ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೋರಾಡುತ್ತಿರುವ ರಾಜರ ಅಂತ್ಯ ಸಮೀಪ

ಹೋರಾಡುತ್ತಿರುವ ರಾಜರ ಅಂತ್ಯ ಸಮೀಪ

ಅಧ್ಯಾಯ ಹದಿನಾರು

ಹೋರಾಡುತ್ತಿರುವ ರಾಜರ ಅಂತ್ಯ ಸಮೀಪ

1, 2. ಎರಡನೆಯ ಲೋಕ ಯುದ್ಧದ ಬಳಿಕ ಉತ್ತರ ರಾಜನ ಸ್ವರೂಪವು ಹೇಗೆ ಬದಲಾಯಿತು?

ಅಮೆರಿಕ ಹಾಗೂ ರಷ್ಯಾದ ರಾಜಕೀಯ ವಾತಾವರಣವನ್ನು ಪರಿಗಣಿಸುತ್ತಾ, ಫ್ರೆಂಚ್‌ ತತ್ವಜ್ಞಾನಿಯೂ ಇತಿಹಾಸಕಾರನೂ ಆಗಿದ್ದ ಅಲೆಕ್ಸೀ ಡೆ ಟೋಕ್‌ವಿಲ್‌ 1835ರಲ್ಲಿ ಬರೆದುದು: “ಅಮೆರಿಕವು ಸ್ವಾತಂತ್ರ್ಯವನ್ನು ತನ್ನ ಪ್ರಮುಖ ಸಾಧನವಾಗಿ ಉಪಯೋಗಿಸಿದೆ; ಮತ್ತು ರಷ್ಯಾವು ಗುಲಾಮಗಿರಿಯನ್ನು ತನ್ನ ಪ್ರಮುಖ ಸಾಧನವಾಗಿ ಉಪಯೋಗಿಸಿದೆ. ಅವುಗಳ . . . ಮಾರ್ಗಗಳು ಭಿನ್ನವಾಗಿವೆ; ಆದರೂ, ಅವುಗಳಲ್ಲಿ ಪ್ರತಿಯೊಂದೂ ಯಾವುದೋ ಒಂದು ದಿನ ಅದೃಷ್ಟದ ಕಾರಣ, ಲೋಕದ ಅರ್ಧಾಂಶ ಜನರ ಭಾಗ್ಯವನ್ನು ತಮ್ಮ ಕೈಗಳಲ್ಲಿ ಹಿಡಿಯುವವು ಎಂಬಂತೆ ತೋರುತ್ತದೆ.” IIನೆಯ ಲೋಕ ಯುದ್ಧದ ತರುವಾಯ, ಈ ಭವಿಷ್ಯ ನುಡಿಯು ಎಷ್ಟರ ಮಟ್ಟಿಗೆ ನಿಷ್ಕೃಷ್ಟವಾಗಿ ಪರಿಣಮಿಸಿತು? ಇತಿಹಾಸಕಾರನಾದ ಜೆ. ಎಮ್‌. ರಾಬರ್ಟ್ಸ್‌ ಬರೆಯುವುದು: “ಎರಡನೆಯ ಲೋಕ ಯುದ್ಧದ ಅಂತ್ಯದಲ್ಲಿ, ಲೋಕದ ಅದೃಷ್ಟವು ಖಂಡಿತವಾಗಿಯೂ, ಅಸಾಧಾರಣವಾದ ಹಾಗೂ ಬಹಳ ಭಿನ್ನವಾದ ಎರಡು ಶಕ್ತಿಗಳಿಂದ ಆಳಲ್ಪಡುತ್ತಿರುವಂತೆ ಕಂಡುಬಂತು; ಒಂದು, ರಷ್ಯಾದ ಅಧಿಕಾರ ಶಕ್ತಿ ಹಾಗೂ ಇನ್ನೊಂದು ಅಮೆರಿಕದ ಅಧಿಕಾರ ಶಕ್ತಿ.”

2 ಎರಡೂ ಲೋಕ ಯುದ್ಧಗಳಲ್ಲಿ, ಆ್ಯಂಗ್ಲೊ-ಅಮೆರಿಕನ್‌ ಲೋಕ ಶಕ್ತಿಯಾಗಿದ್ದ ದಕ್ಷಿಣ ರಾಜನ ಪ್ರಮುಖ ಶತ್ರುವು ಜರ್ಮನಿಯಾಗಿತ್ತು. ಮತ್ತು ಜರ್ಮನಿಯು ಉತ್ತರ ರಾಜನ ಸ್ಥಾನವನ್ನು ಆಕ್ರಮಿಸಿತ್ತು. ಆದರೂ, IIನೆಯ ಲೋಕ ಯುದ್ಧದ ಬಳಿಕ ಆ ರಾಷ್ಟ್ರವು ವಿಭಾಗಗೊಂಡಿತು. ಪಶ್ಚಿಮ ಜರ್ಮನಿಯು ದಕ್ಷಿಣ ರಾಜನ ಮಿತ್ರರಾಷ್ಟ್ರವಾಗಿ ಪರಿಣಮಿಸಿತು, ಹಾಗೂ ಪೂರ್ವ ಜರ್ಮನಿಯು ಪ್ರಬಲವಾದ ಇನ್ನೊಂದು ಪ್ರಭುತ್ವದೊಂದಿಗೆ ಸ್ನೇಹ ಬೆಳೆಸಿತು. ಈ ಪ್ರಭುತ್ವವು ಕಮ್ಯೂನಿಸ್ಟ್‌ ರಾಷ್ಟ್ರಗಳ ಒಕ್ಕೂಟವಾಗಿದ್ದು, ರಷ್ಯಾ ಅದರ ಮುಂದಾಳಾಗಿತ್ತು. ಈ ಪಕ್ಷವು ಅಥವಾ ರಾಜಕೀಯ ಪ್ರಭುತ್ವವು ಉತ್ತರ ರಾಜನಾಗಿ ಎದ್ದುನಿಂತು, ಆ್ಯಂಗ್ಲೊ-ಅಮೆರಿಕನ್‌ ಒಕ್ಕೂಟದ ಪ್ರಬಲ ವೈರಿಯಾಯಿತು. ಈ ಇಬ್ಬರು ರಾಜರ ನಡುವಿನ ಪ್ರತಿಸ್ಪರ್ಧೆಯು ಒಂದು ಶೀತಲ ಸಮರವಾಗಿ ಪರಿಣಮಿಸಿ, 1948ರಿಂದ 1989ರ ತನಕ ಮುಂದುವರಿಯಿತು. ಈ ಮುಂಚೆ ಉತ್ತರದ ಜರ್ಮನ್‌ ರಾಜನು “ಪವಿತ್ರ ಒಡಂಬಡಿಕೆಯ ವಿರುದ್ಧ” ಕ್ರಿಯೆಗೈದಿದ್ದನು. (ದಾನಿಯೇಲ 11:​28, 30, NW) ಈಗ ಆ ಒಡಂಬಡಿಕೆಯ ವಿಷಯದಲ್ಲಿ ಕಮ್ಯೂನಿಸ್ಟ್‌ ಒಕ್ಕೂಟವು ಹೇಗೆ ವರ್ತಿಸಲಿಕ್ಕಿತ್ತು?

ನಿಜ ಕ್ರೈಸ್ತರು ಎಡವಿದರೂ ಜಯಹೊಂದುತ್ತಾರೆ

3, 4. ಯಾರು “ದುರುದ್ದೇಶದಿಂದ ಒಡಂಬಡಿಕೆಯ ವಿರುದ್ಧ ಕ್ರಿಯೆ”ಗೈಯುತ್ತಿದ್ದಾರೆ, ಮತ್ತು ಅವರಿಗೂ ಉತ್ತರ ರಾಜನಿಗೂ ಯಾವ ಸಂಬಂಧವಿದೆ?

3 ದೇವದೂತನು ಹೇಳಿದ್ದು: “ದುರುದ್ದೇಶದಿಂದ ಒಡಂಬಡಿಕೆಯ ವಿರುದ್ಧ ಕ್ರಿಯೆಗೈಯುತ್ತಿರುವವರನ್ನು, ಅವನು [ಉತ್ತರ ರಾಜನು] ನಯನುಡಿಗಳಿಂದ ಧರ್ಮಭ್ರಷ್ಟತೆಯ ಕಡೆಗೆ ನಡಿಸುವನು.” ದೇವದೂತನು ಇನ್ನೂ ಹೇಳಿದ್ದು: “ಆದರೆ ತಮ್ಮ ದೇವರನ್ನು ಅರಿತುಕೊಂಡ ಜನರಾದರೋ ಜಯಹೊಂದುವರು ಮತ್ತು ಪರಿಣಾಮಕಾರಿಯಾಗಿ ಕ್ರಿಯೆಗೈಯುವರು. ಹಾಗೂ ಈ ಜನರ ನಡುವೆ ಒಳನೋಟವಿರುವವರು, ಅನೇಕರಿಗೆ ತಿಳುವಳಿಕೆಯನ್ನು ಹಂಚುವರು. ಅಷ್ಟುಮಾತ್ರವಲ್ಲ, ಅವರು ಕೆಲವು ದಿವಸಗಳ ವರೆಗೆ ಕತ್ತಿಯಿಂದ, ಬೆಂಕಿಯಿಂದ, ಬಂಧಿವಾಸದಿಂದ, ಹಾಗೂ ಸುಲಿಗೆಯಿಂದ ಎಡವಿದರೂ ಜಯಹೊಂದುವರು.”​—⁠ದಾನಿಯೇಲ 11:​32, 33, NW.

4 “ದುರುದ್ದೇಶದಿಂದ ಒಡಂಬಡಿಕೆಯ ವಿರುದ್ಧ ಕ್ರಿಯೆಗೈಯುತ್ತಿರುವವರು” ಕೇವಲ ಕ್ರೈಸ್ತಪ್ರಪಂಚದ ಮುಖಂಡರಾಗಿರಸಾಧ್ಯವಿದೆ. ಇವರು ಕ್ರೈಸ್ತರೆಂದು ಹೇಳಿಕೊಳ್ಳುತ್ತಾರಾದರೂ ಅವರ ಕೃತ್ಯಗಳಿಂದ ಕ್ರೈಸ್ತಧರ್ಮದ ಹೆಸರನ್ನೇ ಕೆಡಿಸುತ್ತಾರೆ. ಸೋವಿಯಟ್‌ ಒಕ್ಕೂಟದಲ್ಲಿ ಧರ್ಮ (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ವಾಲ್ಟರ್‌ ಕೊಲಾರ್ಸ್‌ ಹೇಳುವುದು: “[ಎರಡನೆಯ ಲೋಕ ಯುದ್ಧದ ಸಮಯದಲ್ಲಿ] ಸೋವಿಯಟ್‌ ಸರಕಾರವು, ತಾಯಿನಾಡಿನ ರಕ್ಷಣೆಗಾಗಿ ಚರ್ಚುಗಳ ಭೌತಿಕ ಹಾಗೂ ನೈತಿಕ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸಿತು.” ಈಗ ಉತ್ತರ ರಾಜನಾಗಿದ್ದವನ ಆಧಿಪತ್ಯವು ನಾಸ್ತಿಕ ಧೋರಣೆಯನ್ನು ಜಾರಿಗೆ ತಂದಿತ್ತಾದರೂ, ಯುದ್ಧದ ನಂತರ ಚರ್ಚುಗಳ ಮುಖಂಡರು ಈ ಸ್ನೇಹಸಂಬಂಧವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದರು. ಹೀಗೆ ಕ್ರೈಸ್ತ​ಪ್ರಪಂಚವು ಹಿಂದೆಂದಿಗಿಂತಲೂ ಹೆಚ್ಚಾಗಿ ಈ ಲೋಕದ ಭಾಗವಾಗಿ ಪರಿಣಮಿಸಿತು. ಇದು ಯೆಹೋವನ ದೃಷ್ಟಿಯಲ್ಲಿ ಸಂಪೂರ್ಣವಾಗಿ ಅಸಹ್ಯಕರವಾದ ಧರ್ಮಭ್ರಷ್ಟತೆಯಾಗಿತ್ತು.​—⁠ಯೋಹಾನ 17:16; ಯಾಕೋಬ 4:⁠4.

