ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 13

‘ವಾದ ವಿವಾದ ಆಯ್ತು’

‘ವಾದ ವಿವಾದ ಆಯ್ತು’

ಸುನ್ನತಿ ಬಗ್ಗೆ ಆದ ವಾದ ವಿವಾದವನ್ನ ಆಡಳಿತ ಮಂಡಲಿ ಮುಂದೆ ಇಟ್ರು

ಆಧಾರ: ಅಪೊಸ್ತಲರ ಕಾರ್ಯ 15:1-12

1-3. (ಎ) ಕ್ರೈಸ್ತ ಸಭೆಯಲ್ಲಿ ಒಡಕು ತರೋ ಅಪಾಯ ಬರೋಕೆ ಕಾರಣ ಏನು? (ಬಿ) ಅಪೊಸ್ತಲರ ಕಾರ್ಯ ಪುಸ್ತಕದಲ್ಲಿರೋ ಈ ಘಟನೆ ಬಗ್ಗೆ ನಾವು ಯಾಕೆ ತಿಳ್ಕೊಬೇಕು?

 ಪೌಲ ಮತ್ತು ಬಾರ್ನಬ ತಮ್ಮ ಮಿಷನರಿ ಪ್ರಯಾಣವನ್ನ ಮುಗಿಸಿ ಸಂತೋಷದಿಂದ ಸಿರಿಯದ ಅಂತಿಯೋಕ್ಯ ನಗರಕ್ಕೆ ವಾಪಸ್‌ ಹೋದ್ರು. ಯೆಹೋವ ‘ಯೆಹೂದ್ಯರಲ್ಲದ ಜನ್ರಿಗೂ ಶಿಷ್ಯರಾಗೋ ಅವಕಾಶ ಕೊಟ್ಟಿದ್ರಿಂದ’ ಅವರು ತುಂಬ ಸಂಭ್ರಮದಲ್ಲಿದ್ರು. (ಅ. ಕಾ. 14:26, 27) ಅಷ್ಟೇ ಅಲ್ಲ, ಸಿಹಿಸುದ್ದಿ ಅಂತಿಯೋಕ್ಯದ ಮೂಲೆಮೂಲೆಗೂ ಹಬ್ತಾ ಇತ್ತು. ಹೀಗೆ ಯೆಹೂದ್ಯರಲ್ಲದ “ತುಂಬ ಜನ್ರಿಗೆ” ಸತ್ಯ ಸಿಕ್ತು ಮತ್ತು ಅವರು ಅಲ್ಲಿನ ಸಭೆಗೆ ಸೇರ್ಕೊಂಡ್ರು.—ಅ. ಕಾ. 11:20-26.

2 ಅಭಿವೃದ್ಧಿ ಆಗ್ತಿದೆ ಅನ್ನೋ ಸುದ್ದಿ ಕೂಡಲೇ ಯೆಹೂದಕ್ಕೆ ತಲಪ್ತು. ಇದ್ರಿಂದಾಗಿ ಎಲ್ರಿಗೂ ಸಂತೋಷ ಆಗಲಿಲ್ಲ, ಬದಲಿಗೆ ಈಗಾಗಲೇ ಅವರಲ್ಲಿದ್ದ ಸುನ್ನತಿಯ ವಾಗ್ವಾದ ಹೆಚ್ಚಾಗಿ ಅದ್ರ ಬಗ್ಗೆ ತೀರ್ಮಾನ ಮಾಡಲೇ ಬೇಕಾದ ಪರಿಸ್ಥಿತಿ ಬಂತು. ಯೆಹೂದಿ ಕ್ರೈಸ್ತರ ಮತ್ತು ಬೇರೆ ಕ್ರೈಸ್ತರ ಮಧ್ಯೆ ಸಂಬಂಧ ಹೇಗಿರಬೇಕು? ಯೆಹೂದ್ಯರಲ್ಲದವರು ಮೋಶೆಯ ನಿಯಮ ಪುಸ್ತಕವನ್ನ ಪಾಲಿಸಬೇಕಾ? ಅನ್ನೋ ಪ್ರಶ್ನೆಗಳಿಗೆ ಉತ್ರ ಸಿಗಬೇಕಿತ್ತು. ಈ ವಿವಾದದಿಂದಾಗಿ ಕ್ರೈಸ್ತ ಸಭೆಯಲ್ಲಿ ಭಿನ್ನಾಭಿಪ್ರಾಯ ಬಂದು ಅದು ಬೇರೆಬೇರೆ ಗುಂಪುಗಳಾಗಿ ಒಡೆಯೋ ಅಪಾಯ ಇತ್ತು. ಈ ಸಮಸ್ಯೆಯನ್ನ ಹೇಗೆ ಬಗೆಹರಿಸೋದು?

3 ನಾವೀಗ ಅಪೊಸ್ತಲರ ಕಾರ್ಯ ಪುಸ್ತಕದಲ್ಲಿರೋ ಈ ಘಟನೆ ಬಗ್ಗೆ ತಿಳ್ಕೊಳ್ಳುವಾಗ ತುಂಬ ಅಮೂಲ್ಯ ಪಾಠಗಳನ್ನ ಕಲಿಬಹುದು. ನಮ್ಮ ದಿನಗಳಲ್ಲೂ ಒಡಕನ್ನ ತರೋ ಸಮಸ್ಯೆಗಳು ಬರುವಾಗ ವಿವೇಕದಿಂದ ತೀರ್ಮಾನ ಮಾಡೋಕೆ ಇದು ನಮಗೆ ಸಹಾಯ ಮಾಡುತ್ತೆ.

“ಸುನ್ನತಿ ಮಾಡಿಸ್ಕೊಂಡ್ರೆ ಮಾತ್ರ” (ಅ. ಕಾ. 15:1)

4. (ಎ) ಕೆಲವು ಕ್ರೈಸ್ತರು ಏನಂತ ಕಲಿಸೋಕೆ ಶುರುಮಾಡಿದ್ರು? (ಬಿ) ಇದ್ರಿಂದ ಯಾವ ಪ್ರಶ್ನೆ ಬರುತ್ತೆ?

4 ಲೂಕ ಹೀಗೆ ಬರೆದಿದ್ದಾನೆ: “ಯೂದಾಯದಿಂದ ಕೆಲವು ಸಹೋದರರು ಅಂತಿಯೋಕ್ಯಕ್ಕೆ ಬಂದು ‘ಮೋಶೆಯ ನಿಯಮ ಪುಸ್ತಕದಲ್ಲಿ ಇರೋ ಹಾಗೆ ಸುನ್ನತಿ ಮಾಡಿಸ್ಕೊಂಡ್ರೆ ಮಾತ್ರ ನಿಮಗೆ ರಕ್ಷಣೆ ಸಿಗುತ್ತೆ’ ಅಂತ ಸಭೆಯಲ್ಲಿ ಕಲಿಸೋಕೆ ಶುರುಮಾಡಿದ್ರು.” (ಅ. ಕಾ. 15:1) ಇವರು ಕ್ರೈಸ್ತರಾಗೋಕೆ ಮುಂಚೆ ಫರಿಸಾಯರಾಗಿದ್ರಾ ಇಲ್ವಾ ಅನ್ನೋದ್ರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದೇನೇ ಆದ್ರೂ, ಅವ್ರು ಫರಿಸಾಯರ ತರ ಯೋಚ್ನೆ ಮಾಡ್ತಿದ್ರು ಅನ್ನೋದಂತೂ ನಿಜ. ಅಷ್ಟೇ ಅಲ್ಲ, ಅಪೊಸ್ತಲರು ಮತ್ತು ಯೆರೂಸಲೇಮಿನಲ್ಲಿರೋ ಹಿರಿಯರು ಹೇಳಿದ್ದನ್ನೇ ನಾವು ಹೇಳ್ತಾ ಇದ್ದೀವಿ ಅಂತ ಸುಳ್ಳು ಹೇಳಿದ್ದಿರಬೇಕು. (ಅ. ಕಾ. 15:23, 24) ಅಪೊಸ್ತಲ ಪೇತ್ರ ದೇವರ ಮಾರ್ಗದರ್ಶನದ ಪ್ರಕಾರ ಸುನ್ನತಿಯಾಗದ ಯೆಹೂದ್ಯರಲ್ಲದ ಜನ್ರನ್ನ ಕ್ರೈಸ್ತ ಸಭೆಯೊಳಗೆ ಸ್ವಾಗತಿಸಿ ಆಗಲೇ ಸುಮಾರು 13 ವರ್ಷ ಆಗಿತ್ತು. ಆದ್ರೂ ಸುನ್ನತಿ ಮಾಡಿಸ್ಕೊಳ್ಳಲೇಬೇಕು ಅಂತ ಯೆಹೂದಿ ಕ್ರೈಸ್ತರು ಯಾಕೆ ಹೇಳ್ತಿದ್ರು? aಅ. ಕಾ. 10:24-29, 44-48.

