅದರ ಪರವಾಗಿರುವ ರುಜುವಾತನ್ನು ಪರಿಗಣಿಸುವುದು ಅತಿ ಪ್ರಾಮುಖ್ಯವಾದ ವಿಚಾರವಾಗಿದೆಯೆಂದು ನಿಮಗೇಕೆ ಅನಿಸುತ್ತದೆ?

ನ್ಯಾಯಾಲಯದಲ್ಲಿ ನಡೆಯುತ್ತಿರುವ ಅತಿ ಪ್ರಾಮುಖ್ಯವಾದ ಒಂದು ವಿಚಾರಣೆಗೆ ನೀವು ಬಂದಿದ್ದೀರೆಂದು ಊಹಿಸಿಕೊಳ್ಳಿ. ಒಬ್ಬ ವ್ಯಕ್ತಿಯ ಮೇಲೆ ವಂಚನೆಯ ಆರೋಪವನ್ನು ಹೊರಿಸಲಾಗಿದೆ. ಆ ವ್ಯಕ್ತಿಯು ದೋಷಿ ಎಂದು ವಾದಿ ವಕೀಲನು ಪಟ್ಟುಹಿಡಿಯುತ್ತಾನೆ. ಆದರೂ, ಈ ದೋಷಾರೋಪಿಯು ದೀರ್ಘ ಸಮಯದಿಂದ ತನ್ನ ​ಪ್ರಾಮಾಣಿಕತೆಗೆ ಹೆಸರು​ವಾಸಿಯಾದ ವ್ಯಕ್ತಿಯಾಗಿದ್ದಾನೆ. ಹಾಗಿರುವಾಗ, ಪ್ರತಿವಾದಿಯ ಪರವಾಗಿರುವ ರುಜು​ವಾತನ್ನು ಕೇಳಿಸಿಕೊಳ್ಳಲು ನೀವು ಆಸಕ್ತರಾಗಿರುವುದಿಲ್ಲವೊ?

2 ಬೈಬಲಿನ ದಾನಿಯೇಲ ಪುಸ್ತಕದ ವಿಷಯವನ್ನು ಅವಲೋಕಿಸುವಾಗ, ನೀವು ಅಂತಹದ್ದೇ ಸನ್ನಿವೇಶದಲ್ಲಿದ್ದೀರಿ. ಅದರ ಲೇಖಕನು ಪ್ರಾಮಾಣಿಕತೆಗೆ ಪ್ರಸಿದ್ಧನು. ದಾನಿಯೇಲನ ಹೆಸರಿರುವ ಈ ಪುಸ್ತಕಕ್ಕೆ ಸಾವಿರಾರು ವರ್ಷಗಳಿಂದ ವಿಶೇಷ ಮಾನ್ಯತೆಯನ್ನು ನೀಡಲಾಗಿದೆ. ಅದು ಸಾ.ಶ.ಪೂ. ಏಳನೆಯ ಹಾಗೂ ಆರನೆಯ ಶತಮಾನಗಳಲ್ಲಿ ಬದುಕಿದ್ದ ಒಬ್ಬ ಇಬ್ರಿಯ ಪ್ರವಾದಿಯಾದ ದಾನಿಯೇಲನಿಂದ ಬರೆಯಲ್ಪಟ್ಟ ವಿಶ್ವಾಸಾರ್ಹ ಇತಿಹಾಸವೆಂದು ತನ್ನನ್ನು ಸಾದರಪಡಿಸಿಕೊಳ್ಳುತ್ತದೆ. ದಾನಿಯೇಲನ ಪುಸ್ತಕವು, ಸುಮಾರು ಸಾ.ಶ.ಪೂ. 618ರಿಂದ 536ರ ವರೆಗಿನ ಕಾಲಾವಧಿಯನ್ನು ಆವರಿಸಿದ್ದು, ಸಾ.ಶ.ಪೂ. 536ನೆಯ ವರ್ಷದಲ್ಲಿ ಪೂರ್ಣಗೊಂಡಿತು ಎಂದು ನಿಷ್ಕೃಷ್ಟವಾದ ಬೈಬಲ್‌ ಕಾಲಗಣನ ಶಾಸ್ತ್ರವು ತೋರಿಸುತ್ತದೆ. ಆದರೆ ಈ ಪುಸ್ತಕವು ಆರೋಪಕ್ಕೆ ಗುರಿಯಾಗಿದೆ. ಈ ಪುಸ್ತಕವು ಮೋಸವೆಂದು ಕೆಲವು ವಿಶ್ವಕೋಶಗಳು ಹಾಗೂ ಇನ್ನಿತರ ಪ್ರಮಾಣ ಗ್ರಂಥಗಳು ನೇರವಾಗಿ ಹೇಳುತ್ತವೆ.

3. ದಾನಿಯೇಲ ಪುಸ್ತಕದ ವಿಶ್ವಾಸಾರ್ಹತೆಯ ಬಗ್ಗೆ ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಏನು ಹೇಳುತ್ತದೆ?

3 ಉದಾಹರಣೆಗಾಗಿ ಒಂದು ಕಾಲದಲ್ಲಿ, ದಾನಿಯೇಲನ ಪುಸ್ತಕವು “ನೈಜ ಇತಿಹಾಸವಾಗಿದೆ ಮತ್ತು ಇದರಲ್ಲಿ ನಿಜವಾದ ಪ್ರವಾದನೆಗಳು ಒಳಗೂಡಿವೆಯೆಂದು ವ್ಯಾಪಕವಾಗಿ ಪರಿಗಣಿಸಲಾಗಿತ್ತು” ಎಂದು ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಒಪ್ಪಿಕೊಳ್ಳುತ್ತದೆ. ಆದರೆ, ವಾಸ್ತವದಲ್ಲಿ ದಾನಿಯೇಲ ಪುಸ್ತಕವು, “[ಸಿರಿಯದ ಅರಸನಾದ] ನಾಲ್ಕನೆಯ ಆ್ಯಂಟಾಯೊಕಸ್‌ ಎಫಿಫೆನೀಸ್‌ನ ಆಳ್ವಿಕೆಯ ಕೆಳಗೆ ಯೆಹೂದ್ಯರು ತೀವ್ರವಾದ ಹಿಂಸೆಯನ್ನು ಅನುಭವಿಸುತ್ತಿದ್ದಾಗ, ಅಂದರೆ ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಬರೆಯಲ್ಪಟ್ಟಿತು” ಎಂದು ಬ್ರಿಟ್ಯಾನಿಕ ವಾದಿಸುತ್ತದೆ. ದಾನಿಯೇಲ ಪುಸ್ತಕವು ಸಾ.ಶ.ಪೂ. 167 ಹಾಗೂ 164ರ ನಡುವಿನ ಕಾಲಾವಧಿಯಲ್ಲಿ ಬರೆಯಲ್ಪಟ್ಟಿತೆಂದು ಆ ಎನ್‌ಸೈಕ್ಲೊಪೀಡಿಯ ಹೇಳುತ್ತದೆ. ದಾನಿಯೇಲ ಪುಸ್ತಕದ ಬರಹಗಾರನು ಭವಿಷ್ಯತ್ತಿನ ಕುರಿತು ಪ್ರವಾದಿಸಲಿಲ್ಲ, ಬದಲಾಗಿ “ತನಗೆ ಗತ ಇತಿಹಾಸವಾಗಿದ್ದ ಸಂಗತಿಗಳನ್ನು, ಭವಿಷ್ಯತ್ತಿನಲ್ಲಿ ಸಂಭವಿಸಲಿರುವ ಪ್ರವಾದನೆಗಳೋಪಾದಿ” ಪ್ರಕಟಿಸಿದ್ದಾನೆ ಎಂದು ಸಹ ಈ ಎನ್‌ಸೈಕ್ಲೊಪೀಡಿಯ ಪ್ರತಿಪಾದಿಸುತ್ತದೆ.

4. ದಾನಿಯೇಲ ಪುಸ್ತಕದ ವಿಮರ್ಶೆಯು ಯಾವಾಗ ಆರಂಭವಾಯಿತು, ಮತ್ತು ಇತ್ತೀಚಿಗಿನ ಶತಮಾನಗಳಲ್ಲಿ ತದ್ರೀತಿಯ ವಿಮರ್ಶೆಯನ್ನು ಯಾವುದು ಪ್ರಚೋದಿಸಿತು?

4 ಇಂತಹ ವಿಚಾರಗಳು ಎಲ್ಲಿಂದ ಬಂದವು? ದಾನಿಯೇಲ ಪುಸ್ತಕದ ವಿಮರ್ಶೆಯು ಹೊಸ ವಿಷಯವೇನಲ್ಲ. ಸಾ.ಶ. ಮೂರನೆಯ ಶತಮಾನದಷ್ಟು ಹಿಂದೆಯೇ, ಪಾರ್‌ಫರಿ ಎಂಬ ಹೆಸರಿನ ತತ್ವಜ್ಞಾನಿಯಿಂದ ಇದು ಆರಂಭವಾಯಿತು. ರೋಮನ್‌ ಸಾಮ್ರಾಜ್ಯದಲ್ಲಿದ್ದ ಅನೇಕ​ರಂತೆಯೇ ಇವನೂ ಕ್ರೈಸ್ತತ್ವದ ಪ್ರಭಾವವನ್ನು ನೋಡಿ ಭಯಗೊಂಡಿದ್ದಿರಬೇಕು. ಈ “ಹೊಸ” ಧರ್ಮದ ಹೆಸರನ್ನು ಕೆಡಿಸಲಿಕ್ಕಾಗಿ ಅವನು 15 ಪುಸ್ತಕಗಳನ್ನು ಬರೆದನು. 12ನೆಯ ಪುಸ್ತಕವು ದಾನಿಯೇಲ ಪುಸ್ತಕದ ವಿರುದ್ಧ ನಿರ್ದೇಶಿಸಲ್ಪಟ್ಟಿತ್ತು. ಈ ಪುಸ್ತಕವು ಮೋಸವಾಗಿದ್ದು, ಸಾ.ಶ.ಪೂ. ಎರಡನೆಯ ಶತಮಾನದಲ್ಲಿ ಯೆಹೂದ್ಯನೊಬ್ಬನಿಂದ ಬರೆಯಲ್ಪಟ್ಟಿತೆಂದು ಪಾರ್‌ಫರಿ ತಿಳಿಸಿದನು. 18ನೆಯ ಹಾಗೂ 19ನೆಯ ಶತಮಾನಗಳಲ್ಲಿ ತದ್ರೀತಿಯ ದೋಷಾರೋಪಗಳು ಹೊರಿಸಲ್ಪಟ್ಟವು. ಭವಿಷ್ಯತ್ತಿನ ಘಟನೆಗಳನ್ನು ಪ್ರವಾದನಾ ರೂಪದಲ್ಲಿ ಮುಂತಿಳಿಸುವುದು ಅಸಾಧ್ಯ ಎಂಬುದು, ಗ್ರಂಥಪಾಠ ವಿಮರ್ಶಕರ ಹಾಗೂ ವಿಚಾರವಾದಿಗಳ ದೃಷ್ಟಿಕೋನವಾಗಿದೆ. ದಾನಿಯೇಲನು ಪ್ರಮುಖ ಗುರಿಹಲಗೆಯಾದನು. ಅದು ಅವನನ್ನು ಹಾಗೂ ಅವನ ಪುಸ್ತಕವನ್ನು ಸಾಕ್ಷಾತ್‌ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿದಂತಿತ್ತು. ದಾನಿಯೇಲನು ಬಾಬೆಲಿನಲ್ಲಿ ಯೆಹೂದಿ ದೇಶಭ್ರಷ್ಟನಾಗಿದ್ದಾಗ ಈ ಪುಸ್ತಕವನ್ನು ಬರೆಯಲಿಲ್ಲ, ಬದಲಾಗಿ ಶತಮಾನಗಳ ಬಳಿಕ ಬೇರೆ ಯಾರೋ ಅದನ್ನು ಬರೆದರು ಎಂಬುದಕ್ಕೆ ತಮ್ಮ ಬಳಿ ಬಹಳಷ್ಟು ರುಜುವಾತಿದೆ ಎಂದು ವಿಮರ್ಶಕರು ವಾದಿಸಿದರು. * ಇಂತಹ ದೋಷಾರೋಪಗಳು ಎಷ್ಟರ ಮಟ್ಟಿಗೆ ಹೆಚ್ಚಿದವೆಂದರೆ, ಲೇಖಕನೊಬ್ಬನು ವಿಮರ್ಶಕರ ಗವಿಯಲ್ಲಿ ದಾನಿಯೇಲ (ಇಂಗ್ಲಿಷ್‌) ಎಂಬ ಸಮರ್ಥನಾ ಪುಸ್ತಕವನ್ನು ಸಹ ಬರೆದನು.

5. ದಾನಿಯೇಲ ಪುಸ್ತಕದ ವಿಶ್ವಾಸಾರ್ಹತೆಯ ಕುರಿತಾದ ಪ್ರಶ್ನೆಯು ಏಕೆ ಪ್ರಾಮುಖ್ಯ​ವಾದದ್ದಾಗಿದೆ?

5 ವಿಮರ್ಶಕರ ಈ ಖಚಿತವಾದ ಹೇಳಿಕೆಗಳಿಗೆ ಏನಾದರೂ ಆಧಾರವಿದೆಯೆ? ಅಥವಾ ಈ ಪ್ರತಿವಾದವನ್ನು ಬೆಂಬಲಿಸುವ ಯಾವ ಸಾಕ್ಷ್ಯವಾದರೂ ಇದೆಯೆ? ಇದರಲ್ಲಿ ಪ್ರಾಮುಖ್ಯವಾದ ವಾದಾಂಶಗಳು ಒಳಗೂಡಿವೆ. ಈ ಪುರಾತನ ಪುಸ್ತಕದ ಪ್ರಖ್ಯಾತಿ ಮಾತ್ರವಲ್ಲ, ನಮ್ಮ ಭವಿಷ್ಯತ್ತು ಸಹ ಇದರಲ್ಲಿ ಒಳಗೂಡಿದೆ. ಒಂದುವೇಳೆ ದಾನಿಯೇಲ ಪುಸ್ತಕವು ಸುಳ್ಳಾಗಿರುವಲ್ಲಿ, ಮಾನವಕುಲದ ಭವಿಷ್ಯತ್ತಿಗಾಗಿರುವ ಅದರ ವಾಗ್ದಾನಗಳು ಸಹ ಪೊಳ್ಳು ನುಡಿಗಳಾಗಿವೆ. ಆದರೆ ಅದರಲ್ಲಿ ನಿಜವಾದ ಪ್ರವಾದನೆಗಳು ಒಳಗೂಡಿರುವಲ್ಲಿ, ಇವು ಇಂದು ನಮಗೆ ಯಾವ ಅರ್ಥದಲ್ಲಿವೆ ಎಂಬುದನ್ನು ಕಲಿಯಲು ನಾವು ತುಂಬ ಆತುರಪಡುವೆವು ಎಂಬುದರಲ್ಲಿ ಸಂದೇಹವೇ ಇಲ್ಲ. ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿದ್ದು, ದಾನಿಯೇಲ ಪುಸ್ತಕದ ಮೇಲೆ ಹೊರಿಸಲ್ಪಟ್ಟಿರುವ ದೋಷಾರೋಪಗಳಲ್ಲಿ ಕೆಲವನ್ನು ನಾವು ಪರೀಕ್ಷಿಸೋಣ.

6. ದಾನಿಯೇಲ ಪುಸ್ತಕದಲ್ಲಿರುವ ಇತಿಹಾಸದ ಕುರಿತು ಕೆಲವೊಮ್ಮೆ ಯಾವ ಆರೋಪವನ್ನು ಹೊರಿಸಲಾಗಿದೆ?

6 ಉದಾಹರಣೆಗಾಗಿ, ದಿ ಎನ್‌ಸೈಕ್ಲೊಪೀಡಿಯ ಅಮೆರಿಕಾನದಲ್ಲಿ ಹೊರಿಸಲ್ಪಟ್ಟಿರುವ ಆರೋಪವನ್ನು ತೆಗೆದುಕೊಳ್ಳಿ: ದಾನಿಯೇಲ ಪುಸ್ತಕದಲ್ಲಿ, “[ಬಾಬೆಲಿನ ದೇಶಭ್ರಷ್ಟತೆಯಂತಹ] ಆರಂಭದ ಕಾಲಾವಧಿಗಳ ಅನೇಕ ಐತಿಹಾಸಿಕ ವಿವರಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ.” ಇದು ನಿಜವೋ? ತಪ್ಪೆಂದು ಹೇಳಲಾಗುವ ಮೂರು ವಿಚಾರಗಳನ್ನು ನಾವು ಒಂದೊಂದಾಗಿ ಪರಿಗಣಿಸೋಣ.

ದಾಖಲೆಯಿಲ್ಲದ ಸಾಮ್ರಾಟನ ಕುರಿತಾದ ಮೊಕದ್ದಮೆ

7. (ಎ) ಬೇಲ್ಶಚ್ಚರನ ಬಗ್ಗೆ ದಾನಿಯೇಲನು ಸೂಚಿಸಿರುವುದು, ಬೈಬಲಿನ ವಿಮರ್ಶಕರಿಗೆ ಏಕೆ ಸಂತೋಷವನ್ನು ಉಂಟುಮಾಡಿದೆ? (ಬಿ) ಬೇಲ್ಶಚ್ಚರನು ಕೇವಲ ಒಬ್ಬ ಕಾಲ್ಪನಿಕ ವ್ಯಕ್ತಿಯಾಗಿದ್ದಾನೆ ಎಂಬ ಕಲ್ಪನೆಗೆ ಏನು ಸಂಭವಿಸಿತು?

