ಅಧ್ಯಾಯ 22
“ಯೆಹೋವನ ಇಷ್ಟ ಏನಿದ್ಯೋ ಅದೇ ಆಗಲಿ”
ದೇವರ ಇಷ್ಟ ಏನಿದ್ಯೋ ಅದನ್ನ ಮಾಡಬೇಕು ಅಂತ ಪೌಲ ಯೆರೂಸಲೇಮಿಗೆ ಹೋದ
ಆಧಾರ: ಅಪೊಸ್ತಲರ ಕಾರ್ಯ 21:1-17
1-4. (ಎ) ಪೌಲ ಯಾಕೆ ಯೆರೂಸಲೇಮಿಗೆ ಹೋಗ್ತಿದ್ದ? (ಬಿ) ಅಲ್ಲಿ ಅವನಿಗೆ ಏನಾಗ್ತಿತ್ತು?
ಪೌಲ ಮತ್ತು ಲೂಕ ಮಿಲೇತದಿಂದ ಹೋಗೋವಾಗ ಎಲ್ಲರಿಗೂ ತುಂಬ ದುಃಖ ಆಯ್ತು. ಪೌಲ ಮತ್ತು ಲೂಕನಿಗೂ ತಾವು ತುಂಬ ಪ್ರೀತಿಸ್ತಿದ್ದ ಎಫೆಸದ ಹಿರಿಯರನ್ನ ಬಿಟ್ಟು ಹೋಗೋಕೆ ಕಷ್ಟ ಆಯ್ತು. ಆದ್ರೂ ಆ ಇಬ್ರು ಮಿಷನರಿಗಳು ಹಡಗಿನ ಮೇಲೆ ನಿಂತ್ರು. ಅವ್ರ ಚೀಲಗಳಲ್ಲಿ ಪ್ರಯಾಣಕ್ಕೆ ಬೇಕಾಗಿರೋ ವಸ್ತುಗಳಿತ್ತು. ವಿಪತ್ತು ಪರಿಹಾರಕ್ಕಾಗಿ ಸಂಗ್ರಹಿಸಿದ ಕಾಣಿಕೆಗಳೂ ಅವ್ರ ಕೈಯಲ್ಲಿತ್ತು. ಈ ಉಡುಗೊರೆಗಳನ್ನ ಯೂದಾಯದ ಬಡ ಸಹೋದರರಿಗೆ ಕೊಡೋಕೆ ಅವರು ಕಾಯ್ತಿದ್ರು.
2 ಗಾಳಿ ನಿಧಾನವಾಗಿ ಹಾಯಿಗೆ ತಗುಲ್ತಾ ಇದ್ದ ಹಾಗೆ ಹಡಗು ತೀರದಿಂದ ದೂರಕ್ಕೆ ಚಲಿಸೋಕೆ ಶುರು ಆಯ್ತು. ಹೀಗೆ ತೀರದಿಂದ ಹೋಗ್ತಿದ್ದ ಇಬ್ರು ಮಿಷನರಿಗಳು ಮತ್ತು ಅವ್ರ ಜೊತೆ ಇದ್ದ ಏಳು ಸಹೋದರರು ಬೇಸರದಿಂದ ದಡದಲ್ಲಿ ನಿಂತಿದ್ದ ಸಹೋದರರನ್ನೇ ನೋಡ್ತಿದ್ರು. (ಅ. ಕಾ. 20:4, 14, 15) ತಮ್ಮ ಸ್ನೇಹಿತರು ಕಣ್ಮರೆಯಾಗೋ ತನಕ ಹಡಗಿನಲ್ಲಿದ್ದ ಆ ಪ್ರಯಾಣಿಕರು ಕೈ ಬೀಸ್ತಾನೇ ಇದ್ರು.
3 ಪೌಲ ಸುಮಾರು ಮೂರು ವರ್ಷ ಎಫೆಸದ ಹಿರಿಯರ ಜೊತೆಯಲ್ಲಿದ್ದು ಕೆಲಸಮಾಡಿದ. ಆದ್ರೆ ಈಗ ಪವಿತ್ರಶಕ್ತಿ ಕೊಟ್ಟ ಮಾರ್ಗದರ್ಶನದ ತರ ಅವನು ಯೆರೂಸಲೇಮಿಗೆ ಹೋಗ್ತಿದ್ದಾನೆ. ಅಲ್ಲಿ ತನಗೆ ಏನಾಗುತ್ತೆ ಅಂತ ಅವನಿಗೆ ಸ್ವಲ್ಪ ಗೊತ್ತಿತ್ತು. ಅದಕ್ಕೆ ಅವನು ಈ ಮುಂಚೆ ಆ ಹಿರಿಯರ ಹತ್ರ, “ಪವಿತ್ರಶಕ್ತಿ ಹೇಳಿದ ಹಾಗೆ ನಾನು ಯೆರೂಸಲೇಮಿಗೆ ಹೋಗ್ತಾ ಇದ್ದೀನಿ. ಅಲ್ಲಿ ನನಗೆ ಏನಾಗುತ್ತೋ ಗೊತ್ತಿಲ್ಲ. ಒಂದು ಮಾತ್ರ ಗೊತ್ತು. ಬೇಡಿಗಳು, ಕಷ್ಟಗಳು ನನಗಾಗಿ ಕಾಯ್ತಿವೆ ಅಂತ ಪವಿತ್ರಶಕ್ತಿ ಎಲ್ಲ ಊರುಗಳಲ್ಲಿ ನನಗೆ ನೆನಪಿಸ್ತಾನೇ ಇದೆ” ಅಂತ ಹೇಳಿದ್ದ. (ಅ. ಕಾ. 20:22, 23) ಅಪಾಯ ಇದ್ರೂ ಪೌಲ “ಪವಿತ್ರಶಕ್ತಿ ಹೇಳಿದ ಹಾಗೆ” ಯೆರೂಸಲೇಮಿಗೆ ಹೋದ. ಯಾಕಂದ್ರೆ ಪವಿತ್ರಶಕ್ತಿ ಹೇಳಿದ ತರ ನಡ್ಕೊಳ್ಳೋದು ತನ್ನ ಜವಾಬ್ದಾರಿ ಅನ್ನೋ ಭಾವನೆ ಅವನಿಗಿತ್ತು, ಅಲ್ಲದೇ ಅದನ್ನ ಪಾಲಿಸಬೇಕು ಅನ್ನೋ ಮನಸ್ಸೂ ಇತ್ತು. ಅವನಿಗೆ ತನ್ನ ಜೀವದ ಮೇಲೆ ಪ್ರೀತಿ ಇದ್ರೂ ದೇವರ ಇಷ್ಟ ಮಾಡೋದೇ ಮುಖ್ಯವಾಗಿತ್ತು.
4 ನಿಮಗೂ ಹೀಗೇ ಅನಿಸುತ್ತಾ? ನಾವು ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡಾಗ, ನಮ್ಮ ಜೀವನದಲ್ಲಿ ದೇವರ ಇಷ್ಟ ಮಾಡೋದಕ್ಕೆ ಮೊದಲನೇ ಸ್ಥಾನ ಕೊಡ್ತೀವಿ ಅಂತ ದೇವರಿಗೆ ಮಾತು ಕೊಟ್ಟಿರ್ತೀವಿ. ಹಾಗಾಗಿ ಪೌಲನ ನಂಬಿಗಸ್ತ ಮಾದರಿ ಬಗ್ಗೆ ತಿಳ್ಕೊಳ್ಳೋದ್ರಿಂದ ನಮಗೂ ಸಹಾಯ ಆಗುತ್ತೆ.
