ಪರಿಶಿಷ್ಟ
ಧ್ವಜ ವಂದನೆ, ಮತಚಲಾವಣೆ ಮತ್ತು ನಾಗರಿಕ ಸೇವೆ
ಧ್ವಜ ವಂದನೆ. ಧ್ವಜಕ್ಕೆ ಬೊಗ್ಗಿ ನಮಸ್ಕರಿಸುವುದು ಅಥವಾ ವಂದನೆಯನ್ನು ಸಲ್ಲಿಸುವುದು ಧಾರ್ಮಿಕ ಕೃತ್ಯವಾಗಿದೆಯೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಅನೇಕವೇಳೆ ರಾಷ್ಟ್ರಗೀತೆಯು ನುಡಿಸಲ್ಪಡುತ್ತಿರುವಾಗ ಒಂದು ಧ್ವಜಕ್ಕೆ ವಂದನೆಯನ್ನು ಸಲ್ಲಿಸುವುದು ತಮಗೆ ರಕ್ಷಣೆಯು ದೇವರಿಂದಲ್ಲ ಬದಲಾಗಿ ದೇಶದಿಂದ ಅಥವಾ ನಾಯಕರಿಂದ ಸಿಗುತ್ತದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ನಂಬುತ್ತಾರೆ. (ಯೆಶಾಯ 43:11; 1 ಕೊರಿಂಥ 10:14; 1 ಯೋಹಾನ 5:21) ಪುರಾತನ ಬಾಬೆಲಿನ ರಾಜ ನೆಬೂಕದ್ನೆಚ್ಚರನು ಇಂಥ ಒಬ್ಬ ನಾಯಕನಾಗಿದ್ದನು. ತನ್ನ ಘನತೆ ಹಾಗೂ ಧಾರ್ಮಿಕ ಹುರುಪಿನಿಂದ ಜನರನ್ನು ಪ್ರಭಾವಿಸಲಿಕ್ಕಾಗಿ ಈ ಶಕ್ತಿಶಾಲಿ ರಾಜನು ದೊಡ್ಡದಾದ ಒಂದು ಪ್ರತಿಮೆಯನ್ನು ಪ್ರತಿಷ್ಠಾಪಿಸಿ, ರಾಷ್ಟ್ರಗೀತೆಯಂಥ ಸಂಗೀತವು ನುಡಿಸಲ್ಪಡುವಾಗ ಅದಕ್ಕೆ ಅಡ್ಡಬೀಳುವಂತೆ ತನ್ನ ಪ್ರಜೆಗಳನ್ನು ಕಡ್ಡಾಯಪಡಿಸಿದನು. ಹೀಗೆ ಮಾಡದಿದ್ದರೆ ಮರಣ ದಂಡನೆ ಸಿಗುತ್ತದೆಂದು ತಿಳಿದಿತ್ತಾದರೂ ಶದ್ರಕ್, ಮೇಶಕ್ ಮತ್ತು ಅಬೇದ್‌ನೆಗೋ ಎಂಬ ಮೂವರು ಇಬ್ರಿಯರು ಈ ಪ್ರತಿಮೆಗೆ ಅಡ್ಡಬೀಳಲು ನಿರಾಕರಿಸಿದರು.—ದಾನಿಯೇಲ ಅಧ್ಯಾಯ 3.
