ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಚ್ಛಾ ಸ್ವಾತಂತ್ರ್ಯದ ಆಶ್ಚರ್ಯಕರ ಕೊಡುಗೆ

ಇಚ್ಛಾ ಸ್ವಾತಂತ್ರ್ಯದ ಆಶ್ಚರ್ಯಕರ ಕೊಡುಗೆ

ಭಾಗ 5

ಇಚ್ಛಾ ಸ್ವಾತಂತ್ರ್ಯದ ಆಶ್ಚರ್ಯಕರ ಕೊಡುಗೆ

1, 2. ಯಾವ ಅದ್ಭುತಕರ ಕೊಡುಗೆಯು ನಮ್ಮ ರಚನೆಯ ಭಾಗವಾಗಿದೆ?

ದೇವರು ಕಷ್ಟಾನುಭವವನ್ನು ಯಾಕೆ ಅನುಮತಿಸಿದ್ದಾನೆ ಮತ್ತು ಅದರ ಕುರಿತು ಅವನೇನು ಮಾಡಲಿರುವನು ಎಂಬುದನ್ನು ಅರ್ಥೈಸಿಕೊಳ್ಳಲು, ಅವನು ನಮ್ಮನ್ನು ಉಂಟುಮಾಡಿದ ವಿಧವನ್ನು ನಾವು ಗಣ್ಯಮಾಡಬೇಕಾದ ಆವಶ್ಯಕತೆಯಿದೆ. ಕೇವಲ ಒಂದು ದೇಹ ಮತ್ತು ಮಿದುಳುನೊಂದಿಗೆ ನಮ್ಮನ್ನು ಸೃಷ್ಟಿಸುವುದಕ್ಕಿಂತಲೂ ಹೆಚ್ಚನ್ನು ಅವನು ಮಾಡಿದನು. ವಿಶೇಷ ಮಾನಸಿಕ ಮತ್ತು ಭಾವನಾತ್ಮಕ ಗುಣಗಳೊಂದಿಗೆ ಕೂಡ ಅವನು ನಮ್ಮನ್ನು ಸೃಷ್ಟಿಸಿದನು.

2 ಮಾನಸಿಕ ಮತ್ತು ಭಾವನಾತ್ಮಕ ರಚನೆಯ ಒಂದು ಪ್ರಧಾನ ಭಾಗ ಇಚ್ಛಾ ಸ್ವಾತಂತ್ರ್ಯ ಆಗಿರುತ್ತದೆ. ಹೌದು, ದೇವರು ನಮ್ಮಲ್ಲಿ ಆಯ್ಕೆಯ ಸ್ವಾತಂತ್ರ್ಯದ ಸಹಜ ಶಕ್ತಿಯನ್ನು ನೆಟ್ಟಿರುತ್ತಾನೆ. ಅವನಿಂದ ಅದು ಖಂಡಿತವಾಗಿಯೂ ಒಂದು ಆಶ್ಚರ್ಯಕರ ವರದಾನವಾಗಿತ್ತು.

ನಾವು ಉಂಟುಮಾಡಲ್ಪಟ್ಟ ವಿಧ

3-5. ಇಚ್ಛಾ ಸ್ವಾತಂತ್ರ್ಯವನ್ನು ನಾವು ಯಾಕೆ ಗಣ್ಯಮಾಡುತ್ತೇವೆ?

