ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಿಂಹಗಳ ಬಾಯಿಂದ ರಕ್ಷಿಸಲ್ಪಟ್ಟದ್ದು!

ಸಿಂಹಗಳ ಬಾಯಿಂದ ರಕ್ಷಿಸಲ್ಪಟ್ಟದ್ದು!

ಅಧ್ಯಾಯ ಎಂಟು

ಸಿಂಹಗಳ ಬಾಯಿಂದ ರಕ್ಷಿಸಲ್ಪಟ್ಟದ್ದು!

1, 2. (ಎ) ಮೇದ್ಯಯನಾದ ದಾರ್ಯಾವೆಷನು ತನ್ನ ವಿಸ್ತಾರವಾದ ಸಾಮ್ರಾಜ್ಯವನ್ನು ಯಾವ ರೀತಿಯಲ್ಲಿ ವ್ಯವಸ್ಥಾಪಿಸಿದನು? (ಬಿ) ದೇಶಾಧಿಪತಿಗಳ ಕರ್ತವ್ಯಗಳು ಹಾಗೂ ಅಧಿಕಾರದ ಬಗ್ಗೆ ವಿವರಿಸಿರಿ.

ಬಾಬೆಲ್‌ ಪತನಗೊಂಡಿತ್ತು! ಒಂದು ಲೋಕ ಶಕ್ತಿಯೋಪಾದಿ ಇದ್ದ ಅದರ ಶತಮಾನದಷ್ಟು ದೀರ್ಘವಾದ ಮಹಾ ವೈಭವವು, ಕೆಲವೇ ತಾಸುಗಳಲ್ಲಿ ಇಲ್ಲವಾಗಿಹೋಗಿತ್ತು. ಒಂದು ಹೊಸ ಶಕವು ಆರಂಭಗೊಳ್ಳುತ್ತಲಿತ್ತು. ಅದು ಮೇದ್ಯಯ ಪಾರಸಿಯರ ಆಳ್ವಿಕೆಯಾಗಿತ್ತು. ಬೇಲ್ಶಚ್ಚರನ ಸಿಂಹಾಸನದ ಉತ್ತರಾಧಿಕಾರಿಯೋಪಾದಿ, ಈಗ ಮೇದ್ಯಯನಾದ ದಾರ್ಯಾವೆಷನು ತನ್ನ ವಿಸ್ತಾರವಾದ ಸಾಮ್ರಾಜ್ಯವನ್ನು ಸರಿಯಾದ ರೀತಿಯಲ್ಲಿ ವ್ಯವಸ್ಥಾಪಿಸುವ ಪಂಥಾಹ್ವಾನವನ್ನು ಎದುರಿಸಿದನು.

2 ನೂರಿಪ್ಪತ್ತು ದೇಶಾಧಿಪತಿಗಳನ್ನು ನೇಮಿಸುವುದೇ, ದಾರ್ಯಾವೆಷನು ಕೈಕೊಂಡ ಮೊತ್ತಮೊದಲ ಕೆಲಸವಾಗಿತ್ತು. ಯಾರು ಈ ಹುದ್ದೆಯಲ್ಲಿ ಕೆಲಸಮಾಡುತ್ತಾರೋ ಅವರನ್ನು, ಕೆಲವೊಮ್ಮೆ ಅರಸನ ಸಂಬಂಧಿಕರೊಳಗಿಂದ ಆರಿಸಿಕೊಳ್ಳಲಾಗುತ್ತಿತ್ತು ಎಂದು ನಂಬಲಾಗುತ್ತದೆ. ಏನೇ ಇರಲಿ, ಪ್ರತಿಯೊಬ್ಬ ದೇಶಾಧಿಪತಿಯು ಒಂದು ಪ್ರಮುಖ ಜಿಲ್ಲೆಯನ್ನು ಅಥವಾ ಸಾಮ್ರಾಜ್ಯದ ಚಿಕ್ಕ ಚಿಕ್ಕ ವಿಭಾಗಗಳನ್ನು ಆಳುತ್ತಿದ್ದನು. (ದಾನಿಯೇಲ 6:⁠1) ತೆರಿಗೆಯನ್ನು ವಸೂಲಿಮಾಡುವುದು ಮತ್ತು ಅರಸನ ಆಸ್ಥಾನಕ್ಕೆ ಕಪ್ಪಕಾಣಿಕೆಗಳನ್ನು ಒಪ್ಪಿಸುವುದು ಅವನ ಕರ್ತವ್ಯದಲ್ಲಿ ಒಳಗೂಡಿತ್ತು. ಅರಸನ ಪ್ರತಿನಿಧಿಯೋಪಾದಿ ಸಂದರ್ಶಿಸುವ ಒಬ್ಬ ವ್ಯಕ್ತಿಯಿಂದ ದೇಶಾಧಿಪತಿಯು ನಿಯತಕಾಲಿಕವಾಗಿ ತನಿಖೆಗೆ ಒಳಗಾಗುತ್ತಿದ್ದರೂ, ಅವನಿಗೆ ಸಾಕಷ್ಟು ಅಧಿಕಾರವಿತ್ತು. ಅವನ ಬಿರುದಿನ ಅರ್ಥ “ರಾಜ್ಯದ ಸಂರಕ್ಷಕನು” ಎಂದಾಗಿತ್ತು. ಒಬ್ಬ ದೇಶಾಧಿಪತಿಯು, ತನ್ನ ಪ್ರಾಂತದಲ್ಲಿ ಒಬ್ಬ ಸಾಮಂತ ರಾಜನೋಪಾದಿ ಪರಿಗಣಿಸಲ್ಪಡುತ್ತಿದ್ದನು; ಅವನಿಗೆ ಎಲ್ಲ ಅಧಿಕಾರವಿತ್ತು, ಆದರೆ ಪರಮಾಧಿಕಾರ ಮಾತ್ರ ಇರಲಿಲ್ಲ.

3, 4. ದಾರ್ಯಾವೆಷನು ದಾನಿಯೇಲನಿಗೆ ಏಕೆ ವಿಶೇಷ ಅನುಗ್ರಹವನ್ನು ತೋರಿಸಿದನು, ಮತ್ತು ಅರಸನು ಅವನನ್ನು ಯಾವ ಸ್ಥಾನಕ್ಕೆ ನೇಮಿಸಿದನು?

3 ಈ ಹೊಸ ಏರ್ಪಾಡಿನಲ್ಲಿ ದಾನಿಯೇಲನು ಯಾವ ಪಾತ್ರವನ್ನು ವಹಿಸಲಿಕ್ಕಿದ್ದನು? ಮೇದ್ಯಯನಾದ ದಾರ್ಯಾವೆಷನು, ತನ್ನ ತೊಂಬತ್ತುಗಳ ಪ್ರಾಯದಲ್ಲಿದ್ದ ಈ ವೃದ್ಧ ಯೆಹೂದಿ ಪ್ರವಾದಿಯನ್ನು ಅವನ ಸ್ಥಾನದಿಂದ ತೆಗೆದುಹಾಕಲಿದ್ದನೋ? ​ಖಂಡಿತವಾಗಿಯೂ ಇಲ್ಲ! ಬಾಬೆಲಿನ ಪತನವನ್ನು ದಾನಿಯೇಲನು ನಿಷ್ಕೃಷ್ಟವಾಗಿ ಮುಂತಿಳಿಸಿದ್ದನು ಮತ್ತು ಅಂತಹ ಒಂದು ಮುಂತಿಳಿಸುವಿಕೆಗೆ ಅಮಾನುಷ ವಿವೇಕದ ಅಗತ್ಯವಿತ್ತು ಎಂದು ದಾರ್ಯಾವೆಷನು ಗ್ರಹಿಸಿದನು ಎಂಬುದರಲ್ಲಿ ಸಂದೇಹವೇ ಇಲ್ಲ. ಅಷ್ಟುಮಾತ್ರವಲ್ಲ, ಬಾಬೆಲಿನಲ್ಲಿದ್ದ ದೇಶಭ್ರಷ್ಟರ ಬೇರೆ ಬೇರೆ ಗುಂಪುಗಳೊಂದಿಗೆ ವ್ಯವಹರಿಸುವುದರಲ್ಲಿ ದಾನಿಯೇಲನಿಗೆ ಅನೇಕ ವರ್ಷಗಳ ಅನುಭವವಿತ್ತು. ಹೊಸದಾಗಿ ಅಧೀನಮಾಡಿಕೊಂಡಿರುವ ಪಟ್ಟಣದ ಪ್ರಜೆಗಳೊಂದಿಗೆ ಶಾಂತಿಭರಿತ ಸಂಬಂಧಗಳನ್ನು ಇಟ್ಟುಕೊಳ್ಳುವ ತೀವ್ರಾಭಿಲಾಷೆ ದಾರ್ಯಾವೆಷನಿಗಿತ್ತು. ಆದುದರಿಂದ, ವಿವೇಕ ಹಾಗೂ ಅನುಭವಗಳಿದ್ದ ದಾನಿಯೇಲ​ನಂತಹ ವ್ಯಕ್ತಿಯೊಬ್ಬನು ಮಂತ್ರಿಯೋಪಾದಿ ತನ್ನ ಬಳಿಯೇ ಇರಬೇಕು ಎಂದು ದಾರ್ಯಾವೆಷನು ಬಯಸಿದ್ದಿರಬಹುದು ಎಂಬುದು ನಿಶ್ಚಯ. ಯಾವ ಸ್ಥಾನದಲ್ಲಿ?

4 ದಾರ್ಯಾವೆಷನು, ಯೆಹೂದಿ ದೇಶಭ್ರಷ್ಟನಾಗಿದ್ದ ದಾನಿಯೇಲನನ್ನು ಒಬ್ಬ ದೇಶಾಧಿ​ಪತಿಯೋಪಾದಿ ನೇಮಿಸಿರುತ್ತಿದ್ದಲ್ಲಿ, ಅದೇ ಸಾಕಷ್ಟು ಬೆಚ್ಚಿಬೀಳಿಸುವ ಸಂಗತಿಯಾಗಿರುತ್ತಿತ್ತು. ಆದರೆ, ದೇಶಾಧಿಪತಿಗಳನ್ನು ನೋಡಿಕೊಳ್ಳಲಿಕ್ಕಾಗಿ ನೇಮಿಸಲ್ಪಡುವ ಮೂವರು ಮುಖ್ಯಾಧಿಕಾರಿಗಳಲ್ಲಿ ದಾನಿಯೇಲನನ್ನು ಒಬ್ಬನನ್ನಾಗಿ ಮಾಡುವ ತನ್ನ ನಿರ್ಧಾರವನ್ನು ದಾರ್ಯಾವೆಷನು ಪ್ರಕಟಿಸಿದಾಗ ಉಂಟಾದ ಕೋಲಾಹಲವನ್ನು ಸ್ವಲ್ಪಮಟ್ಟಿಗೆ ಊಹಿಸಿಕೊಳ್ಳಿರಿ! ಅಷ್ಟುಮಾತ್ರವಲ್ಲ, ತನ್ನ ಜೊತೆ ಮುಖ್ಯಾಧಿಕಾರಿಗಳಿಗಿಂತ ತಾನು ಶ್ರೇಷ್ಠನು ಎಂಬುದನ್ನು ರುಜುಪಡಿಸುತ್ತಾ, ದಾನಿಯೇಲನು “ಅಧಿಕ ಸಮರ್ಥನೆನಿಸಿಕೊಂಡಿದ್ದನು.” ನಿಜವಾಗಿಯೂ, ಅವನಲ್ಲಿ “ಪರಮಬುದ್ಧಿ” ಇದ್ದದ್ದು ಕಂಡುಬಂತು. ದಾರ್ಯಾವೆಷನು ಅವನಿಗೆ ಪ್ರಧಾನ ಮಂತ್ರಿಯ ಸ್ಥಾನವನ್ನು ಕೊಡಲು ಸಹ ಮನಸ್ಸುಮಾಡಿದ್ದನು.​—⁠ದಾನಿಯೇಲ 6:⁠2, 3.

