ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 15

ನಿಮ್ಮ ಕಷ್ಟದ ಕೆಲಸಕ್ಕೆ ಒಳ್ಳೇದನ್ನು ಅನುಭವಿಸಿರಿ

ನಿಮ್ಮ ಕಷ್ಟದ ಕೆಲಸಕ್ಕೆ ಒಳ್ಳೇದನ್ನು ಅನುಭವಿಸಿರಿ

‘ಪ್ರತಿಯೊಬ್ಬನು ತನ್ನ ಎಲ್ಲ ಕಷ್ಟದ ಕೆಲಸಕ್ಕೆ ಒಳ್ಳೇದನ್ನು ಅನುಭವಿಸಬೇಕು.’—ಪ್ರಸಂಗಿ 3:13, NW.

1-3. (ಎ) ಅನೇಕರಿಗೆ ತಮ್ಮ ಕೆಲಸದ ಕುರಿತು ಹೇಗನಿಸುತ್ತದೆ? (ಬಿ) ಬೈಬಲು ಕೆಲಸದ ವಿಷಯದಲ್ಲಿ ಯಾವ ನೋಟವನ್ನು ಉತ್ತೇಜಿಸುತ್ತದೆ ಮತ್ತು ಈ ಅಧ್ಯಾಯದಲ್ಲಿ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?

ಇಂದಿನ ಲೋಕದಲ್ಲಿರುವ ಅನೇಕರು ತಮ್ಮ ಕೆಲಸದಲ್ಲಿ ಯಾವುದೇ ಆನಂದವನ್ನು ಕಂಡುಕೊಳ್ಳುವುದಿಲ್ಲ. ತಾವು ಅಷ್ಟು ಆನಂದಿಸದಂಥ ಕೆಲಸದಲ್ಲಿ ಹಲವಾರು ತಾಸುಗಳ ವರೆಗೆ ಶ್ರಮಿಸಬೇಕಾಗಿರುವುದರಿಂದ ಅವರು ಪ್ರತಿ ದಿನ ಕೆಲಸಕ್ಕೆ ಹೋಗಲು ಬೇಸರಪಡುತ್ತಾರೆ. ಇಂಥ ಮನೋಭಾವವನ್ನು ಹೊಂದಿರುವಂಥವರು ತಮ್ಮ ಕೆಲಸದಲ್ಲಿ ಸಂತೃಪ್ತಿಯನ್ನು ಪಡೆದುಕೊಳ್ಳುವುದಿರಲಿ, ಅದರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೆಗೆದುಕೊಳ್ಳುವಂತೆ ಹೇಗೆ ಪ್ರಚೋದಿಸಲ್ಪಡಸಾಧ್ಯವಿದೆ?

2 ಬೈಬಲು ಕಷ್ಟದ ಕೆಲಸದ ಕುರಿತು ಸಕಾರಾತ್ಮಕ ನೋಟವನ್ನು ಉತ್ತೇಜಿಸುತ್ತದೆ. ಕೆಲಸವೂ ಅದರ ಪ್ರತಿಫಲವೂ ಒಂದು ಆಶೀರ್ವಾದವಾಗಿದೆ ಎಂದು ಅದು ತಿಳಿಸುತ್ತದೆ. “ಪ್ರತಿಯೊಬ್ಬನು ತಿಂದು, ಕುಡಿದು, ತನ್ನ ಎಲ್ಲ ಕಷ್ಟದ ಕೆಲಸಕ್ಕೆ ಒಳ್ಳೇದನ್ನು ಅನುಭವಿಸುವುದು ದೇವರ ವರವೇ” ಎಂದು ಸೊಲೊಮೋನನು ಬರೆದನು. (ಪ್ರಸಂಗಿ 3:13, NW) ನಮ್ಮನ್ನು ಪ್ರೀತಿಸುವಂಥ ಮತ್ತು ಯಾವಾಗಲೂ ನಮ್ಮ ಒಳಿತನ್ನೇ ಬಯಸುವಂಥ ಯೆಹೋವನು ನಾವು ನಮ್ಮ ಕೆಲಸದಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳುವಂತೆ ಮತ್ತು ನಮ್ಮ ಪ್ರಯಾಸದ ಫಲದಲ್ಲಿ ಆನಂದಿಸುವಂತೆ ಬಯಸುತ್ತಾನೆ. ಆತನ ಪ್ರೀತಿಯಲ್ಲಿ ಉಳಿಯಬೇಕಾದರೆ ನಾವು ಕೆಲಸದ ಕುರಿತಾದ ಆತನ ದೃಷ್ಟಿಕೋನ ಮತ್ತು ಆತನ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ಜೀವಿಸುವ ಅಗತ್ಯವಿದೆ.—ಪ್ರಸಂಗಿ 2:24; 5:18 ಓದಿ.

3 ಈ ಅಧ್ಯಾಯದಲ್ಲಿ ನಾವು ನಾಲ್ಕು ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ: ನಮ್ಮ ಕಷ್ಟದ ಕೆಲಸದಲ್ಲಿ ನಾವು ಹೇಗೆ ಒಳ್ಳೇದನ್ನು ಅನುಭವಿಸಸಾಧ್ಯವಿದೆ? ಯಾವ ರೀತಿಯ ಕೆಲಸಗಳು ಕ್ರೈಸ್ತರಿಗೆ ಯೋಗ್ಯವಾಗಿಲ್ಲ? ನಾವು ಐಹಿಕ ಕೆಲಸದೊಂದಿಗೆ ಆಧ್ಯಾತ್ಮಿಕ ಚಟುವಟಿಕೆಗಳನ್ನು ಹೇಗೆ ಸಮತೂಕಗೊಳಿಸಸಾಧ್ಯವಿದೆ? ಮತ್ತು ನಾವು ಮಾಡಸಾಧ್ಯವಿರುವ ಅತಿ ಪ್ರಾಮುಖ್ಯ ಕೆಲಸ ಯಾವುದು? ಈ ಪ್ರಶ್ನೆಗಳನ್ನು ಪರಿಗಣಿಸುವುದಕ್ಕಿಂತ ಮುಂಚೆ ಇಡೀ ವಿಶ್ವದಲ್ಲೇ ಅತಿ ದೊಡ್ಡ ಕೆಲಸಗಾರರಾಗಿರುವ ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಮಾದರಿಯನ್ನು ನಾವು ಪರಿಶೀಲಿಸೋಣ.

ಸರ್ವೋತ್ಕೃಷ್ಟ ಕೆಲಸಗಾರ ಮತ್ತು ಕುಶಲ ಕೆಲಸಗಾರ

4, 5. ಯೆಹೋವನು ಉತ್ಪಾದನ ಸಾಮರ್ಥ್ಯವುಳ್ಳ ಕೆಲಸಗಾರನಾಗಿದ್ದಾನೆ ಎಂಬುದನ್ನು ಬೈಬಲು ಹೇಗೆ ಸೂಚಿಸುತ್ತದೆ?

4 ಯೆಹೋವನು ಸರ್ವೋತ್ಕೃಷ್ಟ ಕೆಲಸಗಾರನಾಗಿದ್ದಾನೆ. “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು” ಎಂದು ಆದಿಕಾಂಡ 1:1 ತಿಳಿಸುತ್ತದೆ. ದೇವರು ಭೂಮಿಗೆ ಸಂಬಂಧಪಟ್ಟ ತನ್ನ ಸೃಷ್ಟಿಕಾರ್ಯವನ್ನು ಮುಗಿಸಿದಾಗ ಅದರ ಫಲಿತಾಂಶವು “ಬಹು ಒಳ್ಳೇದಾಗಿತ್ತು” ಎಂದು ಹೇಳಿದನು. (ಆದಿಕಾಂಡ 1:31) ಬೇರೆ ಮಾತುಗಳಲ್ಲಿ ಹೇಳುವುದಾದರೆ, ಭೂಸಂಬಂಧವಾದ ತನ್ನ ಎಲ್ಲ ಕೆಲಸದಿಂದ ಆತನಿಗೆ ಸಂಪೂರ್ಣ ಸಂತೃಪ್ತಿ ಸಿಕ್ಕಿತ್ತು. ‘ಸಂತೋಷದ ದೇವರಾಗಿರುವ’ ಯೆಹೋವನು ಉತ್ಪಾದನ ಸಾಮರ್ಥ್ಯವುಳ್ಳ ಕೆಲಸಗಾರನಾಗಿರುವುದರಲ್ಲಿ ಮಹಾ ಆನಂದವನ್ನು ಕಂಡುಕೊಂಡನು ಎಂಬುದರಲ್ಲಿ ಸಂದೇಹವಿಲ್ಲ.—1 ತಿಮೊಥೆಯ 1:11.