7 ಬಾಬೆಲ್‌ ಪಟ್ಟಣವು ಸೋಲಿಸಲ್ಪಟ್ಟಾಗ, ನೆಬೂಕದ್ನೆಚ್ಚರನ “ಮಗ”ನಾದ ಬೇಲ್ಶಚ್ಚರನು ಬಾಬೆಲಿನಲ್ಲಿ ರಾಜ್ಯಭಾರವನ್ನು ನಡೆಸುತ್ತಿದ್ದನು ಎಂದು ದಾನಿಯೇಲನು ಬರೆದನು. (ದಾನಿಯೇಲ 5:​1, 11, 18, 22, 30) ಬಹಳ ಸಮಯದಿಂದ, ವಿಮರ್ಶಕರು ಈ ಅಂಶದ ಮೇಲೆ ದಾಳಿಮಾಡಿದರು. ಏಕೆಂದರೆ ಬೈಬಲನ್ನು ಬಿಟ್ಟು ಬೇರೆಲ್ಲಿಯೂ ಬೇಲ್ಶಚ್ಚರನ ಹೆಸರು ಕಂಡುಬಂದಿರಲಿಲ್ಲ. ಅವನಿಗೆ ಬದಲಾಗಿ, ನೆಬೂಕದ್ನೆಚ್ಚರನ ಉತ್ತರಾಧಿಕಾರಿಯಾಗಿ ಬಂದ ನೆಬೊನೈಡಸ್‌ನನ್ನು ಬಾಬೆಲಿನ ಅರಸರಲ್ಲೇ ಕೊನೆಯ ಅರಸನೆಂದು ಪುರಾತನ ಇತಿಹಾಸಕಾರರು ಗುರುತಿಸಿದರು. ಹೀಗೆ, 1850ರಲ್ಲಿ, ಫರ್ಡಿನಾಂಡ್‌ ಹಿಟ್‌ಸಿಗ್‌, ಬೇಲ್ಶಚ್ಚರನು ಕೇವಲ ಬರಹಗಾರನ ಕಲ್ಪನಾ ವ್ಯಕ್ತಿಯಾಗಿದ್ದನೆಂದು ಹೇಳಿದನು. ಆದರೆ, ಹಿಟ್‌ಸಿಗನು ತನ್ನ ಅಭಿಪ್ರಾಯದಲ್ಲಿ ಸ್ವಲ್ಪಮಟ್ಟಿಗೆ ದುಡುಕಿದನೆಂದು ನಿಮಗೆ ಅನಿಸುವುದಿಲ್ಲವೋ? ಏನೇ ಆದರೂ, ಐತಿಹಾಸಿಕ ದಾಖಲೆಗಳು ತುಂಬ ವಿರಳವಾಗಿದ್ದ ಒಂದು ಕಾಲಾವಧಿಯಲ್ಲಿ, ಈ ಅರಸನ ಬಗ್ಗೆ ಯಾವುದೇ ದಾಖಲೆಯು ಇಲ್ಲದಿರುವುದು, ಅವನು ಅಸ್ತಿತ್ವದಲ್ಲೇ ಇರಲಿಲ್ಲ ಎಂಬುದನ್ನು ನಿಜವಾಗಿಯೂ ರುಜುಪಡಿಸುತ್ತದೋ? 1854ರಲ್ಲಿ, ಈಗ ದಕ್ಷಿಣ ಇರಾಕ್‌ ಎಂದು ಕರೆಯಲ್ಪಡುವ ಸ್ಥಳದಲ್ಲಿದ್ದ ಊರ್‌ ಎಂಬ ಪುರಾತನ ಬಬಿಲೋನ್ಯ ಪಟ್ಟಣದ ಅವಶೇಷಗಳನ್ನು ಅಗೆದಾಗ, ಕೆಲವು ಚಿಕ್ಕಪುಟ್ಟ ಜೇಡಿಮಣ್ಣಿನ ಸಿಲಿಂಡರ್‌ಗಳು ದೊರೆತವು. ರಾಜ ನೆಬೊನೈಡಸ್‌ನಿಗೆ ಸೇರಿದ್ದ ಈ ಬೆಣೆಲಿಪಿ ದಾಖಲೆಗಳಲ್ಲಿ, “ತನ್ನ ಹಿರಿಯ ಮಗನಾದ ಬೇಲ್ಶಚ್ಚರ”ನ ಕುರಿತಾದ ಒಂದು ಬೇಡಿಕೆಯೂ ಒಳಗೂಡಿತ್ತು. ವಿಮರ್ಶಕರು ಸಹ ಇದನ್ನು ಒಪ್ಪಲೇಬೇಕಾಯಿತು: ದಾನಿಯೇಲ ಪುಸ್ತಕದ ಬೇಲ್ಶಚ್ಚರನೇ ಇವನು.

8. ಬೇಲ್ಶಚ್ಚರನನ್ನು ಆಳುವ ಅರಸನೋಪಾದಿ ದಾನಿಯೇಲನು ವರ್ಣಿಸಿರುವುದು, ಸತ್ಯವೆಂದು ಹೇಗೆ ರುಜುಪಡಿಸಲ್ಪಟ್ಟಿತು?

8 ಆದರೂ, ವಿಮರ್ಶಕರಿಗೆ ತೃಪ್ತಿಯಾಗಲಿಲ್ಲ. “ಇದರಿಂದ ಏನೂ ರುಜುವಾಗುವುದಿಲ್ಲ” ಎಂದು ಏಚ್‌. ಎಫ್‌. ಟಾಲ್‌ಬಟ್‌ ಎಂಬ ಹೆಸರಿನ ವಿಮರ್ಶಕನು ಬರೆದನು. ಆ ಶಾಸನಫಲಕದಲ್ಲಿ ತಿಳಿಸಲ್ಪಟ್ಟಿರುವ ಮಗನು ಕೇವಲ ಒಂದು ಮಗುವಾಗಿದ್ದಿರಬಹುದು, ಆದರೆ ದಾನಿಯೇಲ ಪುಸ್ತಕವು ಅವನನ್ನು ಒಬ್ಬ ಆಳುವ ಅರಸನೋಪಾದಿ ಚಿತ್ರಿಸುತ್ತದೆ ಎಂದು ಆ ವಿಮರ್ಶಕನು ತಪ್ಪುಹೊರಿಸಿದನು. ಆದರೂ, ಟಾಲ್‌ಬಟ್‌ನ ಈ ಹೇಳಿಕೆಗಳನ್ನು ಪ್ರಕಾಶಿಸಿ ಒಂದು ವರ್ಷ ಕಳೆದ ಬಳಿಕ, ಇನ್ನೂ ಹೆಚ್ಚು ಬೆಣೆಲಿಪಿ ಫಲಕಗಳು ದೊರೆತವು ಮತ್ತು ಅದರಲ್ಲಿ ಬೇಲ್ಶಚ್ಚರನಿಗೆ ಕಾರ್ಯದರ್ಶಿಗಳು ಹಾಗೂ ಮನೆವಾರ್ತೆಯ ಸಿಬ್ಬಂದಿಗಳು ಇದ್ದರು ಎಂದು ಸೂಚಿಸಲಾಗಿತ್ತು. ಖಂಡಿತವಾಗಿಯೂ ಈ ಬೇಲ್ಶಚ್ಚರನು ಒಂದು ಮಗುವಾಗಿರಲಿಲ್ಲ! ಕೆಲವೊಮ್ಮೆ ನೆಬೊನೈಡಸನು ವರ್ಷಗಟ್ಟಲೆ ಬಾಬೆಲಿನಿಂದ ದೂರವಿರುತ್ತಿದ್ದನು ಎಂಬುದನ್ನು ವರದಿಸುತ್ತಾ, ಇತರ ಶಾಸನಫಲಕಗಳು ವಿಷಯವನ್ನು ಕಟ್ಟಕಡೆಗೆ ಸ್ಪಷ್ಟಪಡಿಸಿದವು. ಈ ಸಮಯಾವಧಿಗಳಲ್ಲಿ, ನೆಬೊನೈಡಸನು ತನ್ನ ಹಿರಿಯ ಮಗ (ಬೇಲ್ಶಚ್ಚರ)ನಿಗೆ ಬಾಬೆಲಿನ “ರಾಜ್ಯಭಾರವನ್ನು ವಹಿಸಿದ್ದನು” ಎಂಬುದನ್ನು ಸಹ ಈ ಶಾಸನಫಲಕಗಳು ರುಜುಪಡಿಸಿದವು. ಅಂತಹ ಸಮಯಗಳಲ್ಲಿ, ಬೇಲ್ಶಚ್ಚರನು ವಾಸ್ತವವಾಗಿ ರಾಜನೋಪಾದಿ, ಅಂದರೆ ತನ್ನ ತಂದೆಯ ರಾಜಪ್ರತಿನಿಧಿಯೋಪಾದಿ ಕಾರ್ಯನಡಿಸುತ್ತಿದ್ದನು. *

9. (ಎ) ಬೇಲ್ಶಚ್ಚರನು ನೆಬೂಕದ್ನೆಚ್ಚರನ ಮಗನಾಗಿದ್ದನು ಎಂದು ದಾನಿಯೇಲನು ಯಾವ ಅರ್ಥದಲ್ಲಿ ಮನಗಂಡಿದ್ದನು? (ಬಿ) ನೆಬೊನೈಡಸನ ಅಸ್ತಿತ್ವದ ಕುರಿತು ದಾನಿಯೇಲನು ಯಾವುದೇ ಸುಳಿವನ್ನು ನೀಡಿಲ್ಲ ಎಂದು ವಿಮರ್ಶಕರು ಒತ್ತಿಹೇಳುವುದು ಏಕೆ ತಪ್ಪಾಗಿದೆ?

9 ಇಷ್ಟೆಲ್ಲ ಪುರಾವೆಯಿದ್ದರೂ, ಬೈಬಲು ಬೇಲ್ಶಚ್ಚರ ಎಂದು ಕರೆಯುವುದು ನೆಬೊನೈಡಸನ ಮಗನನ್ನಲ್ಲ, ಬದಲಾಗಿ ನೆಬೂಕದ್ನೆಚ್ಚರನ ಮಗನನ್ನೇ ಎಂದು ಕೆಲವು ವಿಮರ್ಶಕರು ದೂರುತ್ತಾರೆ. ದಾನಿಯೇಲ ಪುಸ್ತಕವು ನೆಬೊನೈಡಸನ ಅಸ್ತಿತ್ವದ ಕುರಿತು ಯಾವುದೇ ಸೂಚನೆಯನ್ನು ಕೊಡುವುದಿಲ್ಲ ಎಂದು ಕೆಲವರು ಒತ್ತಿಹೇಳುತ್ತಾರೆ. ಆದರೂ, ಈ ಎರಡೂ ಆಕ್ಷೇಪಣೆ​ಗಳನ್ನು ಪರೀಕ್ಷಿಸುವಾಗ, ಇವೆರಡೂ ತಪ್ಪೆಂದು ರುಜುವಾಗುತ್ತದೆ. ನೆಬೂಕದ್ನೆಚ್ಚರನ ಮಗಳನ್ನೇ ನೆಬೊನೈಡಸನು ವಿವಾಹವಾದನೆಂದು ಹೇಳಲಾಗುತ್ತದೆ. ಇದು ಬೇಲ್ಶಚ್ಚರನನ್ನು ನೆಬೂಕದ್ನೆಚ್ಚರನ ಮೊಮ್ಮಗನನ್ನಾಗಿ ಮಾಡುತ್ತದೆ. “ಅಜ್ಜ” ಅಥವಾ “ಮೊಮ್ಮಗ” ಎಂಬುದನ್ನು ಸೂಚಿಸಲು, ಹೀಬ್ರು ಭಾಷೆಯಲ್ಲಿ ಅಥವಾ ಅರಮಾಯ ಭಾಷೆಯಲ್ಲಿ ಯಾವುದೇ ಶಬ್ದಗಳಿಲ್ಲ; ಆದುದರಿಂದ, “ಮಗ” ಎಂಬ ಶಬ್ದವು, “ಇಂತಿಂಥವರ ಮೊಮ್ಮಗ” ಅಥವಾ “ಇಂತಿಂಥವರ ವಂಶದವನು” ಎಂಬರ್ಥವನ್ನು ಕೊಡಬಲ್ಲದು. (ಮತ್ತಾಯ 1:1ನ್ನು ಹೋಲಿಸಿರಿ.) ಅಷ್ಟುಮಾತ್ರವಲ್ಲ, ಬೇಲ್ಶಚ್ಚರನು ನೆಬೊನೈಡಸನ ಮಗನಾಗಿದ್ದನು ಎಂಬುದನ್ನು ಗುರುತಿಸುವಂತೆ ಬೈಬಲ್‌ ವೃತ್ತಾಂತವು ಸಹಾಯ ಮಾಡುತ್ತದೆ. ಗೋಡೆಯ ಮೇಲೆ ಅಶುಭಕರವಾದ ಅದ್ಭುತಲೇಖನವನ್ನು ಕಂಡು ಕಳವಳಗೊಂಡ ಬೇಲ್ಶಚ್ಚರನು, ಈ ಗೋಪ್ಯ​ಲಿಪಿಯ ಅರ್ಥವನ್ನು ತಿಳಿಯಪಡಿಸುವ ಯಾರಿಗೇ ಆಗಲಿ ತನ್ನ ರಾಜ್ಯದಲ್ಲಿ ಮೂರನೆಯ ಸ್ಥಾನವನ್ನು ಕೊಡುತ್ತೇನೆಂದು ಹೇಳಿಸಿದನು. (ದಾನಿಯೇಲ 5:⁠7) ಎರಡನೆಯ ಸ್ಥಾನಕ್ಕೆ ಬದಲಾಗಿ ಮೂರನೆಯ ಸ್ಥಾನವೇಕೆ? ಇದು ಮೊದಲನೆಯ ಹಾಗೂ ಎರಡನೆಯ ಸ್ಥಾನಗಳಲ್ಲಿ ಈಗಾಗಲೇ ಯಾರೋ ಇದ್ದರು ಎಂಬುದನ್ನು ಸೂಚಿಸುತ್ತದೆ. ಹೇಗೆಂದರೆ, ಒಂದು ಸ್ಥಾನದಲ್ಲಿ ನೆಬೊನೈಡಸನೂ ಇನ್ನೊಂದರಲ್ಲಿ ಅವನ ಮಗನಾದ ಬೇಲ್ಶಚ್ಚರನೂ ಇದ್ದರು.

10. ಇನ್ನಿತರ ಪುರಾತನ ಇತಿಹಾಸಕಾರರಿಗಿಂತಲೂ, ಬಾಬೆಲಿನ ರಾಜಪ್ರಭುತ್ವದ ಕುರಿತಾದ ದಾನಿಯೇಲನ ವೃತ್ತಾಂತವು ಏಕೆ ಸವಿಸ್ತಾರವಾಗಿದೆ?

10 ಆದುದರಿಂದ, ದಾನಿಯೇಲನು ಬೇಲ್ಶಚ್ಚರನ ಬಗ್ಗೆ ಉಲ್ಲೇಖಿಸಿರುವುದು, “ಸಂಪೂರ್ಣವಾಗಿ ಬದಲಾಯಿಸ”ಲ್ಪಟ್ಟಿರುವ ಒಂದು ಇತಿಹಾಸವಾಗಿಲ್ಲ. ಅದಕ್ಕೆ ಬದಲಾಗಿ, ದಾನಿಯೇಲನು ಬಾಬೆಲಿನ ಇತಿಹಾಸವನ್ನು ಬರೆಯುತ್ತಿರಲಿಲ್ಲವಾದರೂ, ಹಿರಾಡಟಸ್‌, ಸನಫನ್‌, ಹಾಗೂ ಬರಾಸಸ್‌ರಂತಹ ಪುರಾತನ ಐಹಿಕ ಇತಿಹಾಸಕಾರರು ಬಾಬೆಲಿನ ರಾಜಪ್ರಭುತ್ವದ ಕುರಿತು ಕೊಟ್ಟ ವಿವರಗಳಿಗಿಂತಲೂ ಹೆಚ್ಚು ಸವಿಸ್ತಾರವಾದ ವಿಷಯಗಳನ್ನು ತಿಳಿಯಪಡಿಸುತ್ತಾನೆ. ಅವರು ದಾಖಲಿಸದಂತಹ ಸಂಗತಿಗಳನ್ನು ದಾನಿಯೇಲನು ಹೇಗೆ ದಾಖಲಿಸಶಕ್ತನಾದನು? ಏಕೆಂದರೆ ದಾನಿಯೇಲನು ಬಾಬೆಲಿನಲ್ಲಿಯೇ ಇದ್ದನು. ಅವನ ಪುಸ್ತಕವು, ತದನಂತರದ ಶತಮಾನಗಳಲ್ಲಿ ಜೀವಿಸಿದ ವಂಚಕನ ಕೃತಿಯಲ್ಲ, ಬದಲಾಗಿ ಘಟನೆಗಳನ್ನು ಕಣ್ಣಾರೆಕಂಡ ವ್ಯಕ್ತಿಯೊಬ್ಬನ ಕೃತಿಯಾಗಿದೆ.

