ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕವನ್ನು ಯಾರು ಆಳುವರು?

ಲೋಕವನ್ನು ಯಾರು ಆಳುವರು?

ಅಧ್ಯಾಯ ಒಂಬತ್ತು

ಲೋಕವನ್ನು ಯಾರು ಆಳುವರು?

1-3. ಬೇಲ್ಶಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ ದಾನಿಯೇಲನು ಕಂಡ ಕನಸು ಹಾಗೂ ದರ್ಶನಗಳನ್ನು ವರ್ಣಿಸಿರಿ.

ದಾನಿಯೇಲನ ಚಿತ್ತಾಕರ್ಷಕ ಪ್ರವಾದನೆಯು ನಮ್ಮನ್ನು, ಬಾಬೆಲಿನ ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ಬಹಳ ದೀರ್ಘ ಸಮಯದಿಂದಲೂ ದಾನಿಯೇಲನು ಬಾಬೆಲಿನಲ್ಲಿ ದೇಶಭ್ರಷ್ಟನಾಗಿದ್ದಾನೆ, ಆದರೆ ಯೆಹೋವನಿಗೆ ತೋರಿಸಬೇಕಾದ ಯಥಾರ್ಥತೆಯಲ್ಲಿ ಅವನು ಎಂದೂ ಹಿಂದೇಟು ಹಾಕಿಲ್ಲ. ಈಗ ತನ್ನ 70ಗಳ ಪ್ರಾಯದಲ್ಲಿರುವ ಈ ನಂಬಿಗಸ್ತ ಪ್ರವಾದಿಯು, “ಹಾಸಿಗೆಯ ಮೇಲೆ ಮಲಗಿದ್ದಾಗ ಕನಸನ್ನು ಹಾಗೂ ದರ್ಶನಗಳನ್ನು” ಕಂಡನು. ಮತ್ತು ಈ ದರ್ಶನಗಳು ಅವನನ್ನು ಎಷ್ಟು ಭಯಗೊಳಿಸಿದವು!​—⁠ದಾನಿಯೇಲ 7:​1, 15, NW.

2 “ಆಹಾ, ಚತುರ್ದಿಕ್ಕಿನ ಗಾಳಿಗಳೂ ಮಹಾಸಾಗರದ [“ಸಮುದ್ರದ,” NW] ಮೇಲೆ ರಭಸವಾಗಿ ಬೀಸಿ ಬಡಿಯುತ್ತಿದ್ದವು. ಒಂದಕ್ಕೊಂದು ವಿಲಕ್ಷಣವಾದ ನಾಲ್ಕು ದೊಡ್ಡ ಮೃಗಗಳು ಸಾಗರ [“ಸಮುದ್ರ,” NW]ದೊಳಗಿಂದ ಬಂದವು” ಎಂದು ದಾನಿಯೇಲನು ಉದ್ಗರಿಸುತ್ತಾನೆ. ಎಂತಹ ಗಮನಾರ್ಹ ಮೃಗಗಳು! ಮೊದಲನೆಯ ಮೃಗವು ರೆಕ್ಕೆಗಳುಳ್ಳ ಸಿಂಹವಾಗಿದೆ, ಮತ್ತು ಎರಡನೆಯದು ಕರಡಿಯ ಹಾಗಿದೆ. ತದನಂತರ ನಾಲ್ಕು ರೆಕ್ಕೆಗಳು ಹಾಗೂ ನಾಲ್ಕು ತಲೆಗಳುಳ್ಳ ಒಂದು ಚಿರತೆಯು ಬರುತ್ತದೆ! ಅಸಾಮಾನ್ಯ ಬಲವಿದ್ದ ನಾಲ್ಕನೆಯ ಮೃಗಕ್ಕೆ, ಕಬ್ಬಿಣದ ದೊಡ್ಡ ಹಲ್ಲುಗಳು ಹಾಗೂ ಹತ್ತು ಕೊಂಬುಗಳಿವೆ. ಅದರ ಹತ್ತು ಕೊಂಬುಗಳ ನಡುವೆ ಒಂದು “ಚಿಕ್ಕ” ಕೊಂಬು ಮೊಳೆಯುತ್ತದೆ. ಆ ಕೊಂಬಿಗೆ “ಮನುಷ್ಯನ ಕಣ್ಣುಗಳಂತಿರುವ ಕಣ್ಣುಗಳೂ ಬಡಾಯಿ ಕೊಚ್ಚಿಕೊಳ್ಳುವ ಬಾಯೂ” ಇದೆ.​—⁠ದಾನಿಯೇಲ 7:​2-8.

3 ತದನಂತರ ದಾನಿಯೇಲನ ದರ್ಶನಗಳು ಸ್ವರ್ಗದ ಕಡೆಗೆ ತಿರುಗುತ್ತವೆ. ಸ್ವರ್ಗೀಯ ಆಸ್ಥಾನದಲ್ಲಿ ಮಹಾವೃದ್ಧನೊಬ್ಬನು ನ್ಯಾಯಾಧಿಪತಿಯೋಪಾದಿ ನ್ಯಾಯಾಸನವನ್ನೇರಿ ಮಹಾ ವೈಭವದಿಂದ ಕುಳಿತುಕೊಂಡಿದ್ದಾನೆ. ‘ಲಕ್ಷೋಪಲಕ್ಷ ದೂತರು ಆತನನ್ನು ಸೇವಿಸುತ್ತಿದ್ದಾರೆ, ಕೋಟ್ಯನುಕೋಟಿ ಕಿಂಕರರು ಆತನ ಮುಂದೆ ನಿಂತುಕೊಂಡಿದ್ದಾರೆ.’ ಈ ಮೃಗಗಳ ವಿರುದ್ಧವಾಗಿ ತೀರ್ಪು ನೀಡುತ್ತಾ, ಆತನು ಅವುಗಳಿಂದ ಅಧಿಕಾರವನ್ನು ಕಸಿದುಕೊಂಡು, ನಾಲ್ಕನೆಯ ಮೃಗವನ್ನು ಕೊಂದುಹಾಕುತ್ತಾನೆ. “ಸಕಲಜನಾಂಗಕುಲಭಾಷೆಗಳವರ” ಮೇಲಿನ ಶಾಶ್ವತವಾದ ಅಧಿಕಾರವು, “ಮನುಷ್ಯಕುಮಾರನಂತಿರು”ವವನಿಗೆ ವಹಿಸಲ್ಪಡುತ್ತದೆ.​—⁠ದಾನಿಯೇಲ 7:​9-14.

4. (ಎ) ದಾನಿಯೇಲನು ಇವುಗಳ ಸತ್ಯಾರ್ಥವನ್ನು ಯಾರ ಬಳಿ ವಿಚಾರಿಸಲು ಪ್ರಯತ್ನಿಸಿದನು? (ಬಿ) ಆ ರಾತ್ರಿ ದಾನಿಯೇಲನು ನೋಡಿದ ಹಾಗೂ ಕೇಳಿಸಿಕೊಂಡ ಸಂಗತಿಗಳು ನಮಗೆ ಏಕೆ ಪ್ರಾಮುಖ್ಯವಾದವುಗಳಾಗಿವೆ?

4 “ದಾನಿಯೇಲನಾದ ನನ್ನ ಆತ್ಮವು ನನ್ನ ಶರೀರದೊಳಗೆ ವ್ಯಥೆಗೊಂಡಿತು, ನನ್ನ ಮನಸ್ಸಿನಲ್ಲಿ ಬಿದ್ದ ಕನಸುಗಳು [“ದರ್ಶನಗಳು,” NW] ನನ್ನನ್ನು ಕಳವಳಪಡಿಸಿದವು” ಎಂದು ದಾನಿಯೇಲನು ಹೇಳುತ್ತಾನೆ. ಆದುದರಿಂದ ಅವನು ಒಬ್ಬ ದೇವದೂತನ ಬಳಿ “ಇವುಗಳ ಸತ್ಯಾರ್ಥವೇನೆಂದು ವಿಚಾರಿ”ಸಲು ಪ್ರಯತ್ನಿಸುತ್ತಾನೆ. ಖಂಡಿತವಾಗಿಯೂ ದೇವದೂತನು ಅವನಿಗೆ “ಆ ವಿಷಯಗಳ ತಾತ್ಪರ್ಯವನ್ನು ವಿವರಿಸಿ” ತಿಳಿಸುತ್ತಾನೆ. (ದಾನಿಯೇಲ 7:​15-28) ಆ ರಾತ್ರಿ ದಾನಿಯೇಲನು ಕಂಡ ಹಾಗೂ ಕೇಳಿಸಿಕೊಂಡ ಸಂಗತಿಯು ನಮಗೆ ಅತ್ಯಧಿಕ ಆಸಕ್ತಿಯ ವಿಷಯವಾಗಿದೆ. ಏಕೆಂದರೆ ನಮ್ಮ ಸಮಯಗಳ ವರೆಗೆ, ಅಂದರೆ “ಸಕಲಜನಾಂಗಕುಲಭಾಷೆಗಳವರ” ಮೇಲೆ ಅಧಿಕಾರ ನಡೆಸುವ ಹಕ್ಕು “ಮನುಷ್ಯಕುಮಾರನಂತಿರು”ವವನಿಗೆ ಕೊಡಲ್ಪಡುವ ಸಮಯದ ವರೆಗೂ ವ್ಯಾಪಿಸುವ, ಭವಿಷ್ಯತ್ತಿನ ಲೌಕಿಕ ಘಟನೆಗಳ ಪ್ರಮುಖ ವೈಶಿಷ್ಟ್ಯಗಳನ್ನು ಅದು ಮುಂತಿಳಿಸಿತು. ದೇವರ ವಾಕ್ಯ ಹಾಗೂ ಪವಿತ್ರಾತ್ಮದ ಸಹಾಯದಿಂದ, ಈ ಪ್ರವಾದನಾ ದರ್ಶನಗಳ ಅರ್ಥವನ್ನು ನಾವು ಸಹ ಗ್ರಹಿಸಸಾಧ್ಯವಿದೆ. *

ಸಮುದ್ರದಿಂದ ನಾಲ್ಕು ದೊಡ್ಡ ಮೃಗಗಳು ಹೊರಬರುತ್ತವೆ

5. ಗಾಳಿಯ ಹೊಡೆತಕ್ಕೆ ಸಿಕ್ಕಿದ ಸಮುದ್ರವು ಏನನ್ನು ಸಂಕೇತಿಸಿತು?

5 “ನಾಲ್ಕು ದೊಡ್ಡ ಮೃಗಗಳು ಸಾಗರ [“ಸಮುದ್ರ,” NW]ದೊಳಗಿಂದ ಬಂದವು” ಎಂದು ದಾನಿಯೇಲನು ಹೇಳಿದನು. (ದಾನಿಯೇಲ 7:⁠3) ಗಾಳಿಯ ಹೊಡೆತಕ್ಕೆ ಸಿಕ್ಕಿದ ಸಮುದ್ರವು ಏನನ್ನು ಸಂಕೇತಿಸಿತು? ಅನೇಕ ವರ್ಷಗಳ ತರುವಾಯ ಅಪೊಸ್ತಲ ಯೋಹಾನನು, ಏಳು ತಲೆಗಳುಳ್ಳ ಒಂದು ಮೃಗವು “ಸಮುದ್ರ”ದಿಂದ ಏರಿಬರುತ್ತಿರುವುದನ್ನು ಕಂಡನು. ಆ ಸಮುದ್ರವು “ಪ್ರಜೆ ಸಮೂಹ ಜನ ಭಾಷೆಗಳನ್ನು,” ಅಂದರೆ ದೇವರಿಂದ ವಿಮುಖವಾಗಿರುವ ಮಾನವಕುಲವನ್ನು ಪ್ರತಿನಿಧಿಸಿತು. ಹೀಗಿರುವುದರಿಂದ, ದೇವರಿಗೆ ಬೆನ್ನುಹಾಕಿರುವ ಮಾನವಕುಲದ ಅಧಿಕಾಂಶ ಭಾಗವನ್ನು ಸೂಚಿಸಲು, ಸಮುದ್ರವು ಒಂದು ಸೂಕ್ತವಾದ ಸಂಕೇತವಾಗಿದೆ.​—⁠ಪ್ರಕಟನೆ 13:​1, 2; 17:15; ಯೆಶಾಯ 57:⁠20.

6. ನಾಲ್ಕು ದೊಡ್ಡ ಮೃಗಗಳು ಏನನ್ನು ಚಿತ್ರಿಸುತ್ತವೆ?

6 “ಆ ನಾಲ್ಕು ದೊಡ್ಡ ಮೃಗಗಳು ಲೋಕಸಾಗರ [“ಸಮುದ್ರ,” NW]ದೊಳಗಿಂದ ಏರತಕ್ಕ ನಾಲ್ಕು ರಾಜ್ಯಗಳು [“ಅರಸರು,” NW]” ಎಂದು ದೇವದೂತನು ಹೇಳಿದನು. (ದಾನಿಯೇಲ 7:17) ಸ್ಪಷ್ಟವಾಗಿಯೇ, ದಾನಿಯೇಲನು ಕಂಡ ಆ ನಾಲ್ಕು ದೊಡ್ಡ ಮೃಗಗಳು, “ನಾಲ್ಕು ಅರಸರು” ಎಂದು ದೇವದೂತನು ಗುರುತಿಸಿದನು. ಹೀಗೆ, ಈ ಮೃಗಗಳು ಲೋಕ ಶಕ್ತಿಗಳನ್ನು ಸೂಚಿಸುತ್ತವೆ. ಆದರೆ ಯಾವ ಲೋಕ ಶಕ್ತಿಗಳನ್ನು ಇವು ಸೂಚಿಸುತ್ತವೆ?

7. (ಎ) ನಾಲ್ಕು ಮೃಗಗಳ ಕುರಿತಾದ ದಾನಿಯೇಲನ ಕನಸಿನ ದರ್ಶನ ಹಾಗೂ ಅರಸನಾದ ನೆಬೂಕದ್ನೆಚ್ಚರನ ಅತಿ ದೊಡ್ಡ ಪ್ರತಿಮೆಯ ಕನಸಿನ ಕುರಿತು ಕೆಲವು ಬೈಬಲ್‌ ವಿಮರ್ಶಕರು ಏನು ಹೇಳುತ್ತಾರೆ? (ಬಿ) ಪ್ರತಿಮೆಯ ಲೋಹದ ನಾಲ್ಕು ಭಾಗಗಳಲ್ಲಿ ಪ್ರತಿಯೊಂದು ಭಾಗವು ಏನನ್ನು ಪ್ರತಿನಿಧಿಸುತ್ತದೆ?

7 ಸಾಮಾನ್ಯವಾಗಿ ಬೈಬಲ್‌ ವಿಮರ್ಶಕರು, ನಾಲ್ಕು ಮೃಗಗಳ ಕುರಿತಾದ ದಾನಿಯೇಲನ ಕನಸಿನ ದರ್ಶನವನ್ನು, ನೆಬೂಕದ್ನೆಚ್ಚರನ ಅತಿ ದೊಡ್ಡ ಪ್ರತಿಮೆಯ ಕನಸಿನೊಂದಿಗೆ ಜೊತೆಗೂಡಿಸುತ್ತಾರೆ. ಉದಾಹರಣೆಗಾಗಿ, ದಿ ಎಕ್ಸ್‌ಪೊಸಿಟರ್ಸ್‌ ಬೈಬಲ್‌ ಕಾಮೆಂಟರಿ ಹೀಗೆ ಹೇಳುತ್ತದೆ: “[ದಾನಿಯೇಲ ಪುಸ್ತಕದ] 7ನೆಯ ಅಧ್ಯಾಯವು, 2ನೆಯ ಅಧ್ಯಾಯದೊಂದಿಗೆ ತಾಳೆಯಾಗುತ್ತದೆ.” ದ ವಿಕ್ಲಿಫ್‌ ಬೈಬಲ್‌ ಕಾಮೆಂಟರಿ ಹೀಗೆ ಹೇಳುತ್ತದೆ: “[ದಾನಿಯೇಲ ಪುಸ್ತಕದ 7ನೆಯ ಅಧ್ಯಾಯದಲ್ಲಿ] ವಿವರಿಸಲ್ಪಟ್ಟಿರುವ . . . ನಾಲ್ಕು ಅನ್ಯ ಆಧಿಪತ್ಯಗಳ ಅನುಕ್ರಮವಾದ ಆಳ್ವಿಕೆಯು, [ದಾನಿಯೇಲ ಪುಸ್ತಕದ] 2ನೆಯ ಅಧ್ಯಾಯದಲ್ಲಿ ಪರಿಗಣಿಸಲ್ಪಟ್ಟಿರುವ ವಿಷಯವೇ ಆಗಿದೆ ಎಂದು ವ್ಯಾಪಕವಾಗಿ ಒಪ್ಪಲಾಗುತ್ತದೆ.” ನೆಬೂಕದ್ನೆಚ್ಚರನ ಕನಸಿನ ನಾಲ್ಕು ಲೋಹಗಳಿಂದ ಪ್ರತಿನಿಧಿಸಲ್ಪಟ್ಟ ನಾಲ್ಕು ಲೋಕ ಶಕ್ತಿಗಳು, ಬಾಬೆಲ್‌ ಸಾಮ್ರಾಜ್ಯ (ಬಂಗಾರದ ತಲೆ), ಮೇದ್ಯಯ-ಪಾರಸಿಯ (ಬೆಳ್ಳಿಯ ಎದೆತೋಳುಗಳು), ಗ್ರೀಕ್‌ (ತಾಮ್ರದ ಹೊಟ್ಟೆಸೊಂಟಗಳು), ಮತ್ತು ರೋಮನ್‌ ಸಾಮ್ರಾಜ್ಯ (ಕಬ್ಬಿಣದ ಕಾಲು)ಗಳೇ ಆಗಿದ್ದವು. * (ದಾನಿಯೇಲ ​2:32, 33) ದಾನಿಯೇಲನು ಕಂಡ ನಾಲ್ಕು ದೊಡ್ಡ ಮೃಗಗಳೊಂದಿಗೆ ಈ ರಾಜ್ಯಗಳು ಹೇಗೆ ಹೋಲುತ್ತವೆ ಎಂಬುದನ್ನು ನಾವೀಗ ನೋಡೋಣ.

ಸಿಂಹದಂತೆ ಕ್ರೂರ, ಹದ್ದಿನಂತೆ ತೀಕ್ಷ್ಣ

8. (ಎ) ಮೊದಲನೆಯ ಮೃಗವನ್ನು ದಾನಿಯೇಲನು ಹೇಗೆ ವರ್ಣಿಸಿದನು? (ಬಿ) ಮೊದಲನೆಯ ಮೃಗವು ಯಾವ ಸಾಮ್ರಾಜ್ಯವನ್ನು ಪ್ರತಿನಿಧಿಸಿತು, ಮತ್ತು ಅದು ಹೇಗೆ ಸಿಂಹದಂತೆ ​ವರ್ತಿಸಿತು?

8 ಎಂತಹ ಭಾವಪ್ರಚೋದಕ ಮೃಗಗಳನ್ನು ದಾನಿಯೇಲನು ಕಂಡನು! ಒಂದರ ಕುರಿತು ವರ್ಣಿಸುತ್ತಾ ಅವನು ಹೇಳಿದ್ದು: “ಮೊದಲು ಕಾಣಿಸಿದ ಮೃಗವು ಸಿಂಹದ ಹಾಗಿತ್ತು, ಅದಕ್ಕೆ ಹದ್ದಿನಂತೆ ರೆಕ್ಕೆಗಳಿದ್ದವು; ನಾನು ನೋಡುತ್ತಿರುವಾಗಲೇ ಆ ರೆಕ್ಕೆಗಳು ಕೀಳಲ್ಪಟ್ಟವು; ಅದು ನೆಲದಿಂದ ಎತ್ತಲ್ಪಟ್ಟು ಮನುಷ್ಯನ ಹಾಗೆ ಎರಡು ಕಾಲುಗಳ ಮೇಲೆ ನಿಲ್ಲಿಸಲ್ಪಟ್ಟಿತು, ಅದಕ್ಕೆ ಮನುಷ್ಯನ ಹೃದಯವು ಕೊಡೋಣವಾಯಿತು.” (ದಾನಿಯೇಲ 7:⁠4) ಅತಿ ದೊಡ್ಡ ಪ್ರತಿಮೆಯ ಬಂಗಾರದ ತಲೆಯಿಂದ ಪ್ರತಿನಿಧಿಸಲ್ಪಟ್ಟ ಆಳ್ವಿಕೆಯನ್ನು, ಅಂದರೆ ಬಾಬೆಲ್‌ ಲೋಕ ಶಕ್ತಿಯನ್ನೇ (ಸಾ.ಶ.ಪೂ. 607-539) ಈ ಮೃಗವು ಸಹ ಚಿತ್ರಿಸಿತು. ಮಾಂಸಾಹಾರಿಯಾದ ಒಂದು “ಸಿಂಹ”ದಂತೆ, ದೇವಜನರನ್ನೂ ಸೇರಿಸಿ ಅನೇಕ ಜನಾಂಗಗಳನ್ನು ಬಾಬೆಲ್‌ ಉಗ್ರ ರೀತಿಯಲ್ಲಿ ಧ್ವಂಸಗೊಳಿಸಿತು. (ಯೆರೆಮೀಯ 4:​5-7; 50:17) ಒಂದು ಹದ್ದಿನ ರೆಕ್ಕೆಗಳಿಂದಲೋ ಎಂಬಂತೆ ಈ “ಸಿಂಹ”ವು, ಬಿರುಸಿನಿಂದ ಆಕ್ರಮಣಶೀಲ ವಿಜಯವನ್ನು ಮುಂದುವರಿಸಿತು.​—⁠ಪ್ರಲಾಪಗಳು 4:19; ಹಬಕ್ಕೂಕ 1:​6-8.

9. ಸಿಂಹದಂತಿದ್ದ ಮೃಗವು ಯಾವ ಬದಲಾವಣೆಗಳಿಗೆ ಒಳಗಾಯಿತು, ಮತ್ತು ಈ ಬದಲಾವಣೆಗಳು ಅದರ ಮೇಲೆ ಯಾವ ಪರಿಣಾಮವನ್ನು ಬೀರಿದವು?

9 ಸಕಾಲದಲ್ಲಿ, ಅಪೂರ್ವವಾದ ರೆಕ್ಕೆಗಳಿದ್ದ ಸಿಂಹದ ರೆಕ್ಕೆಗಳು “ಕೀಳಲ್ಪಟ್ಟವು.” ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಕೊನೆಯಷ್ಟಕ್ಕೆ, ಬಾಬೆಲ್‌ ತನ್ನ ವಿಜಯದ ವೇಗವನ್ನು ಹಾಗೂ ಜನಾಂಗಗಳ ಮೇಲಿನ ಸಿಂಹದಂತಹ ಪರಮಾಧಿಪತ್ಯವನ್ನು ಕಳೆದುಕೊಂಡಿತು. ಈಗ ಅದು ಎರಡು ಕಾಲುಗಳುಳ್ಳ ಮನುಷ್ಯನಿಗಿಂತ ಹೆಚ್ಚು ವೇಗವುಳ್ಳದ್ದಾಗಿರಲಿಲ್ಲ. ಅದಕ್ಕೆ “ಮನುಷ್ಯನ ಹೃದಯ”ವು ಕೊಡಲ್ಪಟ್ಟಿದ್ದರಿಂದ, ಅದು ತುಂಬ ದುರ್ಬಲವಾಯಿತು. “ಸಿಂಹ ಹೃದಯ”ವು ಇಲ್ಲದೇಹೋದುದರಿಂದ, ಬಾಬೆಲ್‌ ಇನ್ನೆಂದಿಗೂ “ಕಾಡು ಮೃಗಗಳ” ನಡುವೆ ರಾಜನಂತೆ ವರ್ತಿಸಲು ಸಾಧ್ಯವಿರಲಿಲ್ಲ. (ಹೋಲಿಸಿರಿ 2 ಸಮುವೇಲ 17:10; ಮೀಕ 5:⁠8.) ಇನ್ನೊಂದು ದೊಡ್ಡ ಮೃಗವು ಅದನ್ನು ಸೋಲಿಸಿತು.

ಕರಡಿಯಂತೆ ಅತ್ಯಾಸೆಯುಳ್ಳವನು

10. “ಕರಡಿ”ಯು ಯಾವ ಅರಸರ ವಂಶಾವಳಿಯನ್ನು ಸಂಕೇತಿಸಿತು?

10 “ಆಹಾ, ಇನ್ನೊಂದು ಮೃಗ, ಎರಡನೇದು; ಅದು ಕರಡಿಯ ಹಾಗಿತ್ತು, ಒಂದು ಹೆಗಲನ್ನು ಮೇಲಕ್ಕೆ ಎತ್ತಿಕೊಂಡಿತ್ತು, ತನ್ನ ಬಾಯಲ್ಲಿ ಹಲ್ಲುಗಳ ನಡುವೆ ಮೂರು ಪಕ್ಕೆಲುಬುಗಳನ್ನು ಕಚ್ಚಿಕೊಂಡಿತ್ತು; ನೀನೆದ್ದು ಬಹು ಮಾಂಸವನ್ನು ತಿನ್ನು ಎಂದು ಅದಕ್ಕೆ ಹೇಳೋಣವಾಯಿತು” ಎಂದು ದಾನಿಯೇಲನು ಹೇಳಿದನು. (ದಾನಿಯೇಲ 7:⁠5) ಈ ಕರಡಿಯಿಂದ ಸಂಕೇತಿಸಲ್ಪಟ್ಟ ಅರಸನು, ಅತಿ ದೊಡ್ಡ ಪ್ರತಿಮೆಯ ಬೆಳ್ಳಿಯ ಎದೆ ಹಾಗೂ ತೋಳುಗಳಿಂದ ಪ್ರತಿನಿಧಿಸಲ್ಪಟ್ಟ ಅರಸನೇ ಆಗಿದ್ದನು. ಇದು ಮೇದ್ಯಯಪಾರಸಿಯ ಅರಸರ (ಸಾ.ಶ.ಪೂ. 539-331) ವಂಶಾವಳಿಗೆ ಸೂಚಿತವಾಗಿದ್ದು, ಮೇದ್ಯಯನಾದ ದಾರ್ಯಾವೆಷ ಮತ್ತು ಮಹಾ ಕೋರೆಷನಿಂದ ಆರಂಭವಾಗಿ, IIIನೆಯ ದಾರ್ಯಾವೆಷನ ಆಳ್ವಿಕೆಯೊಂದಿಗೆ ಅಂತ್ಯಗೊಳ್ಳಲಿತ್ತು.

11. ಸಾಂಕೇತಿಕ ಕರಡಿಯ ಒಂದು ಹೆಗಲು ಮೇಲಕ್ಕೆ ಎತ್ತಿಕೊಂಡಿದ್ದದ್ದು, ಹಾಗೂ ಅದರ ಬಾಯಲ್ಲಿ ಹಲ್ಲುಗಳ ನಡುವೆ ಕಚ್ಚಿಕೊಂಡಿದ್ದ ಮೂರು ಪಕ್ಕೆಲುಬುಗಳು ಏನನ್ನು ಸೂಚಿಸಿದವು?

