ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾರ್ಥನೆಯಲ್ಲಿ ದೇವರ ಸಮೀಪಕ್ಕೆ ಬರುವುದು

ಪ್ರಾರ್ಥನೆಯಲ್ಲಿ ದೇವರ ಸಮೀಪಕ್ಕೆ ಬರುವುದು

ಪಾಠ 7

ಪ್ರಾರ್ಥನೆಯಲ್ಲಿ ದೇವರ ಸಮೀಪಕ್ಕೆ ಬರುವುದು

ಕ್ರಮವಾಗಿ ಪ್ರಾರ್ಥಿಸುವುದು ಏಕೆ ಪ್ರಾಮುಖ್ಯವಾಗಿದೆ? (1)

ನಾವು ಯಾರಿಗೆ ಪ್ರಾರ್ಥಿಸಬೇಕು, ಮತ್ತು ಹೇಗೆ? (2, 3)

ಪ್ರಾರ್ಥನೆಗೆ ಯೋಗ್ಯವಾದ ವಿಷಯಗಳಾವುವು? (4)

ನೀವು ಯಾವಾಗ ಪ್ರಾರ್ಥಿಸಬೇಕು? (5, 6)

ದೇವರು ಎಲ್ಲ ಪ್ರಾರ್ಥನೆಗಳನ್ನು ಆಲಿಸುತ್ತಾನೊ? (7)

1. ಪ್ರಾರ್ಥನೆಯು ದೇವರೊಡನೆ ನಮ್ರವಾಗಿ ಮಾತಾಡುವುದಾಗಿದೆ. ನೀವು ಕ್ರಮವಾಗಿ ದೇವರಿಗೆ ಪ್ರಾರ್ಥಿಸಬೇಕು. ಹೀಗೆ, ಒಬ್ಬ ಪ್ರಿಯ ಸ್ನೇಹಿತನೊಂದಿಗೆ ಹೇಗೋ ಹಾಗೆಯೇ ಆತನಿಗೆ ಹತ್ತಿರವಾಗಿರುವ ಅನಿಸಿಕೆ ನಿಮಗಾಗಸಾಧ್ಯವಿದೆ. ಯೆಹೋವನು ಬಹಳಷ್ಟು ಶ್ರೇಷ್ಠನೂ ಶಕ್ತಿಶಾಲಿಯೂ ಆಗಿದ್ದಾನಾದರೂ, ನಮ್ಮ ಪ್ರಾರ್ಥನೆಗಳನ್ನು ಆತನು ಆಲಿಸುತ್ತಾನೆ! ನೀವು ಕ್ರಮವಾಗಿ ದೇವರಿಗೆ ಪ್ರಾರ್ಥಿಸುತ್ತೀರೊ?—ಕೀರ್ತನೆ 65:2; 1 ಥೆಸಲೊನೀಕ 5:17.

2. ಪ್ರಾರ್ಥನೆ ನಮ್ಮ ಆರಾಧನೆಯ ಭಾಗವಾಗಿದೆ. ಆದುದರಿಂದ, ನಾವು ದೇವರಿಗೆ, ಯೆಹೋವನಿಗೆ ಮಾತ್ರ ಪ್ರಾರ್ಥಿಸಬೇಕು. ಯೇಸು ಭೂಮಿಯ ಮೇಲಿದ್ದಾಗ, ಅವನು ಬೇರೆ ಯಾರಿಗೂ ಅಲ್ಲ, ಯಾವಾಗಲೂ ತನ್ನ ತಂದೆಗೆ ಪ್ರಾರ್ಥಿಸಿದನು. ನಾವೂ ಅದನ್ನೇ ಮಾಡಬೇಕು. (ಮತ್ತಾಯ 4:10; 6:9) ಹಾಗಿದ್ದರೂ, ನಮ್ಮ ಎಲ್ಲ ಪ್ರಾರ್ಥನೆಗಳು ಯೇಸುವಿನ ಹೆಸರಿನಲ್ಲಿ ಮಾಡಲ್ಪಡಬೇಕು. ಇದು ನಾವು ಯೇಸುವಿನ ಸ್ಥಾನವನ್ನು ಗೌರವಿಸುತ್ತೇವೆ ಮತ್ತು ಅವನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಮಗೆ ನಂಬಿಕೆಯಿದೆ ಎಂಬುದನ್ನು ತೋರಿಸುತ್ತದೆ.—ಯೋಹಾನ 14:6; 1 ಯೋಹಾನ 2:1, 2.