5. ದಾನಿಯೇಲನ ನೇಮಕವನ್ನು ನೋಡಿ ಇತರ ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು ಯಾವ ರೀತಿಯ ಪ್ರತಿಕ್ರಿಯೆ ತೋರಿಸಿದ್ದಿರಬಹುದು, ಮತ್ತು ಏಕೆ?

5 ಉಳಿದ ಮುಖ್ಯಾಧಿಕಾರಿಗಳು ಮತ್ತು ದೇಶಾಧಿಪತಿಗಳು ಕೋಪದಿಂದ ಬುಸುಗುಟ್ಟುತ್ತಿದ್ದಿರಬೇಕು. ಅಷ್ಟೇಕೆ, ಒಬ್ಬ ಮೇದ್ಯನೂ ಅಲ್ಲದ ಪಾರಸಿಯನೂ ಅಲ್ಲದ, ಅಥವಾ ರಾಜಮನೆತನದ ಸದಸ್ಯನೂ ಆಗಿರದ ದಾನಿಯೇಲನು, ತಮ್ಮ ಮೇಲೆ ಮೇಲ್ವಿಚಾರಣೆ ನಡೆಸುವ ಸ್ಥಾನದಲ್ಲಿರುವುದನ್ನು ಅವರು ಯೋಚಿಸಲೂ ಸಿದ್ಧರಿರಲಿಲ್ಲ! ತನ್ನ ಸ್ವದೇಶಿಯರನ್ನು, ತನ್ನ ಸ್ವಂತ ಕುಟುಂಬದವರನ್ನು ಕಡೆಗಣಿಸಿ, ದಾರ್ಯಾವೆಷನು ಒಬ್ಬ ಪರದೇಶಿಯನ್ನು ಅಂತಹ ಪ್ರಮುಖ ಸ್ಥಾನಕ್ಕೆ ಹೇಗೆ ನೇಮಿಸಸಾಧ್ಯವಿತ್ತು? ಈ ನೇಮಕವು ಅನ್ಯಾಯವಾಗಿ ಕಂಡುಬಂದಿದ್ದಿರಬಹುದು. ಅಷ್ಟುಮಾತ್ರವಲ್ಲ, ತಮ್ಮ ಅಕ್ರಮ ಲಾಭಸಂಪಾದನೆ ಹಾಗೂ ಭ್ರಷ್ಟತೆಯ ರೂಢಿಗಳಿಗೆ ದಾನಿಯೇಲನ ಯಥಾರ್ಥತೆಯು ಒಂದು ಅಡ್ಡಿಯಾಗಿದೆ ಎಂದು ದೇಶಾಧಿಪತಿಗಳು ಭಾವಿಸಿದರು ಎಂಬುದು ಸುಸ್ಪಷ್ಟ. ಆದರೂ, ಈ ವಿಷಯದ ಕುರಿತು ದಾರ್ಯಾವೆಷನೊಂದಿಗೆ ಮಾತಾಡಲು, ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳಿಗೆ ಸಾಕಷ್ಟು ಧೈರ್ಯವಿರಲಿಲ್ಲ. ಎಷ್ಟೆಂದರೂ, ದಾರ್ಯಾವೆಷನು ದಾನಿಯೇಲನನ್ನು ತುಂಬ ಗೌರವದಿಂದ ಕಾಣುತ್ತಿದ್ದನು.

6. ದಾನಿಯೇಲನ ಹೆಸರನ್ನು ಕೆಡಿಸಲಿಕ್ಕಾಗಿ ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು ಹೇಗೆ ಪ್ರಯತ್ನಿಸಿದರು, ಮತ್ತು ಈ ಪ್ರಯತ್ನವು ಏಕೆ ನಿಷ್ಫಲವಾಯಿತು?

6 ಆದುದರಿಂದ, ಈರ್ಷ್ಯೆಯುಳ್ಳ ಈ ರಾಜಕಾರಣಿಗಳು ತಮ್ಮೊಳಗೇ ಒಂದು ಒಳಸಂಚನ್ನು ನಡೆಸಿದರು. ಅವರು “ರಾಜ್ಯಭಾರದ ವಿಷಯವಾಗಿ ದಾನಿಯೇಲನ ಮೇಲೆ ತಪ್ಪುಹೊರಿಸುವುದಕ್ಕೆ ಸಂದರ್ಭ ಹುಡುಕಲು” ಪ್ರಯತ್ನಿಸಿದರು. ದಾನಿಯೇಲನು ತನ್ನ ಜವಾಬ್ದಾರಿಯನ್ನು ನಿರ್ವಹಿಸುವ ವಿಧದಲ್ಲಿ ಯಾವುದಾದರೂ ದೋಷವು ಇರಸಾಧ್ಯವಿತ್ತೊ? ಅವನು ಅಪ್ರಾಮಾಣಿಕನಾಗಿದ್ದನೊ? ದಾನಿಯೇಲನು ತನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದ ರೀತಿಯಲ್ಲಿ, ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು ಯಾವುದೇ ರೀತಿಯ ಅಲಕ್ಷ್ಯಭಾವನೆಯನ್ನು ಅಥವಾ ಭ್ರಷ್ಟತೆಯನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. “ಈ ದಾನಿಯೇಲನ ಮೇಲೆ ತಪ್ಪುಹೊರಿಸಲು ಇವನ ದೇವಧರ್ಮದ ಮೂಲಕವೇ ಹೊರತು ಇನ್ನಾವದರಲ್ಲಿಯೂ ನಮಗೆ ಅವಕಾಶ ದೊರೆಯದು” ಎಂದು ಅವರು ತರ್ಕಿಸಿದರು. ಆದುದರಿಂದಲೇ ಈ ಕುಟಿಲ ವ್ಯಕ್ತಿಗಳು ಒಂದು ಒಳಸಂಚನ್ನು ಯೋಜಿಸಿದರು. ಈ ಸಂಚು ದಾನಿಯೇಲನನ್ನು ಎಂದೆಂದಿಗೂ ಇಲ್ಲದಂತೆ ಮಾಡಬಹುದು ಎಂದು ಅವರು ನೆನಸಿದರು.​—⁠ದಾನಿಯೇಲ 6:​4, 5.

ಒಂದು ಮಾರಕ ಒಳಸಂಚು ಕಾರ್ಯರೂಪಕ್ಕೆ ತರಲ್ಪಟ್ಟದ್ದು

7. ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು ಅರಸನ ಬಳಿ ಯಾವ ಪ್ರಸ್ತಾಪವನ್ನು ಮಾಡಿದರು, ಮತ್ತು ಅದನ್ನು ಯಾವ ರೀತಿಯಲ್ಲಿ ಮಾಡಿದರು?

7 ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳ ಒಂದು ತಂಡವೇ ದಾರ್ಯಾವೆಷನ ಸಮ್ಮುಖದಲ್ಲಿ ‘ನೆರೆದುಬಂತು.’ ಇಲ್ಲಿ ಉಪಯೋಗಿಸಲ್ಪಟ್ಟಿರುವ ಅರಮಾಯ ಅಭಿವ್ಯಕ್ತಿಯು, ಉದ್ರೇಕದಿಂದ ಕೂಡಿದ ಕೋಲಾಹಲವನ್ನು ಅರ್ಥೈಸುತ್ತದೆ. ದಾರ್ಯಾವೆಷನ ಮುಂದೆ ತುಂಬ ತುರ್ತಿನ ಸಂಗತಿಯನ್ನು ಪ್ರಸ್ತುತಪಡಿಸಲಿಕ್ಕಾಗಿ ತಾವು ಬಂದಿದ್ದೇವೆ ಎಂಬಂತೆ ಈ ಜನರು ತೋರಿಸಿಕೊಂಡರು ಎಂಬುದು ಸುವ್ಯಕ್ತ. ತಾವು ಇದನ್ನು ನಿಶ್ಚಿತಾಭಿಪ್ರಾಯದಿಂದ ಹಾಗೂ ತತ್‌ಕ್ಷಣವೇ ಗಮನ ಕೊಡುವ ಅಗತ್ಯವುಳ್ಳ ವಿಷಯ ಎಂಬಂತಹ ರೀತಿಯಲ್ಲಿ ಪ್ರಸ್ತುತಪಡಿಸುವಲ್ಲಿ, ಅರಸನು ತಮ್ಮ ಪ್ರಸ್ತಾಪವನ್ನು ಪ್ರಶ್ನಿಸುವ ಸಂಭವವಿರುವುದಿಲ್ಲ ಎಂದು ಅವರು ಯೋಚಿಸಿದ್ದಿರಬಹುದು. ಆದುದರಿಂದ, ಅವರು ಈ ವಿಷಯವನ್ನು ನೇರವಾಗಿ ಹೇಳಿದ್ದು: “ಅರಸನೇ . . . ಯಾವನಾದರೂ ಮೂವತ್ತು ದಿನಗಳ ತನಕ ರಾಜನಾದ ನಿನಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ವಿಜ್ಞಾಪನೆ ಮಾಡಿಕೊಂಡರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು ಎಂಬ ಖಂಡಿತ​ನಿಬಂಧನೆಯನ್ನು ರಾಜಾಜ್ಞಾರೂಪವಾಗಿ ವಿಧಿಸುವದು ಒಳ್ಳೇದೆಂದು ರಾಜ್ಯದ ಸಕಲ ಮುಖ್ಯಾಧಿಕಾರಿ ನಾಯಕ ದೇಶಾಧಿಪತಿ ಮಂತ್ರಿ ಈ ಸಂಸ್ಥಾನಾಧ್ಯಕ್ಷರೂ ಆಲೋಚನೆ​ಮಾಡಿಕೊಂಡಿದ್ದಾರೆ.” *​—⁠ದಾನಿಯೇಲ 6:​6, 7.