5 ಉದ್ಯೋಗಶೀಲನಾಗಿರುವ ನಮ್ಮ ದೇವರು ಕೆಲಸಮಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಭೂಮಿಗೆ ಸಂಬಂಧಪಟ್ಟ ಭೌತಿಕ ಸೃಷ್ಟಿಕಾರ್ಯವು ಪೂರ್ಣಗೊಂಡು ದೀರ್ಘ ಸಮಯ ಕಳೆದ ಬಳಿಕ ಯೇಸು, “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾ ಇದ್ದಾನೆ” ಎಂದು ಹೇಳಿದನು. (ಯೋಹಾನ 5:17) ತಂದೆಯು ಏನು ಮಾಡುತ್ತಾ ಇದ್ದಾನೆ? ತನ್ನ ಸ್ವರ್ಗೀಯ ನಿವಾಸದಿಂದ ಆತನು ಮಾನವಕುಲವನ್ನು ಮಾರ್ಗದರ್ಶಿಸುವುದರಲ್ಲಿ ಮತ್ತು ಪರಾಮರಿಸುವುದರಲ್ಲಿ ತನ್ನನ್ನು ಕ್ರಿಯಾಶೀಲನಾಗಿ ಇರಿಸಿಕೊಂಡಿದ್ದಾನೆ ಎಂಬುದಂತೂ ಖಂಡಿತ. ಅಂತಿಮವಾಗಿ ಸ್ವರ್ಗದಲ್ಲಿ ಯೇಸುವಿನೊಂದಿಗೆ ಆಳಲಿಕ್ಕಿರುವ ‘ನೂತನ ಸೃಷ್ಟಿಯನ್ನು,’ ಅಂದರೆ ಆತ್ಮಜಾತ ಕ್ರೈಸ್ತರನ್ನು ಆತನು ಅಸ್ತಿತ್ವಕ್ಕೆ ತಂದಿದ್ದಾನೆ. (2 ಕೊರಿಂಥ 5:17) ಆತನು ಮಾನವರ ಕಡೆಗಿನ ತನ್ನ ಉದ್ದೇಶದ ನೆರವೇರಿಕೆಯನ್ನು ಪೂರೈಸಲು ಕಾರ್ಯನಡಿಸುತ್ತಾ ಇದ್ದಾನೆ; ಆತನನ್ನು ಪ್ರೀತಿಸುವವರು ನೂತನ ಲೋಕದಲ್ಲಿ ನಿತ್ಯಜೀವವನ್ನು ಪಡೆಯುವುದೇ ಆತನ ಉದ್ದೇಶವಾಗಿದೆ. (ರೋಮನ್ನರಿಗೆ 6:23) ಯೆಹೋವನು ಈ ಕೆಲಸದ ಫಲಿತಾಂಶಗಳನ್ನು ನೋಡಿ ತುಂಬ ಸಂತೋಷಿತನಾಗಿರಬೇಕು. ದೇವರಿಂದ ಸೆಳೆಯಲ್ಪಟ್ಟು ಆತನ ಪ್ರೀತಿಯಲ್ಲಿ ಉಳಿಯಲಿಕ್ಕಾಗಿ ತಮ್ಮ ಜೀವನದಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ ಲಕ್ಷಾಂತರ ಮಂದಿ ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ.—ಯೋಹಾನ 6:44.

6, 7. ದೀರ್ಘ ಸಮಯದಿಂದಲೂ ಯೇಸು ಕಷ್ಟಪಟ್ಟು ಕೆಲಸಮಾಡುವ ವಿಷಯದಲ್ಲಿ ಯಾವ ದಾಖಲೆಯನ್ನು ಹೊಂದಿದ್ದಾನೆ?

6 ದೀರ್ಘ ಸಮಯದಿಂದಲೂ ಯೇಸು ಕಷ್ಟಪಟ್ಟು ಕೆಲಸಮಾಡುವವನು ಎಂಬ ದಾಖಲೆಯನ್ನು ಹೊಂದಿದ್ದಾನೆ. ತನ್ನ ಮಾನವಪೂರ್ವ ಅಸ್ತಿತ್ವದ ಸಮಯದಲ್ಲಿ “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ” ಇರುವ ಸಕಲ ವಿಷಯಗಳನ್ನು ಸೃಷ್ಟಿಸುವುದರಲ್ಲಿ ಅವನು ದೇವರ “ಕುಶಲ ಕೆಲಸಗಾರನಾಗಿ” (NW) ಕಾರ್ಯನಿರ್ವಹಿಸಿದನು. (ಜ್ಞಾನೋಕ್ತಿ 8:22-31; ಕೊಲೊಸ್ಸೆ 1:15-17) ಭೂಮಿಯ ಮೇಲೆ ಇದ್ದಾಗಲೂ ಯೇಸು ಪರಿಶ್ರಮಿಯಾದ ಕೆಲಸಗಾರನಾಗಿ ಮುಂದುವರಿದನು. ತನ್ನ ಜೀವನದ ಆದಿಭಾಗದಲ್ಲಿ ಅವನು ಕಟ್ಟಡ ನಿರ್ಮಾಣಕಾರ್ಯವನ್ನು ಕಲಿತುಕೊಂಡನು ಮತ್ತು “ಬಡಗಿ” ಎಂದು ಹೆಸರುವಾಸಿಯಾದನು. (ಮಾರ್ಕ 6:3) ವಿಶೇಷವಾಗಿ ಸಾಮಿಲ್‌ಗಳು, ದಾಸ್ತಾನು ಅಂಗಡಿಗಳು ಮತ್ತು ಇಲೆಕ್ಟ್ರಿಕ್‌ ಉಪಕರಣಗಳಿಗೆ ಮುಂಚಿನ ಯುಗದಲ್ಲಿ ಈ ವೃತ್ತಿಯು ಶ್ರಮದ ಕೆಲಸವನ್ನು ಮತ್ತು ಬೇರೆ ಬೇರೆ ರೀತಿಯ ಕೌಶಲಗಳನ್ನು ಒಳಗೂಡಿತ್ತು. ತನಗೆ ಬೇಕಾಗಿರುವ ಮರದ ದಿಮ್ಮಿಯನ್ನು ತರಲಿಕ್ಕಾಗಿ ಯೇಸು ಹೋಗುವುದನ್ನು, ಬಹುಶಃ ಮರಗಳನ್ನು ಕಡಿದು ತಾನು ಕೆಲಸಮಾಡುತ್ತಿದ್ದ ಸ್ಥಳಕ್ಕೆ ಮರದ ದಿಮ್ಮಿಗಳನ್ನು ಎಳೆದೊಯ್ಯುತ್ತಿರುವುದನ್ನು ನೀವು ಊಹಿಸಿಕೊಳ್ಳಬಲ್ಲಿರೊ? ಅವನು ಮನೆಗಳನ್ನು ಕಟ್ಟುತ್ತಿರುವಾಗ, ಛಾವಣಿಯ ಅಡ್ಡತೊಲೆಗಳನ್ನು ಸಿದ್ಧಪಡಿಸಿ ಅವುಗಳನ್ನು ಅಳವಡಿಸುತ್ತಿರುವುದನ್ನು, ಬಾಗಿಲುಗಳನ್ನು ಮಾಡುತ್ತಿರುವುದನ್ನು ಮತ್ತು ಪೀಠೋಪಕರಣಗಳಲ್ಲಿ ಕೆಲವನ್ನು ಸಹ ನಿರ್ಮಿಸುತ್ತಿರುವುದನ್ನು ನೀವು ಚಿತ್ರಿಸಿಕೊಳ್ಳಬಲ್ಲಿರೊ? ಕೌಶಲದಿಂದ ಮಾಡುವ ಕಷ್ಟದ ಕೆಲಸದಿಂದ ಸಿಗುವ ಸಂತೃಪ್ತಿಯನ್ನು ಯೇಸು ವೈಯಕ್ತಿಕವಾಗಿ ಅನುಭವಿಸಿದ್ದನು ಎಂಬುದರಲ್ಲಿ ಸಂಶಯವೇ ಇಲ್ಲ.

7 ತನ್ನ ಶುಶ್ರೂಷೆಯನ್ನು ಪೂರೈಸುವುದರಲ್ಲಿ ಯೇಸು ಗಮನಾರ್ಹ ರೀತಿಯಲ್ಲಿ ಶ್ರದ್ಧಾಳುವಾಗಿದ್ದನು. ಮೂರೂವರೆ ವರ್ಷಗಳ ವರೆಗೆ ಅವನು ಅತಿ ಪ್ರಾಮುಖ್ಯವಾದ ಈ ಕೆಲಸದಲ್ಲಿ ತೀವ್ರಾಸಕ್ತಿಯಿಂದ ನಿರತನಾಗಿದ್ದನು. ಸಾಧ್ಯವಿರುವಷ್ಟು ಹೆಚ್ಚು ಜನರನ್ನು ತಲಪಲು ಬಯಸುತ್ತಾ ಅವನು ಬೆಳಗ್ಗೆ ಬೇಗನೆ ಎದ್ದು ರಾತ್ರಿ ಬಹಳ ಸಮಯದ ವರೆಗೆ ಸಾರುವ ಕೆಲಸವನ್ನು ಮಾಡುವ ಮೂಲಕ ತನ್ನ ದಿನಗಳನ್ನು ಪೂರ್ಣವಾಗಿ ಸದುಪಯೋಗಿಸಿದನು. (ಲೂಕ 21:37, 38; ಯೋಹಾನ 3:2) ಅವನು “ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರಿಂದ ಊರಿಗೂ ಹಳ್ಳಿಯಿಂದ ಹಳ್ಳಿಗೂ” ಪ್ರಯಾಣಿಸಿದನು. (ಲೂಕ 8:1) ಯೇಸು ಜನರಿಗೆ ಸುವಾರ್ತೆಯ ಸಂದೇಶವನ್ನು ಕೊಂಡೊಯ್ಯಲಿಕ್ಕಾಗಿ ಧೂಳುಳ್ಳ ರಸ್ತೆಗಳಲ್ಲಿ ಪ್ರಯಾಣಿಸುತ್ತಾ ಅಕ್ಷರಾರ್ಥವಾಗಿ ನೂರಾರು ಕಿಲೊಮೀಟರುಗಳಷ್ಟು ಕ್ಷೇತ್ರವನ್ನು ಆವರಿಸಿದನು.