3. ನಾವು ಪ್ರಾರ್ಥಿಸುವಾಗ, ನಾವು ದೇವರೊಂದಿಗೆ ನಮ್ಮ ಹೃದಯದಿಂದ ಮಾತಾಡಬೇಕು. ನಮ್ಮ ಪ್ರಾರ್ಥನೆಗಳನ್ನು ನಾವು ಕಂಠಪಾಠವಾಗಿ ಹೇಳಬಾರದು ಅಥವಾ ಒಂದು ಪ್ರಾರ್ಥನೆಯ ಪುಸ್ತಕದಿಂದ ಅವುಗಳನ್ನು ಓದಬಾರದು. (ಮತ್ತಾಯ 6:7, 8) ನಾವು ಯಾವುದೇ ಗೌರವಪೂರ್ಣ ಭಂಗಿಯಲ್ಲಿ, ಯಾವುದೇ ಸಮಯದಲ್ಲಿ, ಮತ್ತು ಯಾವುದೇ ಸ್ಥಳದಲ್ಲಿ ಪ್ರಾರ್ಥಿಸಸಾಧ್ಯವಿದೆ. ನಮ್ಮ ಹೃದಯದಲ್ಲಿ ಹೇಳಲ್ಪಟ್ಟ ಮೌನವಾದ ಪ್ರಾರ್ಥನೆಗಳನ್ನೂ ದೇವರು ಆಲಿಸಬಲ್ಲನು. (1 ಸಮುವೇಲ 1:12, 13) ನಮ್ಮ ವೈಯಕ್ತಿಕ ಪ್ರಾರ್ಥನೆಗಳನ್ನು ಹೇಳಲು ಇತರ ಜನರಿಂದ ಪ್ರತ್ಯೇಕವಾಗಿ, ಪ್ರಶಾಂತವಾದ ಒಂದು ಸ್ಥಳವನ್ನು ಕಂಡುಕೊಳ್ಳುವುದು ಒಳ್ಳೆಯದು.—ಮಾರ್ಕ 1:35.

4. ಯಾವ ವಿಷಯಗಳ ಕುರಿತು ನೀವು ಪ್ರಾರ್ಥಿಸಬಲ್ಲಿರಿ? ಆತನೊಂದಿಗಿನ ನಿಮ್ಮ ಸ್ನೇಹವನ್ನು ಪ್ರಭಾವಿಸಬಹುದಾದ ಯಾವುದೇ ವಿಷಯವಾಗಿ. (ಫಿಲಿಪ್ಪಿ 4:6, 7) ನಾವು ಯೆಹೋವನ ಹೆಸರು ಮತ್ತು ಉದ್ದೇಶದ ಕುರಿತು ಪ್ರಾರ್ಥಿಸಬೇಕೆಂದು ಮಾದರಿ ಪ್ರಾರ್ಥನೆಯು ತೋರಿಸುತ್ತದೆ. ನಮ್ಮ ಭೌತಿಕ ಅಗತ್ಯಗಳು ಒದಗಿಸಲ್ಪಡುವಂತೆ, ನಮ್ಮ ಪಾಪಗಳು ಕ್ಷಮಿಸಲ್ಪಡುವಂತೆ, ಮತ್ತು ಪ್ರಲೋಭನೆಯನ್ನು ಪ್ರತಿರೋಧಿಸಲು ಸಹಾಯಕ್ಕಾಗಿಯೂ ನಾವು ಕೇಳಸಾಧ್ಯವಿದೆ. (ಮತ್ತಾಯ 6:9-13) ನಮ್ಮ ಪ್ರಾರ್ಥನೆಗಳು ಸ್ವಾರ್ಥಪರವಾಗಿರಬಾರದು. ದೇವರ ಚಿತ್ತದೊಂದಿಗೆ ಹೊಂದಿಕೆಯಲ್ಲಿರುವ ವಿಷಯಗಳಿಗಾಗಿ ಮಾತ್ರ ನಾವು ಪ್ರಾರ್ಥಿಸಬೇಕು.—1 ಯೋಹಾನ 5:14.