ಮೇದ್ಯಯನಾದ ದಾರ್ಯಾವೆಷನು ಯಾರಾಗಿದ್ದನು?

11. ದಾನಿಯೇಲನಿಗನುಸಾರ, ಮೇದ್ಯಯನಾದ ದಾರ್ಯಾವೆಷನು ಯಾರಾಗಿದ್ದನು, ಆದರೆ ಅವನ ಕುರಿತು ಏನು ಹೇಳಲಾಗಿದೆ?

11 ಬಾಬೆಲ್‌ ಸೋಲಿಸಲ್ಪಟ್ಟಾಗ, “ಮೇದ್ಯಯನಾದ ದಾರ್ಯಾವೆಷ”ನೆಂಬ ಹೆಸರಿನ ಅರಸನು ಆಳ್ವಿಕೆ ನಡೆಸಲಾರಂಭಿಸಿದನು ಎಂದು ದಾನಿಯೇಲನು ವರದಿಸುತ್ತಾನೆ. (ದಾನಿಯೇಲ 5:31) ಐಹಿಕ ಮೂಲಗಳಲ್ಲಿ ಅಥವಾ ಪ್ರಾಕ್ತನಶಾಸ್ತ್ರದ ಮೂಲಗಳಲ್ಲಿ ಎಲ್ಲಿಯೂ ಮೇದ್ಯಯನಾದ ದಾರ್ಯಾವೆಷನ ಹೆಸರು ಇಷ್ಟರ ವರೆಗೆ ಕಂಡುಬಂದಿಲ್ಲ. ಆದುದರಿಂದ, ಈ ದಾರ್ಯಾವೆಷನು “ಒಬ್ಬ ಕಾಲ್ಪನಿಕ ವ್ಯಕ್ತಿ”ಯಾಗಿದ್ದಾನೆ ಎಂದು ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಪ್ರತಿಪಾದಿಸುತ್ತದೆ.

12. (ಎ) ಬೈಬಲ್‌ ವಿಮರ್ಶಕರು ಮೇದ್ಯಯನಾದ ದಾರ್ಯಾವೆಷನು ಜೀವಿಸಲೇ ಇಲ್ಲವೆಂದು ಹೇಳುವುದಕ್ಕಿಂತಲೂ ಹೆಚ್ಚು ಜ್ಞಾನವಂತರಾಗಿರಬೇಕು ಏಕೆ? (ಬಿ) ಮೇದ್ಯಯನಾದ ದಾರ್ಯಾ​ವೆಷನನ್ನು ಗುರುತಿಸಲಿಕ್ಕಾಗಿರುವ ಒಂದು ಸಾಧ್ಯತೆಯು ಯಾವುದು, ಮತ್ತು ಯಾವ ಪುರಾವೆಯು ಇದನ್ನು ಸೂಚಿಸುತ್ತದೆ?

12 ಕೆಲವು ಪಂಡಿತರು ಇದಕ್ಕಿಂತ ಹೆಚ್ಚು ಮುಂಜಾಗ್ರತೆ ವಹಿಸಿದ್ದಾರೆ. ಎಷ್ಟೆಂದರೂ, ಒಂದು ಸಮಯದಲ್ಲಿ ವಿಮರ್ಶಕರು ಬೇಲ್ಶಚ್ಚರನನ್ನೂ “ಕಾಲ್ಪನಿಕ” ವ್ಯಕ್ತಿಯೆಂದು ಕರೆದಿದ್ದರು. ವಿಮರ್ಶಕರ ನೋಟವು ತಪ್ಪಾಗಿದೆ ಎಂಬುದನ್ನು ದಾರ್ಯಾವೆಷನ ಮೊಕದ್ದಮೆಯೂ ರುಜುಪಡಿಸುವುದು ಎಂಬುದರಲ್ಲಿ ಸಂದೇಹವೇ ಇಲ್ಲ. ಪಾರಸಿಯನಾದ ಕೋರೆಷನು ಬಾಬೆಲನ್ನು ಗೆದ್ದ ಕೂಡಲೆ “ಬಾಬೆಲಿನ ಅರಸ”ನೆಂಬ ಬಿರುದನ್ನು ಪಡೆದುಕೊಳ್ಳಲಿಲ್ಲ ಎಂಬುದನ್ನು ಬೆಣೆಲಿಪಿ ಶಾಸನಗಳು ಈಗಾಗಲೇ ಪ್ರಕಟಪಡಿಸಿವೆ. ಸಂಶೋಧಕನೊಬ್ಬನು ಹೀಗೆ ಸೂಚಿಸಿದನು: “‘ಬಾಬೆಲಿನ ಅರಸ’ ಎಂಬ ಬಿರುದನ್ನು ಪಡೆದುಕೊಂಡವನು ಯಾರೇ ಆಗಿದ್ದಿರಲಿ, ಅವನು ಕೋರೆಷನಾಗಿರಲಿಲ್ಲ, ಬದಲಾಗಿ ಅವನು ಕೋರೆಷನ ಕೆಳಗೆ ಒಬ್ಬ ಸಾಮಂತ ರಾಜನಾಗಿದ್ದನು.” ಹಾಗಾದರೆ, ದಾರ್ಯಾವೆಷ ಎಂಬುದು, ಬಾಬೆಲಿನ ಮೇಲ್ವಿ​ಚಾರಣೆಯನ್ನು ನೋಡಿಕೊಳ್ಳುವಂತೆ ನೇಮಿಸಲ್ಪಟ್ಟಿದ್ದ ಒಬ್ಬ ಪ್ರಬಲ ಮೇದ್ಯಯ ಅಧಿಕಾರಿಯ ಹೆಸರು ಅಥವಾ ಬಿರುದಾಗಿರಸಾಧ್ಯವಿತ್ತೊ? ದಾರ್ಯಾವೆಷನು, ಗುಬಾರೊ ಎಂಬ ಹೆಸರಿನ ಒಬ್ಬ ವ್ಯಕ್ತಿಯಾಗಿದ್ದಿರಬಹುದು ಎಂದು ಕೆಲವರು ಸೂಚಿಸುತ್ತಾರೆ. ಕೋರೆಷನು ಗುಬಾರೊವನ್ನು ಬಾಬೆಲಿನ ಅಧಿಪತಿಯಾಗಿ ನೇಮಿಸಿದ್ದನು, ಮತ್ತು ಅವನಿಗೆ ಬಹಳಷ್ಟು ಅಧಿಕಾರವು ಕೊಡಲ್ಪಟ್ಟಿತ್ತೆಂದು ಐಹಿಕ ದಾಖಲೆಗಳು ದೃಢಪಡಿಸುತ್ತವೆ. ಅವನು ಬಾಬೆಲಿನ ಮೇಲೆ ಉಪಾಧಿಪತಿಗಳನ್ನು ಸಹ ನೇಮಿಸಿದನೆಂದು ಒಂದು ಬೆಣೆಲಿಪಿ ಶಾಸನವು ತಿಳಿಸುತ್ತದೆ. ಆಸಕ್ತಿಕರವಾಗಿಯೇ, ಬಾಬೆಲ್‌ ಸಂಸ್ಥಾನವನ್ನು ಆಳಲಿಕ್ಕಾಗಿ ದಾರ್ಯಾವೆಷನು 120 ದೇಶಾಧಿಪತಿಗಳನ್ನು ನೇಮಿಸಿದನೆಂದು ದಾನಿಯೇಲನು ದಾಖಲಿಸುತ್ತಾನೆ.​—⁠ದಾನಿಯೇಲ 6:⁠1.

13. ಮೇದ್ಯಯನಾದ ದಾರ್ಯಾವೆಷನ ಬಗ್ಗೆ ಐಹಿಕ ದಾಖಲೆಗಳಲ್ಲಿ ಅಲ್ಲ, ಬದಲಾಗಿ ದಾನಿಯೇಲ ಪುಸ್ತಕದಲ್ಲಿ ಉಲ್ಲೇಖಿಸಲ್ಪಟ್ಟಿರುವುದಕ್ಕೆ ಯಾವ ತಾರ್ಕಿಕ ಕಾರಣವಿದೆ?

13 ಸಕಾಲದಲ್ಲಿ, ಈ ಅರಸನ ನಿಖರವಾದ ಗುರುತಿನ ಹೆಚ್ಚು ಸ್ಪಷ್ಟವಾದ ಪುರಾವೆಗಳು ಬೆಳಕಿಗೆ ಬರಬಹುದು. ಏನೇ ಆಗಲಿ, ಈ ವಿಷಯದಲ್ಲಿ ಪ್ರಾಕ್ತನಶಾಸ್ತ್ರವು ಮೌನವಾಗಿರುವಂತೆ ಕಂಡುಬರುವುದರಿಂದ, ದಾರ್ಯಾವೆಷನು “ಕಾಲ್ಪನಿಕ ವ್ಯಕ್ತಿ”ಯೆಂದು ಅಥವಾ ಇಡೀ ದಾನಿಯೇಲ ಪುಸ್ತಕವೇ ಮೋಸಕರವೆಂದು ಹೇಳಲು ಸಾಧ್ಯವೇ ಇಲ್ಲ. ಇದುವರೆಗೆ ಅಸ್ತಿತ್ವದಲ್ಲಿರುವಂತಹ ಐಹಿಕ ದಾಖಲೆಗಳಿಗಿಂತ ಹೆಚ್ಚು ಸವಿಸ್ತಾರವಾಗಿರುವ ದಾನಿಯೇಲನ ವೃತ್ತಾಂತವನ್ನು, ಕಣ್ಣಾರೆಕಂಡ ಸಾಕ್ಷ್ಯದೋಪಾದಿ ಪರಿಗಣಿಸುವುದು ಎಷ್ಟೋ ವಿವೇಚನಾರ್ಹವಾಗಿದೆ.

ಯೆಹೋಯಾಕೀಮನ ಆಳ್ವಿಕೆ

14. ಅರಸನಾದ ಯೆಹೋಯಾಕೀಮನ ಆಳ್ವಿಕೆಯ ವಿಷಯದಲ್ಲಿ, ದಾನಿಯೇಲ ಹಾಗೂ ಯೆರೆಮೀಯರ ನಡುವೆ ಯಾವುದೇ ವ್ಯತ್ಯಾಸವಿಲ್ಲವೇಕೆ?

14ದಾನಿಯೇಲ 1:1ನ್ನು ಹೀಗೆ ಓದಲಾಗುತ್ತದೆ: “ಯೆಹೂದದ ಅರಸನಾದ ಯೆಹೋಯಾಕೀಮನ ಆಳಿಕೆಯ ಮೂರನೆಯ ವರುಷದಲ್ಲಿ ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಬಂದು ಮುತ್ತಿಗೆ ಹಾಕಿದನು.” ವಿಮರ್ಶಕರು ಈ ವಚನದಲ್ಲಿ ತಪ್ಪನ್ನು ಕಂಡುಹಿಡಿದಿದ್ದಾರೆ. ಏಕೆಂದರೆ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷವು, ನೆಬೂಕದ್ನೆಚ್ಚರನ ಆಳ್ವಿಕೆಯ ಮೊದಲ ವರ್ಷವಾಗಿತ್ತೆಂದು ಹೇಳುವ ಯೆರೆಮೀಯನ ಹೇಳಿಕೆಯೊಂದಿಗೆ ಇದು ಹೊಂದಿಕೆಯಲ್ಲಿಲ್ಲ ಎಂದು ಅವರು ಹೇಳುತ್ತಾರೆ. (ಯೆರೆಮೀಯ 25:1; 46:⁠2) ಇಲ್ಲಿ ದಾನಿಯೇಲನು ಯೆರೆಮೀಯನ ಮಾತುಗಳನ್ನು ವಿರೋಧಿಸುತ್ತಿದ್ದಾನೋ? ಹೆಚ್ಚಿನ ಮಾಹಿತಿಯ ಆಧಾರದಿಂದ, ಈ ವಿಚಾರವು ಸುಲಭವಾಗಿ ಸ್ಪಷ್ಟಪಡಿಸಲ್ಪಟ್ಟಿತು. ಸಾ.ಶ.ಪೂ. 628ರಲ್ಲಿ, ಫರೋಹ ನೆಕೋವನು ಯೆಹೋಯಾಕೀಮನನ್ನು ಮೊತ್ತಮೊದಲ ಬಾರಿಗೆ ಅರಸನಾಗಿ ಮಾಡಿದಾಗ, ಅವನು ಆ ಐಗುಪ್ತ್ಯ ರಾಜನ ಕೈಗೊಂಬೆಯಾದನು. ಸಾ.ಶ.ಪೂ. 625ರಲ್ಲಿ, ನೆಬೂಕದ್ನೆಚ್ಚರನು ತನ್ನ ತಂದೆಗೆ ಬದಲಾಗಿ ಬಾಬೆಲಿನ ಸಿಂಹಾಸನವನ್ನೇರುವ ಸುಮಾರು ಮೂರು ವರ್ಷಗಳಿಗೆ ಮುಂಚೆ ಇದು ಸಂಭವಿಸಿತು. ಸ್ವಲ್ಪ ಸಮಯಾನಂತರ (ಸಾ.ಶ.ಪೂ. 620ರಲ್ಲಿ), ನೆಬೂಕದ್ನೆಚ್ಚರನು ಯೆಹೂದದ ಮೇಲೆ ದಂಡೆತ್ತಿಹೋಗಿ, ಯೆಹೋಯಾಕೀಮನನ್ನು ಬಾಬೆಲಿನ ಸಾಮಂತ ರಾಜನನ್ನಾಗಿ ಮಾಡಿದನು. (2 ಅರಸು 23:34; 24:⁠1) ಬಾಬೆಲಿನಲ್ಲಿ ವಾಸಿಸುತ್ತಿದ್ದ ಒಬ್ಬ ಯೆಹೂದ್ಯನಿಗೆ, ಯೆಹೋಯಾಕೀಮನ “ಆಳಿಕೆಯ ಮೂರನೆಯ ವರುಷ”ವು, ಆ ಅರಸನು ಒಬ್ಬ ಸಾಮಂತ ರಾಜನೋಪಾದಿ ಬಾಬೆಲಿಗೆ ಸೇವೆಸಲ್ಲಿಸಲು ಆರಂಭಿಸಿದ ವರ್ಷದ ಪ್ರಕಾರ ಮೂರನೆಯ ವರ್ಷವಾಗಿರುತ್ತಿತ್ತು. ಆ ದೃಷ್ಟಿಕೋನದಿಂದ ದಾನಿಯೇಲನು ಬರೆದಿದ್ದನು. ಆದರೆ, ಯೆರೆಮೀಯನು ಯೆರೂಸಲೇಮಿನಲ್ಲಿಯೇ ವಾಸಿಸುತ್ತಿದ್ದ ಯೆಹೂದ್ಯರನ್ನು ದೃಷ್ಟಿಯಲ್ಲಿಟ್ಟು ಬರೆದಿದ್ದನು. ಆದುದರಿಂದ, ಯಾವಾಗ ಫರೋಹ ನೆಕೋವನು ಯೆಹೋಯಾಕೀಮನನ್ನು ಅರಸನನ್ನಾಗಿ ಮಾಡಿದನೋ, ಅಂದಿನಿಂದಲೇ ಅವನ ರಾಜ್ಯಭಾರವು ಆರಂಭವಾಯಿತೆಂದು ಯೆರೆಮೀಯನು ಸೂಚಿಸಿ ಬರೆದನು.

15. ದಾನಿಯೇಲ 1:1ರಲ್ಲಿ ಕಂಡುಬರುವ ಕಾಲಾವಧಿಯ ವಿಷಯದಲ್ಲಿ ಪ್ರಶ್ನಿಸುವುದು ಏಕೆ ಒಂದು ಪೊಳ್ಳು ವಾಗ್ವಾದವಾಗಿದೆ?

15 ಹಾಗಾದರೆ, ಈ ಅಸಂಬದ್ಧ ಆಪಾದನೆಯೇ, ಬಾಬೆಲಿನಲ್ಲಿ ದಾನಿಯೇಲನು ಯೆಹೂದಿ ದೇಶಭ್ರಷ್ಟರ ನಡುವೆ ಇದ್ದಾಗಲೇ ತನ್ನ ಪುಸ್ತಕವನ್ನು ಬರೆದನು ಎಂಬ ಪುರಾವೆಗೆ ಆಧಾರ​ಕೊಡುತ್ತದೆ ಎಂಬುದು ನಿಜ. ಆದರೆ ದಾನಿಯೇಲ ಪುಸ್ತಕದ ವಿರುದ್ಧವಾದ ಈ ವಾಗ್ವಾದದಲ್ಲಿ ಇನ್ನೊಂದು ತಪ್ಪು ಸ್ಪಷ್ಟವಾಗಿ ಕಂಡುಬರುತ್ತದೆ. ದಾನಿಯೇಲ ಪುಸ್ತಕದ ಬರಹಗಾರನ ಬಳಿ ಯೆರೆಮೀಯನ ಪುಸ್ತಕವಿತ್ತು ಮತ್ತು ಅವನು ಅದರ ಕುರಿತು ಸೂಚಿಸಿದ್ದನು ಎಂಬುದನ್ನು ಜ್ಞಾಪಕದಲ್ಲಿಡಿರಿ. (ದಾನಿಯೇಲ 9:⁠2) ವಿಮರ್ಶಕರು ಪ್ರತಿಪಾದಿಸುವಂತೆ, ದಾನಿಯೇಲ ಪುಸ್ತಕದ ಬರಹಗಾರನು ಒಬ್ಬ ಚತುರ ಮೋಸಗಾರನಾಗಿರುತ್ತಿದ್ದಲ್ಲಿ, ಯೆರೆಮೀಯನಂತಹ ಸನ್ಮಾನ್ಯ ಮೂಲದಿಂದ ಬಂದ ವಿಚಾರಕ್ಕೆ ವಿರುದ್ಧವಾಗಿ, ಅದೂ ಕೂಡ ತನ್ನ ಪುಸ್ತಕದ ಮೊತ್ತಮೊದಲ ವಚನದಲ್ಲೇ ಬರೆಯುವ ಸಾಹಸವನ್ನು ಅವನು ಮಾಡುತ್ತಿದ್ದನೋ? ನಿಶ್ಚಯ​ವಾಗಿಯೂ ಇಲ್ಲ!