3 ಕಷ್ಟಾನುಭವದ ದೇವರ ಅನುಮತಿಯಲ್ಲಿ ಇಚ್ಛಾ ಸ್ವಾತಂತ್ರ್ಯವು ಹೇಗೆ ಒಳಗೂಡಿದೆ ಎಂದು ನಾವು ಪರಿಗಣಿಸೋಣ. ಆರಂಭದಲ್ಲಿ, ಇದರ ಕುರಿತು ಯೋಚಿಸಿರಿ: ನೀವೇನು ಮಾಡುವಿರಿ ಮತ್ತು ಹೇಳುವಿರಿ, ನೀವೇನು ತಿನ್ನುವಿರಿ ಮತ್ತು ಧರಿಸುವಿರಿ, ಯಾವ ವಿಧದ ಕೆಲಸ ನೀವು ಮಾಡುವಿರಿ, ಮತ್ತು ಎಲ್ಲಿ ಮತ್ತು ಹೇಗೆ ನೀವು ಜೀವಿಸುವಿರಿ ಎಂಬುದನ್ನು ಆಯ್ಕೆಮಾಡಲು ನಿಮಗಿರುವ ಸ್ವಾತಂತ್ರ್ಯದ ಗಣ್ಯತೆಯನ್ನು ನೀವು ಮಾಡುತ್ತಿರೋ? ಯಾ ನಿಮ್ಮ ಜೀವಿತದ ಪ್ರತಿಯೊಂದು ಕ್ಷಣದಲ್ಲಿ ನಿಮ್ಮ ಪ್ರತಿಯೊಂದು ಮಾತು ಮತ್ತು ಕೃತ್ಯವನ್ನು ಬೇರೆ ಯಾರೋ ಒಬ್ಬನು ಆಜ್ಞಾಪಿಸುವುದನ್ನು ನೀವು ಬಯಸುವಿರೋ?

4 ತನ್ನ ನಿಯಂತ್ರಣದಿಂದ ಜೀವಿತವನ್ನು ಅಷ್ಟೊಂದು ಪೂರ್ಣವಾಗಿ ಕಳೆದುಕೊಳ್ಳಲು ಯಾವನೇ ಸಹಜಸ್ಥಿತಿಯ ವ್ಯಕ್ತಿಯು ಬಯಸುವುದಿಲ್ಲ. ಯಾಕೆ? ದೇವರು ನಮ್ಮನ್ನು ಉಂಟುಮಾಡಿದ ವಿಧದ ಕಾರಣದಿಂದಲೇ. ಬೈಬಲ್‌ ನಮಗೆ ಹೇಳುವುದೇನಂದರೆ ದೇವರು ಮನುಷ್ಯನನ್ನು ತನ್ನ ‘ಸ್ವರೂಪದಲ್ಲಿ ಮತ್ತು ಹೋಲಿಕೆಗೆ ಸರಿಯಾಗಿ’ ಸೃಷ್ಟಿಸಿದನು ಮತ್ತು ಸ್ವತಃ ದೇವರಲ್ಲಿ ಇರುವ ಸಹಜ ಶಕ್ತಿಗಳಲ್ಲಿ ಆಯ್ಕೆಯ ಸ್ವಾತಂತ್ರ್ಯ ಒಂದಾಗಿದೆ. (ಆದಿಕಾಂಡ 1:26; ಧರ್ಮೋಪದೇಶಕಾಂಡ 7:6) ಅವನು ಮಾನವರನ್ನು ಸೃಷ್ಟಿಸಿದಾಗ, ಅದೇ ಅದ್ಭುತವಾದ ಸಹಜಶಕ್ತಿ—ಇಚ್ಛಾ ಸ್ವಾತಂತ್ರ್ಯದ ಕೊಡುಗೆ—ಯನ್ನು ಅವರಿಗೆ ನೀಡಿದನು. ದಬ್ಬಾಳಿಕೆಯ ಅಧಿಪತಿಗಳಿಂದ ಗುಲಾಮತ್ವಕ್ಕೆ ಒಳಪಡಿಸಲ್ಪಟ್ಟಾಗ ನಾವು ಅದನ್ನು ಹತಾಶೆಯದ್ದಾಗಿ ಕಂಡುಕೊಳ್ಳುವ ಒಂದು ಕಾರಣ ಅದೇ ಆಗಿದೆ.