‘ಸೈಪ್ರಸ್ ದ್ವೀಪವನ್ನ ದಾಟಿಹೋದ್ರು’ (ಅ. ಕಾ. 21:1-3)
5. ಪೌಲ ಮತ್ತು ಅವನ ಜೊತೆಗಿದ್ದವರು ಯಾವ ಮಾರ್ಗವಾಗಿ ತೂರಿಗೆ ಪ್ರಯಾಣ ಮಾಡಿದ್ರು?
5 ಪೌಲ ಮತ್ತು ಅವನ ಜೊತೆ ಇದ್ದವರು ಪ್ರಯಾಣ ಮಾಡ್ತಿದ್ದ ಹಡಗು “ನೇರವಾಗಿ” ಹೋಗ್ತಾ ಅದೇ ದಿನ ಕೋಸ್ ದ್ವೀಪ ತಲುಪ್ತು. ಗಾಳಿ ಜೋರಾಗಿ ಬೀಸ್ತಾ ಇದ್ದಿದ್ರಿಂದ ಅದು ನೇರವಾಗಿ ಸಾಗ್ತಿತ್ತು. (ಅ. ಕಾ. 21:1) ಆ ರಾತ್ರಿ ಅದು ಕೋಸ್ ದ್ವೀಪದಲ್ಲೇ ನಿಂತಿತ್ತು. ಆಮೇಲೆ ರೋದ ಮತ್ತು ಪತರಕ್ಕೆ ಹೋಗಲಿತ್ತು. ಏಷ್ಯಾ ಮೈನರ್‌ನ ದಕ್ಷಿಣ ತೀರದಲ್ಲಿರೋ ಪತರದಲ್ಲಿ ಈ ಸಹೋದರರು, ಸರಕು ತಗೊಂಡು ಹೋಗೋ ಒಂದು ದೊಡ್ಡ ಹಡಗನ್ನ ಹತ್ತಿದ್ರು. ಅಲ್ಲಿಂದ ಅವರು ನೇರವಾಗಿ ಫೊಯಿನಿಕೆಯ ತೂರಿಗೆ ಹೋಗಿ ತಲಪಿದ್ರು. ಅವರು ತಮ್ಮ ‘ಎಡಗಡೆಯಲ್ಲಿದ್ದ ಸೈಪ್ರಸ್ ದ್ವೀಪವನ್ನ ದಾಟಿ’ ಇಲ್ಲಿ ಬಂದಿದ್ರು. (ಅ. ಕಾ. 21:3) ಲೂಕ ಸೈಪ್ರಸನ್ನ ದಾಟಿ ಹೋಗಿದ್ದರ ಬಗ್ಗೆ ಯಾಕೆ ಹೇಳಿದ್ದಾನೆ?
6. (ಎ) ಸೈಪ್ರಸ್ ದ್ವೀಪವನ್ನ ನೋಡಿದ್ರಿಂದ ಪೌಲನಿಗೆ ಹೇಗೆ ಪ್ರೋತ್ಸಾಹ ಸಿಕ್ಕಿರಬಹುದು? (ಬಿ) ಯೆಹೋವನ ಆಶೀರ್ವಾದ ಮತ್ತು ಸಹಾಯದ ಬಗ್ಗೆ ಯೋಚ್ನೆ ಮಾಡೋವಾಗ ನಮಗೇನು ಗೊತ್ತಾಗುತ್ತೆ?
6 ಪೌಲ ಆ ದ್ವೀಪದ ಕಡೆಗೆ ಕೈ ತೋರಿಸಿ ಅಲ್ಲಿ ಸುಮಾರು ಒಂಭತ್ತು ವರ್ಷಗಳ ಹಿಂದೆ ತನಗಾದ ಅನುಭವಗಳನ್ನ ಹೇಳಿರಬಹುದು. ಪೌಲ ತನ್ನ ಮೊದಲ ಮಿಷನರಿ ಪ್ರಯಾಣದಲ್ಲಿ ಬಾರ್ನಬ ಮತ್ತು ಯೋಹಾನ ಮಾರ್ಕರ ಜೊತೆಯಲ್ಲಿ ಅಲ್ಲಿಗೆ ಹೋಗಿದ್ದ. ಅಲ್ಲಿ ಸಿಹಿಸುದ್ದಿ ಸಾರೋದಕ್ಕೆ ಹೋದಾಗ ಎಲುಮ ಅನ್ನೋ ಮಂತ್ರವಾದಿ ವಿರೋಧ ಮಾಡಿದ್ದ. (ಅ. ಕಾ. 13:4-12) ಆ ದ್ವೀಪವನ್ನ ಮತ್ತೆ ನೋಡಿದಾಗ, ಅಲ್ಲಿ ಆದ ಘಟನೆಗಳನ್ನ ಮೆಲುಕು ಹಾಕೋದಕ್ಕೆ ಆಯ್ತು. ಇದ್ರಿಂದ ಪೌಲನಿಗೆ ಪ್ರೋತ್ಸಾಹ ಸಿಕ್ಕಿರಬಹುದು, ಮುಂದೆ ಬರೋ ಕಷ್ಟಗಳನ್ನ ಎದುರಿಸೋಕೆ ಬಲ ಸಿಕ್ಕಿರಬಹುದು. ಅದೇತರ ದೇವರು ನಮಗೆ ಕೊಟ್ಟ ಆಶೀರ್ವಾದಗಳ ಬಗ್ಗೆ ಮತ್ತು ಕಷ್ಟಗಳನ್ನ ತಾಳ್ಕೊಳ್ಳೋಕೆ ಕೊಟ್ಟ ಸಹಾಯದ ಬಗ್ಗೆ ಯೋಚ್ನೆ ಮಾಡೋವಾಗ ನಮಗೂ ಬಲ ಸಿಗುತ್ತೆ. ಆಗ ನಾವು ದಾವೀದ ಹೇಳಿದ ಈ ಮಾತುಗಳನ್ನೇ ಹೇಳಬಹುದು: “ನೀತಿವಂತನಿಗೆ ಒಂದಲ್ಲ ಎರಡಲ್ಲ ನೂರಾರು ಕಷ್ಟಸಂಕಟಗಳು, ಆದ್ರೆ ಯೆಹೋವ ಅವುಗಳಿಂದ ಅವನನ್ನ ಬಿಡಿಸ್ತಾನೆ.”—ಕೀರ್ತ. 34:19.
“ಶಿಷ್ಯರನ್ನ ಹುಡುಕಿದ್ವಿ” (ಅ. ಕಾ. 21:4-9)
7. ಸಹೋದರರು ತೂರಿಗೆ ಬಂದು ತಲುಪಿದಾಗ ಏನು ಮಾಡಿದ್ರು?