11 ಆ ಸಾಂಕೇತಿಕ ಕರಡಿಯು “ಒಂದು ಹೆಗಲನ್ನು ಮೇಲಕ್ಕೆ ಎತ್ತಿಕೊಂಡಿ”ದ್ದರ ಕಾರಣವು, ಆಕ್ರಮಣ ಮಾಡಲು ಸಿದ್ಧವಾಗಿ, ಜನಾಂಗಗಳನ್ನು ವಶಪಡಿಸಿಕೊಂಡು, ಲೋಕ ಶಕ್ತಿಯನ್ನು ಕಾಪಾಡಿಕೊಳ್ಳುವುದೇ ಆಗಿದ್ದಿರಬಹುದು. ಅಥವಾ ಒಂದು ಹೆಗಲು ಮೇಲಕ್ಕೆ ಎತ್ತಿಕೊಂಡಿರುವಂತಹ ಭಂಗಿಯು, ಏಕಮಾತ್ರ ಮೇದ್ಯಯ ಅರಸನಾದ ದಾರ್ಯಾವೆಷನ ಮೇಲೆ ಪಾರಸಿಯ ಅರಸರ ವಂಶಾವಳಿಯು ಪ್ರಬಲವಾದ ಹತೋಟಿಯನ್ನು ಪಡೆಯುವುದು ಎಂಬುದನ್ನು ತೋರಿಸುತ್ತಿರಬಹುದು. ಕರಡಿಯ ಬಾಯಲ್ಲಿ ಹಲ್ಲುಗಳ ನಡುವೆ ಕಚ್ಚಿಕೊಂಡಿದ್ದ ಮೂರು ಪಕ್ಕೆಲುಬುಗಳು, ಮೂರು ದಿಕ್ಕುಗಳಲ್ಲಿ ಇದು ತನ್ನ ದಂಡಯಾತ್ರೆಯನ್ನು ಮುಂದುವರಿಸುತ್ತದೆ ಎಂಬುದನ್ನು ಸೂಚಿಸಸಾಧ್ಯವಿದೆ. ಸಾ.ಶ.ಪೂ. 539ರಲ್ಲಿ ಬಾಬೆಲಿಗೆ ಮುತ್ತಿಗೆ ಹಾಕಲಿಕ್ಕಾಗಿ, ಮೇದ್ಯಯಪಾರಸಿಯ “ಕರಡಿ”ಯು ಉತ್ತರ ದಿಕ್ಕಿನ ಕಡೆಗೆ ಸಾಗಿತು. ತದನಂತರ ಅದು ಪಶ್ಚಿಮ ದಿಕ್ಕಿನ ಕಡೆಗೆ, ಅಂದರೆ ಏಷ್ಯಾ ಮೈನರ್‌ ಹಾಗೂ ಥ್ರೇಸ್‌ನ ಕಡೆಗೆ ಮುನ್ನುಗ್ಗಿತು. ಕೊನೆಯದಾಗಿ, ಐಗುಪ್ತವನ್ನು ವಶಪಡಿಸಿಕೊಳ್ಳಲಿಕ್ಕಾಗಿ “ಕರಡಿ”ಯು ದಕ್ಷಿಣ ದಿಕ್ಕಿನ ಕಡೆಗೆ ತೆರಳಿತು. ಮೂರು ಎಂಬ ಸಂಖ್ಯೆಯು ಕೆಲವೊಮ್ಮೆ ತೀವ್ರತೆಯನ್ನು ಸೂಚಿಸುವುದರಿಂದ, ಈ ಮೂರು ಪಕ್ಕೆಲುಬುಗಳು, ಸಾಂಕೇತಿಕ ​ಕರಡಿಯ ವಿಜಯದ ದಾಹವನ್ನು ಸಹ ಒತ್ತಿಹೇಳುತ್ತಿರಬಹುದು.

12. “ನೀನೆದ್ದು ಬಹು ಮಾಂಸವನ್ನು ತಿನ್ನು” ಎಂಬ ಆಜ್ಞೆಗೆ ಸಾಂಕೇತಿಕ ಕರಡಿಯು ವಿಧೇಯತೆ ತೋರಿಸಿದ್ದರ ಫಲಿತಾಂಶವಾಗಿ ಏನು ಸಂಭವಿಸಿತು?

12 “ನೀನೆದ್ದು ಬಹು ಮಾಂಸವನ್ನು ತಿನ್ನು” ಎಂಬ ಮಾತುಗಳಿಗೆ ಪ್ರತ್ಯುತ್ತರವಾಗಿ, “ಕರಡಿ”ಯು ಜನಾಂಗಗಳ ಮೇಲೆ ಆಕ್ರಮಣಮಾಡಿತು. ದೈವಿಕ ಚಿತ್ತಕ್ಕನುಸಾರ ಬಾಬೆಲನ್ನು ಧ್ವಂಸಮಾಡುವ ಮೂಲಕ, ಮೇದ್ಯಯಪಾರಸಿಯವು ಯೆಹೋವನ ಜನರಿಗೋಸ್ಕರ ಅಮೂಲ್ಯವಾದ ಸೇವೆಯನ್ನು ಮಾಡುವ ಸ್ಥಿತಿಯಲ್ಲಿತ್ತು. ಮತ್ತು ಅದು ತನ್ನ ಕಾರ್ಯವನ್ನು ಸಾಧಿಸಿತು! (149ನೆಯ ಪುಟದಲ್ಲಿರುವ “ಸೈರಣೆಯುಳ್ಳ ಸಾಮ್ರಾಟ” ಎಂಬ ಶೀರ್ಷಿಕೆಯ ಕೆಳಗಿರುವ ವಿಷಯ​ವನ್ನು ನೋಡಿರಿ.) ಮಹಾ ಕೋರೆಷ, Iನೆಯ ದಾರ್ಯಾವೆಷ, (ಮಹಾ ದಾರ್ಯಾವೆಷ) ಹಾಗೂ Iನೆಯ ಅರ್ತಷಸ್ತರ ಮೂಲಕ, ಮೇದ್ಯಯಪಾರಸಿಯವು ಬಾಬೆಲಿನ ಯೆಹೂದಿ ಬಂದಿವಾಸಿಗಳನ್ನು ಬಿಡುಗಡೆಗೊಳಿಸಿತು ಮತ್ತು ಯೆಹೋವನ ಆಲಯವನ್ನು ಪುನಃ ಕಟ್ಟಲು ಹಾಗೂ ಯೆರೂಸಲೇಮಿನ ಗೋಡೆಗಳನ್ನು ಸರಿಪಡಿಸಲು ಅವರಿಗೆ ಸಹಾಯ ಮಾಡಿತು. ​ಕಟ್ಟಕಡೆಗೆ, ಮೇದ್ಯಯಪಾರಸಿಯವು 127 ಸಂಸ್ಥಾನಗಳ ಮೇಲೆ ಆಳ್ವಿಕೆ ನಡೆಸಲಾರಂಭಿಸಿತು, ಮತ್ತು ಎಸ್ತೇರ್‌ ರಾಣಿಯ ಗಂಡನಾದ ಅಹಷ್ವೇರೋಷ (Iನೆಯ ಸರ್‌ಕ್ಸೀಸ್‌)ನು “ಹಿಂದುಸ್ಥಾನ ಮೊದಲುಗೊಂಡು ಕೂಷಿನ ವರೆಗೂ . . . ಆಳುತ್ತಿದ್ದ”ನು. (ಎಸ್ತೇರಳು 1:⁠1) ಅಷ್ಟರಲ್ಲಿ ಇನ್ನೊಂದು ಮೃಗವು ಸಮುದ್ರದಿಂದ ಮೇಲೆ ಬರುತ್ತಿರುವುದು ದೂರದಲ್ಲಿ ಕಾಣಿಸಿತು.

ರೆಕ್ಕೆಯುಳ್ಳ ಚಿರತೆಯಂತೆ ಚುರುಕು!

13. (ಎ) ಮೂರನೆಯ ಮೃಗವು ಏನನ್ನು ಸಂಕೇತಿಸಿತು? (ಬಿ) ಮೂರನೆಯ ಮೃಗದ ವೇಗ ಹಾಗೂ ಅದು ಆಕ್ರಮಿಸಿದ ಆಧಿಪತ್ಯದ ಕುರಿತು ಏನು ಹೇಳಸಾಧ್ಯವಿದೆ?

13 ಮೂರನೆಯ ಮೃಗವು ‘ಚಿರತೆಯ ಹಾಗಿತ್ತು.’ “ಅದರ ಪಕ್ಕಗಳಲ್ಲಿ ಪಕ್ಷಿಯ ರೆಕ್ಕೆಯಂತಿರುವ ನಾಲ್ಕು ರೆಕ್ಕೆಗಳಿದ್ದವು; ಆ ಮೃಗಕ್ಕೆ ನಾಲ್ಕು ತಲೆಗಳಿದ್ದವು, ಅದಕ್ಕೆ ದೊರೆತನವು ಕೊಡೋಣವಾಯಿತು.” (ದಾನಿಯೇಲ 7:⁠6) ತನ್ನ ಪ್ರತಿರೂಪವಾಗಿರುವ ನೆಬೂಕದ್ನೆಚ್ಚರನ ಕನಸಿನ ಪ್ರತಿಮೆಯ ತಾಮ್ರದ ಹೊಟ್ಟೆ ಹಾಗೂ ಸೊಂಟಗಳಂತೆ, ನಾಲ್ಕು ರೆಕ್ಕೆಗಳೂ ನಾಲ್ಕು ತಲೆಗಳೂ ಇದ್ದ ಈ ಚಿರತೆಯು, ಮಹಾ ಅಲೆಕ್ಸಾಂಡರನಿಂದ ಆರಂಭ​ವಾಗುವ ಮ್ಯಾಸಿಡೋನಿಯನ್‌ ಅಥವಾ ಗ್ರೀಕ್‌ ಅರಸರ ವಂಶಾವಳಿಯನ್ನು ಸಂಕೇತಿಸಿತು. ಚಿರತೆಯಂತಹ ಕೈಚಳಕ ಹಾಗೂ ವೇಗದೊಂದಿಗೆ ಅಲೆಕ್ಸಾಂಡರನು, ಏಷ್ಯಾ ಮೈನರ್‌ನ ಮೂಲಕ ದಕ್ಷಿಣದ ಐಗುಪ್ತಕ್ಕೆ ಹೋಗಿ, ಅಲ್ಲಿಂದ ಭಾರತದ ಪಶ್ಚಿಮ ಭಾಗದ ಕಡೆಗೂ ಮುನ್ನುಗ್ಗಿದನು. (ಹೋಲಿಸಿರಿ ಹಬಕ್ಕೂಕ 1:⁠8.) ಅಲೆಕ್ಸಾಂಡರನ ಆಧಿಪತ್ಯವು “ಕರಡಿ”ಯ ಆಧಿಪತ್ಯಕ್ಕಿಂತಲೂ ಹೆಚ್ಚು ವಿಸ್ತಾರವಾಗಿತ್ತು. ಏಕೆಂದರೆ ಮ್ಯಾಸಿಡೋನಿಯ, ಗ್ರೀಕ್‌, ಹಾಗೂ ಪಾರಸಿಯ ಸಾಮ್ರಾಜ್ಯವು ಅದರಲ್ಲಿ ಒಳಗೂಡಿತ್ತು.​—⁠153ನೆಯ ಪುಟದಲ್ಲಿರುವ “ಒಬ್ಬ ಎಳೆಯ ರಾಜನು ಲೋಕವನ್ನು ಜಯಿಸುತ್ತಾನೆ” ಎಂಬ ಶೀರ್ಷಿಕೆಯ ಕೆಳಗಿರುವ ವಿಷಯವನ್ನು ನೋಡಿರಿ.

14. “ಚಿರತೆ”ಯು ಹೇಗೆ ನಾಲ್ಕು ತಲೆಗಳುಳ್ಳದ್ದಾಗಿ ಪರಿಣಮಿಸಿತು?

14 ಸಾ.ಶ.ಪೂ. 323ರಲ್ಲಿ ಅಲೆಕ್ಸಾಂಡರನು ಮರಣಪಟ್ಟ ಬಳಿಕ, “ಚಿರತೆ”ಯು ನಾಲ್ಕು ತಲೆಗಳುಳ್ಳದ್ದಾಗಿ ಪರಿಣಮಿಸಿತು. ಕಾಲಕ್ರಮೇಣ ಅವನ ಸೇನಾಧಿಕಾರಿಗಳಲ್ಲಿ ನಾಲ್ಕು ಮಂದಿ ಅವನಿಗೆ ಬದಲಾಗಿ ಅಧಿಕಾರಕ್ಕೆ ಬಂದರು. ಅವರು ಅಲೆಕ್ಸಾಂಡರನ ಆಧಿಪತ್ಯದ ಬೇರೆ ಬೇರೆ ವಿಭಾಗಗಳಲ್ಲಿ ಆಳತೊಡಗಿದರು. ಸೆಲ್ಯೂಕಸನು ಮೆಸಪೊಟೇಮಿಯ ಹಾಗೂ ಸಿರಿಯವನ್ನು ಆಳತೊಡಗಿದನು. ಟಾಲೆಮಿಯು ಐಗುಪ್ತ ಹಾಗೂ ಪ್ಯಾಲೆಸ್ಟೈನನ್ನು ನೋಡಿಕೊಳ್ಳತೊಡಗಿದನು. ಲೈಸಿಮೆಕಸನು ಏಷ್ಯಾ ಮೈನರ್‌ ಹಾಗೂ ಥ್ರೇಸನ್ನು ಆಳುತ್ತಿದ್ದನು, ಮತ್ತು ಕಸಾಂಡರ್‌ನಿಗೆ ಮ್ಯಾಸಿಡೋನಿಯ ಹಾಗೂ ಗ್ರೀಸ್‌ಗಳು ಸಿಕ್ಕಿದವು. (162ನೆಯ ಪುಟದಲ್ಲಿರುವ “ವಿಸ್ತಾರವಾಗಿದ್ದ ಒಂದು ರಾಜ್ಯವು ವಿಭಾಗಿಸಲ್ಪಡುತ್ತದೆ” ಎಂಬ ಶೀರ್ಷಿಕೆಯ ಕೆಳಗಿರುವ ವಿಷಯವನ್ನು ನೋಡಿರಿ.) ಆ ಬಳಿಕ ಹೊಸ ವಿಪತ್ತಿನ ಸೂಚನೆಯು ಕಂಡುಬಂತು.

ಭಯಂಕರವಾದ ಒಂದು ಮೃಗವು ವಿಲಕ್ಷಣವಾದುದಾಗಿ ಪರಿಣಮಿಸುತ್ತದೆ

15. (ಎ) ನಾಲ್ಕನೆಯ ಮೃಗವನ್ನು ವರ್ಣಿಸಿರಿ. (ಬಿ) ನಾಲ್ಕನೆಯ ಮೃಗವು ಏನನ್ನು ಸಂಕೇತಿಸಿತು, ಮತ್ತು ಅದು ತನ್ನ ಹಾದಿಗೆ ಅಡ್ಡಬರುವ ಎಲ್ಲವನ್ನೂ ಹೇಗೆ ನುಂಗುತ್ತಾ, ಚೂರುಚೂರು ಮಾಡುತ್ತಾ ಹೋಯಿತು?

15 ನಾಲ್ಕನೆಯ ಮೃಗವು “ಭಯಂಕರ, ಹೆದರಿಸುವಂಥದು, ಅಧಿಕಬಲವುಳ್ಳದ್ದು” ಎಂದು ದಾನಿಯೇಲನು ವಿವರಿಸಿದನು. ಅವನು ಮುಂದುವರಿಸಿದ್ದು: “ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು; ಅದು ನುಂಗುತ್ತಾ ಚೂರುಚೂರು ಮಾಡುತ್ತಾ ಮಿಕ್ಕದ್ದನ್ನು ಕಾಲುಗಳಿಂದ ತುಳಿಯುತ್ತಾ ಇತ್ತು; ಅದು ಮುಂಚಿನ ಎಲ್ಲಾ ಮೃಗಗಳಿಗಿಂತ ವಿಲಕ್ಷಣವಾಗಿತ್ತು; ಅದಕ್ಕೆ ಹತ್ತು ಕೊಂಬುಗಳಿದ್ದವು.” (ದಾನಿಯೇಲ 7:⁠7) ಭಯಂಕರವಾದ ಈ ಮೃಗವು, ಆರಂಭದಲ್ಲಿ ರಾಜಕೀಯ ಹಾಗೂ ಮಿಲಿಟರಿ ಶಕ್ತಿಯಾದ ರೋಮ್‌ ಆಗಿತ್ತು. ಕಾಲಕ್ರಮೇಣ ಗ್ರೀಕ್‌ ಸಾಮ್ರಾಜ್ಯದ ನಾಲ್ಕು (ಹೆಲೀನಿಸ್ಟಿಕ್‌) ವಿಭಾಗಗಳನ್ನು ರೋಮ್‌ ವಶಪಡಿಸಿಕೊಂಡಿತು, ಮತ್ತು ಸಾ.ಶ.ಪೂ. 30ನೆಯ ವರ್ಷದಷ್ಟಕ್ಕೆ, ಅದು ಬೈಬಲ್‌ ಇತಿಹಾಸದ ಮುಂದಿನ ಲೋಕ ಶಕ್ತಿಯಾಗಿ ಪರಿಣಮಿಸಿತ್ತು. ತನ್ನ ಹಾದಿಗೆ ​ಅಡ್ಡಬರುವ ಪ್ರತಿಯೊಂದನ್ನೂ ಮಿಲಿಟರಿ ಸೈನ್ಯದ ಸಹಾಯದಿಂದ ಅಧೀನಪಡಿಸಿಕೊಳ್ಳುತ್ತಾ, ರೋಮನ್‌ ಸಾಮ್ರಾಜ್ಯವು ವಿಸ್ತಾರವಾಗಿ ಬೆಳೆಯಿತು. ಬ್ರಿಟಿಷ್‌ ದ್ವೀಪಗಳಿಂದ ಹಿಡಿದು ಯೂರೋಪಿನ ತನಕ ವ್ಯಾಪಿಸಿದ್ದ ಕ್ಷೇತ್ರವನ್ನು, ಮೆಡಿಟರೇನಿಯನ್‌ನ ಸುತ್ತುಮುತ್ತಲ ಪ್ರದೇಶವನ್ನು, ಮತ್ತು ಬಾಬೆಲ್‌ನಿಂದ ಪರ್ಷಿಯನ್‌ ಕೊಲ್ಲಿಯ ತನಕವಿದ್ದ ಭೂಪ್ರದೇಶ​ವನ್ನು ರೋಮ್‌ ಆವರಿಸಿತು.

16. ನಾಲ್ಕನೆಯ ಮೃಗದ ಕುರಿತು ದೇವದೂತನು ಯಾವ ಮಾಹಿತಿಯನ್ನು ಒದಗಿಸಿದನು?

16 “ವಿಲಕ್ಷಣವಾಗಿ ಅತಿಭಯಂಕರವಾದ” ಈ ಮೃಗದ ಅರ್ಥವನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ದೇವದೂತನು ಕೆಳಗಿನಂತೆ ವಿವರಿಸುವಾಗ ದಾನಿಯೇಲನು ಗಮನವಿಟ್ಟು ಆಲಿಸಿದನು: “ಆ ಹತ್ತು ಕೊಂಬುಗಳ ವಿಷಯವೇನಂದರೆ ಆ ರಾಜ್ಯದಲ್ಲಿ ಹತ್ತು ಮಂದಿ ಅರಸರು ಉಂಟಾಗುವರು; ಅವರ ತರುವಾಯ ಮತ್ತೊಬ್ಬನು ತಲೆದೋರುವನು; ಅವನು ಮುಂಚಿನ ಅರಸರಿಗಿಂತ ವಿಲಕ್ಷಣವಾಗಿ ಮೂವರು ಅರಸರನ್ನು ಅದಮಿಬಿಡುವನು [“ಅವಮಾನಿಸುವನು,” NW].” (ದಾನಿಯೇಲ 7:​19, 20, 24) ಈ “ಹತ್ತು ಕೊಂಬುಗಳು” ಹಾಗೂ “ಹತ್ತು ಮಂದಿ ಅರಸರು” ಯಾರಾಗಿದ್ದರು?

17. ನಾಲ್ಕನೆಯ ಮೃಗದ “ಹತ್ತು ಕೊಂಬು”ಗಳು ಏನನ್ನು ಸೂಚಿಸುತ್ತವೆ?

17 ರೋಮ್‌ ಹೆಚ್ಚೆಚ್ಚು ಸಂಪದ್ಭರಿತವಾದಂತೆ ಮತ್ತು ಅದರ ಅಧಿಪತಿ ವರ್ಗದವರು ವಿಷಯಲಂಪಟ ಜೀವನಶೈಲಿಯಲ್ಲಿ ತಲ್ಲೀನರಾಗಿ, ಹೆಚ್ಚೆಚ್ಚು ಅವನತಿಹೊಂದುತ್ತಾ ಬಂದಂತೆ, ಅದರ ಮಿಲಿಟರಿ ಬಲವು ಕುಗ್ಗುತ್ತಾ ಬಂತು. ಸಮಯಾನಂತರ, ರೋಮ್‌ನ ಮಿಲಿಟರಿ ಶಕ್ತಿಯ ಪತನವು ಹೆಚ್ಚು ಸ್ಪಷ್ಟವಾಗಿ ವ್ಯಕ್ತವಾಯಿತು. ಬಲಿಷ್ಠವಾಗಿದ್ದ ರೋಮನ್‌ ಸಾಮ್ರಾಜ್ಯವು, ಕಾಲಕ್ರಮೇಣ ಅನೇಕ ರಾಜ್ಯಗಳಾಗಿ ವಿಭಾಗಗೊಂಡಿತು. ಪೂರ್ಣತೆಯನ್ನು ಸೂಚಿಸಲಿಕ್ಕಾಗಿ ಬೈಬಲು ಹತ್ತು ಎಂಬ ಸಂಖ್ಯೆಯನ್ನು ಉಪಯೋಗಿಸುತ್ತದೆ. ಆದುದರಿಂದ, ನಾಲ್ಕನೆಯ ಮೃಗದ “ಹತ್ತು ಕೊಂಬುಗಳು,” ರೋಮ್‌ನ ವಿಭಜನೆಯಿಂದ ಉಂಟಾದ ಎಲ್ಲ ರಾಜ್ಯಗಳನ್ನು ಪ್ರತಿನಿಧಿಸುತ್ತದೆ.​—⁠ಹೋಲಿಸಿರಿ ಧರ್ಮೋಪದೇಶಕಾಂಡ 4:13; ಲೂಕ 15:8; 19:​13, 16, 17.

18. ರೋಮನ್‌ ಸಾಮ್ರಾಜ್ಯದ ಕೊನೆಯ ಚಕ್ರವರ್ತಿಯನ್ನು ತೆಗೆದುಹಾಕಿದ ಬಳಿಕವೂ, ಅನೇಕ ಶತಮಾನಗಳ ವರೆಗೆ ರೋಮ್‌ ಯೂರೋಪಿನಾದ್ಯಂತ ಹೇಗೆ ಆಧಿಪತ್ಯವನ್ನು ನಡೆಸುವುದನ್ನು ಮುಂದುವರಿಸಿತು?

18 ಆದರೂ, ಸಾ.ಶ. 476ರಲ್ಲಿ ರೋಮ್‌ನ ಕೊನೆಯ ಚಕ್ರವರ್ತಿಯು ತೆಗೆದು​ಹಾಕಲ್ಪಟ್ಟಾಗ, ರೋಮನ್‌ ಲೋಕ ಶಕ್ತಿಯು ಕೊನೆಗೊಳ್ಳಲಿಲ್ಲ. ಅನೇಕ ಶತಮಾನಗಳ ವರೆಗೆ, ಪೋಪ್‌ನ ಅಧಿಕಾರದಲ್ಲಿದ್ದ ರೋಮ್‌, ಯೂರೋಪಿನಾದ್ಯಂತ ರಾಜಕೀಯ ಮತ್ತು ಧಾರ್ಮಿಕ ರೀತಿಯಲ್ಲಿ ಆಧಿಪತ್ಯವನ್ನು ನಡೆಸುವುದನ್ನು ಮುಂದುವರಿಸಿತು. ಊಳಿಗಮಾನ್ಯ ಪದ್ಧತಿಯ ಮೂಲಕ ರೋಮ್‌ ಆಧಿಪತ್ಯ ನಡೆಸಿತು. ಊಳಿಗಮಾನ್ಯ ಪದ್ಧತಿಯಲ್ಲಿ, ಯೂರೋಪಿನ ಅಧಿಕಾಂಶ ನಿವಾಸಿಗಳು ಮೊದಲಾಗಿ ಒಬ್ಬ ಶ್ರೀಮಂತನಿಗೆ, ತದನಂತರ ಅರಸನಿಗೆ ಅಧೀನರಾಗಬೇಕಿತ್ತು. ಮತ್ತು ಎಲ್ಲ ಅರಸರು ಪೋಪ್‌ನ ಅಧಿಕಾರವನ್ನು ಒಪ್ಪಿಕೊಳ್ಳುತ್ತಿದ್ದರು. ಹೀಗೆ, ಅಂಧಕಾರ ಯುಗವೆಂದು ಕರೆಯಲ್ಪಡುತ್ತಿದ್ದ ಇತಿಹಾಸದ ದೀರ್ಘ ಕಾಲಾವಧಿಯಲ್ಲೆಲ್ಲಾ, ಪೋಪ್‌ನ ಅಧಿಕಾರಕ್ಕೆ ಪ್ರಮುಖತೆ ನೀಡುತ್ತಿದ್ದ ಪವಿತ್ರ ರೋಮನ್‌ ಸಾಮ್ರಾಜ್ಯವು, ಲೋಕದ ಆಗುಹೋಗು​ಗಳನ್ನು ನೋಡಿಕೊಳ್ಳುತ್ತಿತ್ತು.

19. ಒಬ್ಬ ಇತಿಹಾಸಕಾರನಿಗನುಸಾರ, ಮುಂಚಿನ ಸಾಮ್ರಾಜ್ಯಗಳೊಂದಿಗೆ ಹೋಲಿಸುವಾಗ ರೋಮ್‌ ಸಾಮ್ರಾಜ್ಯವು ಹೇಗಿತ್ತು?