5 ಆದುದರಿಂದ ಸ್ವಾತಂತ್ರ್ಯಕ್ಕಾಗಿರುವ ಬಯಕೆಯು ಆಕಸ್ಮಿಕವಾದದ್ದೇನೂ ಅಲ್ಲ, ಯಾಕಂದರೆ ದೇವರು ಒಬ್ಬ ಸ್ವಾತಂತ್ರ್ಯದ ದೇವರಾಗಿದ್ದಾನೆ. ಬೈಬಲ್‌ ಹೇಳುವುದು: “ಎಲ್ಲಿ ಯೆಹೋವನ ಆತ್ಮವಿದೆಯೋ, ಅಲ್ಲಿ ಸ್ವಾತಂತ್ರ್ಯ ಉಂಟು.” (2 ಕೊರಿಂಥ 3:17, NW) ಅದಕಾರಣ, ನಮ್ಮ ಸ್ವತಃ ರಚನೆಯ ಒಂದು ಭಾಗವಾಗಿ ಇಚ್ಛಾ ಸ್ವಾತಂತ್ರ್ಯವನ್ನು ದೇವರು ನಮಗೆ ಕೊಟ್ಟನು. ನಮ್ಮ ಮನಸ್ಸು ಮತ್ತು ಮನೋಭಾವನೆಗಳು ಕಾರ್ಯನಡಿಸುವ ವಿಧವನ್ನು ಅವನು ತಿಳಿದಿದುದ್ದರಿಂದ, ಇಚ್ಛಾ ಸ್ವಾತಂತ್ರ್ಯದೊಂದಿಗೆ ನಾವು ಅತ್ಯಂತ ಸಂತೋಷಿಗಳಾಗಿರುತ್ತೇವೆಂದು ಅವನು ಬಲ್ಲನು.

6. ಇಚ್ಛಾ ಸ್ವಾತಂತ್ರ್ಯದೊಂದಿಗಿನ ಸಾಮರಸ್ಯದಲ್ಲಿ ಕಾರ್ಯವೆಸಗುವಂತೆ ನಮ್ಮ ಮಿದುಳನ್ನು ದೇವರು ಹೇಗೆ ಸೃಷ್ಟಿಸಿದ್ದಾನೆ?

6 ಇಚ್ಛಾ ಸ್ವಾತಂತ್ರ್ಯದ ಕೊಡುಗೆಯ ಒಟ್ಟೊಟ್ಟಿಗೆ, ದೇವರು ನಮಗೆ ಯೋಚಿಸಲು, ವಿಷಯಗಳನ್ನು ತೂಗಿನೋಡಲು, ತೀರ್ಮಾನಗಳನ್ನು ಮಾಡಲು, ಮತ್ತು ತಪ್ಪುಗಳಿಂದ ಸರಿಯಾದುದನ್ನು ತಿಳಿಯಲು ಸಾಮರ್ಥ್ಯವನ್ನು ಕೊಟ್ಟಿರುತ್ತಾನೆ. (ಇಬ್ರಿಯ 5:14) ಹೀಗೆ, ಇಚ್ಛಾ ಸ್ವಾತಂತ್ರ್ಯವು ಬುದ್ಧಿಶಕ್ತಿಯ ಆಯ್ಕೆಯ ಮೇಲಾಧಾರಿತವಾಗಿರಬೇಕಿತ್ತು. ತಮ್ಮ ಸ್ವಂತ ಇಚ್ಛೆಯಿಲ್ಲದ ಮನಸ್ಸುರಹಿತವಾಗಿರುವ ಯಂತ್ರಮಾನವರಂತೆ ನಾವು ಉಂಟುಮಾಡಲ್ಪಟ್ಟಿಲ್ಲ. ಇಲ್ಲವೆ ಪ್ರಾಣಿಗಳು ಇರುವಂತೆ, ಹುಟ್ಟರಿವಿನ ಪ್ರಕಾರ ವರ್ತಿಸುವಂತೆ ನಾವು ಸೃಷ್ಟಿಸಲ್ಪಟ್ಟಿಲ್ಲ. ಬದಲಾಗಿ, ನಮ್ಮ ಆಯ್ಕೆಯ ಸ್ವಾತಂತ್ರ್ಯದೊಂದಿಗೆ ಸಾಮರಸ್ಯದಲ್ಲಿ ಕಾರ್ಯವೆಸಗುವಂತೆ ನಮ್ಮ ಬೆರಗುಗೊಳಿಸುವ ಮಿದುಳು ವಿನ್ಯಾಸಿಸಲ್ಪಟ್ಟಿತ್ತು.

