ಯೇಸು ಕ್ರಿಸ್ತನು ಯಾರು?
ಪಾಠ 3
ಯೇಸು ಕ್ರಿಸ್ತನು ಯಾರು?
ಯೇಸು ದೇವರ “ಜ್ಯೇಷ್ಠ” ಪುತ್ರನೆಂದು ಏಕೆ ಕರೆಯಲ್ಪಟ್ಟಿದ್ದಾನೆ? (1)
ಅವನು “ವಾಕ್ಯ”ವೆಂದು ಏಕೆ ಕರೆಯಲ್ಪಟ್ಟಿದ್ದಾನೆ? (1)
ಯೇಸು ಒಬ್ಬ ಮನುಷ್ಯನೋಪಾದಿ ಭೂಮಿಗೆ ಏಕೆ ಬಂದನು? (2-4)
ಅವನು ಅದ್ಭುತಕಾರ್ಯಗಳನ್ನು ಏಕೆ ನಡೆಸಿದನು? (5)
ಹತ್ತಿರದ ಭವಿಷ್ಯತ್ತಿನಲ್ಲಿ ಯೇಸು ಏನು ಮಾಡುವನು? (6)
1. ಯೇಸು ಭೂಮಿಗೆ ಬರುವ ಮುಂಚೆ ಒಬ್ಬ ಆತ್ಮ ವ್ಯಕ್ತಿಯೋಪಾದಿ ಸ್ವರ್ಗದಲ್ಲಿ ಜೀವಿಸಿದನು. ಅವನು ದೇವರ ಪ್ರಥಮ ಸೃಷ್ಟಿಯಾಗಿದ್ದನು, ಆದುದರಿಂದ ಅವನು ದೇವರ “ಜ್ಯೇಷ್ಠ” ಪುತ್ರನೆಂದು ಕರೆಯಲ್ಪಟ್ಟಿದ್ದಾನೆ. (ಕೊಲೊಸ್ಸೆ 1:15; ಪ್ರಕಟನೆ 3:14) ಸ್ವತಃ ದೇವರೇ ಸೃಷ್ಟಿಸಿದ ಏಕೈಕ ಪುತ್ರನು ಯೇಸು ಆಗಿದ್ದಾನೆ. ಸ್ವರ್ಗದಲ್ಲಿ ಮತ್ತು ಭೂಮಿಯ ಮೇಲಿರುವ ಇತರ ಎಲ್ಲ ವಿಷಯಗಳನ್ನು ಸೃಷ್ಟಿಸುವುದರಲ್ಲಿ, ಯೆಹೋವನು ಮಾನವಪೂರ್ವ ಯೇಸುವನ್ನು ತನ್ನ “ಕುಶಲ ಶಿಲ್ಪಿ” (NW)ಯಂತೆ ಉಪಯೋಗಿಸಿದನು. (ಜ್ಞಾನೋಕ್ತಿ 8:22-31; ಕೊಲೊಸ್ಸೆ 1:16, 17) ದೇವರು ಅವನನ್ನು ತನ್ನ ಪ್ರಧಾನ ವದನಕನಂತೆಯೂ ಉಪಯೋಗಿಸಿದನು. ಆದುದರಿಂದಲೇ ಯೇಸು “ವಾಕ್ಯ”ವೆಂಬುದಾಗಿ ಕರೆಯಲ್ಪಟ್ಟಿದ್ದಾನೆ.—ಯೋಹಾನ 1:1-3; ಪ್ರಕಟನೆ 19:13.