8. (ಎ) ಪ್ರಸ್ತಾಪಿಸಲ್ಪಟ್ಟ ನಿಬಂಧನೆಯು ದಾರ್ಯಾವೆಷನ ಮನಸ್ಸಿಗೆ ಏಕೆ ಹಿಡಿಸಿದ್ದಿರಬಹುದು? (ಬಿ) ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳ ನಿಜವಾದ ಹೇತು ಯಾವುದಾಗಿತ್ತು?

8 ಮೆಸಪೊಟೇಮಿಯದ ಅರಸರನ್ನು ದೇವರೆಂದು ಪರಿಗಣಿಸಿ, ಅವರನ್ನು ಆರಾಧಿಸುವುದು ಸರ್ವಸಾಮಾನ್ಯವಾಗಿತ್ತು ಎಂದು ಐತಿಹಾಸಿಕ ದಾಖಲೆಗಳು ರುಜುಪಡಿಸುತ್ತವೆ. ಆದುದರಿಂದ, ಈ ಪ್ರಸ್ತಾಪವನ್ನು ಕೇಳಿಸಿಕೊಂಡ ದಾರ್ಯಾವೆಷನು, ತನ್ನನ್ನು ತುಂಬ ಗೌರವಿಸಲಾಗುತ್ತಿದೆ ಎಂದು ಭಾವಿಸಿದನು ಎಂಬುದರಲ್ಲಿ ಸಂದೇಹವೇ ಇಲ್ಲ. ಅದರಿಂದಾಗುವ ಲಾಭವನ್ನು ಸಹ ಅವನು ಮನಗಂಡಿದ್ದಿರಬಹುದು. ಬಾಬೆಲಿನಲ್ಲಿ ವಾಸಿಸುತ್ತಿದ್ದವರಿಗೆ, ದಾರ್ಯಾವೆಷನು ವಿದೇಶೀಯನಾಗಿದ್ದನು ಮತ್ತು ಹೊಸಬನಾಗಿದ್ದನು ಎಂಬುದು ನಿಮಗೆ ನೆನಪಿರಲಿ. ಈ ಹೊಸ ನಿಯಮವು ಅವನನ್ನು ಒಬ್ಬ ಅರಸನಾಗಿ ಸ್ಥಾಪಿಸಲು ಸಹಾಯ ಮಾಡಸಾಧ್ಯವಿತ್ತು. ಮತ್ತು ಬಾಬೆಲಿನಲ್ಲಿ ವಾಸಿಸುತ್ತಿದ್ದ ಜನಸಮುದಾಯಗಳು, ಹೊಸ ರಾಜ್ಯಭಾರಕ್ಕೆ ತಮ್ಮ ನಿಷ್ಠೆ ಹಾಗೂ ಬೆಂಬಲವನ್ನು ತೋರಿಸುವಂತೆ ಉತ್ತೇಜಿಸಸಾಧ್ಯವಿತ್ತು. ಆದರೂ, ಈ ನಿಬಂಧನೆಯನ್ನು ಪ್ರಸ್ತಾಪಿಸುವುದರಲ್ಲಿ ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳಿಗೆ ರಾಜನ ಹಿತಕ್ಷೇಮದ ಬಗ್ಗೆ ಯಾವುದೇ ಆಸಕ್ತಿಯಿರಲಿಲ್ಲ. ದಾನಿಯೇಲನನ್ನು ಸಮಸ್ಯೆಯಲ್ಲಿ ಸಿಕ್ಕಿಸುವುದೇ ಅವರ ನಿಜವಾದ ಹೇತುವಾಗಿತ್ತು. ​ಏಕೆಂದರೆ ತೆರೆದ ಕಿಟಕಿ​ಗಳುಳ್ಳ ತನ್ನ ಮಹಡಿಯ ಕೋಣೆಯಲ್ಲಿ ದಿನಕ್ಕೆ ಮೂರು ಬಾರಿ ಪ್ರಾರ್ಥಿಸುವುದು ಅವನ ಪದ್ಧತಿಯಾಗಿತ್ತು ಎಂಬುದು ಅವರಿಗೆ ಗೊತ್ತಿತ್ತು.

9. ಅಧಿಕಾಂಶ ಯೆಹೂದ್ಯೇತರರಿಗೆ ಹೊಸ ನಿಬಂಧನೆಯು ಏಕೆ ಒಂದು ಸಮಸ್ಯೆಯಾಗಿರಲಿಲ್ಲ?

9 ಪ್ರಾರ್ಥನೆಯ ಮೇಲಿನ ಈ ನಿರ್ಬಂಧವು, ಬಾಬೆಲಿನಲ್ಲಿರುವ ಎಲ್ಲ ಧಾರ್ಮಿಕ ಸಮುದಾಯಗಳಿಗೆ ಒಂದು ಸಮಸ್ಯೆಯನ್ನು ಉಂಟುಮಾಡಸಾಧ್ಯವಿತ್ತೊ? ಖಂಡಿತವಾಗಿಯೂ ಇಲ್ಲ, ಏಕೆಂದರೆ ಈ ನಿಷೇಧವು ಕೇವಲ ಒಂದು ತಿಂಗಳ ವರೆಗೆ ಮಾತ್ರ ಇರಲಿತ್ತು. ಇದಲ್ಲದೆ, ಕೆಲವು ಯೆಹೂದ್ಯೇತರರು, ಸ್ವಲ್ಪ ಕಾಲಾವಧಿಯ ವರೆಗೆ ತಮ್ಮ ಆರಾಧನೆಯನ್ನು ಮನುಷ್ಯನಿಗೆ ನೀಡುವುದನ್ನು ಒಂದು ಒಪ್ಪಂದದೋಪಾದಿ ಪರಿಗಣಿಸುವ ಸಾಧ್ಯತೆಯಿತ್ತು. ಒಬ್ಬ ಬೈಬಲ್‌ ವಿದ್ವಾಂಸನು ದಾಖಲಿಸಿದ್ದು: “ಜನಾಂಗಗಳ ಅಧಿಕಾಂಶ ಮೂರ್ತಿಪೂಜಕರಿಗೆ, ಅರಸನ ಆರಾಧನೆಯು ಒಂದು ವಿಚಿತ್ರ ಬೇಡಿಕೆಯಾಗಿರಲಿಲ್ಲ; ಆದುದರಿಂದಲೇ, ದೇವರಿಗೆ ಸಲ್ಲತಕ್ಕ ಗೌರವವನ್ನು, ವಿಜೇತನಾಗಿದ್ದ ಮೇದ್ಯಯನಾದ ದಾರ್ಯಾವೆಷನಿಗೆ ಸಲ್ಲಿಸುವಂತೆ ಬಾಬೆಲಿನವನಿಗೆ ಕರೆಕೊಡಲ್ಪಟ್ಟಾಗ, ಅವನು ಈ ಬೇಡಿಕೆಗೆ ಸುಲಭವಾಗಿ ವಿಧೇಯನಾದನು. ಇಂತಹ ಒಂದು ಬೇಡಿಕೆಯನ್ನು ನಿರಾಕರಿಸಿದ್ದು ಯೆಹೂದ್ಯನು ಮಾತ್ರವೇ.”

10. ತಮ್ಮ ಅರಸನಿಂದ ಜಾರಿಗೆ ತರಲ್ಪಟ್ಟಿದ್ದ ಒಂದು ನಿಬಂಧನೆಯನ್ನು, ಮೇದ್ಯರು ಹಾಗೂ ಪಾರಸಿಯರು ಯಾವ ರೀತಿ ಪರಿಗಣಿಸಿದರು?

10 ಏನೇ ಆಗಲಿ, ದಾರ್ಯಾವೆಷನನ್ನು ಭೇಟಿಮಾಡಿದವರು “ಈ ನಿಬಂಧನೆಯನ್ನು ವಿಧಿಸಿ ಇದು ನಿಂತುಹೋಗದೆ ಮೇದ್ಯಯರ ಮತ್ತು ಪಾರಸಿಯರ ಎಂದಿಗೂ ರದ್ದಾಗದ ಧರ್ಮವಿಧಿಗಳ ಪ್ರಕಾರ ಊರ್ಜಿತವಾಗುವಂತೆ ಶಾಸನಕ್ಕೆ ಹಸ್ತಾಕ್ಷರಮಾಡು”ವಂತೆ ​ಅವನನ್ನು ಪ್ರಚೋದಿಸಿದರು. (ದಾನಿಯೇಲ 6:⁠8) ಪುರಾತನ ಕಾಲದ ಪೂರ್ವದೇಶಗಳಲ್ಲಿ, ಕೆಲವೊಮ್ಮೆ ಅರಸನ ಚಿತ್ತವೇ ಪರಿಪೂರ್ಣವಾದದ್ದಾಗಿ ಪರಿಗಣಿಸಲ್ಪಡುತ್ತಿತ್ತು. ಇದು, ಅವನು ತಪ್ಪೇ ಮಾಡುವುದಿಲ್ಲ ಎಂಬ ಕಲ್ಪನೆಯನ್ನು ಅವರ ಮನಸ್ಸಿನಲ್ಲಿ ಅಚ್ಚೊತ್ತಿತು. ಒಂದು ನಿಯಮವು ಮುಗ್ಧ ಜನರನ್ನು ಮರಣ ದಂಡನೆಗೆ ಒಳಪಡಿಸಸಾಧ್ಯವಿರುವುದಾದರೂ, ಅದನ್ನು ಜಾರಿಯಲ್ಲಿಡಬೇಕಿತ್ತು!

11. ದಾರ್ಯಾವೆಷನ ಶಾಸನವು ದಾನಿಯೇಲನ ಮೇಲೆ ಯಾವ ಸಮಸ್ಯೆಯನ್ನು ತಂದೊಡ್ಡಲಿತ್ತು?

11 ದಾನಿಯೇಲನ ಬಗ್ಗೆ ಯೋಚಿಸದೆ, ದಾರ್ಯಾವೆಷನು ಆ ನಿಬಂಧನೆಗೆ ಸಹಿ ಹಾಕಿದನು. (ದಾನಿಯೇಲ 6:⁠9) ಹಾಗೆ ಮಾಡುವ ಮೂಲಕ ಅವನು, ತನಗೆ ಅರಿವಿಲ್ಲದೆಯೇ ತನ್ನ ಅಚ್ಚುಮೆಚ್ಚಿನ ಅಧಿಕಾರಿಯ ಮರಣದಂಡನೆಯ ಆಜ್ಞೆಗೆ ಸಹಿ ಹಾಕಿದನು. ಹೌದು, ಖಂಡಿತವಾಗಿಯೂ ಈ ಆಜ್ಞೆಯು ದಾನಿಯೇಲನಿಗೆ ಸಮಸ್ಯೆಯನ್ನು ತಂದೊಡ್ಡಲಿತ್ತು.