8, 9. ಯೇಸು ತನ್ನ ಕಷ್ಟದ ಕೆಲಸಕ್ಕೆ ಒಳ್ಳೇದನ್ನು ಹೇಗೆ ಅನುಭವಿಸಿದನು?

8 ಶುಶ್ರೂಷೆಯಲ್ಲಿ ತಾನು ಮಾಡಿದ ಕಷ್ಟದ ಕೆಲಸಕ್ಕೆ ಯೇಸು ಒಳ್ಳೇದನ್ನು ಅನುಭವಿಸಿದನೊ? ಹೌದು! ಅವನು ರಾಜ್ಯ ಸತ್ಯದ ಬೀಜಗಳನ್ನು ಬಿತ್ತಿದನು ಮತ್ತು ಕೊಯ್ಲಿಗೆ ಸಿದ್ಧವಾಗಿರುವ ಹೊಲಗಳನ್ನು ಬಿಟ್ಟುಹೋದನು. ದೇವರ ಕೆಲಸವನ್ನು ಮಾಡುವುದು ಯೇಸುವಿಗೆ ಎಷ್ಟು ಬಲ ಮತ್ತು ಪೋಷಣೆಯನ್ನು ನೀಡಿತೆಂದರೆ, ಈ ಕೆಲಸವನ್ನು ಪೂರೈಸಲಿಕ್ಕಾಗಿ ಅವನು ಊಟವನ್ನು ಬಿಡಲೂ ಸಿದ್ಧನಾಗಿದ್ದನು. (ಯೋಹಾನ 4:31-38) ಅವನು ತನ್ನ ಭೂಶುಶ್ರೂಷೆಯ ಕೊನೆಯಲ್ಲಿ ತನ್ನ ತಂದೆಗೆ “ನೀನು ನನಗೆ ಮಾಡಲು ಕೊಟ್ಟಿರುವ ಕೆಲಸವನ್ನು ಪೂರೈಸುವ ಮೂಲಕ ನಾನು ಈ ಭೂಮಿಯಲ್ಲಿ ನಿನ್ನನ್ನು ಮಹಿಮೆಪಡಿಸಿದ್ದೇನೆ” ಎಂದು ಸತ್ಯವಾಗಿ ವರದಿಸಶಕ್ತನಾದಾಗ ಅವನಿಗೆಷ್ಟು ಸಂತೃಪ್ತಿಯಾಗಿದ್ದಿರಬೇಕು ಎಂಬುದರ ಕುರಿತು ತುಸು ಆಲೋಚಿಸಿರಿ.—ಯೋಹಾನ 17:4.

9 ತಮ್ಮ ಕಷ್ಟದ ಕೆಲಸಕ್ಕೆ ಒಳ್ಳೇದನ್ನು ಅನುಭವಿಸುವವರಲ್ಲಿ ಯೆಹೋವನು ಮತ್ತು ಯೇಸು ಅತ್ಯುತ್ತಮ ಮಾದರಿಗಳಾಗಿದ್ದಾರೆ ಎಂಬುದಂತೂ ನಿಶ್ಚಯ. ಯೆಹೋವನ ಮೇಲೆ ನಮಗಿರುವ ಪ್ರೀತಿಯು ‘ದೇವರನ್ನು ಅನುಕರಿಸುವವರಾಗುವಂತೆ’ ನಮ್ಮನ್ನು ಪ್ರಚೋದಿಸುತ್ತದೆ. (ಎಫೆಸ 5:1) ಯೇಸುವಿನ ಮೇಲೆ ನಮಗಿರುವ ಪ್ರೀತಿಯು ‘ಅವನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ’ ನಮ್ಮನ್ನು ಹುರಿದುಂಬಿಸುತ್ತದೆ. (1 ಪೇತ್ರ 2:21) ಆದುದರಿಂದ ನಮ್ಮ ಕಷ್ಟದ ಕೆಲಸಕ್ಕೆ ನಾವೂ ಹೇಗೆ ಒಳ್ಳೇದನ್ನು ಅನುಭವಿಸಸಾಧ್ಯವಿದೆ ಎಂಬುದನ್ನು ಈಗ ಪರಿಶೀಲಿಸೋಣ.

ನಮ್ಮ ಕಷ್ಟದ ಕೆಲಸಕ್ಕೆ ಒಳ್ಳೇದನ್ನು ಅನುಭವಿಸುವ ವಿಧ

ಬೈಬಲಿನ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದು ನಿಮ್ಮ ಕಷ್ಟದ ಕೆಲಸಕ್ಕೆ ಒಳ್ಳೇದನ್ನು ಅನುಭವಿಸುವಂತೆ ನಿಮಗೆ ಸಹಾಯಮಾಡಬಲ್ಲದು

10, 11. ನಮ್ಮ ಉದ್ಯೋಗದ ವಿಷಯದಲ್ಲಿ ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ಯಾವುದು ನಮಗೆ ಸಹಾಯಮಾಡಬಲ್ಲದು?

10 ನಿಜ ಕ್ರೈಸ್ತರ ಜೀವನದಲ್ಲಿ ಐಹಿಕ ಕೆಲಸಕ್ಕೆ ಒಂದು ಸ್ಥಾನವಿದೆ. ನಮ್ಮ ಕೆಲಸದಲ್ಲಿ ನಾವು ಸಂತೃಪ್ತಿಯನ್ನು ಮತ್ತು ಸ್ವಲ್ಪಮಟ್ಟಿಗಿನ ಸಂತುಷ್ಟಿಯನ್ನು ಕಂಡುಕೊಳ್ಳಲು ಬಯಸುತ್ತೇವೆ, ಆದರೆ ನಮಗೆ ಇಷ್ಟವಿಲ್ಲದಿರುವಂಥ ಒಂದು ಐಹಿಕ ಉದ್ಯೋಗದಲ್ಲಿ ನಾವು ಕೆಲಸಮಾಡುತ್ತಿರುವುದಾದರೆ ಇದು ನಿಜವಾಗಿಯೂ ತುಂಬ ಕಷ್ಟಕರವಾಗಿರಸಾಧ್ಯವಿದೆ. ಇಂಥ ಸನ್ನಿವೇಶಗಳ ಕೆಳಗೆ ನಮ್ಮ ಕೆಲಸದಲ್ಲಿ ಹೇಗೆ ಒಳ್ಳೇದನ್ನು ಅನುಭವಿಸಸಾಧ್ಯವಿದೆ?