5, 6. (ಎ) ಕೆಲವು ಯೆಹೂದಿ ಕ್ರೈಸ್ತರು ಸುನ್ನತಿ ಆಗಲೇಬೇಕು ಅಂತ ಹೇಳೋಕೆ ಕಾರಣ ಏನಾಗಿರಬಹುದು? (ಬಿ) ಸುನ್ನತಿಯ ಒಪ್ಪಂದಕ್ಕೂ ಅಬ್ರಹಾಮನ ಒಪ್ಪಂದಕ್ಕೂ ಸಂಬಂಧ ಇಲ್ಲ ಅಂತ ಹೇಗೆ ಹೇಳ್ತೀರಾ? (ಪಾದಟಿಪ್ಪಣಿ ನೋಡಿ.)

5 ಇದಕ್ಕೆ ತುಂಬ ಕಾರಣ ಇರಬಹುದು. ಒಂದನೇದು, ಸುನ್ನತಿ ಮಾಡಿಸ್ಕೊಬೇಕು ಅಂತ ಹೇಳಿದ್ದು ಸ್ವತಃ ಯೆಹೋವ ದೇವರೇ ಮತ್ತು ಇದು ಆತನ ಜೊತೆ ಇರೋ ವಿಶೇಷ ಸಂಬಂಧದ ಗುರುತಾಗಿತ್ತು. ನಿಯಮ ಪುಸ್ತಕದ ಒಪ್ಪಂದ ಮಾಡೋ ಮುಂಚೆನೇ ಅಬ್ರಹಾಮ ಮತ್ತು ಅವನ ಮನೆಯವ್ರಿಗೆ ಸುನ್ನತಿಯಾಗೋ ಮೂಲಕ ಈ ಪದ್ಧತಿ ಆರಂಭ ಆದ್ರೂ ಆಮೇಲೆ ಅದು ಆ ಒಪ್ಪಂದದ ಭಾಗ ಆಯ್ತು. b (ಯಾಜ. 12:2, 3) ಮೋಶೆಯ ನಿಯಮ ಪುಸ್ತಕದ ಪ್ರಕಾರ, ವಿದೇಶಿಯರು ಪಸ್ಕದ ಊಟ ಮಾಡೋ ಸುಯೋಗ ಪಡೀಬೇಕಂದ್ರೆ ಮೊದಲು ಅವ್ರಿಗೆ ಸುನ್ನತಿಯಾಗಬೇಕಿತ್ತು. (ವಿಮೋ. 12:43, 44, 48, 49) ಹಾಗಾಗಿ ಸುನ್ನತಿ ಆಗದೇ ಇರೋದು ಅಶುದ್ಧ, ಅಸಹ್ಯ ಅಂತ ಯೆಹೂದ್ಯರ ಮನಸ್ಸಲ್ಲಿ ಅಚ್ಚೊತ್ತಿತ್ತು.—ಯೆಶಾ. 52:1.

6 ಯೆಹೂದಿ ಕ್ರೈಸ್ತರಿಗೆ ಹೊಸ ಬೋಧನೆಯನ್ನ ಸ್ವೀಕರಿಸೋಕೆ ನಂಬಿಕೆ ಮತ್ತು ದೀನತೆ ಸ್ವಲ್ಪ ಜಾಸ್ತಿನೇ ಬೇಕಿತ್ತು. ನಿಯಮ ಪುಸ್ತಕದ ಸ್ಥಾನದಲ್ಲಿ ಈಗಾಗ್ಲೇ ಹೊಸ ಒಪ್ಪಂದ ಬಂದಿತ್ತು. ಹಾಗಾಗಿ, ಒಬ್ಬ ವ್ಯಕ್ತಿ ಯೆಹೂದ್ಯನಾಗಿ ಹುಟ್ಟಿದ್ದಾನೆ ಅಂದತಕ್ಷಣ ದೇವಜನ್ರಲ್ಲಿ ಒಬ್ಬನಾಗ್ತಿರಲಿಲ್ಲ. ಯೂದಾಯದಲ್ಲಿದ್ದ ಕ್ರೈಸ್ತರ ತರ ಬೇರೆ ಯೆಹೂದಿ ಸಮುದಾಯಗಳಲ್ಲಿ ವಾಸವಾಗಿದ್ದ ಯೆಹೂದಿ ಕ್ರೈಸ್ತರಿಗೆ, ಕ್ರಿಸ್ತನನ್ನ ನಂಬ್ತೀವಿ ಅಂತ ಹೇಳೋಕೆ ಮತ್ತು ಸುನ್ನತಿ ಆಗಿರದ ಬೇರೆ ಜನಾಂಗದವರನ್ನ ಕ್ರೈಸ್ತರಾಗಿ ಸ್ವೀಕರಿಸೋಕೆ ಧೈರ್ಯ ಬೇಕಿತ್ತು.—ಯೆರೆ. 31:31-33; ಲೂಕ 22:20.

7. “ಕೆಲವು ಸಹೋದರರು” ಯಾವ ಸತ್ಯವನ್ನ ಅರ್ಥ ಮಾಡ್ಕೊಂಡಿರಲಿಲ್ಲ?

7 ಹಾಗಾದ್ರೆ, ದೇವರ ಮಟ್ಟಗಳು ಬದಲಾಗಿದ್ವಾ? ಇಲ್ಲ. ಹೊಸ ಒಪ್ಪಂದ ಮೋಶೆಯ ನಿಯಮ ಪುಸ್ತಕದ ತತ್ವಗಳ ಮೇಲೆನೇ ಆಧರಿತವಾಗಿತ್ತು. (ಮತ್ತಾ. 22:36-40) ಉದಾಹರಣೆಗೆ, ಸುನ್ನತಿ ಬಗ್ಗೆ ಪೌಲ ಹೀಗೆ ಬರೆದ: “ಹೃದಯದಲ್ಲಿ ಯೆಹೂದ್ಯನಾಗಿ ಇರುವವನೇ ನಿಜವಾದ ಯೆಹೂದ್ಯ, ಅವನ ಸುನ್ನತಿ ಬರೆದಿರೋ ನಿಯಮದ ಪ್ರಕಾರ ದೇಹಕ್ಕೆ ಮಾಡಿಸ್ಕೊಂಡಿರೋ ಸುನ್ನತಿ ಅಲ್ಲ, ಪವಿತ್ರಶಕ್ತಿಯ ಮೂಲಕ ಹೃದಯಕ್ಕೆ ಮಾಡಿದ ಸುನ್ನತಿ.” (ರೋಮ. 2:29; ಧರ್ಮೋ. 10:16) ಯೂದಾಯದಿಂದ ಬಂದ “ಕೆಲವು ಸಹೋದರರು” ಈ ಸತ್ಯವನ್ನ ಅರ್ಥ ಮಾಡ್ಕೊಂಡಿರಲಿಲ್ಲ. ದೇವರು ಸುನ್ನತಿಯ ನಿಯಮವನ್ನ ಯಾವತ್ತೂ ತೆಗೆದುಹಾಕಿಲ್ಲ ಅಂತ ಅವರು ಹಠ ಹಿಡಿದ್ರು. ಅವರು ತಮ್ಮ ಯೋಚ್ನೆಗಳನ್ನ ಬದಲಾಯಿಸ್ಕೊಂಡ್ರಾ?

“ವಾದ ಮಾಡಿದ್ರು” (ಅ. ಕಾ. 15:2)

8. ಸುನ್ನತಿ ಬಗ್ಗೆ ಆದ ವಿವಾದವನ್ನ ಯಾಕೆ ಆಡಳಿತ ಮಂಡಲಿಯ ಮುಂದೆ ತಗೊಂಡು ಹೋದ್ರು?