ಅತ್ಯುತ್ತಮ ಆರಂಭ

7, 8. ನಮ್ಮ ಮೊದಲ ಹೆತ್ತವರಿಗೆ ದೇವರು ಯಾವ ಉತ್ತಮ ಆರಂಭವನ್ನು ನೀಡಿದನು?

7 ದೇವರು ಎಷ್ಟೊಂದು ಚಿಂತಿಸುವವನಾಗಿದ್ದನು ಎಂದು ತೋರಿಸಲು, ಇಚ್ಛಾ ಸ್ವಾತಂತ್ರ್ಯದ ಕೊಡುಗೆಯೊಟ್ಟಿಗೆ, ನಮ್ಮ ಪ್ರಥಮ ಹೆತ್ತವರಾದ ಆದಾಮ, ಹವ್ವರಿಗೆ ಒಬ್ಬನು ಸಮಂಜಸತೆಯಿಂದ ಏನನ್ನು ಬಯಸಸಾಧ್ಯವಿತ್ತೋ ಅದೆಲ್ಲವನ್ನೂ ಕೊಡಲಾಗಿತ್ತು. ಅವರನ್ನು ಒಂದು ದೊಡ್ಡ, ಉದ್ಯಾನದಂತಹ ಪ್ರಮೋದವನದಲ್ಲಿ ಇಡಲಾಯಿತು. ಅವರಿಗೆ ಪ್ರಾಪಂಚಿಕ ಯಥೇಷ್ಟತೆಗಳು ಇದ್ದವು. ಅವರಿಗೆ ಪರಿಪೂರ್ಣವಾದ ಮನಸ್ಸುಗಳು ಮತ್ತು ಶರೀರಗಳು ಇದ್ದವು, ಆ ಮೂಲಕ ಅವರು ವಯಸ್ಸು ತುಂಬಿ ಮುದುಕರಾಗುವ ಯಾ ಅನಾರೋಗ್ಯಗೊಳ್ಳುವ ಯಾ ಸಾಯುವಂತಹ ಸಂಭವಗಳೇನೂ ಇರಲಿಲ್ಲ—ಅವರು ಸದಾಕಾಲಕ್ಕೂ ಜೀವಿಸಬಹುದಿತ್ತು. ಸಂತೋಷದ, ನಿತ್ಯತೆಯ ಭವಿಷ್ಯವಿರಸಾಧ್ಯವಿದ್ದಂತಹ ಪರಿಪೂರ್ಣ ಮಕ್ಕಳು ಅವರಿಗೆ ಇರಬಹುದಿತ್ತು. ಮತ್ತು ವಿಕಸಿಸುತ್ತಿರುವ ಜನಸಂಖ್ಯೆಗೆ ಕಾಲಕ್ರಮೇಣ ಇಡೀ ಭೂಮಿಯನ್ನು ಪ್ರಮೋದವನವನ್ನಾಗಿ ಮಾರ್ಪಡಿಸುವ ಒಂದು ಸಂತೃಪ್ತಿಕರ ಕಾರ್ಯವು ಇರಬಹುದಿತ್ತು.—ಆದಿಕಾಂಡ 1:26-30; 2:15.