19 ನಾಲ್ಕನೆಯ ಮೃಗವು “ಮಿಕ್ಕ ರಾಜ್ಯಗಳಿಗಿಂತ ವಿಲಕ್ಷಣವಾಗಿ” ಕಂಡುಬಂತು ಎಂಬುದನ್ನು ಯಾರು ಅಲ್ಲಗಳೆಯಸಾಧ್ಯವಿದೆ? ಈ ವಿಷಯದಲ್ಲಿ ಇತಿಹಾಸಕಾರನಾದ ಏಚ್‌. ಜಿ. ವೆಲ್ಸ್‌ ಬರೆದುದು: “ಈ ಸುಸಂಸ್ಕೃತ ಲೋಕದಲ್ಲಿ ಇಲ್ಲಿಯ ವರೆಗೆ ಅಸ್ತಿತ್ವದಲ್ಲಿದ್ದ ದೊಡ್ಡ ದೊಡ್ಡ ಸಾಮ್ರಾಜ್ಯಗಳಿಗಿಂತಲೂ, ಈ ಹೊಸ ರೋಮನ್‌ ಶಕ್ತಿಯು . . . ಅನೇಕ ವಿಧಗಳಲ್ಲಿ ಭಿನ್ನವಾಗಿತ್ತು. . . . ಬಹುಮಟ್ಟಿಗೆ ಇಡೀ ಲೋಕದಲ್ಲಿದ್ದ ಗ್ರೀಕ್‌ ಜನರನ್ನು [ಅದು] ಒಟ್ಟುಗೂಡಿಸಿತು, ಮತ್ತು ಈ ಮುಂಚೆ ಇದ್ದ ಯಾವುದೇ ಸಾಮ್ರಾಜ್ಯ​ಕ್ಕಿಂತಲೂ ಈ ಸಾಮ್ರಾಜ್ಯದ ಜನಸಂಖ್ಯೆಯಲ್ಲಿ ಶೇಮ್‌ (ಸಿಮಿಟಿಕ್‌) ಹಾಗೂ ಹಾಮನ (ಹೆಮಟಿಕ್‌) ಸಂತಾನದವರು ತುಂಬ ಕಡಿಮೆಯಿದ್ದರು. . . . ಇಷ್ಟರ ತನಕ ಇತಿಹಾಸದಲ್ಲಿ ಇದೇ ಒಂದು ಹೊಸ ನಮೂನೆಯಾಗಿದೆ . . . ರೋಮನ್‌ ಸಾಮ್ರಾಜ್ಯದ ಬೆಳವಣಿಗೆಯು, ಅನಿರೀಕ್ಷಿತವಾದ ಅಪೂರ್ವ ಬೆಳವಣಿಗೆಯಾಗಿದೆ; ತಮಗೆ ಅರಿವಿಲ್ಲದೆಯೇ ರೋಮಿನ ಜನರು ಒಂದು ದೊಡ್ಡ ಆಡಳಿತ ಪ್ರಯೋಗದಲ್ಲಿ ಒಳಗೂಡಿದ್ದರು.” ಆದರೂ, ಈ ನಾಲ್ಕನೆಯ ಮೃಗವು ಇನ್ನೂ ಬೆಳೆಯಲಿಕ್ಕಿತ್ತು.

ಒಂದು ಚಿಕ್ಕ ಕೊಂಬು ಪ್ರಾಬಲ್ಯ ಹೊಂದುತ್ತದೆ

20. ನಾಲ್ಕನೆಯ ಮೃಗದ ತಲೆಯ ಮೇಲೆ ಮೊಳೆತ ಒಂದು ಚಿಕ್ಕ ಕೊಂಬಿನ ಬೆಳವಣಿಗೆಯ ಕುರಿತು ದೇವದೂತನು ಏನು ಹೇಳಿದನು?

20 “ನಾನು ಆ ಕೊಂಬುಗಳನ್ನು ಗಮನಿಸುತ್ತಿರುವಲ್ಲಿ ಇಗೋ, ಅವುಗಳ ನಡುವೆ ಇನ್ನೊಂದು ಚಿಕ್ಕ ಕೊಂಬು ಮೊಳೆಯಿತು; ಅದರ ದೆಸೆಯಿಂದ ಮುಂಚಿನ ಕೊಂಬುಗಳಲ್ಲಿ ಮೂರು ಬೇರು ಸಹಿತ ಕೀಳಲ್ಪಟ್ಟವು; ಆಹಾ, ಈ ಕೊಂಬಿನಲ್ಲಿ ಮನುಷ್ಯನ ಕಣ್ಣುಗಳಂತಿರುವ ಕಣ್ಣುಗಳೂ ಬಡಾಯಿಕೊಚ್ಚಿಕೊಳ್ಳುವ ಬಾಯೂ ಇದ್ದವು” ಎಂದು ದಾನಿಯೇಲನು ಹೇಳಿದನು. (ದಾನಿಯೇಲ 7:⁠8) ಅದರ ಬೆಳವಣಿಗೆಯ ಕುರಿತು ದೇವದೂತನು ದಾನಿಯೇಲನಿಗೆ ಹೇಳಿದ್ದು: “ಅವರ [ಹತ್ತು ಮಂದಿ ಅರಸರ] ತರುವಾಯ ಮತ್ತೊಬ್ಬನು ತಲೆದೋರುವನು; ಅವನು ಮುಂಚಿನ ಅರಸರಿಗಿಂತ ವಿಲಕ್ಷಣನಾಗಿ ಮೂವರು ಅರಸರನ್ನು ಅದಮಿಬಿಡುವನು [“ಅವಮಾನಿಸುವನು,” NW].” (ದಾನಿಯೇಲ 7:24) ಈ ಅರಸನು ಯಾರು, ಅವನು ಯಾವಾಗ ಅಧಿಕಾರಕ್ಕೆ ಬಂದನು, ಮತ್ತು ಯಾವ ಮೂವರು ಅರಸರನ್ನು ಅವನು ಅವಮಾನಿಸಿದನು?

21. ಬ್ರಿಟನ್‌ ಹೇಗೆ ನಾಲ್ಕನೆಯ ಮೃಗದ ಸಾಂಕೇತಿಕ ಚಿಕ್ಕ ಕೊಂಬಾಗಿ ಪರಿಣಮಿಸಿತು?

21 ಈ ಕೆಳಗಿನ ವಿಕಸನಗಳನ್ನು ಪರಿಗಣಿಸಿರಿ. ಸಾ.ಶ.ಪೂ. 55ರಲ್ಲಿ, ರೋಮನ್‌ ಸೇನಾಧಿಪತಿಯಾದ ಜೂಲಿಯಸ್‌ ಸೀಸರನು ಬ್ರಿಟ್ಯಾನಿಯದ ಮೇಲೆ ದಾಳಿಮಾಡಿದನು. ಆದರೆ ಒಂದು ಕಾಯಂ ನೆಲಸುನಾಡನ್ನು ಸ್ಥಾಪಿಸುವುದರಲ್ಲಿ ಅವನು ಅಸಫಲನಾದನು. ಸಾ.ಶ. 43ರಲ್ಲಿ ಚಕ್ರವರ್ತಿಯಾದ ಕ್ಲಾಡಿಯಸನು, ದಕ್ಷಿಣ ಬ್ರಿಟನ್‌ನ ಮೇಲೆ ಹೆಚ್ಚು ಸ್ಥಿರವಾದ ಜಯವನ್ನು ಪಡೆಯಲು ಪ್ರಯತ್ನಿಸಿದನು. ತದನಂತರ, ಸಾ.ಶ. 122ರಲ್ಲಿ ಹೇಡ್ರಿಯನ್‌ ಚಕ್ರವರ್ತಿಯು, ಟೈನ್‌ ನದಿಯಿಂದ ಸಾಲ್‌ವೇ ಫರ್ಥ್‌ ತನಕ ಒಂದು ಗೋಡೆಯನ್ನು ಕಟ್ಟಿಸಲು ಆರಂಭಿಸಿದನು; ಇದು ರೋಮನ್‌ ಸಾಮ್ರಾಜ್ಯದ ಉತ್ತರ ಗಡಿಯ ಗುರುತಾಗಿತ್ತು. ಐದನೆಯ ಶತಮಾನದ ಆರಂಭದಲ್ಲಿ, ರೋಮನ್‌ ಸೈನ್ಯಗಳು ಬ್ರಿಟಿಷ್‌ ದ್ವೀಪವನ್ನು ಬಿಟ್ಟುಹೋದವು. ಒಬ್ಬ ಇತಿಹಾಸಕಾರನು ವಿವರಿಸಿದ್ದೇನೆಂದರೆ, “ಹದಿನಾರನೆಯ ಶತಮಾನದಲ್ಲಿ, ಇಂಗ್ಲೆಂಡ್‌ ಮಧ್ಯಮ ತರದ ಅಧಿಕಾರವಿದ್ದ ಒಂದು ದೇಶವಾಗಿತ್ತು. ನೆದರ್ಲೆಂಡ್ಸ್‌ನ ಐಶ್ವರ್ಯಕ್ಕೆ ಹೋಲಿಸುವಾಗ, ಇಂಗ್ಲೆಂಡ್‌ನ ಐಶ್ವರ್ಯವು ತುಂಬ ಅಲ್ಪವಾಗಿತ್ತು. ಇದರ ಜನಸಂಖ್ಯೆಯು ಫ್ರಾನ್ಸಿನ ಜನಸಂಖ್ಯೆಗಿಂತ ಬಹಳಷ್ಟು ಕಡಿಮೆಯಾಗಿತ್ತು. ಇದರ ಸೇನಾದಳವು (ನೌಕಾತಂಡವನ್ನೂ ಸೇರಿಸಿ) ಸ್ಪೆಯ್ನ್‌ನ ಸೇನಾ​ದಳಕ್ಕಿಂತಲೂ ಕಡಿಮೆಯಾಗಿತ್ತು.” ನಾಲ್ಕನೆಯ ಮೃಗದ ಸಾಂಕೇತಿಕ ಚಿಕ್ಕ ಕೊಂಬನ್ನು ಸೂಚಿಸುತ್ತಾ, ಆಗ ಬ್ರಿಟನ್‌ ಒಂದು ಅಮುಖ್ಯ ರಾಜ್ಯವಾಗಿತ್ತು ಎಂಬುದು ಸುವ್ಯಕ್ತ. ಆದರೂ, ಅದು ಬಹಳಷ್ಟು ಬದಲಾಗಲಿತ್ತು.

22. (ಎ) “ಚಿಕ್ಕ” ಕೊಂಬು, ನಾಲ್ಕನೆಯ ಮೃಗದ ಇನ್ನಿತರ ಯಾವ ಮೂರು ಕೊಂಬುಗಳನ್ನು ಸೋಲಿಸಿಬಿಟ್ಟಿತು? (ಬಿ) ತದನಂತರ ಬ್ರಿಟನ್‌ ಏನಾಗಿ ಪರಿಣಮಿಸಿತು?

22 ಸ್ಪೆಯ್ನ್‌ನ IIನೆಯ ಫಿಲಿಪ್ಪನು, 1588ರಲ್ಲಿ ಬ್ರಿಟನಿನ ವಿರುದ್ಧ ಸ್ಪೆಯ್ನ್‌ನ ನೌಕಾ​ದಳವನ್ನು ಕಳುಹಿಸಿದನು. 130 ಹಡಗುಗಳ ಈ ತಂಡದಲ್ಲಿ, 24,000ಕ್ಕಿಂತಲೂ ಹೆಚ್ಚು ಮಂದಿ ಸೈನಿಕರಿದ್ದು, ಅವರು ಇಂಗ್ಲಿಷ್‌ ಕಡಲ್ಗಾಲುವೆಯ ಮೂಲಕ ಸಮುದ್ರಯಾನ ಮಾಡಿದರು. ಆದರೆ ಅವರು ಬ್ರಿಟಿಷ್‌ ನೌಕಾತಂಡದಿಂದ ಸೋಲನ್ನು ಅನುಭವಿಸಿ, ಪ್ರತಿಕೂಲ ಗಾಳಿ ಹಾಗೂ ಅಟ್ಲಾಂಟಿಕ್‌ನ ಭೀಕರ ಬಿರುಗಾಳಿಗೆ ಆಹುತಿಯಾದರು. ಈ ಘಟನೆಯಿಂದಾಗಿ “ಇಷ್ಟರ ತನಕ ಸ್ಪೆಯ್ನ್‌ಗೆ ದೊರಕುತ್ತಿದ್ದ ನೌಕಾದಳದ ಹಿರಿಮೆಯನ್ನು ಈಗ ಇಂಗ್ಲೆಂಡ್‌ಗೆ ದಾಟಿಸುವ ನಿರ್ಣಾಯಕ ಸಮಯವು ಬಂದಿತ್ತು” ಎಂದು ಇತಿಹಾಸಕಾರನೊಬ್ಬನು ಹೇಳಿದನು. 17ನೆಯ ಶತಮಾನದಲ್ಲಿ, ಡಚ್ಚರು ಲೋಕದ ಅತಿ ದೊಡ್ಡ ವ್ಯಾಪಾರಿ ಹಡಗುಗಳನ್ನು ವಿಕಸಿಸಿದರು. ಆದರೂ, ಸಮುದ್ರದಾಚೆಯ ತನ್ನ ನೆಲಸುನಾಡುಗಳ ವೃದ್ಧಿಯಿಂದಾಗಿ, ಆ ರಾಜ್ಯದ ಮೇಲೂ ಬ್ರಿಟನ್‌ ಮೇಲುಗೈ ಪಡೆಯಿತು. 18ನೆಯ ಶತಮಾನದಲ್ಲಿ, ಬ್ರಿಟಿಷರು ಹಾಗೂ ಫ್ರೆಂಚರು ಉತ್ತರ ಅಮೆರಿಕದಲ್ಲಿ ಮತ್ತು ಭಾರತದಲ್ಲಿ ಪರಸ್ಪರ ಕಾದಾಡಿದರು; ಇದು 1763ರಲ್ಲಿ ಪ್ಯಾರಿಸ್‌ ಒಪ್ಪಂದಕ್ಕೆ ನಡಿಸಿತು. ಲೇಖಕ ವಿಲಿಯಮ್‌ ಬಿ. ವಿಲ್‌ಕಾಕ್ಸ್‌ ಹೇಳಿದ್ದೇನೆಂದರೆ, ಈ ಒಪ್ಪಂದವು, “ಯೂರೋಪ್‌ನಲ್ಲಿ ಮಾತ್ರವಲ್ಲ, ಇಡೀ ಲೋಕದಲ್ಲೇ ಅತ್ಯಧಿಕ ಪ್ರಭಾವವುಳ್ಳ ಯೂರೋಪಿಯನ್‌ ಅಧಿಕಾರದೋಪಾದಿ ಬ್ರಿಟನ್‌ನ ಹೊಸ ಸ್ಥಾನವನ್ನು ಒಪ್ಪಿಕೊಂಡಿತು.” ಸಾ.ಶ. 1815ರಲ್ಲಿ ಫ್ರಾನ್ಸ್‌ನ ನೆಪೋಲಿಯನ್‌ನ ವಿರುದ್ಧ ಬ್ರಿಟನ್‌ ಸಂಪೂರ್ಣ ವಿಜಯವನ್ನು ಗಳಿಸಿದಾಗ, ಅದರ ಪರಮಾಧಿಪತ್ಯವು ಸ್ಥಿರವಾಯಿತು. ಹೀಗೆ, ಬ್ರಿಟನ್‌ನಿಂದ ‘ಅವಮಾನಕ್ಕೊಳಗಾದ’ “ಮೂವರು ಅರಸರು” ಯಾರೆಂದರೆ, ಸ್ಪೆಯ್ನ್‌, ನೆದರ್ಲೆಂಡ್ಸ್‌, ಮತ್ತು ಫ್ರಾನ್ಸ್‌. (ದಾನಿಯೇಲ 7:24) ಇದರ ಫಲಿತಾಂಶವಾಗಿ, ಬ್ರಿಟನ್‌ ಲೋಕದ ಅತಿ ದೊಡ್ಡ ವಸಾಹತು ಹಾಗೂ ವಾಣಿಜ್ಯ ಶಕ್ತಿಯಾಗಿ ಪರಿಣಮಿಸಿತು. ಹೌದು, ಆ “ಚಿಕ್ಕ” ಕೊಂಬು, ಒಂದು ಲೋಕ ಶಕ್ತಿಯಾಗುವಷ್ಟು ದೊಡ್ಡದಾಗಿ ಬೆಳೆಯಿತು!

23. ಯಾವ ರೀತಿಯಲ್ಲಿ ಸಾಂಕೇತಿಕ ಚಿಕ್ಕ ಕೊಂಬು “ಲೋಕವನ್ನೆಲ್ಲಾ ನುಂಗಿ”ಬಿಟ್ಟಿತು?

23 ನಾಲ್ಕನೆಯ ಮೃಗವು, ಅಥವಾ ನಾಲ್ಕನೆಯ ರಾಜ್ಯವು, “ಲೋಕವನ್ನೆಲ್ಲಾ ನುಂಗಿ”ಬಿಡುತ್ತದೆ ಎಂದು ದೇವದೂತನು ದಾನಿಯೇಲನಿಗೆ ಹೇಳಿದನು. (ದಾನಿಯೇಲ 7:23) ಒಂದು ಕಾಲದಲ್ಲಿ ಬ್ರಿಟ್ಯಾನಿಯ ಎಂದು ಪ್ರಸಿದ್ಧವಾಗಿದ್ದ ರೋಮನ್‌ ಪ್ರಾಂತದ ವಿಷಯದಲ್ಲಿ ಇದು ಸತ್ಯವಾಗಿ ಕಂಡುಬಂತು. ಕಾಲಕ್ರಮೇಣ ಇದು ಬ್ರಿಟಿಷ್‌ ಸಾಮ್ರಾಜ್ಯವಾಗಿ ಪರಿಣಮಿಸಿತು ಮತ್ತು “ಲೋಕವನ್ನೆಲ್ಲಾ ನುಂಗಿ”ಬಿಟ್ಟಿತು. ಒಂದು ಸಮಯದಲ್ಲಿ, ಈ ಸಾಮ್ರಾಜ್ಯವು ಭೂಪ್ರದೇಶದ ನಾಲ್ಕನೇ ಒಂದು ಭಾಗವನ್ನೂ ಅದರ ಜನಸಂಖ್ಯೆಯ ನಾಲ್ಕನೇ ಒಂದು ಭಾಗವನ್ನೂ ಆವರಿಸಿತ್ತು.

24. ಬ್ರಿಟಿಷ್‌ ಸಾಮ್ರಾಜ್ಯವು ವಿಲಕ್ಷಣವಾಗಿರುವುದರ ಕುರಿತು ಒಬ್ಬ ಇತಿಹಾಸಕಾರನು ಏನು ಹೇಳಿದನು?

24 ಹಿಂದಿನ ಲೋಕ ಶಕ್ತಿಗಳಿಗಿಂತ ರೋಮನ್‌ ಸಾಮ್ರಾಜ್ಯವು ವಿಲಕ್ಷಣವಾಗಿದ್ದಂತೆಯೇ, “ಚಿಕ್ಕ” ಕೊಂಬಿನಿಂದ ಚಿತ್ರಿಸಲ್ಪಟ್ಟ ಅರಸನು ಸಹ “ಮುಂಚಿನ ಅರಸರಿಗಿಂತ ವಿಲಕ್ಷಣನಾಗಿ”ರಲಿದ್ದನು. (ದಾನಿಯೇಲ 7:24) ಬ್ರಿಟಿಷ್‌ ಸಾಮ್ರಾಜ್ಯದ ಕುರಿತು, ಏಚ್‌. ಜಿ. ವೆಲ್ಸ್‌ ಎಂಬ ಇತಿಹಾಸಕಾರನು ದಾಖಲಿಸಿದ್ದು: “ಇಂತಹ ಒಂದು ಸಾಮ್ರಾಜ್ಯವು ಈ ಮುಂಚೆ ಎಂದೂ ಅಸ್ತಿತ್ವದಲ್ಲಿರಲಿಲ್ಲ. ಸಂಯುಕ್ತ ಬ್ರಿಟಿಷ್‌ ರಾಜ್ಯಗಳ ‘ರಾಜಾಧಿಕಾರವಿದ್ದಂತಹ ಪ್ರಜಾಧಿಪತ್ಯ’ವೇ ಇಡೀ ವ್ಯವಸ್ಥೆಗೆ ಪ್ರಮುಖವೂ ಕೇಂದ್ರವೂ ಆಗಿತ್ತು . . . ಇಡೀ ಬ್ರಿಟಿಷ್‌ ಸಾಮ್ರಾಜ್ಯದಲ್ಲಿ ಏನು ಒಳಗೂಡಿತ್ತು ಎಂಬುದರ ಸಂಪೂರ್ಣ ಚಿತ್ರಣವನ್ನು ಯಾವುದೇ ಆಡಳಿತ ವರ್ಗವಾಗಲಿ ಅಥವಾ ಯಾವುದೇ ವ್ಯಕ್ತಿಯಾಗಲಿ ಪಡೆದುಕೊಂಡಿರಲಿಲ್ಲ. ಇಷ್ಟರ ತನಕ ಸಾಮ್ರಾಜ್ಯ ಎಂದು ಕರೆಯಲ್ಪಟ್ಟಿರು​ವಂತಹ ಯಾವುದೇ ಸಾಮ್ರಾಜ್ಯಕ್ಕಿಂತಲೂ ಇದು ಸಂಪೂರ್ಣವಾಗಿ ಭಿನ್ನವಾಗಿದ್ದು, ಬೆಳವಣಿಗೆಗಳ ಹಾಗೂ ಒಟ್ಟುಗೂಡಿಸುವಿಕೆಗಳ ಮಿಶ್ರಣವಾಗಿತ್ತು.”

25. (ಎ) ಇತ್ತೀಚಿನ ವಿಕಸನಕ್ಕನುಸಾರ, ಸಾಂಕೇತಿಕ ಚಿಕ್ಕ ಕೊಂಬಿನಲ್ಲಿ ಯಾವುದು ಒಳ​ಗೂಡಿದೆ? (ಬಿ) ಯಾವ ಅರ್ಥದಲ್ಲಿ “ಚಿಕ್ಕ” ಕೊಂಬಿಗೆ “ಮನುಷ್ಯನ ಕಣ್ಣುಗಳಂತಿರುವ ಕಣ್ಣುಗಳೂ ಬಡಾಯಿ ಕೊಚ್ಚಿಕೊಳ್ಳುವ ಬಾಯೂ” ಇದೆ?

25 “ಚಿಕ್ಕ” ಕೊಂಬು ಅಂದರೆ ಬ್ರಿಟಿಷ್‌ ಸಾಮ್ರಾಜ್ಯ ಮಾತ್ರವಾಗಿರಲಿಲ್ಲ. 1783ರಲ್ಲಿ, ಅದರ 13 ಅಮೆರಿಕನ್‌ ನೆಲಸುನಾಡುಗಳ ಸ್ವಾತಂತ್ರ್ಯವನ್ನು ಬ್ರಿಟನ್‌ ಅಂಗೀಕರಿಸಿತು. ಕಾಲಕ್ರಮೇಣ, IIನೆಯ ಲೋಕ ಯುದ್ಧದ ಬಳಿಕ ಭೂಮಿಯ ಮೇಲೆ ಆಳ್ವಿಕೆ ನಡಿಸುವ ಪ್ರಬಲ ಆಧಿಪತ್ಯವಾಗಿ ಪರಿಣಮಿಸಿದ ಅಮೆರಿಕವು, ಬ್ರಿಟನ್‌ನೊಂದಿಗೆ ಮೈತ್ರಿ ಸಂಬಂಧವನ್ನು ಬೆಳೆಸಿತು. ಇದುವರೆಗೂ ಅದು ಬ್ರಿಟನ್‌ನೊಂದಿಗೆ ಬಲವಾದ ಸಂಬಂಧವನ್ನು ಹೊಂದಿದೆ. ಇದರ ಫಲಿತಾಂಶವಾಗಿ ಬಂದ ಆ್ಯಂಗ್ಲೊ-ಅಮೆರಿಕನ್‌ ಉಭಯ ಲೋಕ ಶಕ್ತಿಯೇ, ‘ಕಣ್ಣುಗಳಿದ್ದ ಕೊಂಬಿಗೆ’ ಸೂಚಿತವಾಗಿದೆ. ನಿಜವಾಗಿಯೂ ಈ ಲೋಕ ಶಕ್ತಿಯು ತುಂಬ ಹುಷಾರಾಗಿದೆ, ಚುರುಕಾಗಿದೆ! ಅದು ಲೋಕದ ಹೆಚ್ಚಿನ ಭಾಗಕ್ಕೆ ಕಾರ್ಯನೀತಿಯನ್ನು ವಿಧಿಸುತ್ತಾ ‘ಬಡಾಯಿ ಕೊಚ್ಚಿಕೊಳ್ಳುತ್ತದೆ’ ಮತ್ತು ಲೋಕದ ಪ್ರತಿನಿಧಿಯೋಪಾದಿ ಅಥವಾ “ಸುಳ್ಳು ಪ್ರವಾದಿ”ಯೋಪಾದಿ ಕಾರ್ಯನಡಿಸುತ್ತದೆ.​—⁠ದಾನಿಯೇಲ 7:​8, 11, 20; ಪ್ರಕಟನೆ 16:13; 19:⁠20.

ಚಿಕ್ಕ ಕೊಂಬು ದೇವರನ್ನು ಹಾಗೂ ಆತನ ಪವಿತ್ರ ಜನರನ್ನು ವಿರೋಧಿಸುತ್ತದೆ

26. ಯೆಹೋವನ ಕಡೆಗೆ ಹಾಗೂ ಆತನ ಸೇವಕರ ಕಡೆಗೆ ಸಾಂಕೇತಿಕ ಕೊಂಬಿನ ನಡೆನುಡಿಯ ಕುರಿತು ದೇವದೂತನು ಏನನ್ನು ಮುಂತಿಳಿಸಿದನು?

26 “ಆ ಕೊಂಬು ಪವಿತ್ರ ಜನರ ಮೇಲೆ ಯುದ್ಧಕ್ಕೆ ಹೋದುದನ್ನು ನಾನು ನೋಡಿದೆ, ಮತ್ತು ಅದು ಅವರ ವಿರುದ್ಧ ಜಯಶಾಲಿಯಾಗುತ್ತಾ ಇತ್ತು” ಎಂದು ಹೇಳುತ್ತಾ ದಾನಿಯೇಲನು ತನ್ನ ದರ್ಶನವನ್ನು ವಿವರಿಸುವುದನ್ನು ಮುಂದುವರಿಸಿದನು. (ದಾನಿಯೇಲ ​7:21, NW) ಈ “ಕೊಂಬಿನ” ಕುರಿತು ಅಥವಾ ಅರಸನ ಕುರಿತು ದೇವದೂತನು ಮುಂತಿಳಿಸಿದ್ದು: “ಪರಾತ್ಪರನಿಗೆ ವಿರುದ್ಧವಾಗಿ ಕೊಚ್ಚಿಕೊಂಡು ಪರಾತ್ಪರನ ಭಕ್ತರನ್ನು [“ಪವಿತ್ರ ಜನರನ್ನು,” NW] ಸವೆಯಿಸಿ ಕಟ್ಟಳೆಯ ಕಾಲಗಳನ್ನೂ ಧರ್ಮವಿಧಿಗಳನ್ನೂ ಮಾರ್ಪಡಿಸಲು ಮನಸ್ಸುಮಾಡುವನು; ಆ ಭಕ್ತರು ಒಂದುಕಾಲ ಎರಡುಕಾಲ ಅರ್ಧಕಾಲ ಅವನ ಕೈವಶವಾಗಿರುವರು.” (ದಾನಿಯೇಲ 7:25) ಪ್ರವಾದನೆಯ ಈ ಭಾಗವು, ಹೇಗೆ ಮತ್ತು ಯಾವಾಗ ನೆರವೇರಿತು?