7 ಸಹೋದರ ಸಹೋದರಿಯರ ಜೊತೆ ಇರೋದನ್ನ ಪೌಲ ತುಂಬಾ ಅಮೂಲ್ಯವಾಗಿ ನೋಡ್ತಿದ್ರಿಂದ ಅವ್ರ ಜೊತೆ ಸಮಯ ಕಳಿಯೋಕೆ ಕಾಯ್ತಿದ್ದ. ಅದಕ್ಕೆ ಲೂಕ ತೂರಿಗೆ ಬಂದ ತಕ್ಷಣ ‘ನಾವು ಶಿಷ್ಯರನ್ನ ಹುಡುಕಿದ್ವಿ, ಅವರು ಸಿಕ್ಕಿದ್ರು’ ಅಂತ ಬರೆದಿದ್ದಾನೆ. (ಅ. ಕಾ. 21:4) ತೂರಿನಲ್ಲಿ ಸಹೋದರರು ಇದ್ದಾರೆ ಅಂತ ಅವ್ರಿಗೆ ಗೊತ್ತಿತ್ತು. ಅದಕ್ಕೆ ಅವ್ರನ್ನ ಹುಡುಕಿದ್ರು, ಆಮೇಲೆ ಅವ್ರ ಜೊತೆಯಲ್ಲಿ ಉಳ್ಕೊಂಡ್ರು. ನಾವು ಕೂಡ ಜಗತ್ತಿನ ಯಾವ ಮೂಲೆಗೆ ಹೋದ್ರೂ ಸಹೋದರರು ಭೇದಭಾವ ಇಲ್ಲದೆ ನಮ್ಮನ್ನ ಸ್ವಾಗತಿಸ್ತಾರೆ. ನಾವು ಸತ್ಯದಲ್ಲಿ ಇರೋದ್ರಿಂದ ಸಿಗೋ ಅತಿ ದೊಡ್ಡ ಆಶೀರ್ವಾದಗಳಲ್ಲಿ ಇದೂ ಒಂದು. ಯೆಹೋವ ದೇವರನ್ನ ಪ್ರೀತಿಸೋ ಮತ್ತು ಆರಾಧನೆ ಮಾಡೋ ಜನ ಜಗತ್ತಿನ ಯಾವ ಮೂಲೆಗೆ ಹೋದ್ರು ಅವ್ರಿಗೆ ಅಲ್ಲಿ ಗೆಳೆಯರು ಇರ್ತಾರೆ.
8. ಅಪೊಸ್ತಲರ ಕಾರ್ಯ 21:4ರ ಅರ್ಥ ಏನು?
8 ಪೌಲ ಮತ್ತು ಅವನ ಜೊತೆ ಇದ್ದವರು ತೂರಿನಲ್ಲಿ ಸಹೋದರರ ಜೊತೆ ಏಳು ದಿನ ಉಳ್ಕೊಂಡ್ರು. ಆಗ ಏನಾಯ್ತು ಅಂತ ಲೂಕ ಹೇಳಿದ್ದಾನೆ. ಇದನ್ನ ಕೇಳಿದಾಗ ನಮ್ಗೆ ಆಶ್ಚರ್ಯ ಆಗಬಹುದು. ಅವನು ಹೇಳಿದ್ದು, “ಪವಿತ್ರ ಶಕ್ತಿ [ತೂರಿನ] ಶಿಷ್ಯರಿಗೆ ಹೇಳಿದ್ರಿಂದ ಅವರು ಪೌಲನಿಗೆ ಯೆರೂಸಲೇಮಿಗೆ ಹೋಗದ ಹಾಗೆ ಪದೇಪದೇ ಹೇಳಿದ್ರು.” (ಅ. ಕಾ. 21:4) ಹಾಗಾದ್ರೆ ಯೆಹೋವ ದೇವರು ತನ್ನ ಮನಸ್ಸು ಬದಲಾಯಿಸಿದ್ರಾ? ಪೌಲನಿಗೆ ಯೆರೂಸಲೇಮಿಗೆ ಹೋಗಬಾರದು ಅಂತ ಹೇಳ್ತಿದ್ರಾ? ಇಲ್ಲ. ಯೆರೂಸಲೇಮಿನಲ್ಲಿ ಪೌಲನಿಗೆ ಸಮಸ್ಯೆ ಎದುರಾಗುತ್ತೆ ಅಂತ ಪವಿತ್ರಶಕ್ತಿ ಹೇಳಿತ್ತೇ ಹೊರತು ಅಲ್ಲಿಗೆ ಹೋಗಬಾರದು ಅಂತ ಹೇಳಿಲ್ಲ. ಪವಿತ್ರಶಕ್ತಿ ಮೂಲಕ ತೂರಿನ ಸಹೋದರರು ಪೌಲನಿಗೆ ಯೆರೂಸಲೇಮಿನಲ್ಲಿ ಅಪಾಯ ಕಾದಿದೆ ಅಂತ ತಿಳ್ಕೊಂಡ್ರು. ಹಾಗಾಗಿ, ಪೌಲನ ಮೇಲೆ ಅವ್ರಿಗೆ ಕಾಳಜಿ ಇದ್ದಿದ್ರಿಂದ ಅಲ್ಲಿಗೆ ಹೋಗಬಾರದು ಅಂತ ಅವನಿಗೆ ಒತ್ತಾಯ ಮಾಡಿದ್ರು. ಅಪಾಯದಿಂದ ಅವನನ್ನ ತಪ್ಪಿಸಬೇಕು ಅನ್ನೋದು ಅವ್ರ ಆಸೆ ಆಗಿತ್ತು. ಆದ್ರೂ ಪೌಲ ದೇವರಿಗೆ ಏನು ಇಷ್ಟನೋ ಆ ತರ ನಡ್ಕೊಳ್ಳೋಕೆ ದೃಢತೀರ್ಮಾನ ಮಾಡಿದ್ದ. ಹಾಗಾಗಿ ಯೆರೂಸಲೇಮಿಗೆ ಹೋದ.—ಅ. ಕಾ. 21:12.
9, 10. (ಎ) ತೂರಿನ ಸಹೋದರರ ಮಾತುಗಳನ್ನ ಕೇಳಿ ಪೌಲನಿಗೆ ಯಾವ ಘಟನೆ ನೆನಪಾಗಿರಬಹುದು? (ಬಿ) ಇವತ್ತು ಲೋಕದಲ್ಲಿ ಜನ ಹೇಗೆ ಯೋಚ್ನೆ ಮಾಡ್ತಾರೆ? (ಸಿ) ಆದ್ರೆ ಯೇಸು ಏನು ಹೇಳಿದ್ದಾರೆ?