ಪರಿಣಾಮಕಾರಿ ವಿವರಗಳು

16, 17. (ಎ) ತನ್ನ ಪ್ರಜೆಗಳೆಲ್ಲರೂ ಆರಾಧಿಸುವಂತೆ ನೆಬೂಕದ್ನೆಚ್ಚರನು ಸ್ಥಾಪಿಸಿದ ಧಾರ್ಮಿಕ ಪ್ರತಿಮೆಯ ಕುರಿತು, ಹಾಗೂ (ಬಿ) ಬಾಬೆಲಿನಲ್ಲಿ ತನ್ನ ನಿರ್ಮಾಣ ಕಾರ್ಯಗಳ ಬಗ್ಗೆ ಜಂಬಕೊಚ್ಚಿಕೊಂಡ ನೆಬೂಕದ್ನೆಚ್ಚರನ ಸ್ವಭಾವದ ಕುರಿತಾದ ದಾನಿಯೇಲನ ವೃತ್ತಾಂತಕ್ಕೆ, ಪ್ರಾಕ್ತನಶಾಸ್ತ್ರವು ಹೇಗೆ ಪುರಾವೆ ನೀಡಿದೆ?

16 ಈಗ ನಾವು ನಕಾರಾತ್ಮಕವಾದ ವಿಷಯಗಳಿಂದ ಸಕಾರಾತ್ಮಕವಾದ ವಿಷಯಗಳ ಕಡೆಗೆ ಗಮನ ಹರಿಸೋಣ. ದಾನಿಯೇಲ ಪುಸ್ತಕದ ಬರಹಗಾರನು ಯಾವ ಕಾಲಾವಧಿಯ ​ಕುರಿತಾಗಿ ಬರೆದನೋ ಅದರ ಕುರಿತು ಅವನಿಗೆ ಸ್ವತಃ ಅನುಭವವಿತ್ತು ಎಂಬುದನ್ನು ಸೂಚಿಸುವಂತಹ, ದಾನಿಯೇಲ ಪುಸ್ತಕದಲ್ಲಿನ ಇನ್ನಿತರ ವಿವರಗಳನ್ನು ಪರಿಗಣಿಸಿರಿ.

17 ಪುರಾತನ ಬಾಬೆಲಿನ ಕುರಿತಾದ ಅತಿ ಸೂಕ್ಷ್ಮ ವಿವರಗಳು ದಾನಿಯೇಲನಿಗೆ ಚಿರಪರಿಚಿತವಾಗಿದ್ದದ್ದು, ಅವನ ವೃತ್ತಾಂತದ ವಿಶ್ವಾಸಾರ್ಹತೆಯ ವಿಷಯದಲ್ಲಿ ಮನವೊಪ್ಪಿಸುವ ರುಜುವಾತಾಗಿದೆ. ದೃಷ್ಟಾಂತಕ್ಕಾಗಿ, ಎಲ್ಲ ಜನರು ಆರಾಧಿಸುವಂತೆ ನೆಬೂಕದ್ನೆಚ್ಚರನು ಒಂದು ಎತ್ತರವಾದ ಪ್ರತಿಮೆಯನ್ನು ಸ್ಥಾಪಿಸಿದನೆಂದು, ದಾನಿಯೇಲ 3:​1-6ನೆಯ ವಚನಗಳು ವರದಿಸುತ್ತವೆ. ತನ್ನ ಪ್ರಜೆಗಳು ರಾಷ್ಟ್ರೀಯ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಹೆಚ್ಚೆಚ್ಚು ಒಳಗೂಡುವಂತೆ ಮಾಡಲು ಈ ರಾಜನು ಪ್ರಯತ್ನಿಸುತ್ತಿದ್ದನು ಎಂಬುದಕ್ಕಿರುವ ಇನ್ನಿತರ ಪುರಾವೆಗಳನ್ನು ಪ್ರಾಕ್ತನಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ. ಅದೇ ರೀತಿಯಲ್ಲಿ, ತನ್ನ ಅನೇಕ ನಿರ್ಮಾಣ ಕಾರ್ಯಗಳ ಬಗ್ಗೆ ಜಂಬಕೊಚ್ಚಿಕೊಂಡ ನೆಬೂಕದ್ನೆಚ್ಚರನ ಸ್ವಭಾವದ ಕುರಿತು ದಾನಿಯೇಲನು ದಾಖಲಿಸುತ್ತಾನೆ. (ದಾನಿಯೇಲ 4:30) ಆದರೂ, ಬಾಬೆಲಿನಲ್ಲಿ ನಿರ್ಮಿಸಲ್ಪಟ್ಟಿರುವ ಬೃಹತ್‌ ಯೋಜನೆಗಳ ಹಿಂದೆ ಖಂಡಿತವಾಗಿಯೂ ನೆಬೂಕದ್ನೆಚ್ಚರನ ಹಸ್ತವಿತ್ತು ಎಂಬುದನ್ನು ಪ್ರಾಕ್ತನಶಾಸ್ತ್ರಜ್ಞರು ಇತ್ತೀಚಿಗಷ್ಟೇ ದೃಢಪಡಿಸಿದ್ದಾರೆ. ನೆಬೂಕದ್ನೆಚ್ಚರನ ಜಂಬಕೊಚ್ಚಿಕೊಳ್ಳುವಿಕೆಯು ಯಾವ ಮಟ್ಟವನ್ನು ತಲಪಿತ್ತೆಂದರೆ, ಅವನು ಇಟ್ಟಿಗೆಗಳ ಮೇಲೂ ತನ್ನ ಹೆಸರನ್ನು ಅಚ್ಚೊತ್ತಿಸಿದ್ದನು! ಮಕಬೀಯರ ಸಮಯಗಳಲ್ಲಿ (ಸಾ.ಶ.ಪೂ. 167-63) ಜೀವಿಸುತ್ತಿದ್ದ ಒಬ್ಬ ಊಹಿತ ಮೋಸಗಾರನಿಗೆ, ಇಂತಹ ನಿರ್ಮಾಣ ಯೋಜನೆಗಳ ಕುರಿತು, ಅದೂ ಕೂಡ ಈ ಯೋಜನೆಗಳು ಪೂರ್ಣಗೊಂಡ ನಾಲ್ಕು ಶತಮಾನಗಳ ಬಳಿಕ ಹಾಗೂ ಪ್ರಾಕ್ತನಶಾಸ್ತ್ರಜ್ಞರು ಈ ವಿಷಯವನ್ನು ಕಂಡುಹಿಡಿಯುವುದಕ್ಕೆ ಮೊದಲೇ ಹೇಗೆ ಗೊತ್ತಿದ್ದಿರಸಾಧ್ಯವಿದೆ ಎಂಬುದನ್ನು ದಾನಿಯೇಲ ಪುಸ್ತಕದ ವಿಮರ್ಶಕರು ವಿವರಿಸಲಾರರು.

18. ಬಾಬೆಲಿನ ಆಳ್ವಿಕೆಯ ಕೆಳಗೆ ಹಾಗೂ ಪಾರಸಿಯ ಆಳ್ವಿಕೆಯ ಕೆಳಗೆ ಕೊಡಲ್ಪಡುತ್ತಿದ್ದ ಬೇರೆ ಬೇರೆ ಶಿಕ್ಷಾ ವಿಧಾನಗಳ ಕುರಿತಾದ ದಾನಿಯೇಲನ ವೃತ್ತಾಂತವು ಹೇಗೆ ನಿಷ್ಕೃಷ್ಟವಾಗಿದೆ?

18 ಬಾಬೆಲಿನ ಹಾಗೂ ಮೇದ್ಯಯಪಾರಸಿಯ ನಿಯಮಗಳ ನಡುವೆಯಿದ್ದ ಕೆಲವು ಪ್ರಮುಖ ಭಿನ್ನತೆಗಳನ್ನು ಸಹ ದಾನಿಯೇಲನ ಪುಸ್ತಕವು ಪ್ರಕಟಪಡಿಸುತ್ತದೆ. ಉದಾಹರಣೆಗಾಗಿ, ಬಾಬೆಲಿನ ನಿಯಮಕ್ಕನುಸಾರ, ಅರಸನ ಆಜ್ಞೆಗೆ ವಿಧೇಯರಾಗಲು ನಿರಾಕರಿಸಿದ್ದಕ್ಕಾಗಿ, ದಾನಿಯೇಲನ ಮೂವರು ಸಂಗಡಿಗರನ್ನು ಧಗಧಗನೆ ಉರಿಯುತ್ತಿದ್ದ ಆವಿಗೆಯೊಳಗೆ ಹಾಕಲಾಗಿತ್ತು. ದಶಕಗಳ ಬಳಿಕ, ತನ್ನ ಮನಸ್ಸಾಕ್ಷಿಗೆ ವಿರುದ್ಧವಾಗಿದ್ದ ಪಾರಸಿಯ ನಿಯಮಕ್ಕೆ ವಿಧೇಯ​ನಾಗಲು ನಿರಾಕರಿಸಿದ್ದಕ್ಕಾಗಿ ದಾನಿಯೇಲನನ್ನು ಸಿಂಹಗಳ ಗವಿಯೊಳಗೆ ಹಾಕಲಾಗಿತ್ತು. (ದಾನಿಯೇಲ 3:6; 6:​7-9) ಕೆಲವರು ಧಗಧಗನೆ ಉರಿಯುತ್ತಿದ್ದ ಆವಿಗೆಯ ವೃತ್ತಾಂತವನ್ನು ಸುಳ್ಳೆಂದು ರುಜುಪಡಿಸಲು ಪ್ರಯತ್ನಿಸಿದ್ದಾರೆ, ಆದರೆ ಪುರಾತನ ಬಾಬೆಲಿನಲ್ಲಿ, ಈ ರೀತಿಯ ಶಿಕ್ಷೆಯ ಕುರಿತು ಸ್ಪಷ್ಟವಾಗಿ ಉಲ್ಲೇಖಿಸುವ ಒಂದು ಲಿಖಿತ ಸಂದೇಶವು ಪ್ರಾಕ್ತನಶಾಸ್ತ್ರಜ್ಞರಿಗೆ ಸಿಕ್ಕಿದೆ. ಅಷ್ಟುಮಾತ್ರವಲ್ಲ, ಮೇದ್ಯಯರಿಗೆ ಹಾಗೂ ಪಾರಸಿಯರಿಗೆ ಬೆಂಕಿಯು ಪವಿತ್ರವಾಗಿತ್ತು. ಆದುದರಿಂದ ಅವರು ಕ್ರೂರವಾದ ಇನ್ನಿತರ ಶಿಕ್ಷಾ ವಿಧಾನಗಳನ್ನು ಅವಲಂಬಿಸಿದರು. ಹೀಗೆ, ಸಿಂಹಗಳ ಗವಿಯ ಶಿಕ್ಷೆಯು ಒಂದು ಆಶ್ಚರ್ಯಕರವಾದ ಸಂಗತಿಯೇನಲ್ಲ.

19. ಬಾಬೆಲಿನ ಹಾಗೂ ಮೇದ್ಯ ಪಾರಸಿಯ ಶಾಸನಸಂಬಂಧಿತ ವ್ಯವಸ್ಥೆಗಳ ನಡುವೆಯಿದ್ದ ಯಾವ ವ್ಯತ್ಯಾಸವನ್ನು ದಾನಿಯೇಲನ ಪುಸ್ತಕವು ಸ್ಪಷ್ಟಪಡಿಸುತ್ತದೆ?

19 ಇನ್ನೊಂದು ವ್ಯತ್ಯಾಸವು ಕಂಡುಬರುತ್ತದೆ. ನೆಬೂಕದ್ನೆಚ್ಚರನು ನಿಯಮಗಳನ್ನು ವಿಧಿಸಿ, ಮನಸ್ಸು ಬಂದಂತೆ ಅವುಗಳನ್ನು ಬದಲಾಯಿಸಲು ಶಕ್ತನಾಗಿದ್ದನು ಎಂದು ದಾನಿಯೇಲನು ತೋರಿಸುತ್ತಾನೆ. ಆದರೆ ದಾರ್ಯಾವೆಷನು ‘ಮೇದ್ಯಯರ ಮತ್ತು ಪಾರಸಿಯರ ನಿಯಮ​ಗಳನ್ನು’​—⁠ತಾನೇ ವಿಧಿಸಿದ ನಿಯಮಗಳನ್ನು ಸಹ ಬದಲಾಯಿಸಲು ಸಾಧ್ಯವಿರಲಿಲ್ಲ! (ದಾನಿಯೇಲ 2:​5, 6, 24, 46-49; 3:​10, 11, 29; 6:​12-16) ಇತಿಹಾಸಕಾರನಾದ ಜಾನ್‌ ಸಿ. ವಿಟ್‌ಕೊಮ್‌ ಬರೆಯುವುದು: “ಎಲ್ಲಿ ನಿಯಮವು ಅರಸನಿಗೆ ಅಧೀನವಾಗಿತ್ತೋ ಆ ಬಾಬೆಲ್‌, ಹಾಗೂ ಎಲ್ಲಿ ಅರಸನು ನಿಯಮಕ್ಕೆ ಅಧೀನನಾಗಿದ್ದನೋ ಆ ಮೇದ್ಯಯಪಾರಸಿಯದ ನಡುವಿನ ಭಿನ್ನತೆಯನ್ನು ಪುರಾತನ ಇತಿಹಾಸವು ದೃಢೀಕರಿಸುತ್ತದೆ.”

20. ಬೇಲ್ಶಚ್ಚರನ ಔತಣದ ಕುರಿತಾದ ಯಾವ ವಿವರಗಳು, ಬಾಬೆಲಿನ ಪದ್ಧತಿಗಳ ವಿಷಯದಲ್ಲಿ ದಾನಿಯೇಲನಿಗೆ ಸ್ವತಃ ಅನುಭವವಿತ್ತು ಎಂಬುದನ್ನು ತೋರಿಸುತ್ತವೆ?

20 ದಾನಿಯೇಲ 5ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಬೇಲ್ಶಚ್ಚರನ ಔತಣದ ಕುರಿತಾದ ರೋಮಾಂಚಕ ವೃತ್ತಾಂತವು ಸವಿವರವಾಗಿದೆ. ಔತಣವು ಉಲ್ಲಾಸಕರವಾದ ಊಟ ಹಾಗೂ ಯಥೇಷ್ಟವಾದ ದ್ರಾಕ್ಷಾರಸದ ಕುಡಿತದೊಂದಿಗೆ ಆರಂಭಗೊಂಡಿತ್ತು ಎಂಬುದು ಸ್ಪಷ್ಟ. ಏಕೆಂದರೆ ಅನೇಕ ಕಡೆಗಳಲ್ಲಿ ದ್ರಾಕ್ಷಾರಸದ ಬಗ್ಗೆ ಉಲ್ಲೇಖಿಸಲಾಗಿದೆ. (ದಾನಿಯೇಲ 5:​1, 2, 4) ಅಷ್ಟುಮಾತ್ರವಲ್ಲ, ತದ್ರೀತಿಯ ಔತಣಗಳನ್ನು ಚಿತ್ರಿಸುವ ಉಬ್ಬುಚಿತ್ರದ ಕೆತ್ತನೆಗಳು, ಕೇವಲ ದ್ರಾಕ್ಷಾರಸದ ಬಳಕೆಯನ್ನು ತೋರಿಸುತ್ತವೆ. ಅಂತಹ ಔತಣ​ಕೂಟಗಳಲ್ಲಿ ದ್ರಾಕ್ಷಾರಸವು ಅತ್ಯಗತ್ಯವಾಗಿ ಇರಬೇಕಿತ್ತು. ಈ ಔತಣದಲ್ಲಿ ಸ್ತ್ರೀಯರು, ಅಂದರೆ ಅರಸನ ಉಪರಾಣಿಯರು ಹಾಗೂ ಉಪಪತ್ನಿಯರು ಸಹ ಇದ್ದರು ಎಂದು ದಾನಿಯೇಲನು ತಿಳಿಸುತ್ತಾನೆ. (ದಾನಿಯೇಲ 5:​3, 23) ಬಾಬೆಲಿನಲ್ಲಿದ್ದ ಈ ಪದ್ಧತಿಯ ವಿವರಕ್ಕೆ, ಪ್ರಾಕ್ತನಶಾಸ್ತ್ರವು ಆಧಾರ ಕೊಡುತ್ತದೆ. ಔತಣದಲ್ಲಿ ಪುರುಷರೊಂದಿಗೆ ಪತ್ನಿಯರು ಜೊತೆಗೂಡುವ ಕಲ್ಪನೆಯು, ಮಕಬೀಯರ ಯುಗದಲ್ಲಿದ್ದ ಯೆಹೂದ್ಯರು ಹಾಗೂ ಗ್ರೀಕರ ನಡುವೆ ಆಕ್ಷೇಪಣೀಯವಾಗಿತ್ತು. ಬಹುಶಃ ಈ ಕಾರಣದಿಂದಲೇ, ದಾನಿಯೇಲ ಪುಸ್ತಕದ ಗ್ರೀಕ್‌ ಸೆಪ್ಟ್ಯುಅಜಿಂಟ್‌ ಭಾಷಾಂತರದ ಮೂಲ ಪಾಠಗಳಲ್ಲಿ, ಈ ಸ್ತ್ರೀಯರ ಕುರಿತಾಗಿ ಎಲ್ಲಿಯೂ ಉಲ್ಲೇಖಿಸಲ್ಪಟ್ಟಿಲ್ಲ. * ಹೀಗಿದ್ದರೂ, ದಾನಿಯೇಲ ಪುಸ್ತಕದ ಮೋಸಗಾರ ಬರಹಗಾರನು, ಅದೇ ಹೆಲೀನಿಕ್‌ (ಗ್ರೀಕ್‌) ಸಂಸ್ಕೃತಿಯ ಕಾಲಾವಧಿಯಲ್ಲಿ, ಅಂದರೆ ಸೆಪ್ಟ್ಯುಅಜಿಂಟ್‌ ಬೈಬಲನ್ನು ತಯಾರಿಸಿದ ಶಕದಲ್ಲೇ ಜೀವಿಸಿದನೆಂದು ಹೇಳಲಾಗುತ್ತದಲ್ಲ!