ಪ್ರತಿಕೂಲವಾಗಿ ತೀರ್ಪು ನೀಡುವಂತೆ ದಾರ್ಯಾವೆಷನು ಒತ್ತಾಯಕ್ಕೊಳಗಾದದ್ದು

12. (ಎ) ಹೊಸ ನಿಬಂಧನೆಯ ಕುರಿತು ದಾನಿಯೇಲನಿಗೆ ತಿಳಿದುಬಂದ ಕೂಡಲೆ ಅವನು ಏನು ಮಾಡಿದನು? (ಬಿ) ಯಾರು ದಾನಿಯೇಲನನ್ನು ನೋಡುತ್ತಿದ್ದರು, ಮತ್ತು ಏಕೆ?

12 ಸ್ವಲ್ಪದರಲ್ಲೇ ಪ್ರಾರ್ಥನೆಯ ನಿರ್ಬಂಧದ ಕುರಿತಾದ ನಿಯಮವು ದಾನಿಯೇಲನಿಗೆ ಗೊತ್ತಾಯಿತು. ಆ ಕೂಡಲೆ ಅವನು ತನ್ನ ಮನೆಯನ್ನು ಪ್ರವೇಶಿಸಿ, ಯೆರೂಸಲೇಮಿನ ಕಡೆಗೆ ತೆರೆದಿರುವ ಕಿಟಕಿಗಳಿದ್ದ ಮಹಡಿಯ ಕೋಣೆಯೊಳಕ್ಕೆ ಹೋಗುತ್ತಾನೆ. * ಅಲ್ಲಿ ದಾನಿಯೇಲನು, “ಯಥಾಪ್ರಕಾರ” ದೇವರಿಗೆ ಪ್ರಾರ್ಥಿಸಲು ಆರಂಭಿಸಿದನು. ಇಲ್ಲಿ ತಾನೊಬ್ಬನೇ ಇದ್ದೇನೆಂದು ದಾನಿಯೇಲನು ನೆನಸಿದ್ದಿರಬಹುದು, ಆದರೆ ಒಳಸಂಚುಗಾರರು ಅವನು ಪ್ರಾರ್ಥಿಸುತ್ತಿರುವುದನ್ನು ನೋಡುತ್ತಾ ಇದ್ದರು. ಇದ್ದಕ್ಕಿದ್ದಂತೆ, ಈ ಮುಂಚೆ ಅವರು ದಾರ್ಯಾವೆಷನನ್ನು ಸಮೀಪಿಸಲು ಬಂದಾಗ ಎಷ್ಟು ಉದ್ರೇಕಿತರಾಗಿದ್ದರೋ ಅಷ್ಟೇ ಉದ್ರೇಕಿತ ಸ್ಥಿತಿಯಲ್ಲಿ “ಗುಂಪಾಗಿ ಕೂಡಿ” ಒಳಬಂದರು ಎಂಬುದರಲ್ಲಿ ಸಂಶಯವೇ ಇಲ್ಲ. ದಾನಿಯೇಲನು “ದೇವರ ಸಮ್ಮುಖದಲ್ಲಿ ಪ್ರಾರ್ಥಿಸಿ ವಿಜ್ಞಾಪಿಸುವದನ್ನು” ಈಗ ಅವರು ಕಣ್ಣಾರೆ ಕಂಡರು. (ದಾನಿಯೇಲ 6:​10, 11) ಅರಸನ ಮುಂದೆ ದಾನಿಯೇಲನ ಮೇಲೆ ದೋಷಾರೋಪವನ್ನು ಹೊರಿಸಲಿಕ್ಕಾಗಿ ಬೇಕಾಗಿದ್ದಂತಹ ಎಲ್ಲ ಪುರಾವೆ ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳಿಗೆ ಸಿಕ್ಕಿತ್ತು.

13. ದಾನಿಯೇಲನ ವೈರಿಗಳು ಅರಸನ ಬಳಿಗೆ ಹೋಗಿ ಏನೆಂದು ವರದಿಸಿದರು?

13 ದಾನಿಯೇಲನ ವೈರಿಗಳು ಕಪಟೋಪಾಯದಿಂದ ದಾರ್ಯಾವೆಷನ ಬಳಿ ಹೀಗೆ ​ಕೇಳಿದರು: “ರಾಜನೇ, ಯಾವನಾದರೂ ಮೂವತ್ತು ದಿನಗಳ ತನಕ ನಿನಗೆ ಹೊರತು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ವಿಜ್ಞಾಪನೆಮಾಡಿದರೆ ಅವನು ಸಿಂಹಗಳ ಗವಿಯಲ್ಲಿ ಹಾಕಲ್ಪಡಬೇಕು ಎಂಬ ನಿಬಂಧನೆಗೆ ರುಜುಹಾಕಿದಿಯಲ್ಲಾ”? ಅದಕ್ಕೆ ದಾರ್ಯಾವೆಷನು “ಹೌದು, ಮೇದ್ಯಯರ ಮತ್ತು ಪಾರಸಿಯರ ರದ್ದಾಗದ ಧರ್ಮವಿಧಿಗಳಂತೆ ಇದು ಸ್ಥಿರ” ಎಂದು ಉತ್ತರಿಸಿದನು. ಈಗ ಒಳಸಂಚುಗಾರರು ಕೂಡಲೆ ವಿಷಯವನ್ನು ನೇರವಾಗಿ ತಿಳಿಸುತ್ತಾರೆ. “ರಾಜನೇ, ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ಒಬ್ಬನಾದ ಆ ದಾನಿಯೇಲನು ನಿನ್ನನ್ನಾಗಲಿ ನಿನ್ನ ಹಸ್ತಾಕ್ಷರದ ನಿಬಂಧನೆಯನ್ನಾಗಲಿ ಲಕ್ಷ್ಯಕ್ಕೆ ತಾರದೆ ದಿನಕ್ಕೆ ಮೂರಾವರ್ತಿ ಪ್ರಾರ್ಥಿಸಿಕೊಳ್ಳುತ್ತಾನೆ.”​—⁠ದಾನಿಯೇಲ ​6:​12, 13.

14. ಸಾಕ್ಷ್ಯಾಧಾರಕ್ಕನುಸಾರ, ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು ದಾನಿಯೇಲನ ಬಗ್ಗೆ “ಯೆಹೂದದಿಂದ ಸೆರೆಯಾಗಿ ತಂದವನು” ಎಂದು ಏಕೆ ಹೇಳಿದರು?

14 ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು, ‘ಯೆಹೂದದಿಂದ ಸೆರೆಯಾಗಿ ತಂದವರಲ್ಲಿ ಒಬ್ಬನು’ ಎಂದು ದಾನಿಯೇಲನ ಬಗ್ಗೆ ಹೇಳಿರುವುದು ಅರ್ಥವತ್ತಾಗಿದೆ. ದಾರ್ಯಾವೆಷನು ಯಾರಿಗೆ ಒಂದು ಉನ್ನತ ಪದವಿಯನ್ನು ಕೊಟ್ಟಿದ್ದನೋ ಆ ದಾನಿಯೇಲನು, ವಾಸ್ತವದಲ್ಲಿ ಕೇವಲ ಒಬ್ಬ ಯೆಹೂದಿ ದಾಸನಾಗಿದ್ದನು ಎಂಬುದನ್ನು ಒತ್ತಿ​ಹೇಳಲು ಅವರು ಬಯಸಿದರು ಎಂಬುದು ಚೆನ್ನಾಗಿ ವ್ಯಕ್ತವಾಗುತ್ತದೆ. ಹೀಗಿರುವುದರಿಂದ, ಅರಸನಿಗೆ ಅವನ ಬಗ್ಗೆ ಎಷ್ಟೇ ಗೌರವವಿದ್ದರೂ, ಖಂಡಿತವಾಗಿಯೂ ದಾನಿಯೇಲನು ಈ ನಿಯಮಕ್ಕೆ ಮಾತ್ರ ವಿಧೇಯನಾಗಲೇಬೇಕಾಗಿತ್ತು ಎಂದು ಅವರು ನಂಬಿದ್ದರು!

15. (ಎ) ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು ತನ್ನ ಬಳಿಗೆ ತಂದಿದ್ದ ಸುದ್ದಿಯನ್ನು ಕೇಳಿ ದಾರ್ಯಾವೆಷನು ಹೇಗೆ ಪ್ರತಿಕ್ರಿಯಿಸಿದನು? (ಬಿ) ದಾನಿಯೇಲನ ಬಗ್ಗೆ ಇದ್ದ ತಮ್ಮ ತಿರಸ್ಕಾರ ಭಾವವನ್ನು ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು ಹೇಗೆ ವ್ಯಕ್ತಪಡಿಸಿದರು?

15 ತಮ್ಮ ಚತುರ ಪತ್ತೇದಾರಿ ಕೆಲಸಕ್ಕಾಗಿ ಅರಸನು ತಮಗೆ ಬಹುಮಾನ ನೀಡುತ್ತಾನೆ ಎಂದು ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು ನಿರೀಕ್ಷಿಸಿದ್ದಿರಬಹುದು. ಹಾಗಿರುವಲ್ಲಿ, ಅವರಿಗೆ ಒಂದು ಆಶ್ಚರ್ಯವು ಕಾದಿತ್ತು. ಅವರು ತನಗೆ ತಿಳಿಸಿದ ವಿಷಯವನ್ನು ಕೇಳಿ ದಾರ್ಯಾವೆಷನು ತುಂಬ ತಳಮಳಗೊಂಡನು. ದಾನಿಯೇಲನ ಮೇಲೆ ಕೋಪೋದ್ರಿಕ್ತನಾಗಿ, ಆ ಕೂಡಲೆ ಅವನನ್ನು ಸಿಂಹಗಳ ಗವಿಯಲ್ಲಿ ಹಾಕಿಸುವುದಕ್ಕೆ ಬದಲಾಗಿ, ಅವನನ್ನು ಆಪತ್ತಿನಿಂದ ಕಾಪಾಡಲಿಕ್ಕಾಗಿ ದಾರ್ಯಾವೆಷನು ಇಡೀ ದಿನ ಪ್ರಯಾಸಪಟ್ಟನು. ಆದರೆ ಅವನ ಪ್ರಯತ್ನಗಳು ನಿಷ್ಫಲವಾದವು. ಸ್ವಲ್ಪದರಲ್ಲಿ ಒಳಸಂಚುಗಾರರು ಹಿಂದಿರುಗಿದ್ದರು, ಮತ್ತು ನಿರ್ಲಜ್ಜೆಯಿಂದ ಅವರು ದಾನಿಯೇಲನನ್ನು ಶಿಕ್ಷೆಗೊಳಪಡಿಸುವಂತೆ ತಗಾದೆಮಾಡಿದರು.​—⁠ದಾನಿಯೇಲ 6:​14, 15.

16. (ಎ) ದಾರ್ಯಾವೆಷನು ದಾನಿಯೇಲನ ದೇವರನ್ನು ಏಕೆ ಗೌರವಿಸುತ್ತಿದ್ದನು? (ಬಿ) ದಾನಿಯೇಲನ ವಿಷಯದಲ್ಲಿ ದಾರ್ಯಾವೆಷನಿಗೆ ಯಾವ ನಿರೀಕ್ಷೆಯಿತ್ತು?