5. ನಿಮ್ಮ ಹೃದಯವು ದೇವರಿಗೆ ಉಪಕಾರ ಸಲ್ಲಿಸುವಂತೆ ಅಥವಾ ಸ್ತುತಿಸುವಂತೆ ನಿಮ್ಮನ್ನು ಪ್ರೇರೇಪಿಸುವಾಗಲೆಲ್ಲ ನೀವು ಪ್ರಾರ್ಥಿಸಬಹುದು. (1 ಪೂರ್ವಕಾಲವೃತ್ತಾಂತ 29:10-13) ನಿಮಗೆ ಸಮಸ್ಯೆಗಳಿರುವಾಗ ಮತ್ತು ನಿಮ್ಮ ನಂಬಿಕೆಯು ಪರೀಕ್ಷಿಸಲ್ಪಡುತ್ತಿರುವಾಗ ನೀವು ಪ್ರಾರ್ಥಿಸಬೇಕು. (ಕೀರ್ತನೆ 55:22; 120:1) ನಿಮ್ಮ ಊಟಗಳನ್ನು ಮಾಡುವ ಮೊದಲು ಪ್ರಾರ್ಥಿಸುವುದು ಯೋಗ್ಯವಾಗಿದೆ. (ಮತ್ತಾಯ 14:19) “ಎಲ್ಲಾ ಸಮಯಗಳಲ್ಲಿ” ಪ್ರಾರ್ಥಿಸುವಂತೆ ಯೆಹೋವನು ನಮ್ಮನ್ನು ಆಮಂತ್ರಿಸುತ್ತಾನೆ.—ಎಫೆಸ 6:18.

6. ನಾವೊಂದು ಗಂಭೀರವಾದ ಪಾಪವನ್ನು ಮಾಡಿರುವುದಾದರೆ, ವಿಶೇಷವಾಗಿ ನಾವು ಪ್ರಾರ್ಥಿಸುವ ಅಗತ್ಯವಿದೆ. ಅಂತಹ ಸಮಯಗಳಲ್ಲಿ ನಾವು ಯೆಹೋವನ ಕರುಣೆ ಮತ್ತು ಕ್ಷಮಾಪಣೆಗಾಗಿ ಬೇಡಬೇಕು. ನಾವು ಆತನಿಗೆ ನಮ್ಮ ಪಾಪಗಳ ನಿವೇದನೆ ಮಾಡುವುದಾದರೆ ಮತ್ತು ಅವುಗಳನ್ನು ಪುನಃ ಮಾಡದೇ ಇರಲು ನಮ್ಮಿಂದ ಸಾಧ್ಯವಿದ್ದಷ್ಟನ್ನು ನಾವು ಮಾಡುವುದಾದರೆ, ದೇವರು “ಕ್ಷಮಿಸಲು ಸಿದ್ಧ”ನಾಗಿದ್ದಾನೆ.—ಕೀರ್ತನೆ 86:5, NW; ಜ್ಞಾನೋಕ್ತಿ 28:13.

7. ಯೆಹೋವನು ನೀತಿವಂತರ ಪ್ರಾರ್ಥನೆಗಳನ್ನು ಮಾತ್ರ ಆಲಿಸುತ್ತಾನೆ. ನಿಮ್ಮ ಪ್ರಾರ್ಥನೆಗಳು ದೇವರಿಂದ ಆಲಿಸಲ್ಪಡಬೇಕಾದರೆ, ಆತನ ನಿಯಮಗಳಿಗನುಸಾರ ಜೀವಿಸಲು ನಿಮ್ಮಿಂದ ಸಾಧ್ಯವಾದುದ್ದನ್ನು ಮಾಡಲು ನೀವು ಪ್ರಯತ್ನಿಸುತ್ತಿರಬೇಕು. (ಜ್ಞಾನೋಕ್ತಿ 15:29; 28:9) ನೀವು ಪ್ರಾರ್ಥಿಸುವಾಗ ನಮ್ರರಾಗಿರಬೇಕು. (ಲೂಕ 18:9-14) ನೀವು ಯಾವುದಕ್ಕಾಗಿ ಪ್ರಾರ್ಥಿಸುತ್ತೀರೊ, ಅದಕ್ಕೆ ಹೊಂದಿಕೆಯಲ್ಲಿ ಪ್ರಯತ್ನವನ್ನು ಮಾಡುವ ಅಗತ್ಯವಿದೆ. ಹೀಗೆ ನಿಮಗೆ ನಂಬಿಕೆಯಿದೆ ಎಂಬುದನ್ನು ಮತ್ತು ನೀವು ಏನನ್ನು ಹೇಳುತ್ತೀರೊ ನಿಜವಾಗಿಯೂ ಅದನ್ನು ಅರ್ಥೈಸುತ್ತೀರಿ ಎಂಬುದನ್ನು ನೀವು ರುಜುಪಡಿಸುವಿರಿ. ಆಗ ಮಾತ್ರ ಯೆಹೋವನು ನಿಮ್ಮ ಪ್ರಾರ್ಥನೆಗಳನ್ನು ಉತ್ತರಿಸುವನು.—ಇಬ್ರಿಯ 11:6.