11 ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ. ನಾವು ಯಾವಾಗಲೂ ನಮ್ಮ ಸನ್ನಿವೇಶಗಳನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಸಾಧ್ಯವಿದೆ. ದೇವರ ದೃಷ್ಟಿಕೋನದ ಕುರಿತು ಮನನಮಾಡುವುದು ಕೆಲಸದ ಕಡೆಗೆ ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ನಮಗೆ ಸಹಾಯಮಾಡಬಲ್ಲದು. ಉದಾಹರಣೆಗೆ ನೀವು ಕುಟುಂಬದ ಶಿರಸ್ಸಾಗಿರುವಲ್ಲಿ, ನಿಮ್ಮ ಉದ್ಯೋಗವು ಎಷ್ಟೇ ಅನಾಸಕ್ತಿಕರವಾಗಿ ತೋರಿಬರುವುದಾದರೂ ಅದು ನಿಮ್ಮ ಕುಟುಂಬದ ಭೌತಿಕ ಆವಶ್ಯಕತೆಗಳನ್ನು ಪೂರೈಸಲು ನಿಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ ಎಂಬ ವಾಸ್ತವಾಂಶದ ಕುರಿತು ಆಲೋಚಿಸಿರಿ. ಹೀಗೆ ನಿಮ್ಮ ಪ್ರಿಯ ಜನರನ್ನು ನೋಡಿಕೊಳ್ಳುವುದು ದೇವರ ದೃಷ್ಟಿಯಲ್ಲಿ ಚಿಕ್ಕ ವಿಷಯವೇನಲ್ಲ. ಯಾರು ತನ್ನ ಕುಟುಂಬಕ್ಕೆ ಅಗತ್ಯವಿರುವುದನ್ನು ಒದಗಿಸಲು ತಪ್ಪಿಹೋಗುತ್ತಾನೋ ಅಂಥ ವ್ಯಕ್ತಿಯು ‘ಯೆಹೋವನನ್ನು ನಿರಾಕರಿಸಿದವನಿಗಿಂತ ಕಡೆಯಾದವನಾಗಿದ್ದಾನೆ’ ಎಂದು ಆತನ ವಾಕ್ಯವು ಹೇಳುತ್ತದೆ. (1 ತಿಮೊಥೆಯ 5:8, NW ರೆಫರೆನ್ಸ್‌ ಬೈಬಲಿನ ಪಾದಟಿಪ್ಪಣಿ) ನಿಮ್ಮ ಉದ್ಯೋಗವು ಒಂದು ಅಪೇಕ್ಷಿತ ಗುರಿಯನ್ನು ಸಾಧಿಸಲು ಒಂದು ಮಾಧ್ಯಮವಾಗಿದೆ ಅಂದರೆ ಒಂದು ದೇವದತ್ತ ಜವಾಬ್ದಾರಿಯನ್ನು ಪೂರೈಸಲು ನಿಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ ಎಂಬುದನ್ನು ಗ್ರಹಿಸುವುದು, ನಿಮ್ಮ ಕೆಲಸದಲ್ಲಿ ಸ್ವಲ್ಪಮಟ್ಟಿಗಿನ ಸಂತೃಪ್ತಿಯನ್ನು ಮತ್ತು ನಿಮ್ಮ ಸಹಕರ್ಮಿಗಳಿಗೆ ಇಲ್ಲದಿರಬಹುದಾದ ಉದ್ದೇಶವನ್ನು ಕಂಡುಕೊಳ್ಳಲು ನಿಮಗೆ ಸಹಾಯಮಾಡಬಲ್ಲದು.

12. ನಮ್ಮ ಕೆಲಸದಲ್ಲಿ ಶ್ರದ್ಧಾಳುಗಳು ಮತ್ತು ಪ್ರಾಮಾಣಿಕರು ಆಗಿರುವುದು ಯಾವ ವಿಧಗಳಲ್ಲಿ ಪ್ರತಿಫಲದಾಯಕವಾಗಿದೆ?

12 ಶ್ರದ್ಧಾಳುಗಳು ಮತ್ತು ಪ್ರಾಮಾಣಿಕರು ಆಗಿರುವ ಮೂಲಕ. ಕಷ್ಟಪಟ್ಟು ಕೆಲಸಮಾಡುವುದು ಮತ್ತು ನಮ್ಮ ಉದ್ಯೋಗವನ್ನು ಚೆನ್ನಾಗಿ ಮಾಡುವ ವಿಧವನ್ನು ಕಲಿತುಕೊಳ್ಳುವುದು ಆಶೀರ್ವಾದಗಳನ್ನು ತರಸಾಧ್ಯವಿದೆ. ಶ್ರದ್ಧಾಳುಗಳಾದ ಮತ್ತು ಕೌಶಲಭರಿತ ಕೆಲಸಗಾರರನ್ನು ಅನೇಕವೇಳೆ ಧಣಿಗಳು ಅತ್ಯಮೂಲ್ಯವಾಗಿ ಪರಿಗಣಿಸುತ್ತಾರೆ. (ಜ್ಞಾನೋಕ್ತಿ 12:24; 22:29) ನಿಜ ಕ್ರೈಸ್ತರಾಗಿರುವ ನಾವು ನಮ್ಮ ಕೆಲಸದಲ್ಲಿ ಪ್ರಾಮಾಣಿಕರೂ ಆಗಿರಬೇಕು. ನಮ್ಮ ಧಣಿಯಿಂದ ಹಣವನ್ನು, ವಸ್ತುಗಳನ್ನು ಅಥವಾ ಸಮಯವನ್ನು ಕದಿಯುವವರಾಗಿರಬಾರದು. (ಎಫೆಸ 4:28) ನಾವು ಹಿಂದಿನ ಅಧ್ಯಾಯದಲ್ಲಿ ನೋಡಿದಂತೆ ಪ್ರಾಮಾಣಿಕತೆಯು ಪ್ರತಿಫಲದಾಯಕವಾಗಿದೆ. ಪ್ರಾಮಾಣಿಕನೆಂಬ ಹೆಸರು ಪಡೆದಿರುವ ಒಬ್ಬ ಕೆಲಸಗಾರನ ಮೇಲೆ ಇತರರು ಭರವಸೆಯಿಡುವ ಸಂಭವನೀಯತೆಯಿದೆ. ಮತ್ತು ಕಷ್ಟದ ಕೆಲಸಗಾರರಾಗಿರುವ ನಮ್ಮ ಮಾದರಿಯನ್ನು ನಮ್ಮ ಧಣಿಯು ಗಮನಿಸುತ್ತಾನೋ ಇಲ್ಲವೊ, “ಪ್ರಾಮಾಣಿಕವಾದ ಮನಸ್ಸಾಕ್ಷಿ” ಹೊಂದಿರುವುದರಿಂದ ಮತ್ತು ನಾವು ಪ್ರೀತಿಸುವಂಥ ದೇವರನ್ನು ನಾವು ಸಂತೋಷಪಡಿಸುತ್ತಿದ್ದೇವೆ ಎಂಬುದನ್ನು ತಿಳಿದಿರುವುದರಿಂದ ಸಿಗುವ ಸಂತೃಪ್ತಿ ನಮಗಿರಸಾಧ್ಯವಿದೆ.—ಇಬ್ರಿಯ 13:18; ಕೊಲೊಸ್ಸೆ 3:22-24.

13. ಕೆಲಸದ ಸ್ಥಳದಲ್ಲಿ ನಮ್ಮ ಒಳ್ಳೇ ಮಾದರಿಯು ಯಾವ ಫಲಿತಾಂಶಗಳನ್ನು ಉಂಟುಮಾಡಬಹುದು?

13 ನಮ್ಮ ನಡತೆಯು ದೇವರನ್ನು ಮಹಿಮೆಪಡಿಸಸಾಧ್ಯವಿದೆ ಎಂಬುದನ್ನು ಗ್ರಹಿಸುವ ಮೂಲಕ. ನಮ್ಮ ಕೆಲಸದ ಸ್ಥಳದಲ್ಲಿ ಉಚ್ಚ ಮಟ್ಟದ ಕ್ರೈಸ್ತ ನಡತೆಯನ್ನು ನಾವು ಕಾಪಾಡಿಕೊಳ್ಳುವಾಗ ಇತರರು ಅದನ್ನು ಖಂಡಿತವಾಗಿಯೂ ಗಮನಿಸುತ್ತಾರೆ. ಇದರ ಫಲಿತಾಂಶವೇನು? ಹೀಗೆ ನಾವು ‘ನಮ್ಮ ರಕ್ಷಕನಾದ ದೇವರ ಬೋಧನೆಯನ್ನು ಅಲಂಕರಿಸುವಂತಾಗಬಹುದು.’ (ತೀತ 2:9, 10) ಹೌದು, ನಮ್ಮ ಒಳ್ಳೇ ನಡತೆಯು ನಮ್ಮ ಆರಾಧನಾ ರೀತಿಯ ಸೊಬಗನ್ನು ಇತರರು ಗಮನಿಸುವಂತೆ ಮಾಡಿ ಅದನ್ನು ಇನ್ನಷ್ಟು ಆಕರ್ಷಣೀಯವಾಗಿ ಮಾಡಬಲ್ಲದು. ಕೆಲಸದ ಸ್ಥಳದಲ್ಲಿ ನಿಮ್ಮ ಒಳ್ಳೇ ನಡತೆಯ ಕಾರಣ ಒಬ್ಬ ಸಹಕರ್ಮಿಯು ಬೈಬಲ್‌ ಸತ್ಯದಲ್ಲಿ ಆಸಕ್ತಿಯನ್ನು ತೋರಿಸಲು ಆರಂಭಿಸುವಲ್ಲಿ ನಿಮಗೆ ಹೇಗನಿಸುವುದು ಎಂಬುದರ ಕುರಿತು ತುಸು ಆಲೋಚಿಸಿರಿ! ಎಲ್ಲಕ್ಕಿಂತಲೂ ಪ್ರಾಮುಖ್ಯವಾಗಿ, ನಿಮ್ಮ ಒಳ್ಳೇ ನಡತೆಯು ಯೆಹೋವನನ್ನು ಮಹಿಮೆಪಡಿಸುತ್ತದೆ ಮತ್ತು ಆತನ ಹೃದಯವನ್ನು ಸಂತೋಷಪಡಿಸುತ್ತದೆ ಎಂಬುದನ್ನು ತಿಳಿದಿರುವುದಕ್ಕಿಂತ ಯಾವುದು ಹೆಚ್ಚು ಪ್ರತಿಫಲದಾಯಕವಾಗಿರಸಾಧ್ಯವಿದೆ? ಎಂಬುದನ್ನು ಪರಿಗಣಿಸಿ.—ಜ್ಞಾನೋಕ್ತಿ 27:11; 1 ಪೇತ್ರ 2:12.