9 ಸಹೋದರರು ಕಾಳಜಿಯಿಂದ ಹೇಳಿದ ಮಾತುಗಳನ್ನ ಕೇಳಿದಾಗ ಪೌಲನಿಗೆ, ಯೇಸುಗೆ ಎದುರಾದ ಸನ್ನಿವೇಶ ನೆನಪಾಗಿರಬಹುದು. ‘ನಾನು ಯೆರೂಸಲೇಮಿಗೆ ಹೋಗ್ತೀನಿ, ಅಲ್ಲಿ ನಾನು ತುಂಬ ಕಷ್ಟಗಳನ್ನ ಅನುಭವಿಸಿ ಸಾಯಬೇಕಾಗುತ್ತೆ’ ಅಂತ ಯೇಸು ಹೇಳಿದಾಗ ಶಿಷ್ಯರು ಅವನಿಗೆ ಅಡ್ಡಿ ಮಾಡಿದ್ರು. ಪೇತ್ರ ದುಃಖದಿಂದ ಯೇಸುಗೆ, “ಸ್ವಾಮಿ, ಏನ್ ಹೇಳ್ತಾ ಇದ್ದೀಯ. ನಿನಗೆ ಯಾವತ್ತೂ ಹಾಗೆ ಆಗಬಾರದು” ಅಂದ. ಆಗ ಯೇಸು, “ಸಾಕು ನಿಲ್ಲಿಸು ಸೈತಾನ! ದೇವರ ಇಷ್ಟ ಮಾಡೋಕೆ ನೀನು ಬಿಡ್ತಾ ಇಲ್ಲ. ನೀನು ದೇವ್ರ ತರ ಯೋಚ್ನೆ ಮಾಡೋದು ಬಿಟ್ಟು ಮನುಷ್ಯರ ತರ ಯೋಚ್ನೆ ಮಾಡ್ತಾ ಇದ್ದೀಯ” ಅಂತ ಹೇಳಿದನು. (ಮತ್ತಾ. 16:21-23) ದೇವರು ತನಗೆ ಕೊಟ್ಟ ಈ ನೇಮಕಕ್ಕಾಗಿ ತನ್ನ ಜೀವನೇ ತ್ಯಾಗ ಮಾಡಬೇಕು ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಪೌಲನಿಗೂ ಈ ವಿಷ್ಯ ಗೊತ್ತಿತ್ತು. ಅಪೊಸ್ತಲ ಪೇತ್ರನ ತರನೇ ತೂರಿನ ಸಹೋದರರೂ ಒಳ್ಳೇ ಉದ್ದೇಶದಿಂದಾನೇ ತನಗೆ ಈ ತರ ಹೇಳಿದ್ರು ಅಂತ ಪೌಲ ಅರ್ಥ ಮಾಡ್ಕೊಂಡ. ಆದ್ರೆ ತೂರಿನ ಸಹೋದರರು ದೇವರ ಇಷ್ಟ ಏನು ಅಂತ ಅರ್ಥ ಮಾಡ್ಕೊಳ್ಳಲಿಲ್ಲ.
10 ಇವತ್ತು ತುಂಬಾ ಜನ ಯಾವುದು ಸುಲಭನೋ ಅದನ್ನ ಮಾಡ್ತಾರೆ, ಅದು ಒಳ್ಳೇದಲ್ಲ ಅಂತ ಗೊತ್ತಿದ್ರೂ ಸುಲಭವಾಗಿರೋದನ್ನೇ ಮಾಡ್ತಾರೆ. ಅದಕ್ಕೆ ಸಾಮಾನ್ಯವಾಗಿ ಅವರು ತಮಗೆ ಇಷ್ಟ ಬಂದ ಹಾಗೆ ಇರೋಕೆ ಬಿಡೋ ಅಥವಾ ಜಾಸ್ತಿ ನಿಯಮಗಳಿಲ್ಲದೇ ಇರೋ ಧರ್ಮಕ್ಕೆ ಸೇರ್ಕೊತಾರೆ. ಆದ್ರೆ ಯೇಸು ನಾವು ಆ ತರ ಇರಬಾರದು ಅಂತ ಹೇಳಿದನು. ಆತನು ತನ್ನ ಶಿಷ್ಯರಿಗೆ “ಯಾರಿಗಾದ್ರೂ ನನ್ನ ಶಿಷ್ಯನಾಗೋಕೆ ಮನಸ್ಸಿದ್ರೆ, ಅವನು ಇನ್ಮುಂದೆ ತನಗೋಸ್ಕರ ಜೀವಿಸದೆ ತನ್ನ ಹಿಂಸಾ ಕಂಬ ಹೊತ್ತು ನನ್ನ ಹಿಂದೆನೇ ಬರಲಿ” ಅಂತ ಹೇಳಿದನು. (ಮತ್ತಾ. 16:24) ಯೇಸುನ ಹಿಂಬಾಲಿಸೋದು ನಾವು ನಮ್ಮ ಜೀವನದಲ್ಲಿ ಮಾಡೋ ಒಳ್ಳೇ ನಿರ್ಧಾರ. ಆದ್ರೆ ಆ ರೀತಿ ಜೀವನ ಮಾಡೋದು ಹೇಳಿದಷ್ಟು ಸುಲಭ ಅಲ್ಲ.
11. ತೂರಿನ ಶಿಷ್ಯರು ಪೌಲನಿಗೆ ಹೇಗೆ ಪ್ರೀತಿ ಮತ್ತು ಬೆಂಬಲ ತೋರಿಸಿದ್ರು?
11 ಸ್ವಲ್ಪದರಲ್ಲೇ ಪೌಲ, ಲೂಕ ಮತ್ತು ಅವ್ರ ಜೊತೆಯಲ್ಲಿದ್ದ ಸಹೋದರರು ತಮ್ಮ ಪ್ರಯಾಣವನ್ನ ಮುಂದುವರಿಸೋ ಸಮಯ ಬಂತು. ಅವರು ಅಲ್ಲಿಂದ ಹೋಗೋವಾಗ ನಡೆದ ವಿಷ್ಯಗಳು ನಿಜಕ್ಕೂ ನಮ್ಮ ಮನಮುಟ್ಟುತ್ತೆ. ತೂರಿನ ಸಹೋದರರಿಗೆ ಪೌಲನ ಮೇಲೆ ಎಷ್ಟು ಪ್ರೀತಿ ಇತ್ತು ಮತ್ತು ಆತನ ಸೇವೆಗೆ ಅವರು ಎಷ್ಟು ಬೆಂಬಲ ಕೊಡ್ತಿದ್ರು ಅಂತ ಗೊತ್ತಾಗುತ್ತೆ. ಅವ್ರಿಗೆ ವಿದಾಯ ಹೇಳೋಕೆ ಪುರುಷರು, ಸ್ತ್ರೀಯರಷ್ಟೇ ಅಲ್ಲ ಮಕ್ಕಳು ಕೂಡ ಪೌಲನ ಜೊತೆ ಸಮುದ್ರ ತೀರಕ್ಕೆ ಬಂದಿದ್ರು. ಅವರೆಲ್ಲರೂ ಒಟ್ಟಾಗಿ ಮಂಡಿಯೂರಿ ಪ್ರಾರ್ಥನೆ ಮಾಡಿದ್ರು. ಆಮೇಲೆ ವಿದಾಯ ಹೇಳಿದ್ರು. ಇದಾದ ಮೇಲೆ ಪೌಲ, ಲೂಕ ಮತ್ತು ಅವ್ರ ಜೊತೆ ಇದ್ದವರು ಹಡಗು ಹತ್ತಿ ತೊಲೆಮಾಯದ ಕಡೆಗೆ ಪ್ರಯಾಣ ಬೆಳೆಸಿದ್ರು. ಅಲ್ಲಿ ಹೋದಾಗ ಅವರು ಸಹೋದರರನ್ನ ಭೇಟಿ ಮಾಡಿ ಒಂದು ದಿನ ಅಲ್ಲೇ ಉಳ್ಕೊಂಡ್ರು.—ಅ. ಕಾ. 21:5-7.
12, 13. (ಎ) ಫಿಲಿಪ್ಪ ಯಾವ ಮಾದರಿ ಇಟ್ಟಿದ್ದ? (ಬಿ) ಅಪ್ಪಂದಿರು ಅವನಿಂದ ಏನು ಕಲೀಬಹುದು?