16 ಈ ವಿಷಯದಲ್ಲಿ ತನಗೆ ಯಾವ ಆಯ್ಕೆಯೂ ಇಲ್ಲವೆಂಬುದು ದಾರ್ಯಾವೆಷನ ಗಮನಕ್ಕೆ ಬಂತು. ಜಾರಿಗೆ ತಂದಿದ್ದ ನಿಯಮವನ್ನು ರದ್ದುಪಡಿಸಸಾಧ್ಯವಿರಲಿಲ್ಲ, ಅಥವಾ ದಾನಿಯೇಲನ “ತಪ್ಪನ್ನು” ಮನ್ನಿಸಸಾಧ್ಯವಿರಲಿಲ್ಲ. ದಾರ್ಯಾವೆಷನು ದಾನಿಯೇಲನಿಗೆ “ನೀನು ನಿತ್ಯವೂ ಭಜಿಸುವ ದೇವರು ನಿನ್ನನ್ನುದ್ಧರಿಸಲಿ” ಎಂದಷ್ಟೇ ಹೇಳಸಾಧ್ಯವಿತ್ತು. ದಾರ್ಯಾವೆಷನು ದಾನಿಯೇಲನ ದೇವರನ್ನು ತುಂಬ ಗೌರವಭಾವದಿಂದ ಕಾಣುತ್ತಿದ್ದಿರಬಹುದು. ಬಾಬೆಲಿನ ಪತನವನ್ನು ಮುಂತಿಳಿಸುವ ಸಾಮರ್ಥ್ಯವನ್ನು ಯೆಹೋವನೇ ದಾನಿಯೇಲನಿಗೆ ಕೊಟ್ಟಿದ್ದನು. ಇತರ ಮುಖ್ಯಾಧಿಕಾರಿಗಳಿಗಿಂತ ದಾನಿಯೇಲನನ್ನು ಭಿನ್ನವಾಗಿ ಗುರುತಿಸುವಂತೆ ಮಾಡಿದ “ಪರಮಬುದ್ಧಿ”ಯನ್ನು ಸಹ ದೇವರು ಅವನಿಗೆ ಕೊಟ್ಟಿದ್ದನು. ಅನೇಕ ದಶಕಗಳ ಮುಂಚೆ ಇದೇ ದೇವರು ಮೂವರು ಇಬ್ರಿಯ ಯುವಕರನ್ನು ಬೆಂಕಿಯ ಆವಿಗೆಯೊಳಗಿಂದ ರಕ್ಷಿಸಿದ್ದನು ಎಂಬುದು ಸಹ ದಾರ್ಯಾವೆಷನಿಗೆ ಗೊತ್ತಿದ್ದಿರಬಹುದು. ತಾನೇ ಸಹಿಮಾಡಿದ್ದ ನಿಬಂಧನೆಯನ್ನು ಬದಲಾಯಿಸಲು ದಾರ್ಯಾವೆಷನು ಅಸಮರ್ಥನಾಗಿದ್ದರಿಂದ, ಈಗ ಯೆಹೋವನೇ ದಾನಿಯೇಲನನ್ನು ಕಾಪಾಡುವನು ಎಂದು ಅರಸನು ನಿರೀಕ್ಷಿಸಿರುವ ಸಾಧ್ಯತೆಯಿದೆ. ಆದುದರಿಂದ, ದಾನಿಯೇಲನನ್ನು ಸಿಂಹಗಳ ಗವಿಯೊಳಗೆ ಹಾಕಲಾಯಿತು. * ತದನಂತರ, “ಬಂಡೆಯನ್ನು ತಂದು ಗವಿಯ ಬಾಯನ್ನು ಮುಚ್ಚಿದರು; ದಾನಿಯೇಲನ ಗತಿಯು ಬೇರೆಯಾಗದಂತೆ ರಾಜನು ತನ್ನ ಮುದ್ರೆಯಿಂದಲೂ ತನ್ನ ಮುಖಂಡರ ಮುದ್ರೆಯಿಂದಲೂ ಅದಕ್ಕೆ ಮೊಹರುಮಾಡಿದನು.”​—⁠ದಾನಿಯೇಲ 6:⁠16, 17.

ಘಟನೆಗಳ ನಾಟಕೀಯ ಬದಲಾವಣೆ

17, 18. (ಎ) ದಾನಿಯೇಲನ ಸನ್ನಿವೇಶವನ್ನು ನೋಡಿ ದಾರ್ಯಾವೆಷನು ತುಂಬ ಮನ​ಗುಂದಿದ್ದನು ಎಂಬುದನ್ನು ಯಾವುದು ತೋರಿಸುತ್ತದೆ? (ಬಿ) ಮಾರನೆಯ ದಿನ ಮುಂಜಾವದಲ್ಲೇ ಅರಸನು ಸಿಂಹಗಳ ಗವಿಯ ಬಳಿಗೆ ಬಂದಾಗ ಏನು ಸಂಭವಿಸಿತು?

17 ಬಹಳ ಖಿನ್ನನಾದ ದಾರ್ಯಾವೆಷನು ತನ್ನ ಅರಮನೆಗೆ ಹಿಂದಿರುಗಿದನು. ತನ್ನ ಮುಂದೆ ಅವನು ಯಾವುದೇ ಸಂಗೀತಗಾರರನ್ನು ಬರಮಾಡಿಕೊಳ್ಳಲಿಲ್ಲ, ಏಕೆಂದರೆ ಅವನು ಮನೋರಂಜನೆಯನ್ನು ಅಪೇಕ್ಷಿಸುವಂತಹ ಮನಃಸ್ಥಿತಿಯಲ್ಲಿರಲಿಲ್ಲ. ಬದಲಾಗಿ, ದಾರ್ಯಾವೆಷನು ಉಪವಾಸಮಾಡುತ್ತಾ, ಇಡೀ ರಾತ್ರಿ ಎಚ್ಚರವಾಗೇ ಇದ್ದನು. “ಅವನಿಗೆ ನಿದ್ರೆ ತಪ್ಪಿತು.” ಮಾರನೆಯ ದಿನ ಅವನು ಮುಂಜಾವದಲ್ಲೇ ಎದ್ದು ಅವಸರದಿಂದ ಸಿಂಹಗಳ ಗವಿಯ ಬಳಿಗೆ ಧಾವಿಸಿದನು. ಅವನು ದುಃಖಧ್ವನಿಯಿಂದ ಕೂಗಿ ಹೇಳಿದ್ದು: “ದಾನಿಯೇಲನೇ, ಜೀವಸ್ವರೂಪನಾದ ದೇವರ ಸೇವಕನೇ, ನೀನು ನಿತ್ಯವೂ ಭಜಿಸುವ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಉದ್ಧರಿಸಶಕ್ತನಾದನೋ”? (ದಾನಿಯೇಲ 6:​18-20) ಅವನಿಗೆ ಆಶ್ಚರ್ಯವಾಗುವಂತೆ​—⁠ಹಾಗೂ ಮನಸ್ಸಿಗೆ ನೆಮ್ಮದಿ ಕೊಡುತ್ತಾ​—⁠ಗವಿಯಿಂದ ಉತ್ತರ ಬಂತು!

18 “ಅರಸೇ, ಚಿರಂಜೀವಿಯಾಗಿರು!” ಎಂಬ ಗೌರವಪೂರ್ಣ ಅಭಿನಂದನೆಯ ಮೂಲಕ ದಾನಿಯೇಲನು, ಅರಸನ ಕಡೆಗೆ ಯಾವುದೇ ರೀತಿಯ ದ್ವೇಷದ ಭಾವನೆಗಳನ್ನು ತಾನು ಮನಸ್ಸಿನಲ್ಲಿ ಬೆಳೆಸಿಕೊಳ್ಳಲಿಲ್ಲ ಎಂಬುದನ್ನು ತೋರಿಸಿಕೊಟ್ಟನು. ತನಗೆ ಕೊಡಲ್ಪಟ್ಟಿರುವ ಹಿಂಸೆಯ ನಿಜವಾದ ಮೂಲನು ದಾರ್ಯಾವೆಷನಲ್ಲ, ತನ್ನ ಮೇಲೆ ಅಸೂಯೆಗೊಂಡಿರುವ ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳೇ ಎಂಬುದು ಅವನಿಗೆ ಗೊತ್ತಿತ್ತು. (ಹೋಲಿಸಿರಿ ಮತ್ತಾಯ 5:44; ಅ. ಕೃತ್ಯಗಳು 7:60.) ದಾನಿಯೇಲನು ಮುಂದುವರಿಸಿದ್ದು: “ನನ್ನ ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು; ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ; ಏಕೆಂದರೆ ಆತನ ದೃಷ್ಟಿಗೆ ನಾನು ನಿರ್ಮಲ​ನಾಗಿ ಕಂಡುಬಂದೆನು, ರಾಜನಾದ ನಿನಗೂ ಯಾವ ದ್ರೋಹವನ್ನೂ ಮಾಡಲಿಲ್ಲ.”​—⁠ದಾನಿಯೇಲ 6:​21, 22.

19. ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳಿಂದ ದಾರ್ಯಾವೆಷನು ಹೇಗೆ ಮೋಸಗೊಳಿಸಲ್ಪಟ್ಟಿದ್ದನು ಹಾಗೂ ಸ್ವಾರ್ಥಪರ ಉದ್ದೇಶಕ್ಕಾಗಿ ಉಪಯೋಗಿಸಲ್ಪಟ್ಟಿದ್ದನು?