ನಮ್ಮ ಕೆಲಸದ ಆಯ್ಕೆಯಲ್ಲಿ ವಿವೇಚನಾಶಕ್ತಿಯನ್ನು ಉಪಯೋಗಿಸುವುದು

14-16. ಉದ್ಯೋಗದ ಕುರಿತಾದ ನಿರ್ಣಯಗಳನ್ನು ಎದುರಿಸುವಾಗ ನಾವು ಯಾವ ಮುಖ್ಯ ಪ್ರಶ್ನೆಗಳನ್ನು ಪರಿಗಣಿಸುವ ಅಗತ್ಯವಿದೆ?

14 ಐಹಿಕ ಕೆಲಸದ ವಿಷಯದಲ್ಲಿ ಯಾವುದು ಸ್ವೀಕಾರಾರ್ಹವಾಗಿದೆ ಮತ್ತು ಯಾವುದು ಸ್ವೀಕಾರಾರ್ಹವಾಗಿಲ್ಲ ಎಂಬುದರ ಕುರಿತು ಬೈಬಲು ಸವಿವರವಾದ ಸಲಹೆಸೂಚನೆಗಳನ್ನು ಕೊಡುವುದಿಲ್ಲ. ಒಂದು ಉದ್ಯೋಗದಲ್ಲಿ ಏನೇ ಒಳಗೂಡಿರಲಿ ಅದು ಪ್ರಾಮುಖ್ಯವಲ್ಲ, ಯಾವುದೇ ರೀತಿಯ ಉದ್ಯೋಗವನ್ನು ನಾವು ಮಾಡಸಾಧ್ಯವಿದೆ ಎಂಬುದು ಇದರ ಅರ್ಥವಲ್ಲ. ದೇವರಿಗೆ ಅಸಂತೋಷಕರವಾಗಿರುವಂಥ ಒಂದು ಉದ್ಯೋಗದಿಂದ ದೂರವಿದ್ದು, ಅದೇ ಸಮಯದಲ್ಲಿ ಆತನಿಗೆ ಮೆಚ್ಚುಗೆಯಾಗುವಂಥ ಉತ್ಪನ್ನದಾಯಕವಾದ, ಪ್ರಾಮಾಣಿಕ ಕೆಲಸವನ್ನು ಆಯ್ಕೆಮಾಡಲು ಶಾಸ್ತ್ರಗ್ರಂಥವು ನಮಗೆ ಸಹಾಯಮಾಡಬಲ್ಲದು. (ಜ್ಞಾನೋಕ್ತಿ 2:6) ಉದ್ಯೋಗದ ಕುರಿತಾದ ನಿರ್ಣಯಗಳನ್ನು ಎದುರಿಸುವಾಗ ನಾವು ಎರಡು ಮುಖ್ಯ ಪ್ರಶ್ನೆಗಳನ್ನು ಪರಿಗಣಿಸಬೇಕಾಗಿದೆ.

15 ಈ ನಿರ್ದಿಷ್ಟ ಕೆಲಸವನ್ನು ಮಾಡುವುದು ಬೈಬಲಿನಲ್ಲಿ ಖಂಡಿಸಿರುವಂಥ ಕೃತ್ಯವನ್ನು ಮಾಡುವುದಕ್ಕೆ ಸಮಾನವಾಗಿರುವುದೊ? ದೇವರ ವಾಕ್ಯವು ಕದಿಯುವುದು, ಸುಳ್ಳಾಡುವುದು ಮತ್ತು ವಿಗ್ರಹಗಳನ್ನು ಮಾಡುವುದನ್ನು ಸ್ಪಷ್ಟವಾಗಿ ಖಂಡಿಸುತ್ತದೆ. (ವಿಮೋಚನಕಾಂಡ 20:4; ಅಪೊಸ್ತಲರ ಕಾರ್ಯಗಳು 15:29; ಎಫೆಸ 4:28; ಪ್ರಕಟನೆ 21:8) ಇಂಥ ವಿಷಯಗಳನ್ನು ಮಾಡುವಂತೆ ಅಗತ್ಯಪಡಿಸುವ ಯಾವುದೇ ಉದ್ಯೋಗವನ್ನು ನಾವು ತಳ್ಳಿಹಾಕುತ್ತೇವೆ. ದೇವರ ಮೇಲೆ ನಮಗಿರುವ ಪ್ರೀತಿಯು ದೇವರ ಆಜ್ಞೆಗಳನ್ನು ಉಲ್ಲಂಘಿಸುವಂಥ ರೂಢಿಗಳಲ್ಲಿ ಒಳಗೂಡುವಂತೆ ಮಾಡುವ ಒಂದು ಉದ್ಯೋಗವನ್ನು ಸ್ವೀಕರಿಸಲು ನಮ್ಮನ್ನು ಎಂದಿಗೂ ಬಿಡುವುದಿಲ್ಲ.—1 ಯೋಹಾನ 5:3.

16 ಈ ಕೆಲಸವನ್ನು ಮಾಡುವುದು ನಮ್ಮನ್ನು ತಪ್ಪಾದ ಒಂದು ರೂಢಿಯಲ್ಲಿ ಶಾಮೀಲುದಾರರಾಗುವಂತೆ ಅಥವಾ ಅದನ್ನು ಉತ್ತೇಜಿಸುವವರಾಗುವಂತೆ ಮಾಡುವುದೊ? ಒಂದು ಉದಾಹರಣೆಯನ್ನು ಪರಿಗಣಿಸಿರಿ. ರಿಸೆಪ್‌ಷನಿಸ್ಟ್‌ ಆಗಿ ಕೆಲಸಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ ಗರ್ಭಪಾತಮಾಡುವಂಥ ಒಂದು ಕ್ಲಿನಿಕ್‌ನಲ್ಲಿ ಕ್ರೈಸ್ತನೊಬ್ಬನಿಗೆ ಇಂಥ ಕೆಲಸ ಸಿಗುವುದಾದರೆ ಆಗೇನು? ಅವನ ಕೆಲಸದ ನೇಮಕವು ನೇರವಾಗಿ ಗರ್ಭಪಾತದ ಕಾರ್ಯವಿಧಾನಗಳೊಂದಿಗೆ ಸಹಾಯಮಾಡುವುದನ್ನು ಅಗತ್ಯಪಡಿಸದಿರಬಹುದು. ಆದರೂ ಅವನು ಅಲ್ಲಿ ಮಾಡುವ ಕ್ರಮವಾದ ಕೆಲಸವು, ದೇವರ ವಾಕ್ಯಕ್ಕೆ ವಿರುದ್ಧವಾದ ಒಂದು ರೂಢಿಯಾಗಿರುವ ಗರ್ಭಪಾತಗಳನ್ನು ನಡೆಸಲಿಕ್ಕಾಗಿಯೇ ಅಸ್ತಿತ್ವದಲ್ಲಿರುವಂಥ ಒಂದು ಕ್ಲಿನಿಕ್‌ನ ಕಾರ್ಯನಿರ್ವಹಣೆಯನ್ನು ಬೆಂಬಲಿಸುತ್ತದಲ್ಲವೊ? (ವಿಮೋಚನಕಾಂಡ 21:22-24) ಯೆಹೋವನನ್ನು ಪ್ರೀತಿಸುವವರಾಗಿರುವ ನಾವು ಶಾಸ್ತ್ರಾಧಾರಿತವಲ್ಲದ ರೂಢಿಗಳೊಂದಿಗೆ ನಿಕಟ ಸಂಬಂಧವನ್ನು ಕಲ್ಪಿಸಿಕೊಳ್ಳಲು ಬಯಸುವುದಿಲ್ಲ.

17. (ಎ) ಉದ್ಯೋಗದ ಕುರಿತಾದ ನಿರ್ಣಯಗಳನ್ನು ಮಾಡುವಾಗ ನಾವು ಯಾವ ಅಂಶಗಳನ್ನು ತೂಗಿನೋಡಸಾಧ್ಯವಿದೆ? (“ ನಾನು ಈ ಕೆಲಸವನ್ನು ಸ್ವೀಕರಿಸಬೇಕೊ?” ಎಂಬ ಚೌಕವನ್ನು ನೋಡಿ.) (ಬಿ) ನಮ್ಮ ಮನಸ್ಸಾಕ್ಷಿಯು ದೇವರನ್ನು ಸಂತೋಷಪಡಿಸುವಂಥ ನಿರ್ಣಯಗಳನ್ನು ಮಾಡುವಂತೆ ನಮಗೆ ಹೇಗೆ ಸಹಾಯಮಾಡಬಹುದು?