27. (ಎ) “ಚಿಕ್ಕ” ಕೊಂಬಿನಿಂದ ಹಿಂಸೆಗೊಳಗಾದ “ಪವಿತ್ರ ಜನರು” ಯಾರಾಗಿದ್ದಾರೆ? (ಬಿ) ಸಾಂಕೇತಿಕ ಕೊಂಬು, “ಕಾಲಗಳನ್ನೂ ಧರ್ಮವಿಧಿಗಳನ್ನೂ ಮಾರ್ಪಡಿಸಲು” ಆರಂಭಿಸಿದ್ದು ಹೇಗೆ?

27 “ಚಿಕ್ಕ” ಕೊಂಬಿನಿಂದ​—⁠ಆ್ಯಂಗ್ಲೊ-ಅಮೆರಿಕನ್‌ ಲೋಕ ಶಕ್ತಿಯಿಂದ​—⁠ಹಿಂಸೆಗೊಳಗಾದ “ಪವಿತ್ರ ಜನರು,” ಭೂಮಿಯ ಮೇಲಿರುವ ಯೇಸುವಿನ ಆತ್ಮಾಭಿಷಿಕ್ತ ಹಿಂಬಾಲಕರಾಗಿದ್ದಾರೆ. (ರೋಮಾಪುರ 1:7; 1 ಪೇತ್ರ 2:⁠9) Iನೆಯ ಲೋಕ ಯುದ್ಧವು ಸಂಭವಿಸುವ ಅನೇಕ ವರ್ಷಗಳಿಗೆ ಮುಂಚೆ, ಈ ಅಭಿಷಿಕ್ತರಲ್ಲಿ ಉಳಿಕೆಯವರು, “ಅನ್ಯದೇಶದವರ ಸಮಯಗಳು” 1914ನೆಯ ವರ್ಷದಲ್ಲಿ ಕೊನೆಗೊಳ್ಳುವವು ಎಂದು ಸಾರ್ವಜನಿಕವಾಗಿ ಎಚ್ಚರಿಸಿದ್ದರು. (ಲೂಕ 21:24) ಆ ವರ್ಷದಲ್ಲಿ ಯುದ್ಧವು ಆರಂಭವಾದಾಗ, “ಚಿಕ್ಕ” ಕೊಂಬು ಈ ಎಚ್ಚರಿಕೆಯನ್ನು ಅಲಕ್ಷಿಸಿತ್ತು ಎಂಬುದು ಸುಸ್ಪಷ್ಟವಾಗಿತ್ತು. ಏಕೆಂದರೆ ಅಭಿಷಿಕ್ತರಾದ “ಪವಿತ್ರ ಜನರಿಗೆ” ಕಿರುಕುಳ ಕೊಡುವುದನ್ನು ಅದು ಪಟ್ಟುಹಿಡಿದು ಮುಂದುವರಿಸಿತು. ತನ್ನ ಸಾಕ್ಷಿಗಳು ರಾಜ್ಯದ ಸುವಾರ್ತೆಯನ್ನು ಲೋಕವ್ಯಾಪಕವಾಗಿ ಸಾರಬೇಕೆಂಬ ಯೆಹೋವನ ಆವಶ್ಯಕತೆಯನ್ನು (ಅಥವಾ, “ನಿಯಮ”ವನ್ನು) ಪೂರೈಸುತ್ತಿದ್ದ ಯೆಹೋವನ ಸಾಕ್ಷಿಗಳ ಪ್ರಯತ್ನವನ್ನು ಆ್ಯಂಗ್ಲೊ-ಅಮೆರಿಕನ್‌ ಲೋಕ ಶಕ್ತಿಯು ವಿರೋಧಿಸಿತು. (ಮತ್ತಾಯ 24:14) ಹೀಗೆ, “ಚಿಕ್ಕ” ಕೊಂಬು, “ಕಾಲಗಳನ್ನೂ ಧರ್ಮವಿಧಿ​ಗಳನ್ನೂ ಮಾರ್ಪಡಿಸಲು” ಪ್ರಯತ್ನಿಸಿತು.

28. “ಒಂದುಕಾಲ ಎರಡುಕಾಲ ಅರ್ಧಕಾಲ”ಗಳು ಎಷ್ಟು ದೀರ್ಘವಾದದ್ದಾಗಿವೆ?

28 “ಒಂದುಕಾಲ ಎರಡುಕಾಲ ಅರ್ಧಕಾಲ” ಎಂಬ ಒಂದು ಪ್ರವಾದನಾತ್ಮಕ ಕಾಲಾವಧಿಯನ್ನು ಯೆಹೋವನ ದೂತನು ಸೂಚಿಸಿದನು. ಇದು ಎಷ್ಟು ದೀರ್ಘವಾದದ್ದಾಗಿದೆ? ಈ ಅಭಿವ್ಯಕ್ತಿಯು, ಒಂದುಕಾಲ, ಎರಡುಕಾಲ, ಮತ್ತು ಅರ್ಧಕಾಲದ ಒಟ್ಟು ಮೊತ್ತವಾಗಿರುವ ಮೂರೂವರೆ ಕಾಲಗಳನ್ನು ಸೂಚಿಸುತ್ತದೆ ಎಂದು ಬೈಬಲ್‌ ವಿಮರ್ಶಕರು ಸಾಮಾನ್ಯವಾಗಿ ಒಪ್ಪುತ್ತಾರೆ. ನೆಬೂಕದ್ನೆಚ್ಚರನ ಉನ್ಮಾದ ಸ್ಥಿತಿಯ “ಏಳು ಕಾಲಗಳು” ಏಳು ವರ್ಷಗಳಿಗೆ ಸಮಾನವಾಗಿದ್ದರಿಂದ, ಮೂರೂವರೆ ಕಾಲಗಳು ಮೂರೂವರೆ ವರ್ಷಗಳಾಗಿವೆ. * (ದಾನಿಯೇಲ 4:​16, 25) ಆ್ಯನ್‌ ಅಮೆರಿಕನ್‌ ಟ್ರಾನ್ಸ್‌ಲೇಷನ್‌ ಹೀಗೆ ಹೇಳುತ್ತದೆ: “ಅವರು ಒಂದು ವರ್ಷ, ಎರಡು ವರ್ಷ, ಮತ್ತು ಅರ್ಧ ವರ್ಷದ ವರೆಗೆ ಅವನ ವಶಕ್ಕೆ ಒಪ್ಪಿಸಲ್ಪಡುವರು.” “ಮೂರೂವರೆ ವರ್ಷಗಳ ವರೆಗೆ” ಎಂದು ಜೇಮ್ಸ್‌ ಮಾಫಟ್‌ರ ಭಾಷಾಂತರವು ಹೇಳುತ್ತದೆ. ಪ್ರಕಟನೆ 11:​2-7ರಲ್ಲಿಯೂ ಇದೇ ಕಾಲಾವಧಿಯ ಬಗ್ಗೆ ತಿಳಿಸಲಾಗಿದೆ. ದೇವರ ಸಾಕ್ಷಿಗಳು ಗೋಣೀತಟ್ಟುಗಳನ್ನು ಹೊದ್ದುಕೊಂಡು 42 ತಿಂಗಳುಗಳು ಅಥವಾ 1,260 ದಿನಗಳ ವರೆಗೆ ಸಾರುವರು, ಮತ್ತು ತದನಂತರ ಕೊಲ್ಲಲ್ಪಡುವರು ಎಂದು ಅಲ್ಲಿ ಹೇಳಲಾಗಿದೆ. ಈ ಕಾಲಾವಧಿಯು ಯಾವಾಗ ಆರಂಭವಾಯಿತು ಮತ್ತು ಯಾವಾಗ ಕೊನೆಗೊಂಡಿತು?

29. ಪ್ರವಾದನಾತ್ಮಕವಾದ ಮೂರೂವರೆ ವರ್ಷಗಳು ಯಾವಾಗ ಮತ್ತು ಹೇಗೆ ಆರಂಭ​ಗೊಂಡವು?

29 ಅಭಿಷಿಕ್ತ ಕ್ರೈಸ್ತರಿಗಾದರೋ, Iನೆಯ ಲೋಕ ಯುದ್ಧವು ಪರೀಕ್ಷಾ ಕಾಲವಾಗಿ ಕಂಡುಬಂತು. 1914ರ ಅಂತ್ಯದಷ್ಟಕ್ಕೆ, ಅವರು ಹಿಂಸೆಯನ್ನು ನಿರೀಕ್ಷಿಸುತ್ತಿದ್ದರು. ವಾಸ್ತವದಲ್ಲಿ, “ನಾನು ಕುಡಿಯಬೇಕಾಗಿರುವ ಪಾತ್ರೆಯಲ್ಲಿ ನೀವು ಕುಡಿಯುವದು ನಿಮ್ಮಿಂದಾದೀತೇ?” ಎಂದು ಯೇಸು ತನ್ನ ಶಿಷ್ಯರಿಗೆ ಕೇಳಿದ ಪ್ರಶ್ನೆಯೇ, 1915ನೆಯ ವರ್ಷಕ್ಕಾಗಿ ಆಯ್ಕೆಯಾದ ವಾರ್ಷಿಕ ವಚನವಾಗಿತ್ತು. ಇದು ಮತ್ತಾಯ 20:22ನೆಯ ವಚನದ ಮೇಲಾಧಾರಿತವಾಗಿತ್ತು. ಆದುದರಿಂದ, 1914ರ ಡಿಸೆಂಬರ್‌ ತಿಂಗಳಿನಿಂದ ಆರಂಭಿಸಿ, ಸಾಕ್ಷಿಗಳ ಆ ಚಿಕ್ಕ ಗುಂಪು “ಗೋಣೀ ತಟ್ಟುಗಳನ್ನು ಹೊದ್ದುಕೊಂಡು” ಸಾರಿತು.

30. ಒಂದನೆಯ ಲೋಕ ಯುದ್ಧದ ಸಮಯದಲ್ಲಿ, ಆ್ಯಂಗ್ಲೊ-ಅಮೆರಿಕನ್‌ ಲೋಕ ಶಕ್ತಿಯು ಅಭಿಷಿಕ್ತ ಕ್ರೈಸ್ತರಿಗೆ ಹೇಗೆ ಕಿರುಕುಳ ಕೊಟ್ಟಿತು?

30 ಯುದ್ಧ ತಾಪವು ಏರಿದಂತೆ, ಅಭಿಷಿಕ್ತ ಕ್ರೈಸ್ತರು ತೀವ್ರವಾದ ವಿರೋಧವನ್ನು ಎದುರಿಸಿದರು. ಅವರಲ್ಲಿ ಕೆಲವರನ್ನು ಬಂಧಿಸಲಾಯಿತು. ಇಂಗ್ಲೆಂಡ್‌ನ ಫ್ರ್ಯಾಂಕ್‌ ಪ್ಲಾಟ್‌ ಹಾಗೂ ಕೆನಡದ ರಾಬರ್ಟ್‌ ಕ್ಲೆಗ್‌ರಂತಹ ವ್ಯಕ್ತಿಗಳನ್ನು, ಕ್ರೂರ ಅಧಿಕಾರಿಗಳು ಚಿತ್ರಹಿಂಸೆಗೆ ಒಳಪಡಿಸಿದರು. ದ ಫಿನಿಷ್ಡ್‌ ಮಿಸ್ಟ್‌ರಿ ಎಂಬ ಶಿರೋನಾಮವುಳ್ಳ ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ನ ಏಳನೆಯ ಸಂಪುಟವನ್ನು ಹಾಗೂ ದ ಬೈಬಲ್‌ ಸ್ಟೂಡೆಂಟ್ಸ್‌ ಮಂತ್ಲಿ ಎಂಬ ಮೇಲ್ಬರಹವುಳ್ಳ ಟ್ರ್ಯಾಕ್ಟ್‌ಗಳನ್ನು, ಕೆನಡದ ಬ್ರಿಟಿಷ್‌ ಆಧಿಪತ್ಯವು 1918ರ ಫೆಬ್ರವರಿ 12ರಂದು ನಿಷೇಧಿಸಿತು. ಮುಂದಿನ ​ತಿಂಗಳಿನಲ್ಲಿ, ಏಳನೆಯ ​ಸಂಪುಟವನ್ನು ​ವಿತರಿಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಅಮೆರಿಕದ ನ್ಯಾಯಾಂಗ ​ಇಲಾಖೆಯು ಘೋಷಿಸಿತು. ಫಲಿತಾಂಶವೇನು? ಮನೆಗಳು ತಲಾಷುಮಾಡಲ್ಪಟ್ಟವು, ಸಾಹಿತ್ಯವು ವಶಪಡಿಸಿಕೊಳ್ಳಲ್ಪಟ್ಟಿತು, ಮತ್ತು ಯೆಹೋವನ ಆರಾಧಕರು ಬಂಧಿಸಲ್ಪಟ್ಟರು!

31. “ಒಂದುಕಾಲ ಎರಡುಕಾಲ ಅರ್ಧಕಾಲ”ಗಳು ಯಾವಾಗ ಮತ್ತು ಹೇಗೆ ಅಂತ್ಯಗೊಂಡವು?

31 ಜೂನ್‌ 21, 1918ರಲ್ಲಿ, ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ಅಧ್ಯಕ್ಷರಾದ ಜೆ. ಎಫ್‌. ರದರ್‌ಫರ್ಡ್‌ ಮತ್ತು ಇನ್ನಿತರ ಪ್ರಮುಖ ಸದಸ್ಯರನ್ನು, ಸುಳ್ಳು ಆರೋಪಗಳ ಆಧಾರದ ಮೇಲೆ ಸೆರೆಯಲ್ಲಿ ಹಾಕಿದಾಗ, ದೇವರ ಅಭಿಷಿಕ್ತರ ಕಿರುಕುಳವು ಪರಮಾವಧಿಗೇರಿತು. “ಕಾಲಗಳನ್ನೂ ಧರ್ಮವಿಧಿಗಳನ್ನೂ ಮಾರ್ಪಡಿ”ಸುವ ಉದ್ದೇಶದಿಂದ, ವ್ಯವಸ್ಥಾಪಿತ ಸಾಕ್ಷಿಕಾರ್ಯವನ್ನು “ಚಿಕ್ಕ” ಕೊಂಬು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟಿತು. (ಪ್ರಕಟನೆ 11:⁠7) ಆದುದರಿಂದ, “ಒಂದುಕಾಲ ಎರಡುಕಾಲ ಅರ್ಧಕಾಲ” ಎಂದು ಮುಂತಿಳಿಸಲ್ಪಟ್ಟ ಕಾಲಾವಧಿಯು, 1918ರ ಜೂನ್‌ ತಿಂಗಳಿನಲ್ಲಿ ಕೊನೆ​ಗೊಂಡಿತು.

32. “ಚಿಕ್ಕ” ಕೊಂಬಿನ ಕಿರುಕುಳದಿಂದ “ಪವಿತ್ರ ಜನರು” ನಾಶವಾಗಲಿಲ್ಲ ಎಂದು ನೀವು ಏಕೆ ಹೇಳಸಾಧ್ಯವಿದೆ?

32 “ಚಿಕ್ಕ” ಕೊಂಬಿನ ಕಿರುಕುಳದಿಂದ “ಪವಿತ್ರ ಜನರು” ನಾಶವಾಗಲಿಲ್ಲ. ಪ್ರಕಟನೆ ಪುಸ್ತಕದಲ್ಲಿ ಪ್ರವಾದಿಸಲ್ಪಟ್ಟಿದ್ದಂತೆ, ಸ್ವಲ್ಪ ಸಮಯಾವಧಿಯ ವರೆಗೆ ನಿಷ್ಕ್ರಿಯರಾಗಿ ಉಳಿದ ಬಳಿಕ, ಅಭಿಷಿಕ್ತ ಕ್ರೈಸ್ತರು ಸಾರುವ ಕಾರ್ಯದಲ್ಲಿ ಪುನಃ ಕ್ರಿಯಾಶೀಲರಾದರು. (ಪ್ರಕಟನೆ 11:​11-13) 1919ರ ಮಾರ್ಚ್‌ 26ರಂದು, ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ಅಧ್ಯಕ್ಷರು ಹಾಗೂ ಅವರ ಸಂಗಡಿಗರು ಸೆರೆಯಿಂದ ಬಿಡುಗಡೆಗೊಳಿಸಲ್ಪಟ್ಟರು, ಮತ್ತು ತದನಂತರ ಅವರ ವಿರುದ್ಧ ಹೊರಿಸಲ್ಪಟ್ಟಿದ್ದ ಸುಳ್ಳಾರೋಪಗಳು ತಪ್ಪೆಂದು ರುಜುಪಡಿಸಲ್ಪಟ್ಟವು. ಆ ಕೂಡಲೆ ಅಭಿಷಿಕ್ತ ಉಳಿಕೆಯವರು ಇನ್ನೂ ಹೆಚ್ಚಿನ ಚಟುವಟಿಕೆಯನ್ನು ಪುನಃ ವ್ಯವಸ್ಥಾಪಿಸಿದರು. ಆದರೂ, “ಚಿಕ್ಕ” ಕೊಂಬಿಗೆ ಏನು ಸಂಭವಿಸಲಿತ್ತು?

ಮಹಾವೃದ್ಧನು ನ್ಯಾಯಸಭೆಯನ್ನು ನಡಿಸುತ್ತಾನೆ

33. (ಎ) ಮಹಾವೃದ್ಧನು ಯಾರಾಗಿದ್ದಾನೆ? (ಬಿ) ಸ್ವರ್ಗೀಯ ನ್ಯಾಯಸ್ಥಾನದಲ್ಲಿ ಯಾವ ‘ಪುಸ್ತಕ​ಗಳು ತೆರೆಯಲ್ಪಟ್ಟವು?’

33 ನಾಲ್ಕು ಮೃಗಗಳನ್ನು ಪರಿಚಯಿಸಿದ ಬಳಿಕ, ದಾನಿಯೇಲನು ತನ್ನ ದೃಷ್ಟಿಯನ್ನು ನಾಲ್ಕನೆಯ ಮೃಗದಿಂದ ಸ್ವರ್ಗದಲ್ಲಿನ ದೃಶ್ಯದ ಕಡೆಗೆ ಹೊರಳಿಸುತ್ತಾನೆ. ಮಹಾವೃದ್ಧನೊಬ್ಬನು, ನ್ಯಾಯಾಧಿಪತಿಯೋಪಾದಿ ತನ್ನ ದೇದೀಪ್ಯಮಾನವಾದ ಸಿಂಹಾಸನದ ಮೇಲೆ ಆಸೀನನಾಗುವುದನ್ನು ನೋಡುತ್ತಾನೆ. ಆ ಮಹಾವೃದ್ಧನು ಯೆಹೋವ ದೇವರಲ್ಲದೆ ಮತ್ತಾರೂ ಅಲ್ಲ. (ಕೀರ್ತನೆ 90:⁠2) ನ್ಯಾಯಸಭೆಯವರು ಕುಳಿತುಕೊಂಡಾಗ, ‘ಪುಸ್ತಕಗಳು ತೆರೆಯಲ್ಪಟ್ಟದ್ದನ್ನು’ ದಾನಿಯೇಲನು ನೋಡುತ್ತಾನೆ. (ದಾನಿಯೇಲ 7:​9, 10) ಯೆಹೋವನ ಅಸ್ತಿತ್ವವು ಅನಂತಕಾಲದ ವರೆಗೂ ವ್ಯಾಪಿಸುವುದರಿಂದ, ಮಾನವ ಇತಿಹಾಸವು ಒಂದು ಪುಸ್ತಕದಲ್ಲಿ ಬರೆಯಲ್ಪಟ್ಟಿದೆಯೋ ಎಂಬಂತೆ, ಸರ್ವ ಮಾನವ ಇತಿಹಾಸವು ಆತನಿಗೆ ಚೆನ್ನಾಗಿ ತಿಳಿದಿದೆ. ಆತನು ಎಲ್ಲ ನಾಲ್ಕು ಸಾಂಕೇತಿಕ ಮೃಗಗಳನ್ನು ಗಮನಿಸಿದ್ದಾನೆ, ಮತ್ತು ಅವುಗಳ ಬಗ್ಗೆ ಸ್ವತಃ ಆತನಿಗೇ ನೇರವಾಗಿ ತಿಳಿದಿರುವುದರಿಂದ, ಅವುಗಳ ಕೃತ್ಯಗಳಿಗನುಸಾರ ಆತನು ನ್ಯಾಯತೀರಿಸಬಲ್ಲನು.

34, 35. “ಚಿಕ್ಕ” ಕೊಂಬಿಗೆ ಹಾಗೂ ಪಶುಪ್ರಾಯವಾದ ಇತರ ಲೋಕ ಶಕ್ತಿಗಳಿಗೆ ಏನು ಸಂಭವಿಸಲಿದೆ?

34 ದಾನಿಯೇಲನು ಮುಂದುವರಿಸುವುದು: “ಆಗ ನಾನು ನೋಡುತ್ತಿರಲು ಇಗೋ, ಕೊಂಬು ಬಡಾಯಿಕೊಚ್ಚಿಕೊಂಡ ನಿಮಿತ್ತ ಆ ಕೊಂಬಿನ ಮೃಗವನ್ನು ಕೊಂದು ಅದರ ಹೆಣವನ್ನು ಉರಿಯುವ ಬೆಂಕಿಗೆ ಹಾಕಿ ನಾಶಮಾಡಿದರು. ಮಿಕ್ಕ ಮೃಗಗಳ ದೊರೆತನವನ್ನು ತೆಗೆದುಬಿಟ್ಟರು, ಆದರೆ ಕೆಲವು ಕಾಲದ ಮಟ್ಟಿಗೆ, ತಕ್ಕ ಸಮಯ ಬರುವ ತನಕ ಅವುಗಳ ಜೀವವನ್ನು ಉಳಿಸಿದರು.” (ದಾನಿಯೇಲ 7:​11, 12) ದೇವದೂತನು ದಾನಿಯೇಲನಿಗೆ ಹೇಳಿದ್ದು: “ಆ ಮೇಲೆ ನ್ಯಾಯಸಭೆಯು ಕೂತು ಅವನ ದೊರೆತನವನ್ನು ಕಿತ್ತು ತೀರಾ ಧ್ವಂಸಮಾಡಿ ಕೊನೆಗಾಣಿಸಿಬಿಡುವದು.”​—⁠ದಾನಿಯೇಲ 7:⁠26.

35 ಮಹಾ ನ್ಯಾಯಾಧಿಪತಿಯಾದ ಯೆಹೋವ ದೇವರ ಆಜ್ಞೆಯ ಮೇರೆಗೆ, ದೇವರನ್ನು ದೂಷಿಸಿ, “ಪವಿತ್ರ ಜನರಿಗೆ” ಕಿರುಕುಳ ಕೊಟ್ಟಿದ್ದ ಕೊಂಬು, ಆದಿ ಕ್ರೈಸ್ತರಿಗೆ ಹಿಂಸೆ ನೀಡಿದ್ದ ರೋಮನ್‌ ಸಾಮ್ರಾಜ್ಯವು ಅನುಭವಿಸಿದ್ದಂತಹ ಗತಿಯನ್ನೇ ಅನುಭವಿಸುವುದು. ಅದರ ಆಳ್ವಿಕೆಯೂ ಮುಂದುವರಿಯುವುದಿಲ್ಲ. ಅಥವಾ ರೋಮನ್‌ ಸಾಮ್ರಾಜ್ಯದಿಂದ ಉದಯಿಸಿದ ಕೊಂಬುಗಳಂತಹ “ಅರಸರ” ಆಳ್ವಿಕೆಯೂ ಉಳಿಯುವುದಿಲ್ಲ. ಆದರೂ, ಹಿಂದಿನ ಪಾಶವೀಯ ಲೋಕ ಶಕ್ತಿಗಳಿಂದ ಉದ್ಭವಿಸಿದ ಆಳ್ವಿಕೆಗಳ ಕುರಿತಾಗಿ ಏನು? ಮುಂತಿಳಿಸಲ್ಪಟ್ಟಂತೆಯೇ, ಅವುಗಳ ಜೀವಾವಧಿಯು “ಕೆಲವು ಕಾಲದ ಮಟ್ಟಿಗೆ, ತಕ್ಕ ಸಮಯ ಬರುವ ತನಕ” ಲಂಬಿಸಲ್ಪಟ್ಟವು. ಈಗಲೂ, ಅಂದರೆ ನಮ್ಮ ದಿನಗಳಲ್ಲಿಯೂ ಜನರು ಆ ಕ್ಷೇತ್ರದಲ್ಲಿ ವಾಸಿಸುತ್ತಿದ್ದಾರೆ. ಉದಾಹರಣೆಗಾಗಿ, ಪುರಾತನ ಬಾಬೆಲಿನ ಕ್ಷೇತ್ರದಲ್ಲಿ ಈಗ ಇರಾಕ್‌ ಇದೆ. ಪಾರಸಿಯ (ಇರಾನ್‌) ಹಾಗೂ ಗ್ರೀಸ್‌ ದೇಶಗಳು ಈಗಲೂ ಅಸ್ತಿತ್ವದಲ್ಲಿವೆ. ಈ ಲೋಕ ಶಕ್ತಿಗಳ ಅವಶೇಷಗಳು, ವಿಶ್ವ ಸಂಸ್ಥೆಯ ಭಾಗವಾಗಿವೆ. ಕೊನೆಯ ಲೋಕ ಶಕ್ತಿಯು ಸಂಹಾರವಾಗುವಾಗ, ಅದರೊಂದಿಗೆ ಈ ರಾಜ್ಯಗಳು ಸಹ ಸಂಪೂರ್ಣವಾಗಿ ಅಳಿದುಹೋಗುವವು. “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧ”ದಲ್ಲಿ, ಎಲ್ಲ ಮಾನವ ಸರಕಾರಗಳು ನಿರ್ನಾಮವಾಗುವವು. (ಪ್ರಕಟನೆ ​16:14, 16) ಹಾಗಾದರೆ, ಲೋಕವನ್ನು ಯಾರು ಆಳುವರು?

ಶಾಶ್ವತವಾದ ಆಳ್ವಿಕೆಯು ಇನ್ನೇನು ಬರಲಿಕ್ಕಿದೆ!