12 ಇದಾದ ಮೇಲೆ ಪೌಲ ಮತ್ತು ಅವನ ಜೊತೆ ಇದ್ದ ಸಹೋದರರು ಕೈಸರೈಯಕ್ಕೆ ಪ್ರಯಾಣ ಬೆಳೆಸಿದ್ದರ ಬಗ್ಗೆ ಲೂಕ ಹೇಳಿದ್ದಾನೆ. ಅಲ್ಲಿಗೆ ಹೋದಾಗ ಅವರು ‘ಸಿಹಿಸುದ್ದಿ ಸಾರುವವನಾಗಿದ್ದ ಫಿಲಿಪ್ಪನ ಮನೆಗೆ ಹೋಗಿ ಉಳ್ಕೊಂಡ್ರು.’ a (ಅ. ಕಾ. 21:8) ಫಿಲಿಪ್ಪನನ್ನ ನೋಡಿ ಅವ್ರಿಗೆ ತುಂಬ ಖುಷಿಯಾಗಿರಬೇಕು. ಸುಮಾರು 20 ವರ್ಷಗಳ ಹಿಂದೆ, ಹೊಸದಾಗಿ ಆರಂಭವಾಗಿದ್ದ ಕ್ರೈಸ್ತ ಸಭೆಯಲ್ಲಿ ಆಹಾರ ಹಂಚಿಕೊಡೋ ಕೆಲಸ ಮಾಡೋಕೆ ಅಪೊಸ್ತಲರು ಅವನನ್ನ ನೇಮಿಸಿದ್ದರು. ತುಂಬ ವರ್ಷಗಳಿಂದ ಅವನು ಹುರುಪಿನಿಂದ ಸಾರ್ತಿದ್ದ. ಹಿಂಸೆ ಬಂದಾಗ ಶಿಷ್ಯರು ಚೆಲ್ಲಾಪಿಲ್ಲಿಯಾದಾಗ ಫಿಲಿಪ್ಪ ಸಮಾರ್ಯಕ್ಕೆ ಹೋಗಿ ಸಾರೋಕೆ ಶುರುಮಾಡಿದ್ದ. ಆಮೇಲೆ ಅವನು ಇಥಿಯೋಪ್ಯದ ಕಂಚುಕಿಗೆ ಸಾರಿ ದೀಕ್ಷಾಸ್ನಾನನೂ ಕೊಟ್ಟ. (ಅ. ಕಾ. 6:2-6; 8:4-13, 26-38) ಹೀಗೆ ಅವನು ನಂಬಿಗಸ್ತಿಕೆಯಿಂದ ಸೇವೆ ಮಾಡೋದ್ರಲ್ಲಿ ಒಳ್ಳೇ ಮಾದರಿಯಾಗಿದ್ದ.
13 ಇಷ್ಟು ವರ್ಷಗಳಾದ್ರೂ ಫಿಲಿಪ್ಪ ಸಾರೋ ಕೆಲಸದಲ್ಲಿದ್ದ ಹುರುಪನ್ನ ಒಂಚೂರು ಕಳ್ಕೊಂಡಿರಲಿಲ್ಲ. ಕೈಸರೈಯದಲ್ಲಿ ಕೂಡ ಸಾರೋ ಕೆಲಸದಲ್ಲಿ ಬಿಜ಼ಿಯಾಗಿದ್ದ. ಅದಕ್ಕೆ ಲೂಕ ಅವನನ್ನ ‘ಸಿಹಿಸುದ್ದಿ ಸಾರುವವನು’ ಅಂತ ಕರೆದ. ಅವನ ನಾಲ್ಕು ಹೆಣ್ಣು ಮಕ್ಕಳು ಭವಿಷ್ಯವಾಣಿ ಹೇಳ್ತಿದ್ರು ಅಂತ ಬೈಬಲ್ ಹೇಳುತ್ತೆ. ಅವರು ತಮ್ಮ ತಂದೆಯನ್ನ ಮಾದರಿ ನೋಡಿ ಕಲಿತ್ರು ಅನ್ನೋದ್ರಲ್ಲಿ ಎರಡು ಮಾತಿಲ್ಲ. b (ಅ. ಕಾ. 21:9) ಫಿಲಿಪ್ಪ ತನ್ನ ಕುಟುಂಬದವರು ಯೆಹೋವನನ್ನ ಪ್ರೀತಿಸೋಕೆ ತುಂಬ ಕಷ್ಟಪಟ್ಟಿದ್ದಾನೆ ಅಂತ ಇದ್ರಿಂದ ಗೊತ್ತಾಗುತ್ತೆ. ಇವತ್ತು ಕೂಡ ಅಪ್ಪಂದಿರು ಫಿಲಿಪ್ಪನ ತರನೇ ಸಾರೋ ಕೆಲಸದಲ್ಲಿ ಮುಂದಾಳತ್ವ ವಹಿಸ್ತಾರೆ. ಹೀಗೆ ತಮ್ಮ ಮಕ್ಕಳು ಸಾರೋದನ್ನ ಇಷ್ಟಪಡೋಕೆ ಅವರಿಗೆ ಸಹಾಯ ಮಾಡ್ತಾರೆ.
14. (ಎ) ಪೌಲ ಸಹೋದರರನ್ನ ಭೇಟಿಯಾಗಿದ್ರಿಂದ ಏನಾಯ್ತು? (ಬಿ) ನಮಗೆ ಯಾವ ಅವಕಾಶಗಳಿವೆ?
14 ಪೌಲ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗ್ತಾ ಅಲ್ಲಿದ್ದ ಸಹೋದರರ ಜೊತೆ ಸ್ವಲ್ಪ ಸಮಯ ಕಳೆದ. ಆ ಸಹೋದರರು ಕೂಡ ಈ ಮಿಷನರಿಗೆ ಮತ್ತು ಅವನ ಸಂಗಡಿಗರಿಗೆ ಸಂತೋಷದಿಂದ ಅತಿಥಿಸತ್ಕಾರ ಮಾಡಿದ್ರು. ಇದ್ರಿಂದ ಅವ್ರೆಲ್ಲರೂ ಒಬ್ಬರಿಂದ ಒಬ್ರು ಖಂಡಿತ ‘ಪ್ರೋತ್ಸಾಹ ಪಡ್ಕೊಂಡಿರಬೇಕು’ ಅಲ್ವಾ? (ರೋಮ. 1:11, 12) ನಮಗೂ ಇವತ್ತು ಇಂಥದ್ದೇ ಅವಕಾಶಗಳಿವೆ. ಮನೆ ಎಷ್ಟೇ ಚಿಕ್ಕದಾಗಿದ್ರೂ ಸಂಚರಣ ಮೇಲ್ವಿಚಾರಕರು ಮತ್ತು ಅವ್ರ ಹೆಂಡತಿಯನ್ನ ಮನೆಗೆ ಕರೆಯೋದ್ರಿಂದ ನಮಗೆ ತುಂಬ ಪ್ರಯೋಜನ ಸಿಗುತ್ತೆ.—ರೋಮ. 12:13.
“ಸಾಯಕ್ಕೂ ಸಿದ್ಧ” (ಅ. ಕಾ. 21:10-14)
15, 16. (ಎ) ಅಗಬ ಯಾವ ಸಂದೇಶ ತಂದ? (ಬಿ) ಅದನ್ನ ಕೇಳಿಸ್ಕೊಂಡವರ ಮೇಲೆ ಇದು ಯಾವ ಪರಿಣಾಮ ಬೀರಿತು?