17 ಉದ್ಯೋಗಕ್ಕೆ ಸಂಬಂಧಪಟ್ಟ ಅನೇಕ ವಿವಾದಾಂಶಗಳನ್ನು, 15 ಮತ್ತು 16⁠ನೇ ಪ್ಯಾರಗ್ರಾಫ್‌ಗಳಲ್ಲಿ ಕೊಟ್ಟಿರುವ ಎರಡು ಮುಖ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಜಾಗರೂಕತೆಯಿಂದ ಪರಿಶೀಲಿಸುವ ಮೂಲಕ ಬಗೆಹರಿಸಸಾಧ್ಯವಿದೆ. ಅಷ್ಟುಮಾತ್ರವಲ್ಲ, ಉದ್ಯೋಗದ ಕುರಿತಾದ ನಿರ್ಣಯಗಳನ್ನು ಮಾಡುವಾಗ ಇನ್ನೂ ಕೆಲವು ಅಂಶಗಳನ್ನು ನಾವು ತೂಗಿನೋಡುವುದು ಒಳ್ಳೇದು. * ನಂಬಿಗಸ್ತ ಆಳು ಏಳಬಹುದಾದ ಪ್ರತಿಯೊಂದು ಸನ್ನಿವೇಶವನ್ನು ಆವರಿಸುವಂಥ ನಿಯಮಗಳನ್ನು ಸ್ಥಾಪಿಸಬೇಕೆಂದು ನಾವು ನಿರೀಕ್ಷಿಸಲು ಸಾಧ್ಯವಿಲ್ಲ. ನಾವು ವಿವೇಚನಾಶಕ್ತಿಯನ್ನು ಉಪಯೋಗಿಸುವ ಅಗತ್ಯವಿರುವುದು ಇಂಥ ಸನ್ನಿವೇಶದಲ್ಲಿಯೇ. ನಾವು ಅಧ್ಯಾಯ 2⁠ರಲ್ಲಿ ಕಲಿತಂತೆ, ನಮ್ಮ ದೈನಂದಿನ ಜೀವನದಲ್ಲಿ ದೇವರ ವಾಕ್ಯವನ್ನು ಹೇಗೆ ಅನ್ವಯಿಸುವುದು ಎಂಬುದನ್ನು ಅಧ್ಯಯನಮಾಡುವ ಮೂಲಕ ನಾವು ನಮ್ಮ ಮನಸ್ಸಾಕ್ಷಿಯನ್ನು ತರಬೇತುಗೊಳಿಸುವ ಅಗತ್ಯವಿದೆ. ಹೀಗೆ “ಉಪಯೋಗದ ಮೂಲಕ” ನಮ್ಮ ‘ಗ್ರಹಣ ಶಕ್ತಿಗಳು’ ತರಬೇತಿಗೊಳಿಸಲ್ಪಟ್ಟಿರುವುದರಿಂದ, ನಮ್ಮ ಮನಸ್ಸಾಕ್ಷಿಯು ದೇವರನ್ನು ಸಂತೋಷಪಡಿಸುವಂಥ ನಿರ್ಣಯಗಳನ್ನು ಮಾಡಲು ನಮಗೆ ಸಹಾಯಮಾಡಬಲ್ಲದು ಮತ್ತು ಆತನ ಪ್ರೀತಿಯಲ್ಲಿ ಉಳಿಯಲು ನಮ್ಮನ್ನು ಶಕ್ತರನ್ನಾಗಿ ಮಾಡಬಲ್ಲದು.—ಇಬ್ರಿಯ 5:14.

ಕೆಲಸದ ವಿಷಯದಲ್ಲಿ ಸಮತೂಕ ನೋಟವನ್ನು ಕಾಪಾಡಿಕೊಳ್ಳುವುದು

18. ಆಧ್ಯಾತ್ಮಿಕ ಸಮತೂಕವನ್ನು ಕಾಪಾಡಿಕೊಳ್ಳುವುದು ಸುಲಭವಾಗಿಲ್ಲ ಏಕೆ?

18 ‘ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳಿರುವ’ ಈ “ಕಡೇ ದಿವಸಗಳಲ್ಲಿ” ಆಧ್ಯಾತ್ಮಿಕ ಸಮತೂಕವನ್ನು ಕಾಪಾಡಿಕೊಳ್ಳುವುದು ಸುಲಭವೇನಲ್ಲ. (2 ತಿಮೊಥೆಯ 3:1) ಒಂದು ಕೆಲಸವನ್ನು ಕಂಡುಕೊಂಡು ಅದನ್ನು ಕಾಪಾಡಿಕೊಳ್ಳುವುದು ನಿಜವಾಗಿಯೂ ತುಂಬ ಕಷ್ಟಕರವಾಗಿರಸಾಧ್ಯವಿದೆ. ನಿಜ ಕ್ರೈಸ್ತರಾಗಿರುವ ನಾವು ನಮ್ಮ ಕುಟುಂಬದ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಕಷ್ಟಪಟ್ಟು ಕೆಲಸಮಾಡುವುದರ ಪ್ರಮುಖತೆಯನ್ನು ಮನಗಾಣುತ್ತೇವೆ. ಆದರೆ ನಾವು ಜಾಗರೂಕರಾಗಿರದಿದ್ದಲ್ಲಿ, ಕೆಲಸದ ಸ್ಥಳದಲ್ಲಿನ ಒತ್ತಡಗಳು ಅಥವಾ ಲೋಕದ ಭ್ರಷ್ಟ ಪ್ರಾಪಂಚಿಕ ಆಲೋಚನೆಯು ನಮ್ಮ ಆಧ್ಯಾತ್ಮಿಕ ಬೆನ್ನಟ್ಟುವಿಕೆಗಳನ್ನು ಅಡ್ಡಗಟ್ಟಸಾಧ್ಯವಿದೆ. (1 ತಿಮೊಥೆಯ 6:9, 10) ನಾವು “ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನು” ಖಚಿತಪಡಿಸಿಕೊಳ್ಳುತ್ತಾ ನಮ್ಮ ಸಮತೂಕತೆಯನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ ಎಂಬುದನ್ನು ಈಗ ಪರಿಗಣಿಸೋಣ.—ಫಿಲಿಪ್ಪಿ 1:10.

19. ಯೆಹೋವನು ನಮ್ಮ ಪೂರ್ಣ ಭರವಸೆಗೆ ಅರ್ಹನಾಗಿದ್ದಾನೆ ಏಕೆ ಮತ್ತು ಇಂಥ ಭರವಸೆಯು ಯಾವುದರಿಂದ ದೂರವಿರಲು ನಮಗೆ ಸಹಾಯಮಾಡುತ್ತದೆ?

19 ನೀವು ಪೂರ್ಣವಾಗಿ ಯೆಹೋವನಲ್ಲಿ ಭರವಸೆಯಿಡಿರಿ. (ಜ್ಞಾನೋಕ್ತಿ 3:5, 6 ಓದಿ.) ಇಂಥ ಭರವಸೆಗೆ ಆತನು ಅರ್ಹನಾಗಿದ್ದಾನಲ್ಲವೊ? ಎಷ್ಟೆಂದರೂ ಆತನು ನಮಗೋಸ್ಕರ ಚಿಂತಿಸುತ್ತಾನೆ. (1 ಪೇತ್ರ 5:7) ನಮ್ಮ ಆವಶ್ಯಕತೆಗಳನ್ನು ನಮಗಿಂತಲೂ ಹೆಚ್ಚಾಗಿ ಆತನು ಬಲ್ಲವನಾಗಿದ್ದಾನೆ ಮತ್ತು ಆತನು ಎಂದೂ ಮೋಟುಗೈಯವನಲ್ಲ. (ಕೀರ್ತನೆ 37:25) ಆದುದರಿಂದ “ನೀವು ನಿಮಗಿರುವವುಗಳಲ್ಲಿಯೇ ತೃಪ್ತರಾಗಿರುವಾಗ ನಿಮ್ಮ ಜೀವನ ರೀತಿಯು ಹಣದ ಪ್ರೇಮದಿಂದ ಮುಕ್ತವಾಗಿರಲಿ. ಏಕೆಂದರೆ ‘ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ’ ಎಂದು [ದೇವರು] ಹೇಳಿದ್ದಾನೆ” ಎಂದು ಆತನ ವಾಕ್ಯವು ನಮಗೆ ಜ್ಞಾಪಕ ಹುಟ್ಟಿಸುವಾಗ ನಾವು ಕಿವಿಗೊಡುವುದು ಒಳ್ಳೇದು. (ಇಬ್ರಿಯ 13:5) ದೇವರು ಜೀವನದ ಆವಶ್ಯಕತೆಗಳನ್ನು ಒದಗಿಸುವ ಸಾಮರ್ಥ್ಯವುಳ್ಳವನಾಗಿದ್ದಾನೆ ಎಂಬುದಕ್ಕೆ ಅನೇಕ ಪೂರ್ಣ-ಸಮಯದ ಸೇವಕರು ರುಜುವಾತನ್ನು ನೀಡಬಲ್ಲರು. ಯೆಹೋವನು ನಮ್ಮನ್ನು ನೋಡಿಕೊಳ್ಳುತ್ತಾನೆ ಎಂಬ ಪೂರ್ಣ ಭರವಸೆ ನಮಗಿರುವಲ್ಲಿ, ನಮ್ಮ ಕುಟುಂಬಕ್ಕಾಗಿ ಒದಗಿಸುವಿಕೆಯನ್ನು ಮಾಡುವ ವಿಷಯದಲ್ಲಿ ನಾವು ಅನಗತ್ಯವಾಗಿ ಚಿಂತಿಸದಿರಲು ಪ್ರಯತ್ನಿಸುತ್ತೇವೆ. (ಮತ್ತಾಯ 6:25-32) ಅಷ್ಟುಮಾತ್ರವಲ್ಲ ಐಹಿಕ ಕೆಲಸವು ಸುವಾರ್ತೆಯನ್ನು ಸಾರುವ ಮತ್ತು ಕೂಟಗಳಿಗೆ ಹಾಜರಾಗುವಂಥ ಆಧ್ಯಾತ್ಮಿಕ ಚಟುವಟಿಕೆಗಳನ್ನು ಅಲಕ್ಷ್ಯಮಾಡುವಂತೆ ನಮ್ಮನ್ನು ಪ್ರಭಾವಿಸಲು ಬಿಡುವುದಿಲ್ಲ.—ಮತ್ತಾಯ 24:14; ಇಬ್ರಿಯ 10:24, 25.