5, 6. ‘ತಮ್ಮ ದೇವರನ್ನು ಅರಿತುಕೊಂಡ ಜನರು’ ಯಾರಾಗಿದ್ದರು, ಮತ್ತು ಉತ್ತರ ರಾಜನ ಆಧಿಪತ್ಯದಲ್ಲಿ ಅವರಿಗೆ ಏನು ಸಂಭವಿಸಿತು?

5 “ತಮ್ಮ ದೇವರನ್ನು ಅರಿತುಕೊಂಡ ಜನ”ರು ಮತ್ತು “ಒಳನೋಟ”ವಿರುವ ನಿಜ ಕ್ರೈಸ್ತರ ಕುರಿತೇನು? ಉತ್ತರ ರಾಜನ ಆಧಿಪತ್ಯದ ಕೆಳಗೆ ಜೀವಿಸುತ್ತಿದ್ದ ಕ್ರೈಸ್ತರು, ಯೋಗ್ಯವಾಗಿಯೇ ತಮ್ಮ “ಮೇಲಿರುವ ಅಧಿಕಾರಿಗಳಿಗೆ ಅಧೀನ”ರಾಗಿದ್ದರೂ, ಈ ಲೋಕದ ಭಾಗವಾಗಿರಲಿಲ್ಲ. (ರೋಮಾಪುರ 13:1; ಯೋಹಾನ 18:36) “ಕೈಸರನದನ್ನು ಕೈಸರನಿಗೆ” ಸಲ್ಲಿಸಲು ಜಾಗ್ರತೆ ವಹಿಸಿದ ಅವರು, “ದೇವರದನ್ನು ದೇವರಿಗೆ” ಕೊಟ್ಟರು. (ಮತ್ತಾಯ 22:21) ಈ ಕಾರಣದಿಂದ, ಅವರ ಸಮಗ್ರತೆಯು ಸವಾಲಿಗೊಳಗಾಯಿತು.​—⁠2 ತಿಮೊಥೆಯ 3:⁠12.

6 ಇದರ ಫಲಿತಾಂಶವಾಗಿ, ನಿಜ ಕ್ರೈಸ್ತರು ‘ಎಡವಿ’ದರು ಮತ್ತು ‘ಜಯಹೊಂದಿದರು.’ ಅವರು ತೀವ್ರ ಹಿಂಸೆಯನ್ನು ಅನುಭವಿಸಿ, ಕೆಲವರು ಕೊಲ್ಲಲ್ಪಡುವ ಅರ್ಥದಲ್ಲಿ ಎಡವಿದರು. ಆದರೆ, ಅವರಲ್ಲಿ ಅಧಿಕಾಂಶ ಮಂದಿ ನಂಬಿಗಸ್ತರಾಗಿ ಉಳಿಯುವ ಮೂಲಕ ಜಯಹೊಂದಿದರು. ಯೇಸುವಿನಂತೆಯೇ ಅವರು ಸಹ ಲೋಕವನ್ನು ಜಯಿಸಿದರು. (ಯೋಹಾನ 16:33) ಅಷ್ಟುಮಾತ್ರವಲ್ಲ, ಅವರನ್ನು ಸೆರೆಮನೆಯಲ್ಲಿ ಅಥವಾ ಕೂಟ ಶಿಬಿರಗಳಲ್ಲಿ ಹಾಕಲಾಯಿತಾದರೂ, ಅವರು ಎಂದೂ ಸಾರುವ ಕಾರ್ಯವನ್ನು ನಿಲ್ಲಿಸಲಿಲ್ಲ. ಹೀಗೆ ಮಾಡುವ ಮೂಲಕ ಅವರು ‘ಅನೇಕರಿಗೆ ತಿಳುವಳಿಕೆಯನ್ನು ಹಂಚಿದರು.’ ಉತ್ತರ ರಾಜನಿಂದ ಆಳಲ್ಪಡುವ ಹೆಚ್ಚಿನ ದೇಶಗಳಲ್ಲಿ ಹಿಂಸೆಯಿತ್ತಾದರೂ, ಯೆಹೋವನ ಸಾಕ್ಷಿಗಳ ಸಂಖ್ಯೆಯು ಮಾತ್ರ ಹೆಚ್ಚುತ್ತಲೇ ಹೋಯಿತು. ‘ಒಳನೋಟವಿದ್ದ’ ಜನರ ನಂಬಿಗಸ್ತಿಕೆಯ ಫಲಿತಾಂಶವಾಗಿ, ಆ ದೇಶಗಳಲ್ಲಿ “ಮಹಾ ಸಮೂಹ”ವು ದಿನೇ ದಿನೇ ಹೆಚ್ಚುತ್ತಿರುವುದು ಕಂಡುಬಂದಿದೆ.​—⁠ಪ್ರಕಟನೆ 7:​9-14.

ಯೆಹೋವನ ಜನರು ಶೋಧಿಸಲ್ಪಡುತ್ತಾರೆ

7. ಉತ್ತರ ರಾಜನ ಆಧಿಪತ್ಯದಲ್ಲಿ ಜೀವಿಸುತ್ತಿದ್ದ ಅಭಿಷಿಕ್ತ ಕ್ರೈಸ್ತರಿಗೆ ಯಾವ ರೀತಿಯಲ್ಲಿ “ಒಂದಿಷ್ಟು ಸಹಾಯ”ವು ದೊರಕಿತು?

7 “[ದೇವಜನರನ್ನು] ಎಡವುವಂತೆ ಮಾಡಿದಾಗ, ಒಂದಿಷ್ಟು ಸಹಾಯದಿಂದ ​ಅವರಿಗೆ ನೆರವು ನೀಡಲ್ಪಡುವುದು” ಎಂದು ದೇವದೂತನು ಹೇಳಿದನು. (ದಾನಿಯೇಲ 11:34ಎ, NW) ಎರಡನೆಯ ಲೋಕ ಯುದ್ಧದಲ್ಲಿ ದಕ್ಷಿಣ ರಾಜನಿಗೆ ಸಿಕ್ಕಿದ ವಿಜಯದ ಪರಿಣಾಮವಾಗಿ, ಪ್ರತಿಸ್ಪರ್ಧಿಯಾದ ಉತ್ತರ ರಾಜನ ಆಧಿಪತ್ಯದ ಕೆಳಗೆ ಜೀವಿಸುತ್ತಿದ್ದ ಕ್ರೈಸ್ತರಿಗೆ ಒಂದಿಷ್ಟು ಉಪಶಮನವು ದೊರಕಿತು. (ಹೋಲಿಸಿರಿ ಪ್ರಕಟನೆ 12:​15, 16.) ತದ್ರೀತಿಯಲ್ಲಿ, ಯುದ್ಧದಲ್ಲಿ ಗೆದ್ದ ಉತ್ತರ ರಾಜನಿಂದ ಹಿಂಸೆಗೊಳಗಾದವರಿಗೆ ಸಹ ಆಗಿಂದಾಗ್ಗೆ ಉಪಶಮನವು ದೊರಕಿತು. ಶೀತಲ ಸಮರವು ಕೊನೆಗೊಳ್ಳುತ್ತಾ ಬಂದಂತೆ, ನಂಬಿಗಸ್ತ ಕ್ರೈಸ್ತರು ತಮ್ಮ ದೇಶಕ್ಕೆ ಯಾವ ರೀತಿಯ ಬೆದರಿಕೆಯನ್ನೂ ಒಡ್ಡುವುದಿಲ್ಲ ಎಂಬುದನ್ನು ಅನೇಕ ರಾಜಕೀಯ ಮುಖಂಡರು ಗ್ರಹಿಸಿದರು ಹಾಗೂ ನಂಬಿಗಸ್ತ ಕ್ರೈಸ್ತರಿಗೆ ನ್ಯಾಯಬದ್ಧ ಮನ್ನಣೆಯನ್ನು ನೀಡಿದರು. ಅತ್ಯಧಿಕಗೊಳ್ಳುತ್ತಿರುವ ಮಹಾ ಸಮೂಹವು ಸಹ ಸಹಾಯ ಮಾಡಿತು. ಅವರು ಅಭಿಷಿಕ್ತ ಕ್ರೈಸ್ತರ ನಂಬಿಗಸ್ತ ಸಾಕ್ಷಿಕಾರ್ಯಕ್ಕೆ ಪ್ರತಿಕ್ರಿಯೆ ತೋರಿಸಿ, ಅವರಿಗೆ ನೆರವು ನೀಡಿದರು.​—⁠ಮತ್ತಾಯ 25:​34-40.

8. ಕೆಲವರು ಹೇಗೆ “ನಯವಾದ ನುಡಿಗಳನ್ನಾಡುತ್ತಾ” ದೇವರ ಜನರೊಂದಿಗೆ ಸೇರಿಕೊಂಡರು?