19 ಆ ಮಾತುಗಳು ದಾರ್ಯಾವೆಷನ ಮನಸ್ಸಾಕ್ಷಿಯನ್ನು ಎಷ್ಟು ಚುಚ್ಚಿದ್ದಿರಬೇಕು! ಸಿಂಹಗಳ ಗವಿಯಲ್ಲಿ ಹಾಕಲ್ಪಡುವುದಕ್ಕೆ ತಕ್ಕದಾದ ಯಾವ ತಪ್ಪನ್ನೂ ದಾನಿಯೇಲನು ಮಾಡಿರಲಿಲ್ಲ ಎಂಬ ಸತ್ಯವು ಅವನಿಗೆ ತಿಳಿದಿತ್ತು. ದಾನಿಯೇಲನನ್ನು ಕೊಲ್ಲಿಸಲಿಕ್ಕಾಗಿ ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು ಈ ಒಳಸಂಚನ್ನು ಹೂಡಿದ್ದರು ಮತ್ತು ತಮ್ಮ ಸ್ವಾರ್ಥಪರ ಗುರಿಗಳನ್ನು ಸಾಧಿಸಲಿಕ್ಕಾಗಿ ಅರಸನನ್ನು ಉಪಯೋಗಿಸಿದ್ದರು ಎಂಬುದು ದಾರ್ಯಾವೆಷನಿಗೆ ಚೆನ್ನಾಗಿ ಗೊತ್ತಿತ್ತು. “ರಾಜ್ಯದ ಸಕಲ ಮುಖ್ಯಾಧಿಕಾರಿಗಳು” ಶಾಸನವನ್ನು ಜಾರಿಗೆ ತರುವಂತೆ ಶಿಫಾರಸ್ಸು ಮಾಡಿದ್ದರು ಎಂದು ಅವರು ಒತ್ತಾಯಪೂರ್ವಕವಾಗಿ ಹೇಳುವ ಮೂಲಕ, ಈ ವಿಷಯದ ಬಗ್ಗೆ ದಾನಿಯೇಲನೊಂದಿಗೆ ಸಹ ಮಾತಾಡಲಾಗಿತ್ತು ಎಂಬರ್ಥ ಬರುವಂತೆ ಮಾಡಿದರು. (ಓರೆಅಕ್ಷರಗಳು ನಮ್ಮವು.) ಆ ಮೇಲೆ ದಾರ್ಯಾವೆಷನು ಈ ಕುಟಿಲ ವ್ಯಕ್ತಿಗಳಿಗೆ ಬುದ್ಧಿಕಲಿಸಲಿಕ್ಕಿದ್ದನು. ಆದರೂ, ಅದಕ್ಕೆ ಮೊದಲು, ದಾನಿಯೇಲನನ್ನು ಸಿಂಹಗಳ ಗವಿಯಿಂದ ಮೇಲಕ್ಕೆತ್ತುವಂತೆ ಅವನು ಅಪ್ಪಣೆಕೊಟ್ಟನು. ಅದ್ಭುತಕರವಾಗಿ, ದಾನಿಯೇಲನಿಗೆ ಒಂದೇ ಒಂದು ಪರಚುಗಾಯವೂ ಆಗಿರಲಿಲ್ಲ!​—⁠ದಾನಿಯೇಲ 6:⁠23.

20. ದಾನಿಯೇಲನ ಹಗೆಸಾಧಕ ಶತ್ರುಗಳಿಗೆ ಏನಾಯಿತು?

20 ಈಗ ದಾನಿಯೇಲನು ಸುರಕ್ಷಿತನಾಗಿದ್ದುದರಿಂದ, ದಾರ್ಯಾವೆಷನು ಗಮನ ಹರಿಸಬೇಕಾದ ಇನ್ನೊಂದು ವಿಚಾರವಿತ್ತು. “ಅನಂತರ ರಾಜನು ಆಜ್ಞಾಪಿಸಲು ದಾನಿಯೇಲನ ಮೇಲೆ ದೂರುಹೊರಿಸಿದವರನ್ನು ತಂದು ಅವರನ್ನೂ ಅವರ ಹೆಂಡತಿಮಕ್ಕಳನ್ನೂ ಸಿಂಹಗಳ ಗವಿಯಲ್ಲಿ ಹಾಕಿಬಿಟ್ಟರು; ಅವರು ಗವಿಯ ಅಡಿಯನ್ನು ಮುಟ್ಟುವದರೊಳಗೆ ಸಿಂಹಗಳು ಅವರ ಮೇಲೆ ಹಾರಿ ಅವರ ಎಲ್ಲಾ ಎಲುಬುಗಳನ್ನು ಚೂರುಚೂರು ಮಾಡಿದವು.” *​—⁠ದಾನಿಯೇಲ 6:⁠24.

21. ತಪ್ಪಿತಸ್ಥರ ಕುಟುಂಬಗಳೊಂದಿಗೆ ವ್ಯವಹರಿಸುವ ವಿಷಯದಲ್ಲಿ, ಮೋಶೆಯ ಧರ್ಮಶಾಸ್ತ್ರ ಹಾಗೂ ಕೆಲವು ಪುರಾತನ ಸಂಸ್ಕೃತಿಗಳ ನಿಯಮಗಳ ನಡುವೆ ಯಾವ ವ್ಯತ್ಯಾಸವಿತ್ತು?

21 ಕೇವಲ ಒಳಸಂಚುಗಾರರನ್ನು ಮಾತ್ರವಲ್ಲ, ಅವರ ಹೆಂಡತಿಮಕ್ಕಳನ್ನೂ ಮರಣ ದಂಡನೆಗೆ ಒಳಪಡಿಸಿದ್ದು, ತುಂಬ ಕಠೋರವೆಂದು ತೋರಬಹುದು. ಇದಕ್ಕೆ ವಿರುದ್ಧವಾಗಿ, ಪ್ರವಾದಿಯಾದ ಮೋಶೆಯ ಮೂಲಕವಾಗಿ ದೇವರು ಕೊಟ್ಟ ಧರ್ಮಶಾಸ್ತ್ರವು ಹೀಗೆ ಆಜ್ಞೆ ವಿಧಿಸಿತ್ತು: “ಮಕ್ಕಳ ಪಾಪದ ದೆಸೆಯಿಂದ ತಂದೆಗೂ ತಂದೆಯ ಪಾಪದ ದೆಸೆಯಿಂದ ಮಕ್ಕಳಿಗೂ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪಫಲವನ್ನು ತಾನೇ ಅನುಭವಿಸಬೇಕು.” (ಧರ್ಮೋಪದೇಶಕಾಂಡ 24:16) ಆದರೂ, ಕೆಲವು ಪುರಾತನ ಸಂಸ್ಕೃತಿಗಳಲ್ಲಿ, ಒಂದು ಗಂಭೀರ ದುಷ್ಕೃತ್ಯವು ನಡಿಸಲ್ಪಟ್ಟಾಗ, ತಪ್ಪಿತಸ್ಥನೊಂದಿಗೆ ಅವನ ಕುಟುಂಬ ಸದಸ್ಯರನ್ನೂ ವಧಿಸುವುದು ಸರ್ವಸಾಮಾನ್ಯವಾಗಿತ್ತು. ಸಮಯಾನಂತರ ಆ ಕುಟುಂಬದ ಸದಸ್ಯರು ಸೇಡು ತೀರಿಸಿಕೊಳ್ಳಲು ಶಕ್ತರಾಗದಂತೆ ಈ ರೀತಿ ಮಾಡಲಾಗುತ್ತಿತ್ತೋ ಏನೋ. ಆದರೂ, ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳ ಕುಟುಂಬದವರ ವಿರುದ್ಧ ನಡೆಸಲ್ಪಟ್ಟ ಈ ಕೃತ್ಯಕ್ಕೆ, ಖಂಡಿತವಾಗಿಯೂ ದಾನಿಯೇಲನು ಕಾರಣನಾಗಿರಲಿಲ್ಲ. ಬಹುಶಃ ಈ ದುಷ್ಟ ಜನರು ತಮ್ಮ ಕುಟುಂಬಗಳ ಮೇಲೆ ಬರಮಾಡಿಕೊಂಡಿದ್ದ ವಿಪತ್ತನ್ನು ಕಂಡು ಅವನು ತುಂಬ ಸಂಕಟಪಟ್ಟಿದ್ದಿರಬೇಕು.

22. ದಾರ್ಯಾವೆಷನು ಯಾವ ಹೊಸ ಘೋಷಣೆಯನ್ನು ಜಾರಿಗೆ ತಂದನು?

22 ಒಳಸಂಚು ನಡೆಸುತ್ತಿದ್ದ ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು ಇಲ್ಲವಾದರು. ದಾರ್ಯಾವೆಷನು ಒಂದು ಘೋಷಣೆಯನ್ನು ಮಾಡಿಸಿದನು. ಅದು ಹೀಗಿತ್ತು: “ನಾನಾಳುವ ರಾಜ್ಯದವರೆಲ್ಲರೂ ದಾನಿಯೇಲನ ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕೆಂದು ಆಜ್ಞಾಪಿಸುತ್ತೇನೆ; ಆತನೇ ಜೀವಸ್ವರೂಪನಾದ ಸನಾತನದೇವರು, ಆತನ ರಾಜ್ಯವು ಎಂದಿಗೂ ಅಳಿಯದು, ಆತನ ಆಳಿಕೆಯು ಶಾಶ್ವತವಾಗಿರುವದು; ಆತನು ಉದ್ಧರಿಸುವವನೂ ರಕ್ಷಿಸುವವನೂ ಭೂಮ್ಯಾಕಾಶಗಳಲ್ಲಿ ಅದ್ಭುತಮಹತ್ವಗಳನ್ನು ನಡಿಸುವವನೂ ಆಗಿದ್ದಾನೆ; ಆತನೇ ದಾನಿಯೇಲನನ್ನು ಸಿಂಹಗಳ ಕೈಯಿಂದ ತಪ್ಪಿಸಿದನು.”​—⁠ದಾನಿಯೇಲ 6:​25-27.

ಅಚಲವಾಗಿ ದೇವರ ಸೇವೆಮಾಡಿರಿ

23. ತನ್ನ ಐಹಿಕ ಕೆಲಸದ ವಿಷಯದಲ್ಲಿ ದಾನಿಯೇಲನು ಯಾವ ಮಾದರಿಯನ್ನಿಟ್ಟನು, ಮತ್ತು ನಾವು ಸಹ ಅವನಂತಿರಸಾಧ್ಯವಿದೆ ಹೇಗೆ?

23 ದೇವರ ಆಧುನಿಕ ದಿನದ ಎಲ್ಲ ಸೇವಕರಿಗೆ ದಾನಿಯೇಲನು ಒಂದು ಅತ್ಯುತ್ತಮ ಮಾದರಿಯನ್ನಿಟ್ಟನು. ಅವನ ನಡತೆಯು ಯಾವಾಗಲೂ ನಿರ್ದೋಷವಾಗಿತ್ತು. ತನ್ನ ಐಹಿಕ ಕೆಲಸದಲ್ಲಿ, ದಾನಿಯೇಲನು ‘ನಂಬಿಗಸ್ತನಾಗಿದ್ದನು ಮತ್ತು ತಪ್ಪುಹೊರಿಸುವ ಯಾವ ಸಂದರ್ಭವೂ ಯಾವ ತಪ್ಪೂ ಅವನಲ್ಲಿ ಕಂಡುಬರಲಿಲ್ಲ.’ (ದಾನಿಯೇಲ 6:⁠4) ತದ್ರೀತಿಯಲ್ಲಿ, ತನ್ನ ಉದ್ಯೋಗದ ಸಂಬಂಧದಲ್ಲಿ ಕ್ರೈಸ್ತನೊಬ್ಬನು ಕಾರ್ಯತತ್ಪರನಾಗಿರಬೇಕು. ಇದರ ಅರ್ಥ, ಅವನು ಪ್ರಾಪಂಚಿಕ ಐಶ್ವರ್ಯವನ್ನು ಅತ್ಯಾತುರದಿಂದ ಬೆನ್ನಟ್ಟುವ ಒಬ್ಬ ವ್ಯಕ್ತಿಯಾಗಿರಬೇಕು ಅಥವಾ ತನ್ನ ವ್ಯಾಪಾರವನ್ನು ಹೆಚ್ಚಿಸಲಿಕ್ಕಾಗಿ ಇತರರ ಹಿತಕ್ಷೇಮವನ್ನು ಅಲಕ್ಷಿಸುವ ಒಬ್ಬ ಸ್ಪರ್ಧಾಳುವಾಗಿರಬೇಕು ಎಂಬುದಲ್ಲ. (1 ತಿಮೊಥೆಯ 6:10) ಕ್ರೈಸ್ತನೊಬ್ಬನು ತನ್ನ ಐಹಿಕ ಹಂಗುಗಳನ್ನು ಪ್ರಾಮಾಣಿಕತೆಯಿಂದ ಹಾಗೂ “ಯೆಹೋವನಿಗೋಸ್ಕರ” (NW) ಎಂಬಂತೆ ಮನಃಪೂರ್ವಕವಾಗಿ ಪೂರೈಸುವುದನ್ನು ಶಾಸ್ತ್ರವಚನಗಳು ಅಗತ್ಯಪಡಿಸುತ್ತವೆ.​—⁠ಕೊಲೊಸ್ಸೆ 3:​22, 23; ತೀತ 2:​7, 8; ಇಬ್ರಿಯ 13:⁠18.