8 ಲೂಕ ಮುಂದುವರಿಸ್ತಾ ಹೇಳಿದ್ದು: ಯೂದಾಯದಿಂದ ಬಂದ ಕೆಲವು ಸಹೋದರರು “ಪೌಲ ಮತ್ತು ಬಾರ್ನಬನ ಜೊತೆ ವಾದ ಮಾಡಿದ್ರು. ಆಗ ಸಹೋದರರೆಲ್ಲ ಸೇರಿ ಪೌಲ ಬಾರ್ನಬನ ಜೊತೆ ಇನ್ನು ಕೆಲವು ಸಹೋದರರನ್ನ ಯೆರೂಸಲೇಮಲ್ಲಿದ್ದ ಅಪೊಸ್ತಲರ ಮತ್ತು ಹಿರಿಯರ ಹತ್ರ ಕಳಿಸೋ ನಿರ್ಣಯ ಮಾಡಿದ್ರು.” c (ಅ. ಕಾ. 15:2) “ವಾದ” ಅಥವಾ ವಾಗ್ವಾದ ಅನ್ನೋ ಪದಗಳು ಎರಡೂ ಗುಂಪಿನವರ ಬಲವಾದ ಭಾವನೆಗಳನ್ನ, ದೃಢವಾದ ಅಭಿಪ್ರಾಯಗಳನ್ನ ತೋರಿಸ್ಕೊಡುತ್ತೆ. ಈ ಸಮಸ್ಯೆಯನ್ನ ಅಂತಿಯೋಕ್ಯದ ಸಭೆಯಿಂದ ಬಗೆಹರಿಸೋಕೆ ಆಗಲಿಲ್ಲ. ಶಾಂತಿ, ಐಕ್ಯತೆ ಕಾಪಾಡೋಕೆ ಆ ಸಭೆ ವಿವೇಕ ಬಳಸಿ ಹೆಜ್ಜೆ ತಗೊಳ್ತು. ಈ ಸಮಸ್ಯೆಯನ್ನ “ಯೆರೂಸಲೇಮಲ್ಲಿದ್ದ ಅಪೊಸ್ತಲರ ಮತ್ತು ಹಿರಿಯರ” ಅಂದ್ರೆ ಆಗಿನ ಆಡಳಿತ ಮಂಡಲಿಯ ಮುಂದೆ ಇಡೋಕೆ ಏರ್ಪಾಡು ಮಾಡಲಾಯ್ತು. ಅಂತಿಯೋಕ್ಯದ ಹಿರಿಯರಿಂದ ನಾವೇನನ್ನ ಕಲಿಬಹುದು?

‘ಯೆಹೂದ್ಯರಲ್ಲದ ಜನ್ರಿಗೆ ಮೋಶೆಯ ನಿಯಮ ಪುಸ್ತಕದ ಪ್ರಕಾರ ನಡೆಯೋಕೆ ಹೇಳಬೇಕು’ ಅಂತ ಕೆಲವರು ಹಠಹಿಡಿದ್ರು

9, 10. ಅಂತಿಯೋಕ್ಯದಲ್ಲಿನ ಸಹೋದರರು ಮತ್ತು ಪೌಲ ಬಾರ್ನಬ ನಮಗೆ ಇವತ್ತು ಯಾವ ಒಳ್ಳೇ ಮಾದರಿ ಇಟ್ಟಿದ್ದಾರೆ?

9 ದೇವರ ಸಂಘಟನೆ ಮೇಲೆ ಪೂರ್ತಿ ನಂಬಿಕೆ ಇಡಬೇಕು ಅನ್ನೋ ಅಮೂಲ್ಯ ಪಾಠವನ್ನ ನಾವು ಕಲಿತೀವಿ. ಸ್ವಲ್ಪ ಯೋಚಿಸಿ: ಆಡಳಿತ ಮಂಡಲಿಯಲ್ಲಿ ಇರೋ ಕ್ರೈಸ್ತರೆಲ್ಲರೂ ಯೆಹೂದಿ ಹಿನ್ನೆಲೆಯಿಂದ ಬಂದವರೇ ಅಂತ ಅಂತಿಯೋಕ್ಯದ ಸಹೋದರರಿಗೆ ಗೊತ್ತಿತ್ತು. ಆದ್ರೂ ಆ ಮಂಡಲಿ ಸುನ್ನತಿ ಬಗ್ಗೆ ಎದ್ದಿರೋ ಈ ವಿವಾದವನ್ನ ದೇವರ ವಾಕ್ಯಕ್ಕೆ ತಕ್ಕ ಹಾಗೆ ಬಗೆಹರಿಸುತ್ತೆ ಅಂತ ನಂಬಿದ್ರು. ಯಾಕಂದ್ರೆ ಅವರನ್ನ ಯೆಹೋವ ದೇವರು ಕ್ರೈಸ್ತ ಸಭೆಯ ಯಜಮಾನ ಆಗಿರೋ ಯೇಸು ಕ್ರಿಸ್ತನ ಮತ್ತು ತನ್ನ ಪವಿತ್ರಶಕ್ತಿಯ ಮೂಲಕ ಮಾರ್ಗದರ್ಶಿಸ್ತಾನೆ ಅನ್ನೋ ಭರವಸೆ ಆ ಸಭೆಯವರಿಗೆ ಇತ್ತು. (ಮತ್ತಾ. 28:18, 20; ಎಫೆ. 1:22, 23) ಇವತ್ತು ನಾವು ಕೂಡ ದೊಡ್ಡ ಸವಾಲುಗಳು ಬಂದ್ರೆ ದೇವರ ಸಂಘಟನೆ ಮೇಲೆ ಮತ್ತು ಅಭಿಷಿಕ್ತ ಕ್ರೈಸ್ತರಿರೋ ಆಡಳಿತ ಮಂಡಲಿಯ ಮೇಲೆ ನಂಬಿಕೆ ಇಡೋಣ. ಹೀಗೆ ಅಂತಿಯೋಕ್ಯದ ಕ್ರೈಸ್ತರ ಮಾದರಿಯನ್ನ ಅನುಕರಿಸೋಣ.

10 ಈ ಘಟನೆ ದೀನತೆ ಮತ್ತು ತಾಳ್ಮೆ ಬಗ್ಗೆನೂ ಒಳ್ಳೇ ಪಾಠ ಕಲಿಸುತ್ತೆ. ಯೆಹೂದ್ಯರಲ್ಲದ ಜನ್ರಿಗೆ ಸಾರೋಕೆ ಪೌಲ ಮತ್ತು ಬಾರ್ನಬನನ್ನ ಪವಿತ್ರಶಕ್ತಿನೇ ನೇರವಾಗಿ ನೇಮಿಸಿತ್ತು. ಆದ್ರೆ ಇದನ್ನ ಹೇಳ್ಕೊಂಡು ಅವರು ಸುನ್ನತಿ ಬಗ್ಗೆ ಇರೋ ವಿವಾದವನ್ನ ಆಗಲೇ ಅಂತಿಯೋಕ್ಯದಲ್ಲೇ ಬಗೆಹರಿಸೋಕೆ ಹೋಗಲಿಲ್ಲ. (ಅ. ಕಾ. 13:2, 3) ಅಷ್ಟೇ ಅಲ್ಲ, ಆಮೇಲೆ ಪೌಲ, “[ಯೆರೂಸಲೇಮಿಗೆ] ಹೋಗಬೇಕಂತ ಸ್ವರ್ಗದಿಂದ ಯೇಸು ನನಗೆ ಹೇಳಿದ್ರಿಂದ ಹೋದೆ” ಅಂತ ಬರೆದ. ಇದು ಅವನಿಗೆ ದೇವರ ಮಾರ್ಗದರ್ಶನ ಇತ್ತು ಅನ್ನೋದನ್ನ ಸೂಚಿಸುತ್ತೆ. (ಗಲಾ. 2:2) ಇವತ್ತು ಕೂಡ ಒಡಕನ್ನ ತರೋ ಸಮಸ್ಯೆಗಳು ಬಂದಾಗೆಲ್ಲ ಹಿರಿಯರು ಅದೇ ರೀತಿ ದೀನತೆ ಮತ್ತು ತಾಳ್ಮೆಯನ್ನ ತೋರಿಸ್ತಾರೆ. ತಮ್ಮ ಸ್ವಂತ ಅಭಿಪ್ರಾಯಗಳೇ ಸರಿ ಅಂತ ಜಗಳ ಆಡಲ್ಲ. ಬದಲಿಗೆ ಅವರು ನಂಬಿಗಸ್ತ ಆಳು ಕೊಟ್ಟಿರೋ ಸಲಹೆಸೂಚನೆ ಮತ್ತು ನಿರ್ದೇಶನಕ್ಕೆ ಹಾಗೂ ಬೈಬಲಿಗೆ ಗಮನಕೊಡೋ ಮೂಲಕ ಯೆಹೋವನ ಮಾರ್ಗದರ್ಶನ ಪಡ್ಕೊಳ್ತಾರೆ.—ಫಿಲಿ. 2:2, 3.