15 ಪೌಲ ಫಿಲಿಪ್ಪನ ಮನೆಯಲ್ಲಿ ಉಳ್ಕೊಂಡಿದ್ದಾಗ ಇನ್ನೊಬ್ಬ ವ್ಯಕ್ತಿ ಅಲ್ಲಿಗೆ ಬಂದ. ಅವನೇ ಅಗಬ. ಅವನಿಗೆ ಜನ ತುಂಬಾ ಗೌರವ ಕೊಡ್ತಿದ್ರು. ಫಿಲಿಪ್ಪನ ಮನೆಗೆ ಬಂದಿದ್ದವರಿಗೆಲ್ಲಾ ಅಗಬ ಒಬ್ಬ ಪ್ರವಾದಿ ಅಂತ ಗೊತ್ತಿತ್ತು. ಕ್ಲೌದ್ಯ ಚಕ್ರವರ್ತಿಯ ಕಾಲದಲ್ಲಿ ಒಂದು ದೊಡ್ಡ ಕ್ಷಾಮ ಬರುತ್ತೆ ಅಂತ ಅವನು ಮುಂಚೆನೇ ಹೇಳಿದ್ದ. (ಅ. ಕಾ. 11:27, 28) ಹಾಗಾಗಿ ಅಲ್ಲಿದ್ದವರು, ‘ಅಗಬ ಯಾಕೆ ಬಂದಿದ್ದಾನೆ? ಯಾವ ಸಂದೇಶ ತಂದಿದ್ದಾನೆ?’ ಅಂತ ಯೋಚ್ನೆ ಮಾಡ್ತಿದ್ರು. ಅವರು ನೋಡ್ತಾ ಇದ್ದಾಗ್ಲೇ ಅವನು ಪೌಲನ ಹತ್ರ ಬಂದು ಪೌಲನ ಸೊಂಟಕ್ಕೆ ಕಟ್ಕೊಳ್ತಿದ್ದ ಪಟ್ಟಿ ತಗೊಂಡ. ಸಾಮಾನ್ಯವಾಗಿ ಇದ್ರಲ್ಲಿ ಹಣ ಮತ್ತು ಇನ್ನೂ ಬೇರೆ ವಸ್ತುಗಳನ್ನ ಹಾಕಿ ಸೊಂಟದ ಸುತ್ತ ಕಟ್ಕೊತಿದ್ರು. ಅಗಬ ಅದನ್ನ ತಗೊಂಡು ತನ್ನ ಕೈಕಾಲುಗಳನ್ನ ಕಟ್ಕೊಂಡ. ಆಮೇಲೆ ಈ ಗಂಭೀರ ಸಂದೇಶ ಹೇಳಿದ: “ದೇವರು ತನ್ನ ಪವಿತ್ರಶಕ್ತಿಯ ಮೂಲಕ ಹೀಗೆ ಹೇಳ್ತಿದ್ದಾನೆ ‘ಈ ಪಟ್ಟಿ ಯಾರದೋ ಅವನನ್ನ ಯೆಹೂದ್ಯರು ಯೆರೂಸಲೇಮಲ್ಲಿ ಹೀಗೆ ಕಟ್ಟಿಹಾಕಿ ಯೆಹೂದ್ಯರಲ್ಲದ ಜನ್ರ ಕೈಗೆ ಒಪ್ಪಿಸ್ತಾರೆ.’”—ಅ. ಕಾ. 21:11.
16 ಈ ಭವಿಷ್ಯವಾಣಿಯಿಂದ ಪೌಲ ಯೆರೂಸಲೇಮಿಗೆ ಹೋಗ್ತಾನೆ, ಯೆಹೂದ್ಯರಿಗೆ ಸಾರೋವಾಗ ಅವನನ್ನ ಹಿಡಿದು ‘ಯೆಹೂದ್ಯರಲ್ಲದ ಜನ್ರ ಕೈಗೆ ಒಪ್ಪಿಸ್ತಾರೆ’ ಅಂತ ಸ್ಪಷ್ಟವಾಗಿ ಗೊತ್ತಾಯ್ತು. ಈ ಭವಿಷ್ಯವಾಣಿ ಅಲ್ಲಿದ್ದವರ ಮೇಲೆ ಎಷ್ಟು ಪರಿಣಾಮ ಬೀರಿತು ಅಂತ ಲೂಕ ಹೇಳಿದ್ದಾನೆ: “ಅದನ್ನ ಕೇಳಿದಾಗ ನಾವು ಮತ್ತು ಅಲ್ಲಿದ್ದವರು ಪೌಲನಿಗೆ ಯೆರೂಸಲೇಮಿಗೆ ಹೋಗಬೇಡ ಅಂತ ಬೇಡ್ಕೊಳ್ಳೋಕೆ ಶುರುಮಾಡಿದ್ವಿ. ಆಗ ಪೌಲ ‘ನೀವು ಯಾಕೆ ಅತ್ತು ನನ್ನ ಮನಸ್ಸನ್ನ ಬದಲಾಯಿಸಬೇಕು ಅಂತ ಅಂದ್ಕೊಳ್ತಿದ್ದೀರಾ? ನಾನು ಯೇಸು ಪ್ರಭುವಿನ ಹೆಸ್ರಿಗೋಸ್ಕರ ಜೈಲಿಗೆ ಹೋಗೋಕೆ ಅಷ್ಟೇ ಅಲ್ಲ ಯೆರೂಸಲೇಮಲ್ಲಿ ಸಾಯಕ್ಕೂ ಸಿದ್ಧ’ ಅಂತ ಹೇಳಿದ.”—ಅ. ಕಾ. 21:12, 13.
17, 18. (ಎ) ಪೌಲ ತನ್ನ ತೀರ್ಮಾನನ ಬದಲಾಯಿಸಲ್ಲ ಅಂತ ಹೇಗೆ ತೋರಿಸ್ಕೊಟ್ಟ? (ಬಿ) ಇದಕ್ಕೆ ಸಹೋದರರು ಏನು ಮಾಡಿದ್ರು?
