ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಮಿಗಾಗಿ ದೇವರ ಉದ್ದೇಶವು ಏನು?

ಭೂಮಿಗಾಗಿ ದೇವರ ಉದ್ದೇಶವು ಏನು?

ಪಾಠ 5

ಭೂಮಿಗಾಗಿ ದೇವರ ಉದ್ದೇಶವು ಏನು?

ಯೆಹೋವನು ಭೂಮಿಯನ್ನು ಏಕೆ ಸೃಷ್ಟಿಸಿದನು? (1, 2)

ಭೂಮಿಯು ಏಕೆ ಈಗ ಒಂದು ಪ್ರಮೋದವನವಾಗಿರುವುದಿಲ್ಲ? (3)

ದುಷ್ಟ ಜನರಿಗೆ ಏನು ಸಂಭವಿಸುವುದು? (4)

ಭವಿಷ್ಯತ್ತಿನಲ್ಲಿ, ಯೇಸು ಅಸ್ವಸ್ಥರಿಗಾಗಿ, ವೃದ್ಧರಿಗಾಗಿ, ಮತ್ತು ಸತ್ತವರಿಗಾಗಿ ಏನು ಮಾಡುವನು? (5, 6)

ಭವಿಷ್ಯತ್ತಿನ ಆಶೀರ್ವಾದಗಳಲ್ಲಿ ಪಾಲಿಗರಾಗಲು, ನೀವು ಏನು ಮಾಡುವ ಅಗತ್ಯವಿದೆ? (7)

1. ಯೆಹೋವನು ಈ ಭೂಮಿಯನ್ನು, ಮಾನವರು ಅದರ ಮೇಲೆ ಸದಾಕಾಲ ಜೀವಿಸುವುದನ್ನು ಆನಂದಿಸಶಕ್ತರಾಗುವಂತೆ ಸೃಷ್ಟಿಸಿದನು. ಈ ಭೂಮಿಯು ಯಾವಾಗಲೂ ನೀತಿವಂತರಾದ, ಸಂತುಷ್ಟ ಜನರಿಂದ ನಿವಾಸಿಸಲ್ಪಡಬೇಕೆಂದು ಆತನು ಬಯಸಿದನು. (ಕೀರ್ತನೆ 115:16; ಯೆಶಾಯ 45:18) ಭೂಮಿಯು ಎಂದಿಗೂ ನಾಶಗೊಳಿಸಲ್ಪಡದು; ಅದು ಸದಾಕಾಲ ಬಾಳುವುದು.—ಕೀರ್ತನೆ 104:5; ಪ್ರಸಂಗಿ 1:4.

2. ಮನುಷ್ಯನನ್ನು ನಿರ್ಮಿಸುವ ಮುಂಚೆ, ದೇವರು ಭೂಮಿಯ ಒಂದು ಸಣ್ಣ ಭಾಗವನ್ನು ಆರಿಸಿಕೊಂಡು, ಅದನ್ನು ಒಂದು ಸುಂದರವಾದ ಪ್ರಮೋದವನವಾಗಿ ಮಾಡಿದನು. ಅದನ್ನು ಆತನು ಏದೆನ್‌ ತೋಟ ಎಂದು ಕರೆದನು. ಪ್ರಥಮ ಪುರುಷ ಮತ್ತು ಸ್ತ್ರೀಯಾದ ಆದಾಮ ಹವ್ವರನ್ನು ಆತನು ಇರಿಸಿದ್ದು, ಇಲ್ಲಿಯೇ. ಮಕ್ಕಳನ್ನು ಪಡೆದು, ಇಡೀ ಭೂಮಿಯನ್ನು ತುಂಬುವುದನ್ನು ದೇವರು ಅವರಿಗಾಗಿ ಉದ್ದೇಶಿಸಿದನು. ಕ್ರಮೇಣ ಅವರು ಇಡೀ ಭೂಮಿಯನ್ನು ಒಂದು ಪ್ರಮೋದವನವಾಗಿ ಮಾಡಿರುತ್ತಿದ್ದರು.—ಆದಿಕಾಂಡ 1:28; 2:8, 15.

3. ದೇವರ ನಿಯಮವನ್ನು ಉದ್ದೇಶಪೂರ್ವಕವಾಗಿ ಮುರಿಯುವ ಮೂಲಕ ಆದಾಮ ಹವ್ವರು ಪಾಪಮಾಡಿದರು. ಆದುದರಿಂದ ಯೆಹೋವನು ಅವರನ್ನು ಏದೆನ್‌ ತೋಟದ ಹೊರಗೆ ಹಾಕಿದನು. ಪ್ರಮೋದವನವು ಕಳೆದುಹೋಯಿತು. (ಆದಿಕಾಂಡ 3:1-6, 23) ಆದರೆ ಈ ಭೂಮಿಗಾಗಿರುವ ತನ್ನ ಉದ್ದೇಶವನ್ನು ಯೆಹೋವನು ಮರೆತಿಲ್ಲ. ಅದನ್ನು ಒಂದು ಪ್ರಮೋದವನವಾಗಿ ಮಾಡಲು ಆತನು ವಾಗ್ದಾನಿಸುತ್ತಾನೆ; ಅಲ್ಲಿ ಮಾನವರು ಸದಾಕಾಲ ಜೀವಿಸುವರು. ಇದನ್ನು ಆತನು ಹೇಗೆ ಮಾಡುವನು?—ಕೀರ್ತನೆ 37:29.