36, 37. (ಎ) “ಮನುಷ್ಯ ಕುಮಾರನಂತಿರುವವನು” ಯಾರನ್ನು ಸೂಚಿಸುತ್ತಾನೆ, ಮತ್ತು ಯಾವಾಗ ಮತ್ತು ಯಾವ ಉದ್ದೇಶಕ್ಕಾಗಿ ಅವನು ಸ್ವರ್ಗೀಯ ನ್ಯಾಯಾಲಯದ ಮುಂದೆ ಹಾಜರಾಗುತ್ತಾನೆ? (ಬಿ) ಸಾ.ಶ. 1914ರಲ್ಲಿ ಏನು ಸ್ಥಾಪಿಸಲ್ಪಟ್ಟಿತು?

36 “ನಾನು ಕಂಡ ರಾತ್ರಿಯ ಕನಸಿನಲ್ಲಿ [“ದರ್ಶನಗಳಲ್ಲಿ,” NW] ಇಗೋ, ಮನುಷ್ಯ ಕುಮಾರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು, ಅವನನ್ನು ಆತನ ಸನ್ನಿಧಿಗೆ ತಂದರು” ಎಂದು ದಾನಿಯೇಲನು ಉದ್ಗರಿಸಿದನು. (ದಾನಿಯೇಲ 7:13) ಭೂಮಿಯಲ್ಲಿರುವಾಗ ಯೇಸು ಕ್ರಿಸ್ತನು, ಮಾನವ​ಕುಲದ ಕಡೆಗಿನ ತನ್ನ ಸಂಬಂಧವನ್ನು ಸೂಚಿಸುತ್ತಾ ತನ್ನನ್ನು “ಮನುಷ್ಯಕುಮಾರ”ನೆಂದು ಕರೆದುಕೊಂಡನು. (ಮತ್ತಾಯ 16:13; 25:31) ಸನ್ಹೆದ್ರಿನ್‌ನ ಮುಂದೆ, ಅಥವಾ ಯೆಹೂದಿ ಹಿರಿಸಭೆಯ ಮುಂದೆ ಯೇಸು ಹೇಳಿದ್ದು: “ಇನ್ನು ಮೇಲೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳ ಮೇಲೆ ಕುಳಿತು ಬರುವದನ್ನೂ ನೀವು ಕಾಣುವಿರಿ.” (ಮತ್ತಾಯ 26:64) ಆದುದರಿಂದ, ದಾನಿಯೇಲನ ದರ್ಶನದಲ್ಲಿ, ಮಾನವ ದೃಷ್ಟಿಗೆ ಅಗೋಚರವಾಗಿ ಬರುತ್ತಿರುವವನು ಹಾಗೂ ಯೆಹೋವ ದೇವರ ಸನ್ನಿಧಿಗೆ ಹೋಗುವ ಅವಕಾಶ ಪಡೆದವನು, ಮಹಿಮಾಯುತನಾದ ಯೇಸು ಕ್ರಿಸ್ತನೇ ಆಗಿದ್ದನು. ಇದು ಯಾವಾಗ ಸಂಭವಿಸಿತು?

37 ದೇವರು ರಾಜನಾದ ದಾವೀದನೊಂದಿಗೆ ಹೇಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡಿದ್ದನೋ ಹಾಗೆಯೇ ಯೇಸು ಕ್ರಿಸ್ತನೊಂದಿಗೂ ಒಂದು ರಾಜ್ಯದ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆ. (2 ಸಮುವೇಲ 7:​11-16; ಲೂಕ 22:​28-30) ಸಾ.ಶ. 1914ರಲ್ಲಿ “ಅನ್ಯದೇಶದವರ ಸಮಯಗಳು” ಅಂತ್ಯಗೊಂಡಾಗ, ದಾವೀದನ ರಾಜಮನೆತನದ ಬಾಧ್ಯಸ್ಥಗಾರನೋಪಾದಿ ಯೇಸು ಕ್ರಿಸ್ತನು, ನ್ಯಾಯವಾದ ಹಕ್ಕಿನಿಂದಲೇ ರಾಜ್ಯದ ಆಳ್ವಿಕೆಯನ್ನು ಪಡೆದುಕೊಳ್ಳಸಾಧ್ಯವಿತ್ತು. ದಾನಿಯೇಲನ ಪ್ರವಾದನಾ ದಾಖಲೆಯು ಹೀಗೆ ತಿಳಿಸುತ್ತದೆ: “ಸಕಲಜನಾಂಗ ಕುಲಭಾಷೆಗಳವರು ಅವನನ್ನು ಸೇವಿಸಲೆಂದು ಅವನಿಗೆ ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು; ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.” (ದಾನಿಯೇಲ 7:14) ಹೀಗೆ, 1914ರಲ್ಲಿ ಮೆಸ್ಸೀಯ ರಾಜ್ಯವು ಸ್ವರ್ಗದಲ್ಲಿ ಸ್ಥಾಪಿತ​ವಾಯಿತು. ಆದರೆ, ಆ ಆಳ್ವಿಕೆಯು ಇತರರಿಗೂ ಕೊಡಲ್ಪಡುತ್ತದೆ.

38, 39. ಲೋಕದ ಮೇಲಿನ ಶಾಶ್ವತವಾದ ಆಳ್ವಿಕೆಯು ಯಾರಿಗೆ ಕೊಡಲ್ಪಡುವುದು?

38 “ರಾಜ್ಯವು ಪರಾತ್ಪರನ ಪವಿತ್ರ ಜನರಿಗೆ ಕೊಡಲ್ಪಡುವುದು” ಎಂದು ದೇವದೂತನು ಹೇಳಿದನು. (ದಾನಿಯೇಲ 7:​18, 22, 27, NW) ಯೇಸು ಕ್ರಿಸ್ತನೇ ಪ್ರಮುಖ ಪವಿತ್ರ ವ್ಯಕ್ತಿಯಾಗಿದ್ದಾನೆ. (ಅ. ಕೃತ್ಯಗಳು 3:​14; 4:​27, 30) ರಾಜ್ಯಾಳ್ವಿಕೆಯಲ್ಲಿ ಪಾಲ್ಗೊಳ್ಳುವ ಇತರ “ಪವಿತ್ರ ಜನರು,” 1,44,000 ಮಂದಿ ನಂಬಿಗಸ್ತ ಆತ್ಮಾಭಿಷಿಕ್ತ ಕ್ರೈಸ್ತರಾಗಿದ್ದಾರೆ. ಇವರು ಕ್ರಿಸ್ತನೊಂದಿಗೆ ರಾಜ್ಯಕ್ಕೆ ಬಾಧ್ಯಸ್ಥರಾಗಿದ್ದಾರೆ. (ರೋಮಾಪುರ 1:​7; 8:17; 2 ಥೆಸಲೊನೀಕ 1:5; 1 ಪೇತ್ರ 2:⁠9) ಸ್ವರ್ಗೀಯ ಚೀಯೋನ್‌ ಪರ್ವತದಲ್ಲಿ ಕ್ರಿಸ್ತನೊಂದಿಗೆ ಆಳ್ವಿಕೆ ನಡೆಸಲಿಕ್ಕಾಗಿ, ಮರಣದಿಂದ ಅವರನ್ನು ಅಮರ ಆತ್ಮಿಕ ಜೀವಿಗಳಾಗಿ ಪುನರುತ್ಥಾನಗೊಳಿಸಲಾಗುತ್ತದೆ. (ಪ್ರಕಟನೆ 2:10; 14:1; 20:⁠6) ಆದುದರಿಂದ, ಕ್ರಿಸ್ತ ಯೇಸುವೂ ಪುನರುತ್ಥಿತ ಅಭಿಷಿಕ್ತ ಕ್ರೈಸ್ತರೂ ಸೇರಿಕೊಂಡು ಮಾನವ​ಕುಲದ ಲೋಕವನ್ನು ಆಳುವರು.

39 ಮನುಷ್ಯಕುಮಾರನ ಹಾಗೂ ಇತರ ಪುನರುತ್ಥಿತ “ಪವಿತ್ರ ಜನರ” ಆಳ್ವಿಕೆಯ ಕುರಿತು ದೇವದೂತನು ಹೇಳಿದ್ದು: “ಆಗ ಅವನ ರಾಜ್ಯ ಪ್ರಭುತ್ವಗಳೂ ಸಮಸ್ತ ಭೂಮಂಡಲದಲ್ಲಿನ ರಾಜ್ಯಗಳ ಮಹಿಮೆಯೂ ಪರಾತ್ಪರನ ಭಕ್ತಜನರಿಗೆ [“ಪವಿತ್ರ ಜನರಿಗೆ,” NW] ಕೊಡೋಣವಾಗುವವು; ಆತನ ರಾಜ್ಯವು ಶಾಶ್ವತ ರಾಜ್ಯ; ಸಕಲ ದೇಶಾಧಿಪತಿಗಳು ಆತನಿಗೆ ಅಧೀನರಾಗಿ ಸೇವೆಮಾಡುವರು.” (ದಾನಿಯೇಲ 7:27) ಆ ರಾಜ್ಯದ ಕೆಳಗೆ ವಿಧೇಯ ಮಾನವಕುಲವು ಎಂತಹ ಆಶೀರ್ವಾದಗಳನ್ನು ಅನುಭವಿಸುವುದು!

40. ದಾನಿಯೇಲನ ಕನಸು ಹಾಗೂ ದರ್ಶನಗಳಿಗೆ ಗಮನಕೊಡುವ ಮೂಲಕ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?

40 ತನಗೆ ದೇವದತ್ತವಾಗಿ ಕೊಡಲ್ಪಟ್ಟ ಎಲ್ಲ ದರ್ಶನಗಳ ಅದ್ಭುತಕರವಾದ ನೆರವೇರಿಕೆಗಳ ಬಗ್ಗೆ ದಾನಿಯೇಲನಿಗೆ ಏನೂ ಗೊತ್ತಿರಲಿಲ್ಲ. ಅವನು ಹೇಳಿದ್ದು: “ಈ ಕನಸಿನ [“ದರ್ಶನದ,” NW] ಪ್ರಸ್ತಾಪವು ಇಲ್ಲಿಗೆ ಮುಗಿಯಿತು. ದಾನಿಯೇಲನಾದ ನಾನು ನನ್ನ ಯೋಚನೆಗಳಿಂದ ಬಹು ಕಳವಳಗೊಂಡು ಮೊಗಗೆಟ್ಟೆನು [“ನನ್ನ ಮುಖಚ್ಛಾಯೆಯೇ ಬದಲಾಯಿತು,” NW]; ಆದರೂ ನಡೆದ ಸಂಗತಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡೆನು.” (ದಾನಿಯೇಲ 7:28) ನಾವಾದರೋ, ದಾನಿಯೇಲನು ಕಂಡ ದರ್ಶನಗಳ ನೆರವೇರಿಕೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿರುವ ಸಮಯದಲ್ಲಿ ಜೀವಿಸುತ್ತಿದ್ದೇವೆ. ಈ ಪ್ರವಾದನೆಗೆ ಗಮನಕೊಡುವಲ್ಲಿ, ಇದು ನಮ್ಮ ನಂಬಿಕೆಯನ್ನು ಬಲಗೊಳಿಸುವುದು ಮತ್ತು ಯೆಹೋವನ ಮೆಸ್ಸೀಯ ಸಂಬಂಧಿತ ರಾಜ್ಯವು ಲೋಕವನ್ನು ಆಳುವುದು ಎಂಬ ನಮ್ಮ ನಿಶ್ಚಿತಾಭಿಪ್ರಾಯಕ್ಕೆ ಆಧಾರವನ್ನು ಒದಗಿಸುವುದು.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 4 ಸ್ಪಷ್ಟವಾಗಿ ಅರ್ಥವಾಗಲಿಕ್ಕಾಗಿ ಮತ್ತು ಪುನರಾವರ್ತನೆಯಾಗುವುದನ್ನು ತಪ್ಪಿಸಲಿಕ್ಕಾಗಿ, ದಾನಿಯೇಲ 7:​15-28ರಲ್ಲಿ ಕಂಡುಬರುವ ವಿವರಣಾತ್ಮಕ ವಚನಗಳನ್ನು, ದಾನಿಯೇಲ 7:​1-14ರಲ್ಲಿ ದಾಖಲಿಸಲ್ಪಟ್ಟಿರುವ ದರ್ಶನಗಳ ಒಂದೊಂದು ವಚನದ ಪರಿಗಣನೆಯೊಂದಿಗೆ ಒಟ್ಟುಗೂಡಿಸುವೆವು.

^ ಪ್ಯಾರ. 7 ಈ ಪುಸ್ತಕದ 4ನೆಯ ಅಧ್ಯಾಯವನ್ನು ನೋಡಿರಿ.

^ ಪ್ಯಾರ. 28 ಈ ಪುಸ್ತಕದ 6ನೆಯ ಅಧ್ಯಾಯವನ್ನು ನೋಡಿರಿ.

ನೀವೇನನ್ನು ಗ್ರಹಿಸಿದಿರಿ?

‘ಸಮುದ್ರದೊಳಗಿಂದ ಹೊರಬರುತ್ತಿದ್ದ ನಾಲ್ಕು ದೊಡ್ಡ ಮೃಗಗಳ’ಲ್ಲಿ ಪ್ರತಿಯೊಂದು ಮೃಗವು ಏನನ್ನು ಸಂಕೇತಿಸಿತು?

“ಚಿಕ್ಕ” ಕೊಂಬಿನಲ್ಲಿ ಯಾವುದು ಸಹ ಒಳಗೂಡಿದೆ?

ಒಂದನೆಯ ಲೋಕ ಯುದ್ಧದ ಸಮಯದಲ್ಲಿ, ಸಾಂಕೇತಿಕ ಚಿಕ್ಕ ಕೊಂಬು “ಪವಿತ್ರ ಜನರಿಗೆ” ಹೇಗೆ ಕಿರುಕುಳ ಕೊಟ್ಟಿತು?

ಸಾಂಕೇತಿಕ ಚಿಕ್ಕ ಕೊಂಬಿಗೆ ಹಾಗೂ ಪಶುಪ್ರಾಯವಾದ ಇತರ ಲೋಕ ಶಕ್ತಿಗಳಿಗೆ ಏನು ಸಂಭವಿಸಲಿದೆ?

“ನಾಲ್ಕು ದೊಡ್ಡ ಮೃಗಗಳ” ಕುರಿತಾದ ದಾನಿಯೇಲನ ಕನಸು ಹಾಗೂ ದರ್ಶನಗಳಿಗೆ ಗಮನಕೊಡುವ ಮೂಲಕ, ನೀವು ಹೇಗೆ ಪ್ರಯೋಜನವನ್ನು ಪಡೆದುಕೊಂಡಿರಿ?

[ಅಧ್ಯಯನ ಪ್ರಶ್ನೆಗಳು]

[Box/Pictures on page 149-152]

ಸೈರಣೆಯುಳ್ಳ ಸಾಮ್ರಾಟ

ಸಾ.ಶ.ಪೂ. ಐದನೆಯ ಶತಮಾನದ ಗ್ರೀಕ್‌ ಲೇಖಕನೊಬ್ಬನು, ಒಬ್ಬ ಸಾಮ್ರಾಟನನ್ನು ಸೈರಣೆಯುಳ್ಳ ಹಾಗೂ ಆದರ್ಶಪ್ರಾಯನಾದ ಸಾಮ್ರಾಟನೋಪಾದಿ ಸ್ಮರಿಸಿದನು. ಬೈಬಲಿನಲ್ಲಿ ಅವನನ್ನು, ದೇವರು “ಅಭಿಷೇಕಿಸಿದವನು” ಹಾಗೂ “ಮೂಡಲಿಂದ” ಬರುತ್ತಿರುವ “ಹದ್ದು” ಎಂದು ಕರೆಯಲಾಗುತ್ತದೆ. (ಯೆಶಾಯ 45:1; 46:11) ಈ ರೀತಿ ವರ್ಣಿಸಲ್ಪಟ್ಟಿರುವ ಸಾಮ್ರಾಟನು, ಪಾರಸಿಯನಾದ ಮಹಾ ಕೋರೆಷನೇ.

ಸಾ.ಶ.ಪೂ. 560/559ರ ಸುಮಾರಿಗೆ, ತನ್ನ ತಂದೆಯಾದ Iನೆಯ ಕ್ಯಾಂಬಿಸಿಸ್‌ನ ತರುವಾಯ, ಪುರಾತನ ಪಾರಸಿಯದಲ್ಲಿದ್ದ ಆನ್‌ಶಾನ್‌ ಎಂಬ ಒಂದು ಪಟ್ಟಣ ಅಥವಾ ಪ್ರಾಂತದ ಸಿಂಹಾಸನಕ್ಕೆ ಏರಿದಾಗ, ಕೋರೆಷನು ಪ್ರಸಿದ್ಧಿಗೆ ಬರಲಾರಂಭಿಸಿದನು. ಆಗ ಆನ್‌ಶಾನ್‌ ಪಟ್ಟಣವು, ಆ್ಯಸ್ಟೈಅಜೀಸ್‌ ಎಂಬ ಹೆಸರಿನ ಮೇದ್ಯಯ ಅರಸನ ಆಧಿಪತ್ಯದ ಕೆಳಗಿತ್ತು. ಮೇದ್ಯಯ ಆಳ್ವಿಕೆಯ ವಿರುದ್ಧ ದಂಗೆಯೆದ್ದು, ಕೋರೆಷನು ಅತಿ ಬೇಗನೆ ವಿಜಯವನ್ನು ಸಾಧಿಸಿದನು, ಏಕೆಂದರೆ ಆ್ಯಸ್ಟೈಅಜೀಸ್‌ನ ಸೈನಿಕರು ಅವನ ಪಕ್ಷವನ್ನು ಬಿಟ್ಟು ಕೋರೆಷನ ಪಕ್ಷವನ್ನು ಸೇರಿಕೊಂಡರು. ತದನಂತರ ಕೋರೆಷನು ಮೇದ್ಯರ ನಿಷ್ಠೆಯನ್ನು ಸಂಪಾದಿಸಿದನು. ಆ ಬಳಿಕ, ಮೇದ್ಯರು ಹಾಗೂ ಪಾರಸಿಯರು ಕೋರೆಷನ ನಾಯಕತ್ವದ ಕೆಳಗೆ ಒಂದಾಗಿ ಕಾದಾಡಿದರು. ಹೀಗೆ, ಮೇದ್ಯಯಪಾರಸಿಯ ಆಳ್ವಿಕೆಯು ಅಸ್ತಿತ್ವಕ್ಕೆ ಬಂತು, ಮತ್ತು ಸಕಾಲದಲ್ಲಿ ಅದು ತನ್ನ ಆಧಿಪತ್ಯವನ್ನು ಏಜಿಯನ್‌ ಸಮುದ್ರದಿಂದ ಸಿಂಧೂ ನದಿಯ ತನಕ ವಿಸ್ತರಿಸಿತು.​—⁠ಭೂಪಟ ನೋಡಿ.

ಮೇದ್ಯಯ ಹಾಗೂ ಪಾರಸಿಯರ ಸಂಘಟಿತ ಸೈನ್ಯಗಳನ್ನು ಜೊತೆಗೂಡಿಸಿಕೊಂಡ ಕೋರೆಷನು, ಮೊದಲಾಗಿ ಸಮಸ್ಯೆಯಿದ್ದ ಕ್ಷೇತ್ರವನ್ನು, ಅಂದರೆ ಮೇದ್ಯದ ಪಶ್ಚಿಮ ಭಾಗವನ್ನು ಹತೋಟಿಗೆ ತರಲು ಮುಂತೊಡಗಿದನು. ಅಲ್ಲಿ ಲಿಡಿಯನ್‌ ಅರಸನಾದ ಕ್ರೀಸಸ್‌ನು ತನ್ನ ಆಧಿಪತ್ಯವನ್ನು ಮೇದ್ಯ ಕ್ಷೇತ್ರದೊಳಗೆ ವಿಸ್ತರಿಸಲು ಪ್ರಯತ್ನಿಸುತ್ತಿದ್ದನು. ಏಷ್ಯಾ ಮೈನರ್‌ನಲ್ಲಿ ಲಿಡಿಯನ್‌ ಸಾಮ್ರಾಜ್ಯದ ಪೂರ್ವ ಗಡಿಯ ಕಡೆಗೆ ಮುನ್ನುಗ್ಗಿದ ಕೋರೆಷನು, ಕ್ರೀಸಸ್‌ನನ್ನು ಸೋಲಿಸಿ, ಅವನ ರಾಜಧಾನಿಯಾಗಿದ್ದ ಸಾರ್ಡಿಸ್‌ ಅನ್ನು ಸ್ವಾಧೀನಪಡಿಸಿಕೊಂಡನು. ತದನಂತರ ಕೋರೆಷನು ಐಯೋನಿಯನ್‌ ಪಟ್ಟಣಗಳನ್ನು ಸೋಲಿಸಿ, ಇಡೀ ಏಷ್ಯಾ ಮೈನರನ್ನೇ ಮೇದ್ಯಯಪಾರಸಿಯ ಸಾಮ್ರಾಜ್ಯದ ಅಧೀನದಲ್ಲಿಟ್ಟುಕೊಂಡನು. ಹೀಗೆ, ಅವನು ಬಾಬೆಲಿನ ಹಾಗೂ ಅದರ ಅರಸನಾದ ನೆಬೊನೈಡಸನ ಪ್ರಮುಖ ಎದುರಾಳಿಯಾಗಿ ಪರಿಣಮಿಸಿದನು.

ಆ ಮೇಲೆ ಕೋರೆಷನು ಬಲಿಷ್ಠ ಬಾಬೆಲನ್ನು ಎದುರಿಸಲು ಸಿದ್ಧನಾದನು. ಈ ಹಂತದಿಂದ ಮುಂದಕ್ಕೆ, ಅವನು ಬೈಬಲ್‌ ಪ್ರವಾದನೆಯ ನೆರವೇರಿಕೆಯಲ್ಲಿ ಕಂಡುಬರುತ್ತಾನೆ. ಬಹುಮಟ್ಟಿಗೆ ಎರಡು ಶತಮಾನಗಳಿಗೆ ಮುಂಚೆಯೇ, ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು, ಅರಸನಾದ ಕೋರೆಷನು ಬಾಬೆಲನ್ನು ಸೋಲಿಸಿ, ಯೆಹೂದ್ಯರನ್ನು ಬಂದಿವಾಸದಿಂದ ಬಿಡುಗಡೆಮಾಡುವನೆಂದು ಹೇಳಿದ್ದನು. ಈ ಮುಂಗಡ ನೇಮಕದ ಆಧಾರ​ದಿಂದಲೇ, ಶಾಸ್ತ್ರವಚನಗಳು ಕೋರೆಷನನ್ನು ಯೆಹೋವನಿಂದ “ಅಭಿಷೇಕಿ”ಸಲ್ಪಟ್ಟವನೆಂದು (NW) ಸೂಚಿಸುತ್ತವೆ.​—⁠ಯೆಶಾಯ 44:​26-28.

ಸಾ.ಶ.ಪೂ. 539ರಲ್ಲಿ ಕೋರೆಷನು ಬಾಬೆಲಿನ ವಿರುದ್ಧ ದಂಡೆತ್ತಿ ಹೋದಾಗ, ಅವನು ದುಸ್ಸಾಧ್ಯವಾದ ಕೆಲಸವನ್ನು ಕೈಕೊಳ್ಳಬೇಕಾಯಿತು. ಬಾಬೆಲಿನ ಸುತ್ತಲೂ ಬೃಹದಾಕಾರದ ಗೋಡೆಗಳು ಇದ್ದವು ಹಾಗೂ ಯೂಫ್ರೇಟೀಸ್‌ ನದಿಯಿಂದ ಉಂಟಾದ ಆಳವಾದ ಮತ್ತು ಅಗಲವಾದ ಕಂದಕವು ಅದರ ಸುತ್ತಲೂ ಇತ್ತು. ಆದುದರಿಂದ ಬಾಬೆಲ್‌ ಪಟ್ಟಣವನ್ನು ವಶಪಡಿಸಿಕೊಳ್ಳುವುದು, ಅಸಾಧ್ಯವಾದ ಕೆಲಸವಾಗಿ ತೋರಿತು. ಬಾಬೆಲಿನ ಮೂಲಕ ಯೂಫ್ರೇಟೀಸ್‌ ನದಿಯು ಎಲ್ಲಿ ಹರಿಯುತ್ತಿತ್ತೋ ಅಲ್ಲಿ, ನದಿಯ ದಡದ ಉದ್ದಕ್ಕೂ ಪರ್ವತದಂತಹ ಗೋಡೆಯಿದ್ದು, ಆ ಗೋಡೆಗೆ ಬೃಹದಾಕಾರದ ತಾಮ್ರದ ಹೆಬ್ಬಾಗಿಲುಗಳು ಇದ್ದವು. ಹೀಗಿರುವಾಗ, ಕೋರೆಷನು ಬಾಬೆಲನ್ನು ಹೇಗೆ ವಶಪಡಿಸಿಕೊಳ್ಳಸಾಧ್ಯವಿತ್ತು?

ಒಂದು ಶತಮಾನದ ಹಿಂದೆ, “ಅವಳ ನೀರಿನ ವ್ಯವಸ್ಥೆಯ ಮೇಲೆ ವಿನಾಶವು ಉಂಟಾಗುವು”ದನ್ನು ಯೆಹೋವನು ಮುಂತಿಳಿಸಿದ್ದನು ಮತ್ತು “ಅವಳ ನೀರು ಒಣಗಿಹೋಗುವುದು” ಎಂದು ಹೇಳಿದ್ದನು. (ಯೆರೆಮೀಯ 50:​38, NW) ಈ ಪ್ರವಾದನೆಗೆ ಅನುಸಾರವಾಗಿ, ಕೋರೆಷನು ಯೂಫ್ರೇಟೀಸ್‌ ನದಿಯ ನೀರನ್ನು ಬಾಬೆಲಿನ ಉತ್ತರ ದಿಕ್ಕಿನಲ್ಲಿ ಕೆಲವಾರು ಮೈಲುಗಳ ವರೆಗೆ ತಿರುಗಿಸಿದನು. ತದನಂತರ ಅವನ ಸೈನ್ಯವು ನದೀತಳದ ಕೆಸರಿನಲ್ಲಿ ಕಷ್ಟಪಟ್ಟು ನಡೆದುಕೊಂಡು ಹೋಗಿ, ಗೋಡೆಯ ಕಡೆಗೆ ನಡಿಸುವ ಇಳಿಜಾರು ಭಾಗವನ್ನು ಹತ್ತಿ, ಬಹಳ ಸುಲಭವಾಗಿ ಪಟ್ಟಣವನ್ನು ಪ್ರವೇಶಿಸಿತು. ಏಕೆಂದರೆ ತಾಮ್ರದ ಹೆಬ್ಬಾಗಿಲುಗಳು ತೆರೆದುಕೊಂಡೇ ಇದ್ದವು. ತನ್ನ ಬಲಿಪಶುವಿನ ಮೇಲೆ ಥಟ್ಟನೆ ದಾಳಿಮಾಡುವ “ಹದ್ದಿ”ನಂತೆ, “ಮೂಡಲಿಂದ,” ಅಂದರೆ ಪೂರ್ವ ದಿಕ್ಕಿನಿಂದ ಬಂದ ಈ ರಾಜನು, ಒಂದೇ ರಾತ್ರಿಯಲ್ಲಿ ಬಾಬೆಲನ್ನು ವಶಪಡಿಸಿಕೊಂಡನು!