17 ಈ ಸನ್ನಿವೇಶವನ್ನ ಚಿತ್ರಿಸ್ಕೊಳ್ಳಿ. ಪೌಲ ಮುಂದಕ್ಕೆ ಪ್ರಯಾಣ ಮಾಡಬಾರದು ಅಂತ ಸಹೋದರರು ಮತ್ತು ಲೂಕ ಬೇಡ್ಕೊಳ್ತಾ ಇದ್ದಾರೆ, ಕೆಲವರು ಅಳ್ತಿದ್ದಾರೆ. ತನ್ನ ಮೇಲೆ ಅವ್ರಿಗಿರೋ ಪ್ರೀತಿ ಮತ್ತೆ ಕಾಳಜಿ ನೋಡಿ ಪೌಲ ಮೃದುವಾಗಿ, “ನೀವು ಯಾಕೆ ಅತ್ತು ನನ್ನ ಮನಸ್ಸನ್ನ ಬದಲಾಯಿಸಬೇಕು ಅಂತ ಅಂದ್ಕೊಳ್ತಿದ್ದೀರಾ?” ಅಂತ ಹೇಳಿದ. ಇದಕ್ಕಿರೋ ಗ್ರೀಕ್ ಪದಗಳನ್ನ ಕೆಲವು ಭಾಷಾಂತರಗಳಲ್ಲಿ, ಅವರು ಅವನ ‘ಹೃದಯವನ್ನ ಒಡೆಯುತ್ತಿದ್ದಾರೆ’ ಅಂತ ಭಾಷಾಂತರ ಮಾಡಿದ್ದಾರೆ. ಆದ್ರೂ ಅವನ ತೀರ್ಮಾನ ದೃಢವಾಗಿತ್ತು. ತೂರಿನ ಸಹೋದರರನ್ನ ಭೇಟಿ ಮಾಡ್ದಾಗ ಆಗಿದ್ದ ತರನೇ ಕಣ್ಣೀರು ತನ್ನನ್ನ ಕಟ್ಟಿಹಾಕೋಕೆ ಅವನು ಬಿಟ್ಕೊಡಲಿಲ್ಲ. ಬದಲಿಗೆ, ತಾನು ಯಾಕೆ ಹೋಗಬೇಕು ಅನ್ನೋದನ್ನ ಅವ್ರಿಗೆ ವಿವರಿಸಿದ. ಪೌಲನ ಧೈರ್ಯ ಮತ್ತು ಛಲನ ನಿಜವಾಗ್ಲೂ ಮೆಚ್ಚಬೇಕು ಅಲ್ವಾ! ಯೇಸು ತರನೇ ಪೌಲ ಯೆರೂಸಲೇಮಿಗೆ ಹೋಗೋದಕ್ಕೆ ಗಮನ ಕೊಟ್ಟ. (ಇಬ್ರಿ. 12:2) ಹಾಗಂತ ಪೌಲನಿಗೆ ಸಾಯೋಕೆ ಇಷ್ಟ ಇರಲಿಲ್ಲ. ಆದ್ರೆ ಯೇಸು ಕ್ರಿಸ್ತನ ಶಿಷ್ಯನಾಗಿ ಸಾಯೋದು ತನಗೆ ಸಿಕ್ಕ ದೊಡ್ಡ ಗೌರವ ಅಂತ ಅಂದ್ಕೊಂಡ.
18 ಇದಕ್ಕೆ ಅಲ್ಲಿದ್ದ ಸಹೋದರರು ಏನು ಮಾಡಿದ್ರು? ಒಂದೇ ಮಾತಲ್ಲಿ ಹೇಳೋದಾದ್ರೆ ಅವರು ಅವನ ತೀರ್ಮಾನನ ಗೌರವಿಸಿದ್ರು. ಅದ್ರ ಬಗ್ಗೆ ದೇವರ ವಾಕ್ಯ ಹೇಳೋದು, “ಏನೇ ಹೇಳಿದ್ರೂ ಪೌಲ ಒಪ್ಕೊಳ್ಳಲಿಲ್ಲ. ಹಾಗಾಗಿ ‘ಯೆಹೋವನ ಇಷ್ಟ ಏನಿದ್ಯೋ ಅದೇ ಆಗಲಿ’ ಅಂತ ಹೇಳಿ ಸುಮ್ಮನಾದ್ವಿ.” (ಅ. ಕಾ. 21:14) ಯೆರೂಸಲೇಮಿಗೆ ಹೋಗಬಾರದು ಅಂತ ಹೇಳಿದವರು ತಮ್ಮ ಮಾತಿನ ತರನೇ ಪೌಲ ನಡ್ಕೊಬೇಕು ಅಂತ ಹಠ ಹಿಡೀಲಿಲ್ಲ. ಪೌಲನ ಮಾತಿಗೆ ಕಿವಿಗೊಟ್ಟು ಯೆಹೋವನ ಇಷ್ಟ ಏನು ಅಂತ ಅರ್ಥ ಮಾಡ್ಕೊಂಡ್ರು, ಕಷ್ಟ ಆದ್ರೂ ಬಿಟ್ಕೊಟ್ರು. ಇದು ಅವನಿಗೆ ಬರೀ ಪ್ರಯಾಣ ಆಗಿರಲಿಲ್ಲ, ಅಲ್ಲಿ ಅವನ ಜೀವನದ ಪ್ರಯಾಣನೇ ಮುಗಿದು ಹೋಗ್ತಿತ್ತು. ಹಾಗಾಗಿ ಸಹೋದರರು ಅವನಿಗೆ ಬೇಜಾರ್ ಮಾಡದೇ ಕಳಿಸಿ ಕೊಟ್ರೆ ಮುಂದೆ ಪ್ರಯಾಣ ಮಾಡೋಕೆ ಸುಲಭ ಆಗ್ತಿತ್ತು.
19. ಪೌಲನಿಗೆ ಆದ ಘಟನೆಯಿಂದ ನಾವು ಯಾವ ಮುಖ್ಯ ಪಾಠ ಕಲಿಬಹುದು?
19 ಪೌಲನ ಈ ಉದಾಹರಣೆಯಿಂದ ನಾವು ಒಂದು ಮುಖ್ಯವಾದ ಪಾಠ ಕಲೀಬಹುದು. ದೇವರ ಸೇವೆಗಾಗಿ ತಮ್ಮ ಜೀವ ಮುಡುಪಾಗಿಡೋಕೆ ರೆಡಿಯಾಗಿರೋರನ್ನ ನಾವು ಯಾವತ್ತೂ ತಡೀಬಾರದು. ಇದನ್ನ ನಾವು ಬೇರೆ ಸನ್ನಿವೇಶಗಳಿಗೂ ಅನ್ವಯಿಸಬಹುದು. ಉದಾಹರಣೆಗೆ, ಕ್ರೈಸ್ತ ಹೆತ್ತವರಿಗೆ ತಮ್ಮ ಮಕ್ಕಳು ಯೆಹೋವನ ಸೇವೆ ಮಾಡೋಕೆ ದೂರದ ಊರಿಗೆ ಹೋಗೋದನ್ನ ನೋಡೋವಾಗ ತುಂಬ ಕಷ್ಟ ಆಗುತ್ತೆ. ಆದ್ರೂ ಅವರು ಮಕ್ಕಳನ್ನ ತಡೀಬಾರದು. ಇಂಗ್ಲೆಂಡಿನ ಫಿಲ್ಲಸ್ ಅನ್ನೋ ಸಹೋದರಿಗೆ ಒಬ್ಬಳೇ ಒಬ್ಬಳು ಮಗಳಿದ್ದಳು. ಅವಳಿಗೆ ಆಫ್ರಿಕಾದಲ್ಲಿ ಮಿಷನರಿ ಕೆಲಸ ಮಾಡೋ ನೇಮಕ ಸಿಕ್ಕಿದಾಗ ಈ ಸಹೋದರಿಗೆ ಹೇಗನಿಸ್ತು ಅಂತ ಅವ್ರೇ ಹೇಳಿದ್ದಾರೆ. ಅವರು ಹೇಳಿದ್ದು, “ಆಗ ನಂಗೆ ತುಂಬ ದುಃಖ ಆಯ್ತು. ಅವಳು ನನ್ನನ್ನ ಬಿಟ್ಟು ದೂರ ಹೋಗ್ತಿದ್ದಾಳೆ ಅಂತ ನೆನಸ್ಕೊಂಡಾಗ ಕರುಳು ಚುರ್ ಅಂತಿತ್ತು. ಒಂದುಕಡೆ ನೋವಾಗ್ತಿದ್ರೆ, ಇನ್ನೊಂದು ಕಡೆ ಹೆಮ್ಮೆ ಆಗ್ತಿತ್ತು. ಇದ್ರ ಬಗ್ಗೆ ನಾನು ತುಂಬ ಪ್ರಾರ್ಥನೆ ಮಾಡಿದೆ. ಆದ್ರೆ ಇದು ಅವಳ ನಿರ್ಧಾರ, ಅದನ್ನ ಬದಲಾಯಿಸೋಕೆ ನಾನು ಯಾವತ್ತೂ ಪ್ರಯತ್ನ ಮಾಡಲಿಲ್ಲ. ಅಷ್ಟೇ ಅಲ್ಲ, ಯೆಹೋವ ದೇವರಿಗೆ ನಮ್ಮ ಜೀವನದಲ್ಲಿ ಮೊದಲನೇ ಸ್ಥಾನ ಕೊಡಬೇಕು ಅಂತ ನಾನೇ ಅವಳಿಗೆ ಕಲಿಸಿದ್ದೆ. ಈಗ ಅವಳು ಸುಮಾರು 30 ವರ್ಷದಿಂದ ಬೇರೆ ಬೇರೆ ದೇಶಗಳಲ್ಲಿ ಸೇವೆ ಮಾಡಿದ್ದಾಳೆ ಮತ್ತು ಅವಳು ಯೆಹೋವನಿಗೆ ನಿಯತ್ತಾಗಿರೋದನ್ನ ನೋಡೋವಾಗ ನಾನು ಪ್ರತಿದಿನ ಯೆಹೋವನಿಗೆ ಥ್ಯಾಂಕ್ಸ್ ಹೇಳ್ತೀನಿ.” ಯೆಹೋವನ ಸೇವೆ ಮಾಡೋದಕ್ಕೆ ತ್ಯಾಗಗಳನ್ನ ಮಾಡೋ ಸಹೋದರ ಸಹೋದರಿಯರನ್ನ ಯಾವಾಗ್ಲೂ ಪ್ರೋತ್ಸಾಹಿಸಬೇಕು ಅಲ್ವಾ?