4. ಈ ಭೂಮಿಯು ಒಂದು ಪ್ರಮೋದವನವಾಗಸಾಧ್ಯವಿರುವ ಮೊದಲು, ದುಷ್ಟ ಜನರು ತೆಗೆದುಹಾಕಲ್ಪಡಬೇಕು. (ಕೀರ್ತನೆ 37:38) ಇದು, ದುಷ್ಟತನವನ್ನು ಅಂತ್ಯಮಾಡಲು ದೇವರ ಯುದ್ಧವಾಗಿರುವ ಅರ್ಮಗೆದೋನ್‌ನಲ್ಲಿ ಸಂಭವಿಸುವುದು. ಮುಂದೆ, ಸೈತಾನನು 1,000 ವರ್ಷಗಳ ತನಕ ಸೆರೆಯಲ್ಲಿಡಲ್ಪಡುವನು. ಇದರ ಅರ್ಥವು, ಭೂಮಿಯನ್ನು ಕೆಡಿಸಲು ಯಾವ ದುಷ್ಟರೂ ಉಳಿದಿರರು. ದೇವರ ಜನರು ಮಾತ್ರ ಬದುಕಿ ಉಳಿಯುವರು.—ಪ್ರಕಟನೆ 16:14, 16; 20:1-3.

5. ಆಗ ಯೇಸು ಕ್ರಿಸ್ತನು ಈ ಭೂಮಿಯ ಮೇಲೆ 1,000 ವರ್ಷಗಳ ವರೆಗೆ ರಾಜನೋಪಾದಿ ಆಳುವನು. (ಪ್ರಕಟನೆ 20:6) ಅವನು ಕ್ರಮೇಣವಾಗಿ ನಮ್ಮ ಮನಸ್ಸು ಹಾಗೂ ಶರೀರಗಳಿಂದ ಪಾಪವನ್ನು ತೆಗೆದುಬಿಡುವನು. ನಾವು, ಆದಾಮ ಹವ್ವರು ಪಾಪಮಾಡುವ ಮೊದಲು ಇದ್ದಂತೆಯೇ ಪರಿಪೂರ್ಣ ಮಾನವರಾಗುವೆವು. ಆಗ ಅಸ್ವಸ್ಥತೆ, ವೃದ್ಧಾಪ್ಯ, ಹಾಗೂ ಮರಣವು ಇನ್ನಿರದು. ಅಸ್ವಸ್ಥ ಜನರು ಗುಣಹೊಂದುವರು, ಮತ್ತು ವೃದ್ಧ ಜನರು ಪುನಃ ಯೌವನಸ್ಥರಾಗುವರು.—ಯೋಬ 33:25; ಯೆಶಾಯ 33:24; ಪ್ರಕಟನೆ 21:3, 4.

6. ಯೇಸುವಿನ ಸಾವಿರ ವರ್ಷದ ಆಳಿಕೆಯ ಸಮಯದಲ್ಲಿ, ಇಡೀ ಭೂಮಿಯನ್ನು ಒಂದು ಪ್ರಮೋದವನವಾಗಿ ಮಾರ್ಪಡಿಸಲು ನಂಬಿಗಸ್ತ ಮಾನವರು ಕೆಲಸಮಾಡುವರು. (ಲೂಕ 23:43) ಮತ್ತೂ, ಸತ್ತುಹೋಗಿರುವ ಲಕ್ಷಾಂತರ ಜನರು ಭೂಮಿಯ ಮೇಲೆ ಮಾನವ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವರು. (ಅ. ಕೃತ್ಯಗಳು 24:15) ದೇವರು ಅವರಿಂದ ಅಪೇಕ್ಷಿಸುವಂತಹದ್ದನ್ನು ಅವರು ಮಾಡಿದರೆ, ಅವರು ಭೂಮಿಯ ಮೇಲೆ ಸದಾಕಾಲ ಜೀವಿಸುವುದನ್ನು ಮುಂದುವರಿಸುವರು. ಇಲ್ಲದಿದ್ದರೆ, ಅವರು ಸದಾಕಾಲಕ್ಕೆ ನಾಶಗೊಳಿಸಲ್ಪಡುವರು.—ಯೋಹಾನ 5:28, 29; ಪ್ರಕಟನೆ 20:11-15.

7. ಹೀಗೆ ಭೂಮಿಗಾಗಿದ್ದ ದೇವರ ಮೂಲಭೂತ ಉದ್ದೇಶವು ಸಫಲಗೊಳ್ಳುವುದು. ಈ ಭವಿಷ್ಯತ್ತಿನ ಆಶೀರ್ವಾದಗಳಲ್ಲಿ ಪಾಲಿಗರಾಗಲು ನೀವು ಬಯಸುವಿರೊ? ಹಾಗಿರುವಲ್ಲಿ, ನೀವು ಯೆಹೋವನ ಕುರಿತು ಕಲಿಯುತ್ತಾ ಇರುವ ಮತ್ತು ಆತನ ಆವಶ್ಯಕತೆಗಳಿಗೆ ವಿಧೇಯರಾಗುತ್ತಾ ಇರುವ ಅಗತ್ಯವಿದೆ. ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ಕೂಟಗಳನ್ನು ಹಾಜರಾಗುವುದು, ಹಾಗೆ ಮಾಡುವಂತೆ ನಿಮಗೆ ಸಹಾಯ ಮಾಡುವುದು.—ಯೆಶಾಯ 11:9; ಇಬ್ರಿಯ 10:24, 25.

[ಪುಟ 10ರಲ್ಲಿರುವ ಚಿತ್ರ]

ಕಳೆದುಹೋದ ಪ್ರಮೋದವನ

[ಪುಟ 11ರಲ್ಲಿರುವ ಚಿತ್ರ]

ಅರ್ಮಗೆದೋನಿನ ನಂತರ, ಭೂಮಿಯು ಒಂದು ಪ್ರಮೋದವನವಾಗಿ ಮಾಡಲ್ಪಡುವುದು