11, 12. ಒಂದು ವಿಷ್ಯದ ಬಗ್ಗೆ ಯೆಹೋವ ಸ್ಪಷ್ಟ ವಿವರಣೆ ಕೊಡೋ ತನಕ ನಾವು ಯಾಕೆ ಕಾಯಬೇಕು?

11 ಕೆಲವೊಮ್ಮೆ, ಒಂದು ವಿಷ್ಯದ ಬಗ್ಗೆ ಯೆಹೋವ ಸ್ಪಷ್ಟ ವಿವರಣೆ ಕೊಡೋ ತನಕ ನಾವು ಕಾಯಬೇಕಾಗುತ್ತೆ. ನೆನಪಿಡಿ, ಪೌಲನ ಸಮಯದಲ್ಲಿದ್ದ ಸಹೋದರರು ಕೂಡ ಯೆಹೂದ್ಯರಲ್ಲದ ಜನ್ರಿಗೆ ಸುನ್ನತಿ ಆಗಬೇಕಾ ಅನ್ನೋ ವಿಷ್ಯವನ್ನ ಯೆಹೋವ ಬಗೆಹರಿಸೋ ತನಕ ಕಾದ್ರು. ಕೊರ್ನೇಲ್ಯ ಅಭಿಷಿಕ್ತನಾದ ವರ್ಷದಿಂದ ಅಂದ್ರೆ ಕ್ರಿ.ಶ. 36 ರಿಂದ ಕ್ರಿ.ಶ. 49ರ ತನಕ ಸುಮಾರು 13 ವರ್ಷ ಅವರು ಕಾಯಬೇಕಾಯ್ತು! ಇಷ್ಟೊಂದು ಸಮಯ ಯಾಕೆ? ಪ್ರಾಮಾಣಿಕ ಮನಸ್ಸಿನ ಯೆಹೂದ್ಯರು ತಮ್ಮ ಯೋಚ್ನೆಯನ್ನ ಬದಲಾಯಿಸ್ಕೊಳ್ಳೋಕೆ ಅವ್ರಿಗೆ ಸಾಕಷ್ಟು ಸಮಯ ಕೊಡಬೇಕು ಅಂತ ದೇವರಿಗೆ ಅನಿಸಿರಬೇಕು. ಎಷ್ಟೆಂದ್ರೂ, ಅವರ ಪ್ರೀತಿಯ ಪೂರ್ವಜ ಅಬ್ರಹಾಮನ ಜೊತೆ ಮಾಡ್ಕೊಂಡಿದ್ದ 1,900 ವರ್ಷಗಳ ಸುನ್ನತಿಯ ಒಪ್ಪಂದ ರದ್ದಾಗೋದು ಒಂದು ಚಿಕ್ಕ ವಿಷ್ಯ ಆಗಿರಲಿಲ್ಲ!—ಯೋಹಾ. 16:12.

12 ತಾಳ್ಮೆ ಮತ್ತು ದಯೆ ಇರೋ ನಮ್ಮ ಸ್ವರ್ಗೀಯ ತಂದೆಯಿಂದ ಮಾರ್ಗದರ್ಶನ ಪಡಿಯೋದು ಮತ್ತು ರೂಪಿಸೋಕೆ ಬಿಟ್ಕೊಡೋದು ಎಂಥ ಸದವಕಾಶ! ಅದ್ರಿಂದ ನಮಗೆ ಒಳ್ಳೇದೇ ಆಗುತ್ತೆ ಮತ್ತು ತುಂಬ ಪ್ರಯೋಜನ ಇದೆ. (ಯೆಶಾ. 48:17, 18; 64:8) ಹಾಗಾಗಿ ನಾವು ಯಾವುದೇ ಸಮಯದಲ್ಲೂ ಅಹಂಕಾರದಿಂದ ನಮ್ಮ ಸ್ವಂತ ಅಭಿಪ್ರಾಯಗಳೇ ಸರಿ ಅಂತ ಹಠ ಮಾಡೋದು ಬೇಡ. ಜೊತೆಗೆ, ಸಂಘಟನೆಯಲ್ಲಿ ಆಗೋ ಬದಲಾವಣೆಗಳಿಗೆ ಮತ್ತು ನಿರ್ದಿಷ್ಟ ಬೈಬಲ್‌ ವಚನಗಳ ಅರ್ಥವಿವರಣೆಯಲ್ಲಿ ಆಗೋ ಹೊಂದಾಣಿಕೆಗಳಿಗೆ ತಪ್ಪಾಗಿ ಪ್ರತಿಕ್ರಿಯಿಸೋದೂ ಬೇಡ. (ಪ್ರಸಂ. 7:8) ಅಹಂಕಾರ, ಹಠ ನಿಮ್ಮಲ್ಲಿದೆ ಅನ್ನೋ ಚಿಕ್ಕ ಸುಳಿವು ಸಿಕ್ಕಿದ್ರೂ ಪ್ರಾರ್ಥನೆ ಮಾಡಿ, ಅಪೊಸ್ತಲರ ಕಾರ್ಯ 15ನೇ ಅಧ್ಯಾಯದಲ್ಲಿರೋ ತತ್ವಗಳ ಬಗ್ಗೆ ಧ್ಯಾನಿಸಿ. d

13. ನಾವು ಬೈಬಲ್‌ ಸ್ಟಡಿ ಮಾಡೋವಾಗ ಯೆಹೋವನ ತರ ಹೇಗೆ ತಾಳ್ಮೆ ತೋರಿಸಬಹುದು?

13 ನಾವು ಯಾರಿಗೆ ಬೈಬಲ್‌ ಸ್ಟಡಿ ಮಾಡ್ತಿವೋ ಅವ್ರಿಗೂ ತಾಳ್ಮೆ ತೋರಿಸಬೇಕಾಗುತ್ತೆ. ಯಾಕಂದ್ರೆ ಅವ್ರಿಗೆ ತುಂಬ ಇಷ್ಟ ಆಗೋ ಸುಳ್ಳು ನಂಬಿಕೆಗಳನ್ನ ಅಥವಾ ಬೈಬಲಿಗೆ ವಿರುದ್ಧವಾಗಿರೋ ಪದ್ಧತಿಗಳನ್ನ ಬಿಟ್ಟುಬಿಡೋಕೆ ಕಷ್ಟ ಆಗ್ತಿರಬಹುದು. ಹಾಗಾಗಿ ದೇವರ ಪವಿತ್ರಶಕ್ತಿಯ ಸಹಾಯದಿಂದ ಅವರು ಬದಲಾಗೋಕೆ ನಾವು ಸಾಕಷ್ಟು ಸಮಯ ಕೊಡಬೇಕಾಗುತ್ತೆ. (1 ಕೊರಿಂ. 3:6, 7) ಜೊತೆಗೆ, ಈ ವಿಷ್ಯದ ಬಗ್ಗೆ ನಾವು ಪ್ರಾರ್ಥನೆ ಮಾಡಬೇಕು. ಆಗ, ನಾವು ಏನು ಮಾಡಬೇಕು ಅಂತ ತೀರ್ಮಾನ ತಗೊಳ್ಳೋಕೆ ತಕ್ಕ ಸಮಯದಲ್ಲಿ, ಒಂದಲ್ಲ ಒಂದು ರೀತಿಯಲ್ಲಿ ಯೆಹೋವ ಸಹಾಯ ಮಾಡ್ತಾನೆ.—1 ಯೋಹಾ. 5:14.