ನಮ್ಮ ಯುಗದಲ್ಲಿ, “ರಾಷ್ಟ್ರೀಯತೆಯ ನಂಬಿಕೆಯ ಮುಖ್ಯ ಸಂಕೇತ ಮತ್ತು ಆರಾಧನೆಯ ಕೇಂದ್ರ ವಸ್ತುವು ಧ್ವಜವಾಗಿದೆ. ಧ್ವಜವು ಹಾದುಹೋಗುವಾಗ ಪುರುಷರು ತಮ್ಮ ತಲೆಯಿಂದ ಟೋಪಿಗಳನ್ನು ತೆಗೆಯುತ್ತಾರೆ; ಮತ್ತು ಧ್ವಜಗಳನ್ನು ಸ್ತುತಿಸುತ್ತಾ ಕವಿಗಳು ಭಾವಗೀತೆಗಳನ್ನು ರಚಿಸುತ್ತಾರೆ ಹಾಗೂ ಮಕ್ಕಳು ಸ್ತುತಿಗೀತೆಗಳನ್ನು ಹಾಡುತ್ತಾರೆ” ಎಂದು ಇತಿಹಾಸಕಾರ ಕಾರ್ಲ್ಟನ್ ಹೇಯಿಸ್ ಬರೆದನು. ರಾಷ್ಟ್ರೀಯತೆಯು ಒಂದು ದೇಶದ ರಾಷ್ಟ್ರೀಯ ರಜಾ ದಿನಗಳನ್ನು ಆಚರಿಸುವುದರಲ್ಲಿ ಕಂಡುಬರುತ್ತದೆ ಮತ್ತು ಅದರದ್ದೇ “ಸಂತರು ಮತ್ತು ಮಹಾಪುರುಷರು” ಹಾಗೂ “ದೇವಾಲಯಗಳು” ಅಥವಾ “ಗುಡಿಗಳನ್ನು” ಹೊಂದಿದೆ ಎಂದು ಸಹ ಅವನು ಹೇಳಿದನು. ಬ್ರಸಿಲ್‌ನ ಸಾರ್ವಜನಿಕ ಸಮಾರಂಭವೊಂದರಲ್ಲಿ ಆ ದೇಶದ ಸೇನೆಯ ಮೇಲಧಿಕಾರಿಯು, “ಜನ್ಮಭೂಮಿಯನ್ನು ಆರಾಧಿಸಲಾಗುವಂತೆಯೇ . . . ಧ್ವಜವನ್ನೂ ಪೂಜಿಸಲಾಗುತ್ತದೆ ಮತ್ತು ಆರಾಧಿಸಲಾಗುತ್ತದೆ” ಎಂದು ಒಪ್ಪಿಕೊಂಡನು. ಹೌದು, “ಶಿಲುಬೆಯಂತೆಯೇ ಧ್ವಜವೂ ಪವಿತ್ರವಾಗಿದೆ” ಎಂದು ದಿ ಎನ್‌ಸೈಕ್ಲೊಪೀಡಿಯ ಅಮೆರಿಕಾನ ಒಮ್ಮೆ ತಿಳಿಸಿತ್ತು.
ಮೇಲೆ ತಿಳಿಸಲಾಗಿರುವ ಎನ್‌ಸೈಕ್ಲೊಪೀಡಿಯವು ತೀರ ಇತ್ತೀಚಿಗೆ ಗಮನಿಸಿದ್ದೇನೆಂದರೆ, ರಾಷ್ಟ್ರಗೀತೆಗಳು “ದೇಶಭಕ್ತಿಯ ಅಭಿವ್ಯಕ್ತಿಗಳಾಗಿವೆ ಮತ್ತು ಅನೇಕವೇಳೆ ಜನರನ್ನು ಅಥವಾ ಅವರ ನಾಯಕರನ್ನು ಮಾರ್ಗದರ್ಶಿಸುವಂತೆ ಹಾಗೂ ಸಂರಕ್ಷಿಸುವಂತೆ ದೇವರನ್ನು ಕೋರಿಕೊಳ್ಳುವುದನ್ನು ಒಳಗೂಡಿರುತ್ತವೆ.” ಆದುದರಿಂದ ಧ್ವಜ ವಂದನೆ ಹಾಗೂ