8 ಶೀತಲ ಸಮರವು ನಡೆಯುತ್ತಿದ್ದ ವರ್ಷಗಳಲ್ಲಿ, ದೇವರ ಸೇವೆಮಾಡುವುದರಲ್ಲಿ ತಮಗೆ ಆಸಕ್ತಿಯಿದೆಯೆಂದು ಹೇಳಿಕೊಂಡ ಜನರೆಲ್ಲರಿಗೂ ಒಳ್ಳೆಯ ಉದ್ದೇಶಗಳಿರಲಿಲ್ಲ. ಈಗಾಗಲೇ ದೇವದೂತನು ಹೀಗೆ ಎಚ್ಚರಿಸಿದ್ದನು: “ಆ ಮೇಲೆ ಬಹುಮಂದಿ ನಯವಾದ ನುಡಿಗಳನ್ನಾಡುತ್ತಾ ಅವರನ್ನು ಸೇರಿಕೊಳ್ಳುವರು.” (ದಾನಿಯೇಲ 11:34ಬಿ) ಬಹಳಷ್ಟು ಜನರು ಸತ್ಯದಲ್ಲಿ ಆಸಕ್ತಿಯನ್ನು ತೋರಿಸಿದರು, ಆದರೆ ಅವರು ದೇವರಿಗೆ ಸಮರ್ಪಣೆಯನ್ನು ಮಾಡಿಕೊಳ್ಳಲು ಇಷ್ಟಪಡಲಿಲ್ಲ. ಇನ್ನಿತರರು ಸುವಾರ್ತೆಯನ್ನು ಸ್ವೀಕರಿಸುವಂತೆ ಕಂಡುಬಂದರೂ, ವಾಸ್ತವದಲ್ಲಿ ಅವರು ಅಧಿಕಾರಿಗಳ ಗೂಢಚಾರರಾಗಿದ್ದರು. ಒಂದು ದೇಶದ ವರದಿಯು ಹೀಗೆ ತಿಳಿಸುತ್ತದೆ: “ಏನು ಮಾಡಲೂ ಹೇಸದ ಕೆಲವು ಪಕ್ಕಾ ಕಮ್ಯೂನಿಸ್ಟರು, ಕರ್ತನ ಸಂಸ್ಥೆಯೊಳಗೆ ನುಸುಳಿ, ತುಂಬ ಆಸಕ್ತಿಯನ್ನು ತೋರಿಸಿ, ಮತ್ತು ಸಂಸ್ಥೆಯಲ್ಲಿ ಉನ್ನತ ಸೇವಾ ಸ್ಥಾನಗಳಿಗೆ ಸಹ ನೇಮಿಸಲ್ಪಟ್ಟರು.”

9. ಕೆಲವು ನಂಬಿಗಸ್ತ ಕ್ರೈಸ್ತರು, ಒಳನುಸುಳಿದವರಿಂದ “ಎಡವುವಂತೆ” ಯೆಹೋವನು ಏಕೆ ಅನುಮತಿಸಿದನು?

9 ದೇವದೂತನು ಮುಂದುವರಿಸಿದ್ದು: “ಜ್ಞಾನಿಗಳಲ್ಲಿಯೂ [“ಒಳನೋಟವಿದ್ದವರಲ್ಲಿಯೂ,” NW] ಕೆಲವರು ಅಂತ್ಯಕಾಲದ ವರೆಗೆ ಬೀಳುತ್ತಿರುವರು [“ಎಡವುವಂತೆ ಮಾಡಲ್ಪಡುವರು,” NW]; ಅದರಿಂದ ಜನರು ಶೋಧಿಸಲ್ಪಟ್ಟು ಶುದ್ಧಿಹೊಂದಿ ಶುಭ್ರರಾಗುವರು; ಅಂತ್ಯವು ಕ್ಲುಪ್ತಕಾಲದಲ್ಲೇ ಆಗುವದು.” (ದಾನಿಯೇಲ 11:35) ಒಳನುಸುಳಿದವರು, ಕೆಲವು ನಂಬಿಗಸ್ತ ವ್ಯಕ್ತಿಗಳು ಅಧಿಕಾರಿಗಳ ಕೈಗೆ ಸಿಕ್ಕಿಬೀಳುವಂತೆ ಮಾಡಿದರು. ತನ್ನ ಜನರನ್ನು ಶೋಧಿಸಲಿಕ್ಕಾಗಿ ಹಾಗೂ ಅವರ ಶುದ್ಧೀಕರಣಕ್ಕಾಗಿ ಇಂತಹ ಸಂಗತಿಗಳು ಸಂಭವಿಸುವಂತೆ ಯೆಹೋವನು ಅನುಮತಿಸಿದನು. ಯೇಸು ತಾನು “ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತು”ಕೊಂಡಂತೆ, ಈ ನಂಬಿಗಸ್ತ ಜನರು ಸಹ ತಮ್ಮ ನಂಬಿಕೆಯ ಪರೀಕ್ಷೆಯ ಮೂಲಕ ತಾಳ್ಮೆಯನ್ನು ಕಲಿತುಕೊಂಡರು. (ಇಬ್ರಿಯ 5:8; ಯಾಕೋಬ 1:​2, 3; ಹೋಲಿಸಿರಿ ಮಲಾಕಿಯ 3:⁠3.) ಹೀಗೆ ಅವರು, ‘ಶೋಧಿಸಲ್ಪಟ್ಟು, ಶುದ್ಧಿಹೊಂದಿ, ಶುಭ್ರರಾಗಿ’ ಕಂಡುಬಂದರು.

10. “ಅಂತ್ಯಕಾಲದ ವರೆಗೆ” ಎಂಬ ಅಭಿವ್ಯಕ್ತಿಯ ಅರ್ಥವೇನಾಗಿದೆ?

10 ಯೆಹೋವನ ಜನರು “ಅಂತ್ಯಕಾಲದ ವರೆಗೆ” ಎಡವುತ್ತಾ, ಶೋಧಿಸಲ್ಪಡುತ್ತಾ ಇರಬೇಕಾಗಿತ್ತು. ಈ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯದ ವರೆಗೆ ಅವರು ಹಿಂಸೆಗೊಳಗಾಗುವುದನ್ನು ನಿರೀಕ್ಷಿಸಬೇಕಾಗಿದೆ ಎಂಬುದು ನಿಶ್ಚಯ. ಆದರೂ, ಉತ್ತರ ರಾಜನ ಆಕ್ರಮಣದ ಫಲಿತಾಂಶವಾಗಿ ಆಗುವ ದೇವಜನರ ಶುದ್ಧೀಕರಣ ಹಾಗೂ ಶುಭ್ರಗೊಳಿಸುವಿಕೆಯು, “ಕ್ಲುಪ್ತಕಾಲ”ದಲ್ಲಿ ನಡೆಯಲಿತ್ತು. ಆದುದರಿಂದ, ದಾನಿಯೇಲ 11:35ರಲ್ಲಿ, “ಅಂತ್ಯಕಾಲದ ವರೆಗೆ” ಎಂಬ ಅಭಿವ್ಯಕ್ತಿಯು, ದೇವರ ಜನರು ಉತ್ತರ ರಾಜನ ಆಕ್ರಮಣವನ್ನು ತಾಳಿಕೊಳ್ಳುತ್ತಾ, ಶೋಧಿಸಲ್ಪಡಲು ಅಗತ್ಯವಾಗಿದ್ದ ಕಾಲಾವಧಿಯ ಅಂತ್ಯಕ್ಕೆ ಸೂಚಿತವಾಗಿರಲೇಬೇಕು. ಆದುದರಿಂದ, ಎಡವುವ ಕಾರ್ಯವು, ಯೆಹೋವನಿಂದ ನೇಮಿತವಾದ ಸಮಯದಲ್ಲಿ ಕೊನೆಗೊಂಡಿತೆಂಬುದು ಸುವ್ಯಕ್ತ.

ರಾಜನು ತನ್ನನ್ನು ತಾನೇ ಹೆಚ್ಚಿಸಿಕೊಳ್ಳುತ್ತಾನೆ

11. ಯೆಹೋವನ ಪರಮಾಧಿಕಾರದ ಕಡೆಗೆ ಉತ್ತರ ರಾಜನಿಗಿರುವ ಮನೋಭಾವದ ಕುರಿತು ದೇವದೂತನು ಏನು ಹೇಳಿದನು?

11 ಉತ್ತರ ರಾಜನ ಕುರಿತು ದೇವದೂತನು ಮುಂದುವರಿಸುತ್ತಾ ಹೇಳಿದ್ದು: “ರಾಜನು ಮನಸ್ಸು ಬಂದ ಹಾಗೆ ನಡೆದು ತಾನು ಎಲ್ಲಾ ದೇವರುಗಳಿಗಿಂತ ದೊಡ್ಡವನೆಂದು ತನ್ನನ್ನು ಹೆಚ್ಚಿಸಿಕೊಂಡು ಉಬ್ಬಿ [ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸಲು ನಿರಾಕರಿಸಿ] ದೇವಾಧಿದೇವನನ್ನು ಮಿತಿಮೀರಿ ದೂಷಿಸಿ [ನಿಮ್ಮ ಮೇಲಿನ] ದೇವೋಗ್ರವು ತೀರುವ ತನಕ ವೃದ್ಧಿಯಾಗಿರುವನು; ದೈವಸಂಕಲ್ಪವು ನೆರವೇರಲೇ ಬೇಕು. ಅವನು ತನ್ನ ಪಿತೃಗಳ ದೇವರುಗಳನ್ನಾಗಲಿ ಸ್ತ್ರೀಯರು ಮೋಹಿಸುವ ದೇವರನ್ನಾಗಲಿ [“ಸ್ತ್ರೀಯರ ಬಯಕೆಯನ್ನಾಗಲಿ,” NW] ಯಾವ ದೇವರನ್ನಾಗಲಿ ಲಕ್ಷಿಸನು. ಎಲ್ಲಾ ದೇವರುಗಳಿಗಿಂತ ತನ್ನನ್ನೇ ಹೆಚ್ಚಿಸಿಕೊಳ್ಳುವನು.”​—⁠ದಾನಿಯೇಲ 11:​36, 37.

12, 13. (ಎ) ಉತ್ತರ ರಾಜನು “ತನ್ನ ಪಿತೃಗಳ ದೇವರುಗಳ”ನ್ನು ಯಾವ ರೀತಿಯಲ್ಲಿ ತಿರಸ್ಕರಿಸಿದನು? (ಬಿ) ಯಾವ “ಸ್ತ್ರೀಯರ” ಬಯಕೆಯನ್ನು ಉತ್ತರ ರಾಜನು ಲಕ್ಷಿಸಲಿಲ್ಲವೋ ಆ ಸ್ತ್ರೀಯರು ಯಾರಾಗಿದ್ದರು? (ಸಿ) ಉತ್ತರ ರಾಜನು ಯಾವ ‘ದೇವರಿಗೆ’ ಘನತೆಯನ್ನು ​ಸಲ್ಲಿಸಿದನು?

12 ಈ ಪ್ರವಾದನಾ ಮಾತುಗಳನ್ನು ನೆರವೇರಿಸುತ್ತಾ, ಕ್ರೈಸ್ತಪ್ರಪಂಚದ ತ್ರಯೈಕ್ಯ ದೇವರಂತಹ “ತನ್ನ ಪಿತೃಗಳ ದೇವರುಗಳನ್ನು” ಉತ್ತರ ರಾಜನು ತಿರಸ್ಕರಿಸಿದನು. ಕಮ್ಯೂನಿಸ್ಟ್‌ ಒಕ್ಕೂಟವು ಸಂಪೂರ್ಣವಾಗಿ ನಾಸ್ತಿಕವಾದವನ್ನು ಜಾರಿಗೆ ತಂದಿತು. ಹೀಗೆ ಉತ್ತರ ರಾಜನು, ‘ಎಲ್ಲರಿಗಿಂತ ತನ್ನನ್ನು ಹೆಚ್ಚಿಸಿಕೊಂಡು’ ತನ್ನನ್ನೇ ದೇವರನ್ನಾಗಿ ಮಾಡಿಕೊಂಡನು. “ಸ್ತ್ರೀಯರ ಬಯಕೆ,” ಅಂದರೆ ಅವನ ಆಳ್ವಿಕೆಯ ದಾಸಿಯರಾಗಿ ಕಾರ್ಯನಡಿಸುತ್ತಿದ್ದ ಉತ್ತರ ವಿಯೆಟ್ನಾಮ್‌ನಂತಹ ಅಧೀನ ರಾಷ್ಟ್ರಗಳನ್ನು ಪರಿಗಣಿಸದೆ, ಈ ರಾಜನು “ಮನಸ್ಸು ಬಂದ ಹಾಗೆ ನಡೆದು”ಕೊಂಡನು.