ಮನಮುಟ್ಟೋ ಅನುಭವಗಳನ್ನ ‘ವಿವರವಾಗಿ’ ಹೇಳಿದ್ರು (ಅ. ಕಾ. 15:3-5)

14, 15. (ಎ) ಅಂತಿಯೋಕ್ಯ ಸಭೆ ಪೌಲ, ಬಾರ್ನಬ ಮತ್ತು ಅವರ ಜೊತೆ ಇದ್ದವರನ್ನ ಹೇಗೆ ಗೌರವಿಸ್ತು? (ಬಿ) ಮುಂದೆ ಈ ಸಹೋದರರು ಬೇರೆವ್ರಿಗೆ ಕ್ರೈಸ್ತರಿಗೆ ಹೇಗೆ ಪ್ರೋತ್ಸಾಹಿಸಿದ್ರು?

14 ಲೂಕ ಮುಂದುವರಿಸಿ ಹೇಳಿದ್ದು: “ಸಭೆಯಲ್ಲಿದ್ದ ಸಹೋದರರು ಅವ್ರ ಜೊತೆ ಸ್ವಲ್ಪ ದೂರ ಬಂದ್ರು. ಆಮೇಲೆ ಪೌಲ, ಬಾರ್ನಬ ಮತ್ತು ಕೆಲವು ಸಹೋದರರು ತಮ್ಮ ಪ್ರಯಾಣ ಮುಂದುವರಿಸಿದ್ರು. ಅವರು ಫೊಯಿನಿಕೆ ಮತ್ತು ಸಮಾರ್ಯ ಪ್ರದೇಶಗಳನ್ನ ಹಾದು ಹೋದ್ರು. ಹೀಗೆ ಹೋಗುವಾಗ ಅಲ್ಲಿದ್ದ ಸಹೋದರರಿಗೆ ಯೆಹೂದ್ಯರಲ್ಲದ ಜನ್ರು ಸಹ ಹೇಗೆ ಶಿಷ್ಯರಾಗ್ತಾ ಇದ್ದಾರೆ ಅಂತ ವಿವರಿಸಿದ್ರು. ಇದನ್ನ ಕೇಳಿ ಆ ಸಹೋದರರಿಗೆ ತುಂಬ ಖುಷಿ ಆಯ್ತು.” (ಅ. ಕಾ. 15:3) ಪೌಲ, ಬಾರ್ನಬ ಮತ್ತು ಅವರ ಜೊತೆ ಇದ್ದ ಸಹೋದರರನ್ನ ಸಭೆಯವರು ಸ್ವಲ್ಪ ದೂರದ ತನಕ ಬಿಡೋಕೆ ಬರೋ ಮೂಲಕ ಗೌರವ ಮತ್ತು ಪ್ರೀತಿಯನ್ನ ತೋರಿಸಿದ್ರು. ಇದು, ಪೌಲ ಮತ್ತು ಬಾರ್ನಬನನ್ನ ದೇವರು ಆಶೀರ್ವಾದ ಮಾಡ್ಲಿ ಅಂತ ಸಭೆಯವರು ಹಾರೈಸಿದ ತರ ಇತ್ತು. ಹೀಗೆ ಅಂತಿಯೋಕ್ಯದ ಸಹೋದರರು ನಮಗೆ ಇನ್ನೊಂದು ವಿಷ್ಯದಲ್ಲೂ ಮಾದರಿಯಾಗಿದ್ದಾರೆ. ನೀವು ಸಹೋದರ ಸಹೋದರಿಯರಿಗೆ ಗೌರವ ತೋರಿಸ್ತೀರಾ? “ಅದ್ರಲ್ಲೂ ದೇವರ ಸಂದೇಶದ ಬಗ್ಗೆ ಮಾತಾಡೋದ್ರಲ್ಲಿ, ಕಲಿಸೋದ್ರಲ್ಲಿ ಶ್ರಮ ಹಾಕೋ ಹಿರಿಯರಿಗೆ” ಗೌರವ ತೋರಿಸ್ತೀರಾ?—1 ತಿಮೊ. 5:17.

15 ಈ ಪ್ರಯಾಣಿಕರು ಮುಂದೆ ಹೋಗ್ತಾ ಫೊಯಿನಿಕೆ ಮತ್ತು ಸಮಾರ್ಯದಲ್ಲಿದ್ದ ಜೊತೆ ಕ್ರೈಸ್ತರಿಗೆ ಮನಮುಟ್ಟೋ ಅನುಭವಗಳನ್ನ ‘ವಿವರವಾಗಿ’ ಹೇಳಿದ್ರು. ಬೇರೆ ಜನಾಂಗದ ಜನರಿದ್ದ ಕ್ಷೇತ್ರದಲ್ಲಿ ಆಗ್ತಿದ್ದ ಕೆಲಸದ ಬಗ್ಗೆ ಕೇಳಿದಾಗ ಅವ್ರಿಗೆ ತುಂಬ ಖುಷಿ ಆಗಿರುತ್ತೆ. ಈ ಅನುಭವಗಳನ್ನ ಕೇಳಿಸ್ಕೊಂಡವರಲ್ಲಿ ಸ್ತೆಫನನ ಹತ್ಯೆ ಆದಮೇಲೆ ಫೊಯಿನಿಕೆ ಮತ್ತು ಸಮಾರ್ಯಕ್ಕೆ ಓಡಿಹೋದ ಯೆಹೂದಿ ಕ್ರೈಸ್ತರೂ ಇದ್ದಿರಬಹುದು. ಇವತ್ತೂ ಕೂಡ, ಶಿಷ್ಯರಾಗೋಕೆ ಜನ್ರಿಗೆ ಕಲಿಸೋ ಕೆಲಸದಲ್ಲಿ ಯೆಹೋವನ ಆಶೀರ್ವಾದವನ್ನ ತೋರಿಸ್ಕೊಡೋ ವರದಿಗಳು ನಮ್ಮ ಸಹೋದರರಿಗೆ, ಅದ್ರಲ್ಲೂ ಯಾರು ಕಷ್ಟಪರೀಕ್ಷೆಗಳನ್ನ ಅನುಭವಿಸ್ತಿದ್ದಾರೋ ಅವ್ರಿಗೆ ತುಂಬ ಪ್ರೋತ್ಸಾಹ ಕೊಡುತ್ತೆ. ಕ್ರೈಸ್ತ ಕೂಟಗಳಿಗೆ, ಸಮ್ಮೇಳನಗಳಿಗೆ, ಅಧಿವೇಶನಗಳಿಗೆ ಹಾಜರಾಗೋ ಮೂಲಕ ಮತ್ತು ಮುದ್ರಿತ ಪ್ರತಿಯಲ್ಲಿ ಅಥವಾ jw.orgನಲ್ಲಿರೋ ಅನುಭವಗಳು ಹಾಗೂ ಜೀವನಕಥೆಗಳನ್ನ ಓದೋ ಮೂಲಕ ನೀವು ಅಂಥ ವರದಿಗಳ ಪೂರ್ಣ ಪ್ರಯೋಜನ ಪಡೀತಿದ್ದೀರಾ?

16. ಸುನ್ನತಿಯ ಸಮಸ್ಯೆ ದೊಡ್ಡದಾಗಿತ್ತು ಅಂತ ಹೇಗೆ ಗೊತ್ತಾಗುತ್ತೆ?