ರಾಷ್ಟ್ರಗೀತೆಗಳನ್ನು ಒಳಗೊಂಡಿರುವ ದೇಶಭಕ್ತಿಯ ಆಚರಣೆಗಳನ್ನು ಯೆಹೋವನ ಸೇವಕರು ಧಾರ್ಮಿಕವಾಗಿ ಪರಿಗಣಿಸುವುದು ಅಸಮಂಜಸವಾದದ್ದೇನಲ್ಲ. ವಾಸ್ತವದಲ್ಲಿ, ಅಮೆರಿಕದ ಶಾಲೆಗಳಲ್ಲಿ ಯೆಹೋವನ ಸಾಕ್ಷಿಗಳ ಮಕ್ಕಳು ಧ್ವಜಕ್ಕೆ ಪೂಜ್ಯಭಾವನೆಯನ್ನು ತೋರಿಸಲು ಅಥವಾ ಸ್ವಾಮಿನಿಷ್ಠೆಯ ಪ್ರತಿಜ್ಞೆಯನ್ನು ಮಾಡಲು ನಿರಾಕರಿಸುವುದರ ಕುರಿತು ಹೇಳಿಕೆ ನೀಡುತ್ತಾ, ದಿ ಅಮೆರಿಕನ್ ಕ್ಯಾರೆಕ್ಟರ್ ಎಂಬ ಪುಸ್ತಕವು ತಿಳಿಸಿದ್ದು: “ದೈನಂದಿನ ಈ ವಿಧಿವಿಹಿತ ಕ್ರಮಗಳು ಧಾರ್ಮಿಕವಾಗಿವೆ ಎಂಬುದನ್ನು ಅನೇಕ ಮೊಕದ್ದಮೆಗಳಲ್ಲಿ ಸುಪ್ರೀಮ್ ಕೋರ್ಟು ಕೊನೆಗೂ ದೃಢೀಕರಿಸಿದೆ.”ಶಾಸ್ತ್ರಾಧಾರಿತವಲ್ಲವೆಂದು ಪರಿಗಣಿಸುವ ಆಚರಣೆಗಳಲ್ಲಿ ಯೆಹೋವನ ಜನರು ಭಾಗವಹಿಸುವುದಿಲ್ಲವಾದರೂ ಹಾಗೆ ಮಾಡುವ ಇತರರ ಹಕ್ಕನ್ನು ಅವರು ಗೌರವಿಸುತ್ತಾರೆ ಎಂಬುದಂತೂ ಖಂಡಿತ. ಅಷ್ಟುಮಾತ್ರವಲ್ಲ ಅವರು ರಾಷ್ಟ್ರಧ್ವಜಗಳನ್ನು ಲಾಂಛನಗಳಾಗಿ ಗೌರವಿಸುತ್ತಾರೆ ಮತ್ತು ಅಧಿಕೃತವಾಗಿ ನೇಮಿಸಲ್ಪಟ್ಟಿರುವ ಸರಕಾರಗಳನ್ನು “ದೇವರ ಸೇವಕನಾಗಿ” ಕಾರ್ಯನಡಿಸುತ್ತಿರುವ ‘ಮೇಲಧಿಕಾರಿಗಳಾಗಿ’ ಪರಿಗಣಿಸುತ್ತಾರೆ. (ರೋಮನ್ನರಿಗೆ 13:1-4) ಆದುದರಿಂದ ಯೆಹೋವನ ಸಾಕ್ಷಿಗಳು “ಅರಸರುಗಳಿಗಾಗಿಯೂ ಉನ್ನತ ಸ್ಥಾನದಲ್ಲಿರುವ ಎಲ್ಲ ರೀತಿಯ ಜನರಿಗಾಗಿಯೂ” ಪ್ರಾರ್ಥಿಸುವಂತೆ ಕೊಡಲ್ಪಟ್ಟಿರುವ ಬುದ್ಧಿವಾದಕ್ಕೆ ಕಿವಿಗೊಡುತ್ತಾರೆ. ನಮ್ಮ ಹೇತುವಾದರೋ, “ನಾವು ಸಂಪೂರ್ಣ ದೇವಭಕ್ತಿ ಮತ್ತು ಗಂಭೀರತೆಯೊಂದಿಗೆ ನೆಮ್ಮದಿ ಹಾಗೂ ಪ್ರಶಾಂತತೆಯಿಂದ ಕೂಡಿದ ಜೀವನವನ್ನು” ನಡೆಸುವುದೇ ಆಗಿದೆ.—1 ತಿಮೊಥೆಯ 2:2.