13 ಈ ಪ್ರವಾದನೆಯನ್ನು ಮುಂದುವರಿಸುತ್ತಾ ದೇವದೂತನು ಹೇಳಿದ್ದು: “ಕುಲದೇವರಿಗೆ ಬದಲಾಗಿ ದುರ್ಗಾಭಿಮಾನಿದೇವರನ್ನು ಘನಪಡಿಸುವನು; ಪಿತೃಗಳಿಗೆ ತಿಳಿಯದ ದೇವರನ್ನು ಬೆಳ್ಳಿಬಂಗಾರದಿಂದಲೂ ರತ್ನಗಳಿಂದಲೂ ಅಮೂಲ್ಯವಸ್ತುಗಳಿಂದಲೂ ಸೇವಿಸುವನು.” (ದಾನಿಯೇಲ 11:38) ನಿಜವಾಗಿಯೂ, ಉತ್ತರ ರಾಜನು ಆಧುನಿಕ ವೈಜ್ಞಾನಿಕ ಯುದ್ಧಶಾಸ್ತ್ರದಲ್ಲಿ, ಅಂದರೆ “ದುರ್ಗಾಭಿಮಾನಿದೇವ”ರಲ್ಲಿ ಭರವಸೆಯಿಟ್ಟನು. ಈ ‘ದೇವರ’ ಯಜ್ಞವೇದಿಯ ಮೇಲೆ ಅತ್ಯಧಿಕ ಐಶ್ವರ್ಯವನ್ನು ಅರ್ಪಿಸುತ್ತಾ, ಇದೇ ದೇವರ ಮೂಲಕ ಅವನು ರಕ್ಷಣೆಯನ್ನು ಪಡೆದುಕೊಳ್ಳಲು ಪ್ರಯತ್ನಿ​ಸಿದನು.

14. ಉತ್ತರ ರಾಜನು ಹೇಗೆ “ಪರಿಣಾಮಕಾರಿಯಾಗಿ ಕ್ರಿಯೆ”ಗೈದನು?

14 “ಅನ್ಯದೇವರ ಸಹಾಯದಿಂದ ಬಲವಾದ ಕೋಟೆಗಳನ್ನು ಆಕ್ರಮಿಸುವನು [“ಪರಿಣಾಮಕಾರಿಯಾಗಿ ಕ್ರಿಯೆಗೈಯುವನು,” NW]; ಯಾರನ್ನು ಕಟಾಕ್ಷಿಸುವನೋ ಅವರಿಗೆ ಮಹಿಮೆ ಹೆಚ್ಚುವದು; ಬಹು ಜನರ ಮೇಲೆ ಆಳಿಕೆಯನ್ನು ಕೊಡುವನು; ದೇಶವನ್ನು ಕ್ರಯಕ್ಕೆ ಹಂಚುವನು.” (ದಾನಿಯೇಲ 11:39) ತನ್ನ ಮಿಲಿಟರಿ ಸೈನ್ಯದಿಂದ ಕೂಡಿದ “ಅನ್ಯದೇವರ”ಲ್ಲಿ ಭರವಸೆಯಿಡುತ್ತಾ, ಉತ್ತರ ರಾಜನು ತುಂಬ “ಪರಿಣಾಮಕಾರಿಯಾಗಿ” ಕ್ರಿಯೆಗೈದನು ಮತ್ತು “ಕಡೇ ದಿವಸಗಳಲ್ಲಿ” ಜಯಿಸಲು ಅಸಾಧ್ಯವಾದ ಒಂದು ಮಿಲಿಟರಿ ಶಕ್ತಿಯಾಗಿ ಪರಿಣಮಿಸಿದನು. (2 ತಿಮೊಥೆಯ 3:⁠1) ಯಾರು ಅವನ ಸಿದ್ಧಾಂತಕ್ಕೆ ಬೆಂಬಲ ನೀಡಿದರೋ ಅವರಿಗೆ ರಾಜಕೀಯ, ಆರ್ಥಿಕ, ಹಾಗೂ ಕೆಲವೊಮ್ಮೆ ಮಿಲಿಟರಿ ಸಹಾಯವು ಕೊಡಲ್ಪಟ್ಟಿತು.

ಅಂತ್ಯಕಾಲದಲ್ಲಿ “ಒಂದು ತಳ್ಳಾಟ”

15. ದಕ್ಷಿಣ ರಾಜನು ಉತ್ತರ ರಾಜನೊಂದಿಗೆ ಹೇಗೆ “ಒಂದು ತಳ್ಳಾಟ”ದಲ್ಲಿ ಒಳಗೂಡಿದನು?

15 “ಅಂತ್ಯಕಾಲದಲ್ಲಿ ದಕ್ಷಿಣ ರಾಜನು ಉತ್ತರ ರಾಜನೊಂದಿಗೆ ಒಂದು ತಳ್ಳಾಟದಲ್ಲಿ ಒಳಗೂಡುವನು” ಎಂದು ದೇವದೂತನು ದಾನಿಯೇಲನಿಗೆ ಹೇಳಿದನು. (ದಾನಿಯೇಲ 11:40ಎ, NW) “ಅಂತ್ಯಕಾಲದಲ್ಲಿ” ದಕ್ಷಿಣ ರಾಜನು ಉತ್ತರ ರಾಜನನ್ನು ‘ತಳ್ಳಿಬಿಟ್ಟನೊ’? (ದಾನಿಯೇಲ 12:​4, 9) ಹೌದು, ಖಂಡಿತವಾಗಿಯೂ ಹಾಗೆ ಮಾಡಿದನು. ಮೊದಲನೆಯ ಲೋಕ ಯುದ್ಧದ ಬಳಿಕ, ಉತ್ತರ ರಾಜನಾಗಿದ್ದ ಜರ್ಮನಿಯ ಮೇಲೆ ಹೊರಿಸಲ್ಪಟ್ಟಿದ್ದ ಶಿಕ್ಷಾರೂಪದ ಶಾಂತಿ ಸಂಧಾನವು, ನಿಶ್ಚಯವಾಗಿಯೂ “ಒಂದು ತಳ್ಳಾಟ”ವಾಗಿತ್ತು, ಅಂದರೆ ಅವನು ಸೇಡು ತೀರಿಸಿಕೊಳ್ಳುವಂತೆ ಮಾಡಲ್ಪಟ್ಟ ಒಂದು ಪ್ರಚೋದನೆಯಾಗಿತ್ತು. ದಕ್ಷಿಣ ರಾಜನು ಎರಡನೆಯ ಲೋಕ ಯುದ್ಧದಲ್ಲಿ ಗೆದ್ದ ಬಳಿಕ, ತನ್ನ ಪ್ರತಿಸ್ಪರ್ಧಿಯ ಮೇಲೆ ಭೀಕರವಾದ ನ್ಯೂಕ್ಲಿಯರ್‌ ಶಸ್ತ್ರಗಳನ್ನು ಗುರಿಯಾಗಿಟ್ಟುಕೊಂಡು, ಅವನ ವಿರುದ್ಧ ಉತ್ತರ ಅಟ್ಲಾಂಟಿಕ್‌ ಒಪ್ಪಂದ ಸಂಘಟನೆ (ನೇಟೋ) ಎಂಬ ಪ್ರಬಲವಾದ ಒಂದು ಮಿಲಿಟರಿ ಮೈತ್ರಿಯನ್ನು ಸಂಘಟಿಸಿದನು. ನೇಟೋದ ಉದ್ದೇಶದ ಕುರಿತು ಒಬ್ಬ ಬ್ರಿಟಿಷ್‌ ಇತಿಹಾಸಕಾರನು ಹೇಳುವುದು: “ಯೂರೋಪಿಯನ್‌ ಶಾಂತಿಗೆ ಬೆದರಿಕೆಯ ಮುಖ್ಯ ಕಾರಣವೆಂದು ಪರಿಗಣಿಸಲ್ಪಟ್ಟಿದ್ದ ರಷ್ಯಾವನ್ನು ‘ಹತೋಟಿಯಲ್ಲಿ’ ಇರಿಸುವುದರಲ್ಲಿ ಇದು ಪ್ರಮುಖ ಸಾಧನವಾಗಿತ್ತು. ಇದರ ಕಾರ್ಯಾಚರಣೆಯು 40 ವರ್ಷಗಳ ವರೆಗೆ ಉಳಿಯಿತು, ಮತ್ತು ಸಂಪೂರ್ಣ ಯಶಸ್ಸಿನೊಂದಿಗೆ ಕಾರ್ಯರೂಪಕ್ಕೆ ಹಾಕಲ್ಪಟ್ಟಿತು.” ಶೀತಲ ಸಮರದ ವರ್ಷಗಳು ಮುಂದುವರಿದಂತೆ, ದಕ್ಷಿಣ ರಾಜನ “ತಳ್ಳಾಟ”ದಲ್ಲಿ ಉಚ್ಚ ಮಟ್ಟದ ತಂತ್ರಜ್ಞಾನದ ಗೂಢಚಾರತನ ಹಾಗೂ ರಾಜತಾಂತ್ರಿಕತೆ ಮತ್ತು ಮಿಲಿಟರಿ ಆಕ್ರಮಣಗಳು ಒಳಗೂಡಿದ್ದವು.

16. ದಕ್ಷಿಣ ರಾಜನ ತಳ್ಳಾಟಕ್ಕೆ ಉತ್ತರ ರಾಜನು ಹೇಗೆ ಪ್ರತಿಕ್ರಿಯಿಸಿದನು?