20. ಕಣ್ಣನ್ನು ಸರಳವಾಗಿ ಇಟ್ಟುಕೊಳ್ಳುವುದರ ಅರ್ಥವೇನು ಮತ್ತು ಇಂಥ ಹೊರನೋಟವನ್ನು ನೀವು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ?

20 ನಿಮ್ಮ ಕಣ್ಣನ್ನು ಸರಳವಾಗಿ ಇಟ್ಟುಕೊಳ್ಳಿರಿ. (ಮತ್ತಾಯ 6:22, 23 ಓದಿ.) ಸರಳವಾದ ಕಣ್ಣನ್ನು ಹೊಂದಿರುವುದರ ಅರ್ಥ ನಮ್ಮ ಜೀವನವನ್ನು ಸರಳವಾಗಿ ಇಟ್ಟುಕೊಳ್ಳುವುದೇ ಆಗಿದೆ. ಒಬ್ಬ ಕ್ರೈಸ್ತನ ಸರಳವಾದ ಕಣ್ಣು ಏಕಮಾತ್ರ ಉದ್ದೇಶದ ಮೇಲೆ ಅಂದರೆ ದೇವರ ಚಿತ್ತವನ್ನು ಮಾಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ನಮ್ಮ ಕಣ್ಣು ಸರಿಯಾದ ರೀತಿಯಲ್ಲಿ ಕೇಂದ್ರೀಕರಿಸಿರುವಲ್ಲಿ, ಅತ್ಯಧಿಕ ಸಂಬಳದ ಉದ್ಯೋಗ ಹಾಗೂ ಹೆಚ್ಚು ಆಡಂಬರದ ಜೀವನಶೈಲಿಯನ್ನು ಬೆನ್ನಟ್ಟುವ ಯೋಚನೆಯು ನಮ್ಮ ಮನಸ್ಸನ್ನು ಆವರಿಸಿರುವುದಿಲ್ಲ. ಅಥವಾ ನಾವು ಸಂತೋಷವಾಗಿರಬೇಕಾದರೆ ನಮಗೆ ಅತ್ಯಗತ್ಯವೆಂದು ಜಾಹೀರಾತುಗಾರರು ನಂಬುವಂತೆ ಮಾಡುವ ಅತ್ಯಾಧುನಿಕ ಹಾಗೂ ಅತ್ಯುತ್ತಮ ಪ್ರಾಪಂಚಿಕ ವಸ್ತುಗಳ ನಿರಂತರ ಅನ್ವೇಷಣೆಯಲ್ಲಿ ನಾವು ಸಿಕ್ಕಿಹಾಕಿಕೊಳ್ಳುವುದಿಲ್ಲ. ಹಾಗಾದರೆ ನೀವು ಸರಳವಾದ ಕಣ್ಣನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ? ಅನಗತ್ಯವಾದ ಸಾಲದ ಹೊರೆಯನ್ನು ನಿಮ್ಮ ಮೇಲೆ ತಂದುಕೊಳ್ಳುವುದರಿಂದ ದೂರವಿರಿ. ವಿಪರೀತ ಪ್ರಮಾಣದ ಸಮಯ ಹಾಗೂ ಗಮನವನ್ನು ಕಬಳಿಸುವಂಥ ವಸ್ತುಗಳಿಂದ ನಿಮ್ಮ ಜೀವನವನ್ನು ಅಸ್ತವ್ಯಸ್ತಗೊಳಿಸಿಕೊಳ್ಳಬೇಡಿ. ‘ಅನ್ನವಸ್ತ್ರಗಳಲ್ಲಿಯೇ’ ತೃಪ್ತರಾಗಿರಿ ಎಂಬ ಬೈಬಲ್‌ ಸಲಹೆಗೆ ಕಿವಿಗೊಡಿರಿ. (1 ತಿಮೊಥೆಯ 6:8) ಸಾಧ್ಯವಿರುವಷ್ಟರ ಮಟ್ಟಿಗೆ ನಿಮ್ಮ ಜೀವನವನ್ನು ಸರಳೀಕರಿಸಲು ಪ್ರಯತ್ನಿಸಿ.

21. ನಾವು ಆದ್ಯತೆಗಳನ್ನಿಡುವ ಅಗತ್ಯವಿದೆ ಏಕೆ ಮತ್ತು ನಮ್ಮ ಜೀವನದಲ್ಲಿ ಯಾವುದಕ್ಕೆ ಮೊದಲ ಸ್ಥಾನವನ್ನು ಕೊಡಬೇಕು?

21 ಆಧ್ಯಾತ್ಮಿಕ ಆದ್ಯತೆಗಳನ್ನಿಡಿರಿ ಮತ್ತು ಅವುಗಳಿಗೆ ಅಂಟಿಕೊಳ್ಳಿರಿ. ನಾವು ಜೀವನದಲ್ಲಿ ಹೆಚ್ಚನ್ನು ಮಾಡಲು ಸಾಧ್ಯವಿಲ್ಲದಿರುವುದರಿಂದ ನಾವು ಆದ್ಯತೆಗಳನ್ನಿಡುವ ಅಗತ್ಯವಿದೆ. ಇಲ್ಲದಿದ್ದರೆ ಕಡಿಮೆ ಪ್ರಾಮುಖ್ಯವಾದ ವಿಷಯಗಳು ಹೆಚ್ಚು ಪ್ರಾಮುಖ್ಯವಾದ ವಿಷಯಗಳಿಗೆ ಅವಕಾಶ ಮಾಡಿಕೊಡದಿರುವ ಮೂಲಕ ಅಮೂಲ್ಯವಾದ ಸಮಯವನ್ನು ಕಬಳಿಸಿಬಿಡಸಾಧ್ಯವಿದೆ. ನಮ್ಮ ಜೀವನದಲ್ಲಿ ಯಾವುದಕ್ಕೆ ಮೊದಲ ಆದ್ಯತೆಯನ್ನು ನೀಡಬೇಕು? ಲೋಕದಲ್ಲಿರುವ ಅನೇಕರು ಈ ವ್ಯವಸ್ಥೆಯಲ್ಲಿ ಲಾಭದಾಯಕ ಜೀವನವೃತ್ತಿಯನ್ನು ತಮ್ಮದಾಗಿಸಿಕೊಳ್ಳಲಿಕ್ಕಾಗಿ ಉನ್ನತ ವ್ಯಾಸಂಗವನ್ನು ಬೆನ್ನಟ್ಟುವುದಕ್ಕೆ ಪ್ರಮುಖ ಒತ್ತನ್ನು ನೀಡುತ್ತಾರೆ. ಆದರೆ ‘ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ’ ಎಂದು ಯೇಸು ತನ್ನ ಹಿಂಬಾಲಕರನ್ನು ಉತ್ತೇಜಿಸಿದನು. (ಮತ್ತಾಯ 6:33) ನಿಜ ಕ್ರೈಸ್ತರಾಗಿರುವ ನಾವು ನಮ್ಮ ಜೀವನದಲ್ಲಿ ದೇವರ ರಾಜ್ಯಕ್ಕೆ ಮೊದಲ ಸ್ಥಾನವನ್ನು ಕೊಡುತ್ತೇವೆ. ನಮ್ಮ ಜೀವನ ರೀತಿ ಅಂದರೆ ನಾವು ಮಾಡುವ ಆಯ್ಕೆಗಳು, ನಾವು ಇಡುವ ಗುರಿಗಳು ಮತ್ತು ನಾವು ಬೆನ್ನಟ್ಟುವ ಚಟುವಟಿಕೆಗಳು, ಪ್ರಾಪಂಚಿಕ ಹಿತಾಸಕ್ತಿಗಳು ಮತ್ತು ಐಹಿಕ ಬೆನ್ನಟ್ಟುವಿಕೆಗಳಿಗಿಂತ ರಾಜ್ಯಾಭಿರುಚಿಗಳು ಮತ್ತು ದೇವರ ಚಿತ್ತವು ನಮಗೆ ಹೆಚ್ಚು ಪ್ರಾಮುಖ್ಯವಾಗಿದೆ ಎಂಬುದನ್ನು ತೋರಿಸುವಂತಿರಬೇಕು.