24. ಆರಾಧನೆಯ ವಿಷಯದಲ್ಲಿ ತಾನು ಒಪ್ಪಂದವನ್ನು ಮಾಡಿಕೊಳ್ಳುವುದೇ ಇಲ್ಲ ಎಂಬುದನ್ನು ದಾನಿಯೇಲನು ಹೇಗೆ ರುಜುಪಡಿಸಿದನು?

24 ಆರಾಧನೆಯ ವಿಷಯದಲ್ಲಿಯಾದರೋ ದಾನಿಯೇಲನು ಒಪ್ಪಂದವನ್ನು ಮಾಡಿಕೊಳ್ಳಲೇ ಇಲ್ಲ. ಅವನ ಪ್ರಾರ್ಥನಾ ಪದ್ಧತಿಯು ಎಲ್ಲರಿಗೂ ಗೊತ್ತಿದ್ದ ವಿಚಾರವಾಗಿತ್ತು. ಅಷ್ಟುಮಾತ್ರವಲ್ಲ, ದಾನಿಯೇಲನು ತನ್ನ ಆರಾಧನೆಯನ್ನು ಒಂದು ಗಂಭೀರ ವಿಷಯವಾಗಿ ಪರಿಗಣಿಸುತ್ತಿದ್ದನು ಎಂಬುದು ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳಿಗೆ ಚೆನ್ನಾಗಿ ತಿಳಿದಿತ್ತು. ವಾಸ್ತವದಲ್ಲಿ, ಒಂದು ನಿಬಂಧನೆಯು ಇದನ್ನು ನಿಷೇಧಿಸಿದರೂ, ಅವನು ತನ್ನ ನಿಯತಕ್ರಮವನ್ನು ಬಿಟ್ಟುಬಿಡುವುದಿಲ್ಲ ಎಂಬುದನ್ನು ಅವರು ಮನಗಂಡಿದ್ದರು. ಪ್ರಸ್ತುತ ದಿನದ ಕ್ರೈಸ್ತರಿಗೆ ಎಂತಹ ಅತ್ಯುತ್ತಮ ಮಾದರಿ! ಅವರು ಸಹ ದೇವರ ಆರಾಧನೆಗೆ ಪ್ರಥಮ ಸ್ಥಾನವನ್ನು ಕೊಡುತ್ತಾರೆಂಬ ಪ್ರಖ್ಯಾತಿ ಪಡೆದಿದ್ದಾರೆ. (ಮತ್ತಾಯ 6:33) ಇದು ಹೊರಗಿನವರಿಗೆ ಸುವ್ಯಕ್ತವಾಗುವಂತಿರಬೇಕು, ಏಕೆಂದರೆ ತನ್ನ ಹಿಂಬಾಲಕರಿಗೆ ಯೇಸು ಆಜ್ಞಾಪಿಸಿದ್ದು: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ. ಹೀಗಾದರೆ ಅವರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡುವರು.”​—⁠ಮತ್ತಾಯ 5:⁠16.

25, 26. (ಎ) ದಾನಿಯೇಲನ ಕೃತ್ಯದ ಕುರಿತು ಕೆಲವರು ಯಾವ ತೀರ್ಮಾನಕ್ಕೆ ಬರಬಹುದು? (ಬಿ) ದಾನಿಯೇಲನು ತನ್ನ ನಿಯತಕ್ರಮದಲ್ಲಿ ಮಾಡುವ ಯಾವುದೇ ಬದಲಾವಣೆಯನ್ನು, ಒಪ್ಪಂದ ಮಾಡಿಕೊಳ್ಳುವುದಕ್ಕೆ ಸರಿಸಮಾನವಾಗಿದೆಯೆಂದು ಏಕೆ ಪರಿಗಣಿಸಿದನು?

25 ದಾನಿಯೇಲನು 30 ದಿನಗಳ ವರೆಗೆ ಯೆಹೋವನಿಗೆ ರಹಸ್ಯವಾಗಿ ಪ್ರಾರ್ಥಿಸುವ ಮೂಲಕ ಆ ಹಿಂಸೆಯಿಂದ ತಪ್ಪಿಸಿಕೊಳ್ಳಸಾಧ್ಯವಿತ್ತು ಎಂದು ಕೆಲವರು ಹೇಳ​ಬಹುದು. ಏನೇ ಆದರೂ, ದೇವರು ನಮ್ಮ ಪ್ರಾರ್ಥನೆಯನ್ನು ಕೇಳಬೇಕಾದರೆ ನಿರ್ದಿಷ್ಟವಾದ ಯಾವುದೇ ಭಂಗಿ ಅಥವಾ ಸನ್ನಿವೇಶದ ಅಗತ್ಯವಿಲ್ಲ. ದೇವರು ಹೃದಯದ ಚಿಂತನೆಗಳನ್ನು ಸಹ ಅರಿತುಕೊಳ್ಳಬಲ್ಲನು. (ಕೀರ್ತನೆ 19:14) ಆದರೂ, ತನ್ನ ನಿಯತಕ್ರಮದಲ್ಲಿ ಮಾಡುವ ಯಾವುದೇ ಬದಲಾವಣೆಯನ್ನು ದಾನಿಯೇಲನು, ಒಪ್ಪಂದ ಮಾಡಿಕೊಳ್ಳುವುದಕ್ಕೆ ಸರಿಸಮಾನವಾದದ್ದಾಗಿ ಕಂಡನು. ಏಕೆ?

26 ದಾನಿಯೇಲನ ಪ್ರಾರ್ಥನಾ ರೀತಿಯ ಬಗ್ಗೆ ಎಲ್ಲರಿಗೂ ಚೆನ್ನಾಗಿ ಗೊತ್ತಿದ್ದುದರಿಂದ, ಅವನು ಈ ನಿಯತಕ್ರಮವನ್ನು ಇದ್ದಕ್ಕಿದ್ದಂತೆ ನಿಲ್ಲಿಸಿಬಿಡುವಲ್ಲಿ, ಇತರರು ಏನು ತಿಳಿದುಕೊಳ್ಳುತ್ತಿದ್ದರು? ಯಾರು ಅವನನ್ನು ಗಮನಿಸುತ್ತಿದ್ದರೋ ಅವರು, ದಾನಿಯೇಲನು ಮನುಷ್ಯರಿಗೆ ಭಯಪಡುತ್ತಾನೆ ಹಾಗೂ ಯೆಹೋವನ ನಿಯಮಕ್ಕಿಂತಲೂ ಅರಸನ ಆಜ್ಞೆಯು ಮೇಲುಗೈ ಪಡೆದಿತ್ತು ಎಂಬ ತೀರ್ಮಾನಕ್ಕೆ ಬರುತ್ತಿದ್ದರು. (ಕೀರ್ತನೆ 118:⁠6) ಆದರೆ ಯೆಹೋವನು ತನ್ನ ಅನನ್ಯ ಭಕ್ತಿಯನ್ನು ಸ್ವೀಕರಿಸುತ್ತಿದ್ದನು ಎಂಬುದನ್ನು ದಾನಿಯೇಲನು ತನ್ನ ಕೃತ್ಯಗಳಿಂದ ತೋರಿಸಿದನು. (ಧರ್ಮೋಪದೇಶಕಾಂಡ ​6:14, 15; ಯೆಶಾಯ 42:⁠8) ಹೀಗೆ ಮಾಡುವ ಮೂಲಕ, ದಾನಿಯೇಲನು ಅರಸನ ಆಜ್ಞೆಯನ್ನು ಖಂಡಿತವಾಗಿಯೂ ಅಗೌರವದಿಂದ ಕಡೆಗಣಿಸಲಿಲ್ಲ. ಇಲ್ಲವೆ ಅವನು ಭಯದಿಂದ ಒಪ್ಪಂದವನ್ನೂ ಮಾಡಿಕೊಳ್ಳಲಿಲ್ಲ. ಅರಸನ ಶಾಸನವು ಜಾರಿಗೆ ಬರುವುದಕ್ಕೆ ಮೊದಲು “ಯಥಾಪ್ರಕಾರ”ವಾಗಿ ಮಾಡುತ್ತಿದ್ದಂತೆಯೇ ಈಗಲೂ ತನ್ನ ಮಹಡಿಯ ಕೋಣೆಯಲ್ಲಿ ಪ್ರಾರ್ಥಿಸುವುದನ್ನು ಅವನು ಮುಂದುವರಿಸಿದನು.

27. (ಎ) ಮೇಲಿನ ಅಧಿಕಾರಿಗಳಿಗೆ ಅಧೀನರಾಗಿರುವ ವಿಷಯದಲ್ಲಿ, (ಬಿ) ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರಾಗಿರುವುದರಲ್ಲಿ, ಮತ್ತು (ಸಿ) ಎಲ್ಲ ಜನರೊಂದಿಗೆ ಸಮಾಧಾನದಿಂದ ಜೀವಿಸುವುದರಲ್ಲಿ, ದೇವರ ಸೇವಕರು ಹೇಗೆ ದಾನಿಯೇಲನಂತಿರಸಾಧ್ಯವಿದೆ?