ರಾಜಕೀಯ ಚುನಾವಣೆಗಳಲ್ಲಿ ಮತಚಲಾವಣೆ. ಇತರರ ಮತಚಲಾಯಿಸುವ ಹಕ್ಕನ್ನು ನಿಜ ಕ್ರೈಸ್ತರು ಗೌರವಿಸುತ್ತಾರೆ. ಅವರು ಚುನಾವಣೆಗಳ ವಿರುದ್ಧ ಪ್ರತಿಭಟನೆಯನ್ನು ಮಾಡುವುದಿಲ್ಲ ಮತ್ತು ಅವರು ಚುನಾಯಿತ ಅಧಿಕಾರಿಗಳೊಂದಿಗೆ ಸಹಕರಿಸುತ್ತಾರೆ. ಆದರೆ ದೇಶಗಳ ರಾಜಕೀಯ ಆಗುಹೋಗುಗಳ ವಿಷಯದಲ್ಲಿ ಅವರು ದೃಢನಿಶ್ಚಯದಿಂದ ತಟಸ್ಥರಾಗಿ ಉಳಿಯುತ್ತಾರೆ. (ಮತ್ತಾಯ 22:21; 1 ಪೇತ್ರ 3:16) ಮತಚಲಾಯಿಸುವುದು ಕಡ್ಡಾಯವಾಗಿರುವ ದೇಶಗಳಲ್ಲಿ ಅಥವಾ ಯಾರು ಮತಕಟ್ಟೆಗೆ ಹೋಗುವುದಿಲ್ಲವೋ ಅವರ ವಿರುದ್ಧ ತೀಕ್ಷ್ಣ ಭಾವನೆಗಳನ್ನು ತೋರಿಸುವಂಥ ಸನ್ನಿವೇಶಗಳಲ್ಲಿ ಒಬ್ಬ ಕ್ರೈಸ್ತನು ಏನು ಮಾಡತಕ್ಕದ್ದು? ಶದ್ರಕ್, ಮೇಶಕ್ ಮತ್ತು ಅಬೇದ್‌ನೆಗೋ ಅವರು ದೂರಾ ಎಂಬ ಬೈಲಿನ ತನಕ ಹೋದರು ಎಂಬುದನ್ನು ಜ್ಞಾಪಿಸಿಕೊಳ್ಳುತ್ತಾ, ತದ್ರೀತಿಯ ಸನ್ನಿವೇಶಗಳ ಕೆಳಗೆ ಒಬ್ಬ ಕ್ರೈಸ್ತನ ಮನಸ್ಸಾಕ್ಷಿಯು ಅನುಮತಿಸುವಲ್ಲಿ ಅವನು ಮತಕಟ್ಟೆಯ ತನಕ ಹೋಗಲು ನಿರ್ಧರಿಸಬಹುದು. ಆದರೆ ತನ್ನ ತಾಟಸ್ಥ್ಯವು ಉಲ್ಲಂಘಿಸಲ್ಪಡದಂತೆ ಅವನು ಜಾಗ್ರತೆ ವಹಿಸುವನು. ಅವನು ಈ ಮುಂದಿನ ಆರು ಮೂಲತತ್ತ್ವಗಳನ್ನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು:
- ಯೇಸುವಿನ ಹಿಂಬಾಲಕರು ‘ಲೋಕದ ಭಾಗವಾಗಿಲ್ಲ.’—
-
ಕ್ರೈಸ್ತರು ಕ್ರಿಸ್ತನನ್ನು ಮತ್ತು ಅವನ ರಾಜ್ಯವನ್ನು ಪ್ರತಿನಿಧಿಸುತ್ತಾರೆ.—ಯೋಹಾನ 18:36; 2 ಕೊರಿಂಥ 5:20.
-
ಕ್ರೈಸ್ತ ಸಭೆಯು ನಂಬಿಕೆಯಲ್ಲಿ ಐಕ್ಯದಿಂದಿದೆ ಮತ್ತು ಅದರ ಸದಸ್ಯರು ಕ್ರಿಸ್ತಸದೃಶ ಪ್ರೀತಿಯಿಂದ ಆಪ್ತ ಬಾಂಧವ್ಯದಲ್ಲಿದ್ದಾರೆ.—1 ಕೊರಿಂಥ 1:10; ಕೊಲೊಸ್ಸೆ 3:14.