21. ಬಾಬೆಲಿನ ದೇಶಭ್ರಷ್ಟತೆಯ ಕಾಲಾವಧಿಗಳು ಹಾಗೂ ಪದ್ಧತಿಗಳು ದಾನಿಯೇಲನಿಗೆ ಚಿರ​ಪರಿಚಿತವಾಗಿದ್ದವು ಎಂಬುದಕ್ಕಿರುವ ಅತ್ಯಂತ ಸಮಂಜಸವಾದ ವಿವರಣೆಯು ಯಾವುದಾಗಿದೆ?

21 ಇಂತಹ ವಿವರಗಳನ್ನು ಗಮನಿಸುವಾಗ, ದಾನಿಯೇಲ ಪುಸ್ತಕದ ಲೇಖಕನಿಗೆ, ದೇಶಭ್ರಷ್ಟ ಜೀವನದ ಕುರಿತು “ಸ್ವಲ್ಪಮಟ್ಟಿಗೆ ಮಾತ್ರ ತಿಳಿದಿತ್ತು ಹಾಗೂ ಅಸ್ಪಷ್ಟವಾದ” ಜ್ಞಾನವಿತ್ತು ಎಂದು ಬ್ರಿಟ್ಯಾನಿಕವು ವಿವರಿಸುವುದು ಬಹುಮಟ್ಟಿಗೆ ನಂಬಲು ಅಸಾಧ್ಯವಾದದ್ದಾಗಿ ಕಂಡುಬರುತ್ತದೆ. ತದನಂತರದ ಶತಮಾನದ ಒಬ್ಬ ಮೋಸಗಾರನಿಗೆ, ಪುರಾತನ ಬಾಬೆಲಿನ ಹಾಗೂ ಪಾರಸಿಯ ಪದ್ಧತಿಗಳ ಬಗ್ಗೆ ಇಷ್ಟು ಕೂಲಂಕಷವಾಗಿ ಹೇಗೆ ಗೊತ್ತಿರಸಾಧ್ಯವಿತ್ತು? ಸಾ.ಶ.ಪೂ. ಎರಡನೆಯ ಶತಮಾನವು ಆರಂಭಗೊಳ್ಳುವ ಬಹಳ ಸಮಯದ ಮುಂಚೆಯೇ, ಈ ಎರಡೂ ಚಕ್ರಾಧಿಪತ್ಯಗಳು ಅವನತಿಹೊಂದಿದ್ದವು ಎಂಬುದು ಸಹ ನಿಮಗೆ ನೆನಪಿರಲಿ. ಆ ಸಮಯದಲ್ಲಿ ಪ್ರಾಕ್ತನಶಾಸ್ತ್ರಜ್ಞರು ಇರಲಿಲ್ಲವೆಂಬುದು ಸುವ್ಯಕ್ತ; ಮತ್ತು ವಿದೇಶೀಯ ಸಂಸ್ಕೃತಿಗಳು ಹಾಗೂ ಇತಿಹಾಸದ ಕುರಿತಾದ ಜ್ಞಾನವನ್ನು ಪಡೆದುಕೊಂಡಿರುವುದರ ಬಗ್ಗೆ ಆ ಸಮಯದ ಯೆಹೂದ್ಯರು ಹೆಮ್ಮೆಪಟ್ಟುಕೊಳ್ಳಲೂ ಇಲ್ಲ. ತಾನು ವಿವರಿಸಿದ ಕಾಲಗಳ ಹಾಗೂ ಘಟನೆಗಳ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಪ್ರವಾದಿಯಾದ ದಾನಿಯೇಲನು ಮಾತ್ರವೇ, ಅವನ ಹೆಸರಿರುವ ಬೈಬಲ್‌ ಪುಸ್ತಕವನ್ನು ಬರೆದಿದ್ದಿರಸಾಧ್ಯವಿದೆ.

ದಾನಿಯೇಲ ಪುಸ್ತಕವು ಖೋಟಾ ಎಂಬುದನ್ನು ಬಾಹ್ಯ ಸಂಗತಿಗಳು ರುಜುಪಡಿಸುತ್ತವೊ?

22. ಹೀಬ್ರು ಶಾಸ್ತ್ರವಚನಗಳ ಅಂಗೀಕೃತ ಧರ್ಮಶಾಸ್ತ್ರದಲ್ಲಿ ದಾನಿಯೇಲ ಪುಸ್ತಕದ ಸ್ಥಾನದ ಕುರಿತು ವಿಮರ್ಶಕರು ಏನೆಂದು ಪ್ರತಿಪಾದಿಸುತ್ತಾರೆ?

22 ದಾನಿಯೇಲ ಪುಸ್ತಕದ ವಿರುದ್ಧವಾಗಿರುವ ಅತಿ ಸಾಮಾನ್ಯ ವಾಗ್ವಾದಗಳಲ್ಲಿ ಒಂದು, ಹೀಬ್ರು ಶಾಸ್ತ್ರವಚನಗಳ ಅಂಗೀಕೃತ ಧರ್ಮಶಾಸ್ತ್ರದಲ್ಲಿನ ಅದರ ಸ್ಥಾನವೇ ಆಗಿದೆ. ಪುರಾತನ ರಬ್ಬಿಗಳು, ಹೀಬ್ರು ಶಾಸ್ತ್ರವಚನಗಳ ಪುಸ್ತಕಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿದರು: ಧರ್ಮಶಾಸ್ತ್ರ, ಪ್ರವಾದಿಗಳು, ಹಾಗೂ ಬರಹಗಳು. ಅವರು ದಾನಿಯೇಲ ಪುಸ್ತಕವನ್ನು ಪ್ರವಾದಿಗಳ ಗುಂಪಿಗೆ ಸೇರಿಸುವುದಕ್ಕೆ ಬದಲಾಗಿ, ಬರಹಗಳ ಗುಂಪಿಗೆ ಸೇರಿಸಿದರು. ಬೇರೆ ಪ್ರವಾದಿಗಳ ಕೃತಿಗಳನ್ನು ಸಂಗ್ರಹಿಸುತ್ತಿದ್ದ ಸಮಯದಲ್ಲಿ, ಈ ದಾನಿಯೇಲ ಪುಸ್ತಕವು ಅಜ್ಞಾತ​ವಾಗಿದ್ದಿರಬೇಕು ಎಂಬುದೇ ಇದರ ಅರ್ಥವಾಗಿದೆ ಎಂದು ವಿಮರ್ಶಕರು ವಾದಿಸುತ್ತಾರೆ. ಈ ಪುಸ್ತಕವನ್ನು ತಡವಾಗಿ ಸಂಗ್ರಹಿಸಿದ್ದರಿಂದ, ಇದನ್ನು ಬರಹಗಳ ನಡುವೆ ಸೇರಿಸಿದ್ದಿರಬಹುದು ಎಂದು ಅವರು ಹೇಳುತ್ತಾರೆ.

23. ಪುರಾತನ ಯೆಹೂದ್ಯರು ದಾನಿಯೇಲ ಪುಸ್ತಕವನ್ನು ಯಾವ ದೃಷ್ಟಿಯಿಂದ ನೋಡಿದರು, ಮತ್ತು ಇದು ನಮಗೆ ಹೇಗೆ ಗೊತ್ತಿದೆ?

23 ಆದರೂ, ಪುರಾತನ ರಬ್ಬಿಗಳು ಇಷ್ಟೊಂದು ಕಟ್ಟುನಿಟ್ಟಾಗಿ ಅಂಗೀಕೃತ ಧರ್ಮಶಾಸ್ತ್ರವನ್ನು ವಿಭಾಗಿಸಿದರು ಅಥವಾ ದಾನಿಯೇಲ ಪುಸ್ತಕವನ್ನು ಪ್ರವಾದಿಗಳ ಗುಂಪಿನಲ್ಲಿ ಸೇರಿಸಲಿಲ್ಲ ಎಂಬುದನ್ನು ಎಲ್ಲ ಬೈಬಲ್‌ ಸಂಶೋಧಕರು ಒಪ್ಪಿಕೊಳ್ಳುವುದಿಲ್ಲ. ರಬ್ಬಿಗಳು ದಾನಿಯೇಲ ಪುಸ್ತಕವನ್ನು ಬರಹಗಳ ಗುಂಪಿಗೆ ಸೇರಿಸಿದರಾದರೂ, ಈ ಪುಸ್ತಕವನ್ನು ತದನಂತರದ ಸಮಯ​ದಲ್ಲಿ ಬರೆಯಲಾಯಿತೆಂಬುದನ್ನು ಇದು ರುಜುಪಡಿಸುತ್ತದೋ? ಇಲ್ಲವೇ ಇಲ್ಲ. ಹೆಸರಾಂತ ಪಂಡಿತರು, ರಬ್ಬಿಗಳು ದಾನಿಯೇಲ ಪುಸ್ತಕವನ್ನು ಪ್ರವಾದಿಗಳ ಗುಂಪಿಗೆ ಏಕೆ ಸೇರಿಸದೆ ಇದ್ದಿರಬಹುದು ಎಂಬುದಕ್ಕೆ ಅನೇಕ ಕಾರಣಗಳನ್ನು ಸೂಚಿಸಿದ್ದಾರೆ. ಉದಾಹರಣೆಗಾಗಿ, ಈ ಪುಸ್ತಕವು ರಬ್ಬಿಗಳಿಗೆ ಅಸಮಾಧಾನವನ್ನು ಉಂಟುಮಾಡಿದ್ದರಿಂದ ಅಥವಾ ದಾನಿಯೇಲನು ವಿದೇಶದಲ್ಲಿ ಐಹಿಕ ಅಧಿಕಾರದಲ್ಲಿರುವ ಮೂಲಕ, ಬೇರೆ ಎಲ್ಲ ಪ್ರವಾದಿಗಳಿಗಿಂತ ಭಿನ್ನನಾಗಿದ್ದನು ಎಂದು ಭಾವಿಸಿದ್ದರಿಂದ ರಬ್ಬಿಗಳು ಹಾಗೆ ಮಾಡಿರಬಹುದು. ಏನೇ ಆಗಲಿ, ಪ್ರಾಮುಖ್ಯವಾದ ವಿಷಯವೇನೆಂದರೆ, ದಾನಿಯೇಲ ಪುಸ್ತಕದ ಬಗ್ಗೆ ಪುರಾತನ ಯೆಹೂದ್ಯರಿಗೆ ತುಂಬ ಗೌರವವಿತ್ತು ಮತ್ತು ಅವರು ಅದನ್ನು ಅಂಗೀಕೃತ ಧರ್ಮಶಾಸ್ತ್ರದ ಭಾಗವೆಂದು ನಂಬಿದ್ದರು. ಅಷ್ಟುಮಾತ್ರವಲ್ಲ, ಸಾ.ಶ.ಪೂ. ಎರಡನೆಯ ಶತಮಾನಕ್ಕೆ ಬಹಳ ಸಮಯ ಮುಂಚೆಯೇ, ಹೀಬ್ರು ಶಾಸ್ತ್ರವಚನಗಳ ಅಂಗೀಕೃತ ಧರ್ಮಶಾಸ್ತ್ರವು ಪೂರ್ಣಗೊಂಡಿತ್ತು ಎಂದು ಪುರಾವೆಯು ಸೂಚಿಸುತ್ತದೆ. ತದನಂತರ, ಸಾ.ಶ.ಪೂ. ಎರಡನೆಯ ಶತಮಾನದಲ್ಲಿ ಬರೆಯಲ್ಪಟ್ಟ ಕೆಲವು ಪುಸ್ತಕಗಳನ್ನೂ ಸೇರಿಸಿ, ಇನ್ನಿತರ ಸಂಕಲನಗಳು ಅಂಗೀಕೃತ ಧರ್ಮಶಾಸ್ತ್ರದ ಭಾಗವಾಗಿರಲಿಲ್ಲ.

24. ಎಕ್ಲೀಸಿಆ್ಯಸ್ಟಿಕಸ್‌ ಎಂಬ ಅವಿಶ್ವಸನೀಯ ಪುಸ್ತಕವನ್ನು, ದಾನಿಯೇಲ ಪುಸ್ತಕದ ವಿರುದ್ಧ ಹೇಗೆ ಉಪಯೋಗಿಸಲಾಗಿದೆ, ಮತ್ತು ಈ ತರ್ಕವು ತಪ್ಪಾಗಿದೆ ಎಂಬುದನ್ನು ಯಾವುದು ತೋರಿಸುತ್ತದೆ?

24 ವ್ಯಂಗ್ಯವಾಗಿ, ಸಾ.ಶ.ಪೂ. ಎರಡನೆಯ ಶತಮಾನದ ಬಳಿಕ ತಿರಸ್ಕರಿಸಲ್ಪಟ್ಟ ಪುಸ್ತಕ​ಗಳಲ್ಲಿ ಒಂದನ್ನು, ದಾನಿಯೇಲ ಪುಸ್ತಕದ ವಿರುದ್ಧ ವಾಗ್ವಾದಿಸಲಿಕ್ಕಾಗಿ ಉಪಯೋಗಿಸಲಾಗಿದೆ. ಜೀಸಸ್‌ ಬೆನ್‌ ಸಿರಾಕ್‌ನಿಂದ ಬರೆಯಲ್ಪಟ್ಟ ಎಕ್ಲೀಸಿಆ್ಯಸ್ಟಿಕಸ್‌ ಎಂಬ ಅವಿಶ್ವಸನೀಯ ಪುಸ್ತಕವು, ಸಾ.ಶ.ಪೂ. 180ರ ಸುಮಾರಿಗೆ ರಚಿಸಲ್ಪಟ್ಟಿತ್ತೆಂಬುದು ಸುವ್ಯಕ್ತ. ಆ ಪುಸ್ತಕದಲ್ಲಿರುವ ನೀತಿವಂತರ ದೊಡ್ಡ ಪಟ್ಟಿಯಿಂದ ದಾನಿಯೇಲನ ಹೆಸರು ತೆಗೆದುಹಾಕಲ್ಪಟ್ಟಿದೆ ಎಂಬುದನ್ನು ಎತ್ತಿತೋರಿಸಲು ವಿಮರ್ಶಕರು ಇಷ್ಟಪಡುತ್ತಾರೆ. ಆ ಸಮಯದಲ್ಲಿ ದಾನಿಯೇಲನು ಅಜ್ಞಾತ​ನಾಗಿದ್ದಿರಬೇಕು ಎಂದು ಅವರು ತರ್ಕಿಸುತ್ತಾರೆ. ಈ ವಾಗ್ವಾದವನ್ನು ಬಹಳಷ್ಟು ಪಂಡಿತರು ಒಪ್ಪುತ್ತಾರೆ. ಆದರೆ ಇದನ್ನು ಪರಿಗಣಿಸಿರಿ: ಅದೇ ಪಟ್ಟಿಯಲ್ಲಿ ಎಜ್ರ ಹಾಗೂ ಮೊರ್ದೆಕೈ (ಬಾಬೆಲಿನ ದೇಶಭ್ರಷ್ಟತೆಯ ನಂತರ ಇದ್ದ ಯೆಹೂದ್ಯರ ದೃಷ್ಟಿಯಲ್ಲಿ ಇವರಿಬ್ಬರೂ ಅಗ್ರಗಣ್ಯರಾಗಿದ್ದರು), ಒಳ್ಳೆಯ ಅರಸನಾದ ಯೆಹೋಷಾಫಾಟ, ಹಾಗೂ ಯಥಾರ್ಥವಂತನಾದ ಯೋಬನ ಹೆಸರುಗಳೂ ಇಲ್ಲ; ಎಲ್ಲ ನ್ಯಾಯಸ್ಥಾಪಕರಲ್ಲಿ ಕೇವಲ ಸಮುವೇಲನ ಹೆಸರನ್ನು ಮಾತ್ರ ಅದು ಪಟ್ಟಿಮಾಡುತ್ತದೆ. * ಅಂಗೀಕೃತ ಧರ್ಮಶಾಸ್ತ್ರದ ಭಾಗವಾಗಿ ಪರಿಗಣಿಸಲ್ಪಟ್ಟಿರದಂತಹ ಒಂದು ಪುಸ್ತಕದಲ್ಲಿ, ಅದೂ ಸಂಪೂರ್ಣವೆಂದು ಹೇಳಸಾಧ್ಯವಿಲ್ಲದಂತಹ ಒಂದು ಪಟ್ಟಿಯಲ್ಲಿ ಈ ವ್ಯಕ್ತಿಗಳ ಹೆಸರುಗಳು ಇಲ್ಲದಿರುವುದರಿಂದ, ಇವರೆಲ್ಲರೂ ಕಾಲ್ಪನಿಕ ವ್ಯಕ್ತಿ​ಗಳಾಗಿದ್ದಾರೆಂಬ ತೀರ್ಮಾನಕ್ಕೆ ನಾವು ಬರಬೇಕೊ? ಈ ಕಲ್ಪನೆಯೇ ಅಸಂಬದ್ಧವಾಗಿದೆ.