16 ಅಂತಿಯೋಕ್ಯದಿಂದ ಹೊರಟ ಪ್ರತಿನಿಧಿ ತಂಡ ದಕ್ಷಿಣದ ಕಡೆಗೆ 550 ಕಿ.ಮೀ. ಪ್ರಯಾಣ ಮಾಡಿ ಯೆರೂಸಲೇಮಿಗೆ ಬಂದು ತಲಪ್ತು. “ಅವರು ಯೆರೂಸಲೇಮಿಗೆ ಬಂದಾಗ ಆ ಸಭೆಯವರು, ಅಪೊಸ್ತಲರು ಮತ್ತು ಹಿರಿಯರು ಅವ್ರನ್ನ ಸಂತೋಷದಿಂದ ಸ್ವಾಗತಿಸಿದ್ರು. ಪೌಲ ಮತ್ತು ಬಾರ್ನಬ ತಮ್ಮನ್ನ ಬಳಸಿ ದೇವರು ಮಾಡಿದ ಎಲ್ಲ ವಿಷ್ಯಗಳನ್ನ ಅವ್ರಿಗೆ ಹೇಳಿದ್ರು” ಅಂತ ಲೂಕ ಬರೆದಿದ್ದಾನೆ. (ಅ. ಕಾ. 15:4) ಆಗ “ಈ ಮುಂಚೆ ಫರಿಸಾಯರಾಗಿದ್ದ ಕೆಲವು ಸಹೋದರರು ಎದ್ದು ನಿಂತು ‘ಯೆಹೂದ್ಯರಲ್ಲದ ಜನ್ರಲ್ಲಿ ಯಾರೆಲ್ಲ ಶಿಷ್ಯರಾಗಿದ್ದಾರೋ ಅವ್ರೆಲ್ಲಾ ಸುನ್ನತಿ ಮಾಡಿಸ್ಕೊಳ್ಳಬೇಕು. ಮೋಶೆಯ ನಿಯಮ ಪುಸ್ತಕದ ಪ್ರಕಾರ ನಡೆಯೋಕೆ ಅವ್ರಿಗೆ ಹೇಳಬೇಕು’ ಅಂದ್ರು.” (ಅ. ಕಾ. 15:5) ಬೇರೆ ಜನಾಂಗದ ಕ್ರೈಸ್ತರು ಸುನ್ನತಿ ಮಾಡಿಸ್ಕೊಬೇಕಾ ಬೇಡ್ವಾ ಅನ್ನೋದು ಒಂದು ದೊಡ್ಡ ಸಮಸ್ಯೆ ಆಗಿಬಿಟ್ಟಿತ್ತು ಮತ್ತು ಅದನ್ನ ಬೇಗ ಬಗೆಹರಿಸಬೇಕಿತ್ತು ಅಂತ ಇದ್ರಿಂದ ಗೊತ್ತಾಗುತ್ತೆ.

“ಅಪೊಸ್ತಲರು ಮತ್ತು ಹಿರಿಯರು . . . ಸೇರಿಬಂದ್ರು” (ಅ. ಕಾ. 15:6-12)

17. (ಎ) ಯೆರೂಸಲೇಮಿನಲ್ಲಿದ್ದ ಆಡಳಿತ ಮಂಡಲಿಯಲ್ಲಿ ಯಾರೆಲ್ಲಾ ಇದ್ರು? (ಬಿ) ಆಡಳಿತ ಮಂಡಲಿಯಲ್ಲಿ ‘ಬೇರೆ ಹಿರಿಯರನ್ನೂ’ ಯಾಕೆ ಸೇರಿಸ್ಕೊಂಡಿದ್ರು?

17 “ಸಲಹೆ ಕೇಳುವವನಿಗೆ ವಿವೇಕ ಸಿಗುತ್ತೆ” ಅಂತ ಜ್ಞಾನೋಕ್ತಿ 13:10 ಹೇಳುತ್ತೆ. ಈ ತತ್ವದ ಪ್ರಕಾರ, “ಅಪೊಸ್ತಲರು ಮತ್ತು ಹಿರಿಯರು ಈ [ಸುನ್ನತಿ] ವಿಷ್ಯದ ಬಗ್ಗೆ ಮಾತಾಡೋಕೆ ಸೇರಿಬಂದ್ರು.” (ಅ. ಕಾ. 15:6) ಇವತ್ತು ಆಡಳಿತ ಮಂಡಲಿ ಮಾಡೋ ತರ ಅವತ್ತು “ಅಪೊಸ್ತಲರು ಮತ್ತು ಹಿರಿಯರು” ಇಡೀ ಕ್ರೈಸ್ತ ಸಭೆಯ ಪರವಾಗಿ ನಿರ್ಧಾರ ತಗೊಳ್ತಿದ್ರು. ಆದ್ರೆ ಅಪೊಸ್ತಲರ ಜೊತೆಯಲ್ಲಿ “ಹಿರಿಯರು” ಕೂಡ ಯಾಕೆ ಇದ್ರು? ಸ್ವಲ್ಪ ನೆನಪಿಸ್ಕೊಳ್ಳಿ: ಅಪೊಸ್ತಲ ಯಾಕೋಬನನ್ನ ಕೊಲ್ಲಲಾಗಿತ್ತು ಮತ್ತು ಸ್ವಲ್ಪ ಸಮಯದ ತನಕ ಅಪೊಸ್ತಲ ಪೇತ್ರ ಜೈಲಲ್ಲಿದ್ದ. ಬೇರೆ ಅಪೊಸ್ತಲರಿಗೂ ಇದೇ ರೀತಿ ಏನಾದ್ರೂ ಆಗೋ ಸಾಧ್ಯತೆ ಇತ್ತು. ಅದಕ್ಕೆ, ಮೇಲ್ವಿಚಾರಣೆ ಮಾಡೋಕೆ ಮತ್ತು ಕೆಲಸವನ್ನ ವ್ಯವಸ್ಥಿತವಾಗಿ ಮುಂದುವರಿಸ್ಕೊಂಡು ಹೋಗೋಕೆ ಸಾಕಷ್ಟು ಅಭಿಷಿಕ್ತ ಸಹೋದರರ ಅವಶ್ಯಕತೆ ಇತ್ತು. ಹಾಗಾಗಿ ಈ ‘ಹಿರಿಯರನ್ನ’ ಆಡಳಿತ ಮಂಡಲಿಯಲ್ಲಿ ಸೇರಿಸಲಾಗಿತ್ತು.

18, 19. (ಎ) ಪೇತ್ರ ಏನಂತ ಹೇಳಿದ? (ಬಿ) ಇದನ್ನ ಕೇಳಿಸ್ಕೊಂಡವರು ಏನಂತ ಅರ್ಥ ಮಾಡ್ಕೋಬೇಕಿತ್ತು?

18 ಇದ್ರ ಬಗ್ಗೆ ಲೂಕ ಹೀಗೆ ಹೇಳಿದ್ದಾನೆ: “ತುಂಬ ಸಮಯ ಇದ್ರ ಬಗ್ಗೆ ವಾದ ವಿವಾದ ನಡಿತು. ಆಮೇಲೆ ಪೇತ್ರ ಎದ್ದುನಿಂತು ಅವ್ರಿಗೆ ‘ಸಹೋದರರೇ, ಯೆಹೂದ್ಯರಲ್ಲದ ಜನ ಸಿಹಿಸುದ್ದಿ ಕೇಳಿಸ್ಕೊಳ್ಳಬೇಕು ಮತ್ತು ಶಿಷ್ಯರಾಗಬೇಕು ಅನ್ನೋ ಉದ್ದೇಶದಿಂದ ದೇವರು ತುಂಬ ಮುಂಚೆನೇ ಸಹೋದರರಲ್ಲಿ ನನ್ನನ್ನ ಆರಿಸ್ಕೊಂಡನು ಅಂತ ನಿಮಗೆ ಚೆನ್ನಾಗಿ ಗೊತ್ತು. ಅಷ್ಟೇ ಅಲ್ಲ ಹೃದಯದಲ್ಲಿ ಏನಿದೆ ಅಂತ ದೇವ್ರಿಗೆ ಚೆನ್ನಾಗಿ ಗೊತ್ತು. ಆತನು ನಮಗೆ ಕೊಟ್ಟ ಹಾಗೇ ಅವ್ರಿಗೂ ಪವಿತ್ರಶಕ್ತಿ ಕೊಟ್ಟನು. ಆತನು ಅವ್ರನ್ನೂ ಸ್ವೀಕರಿಸಿದ ಅನ್ನೋದಕ್ಕೆ ಅದೇ ಸಾಕ್ಷಿ. ಆತನು ನಮ್ಗೂ ಅವ್ರಿಗೂ ಯಾವುದೇ ಭೇದಭಾವ ಮಾಡಲಿಲ್ಲ. ಅವ್ರ ನಂಬಿಕೆ ನೋಡಿ ಅವ್ರ ಪಾಪಗಳನ್ನ ಕ್ಷಮಿಸಿ ಅವ್ರ ಹೃದಯಗಳನ್ನ ಶುದ್ಧಮಾಡಿದನು.’” (ಅ. ಕಾ. 15:7-9) ಒಂದು ಶಬ್ದಕೋಶದ ಪ್ರಕಾರ 7ನೇ ವಚನದಲ್ಲಿ ಬಳಸಿರೋ “ವಾದ ವಿವಾದ” ಅನ್ನೋ ಪದಕ್ಕಿರೋ ಮೂಲ ಗ್ರೀಕ್‌ ಪದದ ಅರ್ಥ, ಪರಿಹಾರ “ಹುಡುಕೋದು,” “ಪ್ರಶ್ನೆ ಹಾಕೋದು” ಅಂತ ಆಗಿದೆ. ಸಹೋದರರಿಗೆ ಈ ವಿಷ್ಯದ ಬಗ್ಗೆ ಬೇರೆಬೇರೆ ಅಭಿಪ್ರಾಯಗಳು ಇತ್ತು ಅನ್ಸುತ್ತೆ. ತಮ್ಮ ಈ ಅಭಿಪ್ರಾಯಗಳನ್ನ ಅವರು ಮುಚ್ಚುಮರೆಯಿಲ್ಲದೆ ಹೇಳಿದ್ರು.