16 ಉತ್ತರ ರಾಜನು ಹೇಗೆ ಪ್ರತಿಕ್ರಿಯಿಸಿದನು? “ಅವನು [ಉತ್ತರ ರಾಜನು] ರಥಾಶ್ವಬಲಗಳಿಂದಲೂ ಬಹು ನಾವೆಗಳಿಂದಲೂ ಕೂಡಿ ದಕ್ಷಿಣರಾಜನ ಮೇಲೆ ರಭಸವಾಗಿ ಬಿದ್ದು ನಾಡುನಾಡುಗಳಲ್ಲಿ ನುಗ್ಗಿ ತುಂಬಿತುಳುಕಿ ಹರಡಿಕೊಳ್ಳುವನು.” (ದಾನಿಯೇಲ 11:40ಬಿ) ಅಂತ್ಯಕಾಲದ ಇತಿಹಾಸವು ಉತ್ತರ ರಾಜನ ರಾಜ್ಯವಿಸ್ತಾರ್ಯದ ಕಡೆಗೆ ವಿಶೇಷವಾಗಿ ಗಮನ ಸೆಳೆದಿದೆ. ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ನಾಸಿ “ರಾಜ”ನು ತನ್ನ ಗಡಿಗಳನ್ನು ದಾಟಿ ಸುತ್ತುಮುತ್ತಲ ನಾಡುಗಳಿಗೆ ನುಗ್ಗಿ ದಾಳಿಮಾಡಿದನು. ಆ ಯುದ್ಧದ ಕೊನೆಯಲ್ಲಿ, ಉತ್ತರಾಧಿಕಾರಿ “ರಾಜ”ನು ಒಂದು ಪ್ರಬಲವಾದ ಸಾಮ್ರಾಜ್ಯವನ್ನು ಕಟ್ಟಿದನು. ಶೀತಲ ಸಮರದ ಸಮಯದಲ್ಲಿ ಉತ್ತರ ರಾಜನು, ಆಫ್ರಿಕ, ಏಷ್ಯಾ, ಹಾಗೂ ಲ್ಯಾಟಿನ್‌ ಅಮೆರಿಕದ ಯುದ್ಧಗಳಲ್ಲಿ ಹಾಗೂ ಬಂಡಾಯಗಳಲ್ಲಿ ತನ್ನ ಪ್ರತಿಸ್ಪರ್ಧಿಯೊಂದಿಗೆ ಹೋರಾಡಿದನು. ನಿಜ ಕ್ರೈಸ್ತರನ್ನು ಅವನು ಹಿಂಸಿಸಿದನು ಮತ್ತು ಅವರ ಚಟುವಟಿಕೆಗೆ ಅಡಚಣೆಯೊಡ್ಡಿದನು. ಆದರೆ, ಅವರ ಚಟುವಟಿಕೆಯನ್ನು ನಿಲ್ಲಿಸಲು ಶಕ್ತನಾಗಲಿಲ್ಲ ಎಂಬುದು ಸುವ್ಯಕ್ತ. ಇದಲ್ಲದೆ, ಅವನ ಮಿಲಿಟರಿ ಹಾಗೂ ರಾಜಕೀಯ ಆಕ್ರಮಣಗಳು, ಅನೇಕ ದೇಶಗಳನ್ನು ಅವನ ಹತೋಟಿಗೆ ತಂದವು. ಇದು ದೇವದೂತನು ಪ್ರವಾದಿಸಿದ್ದ ಹಾಗೆಯೇ ಸಂಭವಿಸಿತ್ತು: “[ಅವನು] ಅಂದಚಂದದ ದೇಶಕ್ಕೂ [ಯೆಹೋವನ ಜನರ ಆತ್ಮಿಕ ಸ್ಥಿತಿ] ನುಗ್ಗುವನು; ಅನೇಕ ಸೀಮೆಗಳು ಅವನಿಂದ ಹಾಳಾಗುವವು.”​—⁠ದಾನಿಯೇಲ 11:41ಎ.

17. ಉತ್ತರ ರಾಜನ ರಾಜ್ಯವಿಸ್ತಾರ್ಯ ಕಾರ್ಯಕ್ಕೆ ಯಾವ ಮಿತಿಗಳಿದ್ದವು?

17 ಆದರೂ, ಉತ್ತರ ರಾಜನು ಜಾಗತಿಕ ವಿಜಯವನ್ನು ಸಾಧಿಸಲಿಲ್ಲ. ದೇವದೂತನು ಮುಂತಿಳಿಸಿದ್ದು: “ಆದರೆ ಎದೋಮ್ಯರು, ಮೋವಾಬ್ಯರು, ಅಮ್ಮೋನಿನ ಹೆಚ್ಚಿನ ಭಾಗದವರು, ಇವರುಗಳು ಅವನ ಕೈಯಿಂದ ತಪ್ಪಿಸಿಕೊಳ್ಳುವರು.” (ದಾನಿಯೇಲ 11:41ಬಿ) ಪುರಾತನ ಕಾಲದಲ್ಲಿ, ಎದೋಮ್‌, ಮೋವಾಬ್‌, ಹಾಗೂ ಅಮ್ಮೋನ್‌ಗಳು ಐಗುಪ್ತದ ದಕ್ಷಿಣ ರಾಜ ಹಾಗೂ ಸಿರಿಯದ ಉತ್ತರ ರಾಜನ ಆಧಿಪತ್ಯಗಳ ನಡುವೆ ನೆಲೆಸಿದ್ದವು. ಆಧುನಿಕ ಸಮಯದಲ್ಲಿ, ಉತ್ತರ ರಾಜನು ತನ್ನ ಹತೋಟಿಗೆ ತಂದುಕೊಳ್ಳಬೇಕೆಂದು ಗುರಿಯಿಟ್ಟಿದ್ದ, ಆದರೆ ತನ್ನ ಪ್ರಭಾವದ ಕೆಳಗೆ ತರಲು ಅಸಮರ್ಥವಾದ ರಾಷ್ಟ್ರಗಳು ಹಾಗೂ ಸಂಸ್ಥೆಗಳನ್ನು ಅವು ಪ್ರತಿನಿಧಿಸುತ್ತವೆ.

ಐಗುಪ್ತವೂ ತಪ್ಪಿಸಿಕೊಳ್ಳುವುದಿಲ್ಲ

18, 19. ಯಾವ ವಿಧಗಳಲ್ಲಿ ದಕ್ಷಿಣ ರಾಜನ ಮೇಲೆ ಅವನ ಪ್ರತಿಸ್ಪರ್ಧಿಯು ಪ್ರಭಾವವನ್ನು ಬೀರಿದನು?

18 ಯೆಹೋವನ ದೂತನು ಮುಂದುವರಿಸಿದ್ದು: “ಅವನು [ಉತ್ತರ ರಾಜನು] ದೇಶಗಳ ಮೇಲೆ ಕೈಮಾಡಲು ಐಗುಪ್ತದೇಶವೂ ತನ್ನನ್ನು ರಕ್ಷಿಸಿಕೊಳ್ಳದು. ಅವನು ಬೆಳ್ಳಿಬಂಗಾರಗಳ ನಿಧಿನಿಕ್ಷೇಪಗಳನ್ನೂ ಐಗುಪ್ತದ ಒಳ್ಳೊಳ್ಳೆಯ ಸಮಸ್ತ ವಸ್ತುಗಳನ್ನೂ ವಶಮಾಡಿಕೊಳ್ಳುವನು; ಲೂಬ್ಯರೂ ಕೂಷ್ಯರೂ ಅವನನ್ನು ಹಿಂಬಾಲಿಸಿ ಹೋಗುವರು.” (ದಾನಿಯೇಲ 11:​42, 43) ದಕ್ಷಿಣ ರಾಜನಾದ “ಐಗುಪ್ತ”ವು ಸಹ, ಉತ್ತರ ರಾಜನ ರಾಜ್ಯವಿಸ್ತಾರ್ಯ ಕಾರ್ಯನೀತಿಗಳ ಪರಿಣಾಮದಿಂದ ತಪ್ಪಿಸಿಕೊಳ್ಳಲಿಲ್ಲ. ಉದಾಹರಣೆಗೆ, ದಕ್ಷಿಣ ರಾಜನು ವಿಯೆಟ್ನಾಮ್‌ನಲ್ಲಿ ಎದ್ದುಕಾಣುವಂತಹ ರೀತಿಯ ಸೋಲನ್ನು ಅನುಭವಿಸಿದನು. ‘ಲೂಬ್ಯರು ಮತ್ತು ಕೂಷ್ಯರ’ ಕುರಿತಾಗಿ ಏನು? ​ಪುರಾತನ ಐಗುಪ್ತದ ಈ ನೆರೆಹೊರೆಯ ಜನಾಂಗಗಳು, ಭೂಗೋಳ ಶಾಸ್ತ್ರಕ್ಕನುಸಾರ, ಆಧುನಿಕ “ಐಗುಪ್ತ”ದ (ದಕ್ಷಿಣ ರಾಜ) ನೆರೆಹೊರೆಯ ಜನಾಂಗಗಳನ್ನು ಮುನ್ಸೂಚಿಸುತ್ತವೆ. ಕೆಲವೊಮ್ಮೆ, ಇವರು ಉತ್ತರ ರಾಜನನ್ನು ‘ಹಿಂಬಾಲಿಸುತ್ತಾ’ ಅವನ ಅನುಯಾಯಿ​ಗಳಾಗಿದ್ದಾರೆ.

19 ಉತ್ತರ ರಾಜನು ‘ಐಗುಪ್ತದ ನಿಧಿನಿಕ್ಷೇಪಗಳನ್ನು’ ವಶಮಾಡಿಕೊಂಡನೋ? ದಕ್ಷಿಣ ರಾಜನು ತನ್ನ ಆರ್ಥಿಕ ಸಂಪನ್ಮೂಲಗಳನ್ನು ಉಪಯೋಗಿಸಿರುವ ರೀತಿಯ ಮೇಲೆ, ಉತ್ತರ ರಾಜನು ಖಂಡಿತವಾಗಿಯೂ ಬಲವಾದ ಪ್ರಭಾವವನ್ನು ಬೀರಿದ್ದನು. ತನ್ನ ಪ್ರತಿಸ್ಪರ್ಧಿಯ ಭಯದ ಕಾರಣ, ಜಯಿಸಲು ಅಸಾಧ್ಯವಾದ ಭೂಸೇನೆ, ನೌಕಾಪಡೆ, ಹಾಗೂ ವಾಯುಪಡೆಯನ್ನು ಇಟ್ಟುಕೊಳ್ಳಲಿಕ್ಕಾಗಿ ದಕ್ಷಿಣ ರಾಜನು ಅತ್ಯಧಿಕ ಮೊತ್ತದ ಹಣವನ್ನು ವಿನಿಯೋಗಿಸಿದ್ದಾನೆ. ಇಷ್ಟರ ಮಟ್ಟಿಗೆ ಉತ್ತರ ರಾಜನು ದಕ್ಷಿಣ ರಾಜನ ಐಶ್ವರ್ಯದ ವಿನಿಯೋಗವನ್ನು ‘ವಶಮಾಡಿಕೊಂಡನು’ ಅಥವಾ ಹತೋಟಿಯಲ್ಲಿಟ್ಟುಕೊಂಡನು.

ಅಂತಿಮ ಕಾರ್ಯಾಚರಣೆ

20. ಉತ್ತರ ರಾಜನ ಅಂತಿಮ ಕಾರ್ಯಾಚರಣೆಯನ್ನು ದೇವದೂತನು ಹೇಗೆ ವರ್ಣಿಸಿದನು?