8 ಏನು ಒದಗಿಸಲ್ಪಟ್ಟಿತ್ತೋ ಅದರ ಕುರಿತು ಬೈಬಲ್‌ ವರ್ಣಿಸುವುದು: “ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ, ಅದು ಬಹು ಒಳ್ಳೇದಾಗಿತ್ತು.” (ಆದಿಕಾಂಡ 1:31) ದೇವರ ಕುರಿತು ಬೈಬಲ್‌ ಇದನ್ನು ಕೂಡ ಹೇಳುತ್ತದೆ: “ಆತನ ಕಾರ್ಯವೆಲ್ಲಾ ಪರಿಪೂರ್ಣವಾಗಿದೆ.” (ಧರ್ಮೋಪದೇಶಕಾಂಡ 32:4, NW) ಹೌದು, ನಿರ್ಮಾಣಿಕನು ಮಾನವ ಕುಟುಂಬಕ್ಕೆ ಒಂದು ಪರಿಪೂರ್ಣ ಆರಂಭವನ್ನು ಕೊಟ್ಟನು. ಇದಕ್ಕಿಂತ ಹೆಚ್ಚು ಉತ್ತಮವಾದದ್ದೇನೂ ಇರಸಾಧ್ಯವಿರಲಿಲ್ಲ. ಅವನು ಎಂತಹ ಚಿಂತಿಸುತ್ತಿರುವ ದೇವರಾಗಿ ಪರಿಣಮಿಸಿದನು!

ಮಿತಿಗಳೊಳಗೆ ಸ್ವಾತಂತ್ರ್ಯ

9, 10. ಇಚ್ಛಾ ಸ್ವಾತಂತ್ರ್ಯವನ್ನು ಯೋಗ್ಯವಾಗಿ ವಿಧಿಬದ್ಧಮಾಡಬೇಕು ಯಾಕೆ?

9 ಆದಾಗ್ಯೂ, ಇಚ್ಛಾ ಸ್ವಾತಂತ್ರ್ಯಕ್ಕೆ ಮಿತಿಗಳಿಲ್ಲದೆ ಇರಬೇಕೆಂದು ದೇವರು ಉದ್ದೇಶಿಸಿದ್ದನೋ? ಯಾವ ವಾಹನ ಸಂಚಾರ ನಿಯಮಗಳೂ ಇಲ್ಲದ, ಯಾವನೂ ಯಾವುದೇ ದಿಕ್ಕಿನಲ್ಲಿ, ಯಾವುದೇ ವೇಗದಲ್ಲಿ ವಾಹನ ಚಲಾಯಿಸ ಸಾಧ್ಯವಿರುವ ಒಂದು ನಿಬಿಡವಾದ ನಗರವನ್ನು ಊಹಿಸಿರಿ. ಅಂತಹ ಪರಿಸ್ಥಿತಿಗಳ ಕೆಳಗೆ ವಾಹನ ಚಲಾಯಿಸಲು ನೀವು ಬಯಸುವಿರೋ? ಇಲ್ಲ, ಅದೊಂದು ಸಂಚಾರ ಅರಾಜಕತೆಯಾಗಿರುವುದು ಮತ್ತು ನಿಶ್ಚಯವಾಗಿಯೂ ಅನೇಕ ಅಪಘಾತಗಳನ್ನು ಫಲಿಸುವುದು.

10 ಅದರಂತೆಯೇ ದೇವರ ಇಚ್ಛಾ ಸ್ವಾತಂತ್ರ್ಯದ ಕೊಡುಗೆಯೊಂದಿಗೂ ಕೂಡ. ಮಿತಿ ಇಲ್ಲದ ಸ್ವಾತಂತ್ರ್ಯವೆಂದರೆ ಸಮಾಜದಲ್ಲಿ ಅರಾಜಕತೆಯೆಂಬ ಅರ್ಥವಾಗಿರುವುದು. ಮಾನವ ಕಾರ್ಯಚಟುವಟಿಕೆಗಳನ್ನು ಮಾರ್ಗದರ್ಶಿಸಲು ನಿಯಮಗಳು ಇರಲೇಬೇಕು. ದೇವರ ವಾಕ್ಯವು ಹೇಳುವುದು: “ಸ್ವತಂತ್ರ ಮನುಷ್ಯರಂತೆ ನಡೆಯಿರಿ, ಮತ್ತು ನಿಮ್ಮ ಸ್ವಾತಂತ್ರ್ಯವನ್ನು ಕೆಟ್ಟತನವನ್ನು ಮರೆಮಾಜುವದಕ್ಕೆ ನೀವು ಎಂದಿಗೂ ಉಪಯೋಗಿಸಬೇಡಿರಿ.” (1 ಪೇತ್ರ 2:16; ಜೆಬಿ) ಸಾಮಾನ್ಯ ಜನಹಿತಕ್ಕೋಸ್ಕರವಾಗಿ ಇಚ್ಛಾ ಸ್ವಾತಂತ್ರ್ಯವನ್ನು ವಿಧಿ ಬದ್ಧಮಾಡಲ್ಪಡಲು ದೇವರು ಬಯಸುತ್ತಾನೆ. ನಮಗಾಗಿ ದೇವರು ಪೂರ್ಣಮೊತ್ತದ ಸ್ವಾತಂತ್ರ್ಯವಲ್ಲ, ಬದಲು ನಿಯಮದಾಳಿಕೆಗೆ ಅಧೀನವಾಗಿರುವಂತಹ, ಸಂಬಂಧಾರ್ಥಕ ಸ್ವಾತಂತ್ರ್ಯವಿರುವಂತೆ ಉದ್ದೇಶಿಸಿದನು.