27 ಇಂದು ದೇವರ ಸೇವಕರು ದಾನಿಯೇಲನ ಮಾದರಿಯಿಂದ ಪಾಠವನ್ನು ಕಲಿಯಸಾಧ್ಯವಿದೆ. ತಾವು ವಾಸಿಸುತ್ತಿರುವ ದೇಶದ ನಿಯಮಗಳಿಗೆ ವಿಧೇಯರಾಗುತ್ತಾ, ಅವರು “ಮೇಲಿರುವ ಅಧಿಕಾರಿಗಳಿಗೆ ಅಧೀನ”ರಾಗಿ ಉಳಿಯುತ್ತಾರೆ. (ರೋಮಾಪುರ 13:⁠1) ಆದರೂ, ಮನುಷ್ಯರ ನಿಯಮಗಳು ದೇವರ ನಿಯಮಗಳೊಂದಿಗೆ ಸಂಘರ್ಷಿಸುವಾಗ, “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ” ಎಂದು ಧೈರ್ಯವಾಗಿ ಹೇಳಿದಂತಹ ಯೇಸುವಿನ ಅಪೊಸ್ತಲರ ನಿಲುವನ್ನು ಯೆಹೋವನ ಜನರು ಅನುಸರಿಸುತ್ತಾರೆ. (ಅ. ಕೃತ್ಯಗಳು 5:29) ಹೀಗೆ ಮಾಡುವ ಮೂಲಕ ಕ್ರೈಸ್ತರು ದಂಗೆ ಅಥವಾ ಪ್ರತಿಭಟನೆಯನ್ನು ಪ್ರವರ್ಧಿಸುವುದಿಲ್ಲ. ಅದಕ್ಕೆ ಬದಲಾಗಿ, “ಸುಖಸಮಾಧಾನಗಳು ಉಂಟಾಗಿ . . . ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ”ಮಾಡಲಿಕ್ಕಾಗಿ, ಎಲ್ಲ ಜನರೊಂದಿಗೆ ಸಮಾಧಾನದಿಂದ ಜೀವಿಸುವುದೇ ಅವರ ಗುರಿಯಾಗಿದೆ.​—⁠1 ತಿಮೊಥೆಯ 2:⁠1, 2; ರೋಮಾಪುರ 12:⁠18.

28. ದಾನಿಯೇಲನು ಹೇಗೆ “ಅಚಲ”ಭಾವದಿಂದ ದೇವರ ಸೇವೆ ಮಾಡಿದನು?

28 ದಾನಿಯೇಲನು “ಅಚಲ”ನಾಗಿ ದೇವರ ಸೇವೆಯನ್ನು ಮಾಡುತ್ತಿದ್ದಾನೆಂದು ಎರಡು ಸಂದರ್ಭಗಳಲ್ಲಿ ದಾರ್ಯಾವೆಷನು ಹೇಳಿದನು. (ದಾನಿಯೇಲ 6:​16, 20, NW) “ಅಚಲ” ಎಂದು ಭಾಷಾಂತರಿಸಲ್ಪಟ್ಟಿರುವ ಶಬ್ದದ ಅರಮಾಯ ಮೂಲಾರ್ಥವು “ಪರಿಧಿಯಲ್ಲಿ ಚಲಿಸು” ಎಂದಾಗಿದೆ. ಒಂದು ನಿಯತ ಚಕ್ರದ ಅಥವಾ ನಿರಂತರವಾಗಿರುವ ಒಂದು ವಿಚಾರದ ಕಲ್ಪನೆಯನ್ನು ಅದು ಕೊಡುತ್ತದೆ. ದಾನಿಯೇಲನ ಯಥಾರ್ಥತೆಯು ಆ ರೀತಿಯಲ್ಲಿತ್ತು. ಮುಂತಿಳಿಸಲು ಸಾಧ್ಯವಿದ್ದ ಒಂದು ಮಾದರಿಯು ಅದರಲ್ಲಿತ್ತು. ಪರೀಕ್ಷೆಗಳು ಎದುರಾದಾಗ​—⁠ಅವು ಗಂಭೀರವಾಗಿರಲಿ ಅಥವಾ ಚಿಕ್ಕಪುಟ್ಟವುಗಳಾಗಿರಲಿ​—⁠ದಾನಿಯೇಲನು ಏನು ಮಾಡುವನು ಎಂಬ ವಿಷಯದಲ್ಲಿ ಯಾವುದೇ ಸಂದೇಹವಿರಲಿಲ್ಲ. ಈಗಾಗಲೇ ಅನೇಕ ದಶಕಗಳಿಂದ ಅನುಸರಿಸಿಕೊಂಡು ಬಂದಿದ್ದ ಮಾರ್ಗದಲ್ಲೇ, ಅಂದರೆ ಯೆಹೋವನಿಗೆ ನಿಷ್ಠೆ ಹಾಗೂ ನಂಬಿಗಸ್ತಿಕೆಯನ್ನು ತೋರಿಸುವ ಮಾರ್ಗದಲ್ಲೇ ಅವನು ಮುಂದುವರಿಯುವನು.

29. ಇಂದು ಯೆಹೋವನ ಸೇವಕರು ದಾನಿಯೇಲನ ನಂಬಿಗಸ್ತ ಜೀವನಮಾರ್ಗದಿಂದ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?

29 ದೇವರ ಪ್ರಸ್ತುತ ದಿನದ ಸೇವಕರು, ದಾನಿಯೇಲನ ಜೀವನಮಾರ್ಗವನ್ನೇ ಅನುಸರಿಸಲು ಬಯಸುತ್ತಾರೆ. ವಾಸ್ತವದಲ್ಲಿ, ಪುರಾತನ ಸಮಯದ ದೇವಭಯವುಳ್ಳ ವ್ಯಕ್ತಿಗಳ ಮಾದರಿಯನ್ನು ಪರಿಗಣಿಸುವಂತೆ ಅಪೊಸ್ತಲ ಪೌಲನು ಎಲ್ಲ ಕ್ರೈಸ್ತರಿಗೆ ಬುದ್ಧಿವಾದ ಹೇಳಿದನು. ನಂಬಿಕೆಯಿಂದಲೇ ಅವರು “ನೀತಿಯನ್ನು ನಡಿಸಿದರು; ವಾಗ್ದಾನಗಳನ್ನು ಪಡಕೊಂಡರು” ಮತ್ತು “ಸಿಂಹಗಳ ಬಾಯಿ ಕಟ್ಟಿದರು”​—⁠ಈ ಮಾತು ದಾನಿಯೇಲನಿಗೆ ಸೂಚಿತವಾಗಿದೆ ಎಂಬುದು ಸುಸ್ಪಷ್ಟ. ಇಂದು ಯೆಹೋವನ ಸೇವಕರೋಪಾದಿ ನಾವು, ದಾನಿಯೇಲನ ನಂಬಿಕೆ ಹಾಗೂ ಅಚಲಭಾವವನ್ನು ತೋರಿಸುತ್ತಾ ಇರೋಣ ಹಾಗೂ “ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ.”​—⁠ಇಬ್ರಿಯ 11:​32, 33; 12:⁠1.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 7 ಬಾಬೆಲಿನಲ್ಲಿ “ಸಿಂಹಗಳ ಗವಿ”ಯು ಇತ್ತು ಎಂಬುದು, ಕೆಲವೊಮ್ಮೆ ಪ್ರಾಚ್ಯ ಅರಸರು ತಮ್ಮ ಮೃಗಾಲಯಗಳಲ್ಲಿ ಕಾಡುಮೃಗಗಳನ್ನು ಇಟ್ಟುಕೊಂಡಿದ್ದರು ಎಂದು ತೋರಿಸುವ ಪುರಾತನ ಶಿಲಾಶಾಸನಗಳ ಪುರಾವೆಗಳಿಂದ ಬೆಂಬಲಿಸಲ್ಪಟ್ಟಿದೆ.

^ ಪ್ಯಾರ. 12 ಮಹಡಿಯ ಕೋಣೆಯು ಒಂದು ಖಾಸಗಿ ಕೊಠಡಿಯಾಗಿದ್ದು, ಒಬ್ಬ ವ್ಯಕ್ತಿಗೆ ನೆಮ್ಮದಿ ಬೇಕೆನಿಸಿದಾಗ ಅಲ್ಲಿ ಹೋಗಿ ವಿಶ್ರಾಂತಿ ತೆಗೆದುಕೊಳ್ಳಸಾಧ್ಯವಿತ್ತು.

^ ಪ್ಯಾರ. 16 ಸಿಂಹದ ಗವಿಯು, ಬಹುಶಃ ಮೇಲ್ಭಾಗದಲ್ಲಿ ಬಾಯಿ ಇದ್ದ ಒಂದು ಭೂಗತ ಕುಳಿಯಾಗಿದ್ದಿರ​ಬಹುದು. ಪ್ರಾಣಿಗಳು ಒಳಗೆ ಬರುವಂತೆ ಮೇಲೆತ್ತಸಾಧ್ಯವಿರುವ ಬಾಗಿಲುಗಳು ಅಥವಾ ಸರಳಿನ ಜಾಲರಿಗಳೂ ಅದಕ್ಕೆ ಇದ್ದಿರಬಹುದು.

^ ಪ್ಯಾರ. 20 ‘ದೂರುಹೊರಿಸು’ ಎಂಬ ಶಬ್ದವು, “ಮಿಥ್ಯಾಪವಾದ ಹೊರಿಸಲ್ಪಟ್ಟವನು” ಎಂಬುದಾಗಿಯೂ ತರ್ಜುಮೆ​ಮಾಡಬಹುದಾದ ಅರಮಾಯ ಅಭಿವ್ಯಕ್ತಿಯ ಒಂದು ಭಾಷಾಂತರವಾಗಿದೆ. ದಾನಿಯೇಲನ ಶತ್ರುಗಳ ದುರುದ್ದೇಶ ಪ್ರವೃತ್ತಿಯನ್ನು ಇದು ಎತ್ತಿತೋರಿಸುತ್ತದೆ.

ನೀವೇನನ್ನು ಗ್ರಹಿಸಿದಿರಿ?

ಮೇದ್ಯಯನಾದ ದಾರ್ಯಾವೆಷನು ದಾನಿಯೇಲನನ್ನು ಏಕೆ ಉನ್ನತ ಸ್ಥಾನದಲ್ಲಿರಿಸಲು ನಿರ್ಧರಿಸಿದನು?

ಮುಖ್ಯಾಧಿಕಾರಿಗಳು ಹಾಗೂ ದೇಶಾಧಿಪತಿಗಳು ಯಾವ ಕುಟಿಲ ಒಳಸಂಚನ್ನು ರೂಪಿಸಿದರು? ಯೆಹೋವನು ದಾನಿಯೇಲನನ್ನು ಹೇಗೆ ಕಾಪಾಡಿದನು?

ದಾನಿಯೇಲನ ನಂಬಿಗಸ್ತ ಮಾದರಿಗೆ ಗಮನಕೊಡುವ ಮೂಲಕ ನೀವು ಯಾವ ಪಾಠವನ್ನು ಕಲಿತುಕೊಂಡಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 225 ರಲ್ಲಿ ಇಡೀ ಪುಟದ ಚಿತ್ರ]

[ಪುಟ 232 ರಲ್ಲಿ ಇಡೀ ಪುಟದ ಚಿತ್ರ]

[Picture on page 127]

ದಾನಿಯೇಲನು “ಅಚಲ”ಭಾವದಿಂದ ದೇವರ ಸೇವೆಮಾಡಿದನು. ನೀವು ಸಹ ಹಾಗೆ ಮಾಡುತ್ತೀರೊ?