20 ಉತ್ತರ ರಾಜ ಹಾಗೂ ದಕ್ಷಿಣ ರಾಜನ ನಡುವಿನ ಪ್ರತಿಸ್ಪರ್ಧೆಯು, ಅದು ಮಿಲಿಟರಿ ಸೈನ್ಯ, ಆರ್ಥಿಕ ಬಲ, ಅಥವಾ ಇನ್ನಾವುದೇ ರೀತಿಯಿಂದ ನಡೆಸಲ್ಪಡುತ್ತಿರಲಿ, ಅದರ ಅಂತ್ಯವನ್ನು ಸಮೀಪಿಸುತ್ತಾ ಇದೆ. ಇನ್ನೂ ಮುಂದೆ ಸಂಭವಿಸಲಿಕ್ಕಿದ್ದ ಹೋರಾಟದ ವಿವರವನ್ನು ತಿಳಿಯಪಡಿಸುತ್ತಾ ಯೆಹೋವನ ದೂತನು ಹೇಳಿದ್ದು: “ಹೀಗಿರಲು ಮೂಡಲಿಂದಲೂ ಬಡಗಲಿಂದಲೂ ಬರುವ ಸುದ್ದಿಯು ಅವನನ್ನು [ಉತ್ತರ ರಾಜನನ್ನು] ಬಾಧಿಸುವದು; ಅವನು ಅತಿರೋಷಗೊಂಡು ಬಹು ಜನರನ್ನು ಧ್ವಂಸಿಸಿ ನಿರ್ನಾಮಮಾಡುವದಕ್ಕೆ ಹೊರಡುವನು. ಸಮುದ್ರಕ್ಕೂ ಅಂದಚಂದದ ಪರಿಶುದ್ಧಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು; ಆಹಾ, ಅವನು ಕೊನೆಗಾಣುವನು, ಯಾರೂ ಅವನಿಗೆ ಸಹಾಯಮಾಡರು.”​—⁠ದಾನಿಯೇಲ 11:​44, 45.

21. ಉತ್ತರ ರಾಜನ ಕುರಿತು ಇನ್ನೂ ಏನನ್ನು ಕಲಿಯಲಿಕ್ಕಿದೆ?

21 ಡಿಸೆಂಬರ್‌ 1991ರಲ್ಲಿ ಸೋವಿಯಟ್‌ ಒಕ್ಕೂಟದ ಕಾರ್ಯವು ನಿಂತುಹೋದಾಗ, ಉತ್ತರ ರಾಜನು ದೊಡ್ಡ ಸೋಲನ್ನು ಅನುಭವಿಸಿದನು. ದಾನಿಯೇಲ ​11:44, 45ನೆಯ ವಚನಗಳು ನೆರವೇರುವಾಗ, ಈ ಉತ್ತರ ರಾಜನು ಯಾರಾಗಿರಲಿದ್ದನು? ಹಿಂದಣ ಸೋವಿಯಟ್‌ ಒಕ್ಕೂಟದ ಭಾಗವಾಗಿದ್ದ ದೇಶಗಳಲ್ಲಿ ಒಂದನ್ನು ಉತ್ತರ ರಾಜನ ಸ್ಥಾನದಲ್ಲಿ ಗುರುತಿಸಸಾಧ್ಯವಿದೆಯೊ? ಅಥವಾ ಈ ಮುಂಚೆ ಅವನು ಅನೇಕ ಬಾರಿ ಮಾಡಿರುವಂತೆ, ತನ್ನ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸುವನೊ? ಇನ್ನೂ ಅನೇಕ ರಾಷ್ಟ್ರಗಳು ನ್ಯೂಕ್ಲಿಯರ್‌ ಶಸ್ತ್ರಗಳನ್ನು ತಯಾರಿಸುವುದರಿಂದ, ಹೊಸ ಶಸ್ತ್ರಾಸ್ತ್ರ ಪೈಪೋಟಿಯು ಆರಂಭವಾಗಿ, ಇದು ಉತ್ತರ ರಾಜನ ಸ್ವರೂಪವನ್ನು ಬದಲಾಯಿಸುವುದೊ? ಈ ಪ್ರಶ್ನೆಗಳಿಗೆಲ್ಲ ಕೇವಲ ಸಮಯವು ಉತ್ತರವನ್ನು ಒದಗಿಸುವುದು. ಇದರ ಬಗ್ಗೆ ನಾವು ಯಾವುದೇ ಊಹೆಗಳನ್ನು ಮಾಡದಿರುವುದು ಒಳ್ಳೇದು. ಉತ್ತರ ರಾಜನು ತನ್ನ ಅಂತಿಮ ಕಾರ್ಯಾಚರಣೆಯನ್ನು ಆರಂಭಿಸುವಾಗ, ಯಾರಿಗೆ ಬೈಬಲ್‌ ಆಧಾರಿತ ಒಳನೋಟವಿದೆಯೋ ಅವರು ಈ ಪ್ರವಾದನೆಯ ನೆರವೇರಿಕೆಯನ್ನು ಸ್ಪಷ್ಟವಾಗಿ ಅರಿತುಕೊಳ್ಳುವರು.​—⁠284ನೆಯ ಪುಟದಲ್ಲಿರುವ “ದಾನಿಯೇಲ ಪುಸ್ತಕದ 11ನೆಯ ಅಧ್ಯಾಯದಲ್ಲಿರುವ ರಾಜರು” ಎಂಬ ಶೀರ್ಷಿಕೆಯ ಕೆಳಗಿರುವ ವಿಷಯವನ್ನು ನೋಡಿ.

22. ಉತ್ತರ ರಾಜನ ಅಂತಿಮ ಆಕ್ರಮಣದ ಕುರಿತು ಯಾವ ಪ್ರಶ್ನೆಗಳು ಏಳುತ್ತವೆ?

22 ಆದರೂ, ಶೀಘ್ರದಲ್ಲೇ ಉತ್ತರ ರಾಜನು ಯಾವ ಕ್ರಿಯೆಯನ್ನು ಕೈಕೊಳ್ಳುವನು ಎಂಬುದು ನಮಗೆ ಗೊತ್ತಿಲ್ಲ. “ಮೂಡಲಿಂದಲೂ ಬಡಗಲಿಂದಲೂ ಬರುವ” ಸುದ್ದಿಗಳಿಂದ ಪ್ರಚೋದಿತನಾಗಿ, ‘ಬಹು ಜನರನ್ನು ಧ್ವಂಸಮಾಡಲಿಕ್ಕಾಗಿ’ ಅವನು ಒಂದು ದಂಡಯಾತ್ರೆಯನ್ನು ಆರಂಭಿಸುವನು. ಯಾರ ವಿರುದ್ಧವಾಗಿ ಈ ದಂಡಯಾತ್ರೆಯನ್ನು ನಡಿಸುವನು? ಮತ್ತು ಯಾವ “ಸುದ್ದಿ”ಗಳು ಇಂತಹ ಆಕ್ರಮಣವನ್ನು ಉಂಟು​ಮಾಡುತ್ತವೆ?

ನೆಮ್ಮದಿಗೆಡಿಸುವಂತಹ ಸುದ್ದಿಯಿಂದ ಕೆರಳಿಸಲ್ಪಟ್ಟದ್ದು

23. (ಎ) ಅರ್ಮಗೆದೋನಿನ ಮೊದಲು ಯಾವ ಪ್ರಮುಖ ಘಟನೆಯು ಸಂಭವಿಸಲೇಬೇಕು? (ಬಿ) “ಮೂಡಣ ದಿಕ್ಕಿನಿಂದ ಬರುವ ರಾಜ”ರು ಯಾರಾಗಿದ್ದಾರೆ?

23 ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಅಂತ್ಯದ ಕುರಿತು ಪ್ರಕಟನೆ ಪುಸ್ತಕವು ಏನು ಹೇಳುತ್ತದೆ ಎಂಬುದನ್ನು ಪರಿಗಣಿಸಿರಿ. “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧ”ಕ್ಕೆ, ಅಂದರೆ ಅರ್ಮಗೆದೋನ್‌ ಯುದ್ಧಕ್ಕೂ ಮೊದಲು, ಸತ್ಯಾರಾಧನೆಯ ಈ ದೊಡ್ಡ ವೈರಿಯು ‘ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟು’ಹಾಕಲ್ಪಡುವಳು. (ಪ್ರಕಟನೆ 16:​14, 16; 18:​2-8) ದೇವರ ರೌದ್ರದ ಆರನೆಯ ಪಾತ್ರೆಯನ್ನು ಸಾಂಕೇತಿಕ ಯೂಫ್ರೇಟೀಸ್‌ ನದಿಯ ಮೇಲೆ ಸುರಿದುಬಿಡುವ ಮೂಲಕ ಅವಳ ನಾಶನವು ಮುನ್ಸೂಚಿಸಲ್ಪಟ್ಟಿದೆ. ಆ ನದಿಯು ಇಂಗಿಹೋಗುತ್ತದೆ, ಮತ್ತು ‘ಮೂಡಣ ದಿಕ್ಕಿನಿಂದ ಬರುವ ರಾಜರಿಗೆ ಅದು ಮಾರ್ಗವನ್ನು ​ಸಿದ್ಧಮಾಡುತ್ತದೆ.’ (ಪ್ರಕಟನೆ 16:12) ಈ ರಾಜರು ಯಾರಾಗಿದ್ದಾರೆ? ಯೆಹೋವ ದೇವರು ಮತ್ತು ಯೇಸು ಕ್ರಿಸ್ತರಲ್ಲದೆ ಮತ್ತಾರೂ ಅಲ್ಲ!​—⁠ಹೋಲಿಸಿರಿ ಯೆಶಾಯ 41:2; ​46:​10, 11.

24. ಯೆಹೋವನ ಯಾವ ಕೃತ್ಯವು ಉತ್ತರ ರಾಜನನ್ನು ಕೆರಳಿಸುವುದು?

24 ಮಹಾ ಬಾಬೆಲಿನ ನಾಶನದ ಕುರಿತು ಪ್ರಕಟನೆ ಪುಸ್ತಕದಲ್ಲಿ ಸುಸ್ಪಷ್ಟವಾಗಿ ವರ್ಣಿಸಲಾಗಿದೆ. ಅದು ಹೀಗೆ ಹೇಳುತ್ತದೆ: “ಇದಲ್ಲದೆ ಹತ್ತು ಕೊಂಬುಗಳನ್ನೂ [ಅಂತ್ಯಕಾಲದಲ್ಲಿ ಆಳುತ್ತಿರುವ ರಾಜರು] ಮೃಗವನ್ನೂ [ವಿಶ್ವಸಂಸ್ಥೆ] ಕಂಡಿಯಲ್ಲ? ಇವುಗಳಿಂದ ಸೂಚಿತರಾದವರು ಆ ಜಾರಸ್ತ್ರೀಯನ್ನು ದ್ವೇಷಿಸಿ ಅವಳನ್ನು ಗತಿಗೆಟ್ಟವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವರು.” (ಪ್ರಕಟನೆ 17:16) ಈ ಅಧಿಪತಿಗಳು ಮಹಾ ಬಾಬೆಲನ್ನು ಏಕೆ ನಾಶಮಾಡುವರು? ಏಕೆಂದರೆ ‘ತನ್ನ ವಚನವು ನೆರವೇರುವಂತೆ ದೇವರು ಅವರ ಹೃದಯಗಳನ್ನು ಪ್ರೇರೇಪಿಸುವನು.’ (ಪ್ರಕಟನೆ 17:17) ಈ ಅಧಿಪತಿಗಳಲ್ಲಿ ಉತ್ತರ ರಾಜನು ಸಹ ಸೇರಿದ್ದಾನೆ. ಆದುದರಿಂದ, “ಮೂಡಲಿಂದ” ಅವನು ಕೇಳಿಸಿಕೊಳ್ಳುವ ವಿಚಾರವು, ಮಹಾ ಧಾರ್ಮಿಕ ವೇಶ್ಯೆಯನ್ನು ಸಂಹರಿಸುವಂತೆ ಮಾನವ ಮುಖಂಡರ ಹೃದಯವನ್ನು ಪ್ರೇರಿಸುವ ಯೆಹೋವನ ಈ ಕೃತ್ಯಕ್ಕೆ ಸೂಚಿತವಾಗಿರಬಹುದು.