ಯಾರ ನಿಯಮಗಳು?

11. ಯಾರ ನಿಯಮಗಳಿಗೆ ವಿಧೇಯರಾಗುವಂತೆ ನಾವು ರಚಿಸಲ್ಪಟ್ಟೆವು?

11 ನಾವು ಯಾರ ನಿಯಮಗಳಿಗೆ ವಿಧೇಯರಾಗುವಂತೆ ​ರಚಿಸಲ್ಪಟ್ಟೆವು? ಒಂದನೇ ಪೇತ್ರ 2:16 (ಜೆಬಿ)ರ ವಚನದ ಇನ್ನೊಂದು ಭಾಗವು ನಮೂದಿಸುವುದು: “ನೀವು ದೇವರಿಗಲ್ಲದೆ ಬೇರೆ ಯಾರಿಗೂ ದಾಸರುಗಳಲ್ಲ.” ಇದರ ಅರ್ಥ ದಬ್ಬಾಳಿಕೆಯ ಗುಲಾಮತ್ವವೆಂದಲ್ಲ, ಬದಲಾಗಿ, ದೇವರ ನಿಯಮಗಳಿಗೆ ಅಧೀನರಾಗಿರುವಾಗ ಅತ್ಯಂತ ಸುಖಿಗಳಾಗಿರುವಂತೆ ನಾವು ರಚಿಸಲ್ಪಟ್ಟಿದ್ದೇವೆಂದು ಅದರ ಅರ್ಥವಾಗಿದೆ. (ಮತ್ತಾಯ 22:35-40) ಮಾನವರಿಂದ ರಚಿಸಲ್ಪಟ್ಟ ಯಾವುದೇ ನಿಯಮಗಳಿಗಿಂತ, ಅವನ ನಿಯಮಗಳು ಅತ್ಯುತ್ತಮ ಮಾರ್ಗದರ್ಶನವನ್ನು ಒದಗಿಸುತ್ತವೆ. “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಡೆಯಿಸುವವನಾಗಿದ್ದೇನೆ.”—ಯೆಶಾಯ 48:17.

12. ದೇವರ ನಿಯಮಗಳೊಳಗೆ ನಮಗೆ ಆಯ್ಕೆಯ ಯಾವ ಸ್ವಾತಂತ್ರ್ಯವಿದೆ?