ಶುಶ್ರೂಷೆಯಲ್ಲಿ ಕಷ್ಟಪಟ್ಟು ಕೆಲಸಮಾಡುವುದು

ನಮ್ಮ ಜೀವನದಲ್ಲಿ ಸಾರುವ ಕೆಲಸಕ್ಕೆ ಆದ್ಯತೆ ನೀಡುವ ಮೂಲಕ ಯೆಹೋವನ ಮೇಲೆ ನಮಗಿರುವ ಪ್ರೀತಿಯನ್ನು ನಾವು ತೋರಿಸಬಲ್ಲೆವು

22, 23. (ಎ) ನಿಜ ಕ್ರೈಸ್ತರ ಪ್ರಾಮುಖ್ಯ ಕೆಲಸವು ಯಾವುದಾಗಿದೆ ಮತ್ತು ಈ ಕೆಲಸವು ನಮಗೆ ತುಂಬ ಪ್ರಾಮುಖ್ಯವಾಗಿದೆ ಎಂಬುದನ್ನು ನಾವು ಹೇಗೆ ತೋರಿಸಬಲ್ಲೆವು? (“ ನನ್ನ ನಿರ್ಣಯವು ಸಂತೋಷ ಮತ್ತು ಸಂತೃಪ್ತಿಯ ಜೀವನಕ್ಕೆ ನಡಿಸಿತು” ಎಂಬ ಚೌಕವನ್ನು ನೋಡಿ.) (ಬಿ) ಐಹಿಕ ಕೆಲಸದ ವಿಷಯದಲ್ಲಿ ನಿಮ್ಮ ದೃಢನಿರ್ಧಾರವೇನಾಗಿದೆ?

22 ನಾವು ಅಂತ್ಯದ ಸಮಯಕ್ಕೆ ಅತಿ ನಿಕಟವಾದ ಕಾಲಾವಧಿಯಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ತಿಳಿದಿರುವುದರಿಂದ ನಿಜ ಕ್ರೈಸ್ತರ ಪ್ರಾಮುಖ್ಯ ಕೆಲಸದ ಮೇಲೆ ಅಂದರೆ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದ ಮೇಲೆ ನಾವು ಮನಸ್ಸನ್ನು ಕೇಂದ್ರೀಕರಿಸುತ್ತೇವೆ. (ಮತ್ತಾಯ 24:14; 28:19, 20) ನಮ್ಮ ಆದರ್ಶ ಮಾದರಿಯಾಗಿರುವ ಯೇಸುವಿನಂತೆ ನಾವು ಈ ಜೀವರಕ್ಷಕ ಕೆಲಸದಲ್ಲಿ ತೀವ್ರಾಸಕ್ತಿಯಿಂದ ನಿರತರಾಗಿರಲು ಬಯಸುತ್ತೇವೆ. ಈ ಕೆಲಸವು ನಮಗೆ ತುಂಬ ಪ್ರಾಮುಖ್ಯವಾಗಿದೆ ಎಂಬುದನ್ನು ನಾವು ಹೇಗೆ ತೋರಿಸಬಲ್ಲೆವು? ದೇವಜನರಲ್ಲಿ ಹೆಚ್ಚಿನವರು ಸಭೆಯ ಪ್ರಚಾರಕರಾಗಿ ಸಾರುವ ಕೆಲಸದಲ್ಲಿ ಒಳಗೂಡಲು ಪೂರ್ಣ ಹೃದಯದಿಂದ ತಮ್ಮನ್ನು ನೀಡಿಕೊಳ್ಳುತ್ತಾರೆ. ಕೆಲವರು ಪಯನೀಯರರಾಗಿ ಅಥವಾ ಮಿಷನೆರಿಗಳಾಗಿ ಸೇವೆಮಾಡಲು ಸಾಧ್ಯವಾಗುವಂಥ ರೀತಿಯಲ್ಲಿ ತಮ್ಮ ಚಟುವಟಿಕೆಗಳನ್ನು ಏರ್ಪಡಿಸಿಕೊಂಡಿದ್ದಾರೆ. ಆಧ್ಯಾತ್ಮಿಕ ಗುರಿಗಳ ಪ್ರಮುಖತೆಯನ್ನು ಮನಗಂಡವರಾದ ಅನೇಕ ಹೆತ್ತವರು ಪೂರ್ಣ-ಸಮಯದ ಸೇವೆಯ ಜೀವನಮಾರ್ಗವನ್ನು ಬೆನ್ನಟ್ಟುವಂತೆ ತಮ್ಮ ಮಕ್ಕಳನ್ನು ಉತ್ತೇಜಿಸಿದ್ದಾರೆ. ಹುರುಪಿನಿಂದ ಸೇವೆಮಾಡುವ ರಾಜ್ಯ ಘೋಷಕರು ಶುಶ್ರೂಷೆಯಲ್ಲಿ ತಮ್ಮ ಕಷ್ಟದ ಕೆಲಸಕ್ಕೆ ಒಳ್ಳೇದನ್ನು ಅನುಭವಿಸಿದ್ದಾರೊ? ಖಂಡಿತವಾಗಿಯೂ ಅನುಭವಿಸಿದ್ದಾರೆ! ಪೂರ್ಣ ಪ್ರಾಣದಿಂದ ಯೆಹೋವನ ಸೇವೆಮಾಡುವುದು ಆನಂದ, ಸಂತೃಪ್ತಿ ಮತ್ತು ಅಗಣಿತ ಆಶೀರ್ವಾದಗಳು ಒಳಗೂಡಿರುವ ಜೀವನಕ್ಕೆ ನಡಿಸುವ ನಿಶ್ಚಿತ ಮಾರ್ಗವಾಗಿದೆ.—ಜ್ಞಾನೋಕ್ತಿ 10:22 ಓದಿ.

23 ನಮ್ಮ ಕುಟುಂಬಗಳಿಗೆ ಭೌತಿಕವಾಗಿ ಒದಗಿಸಲಿಕ್ಕಾಗಿ ನಮ್ಮಲ್ಲಿ ಅನೇಕರು ಐಹಿಕ ಕೆಲಸದಲ್ಲಿ ಅನೇಕ ತಾಸುಗಳನ್ನು ವ್ಯಯಿಸಬೇಕಾಗುತ್ತದೆ. ನಮ್ಮ ಕಷ್ಟದ ಕೆಲಸಕ್ಕಾಗಿ ನಾವು ಒಳ್ಳೇದನ್ನು ಅನುಭವಿಸುವಂತೆ ಯೆಹೋವನು ಬಯಸುತ್ತಾನೆ ಎಂಬುದನ್ನು ನೆನಪಿನಲ್ಲಿಡಿ. ನಮ್ಮ ಮನೋಭಾವ ಮತ್ತು ಕ್ರಿಯೆಗಳನ್ನು ಆತನ ದೃಷ್ಟಿಕೋನ ಹಾಗೂ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ತರುವ ಮೂಲಕ ನಾವು ನಮ್ಮ ಕೆಲಸದಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳಸಾಧ್ಯವಿದೆ. ಆದರೆ, ಐಹಿಕ ಕೆಲಸವು ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ನಮ್ಮ ಪ್ರಾಮುಖ್ಯ ಕೆಲಸದಿಂದ ನಮ್ಮನ್ನು ಅಪಕರ್ಷಿಸುವಂತೆ ಎಂದಿಗೂ ಬಿಡದಿರಲು ದೃಢನಿರ್ಧಾರವನ್ನು ಮಾಡೋಣ. ನಮ್ಮ ಜೀವನದಲ್ಲಿ ಈ ಕೆಲಸಕ್ಕೆ ಆದ್ಯತೆ ನೀಡುವ ಮೂಲಕ ಯೆಹೋವನ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸುತ್ತೇವೆ ಮತ್ತು ಹೀಗೆ ಆತನ ಪ್ರೀತಿಯಲ್ಲಿ ಉಳಿಯುತ್ತೇವೆ.

^ ಪ್ಯಾರ. 17 ಪರಿಗಣಿಸಬೇಕಾದ ಉದ್ಯೋಗದ ಅಂಶಗಳ ಕುರಿತಾದ ಹೆಚ್ಚು ವಿಸ್ತಾರವಾದ ಚರ್ಚೆಗಾಗಿ ಏಪ್ರಿಲ್‌ 15, 1999⁠ರ ಕಾವಲಿನಬುರುಜು ಪತ್ರಿಕೆಯ ಪುಟಗಳು 28-30⁠ನ್ನು ಮತ್ತು ಜುಲೈ 15, 1982 (ಇಂಗ್ಲಿಷ್‌), ಪುಟ 26⁠ನ್ನು ನೋಡಿರಿ.