25. (ಎ) ಉತ್ತರ ರಾಜನಿಗೆ ಯಾವ ವಿಶೇಷ ಗುರಿಯಿದೆ? (ಬಿ) ಉತ್ತರ ರಾಜನು “ಅರಮನೆಯಂಥ ತನ್ನ ಗುಡಾರಗಳನ್ನು” ಎಲ್ಲಿ “ಹಾಕಿಸುವನು”?

25 ಉತ್ತರ ರಾಜನ ರೋಷಕ್ಕೆ ಇನ್ನೊಂದು ವಿಶೇಷ ಗುರಿಯಿದೆ. ಅವನು “ಸಮುದ್ರಕ್ಕೂ ಅಂದಚಂದದ ಪರಿಶುದ್ಧಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು” ಎಂದು ದೇವದೂತನು ಹೇಳುತ್ತಾನೆ. ದಾನಿಯೇಲನ ಕಾಲದಲ್ಲಿ, ಆ ಸಮುದ್ರವು ಮೆಡಿಟರೇನಿಯನ್‌ ಸಮುದ್ರವಾಗಿದ್ದು, ಪರಿಶುದ್ಧ ಪರ್ವತವು ಚೀಯೋನ್‌ ಪರ್ವತವಾಗಿತ್ತು; ಒಂದುಕಾಲದಲ್ಲಿ ಈ ಚೀಯೋನ್‌ ಪರ್ವತವು ದೇವರ ಆಲಯವಿದ್ದ ಸ್ಥಳವಾಗಿತ್ತು. ಆದುದರಿಂದ, ಈ ಪ್ರವಾದನೆಯ ನೆರವೇರಿಕೆಯಲ್ಲಿ, ರೋಷಗೊಂಡ ಉತ್ತರ ರಾಜನು ದೇವಜನರ ವಿರುದ್ಧ ಒಂದು ದಂಡಯಾತ್ರೆಯನ್ನು ಆರಂಭಿಸುತ್ತಾನೆ. ಆತ್ಮಿಕ ಅರ್ಥದಲ್ಲಿ, “ಸಮುದ್ರಕ್ಕೂ ಅಂದಚಂದದ ಪರಿಶುದ್ಧಪರ್ವತಕ್ಕೂ ನಡುವೆ” ಇರುವ ಸ್ಥಳವು, ಯೆಹೋವನ ಅಭಿಷಿಕ್ತ ಸೇವಕರ ಆತ್ಮಿಕ ಸ್ಥಿತಿಯನ್ನು ಪ್ರತಿನಿಧಿಸುತ್ತದೆ. ದೇವರಿಗೆ ಬೆನ್ನುಹಾಕಿರುವ ಮಾನವಕುಲದ “ಸಮುದ್ರ”ದಿಂದ ಅವರು ಹೊರಗೆ ಬಂದಿದ್ದಾರೆ ಮತ್ತು ಸ್ವರ್ಗೀಯ ಚೀಯೋನ್‌ ಪರ್ವತದಲ್ಲಿ ಯೇಸು ಕ್ರಿಸ್ತನೊಂದಿಗೆ ಆಳುವ ನಿರೀಕ್ಷೆಯುಳ್ಳವರಾಗಿದ್ದಾರೆ.​—⁠ಯೆಶಾಯ 57:20; ಇಬ್ರಿಯ 12:22; ಪ್ರಕಟನೆ 14:⁠1.

26. ಯೆಹೆಜ್ಕೇಲ ಪ್ರವಾದನೆಯಿಂದ ಸೂಚಿಸಲ್ಪಟ್ಟಂತೆ, “ಬಡಗಲಿಂದ” ಬರುವ ವಾರ್ತೆಯ ಮೂಲವು ಯಾವುದಾಗಿರಬಹುದು?

26 ದಾನಿಯೇಲನ ಸಮಕಾಲೀನನಾದ ಯೆಹೆಜ್ಕೇಲನು ಸಹ, “ದಿನಗಳ ಅಂತ್ಯಭಾಗದಲ್ಲಿ” (NW) ದೇವಜನರ ಮೇಲೆ ಮಾಡಲ್ಪಡುವ ಆಕ್ರಮಣದ ಬಗ್ಗೆ ಪ್ರವಾದಿಸಿದನು. ಮಾಗೋಗಿನ ಗೋಗನನ್ನು ಪ್ರತಿನಿಧಿಸುವ ಪಿಶಾಚನಾದ ಸೈತಾನನು ಆಕ್ರಮಣಗಳನ್ನು ಆರಂಭಿಸುವನೆಂದು ಅವನು ಹೇಳಿದನು. (ಯೆಹೆಜ್ಕೇಲ 38:​14, 16) ಸಾಂಕೇತಿಕವಾಗಿ, ಗೋಗನು ಯಾವ ದಿಕ್ಕಿನಿಂದ ಬರುತ್ತಾನೆ? “ಉತ್ತರದಿಕ್ಕಿನ ಕಟ್ಟಕಡೆಯಿಂದ” ಬರುತ್ತಾನೆ ಎಂದು ಯೆಹೋವನು ಯೆಹೆಜ್ಕೇಲನ ಮೂಲಕ ಹೇಳುತ್ತಾನೆ. (ಯೆಹೆಜ್ಕೇಲ 38:15) ಆದರೂ, ಈ ಆಕ್ರಮಣವು ಎಷ್ಟೇ ಕ್ರೂರವಾಗಿರಲಿ, ಅದು ಯೆಹೋವನ ಜನರನ್ನು ನಾಶಮಾಡುವುದಿಲ್ಲ. ಈ ನಾಟಕೀಯ ಘರ್ಷಣೆಯು, ಯೆಹೋವನು ಗೋಗನ ಸೈನ್ಯಗಳನ್ನು ಸಂಪೂರ್ಣವಾಗಿ ನಾಶಮಾಡುವಂತಹ ಒಂದು ಯುದ್ಧ ತಂತ್ರೋಪಾಯವನ್ನು ಕೈಕೊಳ್ಳುವಂತೆ ಮಾಡುವುದು. ಆದುದರಿಂದ, ಯೆಹೋವನು ಸೈತಾನನಿಗೆ ಹೇಳುವುದು: ‘ನಿನ್ನ ದವಡೆಗೆ ಕೊಕ್ಕೆಹಾಕಿ ಈಚೆಗೆ ಎಳೆಯುವೆನು.’ ‘ನಾನು ನಿನಗೆ ವಿರುದ್ಧವಾಗಿ ನಿನ್ನನ್ನು ತಿರುಗಿಸಿ ಮುಂದರಿಸಿ ಉತ್ತರದಿಕ್ಕಿನ ಕಟ್ಟಕಡೆಯಿಂದ ಬರಮಾಡಿ ಇಸ್ರಾಯೇಲಿನ ಪರ್ವತಗಳ ಮೇಲೆ ನುಗ್ಗಿಸುವೆನು.’ (ಯೆಹೆಜ್ಕೇಲ 38:4; 39:⁠2) ಆದುದರಿಂದ, ಉತ್ತರ ರಾಜನನ್ನು ರೋಷಗೊಳಿಸುವ “ಬಡಗಲಿಂದ” ಬರುವ ವಾರ್ತೆಯು, ಯೆಹೋವನಿಂದಲೇ ಬಂದದ್ದಾಗಿರಬೇಕು. ಆದರೆ ಕೊನೆಯದಾಗಿ “ಮೂಡಲಿಂದಲೂ ಬಡಗಲಿಂದಲೂ ಬರುವ” ವಾರ್ತೆಗಳಲ್ಲಿ ಏನು ಒಳಗೂಡಿರುವುದು ಎಂಬುದನ್ನು, ದೇವರು ಮಾತ್ರವೇ ನಿರ್ಧರಿಸುವನು ಹಾಗೂ ಸಮಯವು ಅದನ್ನು ತಿಳಿಯಪಡಿಸುವುದು.

27. (ಎ) ಗೋಗನೂ ಉತ್ತರ ರಾಜನೂ ಒಟ್ಟಿಗೆ ಸೇರಿಕೊಂಡು, ಯೆಹೋವನ ಜನರ ಮೇಲೆ ಆಕ್ರಮಣಮಾಡುವಂತೆ ಇತರ ರಾಷ್ಟ್ರಗಳನ್ನು ಏಕೆ ಪ್ರಚೋದಿಸುವರು? (ಬಿ) ಗೋಗನ ಆಕ್ರಮಣದ ಫಲಿತಾಂಶವೇನಾಗುವುದು?

27 ಗೋಗನ ವಿಷಯದಲ್ಲಿ ಹೇಳುವುದಾದರೆ, ಯಾರು “ಬೇರೆ ಕುರಿಗಳ” “ಮಹಾ ಸಮೂಹ”ದೊಂದಿಗೆ ಅವನ ಲೋಕದ ಭಾಗವಾಗಿರುವುದಿಲ್ಲವೋ, ಆ “ದೇವರ ಇಸ್ರಾಯೇಲ್ಯರ” ಸಮೃದ್ಧಿಯ ಕಾರಣ ಅವನು ಸರ್ವಶಕ್ತಿಯನ್ನೂ ಉಪಯೋಗಿಸಿ ಒಂದು ಆಕ್ರಮಣವನ್ನು ಸಂಘಟಿಸುತ್ತಾನೆ. (ಗಲಾತ್ಯ 6:16; ಪ್ರಕಟನೆ 7:9; ಯೋಹಾನ 10:16; 17:​15, 16; 1 ಯೋಹಾನ 5:19) “ಜನಾಂಗಗಳೊಳಗಿಂದ ಒಟ್ಟುಗೂಡಿ . . . [ಆತ್ಮಿಕ] ಸೊತ್ತನ್ನು ಸಂಗ್ರಹಿಸಿ”ಕೊಳ್ಳುವವರನ್ನು ಗೋಗನು ಮತ್ಸರದಿಂದ ನೋಡುತ್ತಾನೆ. (ಯೆಹೆಜ್ಕೇಲ 38:12) ಕ್ರೈಸ್ತ ಆತ್ಮಿಕ ಸ್ಥಿತಿಯನ್ನು, ಸುಲಭವಾಗಿ ​ಗೆಲ್ಲಸಾಧ್ಯವಿರುವ “ಪೌಳಿಗೋಡೆಯಿಲ್ಲದ ಹಳ್ಳಿಪಳ್ಳಿ”ಯಾಗಿ ಪರಿಗಣಿಸುತ್ತಾ, ಮಾನವ​ಕುಲದ ಮೇಲೆ ತನಗಿರುವ ಸಂಪೂರ್ಣ ಹಿಡಿತವನ್ನು ತಡೆಗಟ್ಟುವ ಈ ವಿಘ್ನವನ್ನು ನಿರ್ಮೂಲಮಾಡಲು ಗೋಗನು ಭಾರೀ ಪ್ರಯತ್ನವನ್ನು ಮಾಡುತ್ತಾನೆ. ಆದರೆ ಅವನು ಸೋತುಹೋಗುತ್ತಾನೆ. (ಯೆಹೆಜ್ಕೇಲ 38:​11, 18; 39:⁠4) ಉತ್ತರ ರಾಜನನ್ನೂ ಒಳಗೊಂಡು ಅನೇಕ ಭೂರಾಜರು ಯೆಹೋವನ ಜನರ ಮೇಲೆ ಆಕ್ರಮಣ ಮಾಡುವಾಗ, ಅವರು ‘ಕೊನೆಗಾಣುವರು.’