ದಾನಿಯೇಲನ ಪರವಾಗಿರುವ ಬಾಹ್ಯ ಪುರಾವೆ

25. (ಎ) ಜೋಸೀಫಸನು ದಾನಿಯೇಲನ ವೃತ್ತಾಂತದ ವಿಶ್ವಾಸಾರ್ಹತೆಯನ್ನು ಹೇಗೆ ದೃಢೀ​ಕರಿಸಿದನು? (ಬಿ) ಮಹಾ ಅಲೆಕ್ಸಾಂಡರ್‌ ಹಾಗೂ ದಾನಿಯೇಲ ಪುಸ್ತಕದ ಕುರಿತಾದ ಜೋಸೀಫಸನ ವೃತ್ತಾಂತವು, ಪ್ರಸಿದ್ಧ ಇತಿಹಾಸದೊಂದಿಗೆ ಹೇಗೆ ಹೊಂದಿಕೆಯಲ್ಲಿದೆ? (ಎರಡನೆಯ ಪಾದಟಿಪ್ಪಣಿಯನ್ನು ನೋಡಿರಿ.) (ಸಿ) ಭಾಷಾಸಂಬಂಧವಾದ ಪುರಾವೆಯು ದಾನಿಯೇಲನ ಪುಸ್ತಕ​ವನ್ನು ಹೇಗೆ ಬೆಂಬಲಿಸುತ್ತದೆ? (26ನೆಯ ಪುಟವನ್ನು ನೋಡಿರಿ.)

25 ಈಗ ನಾವು ಪುನಃ ಸಕಾರಾತ್ಮಕ ವಿಷಯಗಳ ಕಡೆಗೆ ಗಮನ ಹರಿಸೋಣ. ಹೀಬ್ರು ಶಾಸ್ತ್ರವಚನಗಳ ಇನ್ನಾವ ಪುಸ್ತಕಕ್ಕೂ ದಾನಿಯೇಲ ಪುಸ್ತಕದಷ್ಟು ರುಜುವಾತು ಸಿಕ್ಕಿಲ್ಲ ಎಂದು ಹೇಳಲಾಗಿದೆ. ದೃಷ್ಟಾಂತಕ್ಕಾಗಿ: ಪ್ರಸಿದ್ಧ ಯೆಹೂದಿ ಇತಿಹಾಸಕಾರನಾದ ಜೋಸೀಫಸನು, ಈ ಪುಸ್ತಕದ ವಿಶ್ವಾಸಾರ್ಹತೆಯನ್ನು ದೃಢೀಕರಿಸುತ್ತಾನೆ. ಸಾ.ಶ.ಪೂ. ನಾಲ್ಕನೆಯ ಶತಮಾನದಲ್ಲಿ, ಪಾರಸಿಯರ ವಿರುದ್ಧ ಯುದ್ಧಮಾಡಲಿಕ್ಕಾಗಿ ಮಹಾ ಅಲೆಕ್ಸಾಂಡರನು ಯೆರೂಸಲೇಮಿಗೆ ಬಂದನು. ಆಗ ಯಾಜಕರು ದಾನಿಯೇಲ ಪುಸ್ತಕದ ಒಂದು ಪ್ರತಿಯನ್ನು ಅವನಿಗೆ ತೋರಿಸಿದರು ಎಂದು ಜೋಸೀಫಸನು ಹೇಳುತ್ತಾನೆ. ತನ್ನ ವಿಷಯದಲ್ಲಿ ಸೂಚಿಸಲ್ಪಟ್ಟಿರುವ ದಾನಿಯೇಲ ಪ್ರವಾದನೆಯ ಮಾತುಗಳು, ಪಾರಸಿಯರ ಸಂಬಂಧದಲ್ಲಿ ತನ್ನ ಸ್ವಂತ ಮಿಲಿಟರಿ ಕಾರ್ಯಾಚರಣೆಗೆ ಸೂಚಿತವಾಗಿವೆ ಎಂದು ಅಲೆಕ್ಸಾಂಡರನೇ ಒಪ್ಪಿಕೊಂಡನು. * ಇದು, ವಿಮರ್ಶಕರು ಯಾವುದನ್ನು “ಮೋಸ” ಎಂದು ಹೇಳುತ್ತಾರೋ, ಅದಕ್ಕಿಂತಲೂ ಸುಮಾರು ಒಂದೂವರೆ ಶತಮಾನಗಳಿಗೆ ಮುಂಚೆ ಸಂಭವಿಸಿದ್ದಿರಸಾಧ್ಯವಿದೆ. ಈ ಉದ್ಧೃತ ಭಾಗದ ಕುರಿತು ವಿಮರ್ಶಕರು ಜೋಸೀಫಸನ ಮೇಲೆ ದಾಳಿಮಾಡಿದ್ದಾರೆಂಬುದು ಖಂಡಿತ. ದಾನಿಯೇಲ ಪುಸ್ತಕದಲ್ಲಿರುವ ಕೆಲವು ಪ್ರವಾದನೆಗಳು ನೆರವೇರಿದವು ಎಂದು ಜೋಸೀಫಸನು ದಾಖಲಿಸಿರುವುದಕ್ಕಾಗಿಯೂ ಅವರು ಅವನ ಮೇಲೆ ಆಕ್ರಮಣಮಾಡಿದ್ದಾರೆ. ಆದರೂ, ಇತಿಹಾಸಕಾರನಾದ ಜೋಸೆಫ್‌ ಡಿ. ವಿಲ್ಸನ್‌ ಹೇಳಿದಂತೆ, “ಜಗತ್ತಿನಲ್ಲಿರುವ ಎಲ್ಲ ವಿಮರ್ಶಕರಿಗಿಂತಲೂ [ಜೋಸೀಫಸನಿಗೆ] ಈ ವಿಷಯದ ಬಗ್ಗೆ ಹೆಚ್ಚು ತಿಳಿದಿದ್ದಿರಬಹುದು.”

26. ದಾನಿಯೇಲ ಪುಸ್ತಕದ ವಿಶ್ವಾಸಾರ್ಹತೆಗೆ ಮೃತ ಸಮುದ್ರದ ಸುರುಳಿಗಳು ಹೇಗೆ ಬೆಂಬಲ ನೀಡಿವೆ?

26 ಇಸ್ರೇಲ್‌ನ ಕುಮ್‌ರಾನ್‌ನ ಗುಹೆಗಳಲ್ಲಿ ಮೃತ ಸಮುದ್ರದ ಸುರುಳಿಗಳು ದೊರೆತಾಗ, ದಾನಿಯೇಲ ಪುಸ್ತಕದ ವಿಶ್ವಾಸಾರ್ಹತೆಗೆ ಇನ್ನೂ ಹೆಚ್ಚಿನ ಬೆಂಬಲ ದೊರಕಿತು. 1952ರಲ್ಲಿ ಪತ್ತೆಮಾಡಲ್ಪಟ್ಟ ಕಂಡುಹಿಡಿತಗಳಲ್ಲಿ, ದಾನಿಯೇಲ ಪುಸ್ತಕದ ಸುರುಳಿಗಳು ಹಾಗೂ ಅವಶೇಷ​ಗಳು ಅಸಂಖ್ಯಾತವಾಗಿದ್ದವು ಎಂಬುದು ಆಶ್ಚರ್ಯಕರ ವಿಷಯವಾಗಿತ್ತು. ಅವುಗಳಲ್ಲಿ ಅತಿ ಪುರಾತನವಾದದ್ದು, ಸಾ.ಶ.ಪೂ. ಎರಡನೆಯ ಶತಮಾನದ ಕೊನೆಯ ಭಾಗಕ್ಕೆ ಸೇರಿದ್ದಾಗಿತ್ತು. ಆದುದರಿಂದ, ಆ ಸಮಯದಲ್ಲೇ ದಾನಿಯೇಲ ಪುಸ್ತಕವು ತುಂಬ ಪ್ರಸಿದ್ಧವಾಗಿತ್ತು ಮತ್ತು ವ್ಯಾಪಕವಾಗಿ ಗೌರವಿಸಲ್ಪಡುತ್ತಿತ್ತು. ದ ಸಾಂಡರ್‌ವ್ಯಾನ್‌ ಪಿಕ್ಟೋರಿಯಲ್‌ ಎನ್‌ಸೈಕ್ಲೊಪೀಡಿಯ ಆಫ್‌ ದ ಬೈಬಲ್‌ ಹೀಗೆ ಹೇಳುತ್ತದೆ: “ದಾನಿಯೇಲ ಪುಸ್ತಕದ ಸಂಯೋಜನೆ ಹಾಗೂ ಮಕಬೀಯರ ಧಾರ್ಮಿಕ ಪಂಥದ ಗ್ರಂಥಾಲಯದಲ್ಲಿ ಅದು ಪ್ರತಿಗಳ ರೂಪದಲ್ಲಿ ಕಾಣಿಸಿಕೊಂಡ ಸಮಯದ ನಡುವೆ ಸಾಕಷ್ಟು ಕಾಲಾವಕಾಶವು ಇಲ್ಲದಿರಸಾಧ್ಯವಿರುವುದರಿಂದ, ದಾನಿಯೇಲ ಪುಸ್ತಕವು ಮಕಬೀಯರ ಕಾಲದ್ದು ಎಂಬ ಅಭಿಪ್ರಾಯವನ್ನು ತಪ್ಪೆಂದು ಬಿಟ್ಟುಬಿಡಬೇಕಾಗುತ್ತದೆ.”

27. ಬಾಬೆಲಿನ ದೇಶಭ್ರಷ್ಟತೆಯ ಸಮಯದಲ್ಲಿ ಸುಪ್ರಸಿದ್ಧನಾಗಿದ್ದ ದಾನಿಯೇಲನು ಒಬ್ಬ ವಾಸ್ತವಿಕ ವ್ಯಕ್ತಿಯಾಗಿದ್ದನು ಎಂಬುದಕ್ಕೆ ಯಾವ ಪುರಾತನ ಪುರಾವೆಯಿದೆ?

27 ಆದರೂ, ಇನ್ನೂ ಹೆಚ್ಚು ಪುರಾತನವಾದ ಹಾಗೂ ಹೆಚ್ಚು ವಿಶ್ವಾಸಯೋಗ್ಯವಾದ ರುಜುವಾತು ದಾನಿಯೇಲ ಪುಸ್ತಕಕ್ಕೆ ಲಭ್ಯವಿದೆ. ಪ್ರವಾದಿಯಾದ ಯೆಹೆಜ್ಕೇಲನು ದಾನಿಯೇಲನ ಸಮಕಾಲೀನರಲ್ಲಿ ಒಬ್ಬನಾಗಿದ್ದನು. ಬಾಬೆಲಿನ ದೇಶಭ್ರಷ್ಟತೆಯ ಸಮಯದಲ್ಲಿ ಇವನು ಸಹ ಒಬ್ಬ ಪ್ರವಾದಿಯಾಗಿ ಸೇವೆಮಾಡಿದ್ದನು. ಯೆಹೆಜ್ಕೇಲ ಪುಸ್ತಕವು ದಾನಿಯೇಲನ ಹೆಸರನ್ನು ಅನೇಕ ಬಾರಿ ಉಲ್ಲೇಖಿಸುತ್ತದೆ. (ಯೆಹೆಜ್ಕೇಲ 14:​14, 20; 28:⁠3) ಸಾ.ಶ.ಪೂ. ಆರನೆಯ ಶತಮಾನದಲ್ಲಿ, ಅಂದರೆ ತನ್ನ ಸ್ವಂತ ಜೀವಮಾನದಲ್ಲೇ ದಾನಿಯೇಲನು, ನೀತಿವಂತನು ಹಾಗೂ ಬುದ್ಧಿವಂತನೆಂದು ಪ್ರಸಿದ್ಧನಾಗಿದ್ದನು; ಮತ್ತು ಅವನು ದೇವಭಯವುಳ್ಳ ಪುರುಷರಾಗಿದ್ದ ನೋಹ ಹಾಗೂ ಯೋಬರ ಜೊತೆಯಲ್ಲೇ ಹೆಸರಿಸಲು ಅರ್ಹನಾಗಿದ್ದನು ಎಂಬುದನ್ನು ಈ ಉಲ್ಲೇಖಗಳು ತೋರಿಸುತ್ತವೆ.

ಸರ್ವಶ್ರೇಷ್ಠ ಸಾಕ್ಷಿ

28, 29. (ಎ) ದಾನಿಯೇಲ ಪುಸ್ತಕವು ವಿಶ್ವಾಸಾರ್ಹವಾಗಿದೆ ಎಂಬುದಕ್ಕಿರುವ ಎಲ್ಲ ರುಜು​ವಾತುಗಳಲ್ಲಿ ಯಾವುದು ಅತ್ಯಂತ ದೃಢವಾದ ರುಜುವಾತಾಗಿದೆ? (ಬಿ) ನಾವು ಯೇಸುವಿನ ಸಾಕ್ಷ್ಯವನ್ನು ಏಕೆ ಅಂಗೀಕರಿಸಬೇಕು?

28 ಕೊನೆಯದಾಗಿ, ದಾನಿಯೇಲ ಪುಸ್ತಕದ ವಿಶ್ವಾಸಾರ್ಹತೆಗೆ ಸಾಕ್ಷಿನೀಡಿರುವವರಲ್ಲಿ ಸರ್ವಶ್ರೇಷ್ಠ ಸಾಕ್ಷಿಯನ್ನು ನಾವು ಪರಿಗಣಿಸೋಣ. ಯೇಸು ಕ್ರಿಸ್ತನೇ ಆ ಸಾಕ್ಷಿಯಾಗಿದ್ದಾನೆ. ಕಡೆಯ ದಿವಸಗಳ ಕುರಿತಾದ ತನ್ನ ಚರ್ಚೆಯಲ್ಲಿ, “ಪ್ರವಾದಿಯಾದ ದಾನಿಯೇಲ”ನಿಗೆ ಹಾಗೂ ದಾನಿಯೇಲನ ಪ್ರವಾದನೆಗಳಲ್ಲಿ ಒಂದಕ್ಕೆ ಯೇಸು ಕೈತೋರಿಸಿದನು.​—⁠ಮತ್ತಾಯ 24:15; ದಾನಿಯೇಲ 11:31; 12:⁠11.