2. ಮರಿಯಳ ಗರ್ಭಕ್ಕೆ ತನ್ನ ಪುತ್ರನ ಜೀವವನ್ನು ವರ್ಗಾಯಿಸುವ ಮೂಲಕ, ದೇವರು ಅವನನ್ನು ಭೂಮಿಗೆ ಕಳುಹಿಸಿದನು. ಆದುದರಿಂದ ಯೇಸುವಿಗೆ ಒಬ್ಬ ಮಾನವ ಪಿತನಿರಲಿಲ್ಲ. ಆದುದರಿಂದಲೇ ಅವನು ಯಾವುದೇ ಪಾಪ ಅಥವಾ ಅಪರಿಪೂರ್ಣತೆಯನ್ನು ಪಿತ್ರಾರ್ಜಿತವಾಗಿ ಪಡೆಯಲಿಲ್ಲ. ದೇವರು ಯೇಸುವನ್ನು ಮೂರು ಕಾರಣಗಳಿಗಾಗಿ ಭೂಮಿಗೆ ಕಳುಹಿಸಿದನು: (1) ದೇವರ ಕುರಿತಾದ ಸತ್ಯವನ್ನು ನಮಗೆ ಕಲಿಸಲು (ಯೋಹಾನ 18:37), (2) ಅನುಸರಿಸಲು ನಮಗೊಂದು ಮಾದರಿಯನ್ನು ಒದಗಿಸುತ್ತಾ, ಪರಿಪೂರ್ಣ ಸಮಗ್ರತೆಯನ್ನು ಕಾಪಾಡಿಕೊಳ್ಳಲು (1 ಪೇತ್ರ 2:21), ಮತ್ತು (3) ನಮ್ಮನ್ನು ಪಾಪಮರಣಗಳಿಂದ ವಿಮುಕ್ತಗೊಳಿಸಲಿಕ್ಕಾಗಿ ತನ್ನ ಜೀವವನ್ನು ಅರ್ಪಿಸಲು. ಇದು ಏಕೆ ಅಗತ್ಯವಾಗಿತ್ತು?—ಮತ್ತಾಯ 20:28.
3. ದೇವರ ಆಜ್ಞೆಗೆ ಅವಿಧೇಯನಾಗುವ ಮೂಲಕ, ಪ್ರಥಮ ಮನುಷ್ಯನಾದ ಆದಾಮನು, ಯಾವುದನ್ನು ಬೈಬಲ್ “ಪಾಪ” ಎಂಬುದಾಗಿ ಕರೆಯುತ್ತದೊ ಅದನ್ನು ಗೈದನು. ಆದುದರಿಂದ ದೇವರು ಅವನಿಗೆ ಮರಣ ದಂಡನೆಯನ್ನು ವಿಧಿಸಿದನು. (ಆದಿಕಾಂಡ 3:17-19) ಅವನು ಇನ್ನು ಮುಂದೆ ದೇವರ ಮಟ್ಟಗಳನ್ನು ತಲಪಲಿಲ್ಲ, ಆದುದರಿಂದ ಅವನು ಇನ್ನು ಮೇಲೆ ಪರಿಪೂರ್ಣನಾಗಿರಲಿಲ್ಲ. ನಿಧಾನವಾಗಿ ಅವನು ವೃದ್ಧನಾಗಿ ಸತ್ತುಹೋದನು. ಆದಾಮನು ತನ್ನ ಎಲ್ಲ ಮಕ್ಕಳಿಗೆ ಪಾಪವನ್ನು ಸಾಗಿಸಿದನು. ಆದುದರಿಂದಲೇ ನಾವು ಸಹ ವೃದ್ಧರಾಗಿ, ಅಸ್ವಸ್ಥಗೊಂಡು, ಸಾಯುತ್ತೇವೆ. ಮಾನವಕುಲವು ಹೇಗೆ ರಕ್ಷಿಸಲ್ಪಡಸಾಧ್ಯವಿತ್ತು?—ರೋಮಾಪುರ 3:23; 5:12.
4. ಯೇಸು ಆದಾಮನಂತೆ ಒಬ್ಬ ಪರಿಪೂರ್ಣ ಮಾನವನಾಗಿದ್ದನು. ಆದರೆ, ಆದಾಮನಿಗೆ ಅಸದೃಶವಾಗಿ ಯೇಸು, ಅತಿ ದೊಡ್ಡ ಪರೀಕ್ಷೆಯ ಕೆಳಗೂ ದೇವರಿಗೆ ಪರಿಪೂರ್ಣವಾಗಿ ವಿಧೇಯನಾಗಿದ್ದನು. ಆದುದರಿಂದ ಆದಾಮನ ಪಾಪಕ್ಕೆ ದಂಡ ತೆರಲು, ಅವನು ತನ್ನ ಪರಿಪೂರ್ಣ ಮಾನವ ಜೀವವನ್ನು ಅರ್ಪಿಸಸಾಧ್ಯವಿತ್ತು. ಇದನ್ನೇ ಬೈಬಲು “ಪ್ರಾಯಶ್ಚಿತ್ತ”ವೆಂಬುದಾಗಿ ಸೂಚಿಸುತ್ತದೆ. ಹೀಗೆ ಆದಾಮನ ಮಕ್ಕಳು ಮರಣಕ್ಕೆ ಕಾರಣವಾದ ಖಂಡನೆಯಿಂದ ವಿಮೋಚಿಸಲ್ಪಡಸಾಧ್ಯವಿತ್ತು. ಯೇಸುವಿನಲ್ಲಿ ನಂಬಿಕೆಯನ್ನಿಡುವ ಸಕಲರು, ತಮ್ಮ ಪಾಪಗಳಿಗೆ ಕ್ಷಮಾಪಣೆಯನ್ನು ಹೊಂದಿ, ನಿತ್ಯ ಜೀವವನ್ನು ಪಡೆಯಬಲ್ಲರು.—1 ತಿಮೊಥೆಯ 2:5, 6; ಯೋಹಾನ 3:16; ರೋಮಾಪುರ 5:18, 19.