‘ಆ ರಾಜನು ಕೊನೆಗಾಣುವನು’

28. ಉತ್ತರ ರಾಜ ಹಾಗೂ ದಕ್ಷಿಣ ರಾಜನ ಭವಿಷ್ಯತ್ತಿನ ಕುರಿತು ನಮಗೇನು ತಿಳಿದಿದೆ?

28 ಉತ್ತರ ರಾಜನ ಅಂತಿಮ ಕಾರ್ಯಾಚರಣೆಯು ದಕ್ಷಿಣ ರಾಜನ ವಿರುದ್ಧವಾಗಿರುವುದಿಲ್ಲ. ಆದುದರಿಂದ, ತನ್ನ ಅತಿ ದೊಡ್ಡ ಪ್ರತಿಸ್ಪರ್ಧಿಯ ಕೈಗಳಲ್ಲಿ ಉತ್ತರ ರಾಜನು ಹತನಾಗುವುದಿಲ್ಲ. ತದ್ರೀತಿಯಲ್ಲಿ, ದಕ್ಷಿಣ ರಾಜನು ಉತ್ತರ ರಾಜನಿಂದ ನಾಶಗೊಳಿಸಲ್ಪಡುವುದಿಲ್ಲ. ದಕ್ಷಿಣ ರಾಜನು “ಯಾರ [ಮಾನವ] ಕೈಯೂ ಸೋಕದೆ,” ಅಂದರೆ ದೇವರ ರಾಜ್ಯದಿಂದ ನಾಶಗೊಳಿಸಲ್ಪಡುವನು. * (ದಾನಿಯೇಲ 8:25) ವಾಸ್ತವದಲ್ಲಿ, ಅರ್ಮಗೆದೋನ್‌ ಯುದ್ಧದಲ್ಲಿ, ದೇವರ ರಾಜ್ಯವು ಎಲ್ಲ ಭೂರಾಜರನ್ನು ನಿರ್ಮೂಲಮಾಡುವುದು, ಮತ್ತು ಉತ್ತರ ರಾಜನಿಗೂ ಇದೇ ಗತಿಯು ಸಂಭವಿಸುವುದು. (ದಾನಿಯೇಲ 2:44) ಆ ಅಂತಿಮ ಕದನಕ್ಕೆ ನಡಿಸುವ ಘಟನೆಗಳನ್ನು ದಾನಿಯೇಲ 11:​44, 45ನೆಯ ವಚನಗಳು ವಿವರಿಸುತ್ತವೆ. ಉತ್ತರ ರಾಜನು ತನ್ನ ಅಂತ್ಯವನ್ನು ಸಮೀಪಿಸುವಾಗ, “ಯಾರೂ ಅವನಿಗೆ ಸಹಾಯಮಾಡು”ವುದಿಲ್ಲ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ!

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 28 ಈ ಪುಸ್ತಕದ 10ನೆಯ ಅಧ್ಯಾಯವನ್ನು ನೋಡಿರಿ.

ನೀವೇನನ್ನು ಗ್ರಹಿಸಿದಿರಿ?

• ಎರಡನೆಯ ಲೋಕ ಯುದ್ಧದ ಬಳಿಕ, ಉತ್ತರ ರಾಜನ ಸ್ವರೂಪವು ಹೇಗೆ ಬದಲಾಯಿತು?

• ಉತ್ತರ ರಾಜನಿಗೆ ಹಾಗೂ ದಕ್ಷಿಣ ರಾಜನಿಗೆ ಅಂತಿಮವಾಗಿ ಏನು ಸಂಭವಿಸುವುದು?

• ಇಬ್ಬರು ರಾಜರ ನಡುವಿನ ಪ್ರತಿಸ್ಪರ್ಧೆಯ ಕುರಿತಾದ ದಾನಿಯೇಲನ ಪ್ರವಾದನೆಗೆ ಕಿವಿಗೊಡುವ ಮೂಲಕ ನೀವು ಹೇಗೆ ಪ್ರಯೋಜನವನ್ನು ಪಡೆದುಕೊಂಡಿದ್ದೀರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 395 ರಲ್ಲಿರುವ ಚಿತ್ರ]

ದಾನಿಯೇಲ ಪುಸ್ತಕದ 11ನೆಯ ಅಧ್ಯಾಯದಲ್ಲಿರುವ ರಾಜರುಗಳು

ಉತ್ತರ ದಕ್ಷಿಣ

ರಾಜ ರಾಜ

ದಾನಿಯೇಲ 11:5 Iನೆಯ ಸೆಲ್ಯೂಕಸ್‌ ನೈಕೇಟರ್‌ Iನೆಯ ಟಾಲೆಮಿ

ದಾನಿಯೇಲ 11:6 IIನೆಯ ಆ್ಯಂಟಾಯೊಕಸ್‌ IIನೆಯ ಟಾಲೆಮಿ

(ಪತ್ನಿ ಲೇಆಡಸೀ) (ಮಗಳು ಬೆರನೈಸೀ)

ದಾನಿಯೇಲ 11:​7-9 IIನೆಯ ಸೆಲ್ಯೂಕಸ್‌ IIIನೆಯ ಟಾಲೆಮಿ

ದಾನಿಯೇಲ 11:​10-12 IIIನೆಯ ಆ್ಯಂಟಾಯೊಕಸ್‌ IVನೆಯ ಟಾಲೆಮಿ

ದಾನಿಯೇಲ 11:​13-19 IIIನೆಯ ಆ್ಯಂಟಾಯೊಕಸ್‌ Vನೆಯ ಟಾಲೆಮಿ

(ಮಗಳು Iನೆಯ ಕ್ಲಿಯೋಪಾತ್ರ) ಉತ್ತರಾಧಿಕಾರಿ: VIನೆಯ ಟಾಲೆಮಿ

ಉತ್ತರಾಧಿಕಾರಿಗಳು:

IVನೆಯ ಸೆಲ್ಯೂಕಸ್‌ ಮತ್ತು

IVನೆಯ ಆ್ಯಂಟಾಯೊಕಸ್‌

ದಾನಿಯೇಲ 11:20 ಅಗಸ್ಟಸ್‌

ದಾನಿಯೇಲ 11:​21-24 ತಿಬೇರಿಯ

ದಾನಿಯೇಲ 11:​25, 26 ಆರೀಲಿಯನ್‌ ರಾಣಿ ಸೆನೋಬಿಯ

ರೋಮನ್‌ ಸಾಮ್ರಾಜ್ಯವು

ಒಡೆಯುತ್ತದೆ

ದಾನಿಯೇಲ 11:​27-30ಎ ಜರ್ಮನ್‌ ಸಾಮ್ರಾಜ್ಯ ಬ್ರಿಟನ್‌, ಹಾಗೂ ತದನಂತರ ಬರುವ

(Iನೆಯ ಲೋಕ ಯುದ್ಧ) ಆ್ಯಂಗ್ಲೊ-ಅಮೆರಿಕನ್‌

ಲೋಕ ಶಕ್ತಿ

ದಾನಿಯೇಲ 11:30ಬಿ, 31 ಹಿಟ್ಲರನ ಮೂರನೆಯ ರೈಖ್‌ ಆ್ಯಂಗ್ಲೊ-ಅಮೆರಿಕನ್‌

(IIನೆಯ ಲೋಕ ಯುದ್ಧ) ಲೋಕ ಶಕ್ತಿ

ದಾನಿಯೇಲ 11:​32-43 ಕಮ್ಯೂನಿಸ್ಟ್‌ ಒಕ್ಕೂಟ ಆ್ಯಂಗ್ಲೊ-ಅಮೆರಿಕನ್‌

(ಶೀತಲ ಸಮರ) ಲೋಕ ಶಕ್ತಿ

ದಾನಿಯೇಲ 11:​44, 45 ಇನ್ನೂ ಅಧಿಕಾರಕ್ಕೆ ಬರಲಿದೆ* ಆ್ಯಂಗ್ಲೊ-ಅಮೆರಿಕನ್‌ ಲೋಕ ಶಕ್ತಿ

[ಪಾದಟಿಪ್ಪಣಿ]

ದಾನಿಯೇಲ ಪುಸ್ತಕದ 11ನೆಯ ಅಧ್ಯಾಯದಲ್ಲಿರುವ ಪ್ರವಾದನೆಯು, ಬೇರೆ ಬೇರೆ ಕಾಲಾವಧಿಗಳಲ್ಲಿ ಉತ್ತರ ರಾಜ ಹಾಗೂ ದಕ್ಷಿಣ ರಾಜನ ಸ್ಥಾನಗಳನ್ನು ಆಕ್ರಮಿಸುವ ರಾಜಕೀಯ ಪ್ರಭುತ್ವಗಳ ಹೆಸರುಗಳನ್ನು ಮುಂತಿಳಿಸುವುದಿಲ್ಲ. ಆ ಘಟನೆಗಳು ಸಂಭವಿಸಲು ಆರಂಭವಾದ ಬಳಿಕವೇ ಅವರ ಗುರುತುಗಳು ತಿಳಿದುಬರುತ್ತವೆ. ಅಷ್ಟುಮಾತ್ರವಲ್ಲ, ಹೋರಾಟಗಳು ಹಂತಹಂತವಾಗಿ ಸಂಭವಿಸುವುದರಿಂದ, ಯಾವುದೇ ಹೋರಾಟಗಳು ನಡೆಯದಂತಹ ಬಿಡುವಿನ ಕಾಲಾವಧಿಗಳೂ ಇವೆ; ಒಬ್ಬನು ಆಧಿಪತ್ಯ ನಡಿಸುತ್ತಿರುವಾಗ, ಇನ್ನೊಬ್ಬನು ನಿಷ್ಕ್ರಿಯನಾಗಿರುತ್ತಾನೆ.

[ಪುಟ 382 ರಲ್ಲಿ ಇಡೀ ಪುಟದ ಚಿತ್ರ]

[ಪುಟ 380 ರಲ್ಲಿರುವ ಚಿತ್ರಗಳು]

ದಕ್ಷಿಣ ರಾಜನ “ತಳ್ಳಾಟ”ದಲ್ಲಿ ಉಚ್ಚ ಮಟ್ಟದ ತಂತ್ರಜ್ಞಾನದ ಗೂಢಚಾರತನ ಹಾಗೂ ಮಿಲಿಟರಿ ಆಕ್ರಮಣಗಳ ಬೆದರಿಕೆಗಳು ಒಳಗೂಡಿವೆ