-
ಒಬ್ಬ ನಿರ್ದಿಷ್ಟ ಅಧಿಕಾರಿಯನ್ನು ಚುನಾಯಿಸುವವರು ಅವನು ಏನು ಮಾಡುತ್ತಾನೋ ಅದಕ್ಕೆ ಹೊಣೆಗಾರರಾಗುತ್ತಾರೆ.—1 ಸಮುವೇಲ 8:5, 10-18 ಮತ್ತು 1 ತಿಮೊಥೆಯ 5:22ರಲ್ಲಿ ದಾಖಲಿಸಲ್ಪಟ್ಟಿರುವ ಮಾತುಗಳ ಹಿಂದಿರುವ ಮೂಲತತ್ತ್ವಗಳನ್ನು ಗಮನಿಸಿರಿ.
-
ಇಸ್ರಾಯೇಲ್ಯರು ಒಬ್ಬ ಮಾನವ ಅರಸನನ್ನು ಪಡೆಯಲು ಬಯಸಿದಾಗ ಅವರು ತನ್ನನ್ನೇ ತಿರಸ್ಕರಿಸಿದಂತೆ ಯೆಹೋವನು ಅದನ್ನು ಪರಿಗಣಿಸಿದನು.—1 ಸಮುವೇಲ 8:7.
-
ಎಲ್ಲ ರೀತಿಯ ರಾಜಕೀಯ ದೃಷ್ಟಿಕೋನಗಳಿರುವ ಜನರಿಗೆ ದೇವರ ರಾಜ್ಯ ಸರಕಾರದ ಕುರಿತು ತಿಳಿಸುವಾಗ ಕ್ರೈಸ್ತರಿಗೆ ವಾಕ್ಸರಳತೆ ಇರಬೇಕು.—ಮತ್ತಾಯ 24:14; 28:19, 20; ಇಬ್ರಿಯ 10:35.
ನಾಗರಿಕ ಸೇವೆ (ಸಿವಿಲ್ ಸೇವೆ). ಕೆಲವು ದೇಶಗಳಲ್ಲಿ, ಮಿಲಿಟರಿ ಸೇವೆಯನ್ನು ಮಾಡಲು ನಿರಾಕರಿಸುವವರು ನಿರ್ದಿಷ್ಟ ಕಾಲಾವಧಿಯ ವರೆಗೆ ಒಂದು ರೀತಿಯ ನಾಗರಿಕ ಸೇವೆಯಲ್ಲಿ ಒಳಗೂಡುವಂತೆ ಸರಕಾರವು ಅಗತ್ಯಪಡಿಸುತ್ತದೆ. ಈ ವಿಷಯದ ಕುರಿತಾದ ನಿರ್ಧಾರವನ್ನು ಎದುರಿಸುವಾಗ ನಾವು ಅದರ ಬಗ್ಗೆ ಪ್ರಾರ್ಥಿಸಬೇಕು, ಬಹುಶಃ ಒಬ್ಬ ಪ್ರೌಢ ಕ್ರೈಸ್ತನೊಂದಿಗೆ ಅದನ್ನು ಚರ್ಚಿಸಬಹುದು ಮತ್ತು ಅದರ ಕುರಿತು ನಾವು ಏನು ತಿಳಿದುಕೊಂಡಿದ್ದೇವೋ ಅದರ ಆಧಾರದ ಮೇಲೆ ನಿರ್ಣಯವನ್ನು ಮಾಡಲು ನಮ್ಮ ಮನಸ್ಸಾಕ್ಷಿಯನ್ನು ಉಪಯೋಗಿಸಬೇಕು.—ಜ್ಞಾನೋಕ್ತಿ 2:1-5; ಫಿಲಿಪ್ಪಿ 4:5.