19 ಪೇತ್ರ ಹೇಳಿದ ಮಾತು ಎಲ್ರಿಗೂ ಒಂದು ವಿಷ್ಯನ ನೆನಪಿಸ್ತು. ಅದೇನಂದ್ರೆ, ಮೊದಲನೇ ಸಲ ಕ್ರಿ.ಶ. 36ರಲ್ಲಿ ಸುನ್ನತಿ ಆಗಿರದ ಬೇರೆ ಜನಾಂಗದವರು ಅಂದ್ರೆ ಕೊರ್ನೇಲ್ಯ ಮತ್ತು ಅವನ ಕುಟುಂಬದವರು ಪವಿತ್ರಶಕ್ತಿಯಿಂದ ಅಭಿಷಿಕ್ತರಾದಾಗ ಪೇತ್ರ ಅಲ್ಲೇ ಇದ್ದ. ಯೆಹೂದ್ಯರು ಯೆಹೂದ್ಯರಲ್ಲದವರು ಅನ್ನೋ ಭೇದಭಾವ ಮಾಡೋದನ್ನ ಯೆಹೋವನೇ ನಿಲ್ಲಿಸಿರೋವಾಗ, ಹಾಗೆ ಮಾಡೋ ಅಧಿಕಾರ ಮನುಷ್ಯರಿಗೆ ಎಲ್ಲಿದೆ? ಅಷ್ಟೇ ಅಲ್ಲ, ಯೆಹೋವ ದೇವರು ಒಬ್ಬ ಕ್ರೈಸ್ತನ ಆರಾಧನೆಯನ್ನ ಒಪ್ಕೊಬೇಕಾದ್ರೆ ಅವನು ನಿಯಮ ಪುಸ್ತಕನ ಪಾಲಿಸ್ತಾನಾ ಇಲ್ವಾ ಅಂತ ನೋಡಲ್ಲ, ಬದಲಿಗೆ ಕ್ರಿಸ್ತನಲ್ಲಿ ನಂಬಿಕೆ ಇಡ್ತಾನಾ ಇಲ್ವಾ ಅಂತ ನೋಡ್ತಾನೆ ಅನ್ನೋದನ್ನ ಅವರು ಅರ್ಥ ಮಾಡ್ಕೋಬೇಕಿತ್ತು.—ಗಲಾ. 2:16.

20. ಸುನ್ನತಿ ಮಾಡಲೇಬೇಕು ಅಂತ ಹೇಳುವವರು ‘ದೇವ್ರ ತಾಳ್ಮೆಯನ್ನ ಪರೀಕ್ಷಿಸ್ತಿದ್ರು’ ಹೇಗೆ?

20 ದೇವರ ಮಾತು ಮತ್ತು ಪವಿತ್ರಶಕ್ತಿಯಿಂದ ಸಿಕ್ಕಿದ ಬಲವಾದ ಸಾಕ್ಷಿಯ ಆಧಾರದ ಮೇಲೆ ಪೇತ್ರ ಹೀಗಂದ: “ನೀವು ದೇವ್ರ ತಾಳ್ಮೆಯನ್ನ ಪರೀಕ್ಷಿಸಬೇಕು ಅಂತ ಅಂದ್ಕೊಳ್ತಿದ್ದೀರಾ? ಅವ್ರಿಗೆ ಸುನ್ನತಿ ಮಾಡಿಸ್ಕೊಳ್ಳಬೇಕು ಅಂತ ಹೇಳಿ ಯಾಕೆ ಅವ್ರ ಮೇಲೆ ಭಾರ ಹಾಕ್ತಾ ಇದ್ದೀರಾ? ಆ ಭಾರ ಹೊರೋಕೆ ನಮ್ಮ ಪೂರ್ವಜರು ಮತ್ತು ನಾವೇ ಕಷ್ಟಪಟ್ವಿ. ಯೆಹೂದ್ಯರಾಗಿರೋ ನಮಗೆ ಯೇಸು ಪ್ರಭುವಿನ ಅಪಾರ ಕೃಪೆಯ ಮೂಲಕ ರಕ್ಷಣೆ ಸಿಗುತ್ತೆ ಅನ್ನೋ ನಂಬಿಕೆಯಿದೆ. ಅದೇ ನಂಬಿಕೆ ಅವ್ರಿಗೂ ಇದೆ.” (ಅ. ಕಾ. 15:10, 11) ಸುನ್ನತಿ ಮಾಡಿಸ್ಕೊಳ್ಳಬೇಕು ಅಂತ ಹೇಳುವವರು ‘ದೇವ್ರ ತಾಳ್ಮೆಯನ್ನ ಪರೀಕ್ಷಿಸ್ತಿದ್ರು.’ ಹೇಗಂದ್ರೆ, ಪಾಲಿಸಲೇಬೇಕು ಅಂತ ಬೇರೆ ಜನಾಂಗದವರ ಮೇಲೆ ಹೊರಿಸಿದ್ದ ನಿಯಮವನ್ನ ಪಾಲಿಸೋಕೆ ಯೆಹೂದ್ಯರಿಗೇ ಕಷ್ಟ ಆಗ್ತಿತ್ತು. ಹೀಗೆ ಪಾಲಿಸದ ಕಾರಣ ನಿಯಮ ಪುಸ್ತಕದ ಪ್ರಕಾರ ಅವರು ಮರಣಕ್ಕೆ ಅರ್ಹರಾಗಿದ್ರು. (ಗಲಾ. 3:10) ಹಾಗಾಗಿ ಪೇತ್ರನ ಮಾತನ್ನ ಕೇಳ್ತಾ ಇದ್ದ ಯೆಹೂದಿ ಕ್ರೈಸ್ತರು, ಯೇಸು ಮೂಲಕ ಯೆಹೋವ ತೋರಿಸಿದ ಅಪಾರ ಕೃಪೆಗೆ ಕೃತಜ್ಞರಾಗಿರಬೇಕಿತ್ತು.

21. ಬಾರ್ನಬ ಮತ್ತು ಪೌಲ ಈ ಚರ್ಚೆಗೆ ಸಹಾಯ ಮಾಡೋ ಯಾವ ವಿಷ್ಯಗಳನ್ನ ವಿವರಿಸಿದ್ರು?

21 ಪೇತ್ರನ ಈ ಮಾತುಗಳು ಅವ್ರನ್ನ ಯೋಚಿಸೋ ತರ ಮಾಡಿರುತ್ತೆ ಅನ್ನೋದಂತೂ ಗ್ಯಾರಂಟಿ. ಅದಕ್ಕೇ “ಎಲ್ರೂ ಸುಮ್ಮನಾದ್ರು. ಆಮೇಲೆ ಪೌಲ ಮತ್ತು ಬಾರ್ನಬ ತಮ್ಮ ಮೂಲಕ ದೇವರು ಮಾಡಿದ ಎಲ್ಲ ವಿಷ್ಯಗಳನ್ನ, ಅದ್ಭುತಗಳನ್ನ ವಿವರಿಸಿ ಹೇಳ್ತಾ ಇದ್ರು.” (ಅ. ಕಾ. 15:12) ಹೀಗೆ ಅಪೊಸ್ತಲರು ಮತ್ತು ಹಿರಿಯರು ಎಲ್ಲ ಆಧಾರಗಳನ್ನ ಪರಿಶೀಲಿಸಿದ ಮೇಲೆ ಸುನ್ನತಿ ಬಗ್ಗೆ ದೇವರ ಇಷ್ಟದ ಪ್ರಕಾರ ತೀರ್ಮಾನ ಮಾಡೋಕೆ ಸಾಧ್ಯ ಆಯ್ತು.