29 ಈಗ ವಿಮರ್ಶಕರ ಮಕಬೀಯ ಸಿದ್ಧಾಂತವು ಸರಿಯಾಗಿರುತ್ತಿದ್ದಲ್ಲಿ, ಎರಡರಲ್ಲಿ ಒಂದು ವಿಷಯವು ಸತ್ಯವಾಗಿರಲೇಬೇಕು. ಈ ನಕಲಿ ಬರಹದಿಂದ ಒಂದೊ ಯೇಸು ಮೋಸಹೋದನು ಇಲ್ಲವೆ ಯೇಸು ಏನು ಹೇಳಿದನೆಂದು ಮತ್ತಾಯನು ತಿಳಿಸುತ್ತಾನೋ ಅದನ್ನು ಅವನು ಹೇಳಿರಲೇ ಇಲ್ಲ. ಎರಡೂ ವಿಚಾರಗಳು ತಪ್ಪಾಗಿವೆ. ನಾವು ಮತ್ತಾಯನ ಸುವಾರ್ತಾ ವೃತ್ತಾಂತದ ಮೇಲೆ ನಂಬಿಕೆಯಿಡಲು ಅಸಮರ್ಥರಾಗಿರುವಲ್ಲಿ, ಬೈಬಲಿನ ಇತರ ಭಾಗಗಳ ಮೇಲೆ ಹೇಗೆ ನಂಬಿಕೆಯಿಡಬಲ್ಲೆವು? ನಾವು ಈ ವಾಕ್ಯಗಳನ್ನು ತೆಗೆದುಹಾಕುವಲ್ಲಿ, ಮುಂದೆ ಪವಿತ್ರ ಶಾಸ್ತ್ರದ ಇನ್ನಾವ ಭಾಗಗಳನ್ನು ತೆಗೆದುಹಾಕಲು ಪ್ರಯತ್ನಿಸುವೆವು? ಅಪೊಸ್ತಲ ಪೌಲನು ಬರೆದುದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ . . . ತಿದ್ದುಪಾಟಿಗೂ . . . ಉಪಯುಕ್ತವಾಗಿದೆ.” (ಓರೆಅಕ್ಷರಗಳು ನಮ್ಮವು.) (2 ತಿಮೊಥೆಯ 3:16) ಹೀಗೆ, ದಾನಿಯೇಲನು ಒಬ್ಬ ಮೋಸಗಾರನಾಗಿರುತ್ತಿದ್ದಲ್ಲಿ, ಪೌಲನು ಇನ್ನೊಬ್ಬ ಮೋಸಗಾರನಾಗಿರುತ್ತಿದ್ದನು! ಯೇಸು ಎಂದಾದರೂ ಮೋಸಹೋಗಸಾಧ್ಯವಿತ್ತೊ? ಖಂಡಿತವಾಗಿಯೂ ಇಲ್ಲ. ದಾನಿಯೇಲ ಪುಸ್ತಕವು ಬರೆಯಲ್ಪಟ್ಟಾಗ ಅವನು ಸ್ವರ್ಗದಲ್ಲಿ ಬದುಕಿದ್ದನು. ಯೇಸು ಹೀಗೂ ಹೇಳಿದನು: “ಅಬ್ರಹಾಮನು ಹುಟ್ಟುವದಕ್ಕಿಂತ ಮುಂಚಿನಿಂದಲೂ ನಾನು ಇದ್ದೇನೆ.” (ಯೋಹಾನ 8:⁠58) ಇದುವರೆಗೆ ಜೀವಿಸಿರುವ ಎಲ್ಲ ಮಾನವರಲ್ಲಿ, ದಾನಿಯೇಲ ಪುಸ್ತಕದ ವಿಶ್ವಾಸಾರ್ಹತೆಯ ಕುರಿತಾದ ಮಾಹಿತಿಯನ್ನು ಕೇಳಲಿಕ್ಕಾಗಿ ನಾವು ಆಯ್ಕೆಮಾಡಸಾಧ್ಯವಿರುವ ಅತ್ಯುತ್ತಮ ವ್ಯಕ್ತಿಯು ಯೇಸು ಕ್ರಿಸ್ತನೇ ಆಗಿದ್ದಾನೆ. ಆದರೆ ನಾವು ಕೇಳುವ ಅಗತ್ಯವೇ ಇಲ್ಲ. ನಾವು ಈಗಾಗಲೇ ನೋಡಿರುವಂತೆ, ಅವನ ಸಾಕ್ಷ್ಯವು ಸುಸ್ಪಷ್ಟವಾಗಿದೆ.

30. ಯೇಸು ದಾನಿಯೇಲ ಪುಸ್ತಕದ ವಿಶ್ವಾಸಾರ್ಹತೆಯನ್ನು ಇನ್ನೂ ಹೆಚ್ಚಿನ ಮಟ್ಟಿಗೆ ಹೇಗೆ ರುಜುಪಡಿಸಿದನು?

30 ದಾನಿಯೇಲ ಪುಸ್ತಕದ ವಿಶ್ವಾಸಾರ್ಹತೆಯನ್ನು ಇನ್ನೂ ಹೆಚ್ಚಿನ ಮಟ್ಟಿಗೆ ಯೇಸು ರುಜುಪಡಿಸಿದ್ದು, ತನ್ನ ದೀಕ್ಷಾಸ್ನಾನದ ಸಮಯದಲ್ಲೇ. ದಾನಿಯೇಲ ಪುಸ್ತಕದಲ್ಲಿ ವರ್ಷಗಳಾಗಿ ಎಣಿಸಲ್ಪಡುವ 69 ವಾರಗಳ ಕುರಿತಾದ ಒಂದು ಪ್ರವಾದನೆಯನ್ನು ನೆರವೇರಿಸುತ್ತಾ ಆ ಸಮಯದಲ್ಲಿ ಅವನು ಮೆಸ್ಸೀಯನಾದನು. (ದಾನಿಯೇಲ 9:​25, 26; ಈ ಪುಸ್ತಕದ 11ನೆಯ ಅಧ್ಯಾಯವನ್ನು ನೋಡಿರಿ.) ಪ್ರತಿಪಾದಿಸಲ್ಪಟ್ಟ ಸಮಯಕ್ಕಿಂತಲೂ ಬಹಳ ಸಮಯದ ಬಳಿಕವೇ ದಾನಿಯೇಲ ಪುಸ್ತಕವು ಬರೆಯಲ್ಪಟ್ಟಿತು ಎಂಬ ಸಿದ್ಧಾಂತವು ಸತ್ಯವೆಂದು ಪರಿಗಣಿಸಲ್ಪಟ್ಟರೂ, ಸುಮಾರು 200 ವರ್ಷಗಳಿಗೆ ಮುಂಚೆಯೇ ಭವಿಷ್ಯತ್ತಿನ ಕುರಿತು ದಾನಿಯೇಲ ಪುಸ್ತಕದ ಬರಹಗಾರನಿಗೆ ತಿಳಿದಿತ್ತು. ಒಂದು ಸುಳ್ಳು ಹೆಸರನ್ನು ಉಪಯೋಗಿಸಿ ನಿಜವಾದ ಪ್ರವಾದನೆಗಳನ್ನು ಮುಂತಿಳಿಸುವಂತೆ ದೇವರು ಒಬ್ಬ ನಕಲುಕೋರನನ್ನು ಪ್ರೇರಿಸುತ್ತಿರಲಿಲ್ಲ ಎಂಬುದು ಖಂಡಿತ. ದೇವರಿಗೆ ನಂಬಿಗಸ್ತರಾಗಿರುವ ಜನರು, ಯೇಸುವಿನ ಸಾಕ್ಷ್ಯವನ್ನು ಮನಃಪೂರ್ವಕವಾಗಿ ಅಂಗೀಕರಿಸುತ್ತಾರೆ. ದಾನಿಯೇಲ ಪುಸ್ತಕವನ್ನು ಬಹಿರಂಗವಾಗಿ ಆಪಾದಿಸಲು, ಇಡೀ ಲೋಕದಲ್ಲಿರುವ ಪರಿಣತರು ಹಾಗೂ ವಿಮರ್ಶಕರು ಒಟ್ಟುಗೂಡಿದರೂ, ಕೇವಲ ಯೇಸುವಿನ ಸಾಕ್ಷ್ಯವು ಅವರೆಲ್ಲರ ಅಭಿಪ್ರಾಯವು ತಪ್ಪೆಂದು ರುಜುಪಡಿಸಬಲ್ಲದು. ಏಕೆಂದರೆ ಅವನು “ನಂಬತಕ್ಕ ಸತ್ಯ ಸಾಕ್ಷಿ”ಯಾಗಿದ್ದಾನೆ.​—⁠ಪ್ರಕಟನೆ 3:⁠14.

31. ದಾನಿಯೇಲ ಪುಸ್ತಕದ ವಿಶ್ವಾಸಾರ್ಹತೆಯು, ಅನೇಕ ಬೈಬಲ್‌ ವಿಮರ್ಶಕರಿಗೆ ಏಕೆ ಇನ್ನೂ ಮನದಟ್ಟಾಗಿಲ್ಲ?

31 ಅನೇಕ ಬೈಬಲ್‌ ವಿಮರ್ಶಕರಿಗೆ ಈ ಸಾಕ್ಷ್ಯವು ಸಹ ಸಾಲದು. ಈ ವಿಷಯವನ್ನು ಪೂರ್ಣವಾಗಿ ಪರಿಗಣಿಸಿದ ಬಳಿಕ, ಎಷ್ಟೇ ಮೊತ್ತದಲ್ಲಿ ಸಾಕ್ಷ್ಯವಿದ್ದರೂ ಅವರಿಗೆ ಮನದಟ್ಟುಮಾಡಲು ಅದು ಸಾಕಾದೀತೊ ಎಂದು ನಾವು ಯೋಚಿಸದಿರಲು ಸಾಧ್ಯವಿಲ್ಲ. ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ಒಬ್ಬ ಪ್ರೊಫೆಸರನು ಬರೆದುದು: “ಎಷ್ಟರ ತನಕ ‘ಅಲೌಕಿಕ ಪ್ರವಾದನೆಗಳು ಖಂಡಿತವಾಗಿಯೂ ಅಸ್ತಿತ್ವದಲ್ಲಿಲ್ಲ’ ಎಂಬ ಪೂರ್ವಕಲ್ಪಿತ ಅಭಿಪ್ರಾಯವು ವಿಮರ್ಶಕರಲ್ಲಿ ಇರುತ್ತದೋ, ಅಷ್ಟರ ತನಕ ಅವರ ಆಕ್ಷೇಪಣೆಗಳಿಗೆ ಉತ್ತರ ಕೊಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ.” ಏಕೆಂದರೆ ಅವರ ಪೂರ್ವಕಲ್ಪಿತ ಅಭಿಪ್ರಾಯವು ಅವರನ್ನು ಕುರುಡರನ್ನಾಗಿ ಮಾಡಿದೆ. ಆದರೆ ಆಯ್ಕೆ ಮಾಡುವುದು ಬಿಡುವುದು ಅವರ ಇಷ್ಟ, ಇಲ್ಲದಿದ್ದರೆ ಅವರಿಗೇ ನಷ್ಟ.

32. ದಾನಿಯೇಲ ಪುಸ್ತಕದ ನಮ್ಮ ಅಧ್ಯಯನದಲ್ಲಿ ನಮಗೋಸ್ಕರ ಏನು ಕಾದಿದೆ?

32 ನಿಮ್ಮ ಕುರಿತಾಗಿ ಏನು? ದಾನಿಯೇಲ ಪುಸ್ತಕದ ವಿಶ್ವಾಸಾರ್ಹತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಲು ನಿಜವಾದ ಕಾರಣವೇ ಇಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಲು ಶಕ್ತರಾಗಿರುವಲ್ಲಿ, ಅನ್ವೇಷಣೆಯ ರೋಮಾಂಚಕರ ಸಂಚಾರವನ್ನು ಆರಂಭಿಸಲು ನೀವು ಸಿದ್ಧರಿದ್ದೀರಿ. ದಾನಿಯೇಲ ಪುಸ್ತಕದಲ್ಲಿರುವ ಕಥಾ ರೂಪಗಳು ರೋಮಾಂಚನೀಯವಾಗಿಯೂ, ಪ್ರವಾದನೆಗಳು ಆಕರ್ಷಣೀಯವಾಗಿಯೂ ಇವೆಯೆಂಬುದನ್ನು ನೀವು ಕಂಡುಕೊಳ್ಳುವಿರಿ. ಎಲ್ಲಕ್ಕಿಂತಲೂ ಪ್ರಾಮುಖ್ಯವಾಗಿ, ಪ್ರತಿಯೊಂದು ಅಧ್ಯಾಯವನ್ನು ಓದಿದಂತೆ ನಿಮ್ಮ ನಂಬಿಕೆಯು ಹೆಚ್ಚೆಚ್ಚು ಬಲಗೊಳ್ಳುತ್ತಿರುವ ಅನಿಸಿಕೆ ನಿಮಗಾಗುತ್ತದೆ. ಅಷ್ಟುಮಾತ್ರವಲ್ಲ, ದಾನಿಯೇಲನ ಪ್ರವಾದನೆಗೆ ಗಮನಕೊಟ್ಟದ್ದಕ್ಕಾಗಿ ನೀವು ಎಂದೂ ವಿಷಾದಿಸಲಾರಿರಿ!

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 4 ಅನಂಗೀಕೃತ ಧರ್ಮಶಾಸ್ತ್ರದ (ನಾನ್‌ಕನಾನಿಕಲ್‌) ಕೆಲವು ಪುಸ್ತಕಗಳು ಊಹಿತ ಹೆಸರುಗಳನ್ನು ಉಪಯೋಗಿಸಿ ಬರೆಯಲ್ಪಟ್ಟಿದ್ದವು, ಹಾಗೆಯೇ ಈ ಪುಸ್ತಕದ ಬರಹಗಾರನು ದಾನಿಯೇಲ ಎಂಬ ಹೆಸರನ್ನು ಒಂದು ಗುಪ್ತನಾಮವಾಗಿ ಉಪಯೋಗಿಸಿದನು ಎಂದು ಹೇಳುವ ಮೂಲಕ, ಕೆಲವು ವಿಮರ್ಶಕರು ಈ ಪುಸ್ತಕವು ನಕಲಿಯಾಗಿದೆ ಎಂಬ ಆರೋಪದ ತೀಕ್ಷ್ಣತೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಾರೆ. ಆದರೂ, ಬೈಬಲ್‌ ವಿಮರ್ಶಕನಾದ ಫರ್ಡಿನಾಂಡ್‌ ಹಿಟ್‌ಸಿಗ್‌ ತನ್ನ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸಿದನು: “ದಾನಿಯೇಲ ಪುಸ್ತಕದ ವಿಷಯವನ್ನು ಪರಿಗಣಿಸುವಾಗ, ಬೇರೊಬ್ಬ [ಲೇಖಕನು] ಇದನ್ನು ಬರೆದನೆಂದು ಹೇಳುವುದಾದರೆ, ಇದು ಒಂದು ಗುಪ್ತನಾಮವನ್ನು ಉಪಯೋಗಿಸಿದ ವಿದ್ಯಮಾನವಾಗಿಲ್ಲ. ಒಂದುವೇಳೆ ಹಾಗಿರುತ್ತಿದ್ದಲ್ಲಿ, ಇದು ಒಂದು ನಕಲಿ ಬರಹವಾಗಿದ್ದು, ಇದರಿಂದ ಓದುಗರಿಗೆ ಪ್ರಯೋಜನ​ವಾಗುತ್ತಿತ್ತಾದರೂ, ತನ್ನ ಓದುಗರನ್ನು ವಂಚಿಸುವುದೇ ಇದರ ಉದ್ದೇಶವಾಗಿರುತ್ತಿತ್ತು.”

^ ಪ್ಯಾರ. 8 ಬಾಬೆಲ್‌ ಪತನಗೊಂಡಾಗ, ನೆಬೊನೈಡಸನು ಬಾಬೆಲಿನಲ್ಲಿರಲಿಲ್ಲ. ಆದುದರಿಂದ, ಆ ಸಮಯದಲ್ಲಿ ಬೇಲ್ಶಚ್ಚರನೇ ರಾಜನಾಗಿದ್ದನು ಎಂದು ಸರಿಯಾಗಿಯೇ ವರ್ಣಿಸಲಾಗಿದೆ. ಐಹಿಕ ದಾಖಲೆಗಳು ಬೇಲ್ಶಚ್ಚರನಿಗೆ ರಾಜನೆಂಬ ಅಧಿಕೃತ ಬಿರುದನ್ನು ಕೊಡುವುದಿಲ್ಲವಲ್ಲ ಎಂಬ ತರ್ಕವನ್ನು ವಿಮರ್ಶಕರು ಉಪಯೋಗಿಸುತ್ತಾರೆ. ಆದರೂ, ಆ ಸಮಯದಲ್ಲಿ ಜನರು ಒಬ್ಬ ಅಧಿಪತಿಯನ್ನು ಸಹ ರಾಜನೆಂದು ಸಂಬೋಧಿಸುತ್ತಿದ್ದಿರಬಹುದು ಎಂದು ಪುರಾತನ ಪುರಾವೆಗಳು ಸೂಚಿಸುತ್ತವೆ.

^ ಪ್ಯಾರ. 20 ದಾನಿಯೇಲ 5:3ರ ಕುರಿತು ಹೀಬ್ರು ಪಂಡಿತನಾದ ಸಿ. ಎಫ್‌. ಕೈಲ್‌ ಹೀಗೆ ಬರೆಯುತ್ತಾನೆ: “ಸೆಪ್ಟ್ಯುಅಜಿಂಟ್‌ ಬೈಬಲಿನ ಈ ವಚನದಲ್ಲಿ ಹಾಗೂ 23ನೆಯ ವಚನದಲ್ಲಿ, ಮ್ಯಾಸಿಡೋನಿಯದವರು, ಗ್ರೀಕರು, ಹಾಗೂ ರೋಮನರ ಪದ್ಧತಿಗನುಸಾರ, ಸ್ತ್ರೀಯರ ಕುರಿತಾದ ಉಲ್ಲೇಖವನ್ನು ಬಿಟ್ಟುಬಿಡಲಾಗಿದೆ.”