“ಸರಕಾರಗಳಿಗೆ ಮತ್ತು ಅಧಿಕಾರಿಗಳಿಗೆ ಅಧೀನರಾಗಿ ವಿಧೇಯರಾಗಿರಬೇಕೆಂತಲೂ ಸಕಲ ಸತ್ಕಾರ್ಯಕ್ಕೆ ಸಿದ್ಧರಾಗಿರಬೇಕೆಂತಲೂ . . . ನ್ಯಾಯಸಮ್ಮತರೂ . . . ಆಗಿರುವಂತೆ” ದೇವರ ವಾಕ್ಯವು ನಮಗೆ ತಿಳಿಸುತ್ತದೆ. (ತೀತ 3:1, 2) ಇದನ್ನು ಮನಸ್ಸಿನಲ್ಲಿಟ್ಟವರಾಗಿ ನಾವು ಈ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳಬಹುದು: ‘ಕೊಡಲ್ಪಟ್ಟಿರುವ ನಾಗರಿಕ ಕೆಲಸವನ್ನು ಅಂಗೀಕರಿಸುವುದು ನನ್ನ ಕ್ರೈಸ್ತ ತಾಟಸ್ಥ್ಯವನ್ನು ರಾಜಿಮಾಡಿಕೊಳ್ಳುವಂತಿರುವುದೋ ಅಥವಾ ನಾನು ಸುಳ್ಳು ಧರ್ಮದೊಂದಿಗೆ ಒಳಗೂಡುವಂತೆ ಮಾಡುವುದೊ?’ (ಮೀಕ 4:3, 5; 2 ಕೊರಿಂಥ 6:16, 17) ‘ಈ ಕೆಲಸವನ್ನು ಮಾಡುವುದು ನನ್ನ ಕ್ರೈಸ್ತ ಜವಾಬ್ದಾರಿಗಳನ್ನು ಪೂರೈಸುವುದನ್ನು ಕಷ್ಟಕರವಾಗಿ ಮಾಡುವುದೊ ಅಥವಾ ಅವುಗಳನ್ನು ಪೂರೈಸದಂತೆ ನನ್ನನ್ನು ತಡೆಗಟ್ಟಲೂ ಸಾಧ್ಯವಿದೆಯೊ?’ (ಮತ್ತಾಯ 28: 19, 20; ಎಫೆಸ 6:4; ಇಬ್ರಿಯ 10:24, 25) ‘ಇನ್ನೊಂದು ಕಡೆಯಲ್ಲಿ, ಅಂಥ ಸೇವೆಯಲ್ಲಿ ಒಳಗೂಡುವುದು, ನನ್ನ ಆಧ್ಯಾತ್ಮಿಕ ಚಟುವಟಿಕೆಗಳನ್ನು ವಿಸ್ತರಿಸಲು—ಬಹುಶಃ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಒಳಗೂಡಲು—ನನಗೆ ಅವಕಾಶಮಾಡಿಕೊಡುವಂಥ ಒಂದು ಕಾರ್ಯತಖ್ತೆಯನ್ನು ಒಳಗೊಂಡಿದೆಯೊ?’—ಇಬ್ರಿಯ 6:11, 12.
ಸೆರೆಮನೆಗೆ ಹೋಗುವುದಕ್ಕೆ ಬದಲಾಗಿ ನಾಗರಿಕ ಸೇವೆಯನ್ನು ಮಾಡಸಾಧ್ಯವಿದೆ ಎಂದು ಕ್ರೈಸ್ತನೊಬ್ಬನು ಮನಸ್ಸಾಕ್ಷಿಪೂರ್ವಕವಾಗಿ ತೀರ್ಮಾನಿಸುವಲ್ಲಿ, ಜೊತೆ ಕ್ರೈಸ್ತರು ಅವನ ನಿರ್ಧಾರವನ್ನು ಗೌರವಿಸಬೇಕು. (ರೋಮನ್ನರಿಗೆ 14:10) ಒಂದುವೇಳೆ ತಾನು ಇಂಥ ಸೇವೆಯನ್ನು ಮಾಡಲು ಸಾಧ್ಯವಿಲ್ಲ ಎಂದು ಅವನಿಗನಿಸುವಲ್ಲಿ, ಇತರರು ಅವನ ಈ ನಿಲುವನ್ನು ಸಹ ಗೌರವಿಸಬೇಕು.—1 ಕೊರಿಂಥ 10:29; 2 ಕೊರಿಂಥ 1:24.