12 ಅದೇ ಸಮಯದಲ್ಲಿ, ಅವುಗಳ ಸರಹದ್ದುಗಳೊಳಗೆ ದೇವರ ನಿಯಮಗಳು ಮಹತ್ತರವಾದ ಆಯ್ಕೆಯ ಸ್ವಾತಂತ್ರ್ಯವನ್ನು ಅನುಮತಿಸುತ್ತವೆ. ಇದು ವೈವಿಧ್ಯವನ್ನು ಫಲಿಸುತ್ತದೆ ಮತ್ತು ಮಾನವ ಕುಟುಂಬವನ್ನು ಆಕರ್ಷಕವಾಗಿ ಮಾಡುತ್ತದೆ. ಲೋಕಾದ್ಯಂತವಿರುವ ಆಹಾರ, ಉಡುಪು, ಸಂಗೀತ, ಕಲೆ, ಮತ್ತು ಮನೆಗಳ ಬಗೆ ಬಗೆಯ ವಿಧಗಳ ಕುರಿತು ಯೋಚಿಸಿರಿ. ಯಾರೋ ಒಬ್ಬ ಇತರ ವ್ಯಕ್ತಿಯು ನಮಗಾಗಿ ತೀರ್ಮಾನಿಸುವ ಬದಲಿಗೆ, ಅಂಥ ವಿಷಯಗಳಲ್ಲಿ ನಮ್ಮದೇ ಆಯ್ಕೆಯಿರುವಂತೆ ನಾವು ಖಂಡಿತವಾಗಿಯೂ ಇಷ್ಟಪಡುತ್ತೇವೆ.

13. ನಮ್ಮ ಸ್ವಂತ ಒಳಿತಿಗಾಗಿ ಯಾವ ಭೌತಿಕ ನಿಯಮಗಳಿಗೆ ನಾವು ವಿಧೇಯರಾಗಲೇ ಬೇಕು?

13 ಈ ರೀತಿಯಲ್ಲಿ, ಮಾನವ ನಡೆವಳಿಗಾಗಿ ದೇವರ ನಿಯಮಗಳಿಗೆ ಅಧೀನರಾಗಿದ್ದಾಗ, ಅತ್ಯಂತ ಸುಖಿಗಳಾಗಿರುವಂತೆ ನಾವು ಸೃಷ್ಟಿಸಲ್ಪಟ್ಟಿದ್ದೇವೆ. ದೇವರ ಭೌತಿಕ ನಿಯಮಗಳಿಗೆ ಅಧೀನರಾಗಿರುವದಕ್ಕೆ ಸದೃಶವಾಗಿ ಇದು ಇದೆ. ಉದಾಹರಣೆಗೆ, ಗುರುತ್ವಾಕರ್ಷಣದ ನಿಯಮವನ್ನು ನಾವು ಅಲಕ್ಷಿಸುವುದಾದರೆ ಮತ್ತು ಎತ್ತರದ ಸ್ಥಳದಿಂದ ಹಾರುವುದಾದರೆ, ನಾವು ಗಾಯಗೊಳ್ಳಬಹುದು ಯಾ ಕೊಲ್ಲಲ್ಪಡಬಹುದು. ನಾವು ನಮ್ಮ ಶರೀರದ ಆಂತರಿಕ ನಿಯಮಗಳನ್ನು ಅಲಕ್ಷಿಸಿದರೆ ಮತ್ತು ಆಹಾರ ಸೇವಿಸುವುದನ್ನು, ನೀರು ಕುಡಿಯುವುದನ್ನು, ಯಾ ಗಾಳಿ ಉಸಿರಾಡುವದನ್ನು ನಿಲ್ಲಿಸಿದರೆ, ನಾವು ಸಾಯುವೆವು.

14. ದೇವರಿಂದ ಸ್ವತಂತ್ರರಾಗಿರಲು ಮಾನವರು ಸೃಷ್ಟಿಸಲ್ಪಟ್ಟಿರಲಿಲ್ಲವೆಂದು ನಮಗೆ ತಿಳಿದಿರುವುದು ಹೇಗೆ?