ಬಾಬೆಲಿನಲ್ಲಿದ್ದ ಯೆಹೂದ್ಯರಿಗಾದರೋ, ಕೋರೆಷನ ವಿಜಯವು ಉಲ್ಲಾಸವನ್ನು ನೀಡಿತು. ಏಕೆಂದರೆ ಅವರು ದೀರ್ಘ ಸಮಯದಿಂದಲೂ ಎದುರುನೋಡುತ್ತಿದ್ದಂತಹ ಬಂದಿವಾಸದಿಂದ ಬಿಡುಗಡೆಯನ್ನು ಅದು ಒದಗಿಸಲಿತ್ತು ಮತ್ತು ತಮ್ಮ ಸ್ವದೇಶದ 70 ವರ್ಷಗಳ ಜನಶೂನ್ಯ ಸ್ಥಿತಿಯನ್ನು ಕೊನೆಗೊಳಿಸಲಿಕ್ಕಿತ್ತು. ಅವರು ಯೆರೂಸಲೇಮಿಗೆ ಹಿಂದಿರುಗಿ, ದೇವಾಲಯವನ್ನು ಪುನಃ ಕಟ್ಟುವ ಅಧಿಕಾರವನ್ನು ಕೊಡುವ ಆಜ್ಞೆಯನ್ನು ಕೋರೆಷನು ಹೊರಡಿಸಿದಾಗ, ಅವರೆಷ್ಟು ರೋಮಾಂಚನಗೊಂಡಿದ್ದಿರಬೇಕು! ನೆಬೂಕದ್ನೆಚ್ಚರನು ಬಾಬೆಲಿಗೆ ತೆಗೆದುಕೊಂಡು ಬಂದಿದ್ದಂತಹ ದೇವಾಲಯದ ಅಮೂಲ್ಯ ಪಾತ್ರೆಗಳನ್ನು ಸಹ ಕೋರೆಷನು ಅವರಿಗೆ ಹಿಂದಿರುಗಿಸಿದನು. ಮತ್ತು ಲೆಬನೋನ್‌ನಿಂದ ಮರಗಳನ್ನು ಸಹ ಆಮದುಮಾಡಿಕೊಳ್ಳುವಂತೆ ಅನುಮತಿ ನೀಡಿದನು, ಹಾಗೂ ನಿರ್ಮಾಣ ವೆಚ್ಚಗಳನ್ನು ಭರ್ತಿಮಾಡಲಿಕ್ಕಾಗಿ ಅರಸನ ಭಂಡಾರದಿಂದ ಹಣಕಾಸನ್ನು ಒದಗಿಸಿದನು.​—⁠ಎಜ್ರ 1:​1-11; ​6:3-5.

ತಾನು ಗೆದ್ದುಕೊಂಡ ಜನರೊಂದಿಗೆ ವ್ಯವಹರಿಸುವಾಗ, ಸಾಮಾನ್ಯವಾಗಿ ದಯೆ ಹಾಗೂ ಸೈರಣೆಯಿಂದ ವರ್ತಿಸುವುದು ಕೋರೆಷನ ಕಾರ್ಯನೀತಿಯಾಗಿತ್ತು. ಇದಕ್ಕೆ ಒಂದು ಕಾರಣವು, ಅವನ ಧರ್ಮವಾಗಿದ್ದಿರಸಾಧ್ಯವಿದೆ. ಬಹುಶಃ, ಕೋರೆಷನು ಪಾರಸಿಯ ಪ್ರವಾದಿಯಾದ ಸೊರ್ಯಾಸ್ಟರ್‌ನ ಬೋಧನೆಗಳಿಗೆ ಬಲವಾಗಿ ಅಂಟಿಕೊಂಡಿದ್ದನು ಮತ್ತು ಒಳ್ಳೇದಾಗಿರುವ ಸಕಲವನ್ನೂ ಸೃಷ್ಟಿಸಿದವನೆಂದು ಭಾವಿಸಲಾಗುತ್ತಿದ್ದ ಒಬ್ಬ ದೇವನಾದ ಅಹುರ ಮಸ್‌ದಾನ ಭಕ್ತನಾಗಿದ್ದನು. ಸೊರ್ಯಾಸ್ಟ್ರಿಯನ್‌ ಸಂಪ್ರದಾಯ (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ, ಫಾರ್‌ಹಾಂಗ್‌ ಮೇರ್‌ ಹೀಗೆ ಬರೆದನು: “ಸೊರ್ಯಾಸ್ಟರನು ದೇವರನ್ನು ನೈತಿಕ ರೀತಿಯಲ್ಲಿ ಪರಮೋತ್ತಮನೆಂದು ಪರಿಚಯಿಸಿದನು. ಅಹುರ ಮಸ್‌ದಾ ಮುಯ್ಯಿತೀರಿಸುವವನಲ್ಲ, ಬದಲಾಗಿ ನ್ಯಾಯವಂತನಾಗಿದ್ದಾನೆ, ಆದುದರಿಂದ ಅವನಿಗೆ ಭಯಪಡಬಾರದು, ಅವನನ್ನು ಪ್ರೀತಿಸಬೇಕು ಎಂದು ಅವನು ಜನರಿಗೆ ಹೇಳಿದನು.” ಕೋರೆಷನು ನೈತಿಕನೂ ನ್ಯಾಯವಂತನೂ ಆಗಿದ್ದ ಒಬ್ಬ ದೇವನಲ್ಲಿ ನಂಬಿಕೆಯಿಟ್ಟಿದ್ದರಿಂದ, ಇದು ಅವನ ನೀತಿನಿಯಮಗಳ ಮೇಲೆ ಪರಿಣಾಮ ಬೀರಿದ್ದಿರಬಹುದು ಮತ್ತು ಉದಾರ ಮನೋಭಾವ ಹಾಗೂ ನ್ಯಾಯದಿಂದ ವರ್ತಿಸುವಂತೆ ಪ್ರೋತ್ಸಾಹಿಸಿದ್ದಿರಬಹುದು.

ಆದರೂ, ಈ ಅರಸನು ಬಾಬೆಲಿನ ಹವಾಮಾನದ ವಿಷಯದಲ್ಲಿ ಕಡಿಮೆ ಸೈರಣೆಯುಳ್ಳವನಾಗಿದ್ದನು. ಸುಡುಬಿಸಿಲಿನ ಬೇಸಗೆಯನ್ನು ತಾಳಿಕೊಳ್ಳುವುದು ಅವನಿಗೆ ಅಸಾಧ್ಯವಾದ ಸಂಗತಿಯಾಗಿತ್ತು. ಆದುದರಿಂದ, ಬಾಬೆಲು ಆ ಸಾಮ್ರಾಜ್ಯದ ರಾಜಯೋಗ್ಯ ಪಟ್ಟಣವಾಗಿ ಮತ್ತು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳ ಕೇಂದ್ರವಾಗಿ ಉಳಿದರೂ, ಬಾಬೆಲನ್ನು ಸಾಮಾನ್ಯವಾಗಿ ಚಳಿಗಾಲದ ರಾಜಧಾನಿಯಾಗಿ ಮಾತ್ರ ಉಪಯೋಗಿಸಲಾಗುತ್ತಿತ್ತು. ವಾಸ್ತವದಲ್ಲಿ, ಬಾಬೆಲನ್ನು ವಶಪಡಿಸಿಕೊಂಡ ಬಳಿಕ, ಕೋರೆಷನು ಕೂಡಲೆ ಎಕ್‌ಬ್ಯಾಟನ ಎಂಬ ಸ್ಥಳದಲ್ಲಿದ್ದ ತನ್ನ ಬೇಸಗೆ ಕಾಲದ ರಾಜಧಾನಿಗೆ ಹಿಂದಿರುಗಿದನು. ಎಕ್‌ಬ್ಯಾಟನವು ಮೌಂಟ್‌ ಆ್ಯಲ್‌ವಾಂಡ್‌ನ ತಪ್ಪಲಿನಲ್ಲಿ, ಸಮುದ್ರ ಮಟ್ಟಕ್ಕಿಂತ 6,000 ಅಡಿಗಳಷ್ಟು ಮೇಲೆ ನೆಲೆಸಿತ್ತು. ಅಲ್ಲಿನ ಆನಂದದಾಯಕ ಬೇಸಗೆಕಾಲದ ಜೊತೆಗೆ ಶೀತಲ ಚಳಿಗಾಲದಿಂದ ಕೂಡಿರುವ ಹವಾಗುಣವು ಕೋರೆಷನಿಗೆ ತುಂಬ ಇಷ್ಟಕರವಾಗಿತ್ತು. ತನ್ನ ಮುಂಚಿನ ರಾಜಧಾನಿಯಾದ ಪಸಾರ್‌ಗಡೀಯಲ್ಲೂ ಕೋರೆಷನು ಒಂದು ಸುಂದರವಾದ ಅರಮನೆಯನ್ನು ಕಟ್ಟಿಸಿದನು. ಇದು ಎಕ್‌ಬ್ಯಾಟನದ ಆಗ್ನೇಯ ದಿಕ್ಕಿನಲ್ಲಿ ಸುಮಾರು 650 ಕಿಲೊಮೀಟರುಗಳಷ್ಟು ದೂರದಲ್ಲಿದೆ. ಈ ಅರಮನೆಯನ್ನು ಅವನು ಒಂದು ವಿಶ್ರಾಂತಿಧಾಮವಾಗಿ ಉಪಯೋಗಿಸುತ್ತಿದ್ದನು.

ಹೀಗೆ ಕೋರೆಷನು, ಒಬ್ಬ ವೀರ ಜಯಶಾಲಿಯೋಪಾದಿ ಹಾಗೂ ಸೈರಣೆಯುಳ್ಳ ಒಬ್ಬ ಸಾಮ್ರಾಟನೋಪಾದಿ ತನ್ನ ನೆನಪನ್ನು ಉಳಿಸಿಹೋದನು. ಸಾ.ಶ.ಪೂ. 530ರಲ್ಲಿ ಒಂದು ಮಿಲಿಟರಿ ದಂಡಯಾತ್ರೆಯನ್ನು ನಡೆಸುತ್ತಿದ್ದಾಗ ಅವನು ಮರಣಹೊಂದಿದನು, ಮತ್ತು ಅವನ 30 ವರ್ಷಗಳ ಆಳ್ವಿಕೆಯು ಕೊನೆಗೊಂಡಿತು. ಅವನಿಗೆ ಬದಲಾಗಿ ಅವನ ಮಗನಾದ IIನೆಯ ಕ್ಯಾಂಬಿಸಿಸ್‌ನು ಅವನ ಉತ್ತರಾಧಿಕಾರಿಯಾಗಿ ಪಾರಸಿಯ ಸಿಂಹಾಸನವನ್ನೇರಿದನು.

ನೀವೇನನ್ನು ಗ್ರಹಿಸಿದಿರಿ?

• ಪಾರಸಿಯನಾದ ಕೋರೆಷನು ಹೇಗೆ ಯೆಹೋವನು “ಅಭಿಷೇಕಿಸಿದ”ವನಾಗಿ ಪರಿಣಮಿಸಿದನು?

• ಯೆಹೋವನ ಜನರಿಗೋಸ್ಕರ ಕೋರೆಷನು ಯಾವ ಅಮೂಲ್ಯ ​ಕೆಲಸವನ್ನು ಮಾಡಿದನು?

• ಕೋರೆಷನು ತಾನು ಗೆದ್ದುಕೊಂಡಿದ್ದ ಜನರೊಂದಿಗೆ ಹೇಗೆ ವ್ಯವಹರಿಸುತ್ತಿದ್ದನು?

[ಭೂಪಟ]

(For fully formatted text, see publication)

ಮೇದ್ಯಯಪಾರಸಿಯ ಸಾಮ್ರಾಜ್ಯ

ಮ್ಯಾಸಿಡೋನಿಯ

ಮೆಂಫಿಸ್‌

ಈಜಿಪ್ಟ್‌

ಇತಿಯೋಪಿಯ

ಯೆರೂಸಲೇಮ್‌

ಬಾಬೆಲ್‌

ಎಕ್‌ಬ್ಯಾಟನ

ಸೂಸ

ಪರ್ಸಿಪೊಲಿಸ್‌

ಭಾರತ

[ಚಿತ್ರ]

ಪಸಾರ್‌ಗಡೀಯಲ್ಲಿರುವ ಕೋರೆಷನ ಸಮಾಧಿ

[ಚಿತ್ರ]

ಪಸಾರ್‌ಗಡೀಯಲ್ಲಿರುವ, ಕೋರೆಷನನ್ನು ಚಿತ್ರಿಸುವ ಅರೆಯುಬ್ಬು ಕೆತ್ತನೆ

[Box/Pictures on page 153-161]

ಒಬ್ಬ ಎಳೆಯ ರಾಜನು ಲೋಕವನ್ನು ಜಯಿಸುತ್ತಾನೆ

ಸುಮಾರು 2,300 ವರ್ಷಗಳ ಹಿಂದೆ, ಹೊಂಬಣ್ಣದ ಕೂದಲಿನ, ಸುಮಾರು 20ಗಳ ಪ್ರಾಯದಲ್ಲಿದ್ದ ಮಿಲಿಟರಿ ಸೇನಾಧಿಪತಿಯೊಬ್ಬನು, ಮೆಡಿಟರೇನಿಯನ್‌ ಸಮುದ್ರದ ದಡದಲ್ಲಿ ನಿಂತುಕೊಂಡಿದ್ದನು. ಒಂದು ಕಿಲೊಮೀಟರಿನಷ್ಟು ದೂರದಲ್ಲಿದ್ದ ಒಂದು ದ್ವೀಪ ಪಟ್ಟಣದ ಮೇಲೆ ಅವನ ದೃಷ್ಟಿಯು ನೆಟ್ಟಿತ್ತು. ಅವನಿಗೆ ಪ್ರವೇಶವು ದೊರಕದಿದ್ದ ಕಾರಣ, ರೋಷಾವೇಷಗೊಂಡ ಆ ಸೇನಾಧಿಪತಿಯು ಆ ಪಟ್ಟಣವನ್ನೇ ವಶಪಡಿಸಿಕೊಳ್ಳಲು ನಿರ್ಧರಿಸಿದನು. ಯಾವ ರೀತಿಯ ಆಕ್ರಮಣವನ್ನು ಅವನು ಯೋಜಿಸಿದನು? ದ್ವೀಪವನ್ನು ತಲಪಲಿಕ್ಕಾಗಿ ಒಂದು ದಂಡೆದಾರಿಯನ್ನು ನಿರ್ಮಿಸಿ, ಪಟ್ಟಣದ ವಿರುದ್ಧ ತನ್ನ ಸೈನ್ಯಗಳನ್ನು ಯುದ್ಧಕ್ಕೆ ಸಜ್ಜುಗೊಳಿಸುವುದೇ ಆ ಯೋಜನೆ ಆಗಿತ್ತು. ದಂಡೆದಾರಿಯ ನಿರ್ಮಾಣ ಕಾರ್ಯವು ಈಗಾಗಲೇ ಆರಂಭಗೊಂಡಿತ್ತು.

ಆದರೆ, ಪಾರಸಿಯ ಸಾಮ್ರಾಜ್ಯದ ಮಹಾ ಅರಸನಿಂದ ಕಳುಹಿಸಲ್ಪಟ್ಟ ಒಂದು ಸಂದೇಶವು, ಈ ಯುವ ಸೇನಾಧಿಪತಿಯ ಕೆಲಸಕ್ಕೆ ತಡೆಯನ್ನು ಉಂಟುಮಾಡಿತು. ಶಾಂತಿಸಂಧಾನ ಮಾಡಿಕೊಳ್ಳಲು ತವಕಪಡುತ್ತಾ, ಪಾರಸಿಯ ಅರಸನು ಒಂದು ವಿಶೇಷವಾದ ನೀಡಿಕೆಯ ಪ್ರಸ್ತಾಪಮಾಡಿದನು: 10,000 ಚಿನ್ನದ ಟ್ಯಾಲೆಂಟುಗಳು (ಸದ್ಯದ ಮೌಲ್ಯದಲ್ಲಿ ಇನ್ನೂರು ಕೋಟಿಗಿಂತಲೂ ಹೆಚ್ಚು ಡಾಲರುಗಳು), ಅರಸನ ಪುತ್ರಿಯರಲ್ಲಿ ಒಬ್ಬಳನ್ನು ಮದುವೆ ಮಾಡಿಕೊಡುವುದು, ಮತ್ತು ಪಾರಸಿಯ ಸಾಮ್ರಾಜ್ಯದ ಇಡೀ ಪಶ್ಚಿಮ ಭಾಗದ ಮೇಲಿನ ಆಧಿಪತ್ಯ. ಈ ಸೇನಾಧಿಪತಿಯು ಯಾರನ್ನು ಸೆರೆಹಿಡಿದಿದ್ದನೋ ಆ ​ಅರಸನ ಕುಟುಂಬವನ್ನು ಬಿಡುಗಡೆಮಾಡುವುದಕ್ಕಾಗಿ ಇದೆಲ್ಲವನ್ನೂ ಕೊಡುವ ಪ್ರಸ್ತಾಪಮಾಡಲಾಗಿತ್ತು.

ಈ ನೀಡಿಕೆಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ನಿರ್ಣಯವನ್ನು ಎದುರಿಸಿದ ಸೇನಾಧಿಪತಿಯು, ಮ್ಯಾಸಿಡೋನಿಯದ IIIನೆಯ ಅಲೆಕ್ಸಾಂಡರನೇ ಆಗಿದ್ದನು. ಅವನು ಈ ನೀಡಿಕೆಯನ್ನು ಸ್ವೀಕರಿಸಿದನೋ? “ಪುರಾತನ ಲೋಕಕ್ಕೆ ಅದು ಒಂದು ನಿರ್ಣಾಯಕ ಕ್ಷಣವಾಗಿತ್ತು” ಎಂದು ಇತಿಹಾಸಕಾರ ಉಲ್‌ರಿಕ್‌ ವಿಲನ್‌ ಹೇಳುತ್ತಾನೆ. “ವಾಸ್ತವದಲ್ಲಿ, ಅವನ ನಿರ್ಣಯದಿಂದ ಉಂಟಾದ ಪರಿಣಾಮಗಳು, ಮಧ್ಯಯುಗದಿಂದ ಆರಂಭಿಸಿ, ನಮ್ಮ ದಿನಗಳ ವರೆಗೂ​—⁠ಪೂರ್ವದಲ್ಲಿ ಹಾಗೂ ಪಶ್ಚಿಮದಲ್ಲಿ​—⁠ವ್ಯಾಪಿಸುತ್ತವೆ.” ಅಲೆಕ್ಸಾಂಡರನ ಉತ್ತರವನ್ನು ಪರಿಗಣಿಸುವುದಕ್ಕೆ ಮೊದಲು, ಯಾವ ಘಟನೆಗಳು ಈ ನಿರ್ಣಾಯಕ ಕ್ಷಣಕ್ಕೆ ಮುನ್ನಡಿಸಿದವು ಎಂಬುದನ್ನು ನಾವೀಗ ಗಮನಿಸೋಣ.

ಒಬ್ಬ ಜಯಶಾಲಿಯ ಅವಶ್ಯ ಗುಣಗಳು

ಸಾ.ಶ.ಪೂ. 356ರಲ್ಲಿ, ಮ್ಯಾಸಿಡೋನಿಯದ ಪೆಲದಲ್ಲಿ ಅಲೆಕ್ಸಾಂಡರನು ಜನಿಸಿದನು. ಅರಸನಾದ IIನೆಯ ಫಿಲಿಪ್ಪನು ಅವನ ತಂದೆಯಾಗಿದ್ದನು, ಮತ್ತು ಒಲಿಂಪಿಯಸ್‌ ಅವನ ತಾಯಿಯಾಗಿದ್ದಳು. ಮ್ಯಾಸಿಡೋನಿಯದ ಅರಸರು, ಗ್ರೀಕ್‌ ದೇವನಾದ ಸೀಯಸ್‌ನ ಮಗನಾದ ಹರ್ಕ್ಯುಲೀಸ್‌ನಿಂದ ಬಂದವರಾಗಿದ್ದಾರೆಂದು ಅವಳು ಅಲೆಕ್ಸಾಂಡರನಿಗೆ ಕಲಿಸಿದ್ದಳು. ಹೋಮರನ ಇಲಿಯಡ್‌ ಮಹಾಕಾವ್ಯದ ನಾಯಕನಾದ ಅಕಿಲೀಸನು ಅಲೆಕ್ಸಾಂಡರನ ಪೂರ್ವಜನಾಗಿದ್ದನು ಎಂಬುದು ಒಲಿಂಪಿಯಸ್‌ಳ ಅಭಿಪ್ರಾಯವಾಗಿತ್ತು. ಎಳೆಯ ಅಲೆಕ್ಸಾಂಡರನ ಹೆತ್ತವರು, ವಿಜಯ ಹಾಗೂ ರಾಜಯೋಗ್ಯ ವೈಭವದ ಬಗ್ಗೆ ಈ ರೀತಿಯ ಕಲ್ಪನೆಯನ್ನು ಅವನಲ್ಲಿ ಬೇರೂರಿಸಿದ್ದರಿಂದ, ಬೇರೆ ವಿಷಯಗಳಲ್ಲಿ ಅವನಿಗೆ ಆಸಕ್ತಿಯೇ ಇರಲಿಲ್ಲ. ಒಲಿಂಪಿಕ್‌ ಆಟಗಳಲ್ಲಿನ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವನು ಇಷ್ಟಪಡುವನೋ ಎಂದು ಅವನನ್ನು ಕೇಳಿದಾಗ, ಅರಸರೊಂದಿಗೆ ಓಡುವ ಸ್ಪರ್ಧೆಯಿರುವಲ್ಲಿ, ತಾನು ಅದರಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ ಎಂದು ಅಲೆಕ್ಸಾಂಡರನು ಹೇಳಿದನು. ತನ್ನ ತಂದೆಗಿಂತಲೂ ಅಧಿಕ ಪರಾಕ್ರಮಗಳನ್ನು ನಡಿಸುವುದು ಹಾಗೂ ಸಾಧನೆಗಳ ಮೂಲಕ ಮಹಿಮೆಯನ್ನು ಪಡೆದುಕೊಳ್ಳುವುದೇ ಅವನ ಮಹತ್ವಾಕಾಂಕ್ಷೆಯಾಗಿತ್ತು.

ತನ್ನ ಹದಿಮೂರನೆಯ ಪ್ರಾಯದಲ್ಲಿ ಅಲೆಕ್ಸಾಂಡರನು, ಗ್ರೀಕ್‌ ತತ್ವಜ್ಞಾನಿಯಾದ ಅರಿಸ್ಟಾಟಲನಿಂದ ಶಿಕ್ಷಣವನ್ನು ಪಡೆದುಕೊಂಡನು. ತತ್ವಜ್ಞಾನ, ಔಷಧಶಾಸ್ತ್ರ, ಹಾಗೂ ವಿಜ್ಞಾನದಲ್ಲಿ ಅಭಿರುಚಿಯನ್ನು ಬೆಳೆಸಿಕೊಳ್ಳಲು ಅರಿಸ್ಟಾಟಲನು ಅವನಿಗೆ ಸಹಾಯ ಮಾಡಿದನು. ಅರಿಸ್ಟಾಟಲನ ಬೋಧನೆಗಳು, ಅಲೆಕ್ಸಾಂಡರನ ಆಲೋಚನಾ ರೀತಿಯನ್ನು ಎಷ್ಟರ ಮಟ್ಟಿಗೆ ರೂಪಿಸಿದವು ಎಂಬ ವಿಷಯದ ಬಗ್ಗೆ ಇನ್ನೂ ವಾಗ್ವಾದ ನಡೆಯುತ್ತಿದೆ. “ಅನೇಕ ವಿಷಯಗಳಲ್ಲಿ ಅವರು ಪರಸ್ಪರ ಸಹಮತದಿಂದಿರಲಿಲ್ಲ ಎಂದು ಹೇಳುವುದೇ ಸೂಕ್ತವಾಗಿ ತೋರುತ್ತದೆ” ಎಂದು, 20ನೆಯ ಶತಮಾನದ ತತ್ವಜ್ಞಾನಿಯಾದ ಬರ್ಟ್‌ರಂಡ್‌ ರಸಲ್‌ ತಮ್ಮ ಅಭಿಪ್ರಾಯವನ್ನು ತಿಳಿಸಿದರು. “ಅರಿಸ್ಟಾಟಲನ ರಾಜಕೀಯ ದೃಷ್ಟಿಕೋನಗಳು, ಗ್ರೀಕ್‌ ನಗರ ರಾಜ್ಯದ ಮೇಲಾಧಾರಿತವಾಗಿದ್ದವು; ಮತ್ತು ಈ ನಗರ ರಾಜ್ಯಗಳ ವ್ಯವಸ್ಥೆಯು ಇಳಿಮುಖವಾಗುತ್ತಾ ಇತ್ತು.” ಹೀಗಿರುವಾಗ, ಒಂದು ದೊಡ್ಡ ಕೇಂದ್ರೀಕೃತ ಸಾಮ್ರಾಜ್ಯವನ್ನು ಕಟ್ಟಲು ಬಯಸುತ್ತಿದ್ದ ಈ ಮಹತ್ವಾಕಾಂಕ್ಷಿ ರಾಜಕುಮಾರನಿಗೆ, ಚಿಕ್ಕ ನಗರ ರಾಜ್ಯ ಸರಕಾರಗಳ ಕುರಿತಾದ ಕಲ್ಪನೆಯು ಇಷ್ಟವಾಗಿದ್ದಿರಲಿಕ್ಕಿಲ್ಲ. ಗ್ರೀಕರಾಗಿರದ ಜನರನ್ನು ಗುಲಾಮರೋಪಾದಿ ಪರಿಗಣಿಸಬೇಕು ಎಂಬ ಅರಿಸ್ಟಾಟಲನ ಉಪದೇಶದ ವಿಷಯದಲ್ಲಿಯೂ ಅಲೆಕ್ಸಾಂಡರನು ಸಂದೇಹಾಸ್ಪದನಾಗಿದ್ದಿರಬೇಕು. ಏಕೆಂದರೆ, ಅವನು ಗೆದ್ದವರು ಹಾಗೂ ಸೋತವರ ನಡುವೆ ಒಳ್ಳೆಯ ಸಂಬಂಧವಿರುವ ಒಂದು ಸಾಮ್ರಾಜ್ಯವನ್ನು ಕಟ್ಟುವ ಕನಸನ್ನು ಕಾಣುತ್ತಿದ್ದನು.