22-24. (ಎ) ಈಗಿನ ಆಡಳಿತ ಮಂಡಲಿ ಒಂದನೇ ಶತಮಾನದ ಆಡಳಿತ ಮಂಡಲಿಯ ಮಾದರಿಯನ್ನ ಹೇಗೆ ಅನುಕರಿಸುತ್ತೆ? (ಬಿ) ಎಲ್ಲ ಹಿರಿಯರು ದೇವರ ಅಧಿಕಾರಕ್ಕೆ ಹೇಗೆ ಗೌರವ ತೋರಿಸಬಹುದು?

22 ಇವತ್ತೂ ಆಡಳಿತ ಮಂಡಲಿಯ ಸದಸ್ಯರು ತಮ್ಮ ಕೂಟಗಳಲ್ಲಿ ದೇವರ ವಾಕ್ಯ ಯಾವ ಮಾರ್ಗದರ್ಶನ ಕೊಡುತ್ತೆ ಅಂತ ನೋಡ್ತಾರೆ ಮತ್ತು ಪವಿತ್ರಶಕ್ತಿಗಾಗಿ ಶ್ರದ್ಧೆಯಿಂದ ಪ್ರಾರ್ಥಿಸ್ತಾರೆ. (ಕೀರ್ತ. 119:105; ಮತ್ತಾ. 7:7-11) ದೇವರ ಇಷ್ಟದ ಪ್ರಕಾರ ತೀರ್ಮಾನಗಳನ್ನ ಮಾಡೋಕೆ, ಆಡಳಿತ ಮಂಡಲಿಯ ಪ್ರತಿ ಸದಸ್ಯನಿಗೂ ಕೂಟದಲ್ಲಿ ಚರ್ಚೆ ಆಗೋ ವಿಷ್ಯಗಳ ಪಟ್ಟಿಯನ್ನ ಮುಂಚೆನೇ ಕೊಡಲಾಗುತ್ತೆ. ಇದ್ರಿಂದ ಅವರು ಮೊದಲೇ ಆ ವಿಷ್ಯಗಳ ಬಗ್ಗೆ ಯೋಚಿಸಿ, ಪ್ರಾರ್ಥಿಸೋಕೆ ಸಾಧ್ಯ ಆಗುತ್ತೆ. (ಜ್ಞಾನೋ. 15:28) ಆಮೇಲೆ ಕೂಟದಲ್ಲಿ ಈ ಅಭಿಷಿಕ್ತ ಸಹೋದರರು ಮುಚ್ಚುಮರೆ ಇಲ್ಲದೆ, ಗೌರವದಿಂದ ತಮ್ಮ ಅನಿಸಿಕೆಗಳನ್ನ ತಿಳಿಸ್ತಾರೆ. ಈ ರೀತಿ ಚರ್ಚೆ ಮಾಡೋ ಸಮಯದಲ್ಲಿ ಬೈಬಲನ್ನ ಉಪಯೋಗಿಸ್ತಾರೆ.

23 ಇವರ ಮಾದರಿಯನ್ನ ಸಭಾ ಹಿರಿಯರು ಅನುಕರಿಸಬೇಕು. ಹಿರಿಯರ ಕೂಟದಲ್ಲಿ ಒಂದು ಗಂಭೀರ ವಿಷ್ಯದ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ ಮೇಲೂ ಒಂದು ತೀರ್ಮಾನಕ್ಕೆ ಬರೋಕೆ ಸಾಧ್ಯವಾಗದೇ ಇರಬಹುದು. ಆಗ ಹಿರಿಯರ ಮಂಡಲಿ ಸ್ಥಳೀಯ ಶಾಖಾ ಕಚೇರಿಯನ್ನ ಅಥವಾ ಸಂಚರಣ ಮೇಲ್ವಿಚಾರಕರನ್ನ ಸಂಪರ್ಕಿಸಬಹುದು. ಅಗತ್ಯ ಇದ್ದಾಗ ಶಾಖೆ ಇದರ ಬಗ್ಗೆ ಆಡಳಿತ ಮಂಡಲಿಗೆ ಪತ್ರ ಬರೆದು ಕೇಳುತ್ತೆ.

24 ಸಭೆಯ ಏರ್ಪಾಡಿಗೆ ಗೌರವ ತೋರಿಸೋರನ್ನ ದೀನತೆ, ನಿಷ್ಠೆ ಹಾಗೂ ತಾಳ್ಮೆ ತೋರಿಸೋರನ್ನ ಯೆಹೋವ ಆಶೀರ್ವದಿಸ್ತಾನೆ. ಇಂಥ ಗುಣಗಳನ್ನ ತೋರಿಸೋವಾಗ ದೇವ್ರಿಂದ ನಮಗೆ ನಿಜ ಶಾಂತಿ, ಅಭಿವೃದ್ಧಿ ಮತ್ತು ಕ್ರೈಸ್ತ ಐಕ್ಯತೆಯಂಥ ಪ್ರತಿಫಲಗಳು ಸಿಗುತ್ತೆ. ಇದನ್ನೇ ನಾವು ಮುಂದಿನ ಅಧ್ಯಾಯದಲ್ಲಿ ನೋಡಲಿಕ್ಕಿದ್ದೀವಿ.

a ‘ಸುಳ್ಳು ಸಹೋದರರ’ ಬೋಧನೆಗಳು” ಅನ್ನೋ ಚೌಕ ನೋಡಿ.

b ಸುನ್ನತಿಯ ಒಪ್ಪಂದಕ್ಕೂ ಅಬ್ರಹಾಮನ ಒಪ್ಪಂದಕ್ಕೂ ಸಂಬಂಧ ಇಲ್ಲ. ಅಬ್ರಹಾಮನ ಒಪ್ಪಂದ ಇವತ್ತಿನ ತನಕ ಜಾರಿಯಲ್ಲಿದೆ. ಅದು ಅಬ್ರಹಾಮ (ಆಗ ಅವನ ಹೆಸ್ರು ಅಬ್ರಾಮ ಅಂತಾಗಿತ್ತು.) ಕ್ರಿ.ಪೂ. 1943ರಲ್ಲಿ ಕಾನಾನಿಗೆ ಹೋಗೋ ದಾರಿಯಲ್ಲಿ ಯೂಫ್ರೆಟಿಸ್‌ ನದಿಯನ್ನ ದಾಟಿದಾಗ ಜಾರಿಗೆ ಬಂತು. ಆಗ ಅವನಿಗೆ 75 ವರ್ಷ. ಆಮೇಲೆ ಕ್ರಿ.ಪೂ. 1919ರಲ್ಲಿ ಅಂದ್ರೆ ಅಬ್ರಹಾಮನಿಗೆ 99 ವರ್ಷ ಇದ್ದಾಗ ಸುನ್ನತಿಯ ಒಪ್ಪಂದ ಮಾಡಲಾಯ್ತು.—ಆದಿ. 12:1-8; 17:1, 9-14; ಗಲಾ. 3:17.

c ಯೆರೂಸಲೇಮಿಗೆ ಹೋದ ಈ ಪ್ರತಿನಿಧಿ ತಂಡದಲ್ಲಿ ಗ್ರೀಕ್‌ ಕ್ರೈಸ್ತನಾಗಿದ್ದ ತೀತನೂ ಇದ್ದಿರಬೇಕು. ಅವನೇ ಆಮೇಲೆ ಪೌಲನ ನಂಬಿಗಸ್ತ ಜೊತೆಗಾರನಾದ, ಪ್ರತಿನಿಧಿನೂ ಆದ. (ಗಲಾ. 2:1; ತೀತ 1:4) ಸುನ್ನತಿಯಾಗದ ಯೆಹೂದ್ಯರಲ್ಲದವರು ಪವಿತ್ರಶಕ್ತಿಯ ಮೂಲಕ ಅಭಿಷಿಕ್ತರಾಗಿದ್ರು ಅನ್ನೋದಕ್ಕೆ ಇವನೇ ಒಂದು ಒಳ್ಳೇ ಉದಾಹರಣೆ ಆಗಿದ್ದ.—ಗಲಾ. 2:3.