^ ಪ್ಯಾರ. 24 ಇದಕ್ಕೆ ಪ್ರತಿಯಾಗಿ, ಇಬ್ರಿಯ 11ನೆಯ ಅಧ್ಯಾಯದಲ್ಲಿ ಉಲ್ಲೇಖಿಸಲ್ಪಟ್ಟಿರುವ, ನಂಬಿಗಸ್ತ ಸ್ತ್ರೀ​ಪುರುಷರ ಕುರಿತಾದ ಅಪೊಸ್ತಲ ಪೌಲನ ಪ್ರೇರಿತ ಪಟ್ಟಿಯು, ದಾನಿಯೇಲ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿರುವ ಘಟನೆಗಳ ಕುರಿತು ಪರೋಕ್ಷವಾಗಿ ಸೂಚಿಸುವಂತೆ ತೋರುತ್ತದೆ. (ದಾನಿಯೇಲ 6:​16-24; ಇಬ್ರಿಯ 11:​32, 33) ಆದರೂ, ಅಪೊಸ್ತಲನು ಮಾಡಿದ ಪಟ್ಟಿಯು ಸಹ ಸಂಪೂರ್ಣವಲ್ಲ. ಯೆಶಾಯ, ಯೆರೆಮೀಯ, ಹಾಗೂ ಯೆಹೆಜ್ಕೇಲರನ್ನು ಒಳಗೊಂಡು, ಇನ್ನೂ ಅನೇಕರನ್ನು ಆ ಪಟ್ಟಿಯಲ್ಲಿ ಸೇರಿಸಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಅಸ್ತಿತ್ವದಲ್ಲೇ ಇರಲಿಲ್ಲ ಎಂಬುದನ್ನು ಅದು ರುಜುಪಡಿಸುವುದಿಲ್ಲ.

^ ಪ್ಯಾರ. 25 ಆ ಸಮಯದಲ್ಲಿ, ಪಾರಸಿಯರ ಸ್ನೇಹಿತರೆಲ್ಲರನ್ನೂ ನಾಶಮಾಡುವ ಕಾರ್ಯಾಚರಣೆಯನ್ನು ಅಲೆಕ್ಸಾಂಡರನು ಕೈಗೊಂಡಿದ್ದನು. ಆದರೂ, ಪಾರಸಿಯರೊಂದಿಗೆ ಬಹಳ ಸಮಯದಿಂದಲೂ ಸ್ನೇಹ​ದಿಂದಿದ್ದ ಯೆಹೂದ್ಯರಿಗೆ, ಅಲೆಕ್ಸಾಂಡರನು ಏಕೆ ಇಷ್ಟೊಂದು ದಯೆತೋರಿಸಿದನು ಎಂಬುದನ್ನು ಇದು ವಿವರಿಸುತ್ತದೆ ಎಂದು ಕೆಲವು ಇತಿಹಾಸಕಾರರು ದಾಖಲಿಸಿದ್ದಾರೆ.

ನೀವೇನನ್ನು ಗ್ರಹಿಸಿದಿರಿ?

• ದಾನಿಯೇಲ ಪುಸ್ತಕದ ಮೇಲೆ ಯಾವ ಆರೋಪವನ್ನು ಹೊರಿಸ​ಲಾಗಿದೆ?

• ದಾನಿಯೇಲ ಪುಸ್ತಕದ ಮೇಲೆ ವಿಮರ್ಶಕರು ಹೊರಿಸಿರುವ ದೋಷಾರೋಪಗಳಿಗೆ ಏಕೆ ಸರಿಯಾದ ಆಧಾರಗಳಿಲ್ಲ?

• ದಾನಿಯೇಲನ ವೃತ್ತಾಂತದ ವಿಶ್ವಾಸಾರ್ಹತೆಗೆ ಯಾವ ​ಪುರಾವೆಯು ಆಧಾರ ಕೊಡುತ್ತದೆ?

• ದಾನಿಯೇಲ ಪುಸ್ತಕವು ವಿಶ್ವಾಸಾರ್ಹವಾಗಿದೆ ಎಂಬುದನ್ನು ಚೆನ್ನಾಗಿ ಮನಗಾಣಿಸುವಂತಹ ಪುರಾವೆಯು ಯಾವುದಾಗಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 37 ರಲ್ಲಿರುವ ಚೌಕ]

ಭಾಷಾ ವಿಷಯ

ಸುಮಾರು ಸಾ.ಶ.ಪೂ. 536ರಲ್ಲಿ, ದಾನಿಯೇಲ ಪುಸ್ತಕದ ಬರಹವು ಪೂರ್ಣಗೊಂಡಿತು. ಇದು ಹೀಬ್ರು ಹಾಗೂ ಅರಮಾಯ ಭಾಷೆಗಳಲ್ಲಿ ಬರೆಯಲ್ಪಟ್ಟಿತು, ಮತ್ತು ಇದರಲ್ಲಿ ಕೆಲವೊಂದು ಗ್ರೀಕ್‌ ಹಾಗೂ ಪಾರಸಿಯ ಶಬ್ದಗಳೂ ಒಳಗೂಡಿದ್ದವು. ಕೆಲವೊಂದು ಬರಹಗಳಲ್ಲಿ ಈ ರೀತಿ ಬೇರೆ ಬೇರೆ ಭಾಷೆಗಳು ಮಿಶ್ರಗೊಂಡಿರುವುದು ಅಸಾಮಾನ್ಯವಾಗಿರುವುದಾದರೂ, ಶಾಸ್ತ್ರವಚನಗಳಲ್ಲಿ ಇದು ಅಪರೂಪವೇನಲ್ಲ. ಬೈಬಲಿನ ಎಜ್ರ ಪುಸ್ತಕವು ಸಹ ಹೀಬ್ರು ಹಾಗೂ ಅರಮಾಯ ಭಾಷೆಗಳಲ್ಲಿ ಬರೆಯಲ್ಪಟ್ಟಿತ್ತು. ಆದರೂ, ದಾನಿಯೇಲ ಪುಸ್ತಕದ ಬರಹಗಾರನು ಈ ಭಾಷೆಗಳನ್ನು ಉಪಯೋಗಿಸಿರುವುದು, ಒಂದು ರೀತಿಯಲ್ಲಿ ಸಾ.ಶ.ಪೂ. 536ಕ್ಕಿಂತಲೂ ನಂತರದ ಸಮಯದಲ್ಲಿ ಅವನು ಈ ಪುಸ್ತಕವನ್ನು ಬರೆದಿದ್ದನು ಎಂಬುದನ್ನು ರುಜುಪಡಿಸುತ್ತದೆ ಎಂದು ಕೆಲವು ವಿಮರ್ಶಕರು ಪಟ್ಟುಹಿಡಿಯುತ್ತಾರೆ. ದಾನಿಯೇಲ ಪುಸ್ತಕದಲ್ಲಿ ಗ್ರೀಕ್‌ ಶಬ್ದಗಳನ್ನು ಉಪಯೋಗಿಸಿರುವುದು, ಈ ಪುಸ್ತಕವು ಪ್ರತಿಪಾದಿಸಲ್ಪಟ್ಟ ಕಾಲಾವಧಿಗಿಂತ ತುಂಬ ತಡವಾಗಿ ರಚಿಸಲ್ಪಟ್ಟಿತೆಂಬುದನ್ನು ಒಪ್ಪುವಂತೆ ತಗಾದೆಮಾಡುತ್ತದೆ ಎಂದು ಒಬ್ಬ ವಿಮರ್ಶಕನು ಹೇಳಿದನೆಂದು ವ್ಯಾಪಕವಾಗಿ ತಿಳಿಸಲಾಗಿದೆ. ಆ ಹೀಬ್ರು ಭಾಷೆಯು, ನಂತರದ ತಾರೀಖನ್ನು ಸಮರ್ಥಿಸುತ್ತದೆ ಮತ್ತು ಅರಮಾಯ ಭಾಷೆಯು ಆ ತಾರೀಖನ್ನು, ಅಂದರೆ ಸಾ.ಶ.ಪೂ. ಎರಡನೆಯ ಶತಮಾನದಷ್ಟು ಇತ್ತೀಚಿಗಿನ ಸಮಯಾವಧಿಯನ್ನು ಅನುಮೋದಿಸುತ್ತದೆಂದು ಅವನು ವಾದಿಸುತ್ತಾನೆ.

ಆದರೂ, ಎಲ್ಲ ಭಾಷಾ ಪಂಡಿತರು ಇದನ್ನು ಒಪ್ಪಿಕೊಳ್ಳುವುದಿಲ್ಲ. ದಾನಿಯೇಲನ ಹೀಬ್ರು ಭಾಷೆಯು, ಯೆಹೆಜ್ಕೇಲ ಹಾಗೂ ಎಜ್ರನ ಹೀಬ್ರು ಭಾಷೆಯಂತೆಯೇ ಇದೆ ಮತ್ತು ಕಾಲಾನಂತರ ಬೆಳಕಿಗೆ ಬಂದ ಎಕ್ಲೀಸಿಆ್ಯಸ್ಟಿಕಸ್‌ನಂತಹ ಅವಿಶ್ವಸನೀಯ ಪುಸ್ತಕಗಳಲ್ಲಿ ಕಂಡುಬರುವ ಹೀಬ್ರು ಭಾಷೆಗಿಂತ ಭಿನ್ನವಾಗಿದೆ ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆ. ದಾನಿಯೇಲನ ಅರಮಾಯ ಭಾಷೆಯ ವಿಷಯ​ದಲ್ಲಿ ತಿಳಿದುಕೊಳ್ಳಲಿಕ್ಕಾಗಿ, ಮೃತ ಸಮುದ್ರದ ಸುರುಳಿಗಳಲ್ಲಿ ಕಂಡುಬಂದ ಎರಡು ದಾಖಲೆಗಳನ್ನು ಪರಿಗಣಿಸಿರಿ. ಅವು ಸಹ ಅರಮಾಯ ಭಾಷೆಯಲ್ಲಿವೆ ಮತ್ತು ಸಾ.ಶ.ಪೂ. ಮೊದಲನೆಯ ಹಾಗೂ ಎರಡನೆಯ ಶತಮಾನಗಳಿಗೆ ಸೇರಿದವುಗಳೆಂದು ಹೇಳಲಾಗಿದೆ; ಅಂದರೆ ಹೆಚ್ಚುಕಡಿಮೆ ದಾನಿಯೇಲ ಪುಸ್ತಕವು ಯಾವಾಗ ಬರೆಯಲ್ಪಟ್ಟಿತ್ತೆಂದು ತಪ್ಪಾಗಿ ನೆನಸಲಾಗಿದೆಯೊ ಅದೇ ಕಾಲಾವಧಿಯದ್ದು. ಆದರೆ ಈ ದಾಖಲೆಗಳಲ್ಲಿರುವ ಅರಮಾಯ ಭಾಷೆ ಹಾಗೂ ದಾನಿಯೇಲ ಪುಸ್ತಕದಲ್ಲಿ ಕಂಡುಬಂದಿರುವ ಅರಮಾಯ ಭಾಷೆಯ ನಡುವೆ ಬಹಳಷ್ಟು ಭಿನ್ನತೆಯನ್ನು ಪಂಡಿತರು ಗಮನಿಸಿದ್ದಾರೆ. ಹೀಗೆ, ದಾನಿಯೇಲ ಪುಸ್ತಕವು, ಅದರ ವಿಮರ್ಶಕರು ಪ್ರತಿಪಾದಿಸುವ ಸಮಯಕ್ಕಿಂತಲೂ ಎಷ್ಟೋ ಶತಮಾನಗಳಷ್ಟು ಹಳೆಯದ್ದಾಗಿರಬೇಕು ಎಂದು ಕೆಲವರು ಸೂಚಿಸುತ್ತಾರೆ.

ದಾನಿಯೇಲ ಪುಸ್ತಕದಲ್ಲಿರುವ “ಸಮಸ್ಯಾತ್ಮಕ” ಗ್ರೀಕ್‌ ಶಬ್ದಗಳ ಕುರಿತಾಗಿ ಏನು? ಈ ಶಬ್ದಗಳಲ್ಲಿ ಕೆಲವು, ಗ್ರೀಕ್‌ ಭಾಷೆಯವುಗಳಲ್ಲ, ಬದಲಾಗಿ ಪಾರಸಿಯ ಭಾಷೆಯ ಶಬ್ದಗಳಾಗಿವೆ ಎಂದು ಕಂಡುಕೊಳ್ಳಲಾಗಿದೆ! ಮೂರು ಸಂಗೀತ ವಾದ್ಯಗಳ ಹೆಸರುಗಳು ಮಾತ್ರ ಇನ್ನೂ ಕೂಡ ಗ್ರೀಕ್‌ ಶಬ್ದಗಳೆಂದು ಪರಿಗಣಿಸಲ್ಪಟ್ಟಿವೆ. ಈ ಮೂರು ಶಬ್ದಗಳ ಅಸ್ತಿತ್ವವು, ನಿಜವಾಗಿಯೂ ಪ್ರತಿಪಾದಿಸಲ್ಪಟ್ಟ ಸಮಯದ ನಂತರ ದಾನಿಯೇಲ ಪುಸ್ತಕವು ಬರೆಯಲ್ಪಟ್ಟಿತು ಎಂಬುದನ್ನು ಒಪ್ಪಿಕೊಳ್ಳುವಂತೆ ತಗಾದೆಮಾಡುತ್ತದೊ? ಇಲ್ಲ. ಗ್ರೀಸ್‌ ಒಂದು ಲೋಕ ಶಕ್ತಿಯಾಗಿ ಪರಿಣಮಿಸುವ ಅನೇಕ ಶತಮಾನಗಳಿಗೆ ಮೊದಲೇ ಗ್ರೀಕ್‌ ಸಂಸ್ಕೃತಿಯು ಪ್ರಭಾವಶಾಲಿಯಾಗಿತ್ತು ಎಂದು ಪ್ರಾಕ್ತನಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಅಷ್ಟುಮಾತ್ರವಲ್ಲ, ಸಾ.ಶ.ಪೂ. ಎರಡನೆಯ ಶತಮಾನದಲ್ಲಿ, ಅಂದರೆ ಗ್ರೀಕ್‌ ಸಂಸ್ಕೃತಿ ಹಾಗೂ ಭಾಷೆಯು ಸರ್ವ​ಸಾಮಾನ್ಯವಾಗಿದ್ದಂತಹ ಕಾಲದಲ್ಲಿ ದಾನಿಯೇಲ ಪುಸ್ತಕವು ರಚಿಸಲ್ಪಟ್ಟಿರುತ್ತಿದ್ದಲ್ಲಿ, ಈ ಪುಸ್ತಕದಲ್ಲಿ ಕೇವಲ ಮೂರು ಗ್ರೀಕ್‌ ಶಬ್ದಗಳು ಮಾತ್ರ ಇರುತ್ತಿದ್ದವೋ? ಖಂಡಿತವಾಗಿಯೂ ಇಲ್ಲ. ಇದರಲ್ಲಿ ಇನ್ನೂ ಹೆಚ್ಚು ಶಬ್ದಗಳು ಇರುತ್ತಿದ್ದವು. ಆದುದರಿಂದ, ಭಾಷಾಸಂಬಂಧವಾದ ಪುರಾವೆಯು, ಖಂಡಿತವಾಗಿಯೂ ದಾನಿಯೇಲ ಪುಸ್ತಕದ ವಿಶ್ವಾಸಾರ್ಹತೆಗೆ ಬೆಂಬಲ ನೀಡುತ್ತದೆ.

[ಪುಟ 23 ರಲ್ಲಿ ಇಡೀ ಪುಟದ ಚಿತ್ರ]

[ಪುಟ 31 ರಲ್ಲಿರುವ ಚಿತ್ರಗಳು]

(ಕೆಳಗೆ) ಬಾಬೆಲಿನ ದೇವಾಲಯದ ಸಿಲಿಂಡರ್‌ನಲ್ಲಿ, ಅರಸ ನೆಬೊನೈಡಸ್‌ ಹಾಗೂ ಅವನ ಮಗನಾದ ಬೇಲ್ಶಚ್ಚರರ ಹೆಸರುಗಳು ಕಂಡುಬರುತ್ತವೆ

(ಮೇಲೆ) ಈ ಶಾಸನಫಲಕದಲ್ಲಿ, ನೆಬೂಕದ್ನೆಚ್ಚರನು ತನ್ನ ನಿರ್ಮಾಣ ಕಾರ್ಯಗಳ ಕುರಿತು ಜಂಬಕೊಚ್ಚಿಕೊಂಡ ವರ್ಣನೆಯಿದೆ

[ಪುಟ 32 ರಲ್ಲಿರುವ ಚಿತ್ರ]

ನೆಬೊನೈಡಸನ ವೃತ್ತಾಂತಕ್ಕನುಸಾರ, ಯಾವುದೇ ಹೋರಾಟ ನಡೆಸದೆ ಕೋರೆಷನ ಸೈನ್ಯವು ಬಾಬೆಲನ್ನು ಪ್ರವೇಶಿಸಿತ್ತು

[ಪುಟ 33 ರಲ್ಲಿರುವ ಚಿತ್ರಗಳು]

(ಬಲಭಾಗ) ನೆಬೊನೈಡಸನು ತನ್ನ ಜೇಷ್ಠಪುತ್ರನಿಗೆ ರಾಜ್ಯಭಾರವನ್ನು ವಹಿಸಿದನು ಎಂದು “ನೆಬೊನೈಡಸನ ವಚನ ವೃತ್ತಾಂತ”ವು ವರದಿಸುತ್ತದೆ

(ಎಡಭಾಗ) ಯೆಹೂದದ ಮೇಲೆ ನೆಬೂಕದ್ನೆಚ್ಚರನು ದಂಡೆತ್ತಿಹೋದುದರ ಕುರಿತಾದ ಬಾಬೆಲಿನ ದಾಖಲೆ