ಅ. ಕಾ. 21:15-17)
“ಸಹೋದರರು ನಮ್ಮನ್ನ ಸಂತೋಷದಿಂದ ಸ್ವಾಗತಿಸಿದ್ರು” (20, 21. (ಎ) ಪೌಲ ಸಹೋದರರ ಜೊತೆ ಇರೋಕೆ ಇಷ್ಟ ಪಡ್ತಿದ್ದ ಅಂತ ಹೇಗೆ ಗೊತ್ತಾಗುತ್ತೆ? (ಬಿ) ಇದ್ರಿಂದ ಅವನಿಗೆ ಏನಾಯ್ತು?
20 ಸಹೋದರರು ಪೌಲನ ಪ್ರಯಾಣಕ್ಕೆ ಬೇಕಾದ ಸಿದ್ಧತೆಗಳನ್ನ ಮಾಡಿದ್ರು. ಅಷ್ಟೇ ಅಲ್ಲ ಕೈಸರೈಯದಿಂದ ಸಹೋದರರು ಅವನ ಜೊತೆ ಹೋದ್ರು. ಹೀಗೆ ಅವನ ಮೇಲೆ ತಮಗೆ ಎಷ್ಟು ಪ್ರೀತಿ ಇದೆ ಅಂತ ತೋರಿಸಿದ್ರು. ಪೌಲ ಮತ್ತು ಅವನ ಜೊತೆ ಇದ್ದವರು ಯೆರೂಸಲೇಮಿಗೆ ಹೋಗಿ ಸೇರೋ ತನಕ ತಮ್ಮ ಪ್ರಯಾಣದ ಪ್ರತಿಯೊಂದು ಹಂತದಲ್ಲೂ ಸಹೋದರ ಸಹೋದರಿಯರ ಸಹವಾಸ ಮಾಡೋಕೆ ಸಿಕ್ಕ ಎಲ್ಲ ಅವಕಾಶನ ಬಳಸ್ಕೊಂಡ್ರು. ತೂರಿನಲ್ಲಿ ಶಿಷ್ಯರನ್ನ ಭೇಟಿಮಾಡಿ ಏಳು ದಿನ ಉಳ್ಕೊಂಡಿದ್ರು. ತೊಲೆಮಾಯದಲ್ಲಿ ಸಹೋದರ ಸಹೋದರಿಯರನ್ನ ಭೇಟಿ ಮಾಡಿ ಒಂದು ದಿನ ಉಳ್ಕೊಂಡ್ರು. ಕೈಸರೈಯದ ಫಿಲಿಪ್ಪನ ಮನೆಯಲ್ಲಿ ತುಂಬಾ ದಿನ ಉಳ್ಕೊಂಡ್ರು. ಕೊನೆಗೆ, ಕೈಸರೈಯದ ಕೆಲವು ಶಿಷ್ಯರು ಪೌಲ ಮತ್ತು ಅವನ ಜೊತೆಗಾರರನ್ನ ಯೆರೂಸಲೇಮಿಗೆ ಕಳಿಸ್ಕೊಟ್ಟಾಗ ಅವ್ರನ್ನ ಮ್ನಾಸೋನ ಅನ್ನೋ ಶಿಷ್ಯ ಮನೆಗೆ ಕರ್ಕೊಂಡು ಹೋದ. ಇವನು ಮೊದಮೊದಲು ಶಿಷ್ಯರಾದವ್ರಲ್ಲಿ ಒಬ್ಬನಾಗಿದ್ದ. ಅಲ್ಲದೇ ಅವರು ಯೆರೂಸಲೇಮ್ ತಲಪಿದಾಗ ಅಲ್ಲಿನ ಸಹೋದರರು ಅವ್ರನ್ನ “ಸಂತೋಷದಿಂದ ಸ್ವಾಗತಿಸಿದ್ರು” ಅಂತ ಲೂಕ ಹೇಳಿದ್ದಾನೆ.—ಅ. ಕಾ. 21:17.
21 ಪೌಲ ಸಹೋದರ ಸಹೋದರಿಯರ ಜೊತೆ ಇರೋಕೆ ತುಂಬಾ ಇಷ್ಟಪಡ್ತಿದ್ದ ಅಂತ ಇದ್ರಿಂದ ಗೊತ್ತಾಗುತ್ತೆ. ಅವನೂ ನಮ್ಮ ತರನೇ ಸಹೋದರ ಸಹೋದರಿಯರಿಂದ ಪ್ರೋತ್ಸಾಹ ಪಡ್ಕೊಂಡ. ಇದ್ರಿಂದ ವೈರಿಗಳು ಹಿಂಸೆ ಕೊಟ್ಟು ತನ್ನ ಜೀವ ತೆಗಿತಾರೆ ಅಂತ ಗೊತ್ತಿದ್ರೂ ಅವ್ರನ್ನ ಧೈರ್ಯವಾಗಿ ಎದುರಿಸೋಕಾಯ್ತು.
a “ ಕೈಸರೈಯ—ರೋಮನ್ನರ ಯೆಹೂದ ಪ್ರಾಂತದ ರಾಜಧಾನಿ” ಅನ್ನೋ ಚೌಕ ನೋಡಿ.
b “ ಸಭೆಯಲ್ಲಿ ಸ್ತ್ರೀಯರು ಕಲಿಸಬಹುದಾ?” ಅನ್ನೋ ಚೌಕ ನೋಡಿ.