ಆದರೂ, ಅಲೆಕ್ಸಾಂಡರನಲ್ಲಿ ಓದುವ ಹಾಗೂ ಕಲಿಯುವ ಅಭಿರುಚಿಯನ್ನು ಅರಿಸ್ಟಾಟಲನು ಬೆಳೆಸಿದ್ದನು ಎಂಬ ವಿಷಯದಲ್ಲಿ ಸಂಶಯವೇ ಇಲ್ಲ. ತನ್ನ ಜೀವಮಾನದಾದ್ಯಂತ ಅಲೆಕ್ಸಾಂಡರನು ಒಬ್ಬ ಹುರುಪಿನ ಓದುಗನಾಗಿಯೇ ಮುಂದುವರಿದನು. ಅದರಲ್ಲೂ ಹೋಮರನ ಬರಹಗಳನ್ನು ವಿಶೇಷವಾಗಿ ಇಷ್ಟಪಡುತ್ತಿದ್ದನು. ಅವನು ಇಲಿಯಡ್‌ ಮಹಾಕಾವ್ಯವನ್ನು​—⁠ಆ ಮಹಾಕಾವ್ಯದ ಎಲ್ಲ 15,693 ಸಾಲುಗಳನ್ನು​—⁠ಬಾಯಿಪಾಠಮಾಡಿದ್ದನೆಂದು ಹೇಳಲಾಗುತ್ತದೆ.

ಸಾ.ಶ.ಪೂ. 340ರಲ್ಲಿ, ಅರಿಸ್ಟಾಟಲನಿಂದ ಪಡೆದುಕೊಳ್ಳುತ್ತಿದ್ದ ವಿದ್ಯಾಭ್ಯಾಸವನ್ನು ಇದ್ದಕ್ಕಿದ್ದಂತೆ ನಿಲ್ಲಿಸಬೇಕಾಯಿತು. ಏಕೆಂದರೆ, 16 ವರ್ಷ ಪ್ರಾಯದ ಈ ರಾಜಕುಮಾರನು, ತನ್ನ ತಂದೆಯ ಗೈರುಹಾಜರಿಯಲ್ಲಿ ಮ್ಯಾಸಿಡೋನಿಯವನ್ನು ಆಳಲಿಕ್ಕಾಗಿ ಪೆಲಕ್ಕೆ ಹಿಂದಿರುಗಿದನು. ಮತ್ತು ಸ್ವಲ್ಪದರಲ್ಲೇ ಈ ಯುವರಾಜನು ಮಿಲಿಟರಿ ಸಾಹಸಕಾರ್ಯಗಳಲ್ಲಿ ಭಾರೀ ದೊಡ್ಡ ಹಿರಿಮೆಯನ್ನು ಸಾಧಿಸಿದನು. ಫಿಲಿಪ್ಪನಿಗೆ ಸಂತೋಷವಾಗುವಂತೆ, ಅವನು ಥ್ರೇಸ್‌ ದೇಶದ ಮೇದಿ ಕುಲದ ದಂಗೆಯನ್ನು ಅಡಗಿಸಿ, ಅವರ ಪ್ರಮುಖ ಪಟ್ಟಣವನ್ನು ವಶಪಡಿಸಿಕೊಂಡು, ತನ್ನ ನಾಮಾರ್ಥವಾಗಿ ಅದಕ್ಕೆ ಅಲಿಕ್ಸಾಂಡ್ರೂಪಲಸ್‌ ಎಂದು ಹೆಸರಿಟ್ಟನು.

ವಿಜಯದ ಮುಂದುವರಿಯುವಿಕೆ

ಸಾ.ಶ.ಪೂ. 336ರಲ್ಲಿ ಫಿಲಿಪ್ಪನ ಹತ್ಯೆಯಾದಾಗ, 20 ವರ್ಷ ಪ್ರಾಯದ ಅಲೆಕ್ಸಾಂಡರನು ಮ್ಯಾಸಿಡೋನಿಯದ ಸಿಂಹಾಸನವನ್ನು ಏರುವಂತಹ ಪ್ರಸಂಗ ಒದಗಿಬಂತು. ಸಾ.ಶ.ಪೂ. 334ರ ವಸಂತಕಾಲದಲ್ಲಿ, ಹೆಲೆಸ್‌ಪಾಂಟ್‌ (ಈಗ ಡಾರ್ಡನೆಲ್ಸ್‌) ಎಂಬಲ್ಲಿ ಏಷ್ಯಾವನ್ನು ಪ್ರವೇಶಿಸಿ, ಚಿಕ್ಕದಾದರೂ ಬಹಳ ದಕ್ಷರಾಗಿದ್ದ 30,000 ಮಂದಿ ಕಾಲಾಳುಗಳು ಹಾಗೂ 5,000 ಅಶ್ವ ಸೈನ್ಯದೊಂದಿಗೆ, ಅಲೆಕ್ಸಾಂಡರನು ಒಂದು ದಂಡಯಾತ್ರೆಯನ್ನು ಆರಂಭಿಸಿದನು. ಅವನ ಸೈನ್ಯದ ಜೊತೆಗೆ, ಇಂಜಿನಿಯರ್‌ಗಳು, ಪರೀಕ್ಷಕರು, ವಾಸ್ತುಶಿಲ್ಪಿಗಳು, ವಿಜ್ಞಾನಿಗಳು, ಮತ್ತು ಇತಿಹಾಸಕಾರರೂ ಇದ್ದರು.

ಏಷ್ಯಾ ಮೈನರ್‌ (ಈಗ ಟರ್ಕಿ)ನ ವಾಯವ್ಯ ದಿಕ್ಕಿನಲ್ಲಿರುವ ಗ್ರ್ಯಾನಿಕಸ್‌ ನದಿಯ ಬಳಿ, ಅಲೆಕ್ಸಾಂಡರನು ತನ್ನ ಪ್ರಪ್ರಥಮ ಕದನವನ್ನು ಗೆದ್ದನು. ಅದೇ ಚಳಿಗಾಲದಲ್ಲಿ ಅವನು ಏಷ್ಯಾ ಮೈನರ್‌ನ ಪಶ್ಚಿಮ ಭಾಗವನ್ನೂ ವಶಪಡಿಸಿಕೊಂಡನು. ಮುಂದಿನ ಶರತ್ಕಾಲದಲ್ಲಿ, ಏಷ್ಯಾ ಮೈನರ್‌ನ ಆಗ್ನೇಯ ದಿಕ್ಕಿನಲ್ಲಿರುವ ಇಸಸ್‌ ಎಂಬ ಸ್ಥಳದಲ್ಲಿ, ಪಾರಸಿಯರೊಂದಿಗೆ ಎರಡನೆಯ ನಿರ್ಣಾಯಕ ಕದನವು ನಡೆಯಿತು. ಸುಮಾರು ಐದು ಲಕ್ಷ ಜನರಿದ್ದ ಒಂದು ಸೈನ್ಯದೊಂದಿಗೆ, ಮಹಾ ಪಾರಸಿಯ ಅರಸನಾದ IIIನೆಯ ದಾರ್ಯಾವೆಷನು ಅಲೆಕ್ಸಾಂಡರನನ್ನು ಸಂಧಿಸಲು ಅಲ್ಲಿಗೆ ಬಂದನು. ಯಾವುದು ಪ್ರೇಕ್ಷಣೀಯ ವಿಜಯವಾಗಲಿದೆಯೆಂದು ನೆನಸಲಾಗಿತ್ತೋ ಅದನ್ನು ಕಣ್ಣಾರೆ ನೋಡಲಿ ಎಂದು, ತುಂಬ ಆತ್ಮವಿಶ್ವಾಸವಿದ್ದ ದಾರ್ಯಾವೆಷನು ತನ್ನೊಂದಿಗೆ ತನ್ನ ತಾಯಿಯನ್ನೂ, ಪತ್ನಿಯನ್ನೂ, ಕುಟುಂಬದ ಇತರ ಸದಸ್ಯರನ್ನೂ ಕರೆತಂದಿದ್ದನು. ಆದರೆ, ಮ್ಯಾಸಿಡೋನಿಯದವರ ಅನಿರೀಕ್ಷಿತ ಹಾಗೂ ಪ್ರಚಂಡ ಆಕ್ರಮಣಕ್ಕೆ ಪಾರಸಿಯರು ಸಿದ್ಧರಾಗಿರಲಿಲ್ಲ. ಅಲೆಕ್ಸಾಂಡರನ ಸೈನ್ಯಗಳು ಪಾರಸಿಯ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿಬಿಟ್ಟವು, ಮತ್ತು ತನ್ನ ಕುಟುಂಬವನ್ನು ಅಲೆಕ್ಸಾಂಡರನ ವಶದಲ್ಲೇ ಬಿಟ್ಟು ದಾರ್ಯಾವೆಷನು ಪಲಾಯನಗೈದನು.

ಪಲಾಯನಮಾಡುತ್ತಿರುವ ಪಾರಸಿಯರನ್ನು ಬೆನ್ನಟ್ಟುವ ಬದಲಿಗೆ, ಅಲೆಕ್ಸಾಂಡರನು ದಕ್ಷಿಣದ ಮೆಡಿಟರೇನಿಯನ್‌ ತೀರದ ಕಡೆಗೆ ಸೈನ್ಯವನ್ನು ಮುನ್ನಡಿಸಿದನು. ಮತ್ತು ಪ್ರಬಲವಾದ ಪಾರಸಿಯ ನೌಕಾಪಡೆಯಿಂದ ಉಪಯೋಗಿಸಲ್ಪಡುತ್ತಿದ್ದ ಕಾರ್ಯಾಚರಣೆಯ ಕೇಂದ್ರಗಳನ್ನು ವಶಪಡಿಸಿಕೊಂಡನು. ಆದರೆ ದ್ವೀಪ ಪಟ್ಟಣವಾದ ತೂರ್‌ ಈ ದಾಳಿಗೆ ತುತ್ತಾಗಲಿಲ್ಲ. ಆ ಪಟ್ಟಣವನ್ನು ಗೆಲ್ಲುವ ನಿರ್ಧಾರದಿಂದ ಅಲೆಕ್ಸಾಂಡರನು, ಏಳು ತಿಂಗಳುಗಳಷ್ಟು ದೀರ್ಘವಾದ ಒಂದು ಮುತ್ತಿಗೆಯನ್ನು ಆರಂಭಿಸಿದನು. ಆ ಮುತ್ತಿಗೆಯ ಸಮಯದಲ್ಲಿಯೇ, ಈ ಮುಂಚೆ ತಿಳಿಸಲ್ಪಟ್ಟ ಶಾಂತಿಸಂಧಾನದ ನೀಡಿಕೆಯನ್ನು ದಾರ್ಯಾವೆಷನು ಪ್ರಸ್ತಾಪಿಸಿದನು. ಅವನ ಅನುದಾನಗಳು ಎಷ್ಟು ಆಕರ್ಷಕವಾಗಿದ್ದವೆಂದರೆ, ಅಲೆಕ್ಸಾಂಡರನ ನಂಬಿಗಸ್ತ ಸೇನಾಧಿಪತಿಯಾದ ಪಾರ್‌ಮಿನೀಯೊ ಹೀಗೆ ಹೇಳಿದನೆಂದು ವರದಿಸಲಾಗುತ್ತದೆ: ‘ನಾನು ಅಲೆಕ್ಸಾಂಡರನಾಗಿರುತ್ತಿದ್ದರೆ, ಅದನ್ನು ಖಂಡಿತವಾಗಿಯೂ ಸ್ವೀಕರಿಸುತ್ತಿದ್ದೆ.’ ಆದರೆ ಚಿಕ್ಕ ಪ್ರಾಯದ ಅಲೆಕ್ಸಾಂಡರನು ಅದಕ್ಕೆ ಪ್ರತ್ಯುತ್ತರಿಸಿದ್ದು: ‘ನಾನು ಪಾರ್‌ಮಿನೀಯೊ ಆಗಿರುತ್ತಿದ್ದರೆ, ನಾನು ಸಹ ಅದನ್ನು ಸ್ವೀಕರಿಸುತ್ತಿದ್ದೆ.’ ಸಂಧಾನಮಾಡಿಕೊಳ್ಳಲು ನಿರಾಕರಿಸುತ್ತಾ, ಅಲೆಕ್ಸಾಂಡರನು ತನ್ನ ಮುತ್ತಿಗೆಯನ್ನು ಮುಂದುವರಿಸಿದನು ಹಾಗೂ ಸಾ.ಶ.ಪೂ. 332ರ ಜುಲೈ ತಿಂಗಳಿನಲ್ಲಿ, ಸಮುದ್ರದ ಆ ಹೆಮ್ಮೆಯ ಒಡತಿಯನ್ನು ನೆಲಸಮಮಾಡಿಬಿಟ್ಟನು.

ತನಗೆ ಶರಣಾಗತವಾದ ಯೆರೂಸಲೇಮನ್ನು ಉಳಿಸಿ, ಅಲೆಕ್ಸಾಂಡರನು ದಕ್ಷಿಣದ ಕಡೆಗೆ ಪ್ರಯಾಣ ಬೆಳೆಸಿ, ಗಾಸಾವನ್ನು ವಶಪಡಿಸಿಕೊಂಡನು. ಪಾರಸಿಯ ಆಳ್ವಿಕೆಯಿಂದ ಬೇಸತ್ತ ಐಗುಪ್ತವು, ಅಲೆಕ್ಸಾಂಡರನನ್ನು ಒಬ್ಬ ವಿಮೋಚಕನೋಪಾದಿ ಸ್ವಾಗತಿಸಿತು. ಮೆಂಫಿಸ್‌ನಲ್ಲಿ ಅವನು ಏಪಿಸ್‌ ಮೂರ್ತಿಗೆ ಹೋರಿಯನ್ನು ಅರ್ಪಿಸಿ, ಐಗುಪ್ತ ಪುರೋಹಿತರನ್ನು ಮೆಚ್ಚಿಸಿದನು. ಅವನು ಆ್ಯಲೆಕ್ಸಾಂಡ್ರಿಯ ಎಂಬ ಪಟ್ಟಣವನ್ನು ಸಹ ಸ್ಥಾಪಿಸಿದನು. ವಿದ್ಯಾಭ್ಯಾಸದ ಕೇಂದ್ರವಾಗಿದ್ದ ಈ ಪಟ್ಟಣವು, ಆ್ಯಥೆನ್ಸ್‌ ಪಟ್ಟಣಕ್ಕೆ ಪ್ರತಿಸ್ಪರ್ಧಿಯಾಯಿತು ಮತ್ತು ಈಗಲೂ ಈ ಪಟ್ಟಣಕ್ಕೆ ಅದೇ ಹೆಸರಿದೆ.

ತದನಂತರ ಅಲೆಕ್ಸಾಂಡರನು ಈಶಾನ್ಯ ದಿಕ್ಕಿಗೆ ನಡೆದನು; ಪ್ಯಾಲೆಸ್ಟೈನ್‌ನ ಮೂಲಕ ಟೈಗ್ರಿಸ್‌ ನದಿಯ ಕಡೆಗೆ ಮುನ್ನುಗ್ಗಿದನು. ಸಾ.ಶ.ಪೂ. 331ನೆಯ ವರ್ಷದಲ್ಲಿ, ಚೂರುಚೂರಾಗಿ ಬಿದ್ದಿರುವ ನಿನೆವೆಯ ಅವಶೇಷಗಳ ಸಮೀಪವೇ ಇರುವ ಗಾಗಮೇಲದಲ್ಲಿ, ಪಾರಸಿಯರೊಂದಿಗಿನ ಮೂರನೆಯ ಮುಖ್ಯ ಕದನದಲ್ಲಿ ಅವನು ಒಳಗೂಡಿದನು. ಇಲ್ಲಿ ಅಲೆಕ್ಸಾಂಡರನ 47,000 ಸೈನಿಕರು, ಕಡಿಮೆಪಕ್ಷ 2,50,000 ಸೈನಿಕರಿದ್ದ ಪಾರಸಿಯ ಸೈನ್ಯವನ್ನು ಸಂಪೂರ್ಣವಾಗಿ ಸೋಲಿಸಿಬಿಟ್ಟರು! ದಾರ್ಯಾವೆಷನು ಪಲಾಯನಮಾಡಿದನು ಮತ್ತು ಸಮಯಾನಂತರ ತನ್ನ ಸ್ವಂತ ಜನರಿಂದಲೇ ಕೊಲ್ಲಲ್ಪಟ್ಟನು.

ವಿಜಯದಿಂದ ಭಾವೋದ್ರೇಕಗೊಂಡವನಾಗಿ, ಅಲೆಕ್ಸಾಂಡರನು ದಕ್ಷಿಣದ ಕಡೆಗೆ ತೆರಳಿ, ಚಳಿಗಾಲದ ರಾಜಧಾನಿಯಾದ ಬಾಬೆಲನ್ನು ಸ್ವಾಧೀನಪಡಿಸಿಕೊಂಡನು. ಸೂಸ ಹಾಗೂ ಪರ್ಸೀಪೊಲಿಸ್‌ಗಳಲ್ಲಿರುವ ರಾಜಧಾನಿಗಳನ್ನು ಸಹ ತನ್ನದಾಗಿ ಮಾಡಿಕೊಂಡನು, ಅಪಾರವಾಗಿದ್ದ ಪಾರಸಿಯ ಖಜಾನೆಯನ್ನು ವಶಪಡಿಸಿಕೊಂಡನು, ಮತ್ತು ಸರ್‌ಕ್ಸೀಸ್‌ನ ದೊಡ್ಡ ಅರಮನೆಯನ್ನು ಸುಟ್ಟುಬಿಟ್ಟನು. ಕೊನೆಯದಾಗಿ, ಎಕ್‌ಬ್ಯಾಟನದಲ್ಲಿದ್ದ ರಾಜಧಾನಿಯೂ ಅಲೆಕ್ಸಾಂಡರನ ವಶವಾಯಿತು. ಈ ಚುರುಕಾದ ವಿಜೇತನು, ಆಧುನಿಕ ದಿನದ ಪಾಕಿಸ್ತಾನದಲ್ಲಿರುವ ಸಿಂಧೂ ನದಿಯಷ್ಟು ಪೂರ್ವಕ್ಕೂ ಹೋಗಿ, ಪಾರಸಿಯ ಆಧಿಪತ್ಯದ ಉಳಿದ ಭಾಗಗಳನ್ನು ಸಹ ಸ್ವಾಧೀನಪಡಿಸಿಕೊಂಡನು.

ಸಿಂಧೂ ನದಿಯನ್ನು ದಾಟಿದ ಬಳಿಕ, ಪಾರಸಿಯ ಪ್ರಾಂತವಾಗಿದ್ದ ತಕ್ಷಶಿಲೆ (ಟಾಕ್‌ಸಲ)ಯ ಗಡಿಪ್ರದೇಶದಲ್ಲಿ, ಭಾರತೀಯ ಅರಸನಾಗಿದ್ದ ಪೋರಸ್‌ ಎಂಬ ಒಬ್ಬ ಎದುರಾಳಿಯನ್ನು ಅಲೆಕ್ಸಾಂಡರನು ಸಂಧಿಸಿದನು. ಸಾ.ಶ.ಪೂ. 326ರಲ್ಲಿ, ಅವನ ವಿರುದ್ಧ ಅಲೆಕ್ಸಾಂಡರನು ತನ್ನ ನಾಲ್ಕನೆಯ ಹಾಗೂ ಅಂತಿಮ ಕದನವನ್ನು ನಡೆಸಿದನು. 35,000 ಸೈನಿಕರೂ 200 ಆನೆಗಳೂ ಇದ್ದ ಪೋರಸನ ಸೈನ್ಯವು, ಮ್ಯಾಸಿಡೋನಿಯದ ಕುದುರೆಗಳಿಗೆ ಭಯವನ್ನುಂಟುಮಾಡಿತು. ಈ ಕದನವು ಬಹಳ ಘೋರವಾಗಿತ್ತು ಮತ್ತು ರಕ್ತಪಾತದಿಂದ ಕೂಡಿತ್ತಾದರೂ, ಅಲೆಕ್ಸಾಂಡರನ ಸೈನಿಕರು ಜಯಗಳಿಸಿದರು. ಪೋರಸನು ಶರಣಾಗತನಾಗಿ, ಅಲೆಕ್ಸಾಂಡರನೊಂದಿಗೆ ಸ್ನೇಹ ಬೆಳೆಸಿದನು.

ಮ್ಯಾಸಿಡೋನಿಯದ ಸೈನ್ಯವು ಏಷ್ಯಾಕ್ಕೆ ಬಂದು ಸುಮಾರು ಎಂಟು ವರ್ಷಗಳಿಗಿಂತಲೂ ಹೆಚ್ಚು ಸಮಯವು ಗತಿಸಿತ್ತು. ಸೈನಿಕರು ಬೇಸತ್ತುಹೋಗಿದ್ದರು ಹಾಗೂ ಸ್ವದೇಶಕ್ಕಾಗಿ ಹಂಬಲಿಸುತ್ತಿದ್ದರು. ಪೋರಸನೊಂದಿಗಿನ ಘೋರ ಕದನದಿಂದ ಎದೆಗುಂದಿದ್ದ ಸೈನಿಕರು, ಸ್ವದೇಶಕ್ಕೆ ಹಿಂದಿರುಗಲು ಬಯಸಿದರು. ಆರಂಭದಲ್ಲಿ ಅಲೆಕ್ಸಾಂಡರನು ಇದನ್ನು ಪ್ರತಿಭಟಿಸಿದನಾದರೂ, ತದನಂತರ ಅವರ ಕೋರಿಕೆಯನ್ನು ಈಡೇರಿಸಿದನು. ನಿಜವಾಗಿಯೂ ಗ್ರೀಸ್‌ ದೇಶವು ಒಂದು ಲೋಕ ಶಕ್ತಿಯಾಗಿ ಪರಿಣಮಿಸಿತ್ತು. ಗೆದ್ದ ದೇಶಗಳಲ್ಲಿ ಗ್ರೀಕ್‌ ನೆಲಸುನಾಡುಗಳನ್ನು ಸ್ಥಾಪಿಸಿದ್ದರಿಂದ, ಗ್ರೀಕ್‌ ಭಾಷೆ ಹಾಗೂ ಸಂಸ್ಕೃತಿಗಳು ಇಡೀ ಸಾಮ್ರಾಜ್ಯದಲ್ಲಿ ವ್ಯಾಪಿಸಿದವು.

ಗುರಾಣಿಯ ಹಿಂದಿದ್ದ ಮನುಷ್ಯ

ಈ ದಂಡಯಾತ್ರೆಯ ವರ್ಷಗಳಲ್ಲೆಲ್ಲಾ ಮ್ಯಾಸಿಡೋನಿಯದ ಸೈನ್ಯವನ್ನು ಒಗ್ಗಟ್ಟಾಗಿರಿಸಿದ್ದು ಅಲೆಕ್ಸಾಂಡರನ ವ್ಯಕ್ತಿತ್ವವೇ ಆಗಿತ್ತು. ಕದನಗಳ ಬಳಿಕ ಅಲೆಕ್ಸಾಂಡರನು, ಯಾವಾಗಲೂ ಗಾಯಾಳುಗಳನ್ನು ಸಂದರ್ಶಿಸುತ್ತಿದ್ದನು, ಅವರ ಗಾಯಗಳ ಬಗ್ಗೆ ವಿಚಾರಿಸುತ್ತಿದ್ದನು, ಸೈನಿಕರ ಶೌರ್ಯಭರಿತ ಕೃತ್ಯಗಳಿಗಾಗಿ ಅವರನ್ನು ಹೊಗಳುತ್ತಿದ್ದನು, ಮತ್ತು ಅವರ ಸಾಧನೆಗಳಿಗನುಸಾರ ಅವರಿಗೆ ಹಣವನ್ನು ದಾನವಾಗಿ ಕೊಡುತ್ತಿದ್ದನು. ಕದನದಲ್ಲಿ ಹತರಾದ ಸೈನಿಕರ ಬಗ್ಗೆ ಹೇಳುವುದಾದರೆ, ಅಲೆಕ್ಸಾಂಡರನು ಅವರಿಗೆ ಬಹಳ ವೈಭವದಿಂದ ಶವಸಂಸ್ಕಾರ ಮಾಡುವ ಏರ್ಪಾಡು ಮಾಡುತ್ತಿದ್ದನು. ಹತರಾದ ಸೈನಿಕರ ಹೆತ್ತವರು ಹಾಗೂ ಮಕ್ಕಳಿಗೆ, ಎಲ್ಲ ತೆರಿಗೆಗಳಿಂದ ಹಾಗೂ ಬೇರೆ ಬೇರೆ ಸೇವೆಗಳಿಂದ ವಿನಾಯಿತಿ ನೀಡುತ್ತಿದ್ದನು. ಕದನಗಳ ಬಳಿಕ ಮನಸ್ಸನ್ನು ಬೇರೆ ಕಡೆಗೆ ತಿರುಗಿಸಲಿಕ್ಕಾಗಿ, ಅಲೆಕ್ಸಾಂಡರನು ಆಟಗಳನ್ನು ಹಾಗೂ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದನು. ಒಂದು ಸಂದರ್ಭದಲ್ಲಿ, ಹೊಸದಾಗಿ ವಿವಾಹವಾಗಿದ್ದ ಸೈನಿಕರು, ತಮ್ಮ ಪತ್ನಿಯರೊಂದಿಗೆ ಮ್ಯಾಸಿಡೋನಿಯದಲ್ಲಿ ಚಳಿಗಾಲವನ್ನು ಕಳೆಯುವಂತೆ, ಅವರಿಗೆ ರಜೆಯನ್ನೂ ಜಾರಿಗೊಳಿಸಿದ್ದನು. ಇಂತಹ ಕೃತ್ಯಗಳು, ಅವನು ತನ್ನ ಸೈನಿಕರ ಪ್ರೀತಿ ಹಾಗೂ ಹೊಗಳಿಕೆಗೆ ಪಾತ್ರನಾಗುವಂತೆ ಮಾಡಿದವು.