5. ಯೇಸು ಭೂಮಿಯಲ್ಲಿದ್ದಾಗ ಅಸ್ವಸ್ಥರನ್ನು ಗುಣಪಡಿಸಿದನು, ಹಸಿದವರಿಗೆ ಉಣಿಸಿದನು, ಮತ್ತು ಬಿರುಗಾಳಿಗಳನ್ನು ಶಾಂತಗೊಳಿಸಿದನು. ಅವನು ಸತ್ತವರನ್ನೂ ಎಬ್ಬಿಸಿದನು. ಅವನು ಅದ್ಭುತಕಾರ್ಯಗಳನ್ನು ಏಕೆ ನಡೆಸಿದನು? (1) ಕಷ್ಟಾನುಭವಿಸುತ್ತಿದ್ದ ಜನರಿಗಾಗಿ ಅವನಲ್ಲಿ ಮರುಕವುಂಟಾಯಿತು, ಮತ್ತು ಅವರಿಗೆ ಸಹಾಯ ನೀಡಲು ಅವನು ಬಯಸಿದನು. (2) ಅವನು ದೇವರ ಪುತ್ರನಾಗಿದ್ದನೆಂಬುದನ್ನು ಅವನ ಅದ್ಭುತಕಾರ್ಯಗಳು ರುಜುಪಡಿಸಿದವು. (3) ಭೂಮಿಯ ಮೇಲೆ ಅವನು ರಾಜನೋಪಾದಿ ಆಳುವಾಗ, ವಿಧೇಯ ಮಾನವಕುಲಕ್ಕಾಗಿ ಅವನು ಏನು ಮಾಡುವನೆಂದು ಅವು ತೋರಿಸಿದವು.—ಮತ್ತಾಯ 14:14; ಮಾರ್ಕ 2:10-12; ಯೋಹಾನ 5:28, 29.
6. ಯೇಸು ಸತ್ತು, ದೇವರ ಮೂಲಕ ಒಬ್ಬ ಆತ್ಮ ಜೀವಿಯೋಪಾದಿ ಪುನರುತ್ಥಾನಗೊಳಿಸಲ್ಪಟ್ಟು, ಸ್ವರ್ಗಕ್ಕೆ ಹಿಂದಿರುಗಿದನು. (1 ಪೇತ್ರ 3:18) ಅಂದಿನಿಂದ, ದೇವರು ಅವನನ್ನು ಒಬ್ಬ ರಾಜನನ್ನಾಗಿ ಮಾಡಿದ್ದಾನೆ. ಬೇಗನೆ ಯೇಸು ಈ ಭೂಮಿಯಿಂದ ಸಕಲ ದುಷ್ಟತನವನ್ನೂ ಕಷ್ಟಾನುಭವವನ್ನೂ ತೆಗೆದುಹಾಕುವನು.—ಕೀರ್ತನೆ 37:9-11; ಜ್ಞಾನೋಕ್ತಿ 2:21, 22.
[ಪುಟ 7ರಲ್ಲಿರುವ ಚಿತ್ರ]
ಯೇಸುವಿನ ಶುಶ್ರೂಷೆಯು, ಕಲಿಸುವುದನ್ನು, ಅದ್ಭುತಕಾರ್ಯಗಳನ್ನು ನಡೆಸುವುದನ್ನು, ಮತ್ತು ನಮಗಾಗಿ ತನ್ನ ಜೀವವನ್ನು ಅರ್ಪಿಸುವುದನ್ನೂ ಒಳಗೊಂಡಿತು