14 ದೇವರ ಭೌತಿಕ ನಿಯಮಗಳಿಗೆ ಅಧೀನರಾಗುವ ಆವಶ್ಯಕತೆಯೊಂದಿಗೆ ನಾವು ಸೃಷ್ಟಿಸಲ್ಪಟ್ಟಂತೆ, ನಿಶ್ಚಯವಾಗಿಯೂ ದೇವರ ನೈತಿಕ ಮತ್ತು ಸಾಮಾಜಿಕ ನಿಯಮಗಳಿಗೆ ಅಧೀನರಾಗುವ ಆವಶ್ಯಕತೆಯೊಂದಿಗೂ ನಾವು ಸೃಷ್ಟಿಸಲ್ಪಟ್ಟಿದ್ದೇವೆ. (ಮತ್ತಾಯ 4:4) ರಚಿಸುವವನಿಂದ ಸ್ವತಂತ್ರವಾಗಿರುವಂತೆ ಮತ್ತು ಯಶಸ್ವಿಗಳಾಗುವಂತೆ ಮಾನವರು ಸೃಷ್ಟಿಸಲ್ಪಡಲಿಲ್ಲ. ಪ್ರವಾದಿ ಯೆರೆಮೀಯನು ಹೇಳುವುದು: “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು. ಯೆಹೋವನೇ, ನನ್ನನ್ನು ಶಿಕ್ಷಿಸು [ಸರಿಪಡಿಸು, NW].” (ಯೆರೆಮೀಯ 10:23, 24) ಆದುದರಿಂದ ಪ್ರತಿಯೊಂದು ರೀತಿಗಳಲ್ಲಿ ಅವರ ಸ್ವಂತದ ಕೆಳಗಲ್ಲ, ಬದಲು ದೇವರ ಪ್ರಭುತ್ವದ ಕೆಳಗೆ ಜೀವಿಸುವಂತೆ ಮಾನವರು ಸೃಷ್ಟಿಸಲ್ಪಟ್ಟರು.

15. ಆದಾಮ, ಹವ್ವರಿಗೆ ದೇವರ ನಿಯಮಗಳು ಒಂದು ಹೊರೆಯಾಗಿರುತ್ತಿತ್ತೋ?

15 ದೇವರ ನಿಯಮಗಳಿಗೆ ವಿಧೇಯತೆಯು ನಮ್ಮ ಮೊದಲ ಹೆತ್ತವರಿಗೆ ಹೊರೆಯಾಗಿರುತ್ತಿರಲಿಲ್ಲ. ಬದಲಾಗಿ, ಅವರ ಮತ್ತು ಇಡೀ ಮಾನವ ಕುಟುಂಬದ ಕ್ಷೇಮಾಭಿವೃದ್ಧಿಗಾಗಿ ಅದು ಕಾರ್ಯವೆಸಗುತ್ತಿತ್ತು. ದೇವರ ನಿಯಮದ ಮಿತಿಗಳೊಳಗೆ ಮೊದಲನೆಯ ಜೋಡಿಯು ನಿಂತಿರುತ್ತಿದ್ದರೆ, ಎಲ್ಲವೂ ಒಳ್ಳೆಯದಾಗುತ್ತಿತ್ತು. ವಾಸ್ತವದಲ್ಲಿ, ಪ್ರೀತಿಯ, ಐಕ್ಯತೆಯ ಮಾನವ ಕುಟುಂಬದೋಪಾದಿ ಆಹ್ಲಾದತೆಯ ಅದ್ಭುತಕರ ಪ್ರಮೋದವನದಲ್ಲಿ ನಾವು ಈಗ ಜೀವಿಸುತ್ತಿದ್ದೆವು! ದುಷ್ಟತನ, ಕಷ್ಟಾನುಭವ, ಮತ್ತು ಮರಣವು ಇರುತ್ತಿರಲಿಲ್ಲ.

[ಅಧ್ಯಯನ ಪ್ರಶ್ನೆಗಳು]

[ಪುಟ 11ರಲ್ಲಿರುವ ಚಿತ್ರ]

ನಿರ್ಮಾಣಿಕನು ಮಾನವರಿಗೆ ಒಂದು ಪರಿಪೂರ್ಣ ಆರಂಭವನ್ನು ನೀಡಿದನು

[ಪುಟ 12ರಲ್ಲಿರುವ ಚಿತ್ರ]

ಸಂಚಾರ ನಿಯಮಗಳು ಇಲ್ಲದಿರುತ್ತಿದ್ದರೆ, ಭಾರಿ ಸಂಚಾರದಲ್ಲಿ ವಾಹನ ಚಲಾಯಿಸಲು ನೀವು ಬಯಸುವಿರೋ?