ಬ್ಯಾಕ್ಟ್ರಿಯದ ರಾಜಕುಮಾರಿಯಾಗಿದ್ದ ರೊಕ್ಸಾನಳೊಂದಿಗಿನ ಅಲೆಕ್ಸಾಂಡರನ ವಿವಾಹದ ಕುರಿತು, ಗ್ರೀಕ್‌ ಜೀವನಚರಿತ್ರೆಗಾರನಾಗಿದ್ದ ಪ್ಲುಟಾರ್ಕ್‌ ಬರೆದುದು: “ನಿಜವಾಗಿಯೂ ಇದು ಒಂದು ಪ್ರಣಯ ಪ್ರಸಂಗವಾಗಿತ್ತಾದರೂ, ಅದೇ ಸಮಯದಲ್ಲಿ ಅದು ಅಲೆಕ್ಸಾಂಡರನ ಉದ್ದೇಶಕ್ಕೆ ನೆರವನ್ನು ನೀಡುತ್ತಿತ್ತೋ ಎಂಬಂತೆ ತೋರುತ್ತಿತ್ತು. ಏಕೆಂದರೆ, ಅವನು ಗೆದ್ದುಕೊಂಡಿದ್ದ ಜನರು, ಅಲೆಕ್ಸಾಂಡರನು ತಮ್ಮ ಜನಾಂಗದ ಒಬ್ಬ ಹುಡುಗಿಯನ್ನೇ ಆಯ್ಕೆಮಾಡಿದ್ದನ್ನು ನೋಡಿ ಬಹಳ ಸಂತೋಷಪಟ್ಟರು. ಅಷ್ಟುಮಾತ್ರವಲ್ಲ, ಪುರುಷರಲ್ಲೇ ಅತ್ಯಂತ ಆತ್ಮಸಂಯಮವಿದ್ದ ಅಲೆಕ್ಸಾಂಡರನ ಒಂದೇ ಒಂದು ಪ್ರೇಮ ಪ್ರಕರಣ ಇದಾಗಿತ್ತಾದರೂ, ಅವಳನ್ನು ಕಾನೂನುಬದ್ಧವಾಗಿ ಮದುವೆಯಾಗುವ ತನಕ, ಅವನು ಅವಳೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿರಲಿಲ್ಲ ಎಂಬುದನ್ನು ನೋಡಿ ಅವನ ಬಗ್ಗೆ ಅವರಿಗೆ ಅತ್ಯಧಿಕ ಮಮತೆ​ಯುಂಟಾಗಿತ್ತು.”

ಅಲೆಕ್ಸಾಂಡರನು ಇತರರ ವಿವಾಹಗಳಿಗೂ ಗೌರವವನ್ನು ತೋರಿಸುತ್ತಿದ್ದನು. ಅರಸನಾದ ದಾರ್ಯಾವೆಷನ ಪತ್ನಿಯು ಅವನ ಸೆರೆಯಾಳಾಗಿದ್ದರೂ, ಅಲೆಕ್ಸಾಂಡರನು ಅವಳನ್ನು ಬಹಳ ಗೌರವದಿಂದ ನೋಡಿಕೊಂಡನು. ತದ್ರೀತಿಯಲ್ಲಿ, ಮ್ಯಾಸಿಡೋನಿಯದ ಇಬ್ಬರು ಸೈನಿಕರು, ಕೆಲವು ಅಪರಿಚಿತರ ಹೆಂಡತಿಯರ ಮೇಲೆ ಅತ್ಯಾಚಾರವೆಸಗಿದ್ದರು ಎಂಬುದು ಅವನಿಗೆ ಗೊತ್ತಾದಾಗ, ಅವರು ದೋಷಿಗಳಾಗಿ ಕಂಡುಬರುವಲ್ಲಿ ಅವರನ್ನು ಕೊಲ್ಲುವಂತೆ ಅವನು ಆಜ್ಞೆ ಹೊರಡಿಸಿದನು.

ತನ್ನ ತಾಯಿಯಾದ ಒಲಿಂಪಿಯಸ್‌ಳಂತೆ, ಅಲೆಕ್ಸಾಂಡರನು ಸಹ ತುಂಬ ಧಾರ್ಮಿಕ ವ್ಯಕ್ತಿಯಾಗಿದ್ದನು. ಕದನಗಳಿಗೆ ಮುಂಚೆ ಮತ್ತು ಕದನಗಳ ಬಳಿಕ ಅವನು ಯಜ್ಞವನ್ನು ಅರ್ಪಿಸುತ್ತಿದ್ದನು. ಮತ್ತು ಕೆಲವೊಂದು ಶಕುನಗಳ ಅರ್ಥಸೂಚನೆಯನ್ನು ತಿಳಿದುಕೊಳ್ಳಲಿಕ್ಕಾಗಿ ಕಣಿಹೇಳುವವರನ್ನು ಸಂಪರ್ಕಿಸುತ್ತಿದ್ದನು. ಲಿಬ್ಯದಲ್ಲಿ, ಆ್ಯಮ್ಮನ್‌ನ ದಿವ್ಯವಾಣಿಯಿಂದ ಉತ್ತರವನ್ನು ಸಹ ಪಡೆದುಕೊಳ್ಳಲು ಅವನು ಪ್ರಯತ್ನಿಸಿದ್ದನು. ಮತ್ತು ಬಾಬೆಲಿನಲ್ಲಿ, ಯಜ್ಞಾರ್ಪಣೆಗೆ ಸಂಬಂಧಿಸಿದ ಕಸ್ದೀಯರ ವಿಧಿಗಳನ್ನು, ಅದರಲ್ಲೂ ವಿಶೇಷವಾಗಿ ಬಾಬೆಲಿನ ಬೇಲ್‌ (ಮಾರ್ದೂಕ್‌) ದೇವತೆಯ ವಿಧಿಗಳನ್ನು ಸಹ ಅವನು ಪಾಲಿಸಿದನು.

ಅಲೆಕ್ಸಾಂಡರನ ತಿನ್ನುವ ಹವ್ಯಾಸಗಳು ಮಿತವಾಗಿದ್ದವಾದರೂ, ಕಾಲಕ್ರಮೇಣ ಅವನು ವಿಪರೀತ ಕುಡಿತವನ್ನು ಆರಂಭಿಸಿದನು. ಕುಡಿತದ ಅಮಲಿನಲ್ಲಿದ್ದಾಗ, ಅವನು ತನ್ನ ಸಾಧನೆಗಳ ಕುರಿತು ಜಂಬಕೊಚ್ಚಿಕೊಳ್ಳುತ್ತಿದ್ದನು. ಅಲೆಕ್ಸಾಂಡರನ ಅತಿ ಕೆಟ್ಟ ಕೃತ್ಯಗಳಲ್ಲಿ ಒಂದು, ಕುಡಿತದ ಅಮಲಿನಲ್ಲಿ ಕೋಪೋದ್ರಿಕ್ತನಾಗಿ ಅವನು ಮಾಡಿದ ಅವನ ಗೆಳೆಯ ಕ್ಲೀಟಸ್‌ನ ಕೊಲೆಯಾಗಿತ್ತು. ಆದರೆ ಅಲೆಕ್ಸಾಂಡರನು ಎಷ್ಟರ ಮಟ್ಟಿಗೆ ಆತ್ಮದೂಷಣೆ ಮಾಡಿಕೊಂಡನೆಂದರೆ, ಮೂರು ದಿನಗಳ ವರೆಗೆ ಅವನು ತನ್ನ ಹಾಸಿಗೆಯಲ್ಲೇ ಮಲಗಿಕೊಂಡಿದ್ದನು, ಊಟವನ್ನೂ ಮಾಡಲಿಲ್ಲ, ಮದ್ಯವನ್ನೂ ಸೇವಿಸಲಿಲ್ಲ. ಕೊನೆಗೆ, ಊಟಮಾಡುವಂತೆ ಅವನನ್ನು ಒತ್ತಾಯಿಸುವುದರಲ್ಲಿ ಅವನ ಸ್ನೇಹಿತರು ಸಫಲರಾದರು.

ಸಮಯ ಕಳೆದಂತೆ, ಕೀರ್ತಿಯನ್ನು ಪಡೆಯಬೇಕೆಂಬ ಹಂಬಲವು, ಅಲೆಕ್ಸಾಂಡರನಲ್ಲಿ ಇನ್ನಿತರ ಅನಪೇಕ್ಷಿತ ಪ್ರವೃತ್ತಿಗಳನ್ನು ಉಂಟುಮಾಡಿತು. ಸುಳ್ಳು ದೋಷಾರೋಪಣೆಗಳನ್ನು ಅವನು ಸುಲಭವಾಗಿ ನಂಬಲಾರಂಭಿಸಿದನು ಮತ್ತು ತುಂಬ ಉಗ್ರವಾದ ಶಿಕ್ಷೆಯನ್ನು ವಿಧಿಸಲಾರಂಭಿಸಿದನು. ದೃಷ್ಟಾಂತಕ್ಕಾಗಿ, ತನ್ನನ್ನು ಕೊಲ್ಲುವ ಪ್ರಯತ್ನದಲ್ಲಿ ಫಿಲೋಟಸನೂ ಒಳಗೂಡಿದ್ದನೆಂಬ ವಿಷಯವನ್ನು ನಂಬಿದ ಅಲೆಕ್ಸಾಂಡರನು, ಫಿಲೋಟಸನನ್ನು ಹಾಗೂ ಒಂದು ಕಾಲದಲ್ಲಿ ತಾನು ಭರವಸೆಯಿಟ್ಟಿದ್ದ ಸಲಹೆಗಾರನಾಗಿದ್ದ ಅವನ ತಂದೆಯಾದ ಪಾರ್‌ಮಿನೀಯೊನನ್ನು ಕೊಲ್ಲಿಸಿಬಿಟ್ಟನು.

ಅಲೆಕ್ಸಾಂಡರನ ಸೋಲು

ಬಾಬೆಲಿಗೆ ಹಿಂದಿರುಗಿದ ಸ್ವಲ್ಪ ಸಮಯಾನಂತರ, ಅಲೆಕ್ಸಾಂಡರನು ಮಲೇರಿಯ ಜ್ವರಕ್ಕೆ ಆಹುತಿಯಾದನು. ಈ ಅಸ್ವಸ್ಥತೆಯಿಂದ ಅವನು ಗುಣಹೊಂದಲೇ ಇಲ್ಲ. ಸಾ.ಶ.ಪೂ. 323ರ ಜೂನ್‌ 13ರಂದು, 32 ವರ್ಷ ಹಾಗೂ 8 ತಿಂಗಳುಗಳ ವರೆಗೆ ಜೀವಿಸಿದ ಬಳಿಕ, ಅತ್ಯಂತ ಪ್ರಬಲ ವೈರಿಯಾದ ಮರಣಕ್ಕೆ ಅಲೆಕ್ಸಾಂಡರನು ಶರಣಾಗತನಾದನು.

ಇದು, ಭಾರತದ ಕೆಲವು ವಿದ್ವಾಂಸರು ಹೇಳಿದ್ದಂತೆಯೇ ಇತ್ತು: “ಅರಸನಾದ ಅಲೆಕ್ಸಾಂಡರನೇ, ಭೂಮಿಯ ಮೇಲೆ ಪ್ರತಿಯೊಬ್ಬ ವ್ಯಕ್ತಿಗೆ ತಾನು ನಿಲ್ಲುವ ಸ್ಥಳ ಮಾತ್ರ ಸಿಗುತ್ತದೆ; ಮತ್ತು ನೀನು ಸಹ ಇತರ ಮನುಷ್ಯರಂತೆಯೇ ಇದ್ದೀಯೆ, ಆದರೆ ನೀನು ತುಂಬ ಚಟುವಟಿಕೆಯಿಂದ ಕೂಡಿದ್ದಿ ಮತ್ತು ನಿರ್ದಯಿಯಾಗಿದ್ದೀ, ಆದರೂ ಸ್ವದೇಶವನ್ನು ಬಿಟ್ಟುಬಂದಿರುವ ನೀನು, ಈ ನೆಲದಲ್ಲಿ ಅಲೆದಾಡುತ್ತಿರುವಿ, ಸ್ವತಃ ನಿನಗೇ ತೊಂದರೆ ತಂದುಕೊಳ್ಳುತ್ತಿರುವಿ ಹಾಗೂ ಇತರರಿಗೂ ತೊಂದರೆಯನ್ನು ಉಂಟುಮಾಡುತ್ತಿರುವಿ. ಆದರೆ ಸ್ವಲ್ಪದರಲ್ಲೇ ನೀನು ಸಾಯಲಿಕ್ಕಿದ್ದೀ, ಹಾಗೂ ನಿನ್ನನ್ನು ಹೂಳಲು ಸಾಕಾಗುವಷ್ಟು ಸ್ಥಳ ಮಾತ್ರ ನಿನಗೆ ಸಿಗುವುದು.”

ನೀವೇನನ್ನು ಗ್ರಹಿಸಿದಿರಿ?

• ಮಹಾ ಅಲೆಕ್ಸಾಂಡರನ ಹಿನ್ನೆಲೆಯು ಏನಾಗಿತ್ತು?

• ಮ್ಯಾಸಿಡೋನಿಯದ ಸಿಂಹಾಸನವನ್ನು ಏರಿದ ಕೂಡಲೆ, ಅಲೆಕ್ಸಾಂಡರನು ಯಾವ ದಂಡಯಾತ್ರೆಯನ್ನು ಆರಂಭಿಸಿದನು?

• ಅಲೆಕ್ಸಾಂಡರನ ದಿಗ್ವಿಜಯಗಳಲ್ಲಿ ಕೆಲವನ್ನು ವರ್ಣಿಸಿರಿ.

• ಅಲೆಕ್ಸಾಂಡರನ ವ್ಯಕ್ತಿತ್ವದ ಕುರಿತು ಏನು ಹೇಳಸಾಧ್ಯವಿದೆ?

[ಭೂಪಟ]

(For fully formatted text, see publication)

ಅಲೆಕ್ಸಾಂಡರನ ದಿಗ್ವಿಜಯಗಳು

ಮ್ಯಾಸಿಡೋನಿಯ

ಈಜಿಪ್ಟ್‌

ಬಾಬೆಲ್‌

ಸಿಂಧೂ ನದಿ

[ಚಿತ್ರ]

ಅಲೆಕ್ಸಾಂಡರ್‌

[ಚಿತ್ರ]

ಅರಿಸ್ಟಾಟಲ್‌ ಹಾಗೂ ಅವನ ವಿದ್ಯಾರ್ಥಿ ಅಲೆಕ್ಸಾಂಡರ್‌

[Full-page picture]

[ಚಿತ್ರ]

ಮಹಾ ಅಲೆಕ್ಸಾಂಡರನನ್ನು ಚಿತ್ರಿಸುತ್ತದೆಂದು ಹೇಳಲಾಗುವ ಪದಕ

[Box/Pictures on page 162, 163]

ವಿಸ್ತಾರವಾಗಿದ್ದ ಒಂದು ರಾಜ್ಯವು ವಿಭಾಗಿಸಲ್ಪಡುತ್ತದೆ

ಮಹಾ ಅಲೆಕ್ಸಾಂಡರನ ರಾಜ್ಯದ ಕುರಿತಾಗಿ, ಬೈಬಲು ಒಂದು ವಿಭಜನೆಯನ್ನು ಹಾಗೂ ಒಡಕನ್ನು ಮುಂತಿಳಿಸಿತು, ಆದರೆ “ಅದು ಅವನ ಸಂತತಿಗೆ ಭಾಗವಾಗದು” ಎಂದು ಸಹ ಹೇಳಿತು. (ದಾನಿಯೇಲ 11:​3, 4) ಇದಕ್ಕನುಸಾರ, ಸಾ.ಶ.ಪೂ. 323ರಲ್ಲಿ ಅಲೆಕ್ಸಾಂಡರನ ಅನಿರೀಕ್ಷಿತ ಮರಣವು ಸಂಭವಿಸಿ 14 ವರ್ಷಗಳು ಕಳೆಯುವುದರೊಳಗೆ, ಅವನ ಅಧಿಕೃತ ಮಗನಾದ IVನೆಯ ಅಲೆಕ್ಸಾಂಡರನೂ ಅವನ ಜಾರಜ ಮಗನಾದ ಹಿರಾಕ್ಲೀಸನೂ ಮೋಸದಿಂದ ಕೊಲ್ಲಲ್ಪಟ್ಟರು.

ಸಾ.ಶ.ಪೂ. 301ನೆಯ ವರ್ಷದಷ್ಟಕ್ಕೆ, ಅಲೆಕ್ಸಾಂಡರನ ಸೇನಾಧಿಕಾರಿಗಳಲ್ಲಿ ನಾಲ್ಕು ಮಂದಿ, ತಮ್ಮ ಸೇನಾಧಿಪತಿಯಾದ ಅಲೆಕ್ಸಾಂಡರನು ಕಟ್ಟಿದ್ದ ದೊಡ್ಡ ಸಾಮ್ರಾಜ್ಯದ ಮೇಲೆ ತಮ್ಮನ್ನು ರಾಜರನ್ನಾಗಿ ಮಾಡಿಕೊಂಡರು. ಜನರಲ್‌ ಕಸಾಂಡರ್‌ ಮ್ಯಾಸಿಡೋನಿಯ ಹಾಗೂ ಗ್ರೀಸನ್ನು ನೋಡಿಕೊಳ್ಳತೊಡಗಿದನು. ಜನರಲ್‌ ಲೈಸಿಮೆಕಸನಿಗೆ ಏಷ್ಯಾ ಮೈನರ್‌ ಹಾಗೂ ಥ್ರೇಸ್‌ ಸಿಕ್ಕಿತು. Iನೆಯ ಸೆಲ್ಯೂಕಸ್‌ ನೈಕೇಟರನು ಮೆಸಪೊಟೇಮಿಯ ಹಾಗೂ ಸಿರಿಯಕ್ಕೆ ಹೋದನು. ಮತ್ತು ಟಾಲೆಮಿಯು ಐಗುಪ್ತ ಹಾಗೂ ಪ್ಯಾಲೆಸ್ಟೈನನ್ನು ಆಳುತ್ತಿದ್ದನು. ಹೀಗೆ, ಅಲೆಕ್ಸಾಂಡರನ ಒಂದೇ ರಾಜ್ಯದಿಂದ, ನಾಲ್ಕು ಗ್ರೀಕ್‌ ರಾಜ್ಯಗಳು ಉಂಟಾದವು.

ನಾಲ್ಕು ಗ್ರೀಕ್‌ (ಹೆಲಿನಿಸ್ಟಿಕ್‌) ರಾಜ್ಯಗಳಲ್ಲಿ, ಕಸಾಂಡರ್‌ನ ಆಳ್ವಿಕೆಯು ತುಂಬ ಕೊಂಚ ಕಾಲಾವಧಿಯ ವರೆಗೆ ಉಳಿದದ್ದಾಗಿ ಕಂಡುಬಂತು. ಕಸಾಂಡರ್‌ ಅಧಿಕಾರಕ್ಕೆ ಬಂದು ಕೆಲವಾರು ವರ್ಷಗಳು ಕಳೆದ ಬಳಿಕ, ಅವನ ಗಂಡುವಂಶಾವಳಿ ನಿಂತುಹೋಯಿತು ಮತ್ತು ಸಾ.ಶ.ಪೂ. 285ರಲ್ಲಿ, ಮ್ಯಾಸಿಡೋನಿಯ ಸಾಮ್ರಾಜ್ಯದ ಯೂರೋಪಿಯನ್‌ ಭಾಗವನ್ನು ಲೈಸಿಮೆಕಸನು ಸ್ವಾಧೀನಪಡಿಸಿಕೊಂಡನು. ನಾಲ್ಕು ವರ್ಷಗಳ ತರುವಾಯ, ಒಂದು ಕದನದಲ್ಲಿ Iನೆಯ ಸೆಲ್ಯೂಕಸ್‌ ನೈಕೇಟರನು ಲೈಸಿಮೆಕಸನನ್ನು ಹತಿಸಿದನು. ಇದರಿಂದಾಗಿ, ಏಷ್ಯಾ​ಖಂಡದ ಕ್ಷೇತ್ರಗಳ ಬಹುಭಾಗವು ಸೆಲ್ಯೂಕಸ್‌ನ ವಶವಾಯಿತು. ಸಿರಿಯದಲ್ಲಿರುವ ಸೆಲ್ಯೂಕಸ್‌ ಅರಸರ ವಂಶಾವಳಿಯಲ್ಲಿ, ಸೆಲ್ಯೂಕಸನು ಮೊತ್ತಮೊದಲ ಅರಸನಾದನು. ಅವನೇ ಸಿರಿಯದ ಅಂತಿಯೋಕ್ಯವನ್ನು ಸ್ಥಾಪಿಸಿ, ಅದನ್ನು ತನ್ನ ಹೊಸ ರಾಜಧಾನಿಯಾಗಿ ಮಾಡಿಕೊಂಡನು. ಸಾ.ಶ.ಪೂ. 281ರಲ್ಲಿ ಸೆಲ್ಯೂಕಸನು ಹತನಾದನು, ಆದರೆ ಅವನು ಸ್ಥಾಪಿಸಿದ ರಾಜವಂಶವು, ಸಾ.ಶ.ಪೂ. 64ರ ತನಕ​—⁠ರೋಮನ್‌ ಜನರಲ್‌ ಪಾಂಪೆ ಸಿರಿಯವನ್ನು ರೋಮ್‌ನ ಪ್ರಾಂತವಾಗಿ ಮಾಡಿಕೊಳ್ಳುವ ವರೆಗೆ​—⁠ತನ್ನ ಅಧಿಕಾರವನ್ನು ಮುಂದುವರಿಸಿತು.

  ಅಲೆಕ್ಸಾಂಡರನ ಸಾಮ್ರಾಜ್ಯದ ನಾಲ್ಕು ವಿಭಾಗಗಳಲ್ಲಿ, ಟಾಲೆಮಿಯ ರಾಜ್ಯವು ಬಹಳ ದೀರ್ಘ ಸಮಯದ ವರೆಗೆ ಉಳಿಯಿತು. ಸಾ.ಶ.ಪೂ. 305ರಲ್ಲಿ Iನೆಯ ಟಾಲೆಮಿಯು ರಾಜ ಪದವಿಯನ್ನು ಪಡೆದುಕೊಂಡನು, ಮತ್ತು ಐಗುಪ್ತದಲ್ಲಿನ ಪ್ರಪ್ರಥಮ ಮ್ಯಾಸಿಡೋನಿಯನ್‌ ಅರಸನು ಅಥವಾ ಫರೋಹನಾದನು. ಆ್ಯಲೆಕ್ಸಾಂಡ್ರಿಯ ಪಟ್ಟಣವನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡು, ಆ ಕೂಡಲೆ ಅವನು ನಗರಾಭಿವೃದ್ಧಿ ಕಾರ್ಯಕ್ರಮವನ್ನು ಆರಂಭಿಸಿದನು. ಅವನ ಅತಿ ದೊಡ್ಡ ನಿರ್ಮಾಣ ಕಾರ್ಯಗಳಲ್ಲಿ ಒಂದು, ಪ್ರಸಿದ್ಧವಾದ ಆ್ಯಲೆಕ್ಸಾಂಡ್ರಿಯನ್‌ ಗ್ರಂಥಾಲಯವಾಗಿತ್ತು. ಈ ದೊಡ್ಡ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗಾಗಿ, ಗ್ರೀಸ್‌ನ ಅಥೇನೆಯಿಂದ ಥೀಮಿಟ್ರಿಯಾಸ್‌ ಫಾಲಿಅರಫ್ಸ್‌ ಎಂಬ ಒಬ್ಬ ಪ್ರಖ್ಯಾತ ವಿದ್ವಾಂಸನನ್ನು ಟಾಲೆಮಿಯು ಕರೆತಂದನು. ಸಾ.ಶ. ಒಂದನೆಯ ಶತಮಾನದಷ್ಟಕ್ಕೆ, ಈ ಗ್ರಂಥಾಲಯದಲ್ಲಿ ಸುಮಾರು ಹತ್ತು ಲಕ್ಷ ಸುರುಳಿಗಳನ್ನು ಇಡಲಾಗಿತ್ತೆಂದು ಹೇಳಲಾಗುತ್ತದೆ. ಸಾ.ಶ.ಪೂ. 30ರಲ್ಲಿ ಐಗುಪ್ತವು ರೋಮ್‌ನ ವಶವಾಗುವ ತನಕ, ಟಾಲೆಮಿಯ ರಾಜವಂಶವು ಐಗುಪ್ತದಲ್ಲಿ ಆಳ್ವಿಕೆ ನಡಿಸುತ್ತಾ ಇತ್ತು. ತದನಂತರ ಗ್ರೀಸ್‌ಗೆ ಬದಲಾಗಿ ರೋಮ್‌ ಆಧಿಪತ್ಯ ನಡಿಸುವ ಲೋಕ ಶಕ್ತಿಯಾಗಿ ​ಪರಿಣಮಿಸಿತು.

ನೀವೇನನ್ನು ಗ್ರಹಿಸಿದಿರಿ?

• ವಿಸ್ತಾರವಾಗಿದ್ದ ಅಲೆಕ್ಸಾಂಡರನ ಸಾಮ್ರಾಜ್ಯವು ಹೇಗೆ ವಿಭಾಗ​ಗೊಂಡಿತು?

• ಸೆಲ್ಯೂಕಸ್‌ ಅರಸರ ವಂಶಾವಳಿಯು, ಎಷ್ಟರ ತನಕ ಸಿರಿಯದಲ್ಲಿ ಆಳ್ವಿಕೆಯನ್ನು ಮುಂದುವರಿಸಿತು?

• ಐಗುಪ್ತದ ಟಾಲೆಮಿಯ ರಾಜ್ಯವು ಯಾವಾಗ ಕೊನೆಗೊಂಡಿತು?

[ಭೂಪಟ]

(For fully formatted text, see publication)

ಅಲೆಕ್ಸಾಂಡರನ ಸಾಮ್ರಾಜ್ಯದ ವಿಭಜನೆ

ಕಸಾಂಡರ್‌

ಲೈಸಿಮೆಕಸ್‌

Iನೆಯ ಟಾಲೆಮಿ

Iನೆಯ ಸೆಲ್ಯೂಕಸ್‌

[ಚಿತ್ರಗಳು]

I ನೆಯ ಟಾಲೆಮಿ

I ನೆಯ ಸೆಲ್ಯೂಕಸ್‌

[ಪುಟ 240 ರಲ್ಲಿರುವ ಚಿತ್ರ]

(For fully formatted text, see publication)

ದಾನಿಯೇಲ ಪ್ರವಾದನೆಯ ಲೋಕ ಶಕ್ತಿಗಳು

ಭಾರೀ ಪ್ರತಿಮೆ (ದಾನಿಯೇಲ 2:​31-45)

ಸಮುದ್ರದಿಂದ ಹೊರಬರುವ ನಾಲ್ಕು ಮೃಗಗಳು (ದಾನಿಯೇಲ 7:​3-8, 17, 25)

ಬಾಬಿಲೋನಿಯ ಸಾ.ಶ.ಪೂ. 607ರಿಂದ

ಮೇದ್ಯಯಪಾರಸಿಯ ಸಾ.ಶ.ಪೂ. 539ರಿಂದ

ಗ್ರೀಸ್‌ ಸಾ.ಶ.ಪೂ. 331ರಿಂದ

ರೋಮ್‌ ಸಾ.ಶ.ಪೂ. 30ರಿಂದ

ಆ್ಯಂಗ್ಲೊ-ಅಮೆರಿಕನ್‌ ಲೋಕ ಶಕ್ತಿ ಸಾ.ಶ. 1763ರಿಂದ

ರಾಜಕೀಯವಾಗಿ ವಿಭಾಗಿತವಾಗಿರುವ ಲೋಕ ಅಂತ್ಯಕಾಲದಲ್ಲಿ

[ಪುಟ 239 ರಲ್ಲಿ ಇಡೀ ಪುಟದ ಚಿತ್ರ]

[ಪುಟ 258 ರಲ್ಲಿ ಇಡೀ ಪುಟದ ಚಿತ್ರ]